January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ…..

ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಮ್ಮ ಜೀವನ ಸಾರವನ್ನು ಬರೆದ ಪುಸ್ತಕ ಆಕಾಶ್ ಗೆ ನೀಡುತ್ತಾಳೆ , ಸುಶೀಲ ಮೂಲತಃ ಪುತ್ತೂರಿನ ಕಬಕದವರು ಇವರನ್ನು ಮಂಗಳೂರಿನ ಅಡ್ಯಾರ್ ನ ಅಶೋಕ್ ನಿಗೆ ಮದುವೆ ಮಾಡಿ ಕೊಡುತ್ತಾರೆ…..

ಅವಿನಾಭಾವ ಭಾಗ 15

   ನಮ್ಮ ಮನೆಗಿಂತ ಗಂಡನ ಮನೆ ಇನ್ನೂ ಚೆನ್ನಾಗಿತ್ತು. ನನ್ನ ಅತ್ತೆ ಮಾವ ನನ್ನ ಅಪ್ಪ ಅಮ್ಮನಿಗಿಂತ ತುಸು ಹೆಚ್ಚೇ ಕಾಳಜಿ ಅಕ್ಕರೆ ವಹಿಸುವುದು ಯಾವುದೇ ಕೆಲಸವನ್ನು ಒಬ್ಬಳೇ ಮಾಡಲು ಬಿಡುತ್ತಿರಲಿಲ್ಲ ಆರು ತಿಂಗಳಿಗೊಮ್ಮೆ ಅಣ್ಣ ಅಥವಾ ಅಪ್ಪ ಬಂದು ಪುತ್ತೂರಿಗೆ ಕರೆದುಕೊಂಡು ಹೋಗುತ್ತಿದ್ದರು ಅಲ್ಲಿ ಹೋಗಿ ಒಂದು ವಾರ ಕಳೆಯುವಷ್ಟರಲ್ಲಿ ಅಶೋಕ್ ಓಡೋಡಿ ಬಂದು ಅಮ್ಮ ಅಪ್ಪ ಸುಶೀ ಯನು ಕರೆತರಲು ಹೇಳಿದ್ದಾರೆ ಎಂದು ಪುನಃ ಹಿಂದೆ ಕರೆದುಕೊಂಡು ಬರುತ್ತಿದ್ದರು. ತಾಯಿ ಮನೆ ಗಂಡನ ಮನೆ ಯಾವುದೇ ವ್ಯತ್ಯಾಸ ಇಲ್ಲದೆ ನನಗೆ ತಾಯಿ ಮನೆಗಿಂತ ಗಂಡನ ಮನೆ ಹೆಚ್ಚು ಆಪ್ತತೆಯನು ನೀಡುತಿತ್ತು. ಈ ರೀತಿಯ ಬದುಕು,ಜೀವನ ಎಲ್ಲಾ ಹೆಣ್ಣು ಮಕ್ಕಳಿಗೆ ಸಿಗುವುದಿಲ್ಲ ಎಂದು ನನ್ನ ಸುತ್ತ ಮುತ್ತ ಇರುವ ಹೆಣ್ಣು ಮಕ್ಕಳನ್ನು ತಿಳಿದು ಬಲ್ಲೆ. ಕೆಲವರು “ನೀನು ಪುಣ್ಯ ಮಾಡಿದ್ದಿ ಇಂತಹ ಒಳ್ಳೆಯ ಅತ್ತೆ ಮಾವ ಗಂಡನನ್ನು ಪಡೆಯಲು’’ ಎಂದು ಹೇಳುತ್ತಿದ್ದರು. ಹೀಗೆ ಮದುವೆ ಆಗಿ ಎರಡು ವರುಷ ಹೇಗೆ ಕಳೆಯಿತು ಎನ್ನುವುದೇ ತಿಳಿಯಲಿಲ್ಲ..

ಬದುಕು ಎಂಬುದು ನಾವು ಎಣಿಸಿದಂತೆ ನಡೆದರೆ ಅದಕ್ಕೆ ಬೆಲೆ ಎಲ್ಲಿ? ಅದೊಂದು ಬೊಗಸೆಯಲ್ಲಿ ಹಿಡಿದಿಟ್ಟ ನೀರಂತೆ, ಬಸಿದು ಹೋಗುವ ಮುನ್ನ ಬಳಸಬೇಕು ಪ್ರತಿ ಕ್ಷಣ…..
ಹೀಗೆ ಕಳೆಯಿತು ನನ್ನ ಜೀವನ ಎಂದರೆ ಕೇಳಿದವರು ನಗಾಡಿಯಾರು!! ಅಲ್ಲ ಇವಳಿಗೆ ನಿಂತರೆ ಸುಸ್ತಾಗಿ ಹೋಗುವಿ ಕುಳಿತರೆ ಸೊರಗಿ ಹೋಗುವಿ ಎಂದು ಮುದ್ದು ಮಾಡುವ ಅತ್ತೆ , ಬಿಸಿಲಲ್ಲಿ ಹೋದರೆ ಒಣಗಿ ಹೋಗುವಳು ನೆರಳಲ್ಲಿ ನಿಂತರೆ ಬಾಡುವಳು ಎಂದು ಅಷ್ಟೊಂದು ಅಕ್ಕರೆ ಮಮತೆಯಿಂದ ಕಾಣುವ ಮಾವ, ಇವಳು ಆಸೆ ಪಟ್ಟರೆ ಆಕಾಶವನ್ನೇ ಭೂಮಿಗೆ ಇಳಿಸುವ, ಕ್ಷಣ ಕ್ಷಣಕ್ಕೂ ಪ್ರೀತಿಯ ಜೋಕಾಲಿ ಕಟ್ಟಿ ಅರಗಿಣಿಯಂತೆ ಕಾಣುವ ಗಂಡ ಇರುವಾಗ ಜೀವನದ ಬಗ್ಗೆ ಜಿಗುಪ್ಸೆ ಯಾಕೆ ಎಂದೇ ಎಲ್ಲರೂ ಹೇಳುವರು ಕೇಳುವರು.

ಎಲ್ಲ ಗೊಂದಲಗಳಿಗೆ ನಾವೇ ಉತ್ತರಿಸಬೇಕಾಗಿಲ್ಲ, ಸಮಯ ಅಥವಾ ಕಾಲವೇ ಉತ್ತರಿಸುತ್ತದೆ ತಾಳ್ಮೆ ಇರಲಿ ಎಂದು ನಾನು ಭಾವಿಸಿದ್ದೆ!! ಕಾಲ ಮಿಂಚಿತ್ತು… ಇದೆಲ್ಲ ಯಾಕೆ ಹೇಳುತ್ತಿದ್ದೇನೆ ಎಂದರೆ ಮದುವೆ ಆಗಿ ಎರಡು ವರುಷ ಕಳೆದರೂ ನಾನು ತಾಯಿಯಾಗುವ ಲಕ್ಷಣ ಇರಲಿಲ್ಲ..
ಈ ಭೂಮಿಯು ತನ್ನ ಒಡಲಲ್ಲಿ ಉತ್ತು ಬಿತ್ತಿದ ಬೀಜ ಫಲವತ್ತಾದ ಫಲ ಬರಬೇಕೆಂದು ಭೂಮಿ ತಾಯಿ ಆಸೆ ಪಟ್ಟಂತೆ ಒಬ್ಬ ಹೆಣ್ಣು ಕೂಡ ತನ್ನಿಂದ ವಂಶ ವೃಕ್ಷ ಮುಂದುವರಿದು ಈ ಪ್ರಕೃತಿಗೆ ತನ್ನ ಕೊಡುಗೆಯನ್ನು ನೀಡಲು ಕಾತರಲಾಗುತ್ತಾಳೆ. ನನಗೂ ಕೂಡ ಮೊದ ಮೊದಲು ಯಾವುದೇ ಆಸೆ ಆಕಾಂಕ್ಷೆಗಳು ಇರಲಿಲ್ಲ.. ಕ್ರಮೇಣ ನನಗೂ ಜೀವನ ನಿರಾಸ ಅನ್ನಿಸಲು ಶುರು ಆಯಿತು. ನನ್ನ ಅಪ್ಪ ಅಮ್ಮನಲ್ಲಿ ಇದೇ ವಿಷಯವಾಗಿ ಹೇಳಿ ಅಮ್ಮ ನನ್ನಲ್ಲಿ ಪದೇ ಪದೇ ಏನೂ ಸುಶೀ ಮುಟ್ಟು ನಿಂತಿಲ್ಲವೇ? ಎಂಬ ಪ್ರಶ್ನೆ ಕೇಳಿದಾಗ ನಾನು ಇಲ್ಲ ಇಲ್ಲ ಎಂದು ಹೇಳಿ ಸುಮ್ಮನಾಗುತ್ತಿದ್ದೆ. ಯಾವಾಗ ಅತ್ತೆ, ಮಾವ ಕೂಡ ಈ ವಿಚಾರದಲ್ಲಿ ನನಗೆ ಬುದ್ಧಿ ಹೇಳಲು ಪ್ರಾರಂಭ ಮಾಡಿದರೋ ನಾನು ಎಚ್ಚೆತ್ತು ದಿನ ದಿನ ಅಶೋಕ್ ಬಳಿ ಪ್ರಸ್ತಾಪ ಮಾಡುತಿದ್ದೆ…. ಅಶೋಕ್ ತಾಳು ನೋಡೋಣ ಆಗಬಹುದು ಆಶಾವಾದಿಗಳಾಗೋಣ ಎನ್ನುತ್ತಿದ್ದರು. ದಿನ,ವಾರ, ತಿಂಗಳು ವರ್ಷ ಕಳೆದರೂ ಮಕ್ಕಳಾಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ.. ಅಮ್ಮ ಅಪ್ಪ ದೇವರು ಹರಕೆ ಕಾಣಿಕೆ ಎಂದು ಪ್ರತಿ ಕಡೆಗೂ ಹೇಳುತ್ತಿದ್ದರು.. ಅತ್ತೆ ಇದೇ ಕೊರಗು ಎಂಬಂತೆ ಒಂದು ದಿನ ಜ್ವರ ಎಂದು ಮಲಗಿದವರು ಬೆಳಿಗ್ಗೆ ಎದ್ದು ನೋಡಿದಾಗ ಜೀವವೇ ಹೋಗಿತ್ತು. ಅತ್ತೆ ನಮ್ಮನು ಬಿಟ್ಟು ಹೋದ ಮೇಲೆ ಅಕ್ಷರಶಃ ನಾನು ಅರೆ ಹುಚ್ಚಿಯಂತೆ ನನ್ನ ಮನಸ್ಸು ಸ್ಥಿಮಿತ ಕಳೆದು ಹೋದವು.. ನಿಂತು ನೋಡಲು ಶುರುಮಾಡಿದೆ ಅಂದರೆ ಯಾರಾದರೂ ಬಂದು ಕರೆಯುವರೆಗೆ ಅಲ್ಲೇ ನಿಂತು ಬಿಡುತ್ತಿದ್ದೆ. ಮಾತು ಕಡಿಮೆ ಆಗಿ ಮೌನವೇ ಎಲ್ಲದಕ್ಕೂ ಉತ್ತರ ಆಯಿತು.
ನಿದ್ದೆ ಎಂಥಾ ವಿಸ್ಮಯ ಎಂದರೆ ಬಂದರೆ ಎಲ್ಲವನ್ನೂ ಮರೆಸುತ್ತದೆ…ಬಾರದಿದ್ದರೆ ಎಲ್ಲವನ್ನೂ ನೆನಪಿಸಿ ಹಿಂಡಿ ಹಿಪ್ಪೆ ಮಾಡುತ್ತದೆ…. ಮಾವ ಕೂಡ ಅತ್ತೆ ತೀರಿದ ಮೇಲೆ ಮಾತು ಕಡಿಮೆ ಆಗಿ ಕೆಲಸ ಕೂಡ ಮಾಡಲು ಸುಸ್ತಾಗಿ ಮಲಗುತ್ತಿದ್ದರು.
ಮೊದಲು ನಮ್ಮ ಜೊತೆಗೆ ಚೆನ್ನಾಗಿ ಇದ್ದ ನೆಂಟರಿಷ್ಟರು ಹುಲಿ ಬಾವಿಗೆ ಬಿದ್ದರೆ ನಮ್ಮ ಹಸು ತಿಂದಿದೆ ನಮ್ಮ ಹಸು ತಿಂದಿದೆ ಎನ್ನುವ ರೀತಿಯಲ್ಲಿ ನಮ್ಮನ್ನು ಆಡಿಕೊಂಡು ಬಾಯಿಗೊಂದು ಅಂತೆ ಕಂತೆ ಪೋಣಿಸಿ ಕಥೆ ಕಟ್ಟಲು ತೊಡಗಿ ಕೊಂಡರು. ಯಾವುದೇ ಕಾರ್ಯಕ್ರಮಕ್ಕೆ ಹೋದರು ಏನು ಮಗು ಆಗಿಲ್ಲ ಯಾಕೆ ಸಮಯ ಮುಂದೆ ಹಾಕುತ್ತೀರಿ ನಿನ್ನ ಅತ್ತೆಗೆ ಅದೇ ಕೊರಗು ಇತ್ತು ಎಂದು ಪ್ರತಿಯೊಬ್ಬರೂ ಕೇಳಿ ಕೇಳಿ ನನಗೂ ರೋಸಿ ಹೋಯಿತು.
ನೋವಿಗೆ ‌ನಗುವೇ ಉತ್ತಮ ಹಾಗೆ ನೋಯಿಸಿದವರಿಗೆ ಮೌನವೇ ಉತ್ತರ ಎಂಬಂತೆ ಎಲ್ಲರೊಂದಿಗೆ ಬೆರೆಯುವುದನ್ನೇ ಬಿಟ್ಟು ಬಿಟ್ಟೆ!!!

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

 

Leave a Reply

Your email address will not be published. Required fields are marked *