ಇಲ್ಲಿಯವರೆಗೆ…..
ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಮ್ಮ ಜೀವನ ಸಾರವನ್ನು ಬರೆದ ಪುಸ್ತಕ ಆಕಾಶ್ ಗೆ ನೀಡುತ್ತಾಳೆ , ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಇವರಿಗೆ ಮದುವೆ ಮಾಡಿ ಕೊಟ್ಟ ಮೇಲೆ ಗಂಡನ ಮನೆ ತಾಯಿ ಮನೆ ಎಂದು ಎರಡು ಕಡೆಯೂ ಓಡಾಡಿ ಕೊಂಡಿರುತ್ತಾರೆ.
ಅವಿನಾಭಾವ ಭಾಗ 16
“ಮಾತಿನಲ್ಲಿನ ಸೌಜನ್ಯ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ವಿಚಾರದಲ್ಲಿನ ಸೌಜನ್ಯ ಜ್ಞಾನವನ್ನು ಹೆಚ್ಚಿಸುತ್ತದೆ. ಪ್ರೀತಿಯಲ್ಲಿನ ಸೌಜನ್ಯ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ “
ನಾನು ಇಲ್ಲಿ ನಮ್ಮ ಕುಟುಂಬ ಅಲ್ಲದೆ ನಮಗೆಲ್ಲ ತುಂಬಾ ಬೇಕಾದ ಒಬ್ಬರ ಪರಿಚಯ ಮಾಡಲೇಬೇಕು. ಕಾರಣ ಆ ವ್ಯಕ್ತಿ ಇಲ್ಲದೆ ನನ್ನ ಈ ಆತ್ಮದ ದರ್ಶನ ಖಂಡಿತಾ ಪೂರ್ತಿ ಆಗಲಾರದು.
“ಮನುಷ್ಯನ ಸೌಂದರ್ಯವು ನಿರ್ಧಾರವಾಗುವುದು ಕೇವಲ ದೇಹದ ರಚನೆಯ ಮೇಲಲ್ಲಾ. ಅದು ಅವನ ಬದುಕಿನ ಕ್ರಮದ ಮೊತ್ತ ವಾಗಿರುತ್ತದೆ.”
ಈ ಮಾತು ನಮ್ಮ ಮನೆಯ ಹತ್ತಿರ ಇದ್ದು ವಕೀಲ ವೃತ್ತಿಯನ್ನು ಮಾಡುತ್ತಿರುವ ರವಿಚಂದ್ರರಿಗೆ ಅನ್ವಯಿಸುತ್ತದೆ. ಇವರ ಹೆಸರಿನಲ್ಲಿ ರವಿ ಮತ್ತು ಚಂದ್ರ ಇರುವಂತೆ ಇವರ ವ್ಯಕ್ತಿತ್ವ ಕೂಡ ಅಷ್ಟೇ ಪರಿಪೂರ್ಣ ಆಗಿತ್ತು ಎಂಬುದು ಅತಿಶಯೋಕ್ತಿಯಲ್ಲ. ನನ್ನ ಗಂಡ ಅತ್ತೆ ಮಾವ ಎಲ್ಲರಿಗೂ ದಿನದಲ್ಲಿ ಕಡಿಮೆ ಎಂದರೂ ಹತ್ತು ಸಲವಾದರೂ ರವಿ ರವಿ ಎಂದು ಕರೆದು ಮಾತನಾಡದಿದ್ದರೆ ದಿನವೇ ಹೋಗುತ್ತಿರಲಿಲ್ಲ. ನಾನು ಮದುವೆ ಆಗಿ ಬರುವಾ ಮುಂಚೆಯೇ ನನ್ನ ಗಂಡನ ಅಂಗಡಿ ಪಕ್ಕವೇ ರವಿಚಂದ್ರರ ವಕೀಲ ವೃತ್ತಿಯ ಆಫೀಸು ಇತ್ತು. ರವಿ ಮತ್ತು ಅಶೋಕ್ ತಮ್ಮ ಕೆಲಸದ ಸಮಯ ಬಿಟ್ಟು ಇಬ್ಬರು ಕುಳಿತು ರಾತ್ರಿ ತುಂಬಾ ಹೊತ್ತು ತಮ್ಮ ಕ್ಷೇತ್ರದ ಒಳಹೊರಗನ್ನು ಚರ್ಚೆ ಮಾಡುತಿದ್ದರು. ಅಶೋಕ್ ಅವರ ಅಂಗಡಿಯಲ್ಲಿ ಅದ ದಿನಚರಿ ರವಿಯವರು ತಮ್ಮ ಕಕ್ಷಿದಾರರ ಕೆಲವು ಒಳಮುಖಗಳು ಹೀಗೆ ವಿವಿಧ ಚರ್ಚೆ ಮಾಡುತಿದ್ದರು. ಅವರಿಬ್ಬರ ಮಧ್ಯೆ ಅತ್ತೇ ಮಾವ ಕೂಡ ಜೊತೆ ಆಗುತ್ತಿದ್ದರು. ರವಿ ಅಂದರೆ ನನ್ನ ಅತ್ತೆ ಮಾವನಿಗೆ ಇನ್ನೊಬ್ಬ ಮಗನೇ ಎಂಬಷ್ಟು ಪ್ರೀತಿ ಇತ್ತು. ರವಿಯವರು ಕೂಡ ತಮ್ಮ ತಂದೆ ತಾಯಿ ಎಂಬಂತೆ ಎಲ್ಲರೊಂದಿಗೆ ಬೆರೆತು ಅವರದೇ ಮನೆ ಎಂಬಂತೆ ಇರುತಿದ್ದರು. ಅಶೋಕ್ ಮತ್ತು ರವಿ ಜೊತೆಯಲ್ಲಿ ಸಿನಿಮಾ ನಾಟಕ ಯಕ್ಷಗಾನ ಎಂದು ತಿರುಗುತ್ತಿದ್ದರು. ಈ ಬಗ್ಗೆ ನಾನು ತಗಾದೆ ತೆಗೆದಾಗ ಅಶೋಕ್ ನೇರವಾಗಿ ರವಿಯಲ್ಲಿ ಹೇಳಿ ರವಿಯವರೇ ಜಗಳ ಪರಿಹರಿಸುತಿದ್ದರು. ಇದರಿಂದಾಗಿ ರವಿ ಎಂದರೆ ನನಗೂ ಅಚ್ಚು ಮೆಚ್ಚು ಆಗಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ.
ರವಿಯವರು ಹೆಚ್ಚು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿರುವ ಕಾರಣ ನನ್ನ ಅತ್ತೆ ಮಾವ ಕೂಡ ಅವರು ತಂದು ಕೊಟ್ಟ ಕಾದಂಬರಿ ಓದುತ್ತಿದ್ದರು. ನಾನು ಕೂಡ ಪುಸ್ತಕ ಓದುವ ತವಕದಿಂದ ವಿಚಾರಿಸಿದಾಗ ಮೊದಲ ಬಾರಿಗೆ ಕುವೆಂಪುರವರು ಬರೆದ ಕಾನೂರು ಸುಬ್ಬಮ್ಮ ಹೆಗ್ಗಡತಿ ಕಾದಂಬರಿ ನೀಡಿ ಇದನ್ನು ಓದಿ ಎಂದರು. ಅಷ್ಟು ದೊಡ್ಡ ಕಾದಂಬರಿ ಅಲ್ಲದೆ ಕುವೆಂಪುರವರು ಬರೆದ ಕಾದಂಬರಿ ಮೊದಲ ಬಾರಿಗೆ ನಾನು ಓದುವುದು. ಇದು ಓದಿ ನಾನು ಅವರ ಬೇರೆ ಕಾದಂಬರಿ ಕೇಳಿದಾಗ ಮಲೆಗಳಲ್ಲಿ ಮದುಮಗಳು ಕಾದಂಬರಿ ನೀಡಿದರು. ಈ ಎರಡೂ ಕಾದಂಬರಿ ಓದಿ ಮುಗಿಸಿದ ಮೇಲೆ ಓದುವ ತವಕ ಇನ್ನೂ ಹೆಚ್ಚು ಆಯಿತು.ಹೀಗೆ ಬೇರೆ ಬೇರೆ ಕಾದಂಬರಿ. ಸಂಕಲನ, ಸಣ್ಣ ಕಥೆ, ವಿವಿಧ ಲೇಖನ ಓದುವಂತೆ ರವಿಯವರು ಪ್ರೇರಣೆ ನೀಡುತ್ತಿದ್ದರು. ಇದರಿಂದಾಗಿ ಅಶೋಕ್ ನಿಗೆ ಮಾತ್ರ ಅಲ್ಲ ನನಗೂ ರವಿ ಎಂದರೆ ಒಂದು ಅಚ್ಚು ಮೆಚ್ಚಿನ ಗೆಳೆಯ ಎಂಬಂತೆ ಆದರು. ಯಾವ ವಿಷಯವೇ ಆದರೂ ಅವರಲ್ಲಿ ಆ ಬಗ್ಗೆ ಜ್ಞಾನ ಭಂಡಾರವೇ ತುಂಬಿತ್ತು. ನಾನು ಅಶೋಕನ ಮದುವೆ ನಂತರ ರವಿಯವರಿಂದ ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಪ್ರೇಮ ಚಂದ್, ಮಹಾತ್ಮ ಗಾಂಧೀಜಿಯವರ ಆತ್ಮ ಕಥೆ ಅಂಬೇಡ್ಕರರ ಜೀವನ ಚರಿತ್ರೆ ಹಾಗೂ ಸಂವಿಧಾನದ ಪರಿಚ್ಛೇದಗಳು, ಭಗತ್ ಸಿಂಗ್, ಸ್ವಾಮಿ ವಿವೇಕಾನಂದರು ಹೀಗೆ ವಿವಿಧ ಕಾದಂಬರಿ ಜೀವನ ಚರಿತ್ರೆಯನ್ನು ಓದುವಂತೆ ಆಯಿತು. ನಾನು ಹೆಚ್ಚು ಹೆಚ್ಚು ಓದಿದ ಮೇಲೆ ಯೋಚನೆ ಮಾಡುವ ಯೋಚನೆಗಳು ಕೂಡ ಅಷ್ಟೇ ಪರಿಪೂರ್ಣ ಆಗಿತ್ತು ಎಂಬುದು ನನ್ನ ನಿಲುವು ಆಗಿತ್ತು.ರಾಹುಲ್ ಸಾಂಕೃತ್ಯಾಯನ ಬರೆದ “ವೋಲ್ಗಾ ಗಂಗಾ” ಓದಿ ಆಶ್ಚರ್ಯ ಇನ್ನೂ ಓದಬೇಕು ಎಂಬ ದಾಹ ಹೆಚ್ಚಾಯಿತು. ಹಾಗೂ ಇದನ್ನು ಓದಿದ ಮೇಲೆ ತುಂಬಾ ಯೋಚನೆ ಮಾಡುವ ಹಾಗೆ ಆಯಿತು……
ರವಿಗೆ ಒಬ್ಬ ಅಕ್ಕ ಒಬ್ಬ ತಮ್ಮ ಇದ್ದಾರೆ.ತಂದೆ ತಾಯಿ ಮನೆಯಲ್ಲಿ ಬೇಸಾಯ ಕೃಷಿ ಮಾಡುತ್ತಿದ್ದಾರೆ. ರವಿಯ ಮನೆ ಇರುವುದು ನಮ್ಮ ಮನೆಯಿಂದ 2 ಕಿಲೋಮೀಟರ್ ದೂರದಲ್ಲಿ. ಇಲ್ಲಿ ನಮ್ಮ ಮನೆಯ ಕಟ್ಟಡದಲ್ಲಿ ರವಿಯವರ ಆಫೀಸ್ ಇರುವುದು. ರವಿಯ ಅಕ್ಕನಿಗೆ ಮದುವೆ ಆಗಿ ಗಂಡನ ಮನೆಯಲ್ಲಿ ಇದ್ದಾರೆ. ರವಿಯ ತಮ್ಮ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಓದುತಿದ್ದ.
“ ಪ್ರಪಂಚದಲ್ಲಿ ಒಬ್ಬ ಮನುಷ್ಯ ಮತ್ತೊಬ್ಬನಿಗೆ ಸಹಾಯ ಮಾಡಲು ಯಾವುದೇ ರೀತಿಯ ನೆಂಟಸ್ತನವು ಸಂಬಂಧವೂ ಬೇಕಾಗಿಲ್ಲ. ಮನುಷ್ಯನಾಗಿದ್ದರೆ ಮಾತ್ರ ಸಾಕು “ ಹೀಗೆ ರವಿಯ ಅಪ್ಪ ಅಮ್ಮ ತಮ್ಮ ಮನೆಯಲ್ಲಿ ಬೆಳೆದ ಯಾವುದೇ ತರಕಾರಿ, ದವಸ ಧಾನ್ಯ ಮಾತ್ರವಲ್ಲದೆ ತಮ್ಮ ಮನೆಯಲ್ಲಿ ವಿಶೇಷ ಅಡುಗೆ ಮಾಡಿದರೆ ಅದನ್ನು ಕೊಟ್ಟು ಕಳುಹಿಸುತ್ತಿದ್ದರು.
ರವಿಗೆ ಅಶೋಕ್ ನ ಮದುವೆ ಆಗುವ ಎರಡು ವರುಷ ಮುಂಚೆಯೇ ಮದುವೆ ಆಗಿತ್ತು. ಉಷಾ ಮತ್ತು ರವಿಯ ಸಂಸಾರ ಸುಖ ಸಾಗರದಲ್ಲಿ ಕೂಡಿತ್ತು. ಎಲ್ಲವೂ ನಾವು ಎಣಿಸಿದಂತೆ ನಡೆದರೆ ವಿಧಿಗೆ ಜಾಗ ಎಲ್ಲಿ !!
( ಮುಂದುವರಿಯುವುದು)