ಇಲ್ಲಿಯವರೆಗೆ…..
ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಾವು ಬರೆದ ಆತ್ಮಕಥೆ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಗುಟ್ಟಾಗಿ ಓದಲು ಶುರು ಮಾಡುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ನ ಗೆಳೆಯ ರವಿಚಂದ್ರ ಇವರ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು .ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಆಶೋಕ್ ಮತ್ತು ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾರೆ…..
ಅವಿನಾಭಾವ ಭಾಗ 18
ಅಶೋಕ್ ನ ಮನ ಒಲಿಸಿ ರವಿ ವೈದ್ಯರ ಬಳಿ ಕರೆದುಕೊಂಡು ಹೋಗಿರುವುದು ಎಷ್ಟು ಸತ್ಯವೋ ಅಷ್ಟೇ ಸತ್ಯ ಅಶೋಕ್ ನನು ಯಾಕೆ ವೈದ್ಯರ ಬಳಿ ಪರೀಕ್ಷೆ ಮಾಡಲು ಕರೆದುಕೊಂಡು ಬಂದೆ ನಾನು ಎಂದು ನೂರು ಬಾರಿ ಯೋಚನೆ ಬರುವಂತೆ ರವಿಗೆ ಆಗಿರುವುದು ಸ್ಪಷ್ಟ. ಕಾರಣ ಏನು ಆಗಬಾರದ್ದು ಎಂದು ಇತ್ತೋ ಹಾಗೆಯೇ ಆಗಿತ್ತು. ಎಲ್ಲ ಪರೀಕ್ಷೆಗಳನ್ನು ಮಾಡಿದ ಬಳಿಕ ಅಶೋಕ್ ನಿಗೆ ಮಗು ಆಗಲು ಸಾಧ್ಯವೇ ಇಲ್ಲ ಎಂದು ಬಿಟ್ಟರು ವೈದ್ಯರು!!!
ರವಿ ವಕೀಲ ವೃತ್ತಿ ಮಾಡುತ್ತಿದ್ದರೂ ಕೂಡ ಈ ಬಗ್ಗೆ ಹೆಚ್ಚಿನ ಮಾಹಿತಿ ಅವನಿಗೆ ತಿಳಿದಿರಲಿಲ್ಲ. ಓದಿದ ಹಾಗೂ ಬೇರೆಯವರಿಂದ ಕೇಳಿದ್ದ ಮಗು ಆಗದೆ ಇರುವುದು ಹೆಣ್ಣಿನ ತೊಂದರೆ ಮಾತ್ರ ಅಲ್ಲ ಕೆಲವೊಮ್ಮೆ ಗಂಡಿನ ತೊಂದರೆಯೂ ಇರಬಹುದು ಎಂದು. ಹಾಗಾಗಿ ಅಶೋಕ್ ಬಳಿ ಹೇಳಿ ಕರೆದುಕೊಂಡು ಬಂದಿರುವುದು. ಹಾಗಂತ ಅಶೋಕ್ ನಿಗೆಯೇ ತೊಂದರೆ ಇರಬಹುದು ಎಂದು ರವಿ ಸಣ್ಣ ಯೋಚನೆ ಕೂಡ ಮಾಡಿರಲಿಲ್ಲ. ಅಶೋಕ್ ವೈದ್ಯರಲ್ಲಿ ಬರುವ ಮುನ್ನ ಈ ರೀತಿಯ ಯೋಚನೆಯೇ ಅವನಲ್ಲಿ ಬಂದಿರಲಿಲ್ಲ ರವಿಯ ಒತ್ತಾಯದ ಮೇರೆಗೆ ಬಂದಿದ್ದೇ ವಿನಃ ಇನ್ನೂ ನನಗೆ ಮಗುವೆ ಆಗಲಾರದು ಎಂಬುದನ್ನು ಕನಸಲ್ಲೂ ಯೋಚನೆ ಮಾಡಿರಲಿಲ್ಲ….
ವೈದ್ಯರು ರವಿಯ ಬಳಿ ಹೇಳುತ್ತಿದ್ದರು “ಸಾವಿರದಲ್ಲಿ ಒಬ್ಬರಿಗೆ ಈ ರೀತಿಯ ತೊಂದರೆ ಇರಬಹುದು ಅದಕ್ಕೆ ಇಂತಹುದೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ನಿಮ್ಮ ಸಂಬಂಧದ ಒಳಗೆ ಯಾವುದಾದರೂ ಒಂದು ಮಗುವನ್ನು ದತ್ತು ತೆಗೆದುಕೊಳ್ಳಿ. ಮಗು ಯಾರದಾದರೆ ಏನು ಅದನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಮುಖ್ಯ, ನನ್ನ ಮಗುವೇ ಪಡೆಯಬೇಕು ಎನ್ನುವುದು ಒಂದು ರೀತಿಯ ಮನುಷ್ಯನ ವಿಚಿತ್ರ ಮನೋಭಾವ. ಮಗು ಎಂಬುದು ಏನೂ ಅರಿಯದ ಮುಗ್ಧ ಒಂದು ಜೀವ, ಮಗುವನ್ನು ಹೇಗೆ ಯಾವ ರೀತಿಯಲ್ಲಿ ಸಾಕುತ್ತೀರಿ ಎಂಬುದು ಮುಖ್ಯ. ಮಗುವನ್ನು ಪ್ರೀತಿಯಿಂದ ಸಾಕಿದರೆ ಯಾವುದೇ ಮಗು ಕೂಡ ನಮ್ಮದೇ ಮಗು ಆಗಲು ಸಾಧ್ಯ” ಎನ್ನುತ್ತಿದ್ದರು. ಈ ಮಾತು ದೂರದಿಂದ ಕೇಳುವ ಹಾಗೆ ಅನಿಸುತಿತ್ತು ಅಶೋಕ್ ನಿಗೆ.
ಸುಶೀ ಗೆ ಮಗು, ಮಕ್ಕಳು ಅಂದರೆ ಜೀವ ನನಗೆ ಮಗುವೇ ಆಗುವುದಿಲ್ಲ ಎಂದು ಗೊತ್ತಾದರೆ ಏನು ಮಾಡುವಳು? ನನ್ನನ್ನು ಬಿಟ್ಟು ಹೋದರೆ? ಈ ಯೋಚನೆಯೇ ಅಶೋಕ್ ನಿಗೆ ಮೈಯೆಲ್ಲಾ ಬೆವತು ಹೋಯಿತು……
ವೈದ್ಯರ ಬಳಿ ಹೋಗುವಾಗ ಇಬ್ಬರು ತುಂಬಾ ಮಾತನಾಡಿ ನಗಾಡಿ ಕೊಂಡು ತಮಾಷೆ ಮಾಡುತ್ತಾ ಹೋದವರು ಹಿಂದೆ ಬರುವಾಗ ಇಬ್ಬರೂ ಪರಸ್ಪರ ಏನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಯಾವುದೇ ಸಮಸ್ಯೆ ಅಥವಾ ಅವಘಡ ನಡೆದಾಗ ದೂರದಿಂದ ನೋಡುವವರಿಗೆ ಅನುಭವಿಸುವವರ ಮನಸ್ಥಿತಿ ತಿಳಿಯಲು ಖಂಡಿತಾ ಸಾಧ್ಯವಿಲ್ಲ. ಆ ತೊಂದರೆ ನಮ್ಮ ನಮ್ಮ ಮನೆಯಲ್ಲಿ ನಮ್ಮ ಜೀವನದಲ್ಲಿ ಘಟಿಸಿದರೆ ಮಾತ್ರ ತಿಳಿಯುತ್ತದೆ ಎಂಬುದು ರವಿಗೆ ಚೆನ್ನಾಗಿ ಗೊತ್ತು… ಅವನ ಜೀವನದಲ್ಲಿ ನಡೆದ ಘಟನೆಗಳು ಹೇಗೆ ಜೀವನವನ್ನು ಜರ್ಜರಿತ ಮಾಡಿತ್ತು ಎಂದು ನೆನಪಿನ ಅಂಗಳದಲ್ಲಿ ಬಂತು. ಆ ಸಮಸ್ಯೆಯ ಹೊರಗೆ ನಿಂತು ಸಮಾಧಾನ ಹೇಳುವವರಿಗೆ ತುಂಬಾ ಸುಲಭ. ಆದರೆ ಅದನ್ನು ಅನುಭವಿಸುವವರಿಗೆ ಮಾತ್ರ ಗೊತ್ತು ಅದರ ಪರಿಣಾಮ ಏನು ಎಂದು. ನೋಡುವವರಿಗೆ ಮತ್ತು ಸಮಾಧಾನ ಹೇಳುವವರು ನಮ್ಮ ಸಮಸ್ಯೆ ಬಗ್ಗೆ ಎರಡು ದಿನಗಳ ನಂತರ ಮರೆತು ಬಿಡುವರು. ಆದರೆ ಅದರ ಒಳಗೆ ಇರುವವರಿಗೆ ಅದು ಹಾಗೆ ಆಗುವುದಿಲ್ಲ ಅಲ್ವಾ? ರವಿ ಎರಡು ಮೂರು ಬಾರಿ ಮಾತನಾಡಲು ಪ್ರಯತ್ನ ಮಾಡಿದ ಆದರೆ ಅಶೋಕ್ ನ ಬಿಳುಚಿದ ಮುಖ ನೋಡಿ ಏನು ಹೇಳಬೇಕು ಎಂದು ತಿಳಿಯಲಿಲ್ಲ….
ಮನೆಗೆ ಬಂದ ತಕ್ಷಣ ಸುಶೀ ಅಶೋಕ್ ನ ಮುಖ ನೋಡಿದ ಕೂಡಲೇ ಎನೋ ಆಗಬಾರದ್ದು ಆಗಿದೆ ಎಂದು ತಿಳಿದುಕೊಂಡಳು.ಅವಳಿಗೆ ಹೇಗೆ ಏನು ಕೇಳಬೇಕು ಎಂದು ತಿಳಿಯಲಿಲ್ಲ. ಅಶೋಕ್ ಯಾವತ್ತೂ ಈ ರೀತಿ ಇರಲಿಲ್ಲ. ಮದುವೆ ಆದ ಮೇಲೆ ಒಂದು ಕ್ಷಣವೂ ಅಶೋಕ್ ಸುಶೀ ಮೇಲೆ ರೇಗಿದ್ದು ಕೋಪ ಮಾಡಿಕೊಂಡು ಕೆಟ್ಟ ಶಬ್ದಗಳಿಂದ ಬೈಯ್ದು ಅವಮಾನಿಸಿದು ನೋಡಿಲ್ಲ!! ಕೆಲವೊಂದು ಸಾರಿ ಸುಶೀ ಗೆ ಅನಿಸಿದ್ದು ಇದೆ ಅಶೋಕ್ ನಿಗೆ ಒಂದು ದಿನವೂ ಕೋಪ ಎಂಬುದು ಬರುವುದಿಲ್ಲವೇ ಎಂದು. ಈ ದಿನ ಬಾಡಿದ ಮುಖ ನಿಸ್ತೇಜ ಕಣ್ಣು ಇಳಿಬಿದ್ದ ಬಾಹುಗಳನ್ನು ನೋಡಿ ಓಡಿ ಹೋಗಿ ಪಿಸು ಮಾತಿನಿಂದ ನಗಿಸಲೇ ಎಂದು ಅನಿಸಿತು ಸುಶೀ ಗೆ. ಆದರೆ ಅಶೋಕ್ ನ ಮುಖ ನೋಡಿ ಆ ಧೈರ್ಯ ಬರಲಿಲ್ಲ…. ಆ ಧೈರ್ಯ ಬರಲಿಲ್ಲವ ಅಥವಾ ನನಗೆ ಕೂಡ ಎದೆಯಲ್ಲಿ ಯಾವುದೇ ಅವ್ಯಕ್ತ ಭಯ ಕಾಡುತ್ತಿದೆಯೇ ಎಂಬ ಅನುಮಾನಗಳು ಕಾಡುತ್ತಿವೆ.
“ ಯಾವತ್ತೂ ಮುಗುಳ್ನಗೆಯನ್ನು ನೋಡಿರದಿದ್ದರೂ ದೃಷ್ಟಿ ಹೀನರು ಕೂಡ ಮುಗುಳ್ನಗೆ ಬೀರಬಲ್ಲರು ಅದೊಂದು ಮಾನವನ ಸಹಜ ಪ್ರತಿಕ್ರಿಯೆಯಾಗಿದೆ”
( ಮುಂದುವರಿಯುವುದು)
✍️ ವನಿತಾ ಅರುಣ್ ಭಂಡಾರಿ ಬಜಪೆ.