September 19, 2024

ಇಲ್ಲಿಯವರೆಗೆ…..

ಗೋಪಾಲ ರಾಯರ ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತಾವು ಬರೆದ ಆತ್ಮಕಥೆ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಗುಟ್ಟಾಗಿ ಓದಲು ಶುರು ಮಾಡುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ನ ಗೆಳೆಯ ರವಿಚಂದ್ರ ಇವರ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು .ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಆಶೋಕ್ ಮತ್ತು ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾರೆ…..

ಅವಿನಾಭಾವ ಭಾಗ 19

 ಸುಶೀ ಗೆ ಅಶೋಕ್ ನ ಬಾಡಿದ ಮುಖ ನಿಸ್ತೇಜ ಕಣ್ಣು ನೋಡಿ ಏನು ಮಾತನಾಡಬೇಕು ಎಂದು ಅನಿಸಲಿಲ್ಲ.. ಯಾಕೋ ಏನೋ ಸುಶೀ ಯ ಎದೆ ಲಬ್ ಡಬ್ ಹೊಡೆಯುವುದು ತಿಳಿಯುತ್ತಿತ್ತು…
ತುಂಬಾ ಸಮಯದ ನಂತರ ರವಿಯ ಬಳಿ ಕೇಳೋಣ ಎಂದು ಅವನ ಆಫೀಸ್ ಕಡೆ ಹೆಜ್ಜೆ ಇಟ್ಟಳು ಸುಶೀ.
ರವಿ ಬಗ್ಗಿ ಯಾವುದೋ ಗಹನವಾದ ಗಂಭೀರ ಮುಖಭಾವ ಇಟ್ಟು ಬರೆಯುತ್ತಿದ್ದರು. ಯಾವಾಗಲೂ ಸಣ್ಣ ಹೆಜ್ಜೆ ಸಪ್ಪಳ ಕೇಳಿ ತಿರುಗಿ ನೋಡುವ ರವಿ ಈ ದಿನ ಎರಡು ಸಲ ಆಚೆ ಈಚೆ ನಡೆದರೂ ನೋಡಲಿಲ್ಲ. ಸುಶೀ ಗೆ ಕರೆಯುವ ಮನಸ್ಸಾಗದೆ ಹಾಗೆಯೇ ಹಿಂತಿರುಗಿ ಮನೆಗೆ ಬಂದು ಯಾವುದೋ ಸ್ವಲ್ಪ ಓದಿ ಬಿಟ್ಟ ಕಾದಂಬರಿ ತೆಗೆದು ಓದಲು ಕುಳಿತಳು. ಆದರೂ ದಿನ ಓದುವಂತೆ ಇರುವ ಏಕಾಗ್ರತೆ ಇಲ್ಲದಿರುವುದು ಅವಳ ಗಮನಕ್ಕೆ ಬಾರದೆ ಇರಲಿಲ್ಲ.
ಮನಸ್ಸು ಗಂಡನಾದ ಅಶೋಕ್ ನ ಕಡೆಯೇ ‌ಸಾಗಿ ಅಶೋಕ್ ನಿಗೆ ಏನಾಯಿತು ಅವರು ಹೋಗುವ ಮುನ್ನ ಕೂಡ ಎಲ್ಲಿ ಹೋಗುವುದು ಎಂದು ಸರಿ ಹೇಳಲಿಲ್ಲ. ಮಂಗಳೂರಿಗೆ ಎಂದು ಮಾತ್ರ ಹೇಳಿ ಹೋಗಿದ್ದರು. ಬಂದ ಮೇಲೆ ಹೇಳಬಹುದು ಯಾವುದೇ ವಿಚಾರವನ್ನು ಇಲ್ಲಿ ತನಕ ಹೇಳದೇ ಅಡಗಿಸಿ ಇಟ್ಟವರು ಅಲ್ಲ ಎಂದು ಸುಮ್ಮನಾಗಿದ್ದಳು. ಆದರೆ ಬಂದ ಮೇಲೆ ಅಶೋಕ್ ಮಾತ್ರ ಅಲ್ಲ ರವಿಯವರು ಕೂಡ ಮೌನಕ್ಕೆ ಜಾರಿರುವುದು ಸುಶೀ ಗೆ ಮನಸ್ಸು ಅಲ್ಲೋಲ ಕಲ್ಲೋಲ ಉಂಟು ಮಾಡುತ್ತಿತ್ತು….. ಆದರೆ ಅವಳೇ ಸಮಾಧಾನ ಮಾಡಿಕೊಂಡಳು. ದಿನಾ ರಾತ್ರಿ ಮಲಗುವ ಮುನ್ನ ಸುಶೀ ಮತ್ತು ಅಶೋಕ್ ಮನಸ್ಸಿನ ಯಾವುದೇ ಜಟಿಲ ಸಮಸ್ಯೆ ಇರಬಹುದು, ತಮಾಷೆ ಸಂಗತಿ ಇರಬಹುದು, ಇಬ್ಬರೂ ಪರಸ್ಪರ ಹಂಚಿಕೊಂಡು, ರೇಗಿಸಿಕೊಂಡು, ಮುನಿಸಿಕೊಂಡು, ಇಬ್ಬರೂ ರಮಿಸಿಕೊಂಡು ಮಲಗುವುದು ರೂಢಿ ಆಗಿತ್ತು. ಹಾಗಾಗಿ ಮಲಗುವ ಮುನ್ನ ಅಶೋಕ್ ಹೇಳಬಹುದು ಯಾವ ಕಾರಣಕ್ಕೆ ಬೇಸರ ಎಂದು ಅಂದುಕೊಂಡಳು ಸುಶೀ…
ರಾತ್ರಿಯ ಊಟ ಹೆಚ್ಚು ಮಾತುಕತೆ ಇಲ್ಲದೆ ನೀರಸವಾಗಿ ನಡೆಯಿತು. ಮಾವನ ಊಟ ಆಗಿ ಅವರಿಗೆ ನೀಡುವ ಔಷಧಿ ನೀಡಿ ಅವರು ಮಲಗಿದ ಮೇಲೆ ಸುಶೀ ತಾನು ಮಲಗುವ ಕೋಣೆ ಸೇರಿಕೊಂಡಳು. ದಿನಾ ರಾತ್ರಿ ಅಶೋಕ್ ಮತ್ತು ಸುಶೀ ಜೋರಾಗಿ ಮಾತಾಡುವುದು ನಗುವುದು ಇದ್ದೆ ಇರುತ್ತಿತ್ತು. ಇವತ್ತು ಸ್ಮಶಾನ ಮೌನ ಕಂಡು ಸುಶೀ ಗೆ ಒಂದು ಕ್ಷಣ ಒಂದು ಮಗು ಮನೆಯಲ್ಲಿ ಇರಬಾರದೇ ನಾನು ಆ ಮಗುವಿನ ಜೊತೆ ಆದರೂ ಮಾತನಾಡುತ್ತಿದ್ದೆ ಎಂದು ಅನಿಸಿದ್ದು ಕಾಕತಾಳೀಯ ವಾಗಿತ್ತು!!! ತಾನು ಪ್ರೀತಿಸುವ ತನ್ನ ಜೀವದ ಗಂಡನಿಂದ ಮಗು ತನಗೆ ಆಗುವುದೇ ಇಲ್ಲ ಎಂದು ಸುಶೀ ಗೆ ತಿಳಿದರೆ ಏನು ಮಾಡುವಳೋ ಕಾಲವೇ ಉತ್ತರಿಸಬೇಕು…


ಒಬ್ಬರ ಮನಸ್ಸು ಇನ್ನೊಬ್ಬರಿಗೆ ತಿಳಿಯುವ ಹಾಗಿದ್ದರೆ ಈ ಜಗತ್ತಿನಲ್ಲಿ ಶಾಂತಿ ನೆಲೆಸುತ್ತಿತ್ತೋ! ಅಥವಾ ದಿನಾ ಯುದ್ಧವೇ ನಡೆಯುತ್ತಿತ್ತೋ! ಯಾರಿಗೆ ಗೊತ್ತು? ಪೂರ್ತಿಯಾಗಿ ಇನ್ನೊಬ್ಬರ ಒಳ ಮನಸ್ಸು ಅರಿಯಲು ಯಾರಿಂದಲೂ ಸಾಧ್ಯವಿಲ್ಲ …
ಅಶೋಕ್ ನ ತೊಳಲಾಟ ಒಡಲಿನ ನೋವು ಚೀರಾಟ ಸುಶೀ ಗೆ ತಿಳಿಯಲಿಲ್ಲ ಎಂದೇನಿಲ್ಲ? ಆದರೆ ವಿಷಯ ಏನು ಎಂದು ಗೊತ್ತಿರಲಿಲ್ಲ. ಯಾವ ರೀತಿಯಲ್ಲಿ ಹೇಳುವುದು? ಯಾವ ಮುಖ ಇಟ್ಟುಕೊಂಡು ನನ್ನಿಂದ ನಿನಗೆ ನಿನ್ನ ಒಡಲಲ್ಲಿ ಮಗು ಎಂಬ ಮಾಣಿಕ್ಯ ಆಗಲಾರದು ಎಂಬುದನ್ನು ಯಾವ ರೀತಿಯಲ್ಲಿ ಹೇಳಲಿ ಎಂಬುದು ಅಶೋಕ್ ನ ನರಳಾಟ ಆಗಿತ್ತು.
ಹೆಣ್ಣು ಆಗಿರಲಿ ಗಂಡೇ ಆಗಿರಲಿ ಮದುವೆ ಆದ ಮೇಲೆ ಮಗು ಆಗದೆ ಇರುವ ನೋವು ಅದು ಅನುಭವಿಸಿದವರಿಗೆ ಮಾತ್ರ ಗೊತ್ತು! ಮನೆಯಲ್ಲಿ ಮಕ್ಕಳ ಆಳು, ನಗು ಕೇಳಿದವರಿಗೆ ಅದರ ನೋವು ಗೊತ್ತಿರಲಾರದು!!! ಮದುವೆ ಆಗಿ ಮೂರು ನಾಲ್ಕು ವರ್ಷಗಳ ಕಾಲ ಮಗು ಆಗದೆ ಇರುವುದಕ್ಕೆಯೇ ನೂರಾರು ಮದ್ದು ಹಲವಾರು ವೈದ್ಯರು ಸಾವಿರಾರು ಹರಕೆ ಹೊತ್ತು ಹೈರಾಣಾಗಿ ಇರುವಾಗ ಜೀವನದಲ್ಲಿ ಮಗುವೇ ಆಗುವುದಿಲ್ಲ ಎಂದು ತಿಳಿದು ನಾನು ಏನು ಮಾಡಲಿ ಎಂದು ಮನಸ್ಸಿನಲ್ಲೇ ಮೂಕ ರೋಧನೆ ಆಗುತಿತ್ತು ಅಶೋಕ್ ನಿಗೆ….
ದಿನಾ ಸುಶೀ ಬಂದು ಮಲಗಿದ ಮೇಲೆಯೇ ಅಶೋಕ್ ಬಂದು ಮಲಗುವುದು ರೂಢಿ. ಆದರೆ ಇಂದು ಸುಶೀ ಬರುವ ಮುನ್ನವೇ ಅಶೋಕ್ ಬಂದು ಮಲಗಿ ಆಗಿತ್ತು!! ಸುಶೀ ಬಂದು ಪಕ್ಕದಲ್ಲಿ ಮಲಗಿದಾಗ ಅಶೋಕ್ ಮುಖ ಮುಚ್ಚಿಕೊಂಡು ಅಂಗಾತ ಮಲಗಿರುವುದು ಕಂಡು ಸುಶೀ ಅಶೋಕ್ ನ ಬೆನ್ನು ನೇವರಿಸುತ್ತಾ ಏನಾಯಿತು ಯಾಕೆ ಈ ರೀತಿ ಇದ್ದೀರಿ ನನಗೆ ನೀವು ಹೇಳದಿದ್ದರೆ ಹೇಗೆ ತಿಳಿಯುತ್ತದೆ ಎಂದಾಗ ಸುಶೀಯ ಕಣ್ಣಿಂದ ಹನಿ ನೀರು ಅಶೋಕ್ ನ ಬೆನ್ನಿನ ಮೇಲೆ ಜಾರಿ ಬಿತ್ತು. ಅವನ ಮುಖವನ್ನು ಎತ್ತಿ ಈಚೆ ತಿರುಗಿಸುವಾಗ ಅಶೋಕ್ ಆಳುತ್ತಿರುವ ಸದ್ದು ಅವನ ಕಣ್ಣಿಂದ ನೀರು ಹರಿಯುತ್ತಿರುವುದು ಕಂಡು ಸುಶೀ ಗೆ ಒಂದು ಕ್ಷಣ ತನ್ನ ಎದೆ ಬಗೆದು ಹೃದಯವನ್ನು ಕಿತ್ತು ಎಸೆದಷ್ಟು ತನ್ನ ದೇಹದಲ್ಲಿ ಹರಿಯುತ್ತಿರುವ ಪೂರ್ತಿ ರಕ್ತವನ್ನು ಹಿರಿದಷ್ಟೇ ನೋವು ಇಂಚು ಇಂಚಾಗಿ ಇಡೀ ದೇಹವನ್ನು ಆವರಿಸಿತ್ತು. ಆ ನೋವೇ ಕಣ್ಣಿಂದ ನೀರಿನ ಮೂಲಕ ಹರಿಯುವಂತೆ ಸುಶೀ ಕೂಡ ಅಶೋಕ್ ನ ರೀತಿಯಲ್ಲಿ ಅತ್ತಳು. ಇಬ್ಬರೂ ಕುಳಿತು ಕೊಂಡು ಪರಸ್ಪರ ಎಷ್ಟು ಆಳವಾಗಿ ಅತ್ತರು. ಅಶೋಕ್ ನಿಗೆ ವಿಷಯ ಗೊತ್ತಾಗಿ ಆಳು ಬಂದರೆ ಸುಶೀ ಗೆ ತನ್ನ ಗಂಡ ಜೀವದ ಗೆಳೆಯ ಆಳುವುದು ಕಂಡೇ ಆಳು ಬಂದಿರುವುದು ಸತ್ಯ. ಸುಮಾರು ಹೊತ್ತು ಅತ್ತ ಮೇಲೆ ಇಬ್ಬರು ತಮ್ಮ ಮನಸ್ಸನ್ನು ತಹಬಂದಿಗೆ ತಂದು ಪರಸ್ಪರರ ಮುಖವನ್ನು ನೋಡಿಕೊಂಡರು. ಇನ್ನಾದರೂ ಹೇಳಬಾರದೇ ಎಂಬ ಮುಖಭಾವ ಇಟ್ಟು ಸುಶೀ ಅಶೋಕ್ ನ ಮುಖ ನೋಡಿದರೆ ಅಶೋಕ್ ನಾನು ಈ ವಿಚಾರ ಹೇಳಿದರೆ ನಾಳೆ ಅವಳ ತಾಯಿ ಮನೆಗೆ ಹೋದವಳು ಬಾರದೆ ಇದ್ದರೆ ಅಥವಾ ಜೀವಕ್ಕೆ ಏನಾದರೂ ಅಪಾಯ ಒಡ್ಡಿದರೆ ಅಥವಾ ಮಾನಸಿಕವಾಗಿ ಮತಿಭ್ರಮಣೆ ಆದರೆ ನಾನು ಎನು ಮಾಡಲಿ ಮನವೇ ಎಂದು ಸುಶೀ ಯ ಮುಖ ನೋಡಿದ.. ಒಂದೇ ದಿನದಲ್ಲಿ ಅಶೋಕ್ ಹತ್ತು ವರ್ಷ ಹೆಚ್ಚು ಪ್ರಾಯ ಆದ ಹಾಗೆ ಕಾಣುತ್ತಿದ್ದ….

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *