ಇಲ್ಲಿಯವರೆಗೆ…..
ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ನ ಗೆಳೆಯ ರವಿಚಂದ್ರ ಇವರ ಕುಟುಂಬದ ಜೊತೆ ಅನ್ಯೋನ್ಯವಾಗಿದ್ದರು .ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಆಶೋಕ್ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರು ಅಶೋಕ್ ನಿಗೆ ಯಾವತ್ತೂ ಮಗು ಆಗಲಾರದು ಎಂಬ ಸತ್ಯವನ್ನು ಹೇಳುತ್ತಾರೆ. ಇದನ್ನು ಸುಶೀಲ ನಲ್ಲಿ ಹೇಗೆ ಹೇಳುವುದು ಎಂಬ ತೊಳಲಾಟದಿಂದ ನರಳುತ್ತಾನೆ ಅಶೋಕ್……
ಅವಿನಾಭಾವ ಭಾಗ 20
“ಈ ಜಗತ್ತಿನ ಅತ್ಯಂತ ಮಧುರ ಸಂಗೀತ ಯಾವುದೆಂದರೆ ಅದು ನಮ್ಮ ಹೃದಯದ ಬಡಿತ. ಇಡೀ ಜಗತ್ತು ನಮ್ಮನ್ನು ತೊರೆದು ಏಕಾಂಗಿಯಾದರೂ ನಾವು ಬದುಕಬಲ್ಲೆವು ಎಂಬ ಭರವಸೆಯನ್ನು ಅದು ನೀಡುತ್ತದೆ”.
ನಗು ನಕ್ಕಷ್ಟು ಹೆಚ್ಚು ಆಗುತ್ತದೆ ಆಳು ಅತ್ತಷ್ಟು ಕಡಿಮೆ ಆಗುತ್ತದೆ. ಯಾವುದನ್ನು ಹೆಚ್ಚು ಹೊತ್ತು ಇಡಲಾದೀತು… ಅತ್ತು ಸ್ವಲ್ಪ ಹೊತ್ತಿನ ಬಳಿಕ ಇಬ್ಬರೂ ಸಮಾಧಾನ ಮಾಡಿಕೊಂಡರು.
ಅಶೋಕ್ ನಿಗೆ ಎಲ್ಲಿಂದ ಹೇಗೆ ಧೈರ್ಯ ಬಂತೋ ಗೊತ್ತಿಲ್ಲಾ “ನಾನು ರವಿ ಈ ದಿನ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಂಡು ಬಂದೆವು ಮಕ್ಕಳು ಆಗುವ ಬಗ್ಗೆ! ……….ಆದರೆ ವೈದ್ಯರ ಪರೀಕ್ಷೆ ಪ್ರಕಾರ ನನಗೆ ಮಕ್ಕಳು ಆಗಲಾರದು ಸುಶೀ” ಎಂದು ಒಂದೇ ಉಸಿರಿಗೆ ಹೇಳಿ ಅವಳ ಮುಖವನ್ನೇ ದಿಟ್ಟಿಸಿ ನೋಡಿದ. ಅಶೋಕ್ ನ ಕಣ್ಣಿಂದ ನೀರು ಕೆನ್ನೆ ಮೇಲೆ ಸಣ್ಣದಾಗಿ ಹನಿ ಹನಿಯಾಗಿ ಬೀಳುತ್ತಿತ್ತು.
ಸುಶೀ ಅಶೋಕ್ ನ ಈ ಮಾತು ಕೇಳಿ ಒಮ್ಮೆಲೇ ಚೀರಲಿಲ್ಲ ಕೂಗಿ ರಂಪಾಟ ಮಾಡಲಿಲ್ಲ.ಬದಲಾಗಿ ಅಷ್ಟೇ ಸಮ ಚಿತ್ತದಿಂದ ಯಾವುದೇ ರೀತಿಯ ನೋವು ಆಳು ತೋರಿಸಿ ಕೊಳ್ಳದೆ ಇಷ್ಟಕ್ಕೆ ನೀವು ಇಷ್ಟು ಬೇಸರ ನೋವು ಚಿಂತೆಯಿಂದ ಇರುವುದೇ? ಮೊದಲೇ ಹೇಳಿದ್ದರೆ ನಾನು ನಿಮ್ಮನ್ನು ಸಮಾಧಾನ ಮಾಡುತ್ತಿದ್ದೆ ಅಲ್ವಾ? ಯಾಕೆ ಅಷ್ಟೊಂದು ಚಿಂತೆ ಮಾಡುತ್ತೀರಿ. ಈ ಭೂಮಿಯ ಮೇಲೆ ಎಷ್ಟೊಂದು ಮಕ್ಕಳಿಗೆ ಅಪ್ಪ ಅಮ್ಮನೇ ಇರುವುದಿಲ್ಲ ಅವರನ್ನು ನಮ್ಮ ಮಕ್ಕಳು ಎನಿಸಿ ಕೊಳ್ಳಬಹುದು ತಾನೇ? ನಮ್ಮ ಒಡಲಲ್ಲಿ ಹುಟ್ಟಿದ ಮಕ್ಕಳು ಮಾತ್ರ ನಮ್ಮ ಮಕ್ಕಳು ಎಂದು ಕರೆಸಿ ಕೊಳ್ಳುವುದು ದೊಡ್ಡ ಹೆಗ್ಗಳಿಕೆಯೇ? ಇಷ್ಟೊಂದು ವೃದ್ಧಾಶ್ರಮಗಳು ಇವೆಯಲ್ಲ ಅಲ್ಲಿ ಯಾರನ್ನಾದರೂ ಮಾತನಾಡಿಸಿ ಆಗ ತಿಳಿಯುತ್ತದೆ…. ತುಂಬಿ ತುಳುಕುತ್ತಿರುವ ವೃದ್ಧಾಶ್ರಮದಲ್ಲಿ ಮಕ್ಕಳು ಇಲ್ಲದವರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇರುವುದು. ಉಳಿದವರು ಮಕ್ಕಳು ಮೊಮ್ಮಕ್ಕಳು ಇದ್ದವರೇ ಹೆಚ್ಚು ಜನ ಇರುವುದು. ಅದು ನಾವು ಎಷ್ಟು ಕಷ್ಟ ಪಟ್ಟರೂ ನಮ್ಮ ಮಕ್ಕಳು ಚೆನ್ನಾಗಿ ಇರಬೇಕು ಎಂದು ಕೈ ಬಾಯಿ ಕಟ್ಟಿ ಬೆಳೆಸಿದ ಅಪ್ಪ ಅಮ್ಮನವರನೇ ಮಕ್ಕಳು ತಾವು ದುಡಿದು ತಿನ್ನುವ ಹೊತ್ತಿಗೆ ಬೀದಿಗೆ ತಳ್ಳುವುದು ನಾವು ನೋಡುತ್ತಿಲ್ಲವೇ??
ಮಕ್ಕಳು ಇಲ್ಲದಿದ್ದರೆ ಒಂದೇ ಚಿಂತೆ ಮಕ್ಕಳು ಇಲ್ಲ ಎಂದು! ಇದ್ದರೆ ನೂರಾರು ಸಾವಿರಾರು ಚಿಂತನೆ ಅದಕ್ಕೆ ಕೊನೆ ಮೊದಲೇ ಇಲ್ಲ….. ನಮಗೆ ಬೇಕಾದರೆ ಮಗುವನ್ನು ದತ್ತು ತೆಗೆದುಕೊಳ್ಳಲು ಸಾಧ್ಯ ಇದೆ. ಬೇಡ ಎಂದಾದರೆ ನಿಮಗೆ ನಾನು ಮಗು ನನಗೆ ನೀವು ಮಗು ..
“ ಜೀವನದಲ್ಲಿ ಉಂಟಾಗುವ ಸೋಲಿನಿಂದ ಹತಾಶರಾಗದೆ ಪ್ರಯತ್ನ ಮುಂದುವರಿಸಿದರೆ ಯಶಸ್ಸು ಖಚಿತ ”ಎಂದು ಬಲ್ಲವರ ಮಾತು.
ನೀವು ತುಂಬಾ ಚಿಂತೆ ಮಾಡಿದರೆ ನನಗೂ ದುಃಖ ಆಗುತ್ತದೆ ನೀವು ಸಂತೋಷದಿಂದ ಇರುವುದು ಮುಖ್ಯ ನನಗೆ ಎಂದು ಸುಶೀ ಅಶೋಕ್ ನ ಸಂತೈಸಿದಳು…. ಇವಳ ಸಮಾಧಾನ ಚಿತ್ತ, ಧೈರ್ಯದ ಮಾತು, ಉಪಯುಕ್ತ ಸಲಹೆ ಕೇಳಿ ಒಂದು ಕ್ಷಣ ಅಶೋಕ್ ಬೆರಗಾದ. ನಾನು ಎಷ್ಟು ಚಿಂತೆಯಿಂದ ಇದ್ದೆ!!! ಸುಶೀ ಈ ನೋವನ್ನು ಹೇಗೆ ತೆಗೆದುಕೊಳ್ಳುತ್ತಾಳೆ ಎಂದು ಆದರೆ ಅವಳ ಮಾತಿನಿಂದ ಇಷ್ಟು ದೊಡ್ಡ ಸಮಸ್ಯೆಯನ್ನು ಸಣ್ಣ ಮಾತಿನಿಂದ ಹೇಳಿ ನನ್ನನ್ನು ಸಮಾಧಾನ ಮಾಡುತ್ತಾಳೆ ಎಂದು ನಾನು ಯೋಚಿಸಿಯೇ ಇರಲಿಲ್ಲ ಎಂದು ಯೋಚಿಸಿ ಚಿಂತಿಸಿ ಚಿಂತಿಸಿ ಅಲ್ಲೇ ನಿದ್ರಾ ದೇವಿಯ ಮಡಿಲಿಗೆ ಜಾರಿದ ಅಶೋಕ್…..
ಸುಶೀ ಅಶೋಕ್ ನ ನೋವು ಚಿಂತೆ ಶಮನ ಮಾಡಲು ಈ ಎಲ್ಲ ದೊಡ್ಡ ದೊಡ್ಡ ಮಾತುಗಳನ್ನು ಹೇಳಿದ್ದಳು. ಆದರೆ ಅವಳ ತಲೆ ಎಲ್ಲ ಅಶೋಕ್ ನ ಮಾತಿನಿಂದ ದಿಕ್ಕು ತೋಚದಂತಾಯಿತು…. ಅಶೋಕ್ ನಿದ್ದೆಗೆ ಜಾರಿದ ಮೇಲೆ ಸುಶೀ ಗೆ ಕಣ್ಣು ಮುಚ್ಚಿದರೂ ತೆರೆದರೂ ಮಗು ಆಗುವುದಿಲ್ಲ ಎಂಬ ಚಿಂತೆಯೇ ಭೂತಕಾರವಾಗಿ ಚುಚ್ಚಿ ಚುಚ್ಚಿ ನೋವಾಯಿತು. ಆಳು ಉಕ್ಕಿ ಬರುತ್ತಿತ್ತು ಬಿಕ್ಕಿ ಬಿಕ್ಕಿ ಅತ್ತರೆ ಅಶೋಕ್ ನಿದ್ದೆಯಿಂದ ಎದ್ದರೆ ಎಂಬ ಭಯದಿಂದ ಬಾಯಿ ಮುಚ್ಚಿ ಮನಸಾರೆ ಅತ್ತಳು.. ಕಣ್ಣ ನೀರಿನಿಂದ ತಲೆ ದಿಂಬು ಒದ್ದೆ ಆಯಿತು. ಬೆಳಗಿನ ಜಾವ ಸುಶೀ ಗೆ ನಿದ್ರೆ ಆವರಿಸಿತು.
( ಮುಂದುವರಿಯುವುದು)