January 29, 2025
Avinabhava Feauture Image

ಇಲ್ಲಿಯವರೆಗೆ…..

ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರ ಮೂಲಕ ಅಶೋಕ್ ನಿಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯ ತಿಳಿಯುತ್ತದೆ. ಇದರಿಂದ ಮೂವರೂ ತುಂಬಾ ನೋವು ಅನುಭವಿಸುತ್ತಾರೆ. ಅಶೋಕ್ ನಿಗೆ ಈ ಬಗ್ಗೆ ಒಂದು ಯೋಚನೆ ಬರುತ್ತದೆ……

ಅವಿನಾಭಾವ ಭಾಗ 22

ನಿನಗೆ ಬಂದ ಯೋಚನೆ ಎಲ್ಲರಿಗೂ ಒಳ್ಳೆಯದು ಆಗುವುದಾದರೆ ಸಂತೋಷವೇ ತಾನೇ ಅಶೋಕ್. ಅದಕ್ಕೆ ಹೇಳಲು ಮುಚ್ಚುಮರೆ ಯಾಕೆ ಹಿಂಜರಿಕೆ ಯಾಕೆ ಹೇಳು ಎಂದ ರವಿ..
ಅಶೋಕ್ ನಿಗೆ ತನ್ನ ಯೋಚನೆ ರವಿಯ ಬಳಿ ಹೇಳಲು ಖಂಡಿತಾ ಮುಜುಗರವೇ ಕಾರಣ.. ಇಂತಹ ವಿಚಾರಗಳನ್ನು ಹಂಚಿಕೊಳ್ಳಲು ಸಾದ್ಯವೇ ಇಲ್ಲ….. ಕೆಲವೊಂದು ವಿಚಾರಗಳು ಸಮಾಜದಲ್ಲಿ ಒಪ್ಪಿತ ಅಲ್ಲದೆ ಇರುವ ಸಾಮಾಜಿಕ ನಂಬಿಕೆಗಳು ಕಟ್ಟಲೆಗಳು ಆಗಿರುವಾಗ ನಾನು ರವಿಯ ಬಳಿ ಹೇಳಿ ಅವನಿಂದ ಛೀ ಥೂ ಅನ್ನಿಸಿಕೊಳ್ಳುವುದು ಅಲ್ಲದೆ ನನಗೆ ಬಂಧು ಬಳಗ ಗೆಳೆಯ ಎಲ್ಲವೂ ರವಿಯೇ ಆಗಿರುವಾಗ ಎನಾದರೂ ಅವನು ನನ್ನಿಂದ ನನ್ನ ಈ ಮಾತಿನಿಂದ ದೂರವಾದರೆ ಎಂಬ ಭಯದಿಂದ ಅದಕ್ಕಿಂತ ಹೆಚ್ಚಾಗಿ ನಾಚಿಕೆಯಿಂದ ಯಾವ ಮಾತನ್ನೂ ಅಶೋಕ್ ರವಿಯ ಬಳಿ ಹೇಳಲಾರದೆ ಸುಮ್ಮನೆ ಬಗ್ಗಿ ಕುಳಿತು ನೆಲವನ್ನೇ ನೋಡಿದ…..
ರವಿ ಎಷ್ಟು ಒತ್ತಾಯ ಮಾಡಿದರು ಅಶೋಕ್ ನ ಬಾಯಿಯಿಂದ ಮಾತೇ ಹೊರಡಲಿಲ್ಲ…. ರವಿಗೂ ಉಭಯ ಸಂಕಟ… ನನ್ನ ಜೀವದ ಗೆಳೆಯ ಹಾಗೂ ಈಗ ಬಂದಿರುವ ಅಘಾತಕಾರಿ ಸುದ್ದಿಯಿಂದ ಸುಶೀಲ ಅಶೋಕ್ ಇಬ್ಬರ ಮುಂದಿನ ಜೀವನದ ಸುಮಧುರ ಸಂತೋಷವನ್ನು ಕಳೆದುಕೊಂಡಿರುವುದು ಅವರಷ್ಟೇ ಅಘಾತ ನೋವು ರವಿಗೂ ಆಗಿದೆ…. ಹೇಗಾದರೂ ಇವರಿಬ್ಬರ ಜೀವನ ಮುಂದೆ ಚೆನ್ನಾಗಿ ಆಗುವುದಾದರೆ ಖಂಡಿತಾ ನಾನು ಸಹಾಯ ಮಾಡುತ್ತೇನೆ ಈ ಮನುಷ್ಯ ಯಾಕೆ ನನ್ನಲ್ಲಿ ಹೇಳುತ್ತಿಲ್ಲ ಎಂದು ರವಿಗೆ ಚಡಪಡಿಕೆ ಶುರುವಾಯಿತು.
“ಹೇಳು ಅಶೋಕ್ ನಾನು ನೀನು ಬಾಲ್ಯದಿಂದಲೇ ಸ್ನೇಹಿತರು ಎಂಬುದನ್ನು ಮರೆತೆಯಾ? ನೀನು ಹಾಗಾದರೆ ಅಷ್ಟೇ ಅಲ್ವಾ ಅರ್ಥ ಮಾಡಿಕೊಂಡಿದ್ದು‌. ನೀನು ನಿನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಯಾಕೆ ವಿಷಯವನ್ನು ಬಚ್ಚಿಟ್ಟು ನನ್ನನ್ನು ಕೊಲ್ಲುತ್ತಿರುವೇ?” ರವಿಯ ಮಾತು ಕೇಳಿ ಅಶೋಕ್ ನಾನು ನಿನ್ನಿಂದ ವಿಷಯ ಬಚ್ಚಿಟ್ಟು ಏನು ಸಾಧಿಸಲು ಸಾಧ್ಯವಿಲ್ಲ ರವಿ!!! ನಾನು ಯೋಚನೆ ಮಾಡಿದ ಗುಪ್ತ ಯೋಚನೆ ನಿನ್ನಲ್ಲಿ ಅಲ್ಲದೆ ಬೇರೆ ಯಾರಲ್ಲೂ ಹೇಳಲು ಹೋಗುವುದಿಲ್ಲ ಆದರೆ ನಾನು ಇದನ್ನು ಹೇಳಿದ ಮೇಲೆ ನೀನು ನನ್ನಲ್ಲಿ ಮಾತು ಬಿಡುವುದಿಲ್ಲ ಕೋಪ ಮಾಡುವುದಿಲ್ಲ ಎಂದು ಯಾವ ಗ್ಯಾರಂಟಿ ರವಿ ಎಂದು ಅಶೋಕ್ ಹೇಳಿದ. ನಿನ್ನ ಈ ಯೋಜನೆ ಸುಶೀಲ ಅವರಿಗೆ ತಿಳಿದಿದೆಯೇ ಎಂದು ರವಿ ಕೇಳಿದಾಗ… ಇಲ್ಲ ರವಿ ನಾನು ಯಾರಲ್ಲೂ ಹೇಳಿಲ್ಲ ಎಂದು ಹೇಳಿದೆ ತಾನೇ? ಮೊದಲು ನಿನ್ನಲ್ಲಿ ಆ ಯೋಜನೆ ಸರಿಯೇ ತಪ್ಪೆ ಎಂದು ಹೇಳಿ ನಿನ್ನ ಸಲಹೆ ಕೇಳಿ ಆಮೇಲೆ ಅವಳಲ್ಲಿ ನಾನು ಕೇಳುತ್ತೇನೆ ಎಂದ ಅಶೋಕ್. ಹಾಗಾದರೆ ಕೇಳು ಮಾರಾಯಾ ಯಾಕೆ ಸಮಯ ದೂಡುತ್ತಿ ಒಳ್ಳೆಯ ಕೆಲಸ ಬೇಗನೇ ಆಗಬೇಕು ಎಂದು ರವಿ ಅವಸರ ಮಾಡಿದಾಗ ಅಶೋಕ್ ನೋಡು ನೀನು ನಾನು ಬಾಲ್ಯದಿಂದಲೂ ಗೆಳೆಯರು ಆಗಿದ್ದರೂ ಕೂಡ ಕೆಲವೊಂದು ವಿಚಾರಗಳು ನೇರ ನೇರ ಕೇಳಲು ಹೇಳಲು ಅಡಚಣೆ ಆಗುತ್ತದೆ ನಾನು ನಿನಗೆ ಒಂದು ಪತ್ರದ ಮೂಲಕ ಬರೆದು ಕೊಡುತ್ತೇನೆ ಮಾತ್ರ ನಾನು ಬರೆದು ಕೊಡುವ ಮುಂಚೆ ನೀನು ನನಗೆ ಒಂದು ಮಾತು ಕೊಡಬೇಕು ತಪ್ಪಿಯೂ ಕೋಪ ಮಾಡುವುದಿಲ್ಲ ಬೇಸರ ಆಗಿ ನಮ್ಮಿಬ್ಬರ ಗೆಳೆತನಕ್ಕೆ ಯಾವುದೇ ಹಾನಿ ಆಗುವುದಿಲ್ಲ ಹಾಗೂ ಎಲ್ಲಿಯೂ ಯಾರ ಬಳಿಯೂ ನಾನು ಹೇಳಿದ ವಿಚಾರ ಪ್ರಸ್ತಾಪ ಮಾಡುವುದಿಲ್ಲ ಎಂದು ಭಾಷೆ ಕೊಟ್ಟರೆ ನಾನು ಪತ್ರದ ಮೂಲಕ ಬರೆದು ಕೊಡುತ್ತೇನೆ ಎಂದು ಹೇಳಿ ರವಿಯ ಮುಖ ನೋಡಿದ. ಅಶೋಕ್ ನ ಮಾತು ಕೇಳಿ ರವಿ ಸರಿ ಬರೆದು ಕೊಡು ನಾನು ನಿನ್ನ ಜೊತೆ ಯಾವುದೇ ಕಾರಣಕ್ಕೂ ಕೋಪ ಬೇಸರ ಮಾಡುವುದಿಲ್ಲ ಹಾಗೂ ನಮ್ಮಿಬ್ಬರ ಮಾತುಕತೆ ಬೇರೆಯವರಲ್ಲಿ ಖಂಡಿತಾ ಹೇಳುವುದಿಲ್ಲ ಎಂದು ಮಾತು ಕೊಟ್ಟ. ನಾಳೆ ಬರೆದು ಕೊಡುತ್ತೇನೆ ರವಿ ಎಂದು ಅಶೋಕ್ ಹೇಳಿದ. ಇಬ್ಬರು ತಮ್ಮ ತಮ್ಮ ಕೆಲಸದಲ್ಲಿ ಮಗ್ನರಾದರು..
ಸುಶೀ ಒಲ್ಲದ ಮನಸ್ಸಿನಿಂದಲೇ ಎಲ್ಲಾ ಕೆಲಸ ಮುಗಿಸಿ ಯಾಕೋ ತಾಯಿ ಮನೆಗೆ ಹೋದರೆ ಸ್ವಲ್ಪ ಮನಸ್ಸಿಗೆ ಸಮಾಧಾನ ಆದರೂ ಆಗಬಹುದು ಎಂದು ಅಶೋಕ್ ನ ಬಳಿ ನಾನು ಅಮ್ಮನ ಮನೆಗೆ ಹೋಗಿ ನಾಳೆ ಬರುತ್ತೇನೆ ಎಂದು ಕೇಳಿದಾಗ ಅಶೋಕ್ ನಿಗೆ ಸುಶೀ ಬಗ್ಗೆ ಅಯ್ಯೋ ಪಾಪ ಅನ್ನಿಸಿತು. ನನ್ನ ಅಮ್ಮ ಇರುವಾಗ ಒಂದು ವಾರ ಹೋಗಿ ಕುಳಿತು ಬರುತ್ತಿದ್ದಳು ಈಗ ಅಮ್ಮ ತೀರಿಕೊಂಡ ಮೇಲೆ ಅಪ್ಪಾ ನಿಗೂ ಆರೋಗ್ಯ ಸರಿ ಇಲ್ಲದ ಮೇಲೆ ತಾಯಿ ಮನೆಗೆ ಹೋಗಲು ಆಗುವುದಿಲ್ಲ ಈಗ ನಿನ್ನೆಯಿಂದ ತುಂಬಾ ನೊಂದುಕೊಂಡಿದ್ದಾಳೆ ಹೋಗಿ ಸ್ವಲ್ಪ ಕುಶಿಯಾಗಿ ಇರಲಿ ಎಂದು ಮನಸ್ಸಿನಲ್ಲೇ ಅಶೋಕ್ ಅಂದುಕೊಂಡ….. ಸರಿ ಸುಶೀ ಹೋಗಿ ಬಾ ಕಪಾಟಿನಲ್ಲಿ ಹಣ ಇದೆ ತೆಗೆದುಕೊ. ಹಂ ಹೇಳಲು ಮರೆತೇ ಇಲ್ಲಿ ಬಾ ಎಂದು ಹತ್ತಿರ ಕರೆದು ನಿನ್ನೆ ವೈದ್ಯರು ಹೇಳಿದ ವಿಚಾರ ಯಾರಲ್ಲೂ ಹೇಳಬೇಡ. ಮಗು ಆಗಲು ಸಾಧ್ಯ ಇದೆ ಬೇರೆ ವೈದ್ಯರ ಬಳಿ ಹೋಗೋಣ … ಹಾಗಾಗಿ ಈಗಲೇ ಏನನ್ನು ಹೇಳಬೇಡ ಎಂದು ಅಶೋಕ್ ಸುಶೀ ಗೆ ಹೇಳಿದ ಎಲ್ಲದಕ್ಕೂ ತಲೆ ಆಡಿಸಿ ಹೊರಟು ಮಾವನಲ್ಲಿ ಹೇಳಿ ಬಸ್ಸು ಹಿಡಿಯಲು ಹೊರಟಳು ಸುಶೀ….
ಮನೆಯಲ್ಲಿ ಸುಶೀ ಇಲ್ಲದೆ ಇರುವುದರಿಂದ ಅಶೋಕ್ ರವಿಗೆ ಪತ್ರ ಬರೆಯಲು ಶುರು ಮಾಡಿದ…

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *