September 20, 2024

ಇಲ್ಲಿಯವರೆಗೆ…..

ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರ ಮೂಲಕ ಅಶೋಕ್ ನಿಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯ ತಿಳಿಯುತ್ತದೆ. ಇದರಿಂದ ಮೂವರೂ ತುಂಬಾ ನೋವು ಅನುಭವಿಸುತ್ತಾರೆ. ಅಶೋಕ್ ನಿಗೆ ಈ ಬಗ್ಗೆ ಒಂದು ಯೋಚನೆ ಬರುತ್ತದೆ……

ಅವಿನಾಭಾವ ಭಾಗ 23

ನನ್ನ ಜೀವದ ಗೆಳೆಯ ರವಿ,

‘’ ಅತ್ಯುತ್ತಮ ಸ್ನೇಹಿತರು ಯಾವಾಗಲೂ ಒಂದೇ ಸ್ವಭಾವದವರಾಗಿರುವುದಿಲ್ಲ. ಬದಲಿಗೆ ಅವರು ತಮ್ಮ ನಡುವಣ ಅಭಿಪ್ರಾಯ ಭೇದಗಳ ಬಗ್ಗೆ ಸ್ಪಷ್ಟವಾಗಿ ಅರಿತಿರುತ್ತಾರೆ”
ಎಂದು ಗೊತ್ತು ಹೀಗೆ ಇರುವುದರಿಂದಲೇ ನಾವಿಬ್ಬರೂ ಇಲ್ಲಿ ತನಕ ಜೊತೆಗೆ ಇದ್ದೇವೆ ಎಂಬುದು ನಿನಗೆ ತಿಳಿದಿದೆ. ಆದರೆ ಈಗ ನನಗೆ ಎದುರಾಗಿರುವ ಸಮಸ್ಯೆ ನನ್ನ ಜೀವನದ ನನ್ನ ಬಾಳಿನ ಬೆಳಕಿನ ಪ್ರಶ್ನೆ ಎಂದು ನಿನಗೆ ತಿಳಿದಿದೆ.
ಈಗ ನನಗೆ ಬಂದ ಯೋಚನೆ ಎಂದರೆ ನಿನ್ನಿಂದ ನನಗೆ ಉಪಕಾರ ಆಗಬೇಕು ಅಂದರೆ ನಿನ್ನಿಂದ ನಾನು ಮಗು ಪಡೆಯಲು ಸಾಧ್ಯ ಇದೆ ಎಂದು ತಿಳಿದು ಸಂತೋಷ ಪಡುವುದರಲ್ಲಿ ಏನು ತಪ್ಪಿದೆ ರವಿ? ಒಂದು ಕ್ಷಣ ನೀನು ದಿಗ್ಭ್ರಮೆ ಗೊಳ್ಳಬಹುದು, ಅದು ಸಹಜ ಕೂಡ ಹೌದು .ಆದರೆ ನಿನ್ನ ಮೂಲಕ ನಾವು ಮಗು ಪಡೆಯಲು ಸಾಧ್ಯ ಇದೆ ಅಲ್ವಾ? ಅದು ಸರಿಯೋ ತಪ್ಪೋ ಎಂಬುದು ನಂತರದ ವಿಷಯ!! ನನಗೆ ಮಗು ಆಗಲಾರದು ಎಂಬುದನ್ನು ವೈದ್ಯರು ಹೇಳಿರುವುದು ಸತ್ಯ ಎಂದು ನಿನಗೆ ಗೊತ್ತು..ಆದರೆ ಸುಶೀ ಗೆ ಮಗು ಬೇಕು ಎಂದು ಅವಳು ಆಶಿಸುವುದರಲ್ಲಿ ಏನು ತಪ್ಪಿಲ್ಲ ತಾನೇ.. ಅವಳು ಮಗು ಪಡೆಯಲು ಸಾಧ್ಯ ಆಗುವುದಾದರೆ ಅದು ನಿನ್ನಿಂದಲೇ ಆದರೆ ತಪ್ಪು ಏನು ಎಂದು ನನ್ನನ್ನು ಕಾಡುತ್ತಿರುವ ಪ್ರಶ್ನೆಯು ಹೌದು ಉತ್ತರವೂ ಹೌದು ರವಿ!!!! ನೀನು ಇದಕ್ಕೆ ಒಪ್ಪಿದರೆ ಸುಶೀ ಯನು ಒಪ್ಪಿಸುವ ಜವಾಬ್ದಾರಿ ನಾನು ಮಾಡುತ್ತೇನೆ….. ಅವಳನ್ನು ಖಂಡಿತಾ ಒಪ್ಪಿಸುತ್ತೇನೆ ಎಂಬ ಆಶಾವಾದ ನನಗೆ ಇದೆ.

ಇಂತಹ ವಿಚಾರಗಳನ್ನು ಯೋಚನೆ ಮಾಡುವುದು ಕೂಡ ತಪ್ಪು ಎಂದು ನೀನು, ಸಮಾಜ ಹೇಳುತ್ತದೆ! ಹೌದು ಆದರೆ ನನ್ನ ಪ್ರಶ್ನೆ ಇರುವುದು ತಪ್ಪು ಯಾಕೆ ಎಂದು? ಹಿಂದೆ ಕುಂತಿಗೆ ಪಾಂಡುವಿನಿಂದ ಮಕ್ಕಳಾಗದೇ ಇರುವಾಗ ಕೂಡವಳಿ ಮೂಲಕ ತಮ್ಮ ವಂಶದ ಮುಂದುವರಿಕೆಗಾಗಿ ಅವರು ಪಂಚ ಪಾಂಡವರನ್ನು ಪಡೆದಿಲ್ಲವೆ? ಪಾಂಡುವಿನ ಇನ್ನೊಬ್ಬ ಪಟ್ಟದ ಅರಸಿ ಮಾದ್ರಿಯು ನಕುಲ ಸಹದೇವರನು ಬೇರೆಯವರಿಂದ ಪಡೆದಿಲ್ಲವೆ? ದ್ರೌಪದಿಯು ಐದು ಜನ ಗಂಡಂದಿರ ಬಳಿ ಸಂಸಾರ ನಡೆಸಿರಲಿಲ್ಲವೇ?

ಹೌದು ಇದು ಕಲಿಯುಗ ಮೊದಲು ಇದು ನಡೆದಿದೆ ಆದರೆ ಈಗ ಇದು ಅಸಾಧ್ಯ ಎಂದು ನೀನು ಹೇಳಬಹುದು. ಆದರೆ ಮನುಷ್ಯ ಪ್ರಯತ್ನ ಪಟ್ಟರೆ ಪ್ರಕೃತಿ ಸಹಜವಾದ ನಿಸರ್ಗದ ನಿಯಮಕ್ಕೆ ವಿರುದ್ಧವಾಗಿ ನಾವು ನಡೆಯುವುದಿಲ್ಲ ಎಂಬ ಅಚಲ ನಂಬಿಕೆಯಿಂದ ಇದನ್ನು ನಿನ್ನಲ್ಲಿ ಹೇಳುತ್ತಿದ್ದೇನೆ …  ಪ್ರಕೃತಿಯಲ್ಲಿ ಈ ಭೂಮಿಗೆ ಯಾರು ಬೀಜ ಬಿತ್ತಿದರು ಎಂಬುದು ಮುಖ್ಯವಲ್ಲ, ಭೂಮಿಗೆ ಬಿದ್ದ ಬೀಜ ಮೊಳಕೆಯೊಡೆದು ಫಸಲು ಆಯಿತೆ ಎಂಬುದು ಮುಖ್ಯ. ಹೆಣ್ಣು ಎಂಬ ಭೂಮಿಯನ್ನು ಬಗಿದು ಸೀಳಿ ಅವಳನು ಅವಳ ಇಚ್ಚೆಗೆ ವಿರುದ್ಧವಾಗಿ ಭೋಗಿಸಿ ಹಿಂಸಿಸಿ ನರಳಿಸುವುದು ಕ್ರೂರ ಅನ್ಯಾಯ ಎಂದು ನಾನು ಅಂದುಕೊಳ್ಳುತ್ತೇನೆ. ಪ್ರಕೃತಿಯಲ್ಲಿ ಯಾವುದೇ ಜೀವ ಜಂತು ಪ್ರಾಣಿ ಪಕ್ಷಿ ತಮ್ಮ ಸಂತಾನೋತ್ಪತ್ತಿ ಕ್ರಿಯೆ ಮೂಲಕ ನಿಸರ್ಗದ ನಿಯಮಕ್ಕೆ ಅಪಚಾರ ಆಗದೆ ತಮ್ಮ ವಂಶವನ್ನು ಮುಂದುವರಿಸಿಕೊಂಡು ಹೋಗುತ್ತದೆ. ಇವಕ್ಕೆಲ್ಲ ಇಲ್ಲದ ಕಟ್ಟುಪಾಡುಗಳು ನೂರಾರು ನಿಯಮಗಳು ಮನುಷ್ಯನಿಗೆ ಮಾತ್ರ ಯಾಕೆ ಎಂದು ನನ್ನನ್ನು ಕಾಡುತ್ತಿರುವ ವಿಚಾರ. ನಾನು ಇಲ್ಲಿ ನಿಸರ್ಗ ವಿರುದ್ಧವಾದ ಯೋಚನೆ ಮಾಡಿಲ್ಲ ರವಿ. ನಿನ್ನಿಂದ ಮಗು ಪಡೆಯಬೇಕು ಎಂದು‌ ನಾನು ಬಯಸುತ್ತೇನೆ ಅದು ನನಗೆ ಮಗು ಆಗಲಾರದು ಎಂಬ ನೈಜ ಸತ್ಯ ಗೊತ್ತಿದ್ದು ನಮ್ಮ ವಂಶದ ಮುಂದುವರಿಕೆಗಾಗಿ ಒಂದು ಹೆಣ್ಣಿನ ಬರಿದಾದ ಮಡಿಲು ತುಂಬುವ ಪ್ರಕೃತಿ ಸಹಜ ಬಯಕೆಗಾಗಿ ನಿನ್ನಲ್ಲಿ ವಿನಂತಿಸುತ್ತೇನೆ ಇಲ್ಲ ಆಗಲಾರದು ಎಂದು ಮಾತ್ರ ಹೇಳಬೇಡ ರವಿ. ಇದರಿಂದ ನನ್ನ ಬಾಳೇ ಕತ್ತಲು ಆವರಿಸಿದಂತೆ ಆಗುತ್ತದೆ. ಅಲ್ಲದೆ ಈ ವಿಷಯ ನಮ್ಮ ಮೂವರಲ್ಲಿ ಮಾತ್ರ ಗೊತ್ತಿರಬೇಕು ವಿನಃ ಬೇರೆಯವರಿಗೆ ತಿಳಿಯಕೂಡದು !!!

ಇದರ ಅನಾನುಕೂಲ ಕೂಡ ನಾನು ಯೋಚನೆ ಮಾಡಿದ್ದೇನೆ. ಇದು ಬೇರೆಯವರಿಗೆ ಗೊತ್ತಾದರೆ ಅಥವಾ ನಮ್ಮಿಬ್ಬರ ಮದ್ಯೆ ಬಿರುಕು ಸೃಷ್ಟಿಸಿದರೆ ಅದು ನಮ್ಮ ಇಬ್ಬರ ಕುಟುಂಬದ ಸ್ವಾಸ್ಥ್ಯವನ್ನು ಹಾಳು ಮಾಡಬಹುದು ಅಥವಾ ಮುಂದಿನ ಜನಾಂಗಕ್ಕೆ ಕೂಡ ಕಪ್ಪು ಚುಕ್ಕಿ ಆಗಬಾರದು ಎಂದು ಕೂಡ ಅರಿವು ಇದ್ದು ಆ ತಪ್ಪು ಖಂಡಿತಾ ಆಗಲಾರದು ಎಂದು ಮುಂಚಿತವಾಗಿ ಇದನ್ನೆಲ್ಲ ಯೋಚನೆ ಮಾಡಿಯೇ ಹೇಳುತ್ತಿದ್ದೇನೆ ರವಿ ಇಲ್ಲ ಎಂದು ಮಾತ್ರ ಹೇಳಬೇಡ ನಮ್ಮ ಮನೆಯಲ್ಲಿ ಮಗುವಿನ ಕಿಲ ಕಿಲ ನಗು ಕೇಳಬೇಕು ಸುಶೀ ಯ ಬರಿದಾದ ಮಡಿಲು ತುಂಬಿ ನಮ್ಮ ಮನ ಮನೆ ಬೆಳಕಾಗ ಬೇಕು ಎಂದು ಅಂಗಲಾಚಿ ಬೇಡಿಕೊಳ್ಳುತ್ತೇನೆ…..

ಇಂತಿ ನಿನ್ನ ಗೆಳೆಯ ಅಶೋಕ್….

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *