ಇಲ್ಲಿಯವರೆಗೆ…..
ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರ ಮೂಲಕ ಅಶೋಕ್ ನಿಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯ ತಿಳಿಯುತ್ತದೆ. ಇದರಿಂದ ಮೂವರೂ ತುಂಬಾ ನೋವು ಅನುಭವಿಸುತ್ತಾರೆ. ಅಶೋಕ್ ನಿಗೆ ಈ ಬಗ್ಗೆ ಒಂದು ಯೋಚನೆ ಬರುತ್ತದೆ. ಅದನ್ನು ರವಿಯ ಬಳಿ ಹೇಳಲು ಅವನಿಗೆ ತುಂಬಾ ಹಿಂಜರಿಕೆ ಆಗುತ್ತದೆ…..
ಅವಿನಾಭಾವ ಭಾಗ 24
“ ಕೊಟ್ಟದ್ದನ್ನು ನೆನೆಯದೆ ಮತ್ತು ಪಡೆದದ್ದನ್ನು ಮರೆಯದೆ ಇರುವವರೇ ಜಗತ್ತಿನಲ್ಲಿ ಧನ್ಯರು.”
ಪತ್ರ ಬರೆಯುವ ಮುಂಚೆ ಇದ್ದ ಸಾವಿರ ವಿಚಾರಗಳು ಈಗ ಹೋಗಿ ಇದನ್ನು ಕೊಟ್ಟ ಮೇಲೆ ರವಿಯ ಪ್ರತಿಕ್ರಿಯೆ ಹೇಗಿರಬಹುದು ಅವನು ಆಗುವುದಿಲ್ಲ ಎಂದು ಹೇಳಿದರೆ ಏನು ಮಾಡುವುದು ಅಥವಾ ಇಂತಹ ಕೆಟ್ಟ ಚಿಂತನೆ ನಿನಗೆ ಹೇಗೆ ಮೂಡಿತು ಎಂದು ಕೋಪ ಬೇಸರದಿಂದ ಮಾತು ಬಿಟ್ಟರೆ ಉಳಿದ ದಾರಿ ಏನು ಎಂದು ಎಷ್ಟು ಚಿಂತಿಸಿದರು ಅಶೋಕ್ ನಿಗೆ ಪರಿಹಾರ ದೊರೆಯಲಿಲ್ಲ.
ಜೀವನದಲ್ಲಿ ತುಂಬಾ ಸಲ ತೊಂದರೆ ಅಥವಾ ಅವಘಡ, ಕಷ್ಟ ಎದುರಾಗುವ ಮುಂಚೆ ಅದು ಹೇಗೆ ಆಗುತ್ತದೆ ಅದರಿಂದ ಏನಾಗಬಹುದು ಎಂದು ಯೋಚಿಸಿ ಯೋಚಿಸಿ ಅದೇ ದೊಡ್ಡ ಚಿಂತೆ ಅನಿಸುತ್ತದೆ. ನಿಜವಾಗಿಯೂ ಅಂತಹಾ ಸಮಸ್ಯೆ ಎದುರಾದಾಗ ಎನಿಸಿದ್ದಕ್ಕಿಂತ ತುಂಬಾ ಸುಲಭವಾಗಿ ಪರಿಹಾರ ಕಾಣುವುದು ಇದೆ.
ಅಶೋಕ್ ನಿಗೆ ಪತ್ನಿ ಸುಶೀ ಇಲ್ಲದೆ ಮನೆ ಎಲ್ಲ ಬೋರು ಬೋರು ಅನಿಸಲು ಶುರು ಆಯಿತು.
ಪತ್ರ ಬರೆದು ಒಂದು ಪುಸ್ತಕದ ಒಳಗೆ ಇಟ್ಟು ಅಂದಿನ ತನ್ನ ಕೆಲಸ ಮುಗಿಸಿದ.ರವಿ ಕೇಳದಿದ್ದರೆ ತಾನು ಬರೆದ ಈ ಪತ್ರವನ್ನು ನೀಡುವುದ ಬೇಡ್ವಾ ಎಂದು ತುಂಬಾ ಯೋಚಿಸಿ ನನ್ನ ಮನದ ಆಸೆ ನೇರವೇರ ಬೇಕಾದರೆ ರವಿ ಕೇಳಲಿ ಬಿಡಲಿ ನಾನು ಕೊಡಬೇಕು ಆದರೆ ಇವತ್ತು ಅವನು ಕೇಳದಿದ್ದರೆ ಕೊಡುವುದು ಬೇಡ ನಾಳೆ ಕೊಡೋಣ ಎಂದುಕೊಂಡ.
ರವಿಗೆ ಅಶೋಕ್ ತನ್ನಿಂದ ಸಹಾಯ ಬೇಕು ಎಂದು ಕೇಳಿರುವುದು ಏನಾಗಿರಬಹುದು ಎಂದು ಎಷ್ಟು ಯೋಚಿಸಿದರೂ ಹೊಳೆಯಲಿಲ್ಲ… ದುುಡ್ಡು ಆಗಿರಬಹುದಾ? ದುಡ್ಡು ಆಗಿದ್ದರೆ ಕೇಳಲು ಅಷ್ಟೋಂದು ಮುಜುಗರ ಯಾಕೆ ನಾವಿಬ್ಬರೂ ಬಾಲ್ಯದಿಂದಲೇ ಸ್ನೇಹಿತರು ನಮ್ಮಲ್ಲಿ ಇಷ್ಟರತನಕ ದೊಡ್ಡ ಮಟ್ಟದ ಕೋಪ ಜಗಳ ಆಗಿಯೇ ಇಲ್ಲ. ಅಲ್ಲದೆ ಯಾವುದೇ ರೀತಿಯ ಒಣ ಜಂಭ, ಮುಜುಗರ, ಮತ್ಸರ ಖಂಡಿತಾ ಬಂದಿಲ್ಲ. ಅವನಿಗೆ ಮದುವೆ ಆಗುವ ಮುಂಚೆ ಹೇಗಿದ್ದಾನೋ ಮದುವೆ ನಂತರ ಕೂಡ ಅದೇ ರೀತಿಯ ಮಾತುಕತೆ ಭಾವನಾತ್ಮಕ ಸಂಬಂಧ ನಮ್ಮಿಬ್ಬರ ಮದ್ಯೆ ಇದೆ. ಹಾಗಿರುವಾಗ ಇವತ್ತು ಯಾಕೆ ಇಷ್ಟೊಂದು ಹಿಂಜರಿಕೆ. ಮೊನ್ನೆ ವೈದ್ಯರು ಮಕ್ಕಳು ಆಗುವುದಿಲ್ಲ ಎಂದು ಹೇಳಿದ ಮೇಲೆ ಮಾನಸಿಕವಾಗಿ ತುಂಬಾನೇ ನೊಂದುಕೊಂಡಿರುವುದು ನನಗೆ ಗೊತ್ತು… ಆದರೆ ಈ ಸಮಸ್ಯೆಗೆ ನನ್ನಿಂದ ಏನೂ ಸಹಾಯ ಮಾಡಲು ತೋಚುತ್ತಿಲ್ಲ. ನನ್ನ ಜೀವನ ಹೀಗಾಯಿತು ಆದರೆ ಅಶೋಕ್ ಆದರೂ ಕುಶಿ ನೆಮ್ಮದಿಯಿಂದ ಇದ್ದರೆ ಸಾಕು ಎಂದು ನಾನು ತುಂಬಾ ಬಾರಿ ಅಂದುಕೊಂಡಿದ್ದೆ. ಆದರೆ ನಾವೊಂದು ಅಂದುಕೊಂಡರೆ ವಿಧಿ ಲಿಖಿತ ಬೇರೆಯೇ ಆಗಿರುತ್ತದೆ ಯಾರು ಏನು ಮಾಡಲು ಸಾಧ್ಯ? ಬಹುಶಃ ನಾವು ಅಂದುಕೊಂಡಂತೆ ನಡೆದರೆ ಮತ್ತೆ ಮನುಷ್ಯನನ್ನು ಕೇಳುವವರೇ ಇರಲಾರರು. ಅದಕ್ಕೆ ಎಲ್ಲವೂ ನಾವು ಯೋಚನೆ ಮಾಡಿದಂತೆ ನಾವು ಇಷ್ಟಪಟ್ಟ ಎಲ್ಲವೂ ನಡೆಯಲಾರದು. ಕೆಲ ಮನುಷ್ಯರು ದೇವರ ಇಚ್ಛೆ ಎಂದುಕೊಂಡರೆ ಮತ್ತೆ ಕೆಲವರು ವಿಧಿ ಲಿಖಿತ ಎನ್ನುವರು. ಕೆಲವರು ಹಣೆಬರಹ ಎಂದರೆ ಇನ್ನೂ ಕೆಲವರು ನಿಸರ್ಗ ನಿಯಮ ಎನ್ನುವರು. ಎಲ್ಲರೂ ಅವರವರ ಭಾವಕ್ಕೆ ಅವರವರ ಮನಸ್ಸಿಗೆ ತೋಚಿದ್ದನ್ನು ನಂಬುತ್ತಾರೆ. ನಾನು ಈ ರೀತಿ ಬಾಳಲ್ಲಿ ಒಂಟಿಯಾಗಿ ಬದುಕುತ್ತೇನೆ ಎಂದು ಕೊಂಡಿದ್ದೇನ? ………..ಈ ಅಶೋಕ್ ಯಾವ ಸಹಾಯ ಕೇಳಿರಬಹುದು ಏನಾಗಿರಬಹುದು ಎಂದು ರವಿ ತಲೆಕೆಡಿಸಿಕೊಂಡು ನಿದ್ದೆಗೆ ಜಾರಿದ……
ಸುಶೀಲಾ ತಾಯಿ ಮನೆಗೆ ಬಂದಾಗ ಮೊದಲಿನ ಲವಲವಿಕೆ ಇಲ್ಲದೆ ಇರುವುದು ತಂದೆಗೆ ತಿಳಿಯಿತು.ತಾಯಿ ಆತುರ ಕಾತರದಿಂದ ಅಡುಗೆ ಮನೆಗೆ ಕರೆದು ಏನಾದರೂ ಒಳ್ಳೆಯ ಸುದ್ದಿ ಇದೆಯಾ ಎಂದು ಮಗಳಲ್ಲಿ ಕೇಳಿದರು. ಒಂದು ಕ್ಷಣ ತನ್ನ ಗಂಡನ ಬಗ್ಗೆ ವೈದ್ಯರು ಹೇಳಿರುವುದು ಹೇಳಲೇ ಎಂದು ಮನಸ್ಸಿನಲ್ಲೇ ಅಂದುಕೊಂಡಳು. ಮರುಕ್ಷಣ ಅಶೋಕ್ ಎನನ್ನೂ ತಾಯಿ ಮನೆಯಲ್ಲಿ ಹೇಳಬೇಡ ಎಂದು ಹೇಳಿರುವುದು ನೆನಪಾಗಿ ಮಾತನ್ನು ಹೊಟ್ಟೆಯಲ್ಲಿಯೇ ಇಟ್ಟು ಕೊಂಡಳು..
ಮಗಳು ಒಬ್ಬಳೇ ಇರುವ ಸಮಯ ನೋಡಿಕೊಂಡು ಸುಶೀಲಳ ಅಪ್ಪ ಮಗಳೇ ಎಂದು ತನ್ನ ಮುದ್ದಿನ ಮಗಳ ಬಾಡಿದ ಮುಖ ಕಂಡು ತಲೆ ನೇವರಿಸಿದರು …. ಸುಶೀಲಾ ಬಾವುಕಳಾಗಿ ಅಪ್ಪನನ್ನು ಅಪ್ಪಿಕೊಂಡು ಅತ್ತೇ ಬಿಟ್ಟಳು………….
( ಮುಂದುವರಿಯುವುದು)