January 18, 2025
Avinabhava Feauture Image

ಇಲ್ಲಿಯವರೆಗೆ…..

ನವಚೇತನ ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ಅವರ ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಸುಶೀಲ ಅವರ ಸಂಬಂಧಿ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಸುಶೀಲ ತನ್ನ ಜೀವನದ ಬಗ್ಗೆ ಬರೆದ ಡೈರಿ ಆಕಾಶ್ ಗೆ ನೀಡುತ್ತಾಳೆ. ಆಕಾಶ್ ಅಪ್ಪ ಅಮ್ಮನಿಗೆ ತಿಳಿಯದಂತೆ ಓದುತ್ತಾನೆ. ಸುಶೀಲ ಮೂಲತಃ ಪುತ್ತೂರಿನವರು ಇವರನ್ನು ಮಂಗಳೂರಿನ ಅಶೋಕ್ ಮದುವೆ ಆಗುತ್ತಾರೆ. ಅಶೋಕ್ ದಂಪತಿಗಳಿಗೆ ಮಕ್ಕಳು ಆಗದೆ ಇರುವುದರಿಂದ ಅಶೋಕ್ ತನ್ನ ಗೆಳೆಯ ರವಿಯ ಜೊತೆ ವೈದ್ಯರಲ್ಲಿ ಪರೀಕ್ಷೆಗಾಗಿ ಹೋಗುತ್ತಾನೆ. ವೈದ್ಯರ ಮೂಲಕ ಅಶೋಕ್ ನಿಗೆ ಮಕ್ಕಳು ಆಗುವುದಿಲ್ಲ ಎಂಬ ಸತ್ಯ ತಿಳಿಯುತ್ತದೆ. ಅಶೋಕ್ ನಿಗೆ ಈ ಬಗ್ಗೆ ಒಂದು ಯೋಚನೆ ಬರುತ್ತದೆ. ಅದನ್ನು ರವಿಯ ಬಳಿ ಹೇಳಲು ದೈರ್ಯ ಸಾಲದೆ ಪತ್ರ ಬರೆಯುತ್ತಾನೆ…..

ಅವಿನಾಭಾವ ಭಾಗ 25

ರವಿಗೆ ಬೆಳಿಗ್ಗೆ ಎದ್ದಾಗ ಮೈಯೆಲ್ಲಾ ಭಾರ ಆಗುವ ಹಾಗೆ ಆಗುತಿತ್ತು ಮೈ ಮುಟ್ಟಿ ನೋಡಿದಾಗ ತುಂಬಾ ಮೈ ಸುಡುತ್ತಿತ್ತು ಜ್ವರ ಬರುತ್ತಿತ್ತು. ಅಮ್ಮನಲ್ಲಿ ಹೇಳಿದಾಗ ಇವತ್ತು ಕೆಲಸಕ್ಕೆ ಹೋಗಬೇಡ ರವಿ ಮೈ ಪುಡಿ ಆದರೆ ಜ್ವರ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದು ಕೇಳಿ ಕೆಲಸಕ್ಕೆ ಹೋಗಲಿಲ್ಲ ರವಿ. ಅಶೋಕ್  ರವಿಗಾಗಿ ಕಾದು ಕಾದು ಇವತ್ತು ಯಾಕೆ ಬರಲಿಲ್ಲ ಎಂದೆನಿಸಿ ತನ್ನ ಕೆಲಸದಲ್ಲಿ ಮಗ್ನನಾದ.
ಸುಶೀಲಾ ತಾಯಿ ಮನೆಗೆ ಹೋದವಳು ಬೆಳಿಗ್ಗೆ ಮನೆಯಿಂದ ಹೊರಟು ಮದ್ಯಾಹ್ನ ಮನೆಗೆ ಬಂದಳು. ಹೋಗುವಾಗ ಇದ್ದ ಬೇಸರ ಕಡಿಮೆ ಆಗಿ ಲವಲವಿಕೆಯಿಂದ ಬಂದಳು. ಅವಳನು ಕಂಡು ಅಶೋಕ್ ಕೂಡ ಗೆಲುವಾದ.  ಬಂದವಳೇ ಚಕಚಕನೆ ತನ್ನ ಕೆಲಸ ಮುಗಿಸಿ ಸಂಜೆ 5 ಗಂಟೆಗೆ ಎನಾದರೂ ಓದೋಣ ಎಂದು ಅಲ್ಲೇ ಇದ್ದ ಒಂದು ಕಾದಂಬರಿ ಕೈಗೆತ್ತಿಕೊಂಡು ಓದಲು ಶುರು ಮಾಡಿದಳು. ಸ್ವಲ್ಪ ಓದುತ್ತಿದ್ದಂತೆ ಹೊರಗೆ ಯಾರೋ ಕರೆದಿದ್ದು ಕೇಳಿ ಪುಸ್ತಕ ಅಲ್ಲೇ ಇಟ್ಟು ಹೊರಗೆ ಬಂದಳು. ಪುನಃ ಒಳಗೆ ಬಂದು ಪುಸ್ತಕ ಕೈಗೆತ್ತಿಕೊಂಡಾಗ ಅದರ ಒಳಗಿನಿಂದ ಮಡಚಿದ ದೊಡ್ಡ ಕಾಗದವೋಂದು ಜಾರಿ ಕೆಳಗೆ ಬಿತ್ತು. ಇದೇನು ಇದು ಯಾರು ಇಟ್ಟಿರುವುದು ಎಂದು ಕೆಳಕ್ಕೆ ಬಗ್ಗಿ ತೆಗೆದು ಬಿಡಿಸಿ ಓದಲು ಶುರು ಮಾಡಿದಳು!!
ಓದುತ್ತಿದ್ದಂತೆ ಎಲ್ಲವೂ ಕ್ಷಣ ಮಾತ್ರದಲ್ಲಿ ತಿಳಿಯಿತು ಸುಶೀಲಳಿಗೆ. ಆದರೆ ಈ ಕಾಗದ ಇಲ್ಲಿ ಇಟ್ಟಿರುವುದು ನಾನು ಓದಲೆಂದೆ? ಅಥವಾ ಅಚಾನಕವಾಗಿ ನನಗೆ ಸಿಕ್ಕಿರುವುದ ಎಂಬುದು ಅರ್ಥವಾಗಲಿಲ್ಲ ಸುಶೀ ಗೆ. ಅಶೋಕ್ ನ ಮನಸ್ಸಿನಾಳದಲ್ಲಿ ಹುದುಗಿರುವ ಸತ್ಯವನ್ನು ತಿಳಿದು ಸುಶೀಲ ಕಂಗಲಾದಳು….


“ಹೆಣ್ಣನ್ನು ಗಂಡು ಕುಣಿಸಿದಂತೆ ಕುಣಿಯುವ ಗೊಂಬೆ ಎಂದು ಕೊಂಡಿದ್ದಾರ ? ಒಂದು ಹೆಣ್ಣು ಇಷ್ಟ ಪಟ್ಟು ನಿಸರ್ಗ ನಿಯಮದಂತೆ ಗಂಡಿನ ಜೊತೆ ಸೇರಿದರೆ ಕಳಂಕಿತಳು ಎಂಬ ಪಟ್ಟ ಕಟ್ಟುವವನು ಗಂಡೇ, ತನ್ನ ವಂಶ ಬೆಳೆಸಲು ಪರ ಪುರುಷನೊಂದಿಗೆ ಸೇರುವುದು ತಪ್ಪು ಅಲ್ಲ ಎಂದು ಹೇಳುವುದು ಗಂಡೇ. ಈ ಗಂಡು ಜನಾಂಗ ತಮಗೆ ಹೇಗೆ ಬೇಕೋ ಹಾಗೆ ಇತಿಹಾಸವನ್ನು ಬರೆಯಬಲ್ಲರು. ಹೇಗೆ ಬೇಕೋ ಹಾಗೆ ಇತಿಹಾಸ ನಿರ್ಮಿಸಿ ಬಿಡಬಲ್ಲರು!!! ಪುರಾಣದಲ್ಲಿ ಪಾಂಡುವಿನ ಹೆಂಡತಿಯವರಾದ ಕುಂತಿ, ಮಾದ್ರಿ ಕೂಡವಳಿ ಮೂಲಕ ಮಕ್ಕಳನ್ನು ಪಡೆದಿಲ್ಲವೆ ಎನ್ನುವರು! ದ್ರೌಪದಿಯು ಐದು ಜನ ಗಂಡಂದಿರ ಜೊತೆ ಸಂಸಾರ ನಡೆಸಿರಲಿಲ್ಲವೇ ಎನ್ನುತ್ತಾರೆ? ಹಾಗಿದ್ದರೆ ಜಮದಗ್ನಿಯ ಹೆಂಡತಿ ರೇಣುಕಾ ಪರ ಪುರುಷನನ್ನು ಮನಸ್ಸಿನಲ್ಲಿ ಆಸೆ ಪಟ್ಟಳು ಎಂಬ ಒಂದೇ ಕಾರಣಕ್ಕೆ ರೇಣುಕಾನ ಹೊಟ್ಟೆಯಲ್ಲಿ ಹುಟ್ಟಿದ ಪರಶುರಾಮನೇ ತನ್ನ ತಾಯಿಯ ತಲೆ ಕಡಿದು ಹಾಕಿದ್ದು ಯಾಕೆ? ತನ್ನ ತಾಯಿಯ ತಲೆ ಕಡಿದುದ್ದಕ್ಕೆ ಅವನನ್ನು ಯಾರು ವಿರೋಧಿಸಿಲ್ಲ ಯಾಕೆ? ತನ್ನ ತಪ್ಪೆ ಇಲ್ಲದೆ ಇಂದ್ರನ ಮೋಸಕ್ಕೆ ಅಹಲ್ಯೆ ಬಲಿಪಶು ಆದರೂ ಗೌತಮನ ಶಾಪಕ್ಕೆ ಬಲಿಯಾಗಲಿಲ್ಲವೇ? ಇಷ್ಟೆಲ್ಲಾ ಯಾಕೆ ಸೀತೆಯ ಯಾವ ತಪ್ಪು ಇಲ್ಲದೆ ಎಲ್ಲರೂ ಇದ್ದು ತನ್ನ ಬಯಕೆಯನ್ನು ಪೂರೈಸಿಕೊಳ್ಳಬೇಕಾದ ಗರ್ಭವತಿ ಅದಂತಹ ಸಮಯದಲ್ಲಿ ಅನಾಥವಾಗಿ ಬದುಕಲಿಲ್ಲವೆ? ಹೆಣ್ಣನ್ನು ಮಾತೆ, ದೇವಿ,ಭೂಮಾತೆ, ಕ್ಷಮಯಾಧರಿತ್ರಿ ಹೀಗೆ ಹಲವಾರು ಪ್ರಕಾರಗಳಲ್ಲಿ ಕೊಂಡಾಡುವವರು ಇವರೇ! ಚೆಂಡಾಡುವವರು ಇವರೇ!!!! ”  ಅಶೋಕ್ ರವಿಗೆ ಬರೆದ ಪತ್ರ ನೋಡಿ ಇಷ್ಟೊಂದು ಯೋಚನೆಗಳು ಸುಶೀ ಯ ಮನಸ್ಸಿನಾಳದಲ್ಲಿ ಹಾದು ಹೋಯಿತು.

ರವಿ ಗೆ ಕೇಳುವ ಮುಂಚೆ ನನ್ನಲ್ಲಿ ಒಂದು ಮಾತು ಕೇಳಬೇಕು ಎಂಬ ಪರಿಜ್ಞಾನ ಈ ಗಂಡಸಿಗೆ ಯಾಕೆ ಬರಲಿಲ್ಲ? ಅಸಡ್ಡೆಯೆ? ಉಡಾಫೆಯೇ? ಎಷ್ಟಾದರೂ ಹೆಣ್ಣು ಎಂಬ ತಾತ್ಸಾರವೇ? ಅಲ್ಲ ಇವಳಲ್ಲಿ ಕೇಳದಿದ್ದರೂ ಏನು ಮಹಾ ಎಂಬ ಪುರುಷಾಧಿಕಾರವೇ? ಪತ್ರ ಓದಿ ಹಾಗೆಯೇ ಮಡಚಿ ಏನು ಅರಿಯದವಳಂತೆ ಕಾದಂಬರಿ ಒಳಗೆ ಇಟ್ಟು ತನ್ನ ಪಾಡಿಗೆ ತಾನು ಕೆಲಸದಲ್ಲಿ ಮಗ್ನಳಾದಳು ಸುಶೀ.
“ದ್ವೇಷಿಸಬೇಕಾಗಿರುವುದು ಒಬ್ಬ ವ್ಯಕ್ತಿಯ ಕೆಟ್ಟ ಗುಣವನ್ನು ಮಾತ್ರ ವ್ಯಕ್ತಿಯನ್ನಲ್ಲ” ಹೀಗೆಂದು ಹೇಳಿದವರು ಶೇಕ್ಸ್ ಪಿಯರ್.

( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ.

Leave a Reply

Your email address will not be published. Required fields are marked *