January 18, 2025
WhatsApp Image 2022-12-17 at 13.42.01

ಇಲ್ಲಿಯವರೆಗೆ…..

ಆಸ್ಪತ್ರೆಗೆ ಮಧ್ಯವಯಸ್ಕ ಮಹಿಳೆ ಒಬ್ಬರನ್ನು ದಾಖಲಿಸಲಾಗಿತ್ತು. ಅವರನ್ನು ಪರೀಕ್ಷೆ ಮಾಡಿದ ಡಾಕ್ಟರ್ ಆಕಾಶ್ ತನ್ನ ಬಾಲ್ಯದಲ್ಲಿ ಅವರನ್ನು ನೋಡಿದ ನೆನಪು ಮಾಡಿಕೊಳ್ಳುತ್ತಾನೆ. ರೋಗಿ ಮಾತನಾಡುತ್ತಿದ್ದಾರೆ‌ ಎಂದು ಡಾಕ್ಟರ್ ರೇಖ ಹೇಳುತ್ತಾರೆ. ಹೆಸರು ಸುಶೀಲ ಎಂದು ಆಕಾಶ್ ನಿಗೆ ತಿಳಿಯುತ್ತದೆ. ಆಕಾಶ್ ತಾನು ವಕೀಲರಾದ ನಿತಿನ್ ಚಂದ್ರ ಮತ್ತು ಸುಜಯ ದಂಪತಿಗಳ ಮಗ ಎಂದಾಗ ಸುಶೀಲ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಸುಶೀಲ ಅವರ ಆರೋಗ್ಯ ಸರಿ ಆಗಿ ಆಸ್ಪತ್ರೆಯಿಂದ ಆಕಾಶ್ ತನ್ನ ಕಾರಲ್ಲಿ ಅವರ ಮನೆಗೆ ಕಳಿಸುತ್ತಾನೆ. ಆಕಾಶ್ ಇರುವ ಆಸ್ಪತ್ರೆ ನವಚೇತನ. ಗೋಪಾಲ ರಾಯರು ಕಟ್ಟಿಸಿದ್ದು. ಇವರ ಒಬ್ಬಳೇ ಮಗಳು ಗೌತಮಿ ಡಾಕ್ಟರ್ ಅಜಿತ್ ನ ಪ್ರೀತಿಸಿ ಮದುವೆಯಾದ ಎರಡು ವರ್ಷ ಆಗುವ ಮುಂಚೆ ಸಾಯುತ್ತಾಳೆ. ಆಕಾಶ್ ಸುಶೀಲ ಅವರ ಮನೆಯಲ್ಲಿ ಇರುವ ರಿತಿಕಾಳಿಗೆ ನವಚೇತನ ಆಸ್ಪತ್ರೆಯಲ್ಲಿ ಕೆಲಸ ತೆಗೆಸಿ ಕೊಡುತ್ತಾನೆ. ಆಕಾಶ್ ಸುಶೀಲ ಅವರ ಮನೆಗೆ ಬಂದಿದ್ದಾನೆ…

 

 

ಅವಿನಾಭಾವ ಭಾಗ 10

ಸುಶೀಲ ತಮ್ಮ ಮಾತನ್ನು ಮುಗಿಸಿ ಡಾಕ್ಟರೇ ಸ್ನಾನ ಮಾಡಿ ಬನ್ನಿ ನೀರು ಕಾದಿದೆ ಎಂದು ಟವೆಲ್ ಮತ್ತು ಉಡಲು ಪಂಚೆ ನೀಡಿದರು. ಮನೆಯಲ್ಲಿ ಎಲ್ಲದಕ್ಕೂ ಮೊಂಡುತನ ಮಾಡುವ ಆಕಾಶ್ ಹಸುವಿನ ಹಿಂದೆ ಕರು ಸರಾಗವಾಗಿ ನಡೆಯುವಂತೆ ಸುಶೀಲ ಅವರ ಹಿಂದೆ ಹೋದ… ಸ್ನಾನದ ಮನೆ ಸಣ್ಣದಾಗಿ ಚೊಕ್ಕವಾಗಿತು. ಹುಟ್ಟಿದ ಮೇಲೆ ಮೊದಲ ಬಾರಿಗೆ ಆಕಾಶ್ ಈ ರೀತಿಯ ಬಚ್ಚಲು ಮನೆ ನೋಡಿದ್ದು ಎಂದರೆ ಅತಿಶಯೋಕ್ತಿಯಲ್ಲ.ಹೆಂಚಿನ ಸಾಧಾರಣ ಮನೆ ಅದಾಗಿತ್ತು.ಆಕಾಶ್ ನ ಮನೆಯಲ್ಲಿ ಎಲ್ಲವೂ ಇದ್ದು ಯಾವುದೂ ಇಲ್ಲ ಎನ್ನುವುದೇ ಹೇಳಲು ಕಷ್ಟ. ಪ್ರತಿಯೊಬ್ಬರಿಗೂ ಬೇರೆ ಬೇರೆ ಸೋಫ್ ಶ್ಯಾಂಪು.ಈಗ ಹೆಚ್ಚು ಸ್ನಾನ ದ ಮನೆ ಕೂಡ ಟೈಲ್ಸ್, ಗ್ರಾನೈಟ್, ಮೋಝಾಯಿಕ್ , ಮೇಲೆ ಟೆರೆಸ್. ಶವರ್ ವಿವಿಧ ನೀರಿನ ಟ್ಯಾಪ್ ಗಳು ಬೇರೆ ಬೇರೆ ರೀತಿಯ ಶ್ಯಾಂಪೂ, ಕಂಡೀಷನರ್, ಮೈಗೆ ಹಚ್ಚಿಕೊಂಡು ಸ್ನಾನ ಮಾಡಲು ಒಂದು ರೀತಿಯ ಮಾಯಿಶ್ಚರೈಸ್ ಸ್ನಾನ ಮಾಡಿದ ಮೇಲೆ ಹಚ್ಚಲು‌ ಒಂದು ರೀತಿಯ ಮಾಯಿಶ್ಚರೈಸ್ ಹೀಗೆ ವಿವಿಧ ಬಾಟಲ್ ಗಳನು ದೊಡ್ಡವರು ಎನಿಸಿಕೊಂಡಿರುವ ಹೆಚ್ಚಿನ ಮಾದ್ಯಮ ವರ್ಗದ ಮನೆಗಳಲ್ಲೂ ಇದನ್ನು ಪೇರಿಸಿ ಇಟ್ಟಿರುತ್ತಾರೆ.ನಾನು ಗಮನಿಸಿದಂತೆ ಇತ್ತೀಚೆಗೆ ಜನರಿಗೆ ಸೌಂದರ್ಯದ ಕಾಳಜಿ ಹೆಚ್ಚು ಆಗಿದೆ. ದೇಹದ ಹೊರಗೆ ಇರುವ ಚರ್ಮದ ಬಗ್ಗೆ ಮುತುವರ್ಜಿ ವಹಿಸುವಷ್ಟು ದೇಹದ ಒಳಗೆ ಇರುವ ಮನಸ್ಸು ಚೆನ್ನಾಗಿ ಇರಬೇಕು ಅದರಲ್ಲಿ ಪ್ರೀತಿ, ತಾಳ್ಮೆ, ಕರುಣೆ, ಸಮಾನತೆ, ಶಾಂತಿ ಇರಬೇಕು ಎಂದು ಹಂಬಲಿಸುವ ಮಂದಿ ಬೆರಳೆಣಿಕೆಯಷ್ಟು ಮಾತ್ರ ಇರುವುದು ಕಾಣುತ್ತದೆ. ಡಾಕ್ಟರೇ ಇದರಲ್ಲಿ ಬಿಸಿ ನೀರು ಇದೆ ಅದರಲ್ಲಿ ತಣ್ಣಗಿರುವ ನೀರು ಇದೆ ಸ್ನಾನ ಮಾಡಿ ಬನ್ನಿ ಎಂದು ಸುಶೀಲ ಬಾಗಿಲು ಎಳೆದುಕೊಂಡು ಹೊರ ಹೋದರು. ಆಕಾಶ್ ತನ್ನ ಆಲೋಚನೆಯಲ್ಲಿ ಪುನಃ ಮಗ್ನನಾದನು. ನಾನು ಇಲ್ಲಿ ಬಂದು ಈ ಮನೆಯಲ್ಲಿ ತಿಂಡಿ ತಿನ್ನುವುದು ಸ್ನಾನ ಮಾಡುವುದು ಇಷ್ಟು ಮಮಕಾರದಿಂದ ನನ್ನ ಅಪ್ಪ ಅಮ್ಮ ನೋಡಿದರೆ ಏನಾಗಬಹುದು ಎಂಬ ಭೀತಿ ಒಂದು ಕ್ಷಣ ಬಂದು ಹೋಯಿತು. ಮೊದಲೇ ಸುಶೀಲ ಆಂಟಿಯನ್ನು ಕಂಡರೆ ಆಗುವುದಿಲ್ಲ.‌ ಅಪ್ಪ ಅಮ್ಮ ಅವರಿಬ್ಬರೂ ಮನಸ್ಸಿನ ಸಂತೋಷವನ್ನು ಬಯಸುವ ಜನ ಅಲ್ಲ. ತೋರಿಕೆಯ ಆಡಂಬರ, ದೌಲತ್ತು, ಗತ್ತು, ಶ್ರೀಮಂತಿಕೆಯನ್ನು ಪ್ರಕಟಿಸುತ್ತಾರೆ. ಹಾಗೂ ಅಂತಹ ಜೀವನ ಬಯಸುತ್ತಾರೆ….
ಎಂತಹ ವಿಪರ್ಯಾಸ!! ಮನುಷ್ಯ ಎಲ್ಲರೂ ಒಂದು ದಿನ ಇಲ್ಲಿ ಎಲ್ಲವನ್ನೂ ಬಿಟ್ಟು ಹೋಗಬೇಕು ಅದು ಗೊತ್ತಿದ್ದರೂ ಎಷ್ಟೊಂದು ಆಸೆ ತನ್ನ ಮನೆ ತನ್ನ ಭೂಮಿ ತನ್ನ ಒಡವೆ ವಸ್ತ್ರ ಎಂದು ಅಂದುಕೊಳ್ಳುತ್ತಾರೆ…. ಇವತ್ತು ಯಾಕೆ ನಾನು ಇಷ್ಟೊಂದು ಆಳವಾದ ಯೋಚನೆ ಮಾಡುತ್ತಿದ್ದೇನೆ ಎಂದು ನಗು ಬಂತು ಆಕಾಶ್ ನಿಗೆ…ಮನಸ್ಸಿನಲ್ಲೇ ಎನೋ ಹಾಡು ಗೊಣಗುತ್ತಾ ಸ್ನಾನ ಮಾಡಿ ಸುಶೀಲ ಆಂಟಿ ಕೊಟ್ಟ ಪಂಚೆ ಉಟ್ಟು ಹೊರಗೆ ಬಂದ ಅವನಿಗೆ ಪಂಚೆ ಉಡಲು ಸರಿ ಬರುವುದಿಲ್ಲ ಅದರೂ ಹೇಗೋ ಸುತ್ತಿ ಕೊಂಡು ಬಂದ. ಇವರ ಮನೆಯ ಸ್ನಾನ ಒಂದು ರೀತಿಯ ನೆಮ್ಮದಿ ಮುದ ನೀಡಿತು. ಮನೆಯಲ್ಲಿ ಆದರೆ ಪ್ರತಿಯೊಂದು ಹೆಜ್ಜೆಗೂ ಎನು ಎಲ್ಲಿ ಎಂದು ಕೇಳುವ ಕೆಲಸದವರು ಇಲ್ಲದೆ ಇರುವುದರಿಂದಲೊ ಏನೋ ಮನಸ್ಸು ಪ್ರಫುಲ್ಲ ಆಯಿತು. ಹುಟ್ಟಿದ ಮೇಲೆ ಎಲ್ಲಿ ಹೋದರೂ ಬಂದರೂ ತಿಂದರೂ ಕೆಲಸದವರ ಗೂಢಚರ್ಯೆಯಿಂದ ಬೇಸತ್ತು ಹೋಗಿತ್ತು ಆಕಾಶ್ ನಿಗೆ. ಇಲ್ಲಿ ಹಾಗಲ್ಲ ನನ್ನನ್ನು ಹದ್ದು ಕಣ್ಣಿಂದ ನೋಡುವ ನೋಡಿ ವರದಿ ಒಪ್ಪಿಸುವ ಕೆಲಸದವರು ಯಾರು ಇಲ್ಲ ಎಂಬುದೇ ಆಕಾಶ್ ನಿಗೆ ಮನೆ ಮನ ಪ್ರಶಾಂತವಾಗಿತ್ತು. ಒಳಗೆ ಬಂದಾಗ ಊಟಕ್ಕೆ ರೆಡಿ ಆಗಿತ್ತು. ಮನೆಯಲ್ಲಿ ಹಸಿವು ಇಲ್ಲ ಎನ್ನುವ ಆಕಾಶ್ ಇಲ್ಲಿ ಹೊಟ್ಟೆ ತುಂಬಾ ಊಟ ಮಾಡಿದ.
ಊಟ ಮಾಡಿದ ಮೇಲೆ ಮನೆಗೆ ಹೋಗಲು ಮನಸ್ಸೇ ಆಗಲಿಲ್ಲ ಆಕಾಶ್ ನಿಗೆ. ಹೇಗೆ ಹೇಳುವುದು? ಏನೆಂದು ಹೇಳುವುದು ಎಂದು ತುಂಬಾ ತಲೆ ಕೆಡಿಸಿಕೊಂಡ ಆಕಾಶ್. ಇವತ್ತು ರಾತ್ರಿ ಸುಶೀಲ ಆಂಟಿ ಬಳಿ ಬಾಲ್ಯದಿಂದಲೇ ಅಪ್ಪ ಅಮ್ಮ ಯಾಕೆ ಮಾತನಾಡುತ್ತಿರಲಿಲ್ಲ ಎಂದು ಹೇಗಾದರೂ ಕೇಳಬೇಕು ಎಂದು ಮನಸ್ಸಿನಲ್ಲೇ ಲೆಕ್ಕಾಚಾರ ಹಾಕುತ್ತಿದ್ದ ….


ನಾನು ರಾತ್ರಿ ಇಲ್ಲಿ ಉಳಿಯುತ್ತೇನೆ ಎಂದು ನಾನೇ ಕೇಳಿದರೆ ತಪ್ಪು ಎನಿಸಿದರೆ ಎಂಬ ಅಳುಕು ಮನದಲ್ಲಿ ಮೂಡಿತು ಆಕಾಶ್ ನಿಗೆ… ಅವರೇ ಇವತ್ತು ರಾತ್ರಿ ಇರು ಎಂದು ಹೇಳಳಿ ಎಂದು ಮನಸ್ಸಿನಲ್ಲೇ ಆಶಿಸುತ್ತಾ ಆಚೆ ಈಚೆ ನೋಡಿ ಹೊರಗೆ ಅಂಗಳಕ್ಕೆ ಬಂದ… ತಂಪಾದ ಗಾಳಿ ಬೀಸುತ್ತಿತ್ತು. ಒಮ್ಮೆ ಹಾಯ್ ಆಯಿತು ಆಕಾಶ್ ನಿಗೆ. ರಿತಿಕಾ ಜಗಲಿಯಲ್ಲಿ ಕುಳಿತು ಯಾವುದೋ ಒಂದು ಕಾದಂಬರಿ ಓದುತ್ತಾ ಇರುವುದು ಕಂಡಿತು ಆಕಾಶ್ ನಿಗೆ. ಪರ್ವಾಗಿಲ್ಲ ಹುಡುಗಿ ಪುಸ್ತಕ ಚೆನ್ನಾಗಿ ಓದುತ್ತಾಳೆ ಎಂದು ಕೊಂಡ ಆಕಾಶ್. ಕಾಡು ಹರಟೆ ಅಥವಾ ಮೊಬೈಲ್ ನೋಡಿ ಸಮಯ ಹಾಳು ಮಾಡುವ ಬದಲು ಪುಸ್ತಕ ಓದುವುದು ಒಳ್ಳೆಯ ಹವ್ಯಾಸ ಅಲ್ಲದೆ ಮನಸ್ಸಿಗೆ ಒಂದು ರೀತಿಯ ಮುದ, ನೆಮ್ಮದಿ ಸಿಗುತ್ತದೆ ಎಂದು ಆಕಾಶ್ ಕಂಡು ಕೊಂಡ ಸತ್ಯ.
ದೀಪದ ಬೆಳಕಿನಲ್ಲಿ ತದೇಕಚಿತ್ತದಿಂದ ಓದುತ್ತಿರುವ ರಿತಿಕಾಳನ್ನು ಕಂಡು ಆಕಾಶ್ ನಿಗೆ ಒಂದು ಕ್ಷಣ ಮನಸ್ಸು ಅವಳ ಕಡೆಗೆ ಸೆಳೆಯಿತು. ಅದೇ ಕ್ಷಣ ಡಾಕ್ಟರ್ ರೇಖಳ ನೆನಪು ಆಯಿತು. ಡಾಕ್ಟರ್ ರೇಖ ಆಕಾಶ್ ನ ಹಾಗೆ ಶ್ರೀಮಂತರ ಮನೆ ಹುಡುಗಿ. ನೋಡಲು ಸುಂದರವಾಗಿದ್ದಳು. ಆಕಾಶ್ ನ ಬಳಿ ತುಂಬಾ ಸಲುಗೆಯಿಂದ ವರ್ತಿಸುತ್ತಿದ್ದಳು.ಅವಳು ಪ್ರೀತಿ ಮಾಡುತ್ತಿದ್ದಾಳೆ ಎಂದು ಆಕಾಶ್ ನಿಗೆ ತಿಳಿದಿತ್ತು. ಆದರೆ ಆಕಾಶ್ ನಿಗೆ‌ ರೇಖಾಳ ಬಗ್ಗೆ ಯಾವುದೇ ರೀತಿಯ ಅಂತಹಾ ಮನಸ್ಥಿತಿ ಇರಲಿಲ್ಲ. ಅವಳ ಬಗ್ಗೆ ಕಾಳಜಿ ಕರುಣೆ ಬಿಟ್ಟರೆ ಅವಳ ಜೊತೆ ಸಂಸಾರ ಮಾಡುವ ಪ್ರೀತಿ ಮೂಡುತ್ತಿರಲಿಲ್ಲ. ಒಬ್ಬರ ಜೊತೆ ಇದ್ದ ಮಾತ್ರಕ್ಕೆ ಅವರ ಒಟ್ಟಿಗೆ ಕೆಲಸ ಮಾಡುತ್ತೇವೆ ಎಂಬ ಮಾತ್ರಕ್ಕೆ ಪ್ರೀತಿ ಬರಲು ಸಾಧ್ಯವೇ? ನನ್ನ ಮಟ್ಟಿಗೆ ಇಲ್ಲ ಎಂದೇ ನಾನು ಭಾವಿಸುತ್ತೇನೆ… ಪ್ರೀತಿ ಎಂಬುದು ಇಬ್ಬರಿಗೂ ಏಕಕಾಲಕ್ಕೆ ಮೂಡುವ ಒಂದು ಭಾವನೆ . ಹೂ ಹೇಗೆ ಮೆಲ್ಲ ಮೆಲ್ಲನೆ ಅರಳುತ್ತದೆಯೋ ಅದೇ ರೀತಿ ಪ್ರೀತಿ ಎಂಬುದು ಹೂವಿನ ಒಂದೊಂದೇ ಎಸಳು ಬಿಡುವಂತೆ ಅರಳಲು ಸಾಧ್ಯ ಎಂದು ನನ್ನ ಅನಿಸಿಕೆ.
ಅಂಗಳದಲ್ಲಿ ಯಾವುದೋ ಮರದಿಂದ ಹಣ್ಣು ಬಿದ್ದ ಶಬ್ಧ ಬಂದು ಆಕಾಶ್ ನ ಯೋಚನೆಗೆ ಕಡಿವಾಣ ಬಿತ್ತು..
ಛೇ ನಾನು ಏನೇನು ಯೋಚನೆ ಮಾಡುತ್ತಿದ್ದೇನೆ ಇವತ್ತು ಇಲ್ಲೇ ಕುಳಿತು ಕೊಳ್ಳುತ್ತೇನೆ ಎಂದು ಕೇಳುವ ಬದಲು ಪ್ರೀತಿ ಪ್ರೇಮದ ಬಗ್ಗೆ ನೆನಪು ಮಾಡುತ್ತಿದ್ದೇನೆ ಎಂದು ಆಚೆ ಈಚೆ ಹೋಗಿ ಧೈರ್ಯ ಮಾಡಿ ಅಂಟಿ ನಾನು ಈ ದಿನ ಇಲ್ಲೇ ಇರುತ್ತೇನೆ ಎಂದ….
( ಮುಂದುವರಿಯುವುದು)

✍️ ವನಿತಾ ಅರುಣ್ ಭಂಡಾರಿ ಬಜಪೆ

 

 

Leave a Reply

Your email address will not be published. Required fields are marked *