
ಮಗ ಭರತ್ ಈಗ ತಾನೆ ಪರೀಕ್ಷೆ ಮುಗಿಸಿ ದೂರದ ಊರಿಂದ ಬಹಳ ಸಮಯದ ನಂತರ ಬಂದಿದ್ದಾನೆ ಮನೆಯಲ್ಲಿ ಬೇಸರ, ಸುತ್ತಾಡಲು ಹಳೆಸ್ನೇಹಿತರ ಪರಿಚಯ ಮಾಸಿದೆ. ಹುಡುಕಲು ಪ್ರಯತ್ನಿಸಿದರೂ ಅವರು ರಜೆಗಾಗಿ ಇಲ್ಲಿಂದ ಕಾಲ್ಕಿತ್ತಿರಲೂಬಹುದೆಂಬ ಅನುಮಾನ. ಆಗಲೆ ಹೊಳೆದಿದ್ದು ತಂದೆಯ ಜೊತೆಗೆ ಕೆಲಸಕ್ಕೆ ಸಾಗೋಣವೆಂದು. ಅಲ್ಲಿಂದಲೆ ನಾಲ್ಕೈದು ಕಿಲೋಮೀಟರ್ ದೂರದ ಭಟ್ಟರ ಮನೆಯ ತೋಟದ ಕಳೆಕೀಳಲು ತಂದೆಯೊಂದಿಗೆ ತಾನೂ ನೆಡೆದ.
ಮನೆ ತಲುಪಿದ ಕ್ಷಣ ಭಟ್ಟರು ” ಏ ರಾಮ ಈಗ್ಬಂದ್ಯನ ಹೊತ್ತಾಯ್ತೊ ತಿಂಡಿಗ್ ಕರಿತೆ ತೋಟ್ದಲ್ಲಿರು……….. ಮಗ್ನಾ”
ಅಂತ ಒಂದೆ ಮಾತಲ್ಲಿ ಕೇಳಿ ಕೆಲಸಕ್ಕೆ ಕಳುಹಿಸಿಕೊಟ್ಟರು. ರಾಮಪ್ಪ ಹೌದ್ ಭಟ್ರೆ ಎಸ್ ಎಸ್ ಎಲ್ ಸಿ ಆಯ್ತು ರಜೆ ಈಗ ಎಂದವರೆ ಮಗನೊಂದಿಗೆ ಯಂತ್ರ ಹಿಡಿದು ಕಳೆ ಸವರಲು ತೋಟದೆಡೆಗೆ ತೆರಳಿದರು. ತೋಟದಲ್ಲಿ ಕೆಲಸ ಮಾಡುತ್ತಾ ಇರಬೇಕಾದರೆ ಭಟ್ಟರೂಂದಿಗೆ ಮಗಳೂ ಬಂದಳು. ಆರೇಳು ವರ್ಷ ಪ್ರಾಯವಿರಬಹುದು, ಕೈಯ್ಯಲ್ಲೊಂದು ತಂಬಿಗೆ ಹಿಡಿದಿದ್ದಳು. ಭಟ್ಟರು ಅದನ್ನು ರಾಮಪ್ಪನಿಗೆ ಕೊಡಲು ಹೇಳಿ ತೋಟದ ಇನ್ನೊಂದು ಹಾದಿ ಹಿಡಿದರು. ಬಂದವಳೇ ” ಏ ರಾಮ ಅಪ್ಪ ತಂಬಿಗೆ ಕೊಡಕ್ ಹೇಳಿದ್ದ ಇಲ್ ಇಟ್ಟಿದ್ದಿ ನೋಡ್ಕ ಎಂದಳು.”
ಸರಿ ಎಂದ ರಾಮಪ್ಪ ತಿಂಡಿ, ಶಾಲೆ ಬಗ್ಗೆ ವಿಚಾರಿಸಿದ. ಪುಟ್ಟ ಹುಡುಗಿ ಪ್ರತಿ ಮಾತಿನಲ್ಲಿಯೂ ಏಕವಚನದಲ್ಲೇ ಸಂಭೋದಿಸುವುದನ್ನು ನೋಡಿದ ಭರತ
“ನೋಡು ಅವರು ವಯಸ್ಸಿನಲ್ಲಿ ನಿನಗಿಂತ ದೊಡ್ಡವರು ಗೌರವ ಕೊಟ್ಟು ಮಾತ್ನಾಡಬೇಕು. ಹೊರಗೆಲ್ಲಾ ಹೋದಾಗ ಹೀಗೆ ಮಾತಾಡಿದ್ರೆ ಬೈತಾರೆ. ಶಾಲೆಲೂ ಹೀಗೆ ಮಾತಾಡ್ತೀಯ ಸರ್ ಹತ್ರ ”
ಎಂದು ಬುದ್ದಿ ಹೇಳಬೇಕಾದ್ರೆ ಬಂದ ಭಟ್ಟರು “ಇಲ್ಲಾ.. ನಮ್ಮಲ್ಲೆಲ್ಲಾ ಮಾತಾಡೋದೆ ಹೀಗೆ ಮೊದ್ಲಿಂದ್ಲು ರೂಢಿ…”
ಎಂದವರೇ ವಿಷಯಾಂತರ ಮಾಡಿ ಹರಟಿದರು.
ಸಂಜೆಯಾಗುತ್ತಾ ಬಂತು ಕೆಲಸ ಮುಗಿಸಿ ಹೊರಡುವಾಗ ಭಟ್ಟರ ತಂದೆ ಕವಳ ಹಾಕಿಕೊಂಡು ಜಗಲಿಯಲ್ಲಿ ಕುಳಿತಿದ್ದರು. ಅವರನ್ನು ನೋಡಿ ನಕ್ಕ ಭರತ್
“ಏನೋ ಶಂಕರಾ ಕಾಫಿ ಆಯ್ತನಾ ??” ಎಂದು ಕೇಳಿದ. ಇದರಿಂದ ಸಿಟ್ಟಿಗೆದ್ದ ಭಟ್ಟರು “ಏನೋ? ನಿನ್ನ ವಯಸ್ಸೇನು ಅವರ ವಯಸ್ಸೇನು?, ಶಾಲೆಲ್ ಹಿಂಗೆ ಮಾತಾಡಿದ್ರೆ ಮಾಸ್ಟರ್ ಹಲ್ ಉದುರ್ಸೀ ಕೊಡ್ತ್ರ… ಮನೆಲ್ ಇದ್ನೇ ಹೇಳಿಕೊಡುದಾ ನಿಂಗೆ” ಅಂತಾ ಕೂಗಾಡಿಯೇ ಬಿಟ್ಟರು.
ಶಾಂತವಾಗಿ ಉತ್ತರಿಸಿದ ಭರತ “ನಿಮ್ಮ ತಂದೆಗೆ ಏಕವಚನದಲ್ಲಿ ಮಾತನಾಡಿಸಿದಾಗ ನಿಮಗೆಷ್ಟು ಕೋಪ ಬಂತೋ ನನ್ನ ತಂದೆಯನ್ನು ಕರೆದಾಗ ನನಗೂ ಅಷ್ಟೆ. ಅಷ್ಟಕ್ಕೂ ಸಂಸ್ಕೃತಿಯ ರಾಯಭಾರಿಗಳಾದ ನೀವೇ ಹೀಗೆ ಮಾಡಿದರೆ ಉಳಿದವರು ಹೇಗೆ ನೆಡೆದುಕೊಳ್ಳಬೇಕು ?” ಎಂದು ಕೇಳಿದನು.
ಭಟ್ಟರು ಮಾತು ಬದಲಾಯಿಸಿದರು “ರಾಮಣ್ಣ ನಾಳೆ ಸ್ವಲ್ಪ ಬೇಗ ಕೆಲಸಕ್ಕೆ ಬನ್ನಿ ಆಯ್ತಾ. ನೀನು ನಾಳೆ ಬಾರೊ ಮರಿ” ಎಂದು. ನೋಡುತ್ತಾ ಕುಳಿತಿದ್ದ ಶಂಕರಭಟ್ಟರು ಮನಸ್ಸಿನೊಳಗೇ ನಕ್ಕರು..
ವಿಜಯ್ ವಿಜಿ ಭಂಡಾರಿ
ನಿಟ್ಟೂರು ಹೊಸನಗರ
Beautiful stoty…..
Thank you