January 18, 2025
vijay nitturu

ಬಹಳ ವರ್ಷಗಳಿಂದ ಜನರ ಕುತೂಹಲಕ್ಕೆ ಕಾರಣವಾಗಿದ್ದ ಮತ್ತು ಮಾಧ್ಯಮಗಳ, ಪತ್ರಿಕೆಗಳ, ಜಾಲಾತಾಣಗಳ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದ್ದ, ಪುರುಷರನ್ನೇ ಟಾರ್ಗೇಟ್ ಮಾಡಿ ಅವರ ಜನನಾಂಗ ಮತ್ತು ನಾಲಗೆಯನ್ನು ಕತ್ತರಿಸಿ ರಾತ್ರೋರಾತ್ರಿ ಸರ್ಕಾರಿ ಆಸ್ಪತ್ರೆಯ ಎದುರು ಎಸೆದು ಹೋಗುವ ಗುಂಪೊಂದು ಬಹಳ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇದೊಂದು ಹಲವು ಜನರ ಗುಂಪು ಎಂದು, ಇಲ್ಲಾ ಕೆಲವರು ಮಾತ್ರ ಎಂದು. ಬಲಿಯಾದವರೆಲ್ಲಾ ಅತ್ಯಾಚಾರಿಗಳು ಎಂದು, ಇಲ್ಲ ಅಮಾಯಕರು ಎಂದು ಕೆಲವರ ವಾದ. ಇದರಿಂದ ಯಾವುದೋ ಉದ್ದೇಶಿತ ಲಾಭವಿದೆ ಎಂದು ಕೆಲವರ ವಾದವಾದರೆ ಇಲ್ಲ ಇದು ವಿಕೃತ ಮನಸ್ಥಿತಿಯವರು ಮಾಡುತ್ತಿರುವ ಕೆಲಸ ಎಂದು ಇನ್ನುಳಿದವರ ವಾದ. ಇಂತಹ ಹಲವು ಊಹಾಪೋಹಗಳ ವಾದಗಳಿಗೆ ಎಡೆಮಾಡಿಕೊಟ್ಟು ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸಿ ದೇಶದ ಮೂಲೆ ಮೂಲೆಯಲ್ಲಿ ತನ್ನ ಕಾರ್ಯ ನಿರ್ವಹಿಸುತ್ತಿದ್ದ ಗುಂಪಿನ ಇಬ್ಬರು ವ್ಯಕ್ತಿಗಳು ಸೆರೆಯಾದದ್ದು ದೇಶದ ಜನಗಳಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಪತ್ರಿಕೆ, ಮಾಧ್ಯಮ, ಜನತೆಯೂ ಸೇರಿದಂತೆ ವಿಮರ್ಶೆಗಳ ಜೊತೆಗೆ ಅವರ ಹೇಳಿಕೆಗಳಿಗಾಗಿ ಕುತೂಹಲಭರಿತರಾಗಿ ಕಾದರು. 

ನಳಿನಿ ಮತ್ತು ಪ್ರಿಯಾ, ಜೀವಕ್ಕೆ ಜೀವ ಕೊಡುವ ಅದ್ಭುತ ಗೆಳತಿಯರು. ಬಾಲ್ಯದಿಂದಲೂ ಒಬ್ಬರನ್ನೊಬ್ಬರು ಬಿಟ್ಟಿರದ ಅನ್ಯೂನತೆ. ಇಬ್ಬರ ಅಭಿರುಚಿಗಳು ಮತ್ತು ಆಸೆಗಳು ಒಂದೆ. ಇದೇ ಕಾರಣಕ್ಕಾಗಿ ಅವರಿಬ್ಬರ ಸ್ನೇಹ ಅಷ್ಟು ಗಟ್ಟಿತನದ ಬೇರು ಪಡೆದು ನೆಲೆಗೊಂಡಿದ್ದು.

ಪ್ರಿಯಾಳ ತಂದೆ ರಮೇಶ ಇತರರ ಮನೆಗಳಲ್ಲಿ ತೋಟ, ಗದ್ದೆಯ ಕೆಲಸಗಳನ್ನು ಮಾಡಿಕೊಂಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರೂ ಇದ್ದೊಬ್ಬಳೇ ಮಗಳನ್ನು ಯಾವ ಕೊರತೆಯೂ ಆಗದಂತೆ ಬೆಳೆಸಿದ. ಆಕೆಯನ್ನು ಮುಂದೊಂದು ದಿನ ಉನ್ನತ ನೋಡುವ ಕನಸು ಕಟ್ಟಿದ ಮತ್ತು ಆಕೆಗೂ ಆ ಕನಸುಗಳನ್ನು ಬಿತ್ತಿದ. ತಂದೆಯ ಕನಸುಗಳ ಈಡೇರಿಕೆಯೇ ತನ್ನ ಜೀವನದ ಉದ್ದೇಶವಾಗಿಸಿಕೊಂಡು ಜಿಲ್ಲಾಧಿಕಾರಿ ಆಗುವ ಕನಸು ಕಂಡಿದ್ದಳು ಪ್ರಿಯಾ. ನಳಿನಿಯ ತಂದೆ ಪ್ರಾಥಮಿಕ ಶಾಲಾ ಶಿಕ್ಷಕ. ಸಹಜವಾಗಿಯೇ ತನ್ನ ಮಗಳನ್ನು ತನ್ನದೇ ಕ್ಷೇತ್ರದಲ್ಲಿ ಉನ್ನತ ಸ್ಥಾನದಲ್ಲಿ ನೋಡುವ ಬಯಕೆ ಹೊಂದಿದ್ದರು, ಮತ್ತು ಶಿಕ್ಷಣವೊಂದು ವ್ಯಾಪಾರೀಕರಣವಾಗಿದ್ದರ ಬಗ್ಗೆ ಬಹಳ ಬೇಸರವನ್ನು ಹೊಂದಿದ್ದರು. ತಂದೆಯ ಕನಸುಗಳಿಗಾಗಿ ನಳಿನಿ ಶಿಕ್ಷಣಾಧಿಕಾರಿಯಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆ ತರುವ ಧ್ಯೇಯವನ್ನು ತೊಟ್ಟಿದ್ದಳು. ನಳಿನಿಯ ಅಣ್ಣ ಶೇಖರ ಸಿ.ಎ. ಆಗುವತ್ತ ಮನಸ್ಸು ಮಾಡಿದ್ದ.

ಹಳ್ಳಿಯ ಶಿಕ್ಷಣದ ಹಂತ ಮುಗಿದು ಉನ್ನತ ವ್ಯಾಸಾಂಗಕ್ಕಾಗಿ ಪೇಟೆಯಕಡೆ ಮುಖ ಮಾಡಿರು ನಳಿನಿ ಮತ್ತು ಪ್ರಿಯಾ. ಹಳ್ಳಿಯ ಜನರ ಸೊಗಡು ಮತ್ತು ಸಂಸ್ಕೃತಿಗಿಂತ ಬಹಳ ಭಿನ್ನವಾಗಿದ್ದ ಪೇಟೆಯ ವಾತಾವರಣ ಮೊದಮೊದಲಿಗೆ ಹಿಡಿಸದಿದ್ದರು ನಂತರದಲ್ಲಿ ಸಹಜವೆಂಬಂತೆ ಅಲ್ಲಿನ ಉಡುಗೆ ತೊಡುಗೆಗಳಿಂದ ಹಿಡಿದು ಪ್ರತಿಯೊಂದಕ್ಕೂ ಹೊಂದಿಕೊಂಡುಬಿಟ್ಟರು. ವಯೋಸಹಜ ಆಕಾಂಕ್ಷೆಗಳು ಮತ್ತು ಸ್ನೇಹದ ಪರಿಣಾಮ ಪ್ರಿಯಾ ಮತ್ತು ಶೇಖರ್ ನಡುವೆ ಪ್ರೇಮ ಚಿಗುರೊಡೆದಿತ್ತು, ಜೊತೆಗೆ ನಳಿನಿಯ ಸಹಕಾರವು ಜೊತೆಗಿತ್ತು. ವ್ಯಾಸಾಂಗಕ್ಕೆ ಏನೂ ತೊಡಕಾಗದಂತೆ ಪ್ರೀತಿ ಸಾಗುತ್ತಿತ್ತು ಕನಸುಗಳ ಬೆನ್ನತ್ತಿ.

ಅದೊಂದು ದಿನ ಪ್ರಿಯಾಳ ಹುಟ್ಟಿದ ದಿನ. ಕಾಲೇಜಿಗೆ ಅಂದಿಗೆ ಒಂದೆರಡು ದಿನದ ರಜೆ ಸಿಕ್ಕಿತ್ತು. ಈಗಾಗಲೇ ಸಿ.ಎ. ಆಗಿ ಕೆಲಸ ಗಿಟ್ಟಿಸಿಕೊಂಡಿದ್ದ ಶೇಖರ್ ಬಿಡುವಿಲ್ಲದ ಕೆಲಸದ ಪರಿಣಾಮ ತನ್ನ ರೂಮಿನಲ್ಲಿಯೇ ಪ್ರಿಯಾಳ ಹುಟ್ಟು ಹಬ್ಬ ಆಚರಿಸುವ ಸಲುವಾಗಿ, ಪ್ರಿಯಾ ಮತ್ತು ನಳಿನಿಯನ್ನು ಕರೆಸಿಕೊಂಡ. ಹುಟ್ಟು ಹಬ್ಬದ ಸಂಭ್ರಮ ಮೂವರೊಳಗೆ ಬಹಳ ವಿಜೃಂಭಣೆಯಿಂದ ನೆಡೆಯಿತು ದೀಪ ಹಚ್ಚುವ ಮೂಲಕ. ಇನ್ನೇನು ನಾಳೆ ಎಂದರೆ ಕಾಲೇಜು ಆರಂಭ ಅದಕ್ಕಾಗಿಯೇ ರಾತ್ರಿ ರೈಲಿನ ಪ್ರಯಾಣ ನೆಡೆಸಲು ಅನುವಾದರು. ಪ್ರಯಾಣದಲ್ಲಿ ಪ್ರಿಯಾ, ಶೇಖರ್ ತನಗಾಗಿ ನೀಡಿದ ಪ್ರೀತಿಯ ಮೊದಲ ಹುಟ್ಟುಹಬ್ಬದ ಉಡುಗೊರೆಯಾಗಿ ದೊರಕಿದ ಲಾಕೆಟ್ ನ್ನು ತನ್ನ ಕತ್ತಿನಲ್ಲಿ ಆಡುತ್ತಿರುವುದನ್ನು ನೋಡಿಕೊಂಡು ತನ್ನದೇ ಆದ ಲೋಕದಲ್ಲಿ ಮುಳುಗಿ ಹೋಗಿದ್ದಳು. ರಾತ್ರಿಯ ಪಯಣ ಇಡಿಯ ಬೋಗಿಯಲ್ಲಿ ಇಬ್ಬರೇ ಇರುವುದು ಅವಳ ಕನಸುಗಳಿಗೆ ಯಾವುದೇ ತೊಂದರೆ ನೀಡಲಿಲ್ಲ.

ಅತೀಯಾದ ಉಲ್ಲಾಸವು ಒಮ್ಮೊಮ್ಮೆ ಕೆಟ್ಟ ಪರಿಣಾಮ ಬೀರುವಂತೆ ಇವರ ಬದುಕಿನಲ್ಲಿ ದುಷ್ಟತನವೊಂದು ತಾಂಡವವಾಡಲು ಸಂಚು ಹಾಕಿ ಕುಳಿತಿತ್ತು. ಇದ್ದಕ್ಕಿದ್ದ ಹಾಗೆ ಇಬ್ಬರೇ ಇದ್ದ ಖಾಲಿ ಬೋಗಿಗೆ ಇದ್ದಕ್ಕಿದ್ದಂತೆ ನಾಲ್ಕು ಜನ ಆಗುಂತಕರ ಆಗಮನವಾಯಿತು. ಮೃಗತ್ವವನ್ನು ಹೊತ್ತು ಬಂದಿದ್ದ ಅವರಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ನೋಡಿದ ತಕ್ಷಣ ಅದು ಇನ್ನಷ್ಟು ವ್ಯಾಘ್ರತನ ತೋರಲು ಆರಂಭಿಸಿತು. ಸುಲಭವಾಗಿ ಇಬ್ಬರು ಹೆಂಗೆಳೆಯರು ಚಲಿಸುವ ಭೋಗಿಯೊಳಗೆ ಆ ವ್ಯಾಘ್ರಗಳಿಗೆ ಬಲಿಯಾಗಿಬಿಟ್ಟರು. ಕೊನೆಯ ಹಂತದಲ್ಲಿ ಇಬ್ಬರನ್ನು ಮುಗಿಸುವ ಸಲುವಾಗಿ ಇಟ್ಟುಕೊಂಡಿದ್ದ ಆಯುಧಗಳನ್ನು ತೆಗೆಯಲು ಹೊರಟರು. ಭೋಗಿಯ ಬಾಗಿಲಬಳಿ ನಿತ್ರಾಣಳಾಗಿ ಬಿದ್ದಿದ್ದ ನಳಿನಿ ಪ್ರಯತ್ನ ಬಿದ್ದು ಹೊರಕ್ಕೆ ಕ್ಷಣದಲ್ಲಿ ಜಿಗಿದುಬಿಟ್ಟಳು. ಉಳಿದಂತೆ ಪ್ರಿಯಾ ಕಟುಕರ ಚಾಕುವಿಗೆ ಅತ್ಯಂತ ಹೀನಾಯವಾಗಿ ಸಿಕ್ಕಿಬಿಟ್ಟಳು.

ಭೋಗಿಯಿಂದ ಜಿಗಿದ ನಳಿನಿ ಅದೃಷ್ಟವಶಾತ್ ಹುಲ್ಲುಗಳ ರಾಶಿಯಮೇಲೆ ಬಿದ್ದ ಪರಿಣಾಮ ಜೀವಕ್ಕೆ ಹಾನಿಯಾಗದಂತೆ ಬದುಕುಳಿದಳು. ಜಿಗಿಯುವ ಸಂದರ್ಭ ಬೆತ್ತಲೆಯಾಗಿದ್ದ ದೇಹದ ಬೆರಳಿಗೆ ತಗುಲಿಕೋಂಡಿದ್ದ ಅಳವ ವ್ಯಾನಿಟಿ ಬ್ಯಾಗ್ ಮನೆಯವರ ಸಂಪರ್ಕ ಮಾಡಲು ಮೊಬೈಲನ್ನು ಒದಗಿಸಿಬಿಟ್ಟಿತ್ತು. ತಕ್ಷಣವೇ ಕರೆ ಹೋಗಿದ್ದು ಅಣ್ಣನಿಗೆ. ಅಲ್ಲಿಂದ ತುಸು ದೂರದಲ್ಲೇ ಇದ್ದ ಸ್ಥಳಕ್ಕೆ ಜಿ.ಪಿ.ಎಸ್ ಜಾಡನ್ನು ಹಿಡಿದು ತಡರಾತ್ರಿ ತನ್ನ ಬೈಕ್ ಹತ್ತಿ ವಸ್ತ್ರವನ್ನು ಹಿಡದು ಹೊರಟ. ಹರೆಯಕ್ಕೆ ಬಂದ ತಂಗಿಯನ್ನು ಅಂತಹ ಸ್ಥಿತಿಯಲ್ಲಿ ನೋಡುವ ಸಂದರ್ಭ ಯಾವ ಅಣ್ಣನಿಗೂ ಬಾರದಿರಲಿ ಎಂದು ಮುಗಿಲು ಮಟ್ಟುವ ರೋಧನದಿಂದ ಗೋಳಿಟ್ಟನು. ತನ್ನ ಜೀವನದ ಜೀವವಾದ ಪ್ರಿಯಾಳ ಕತೆ ಕೇಳಿ ಇನ್ನಷ್ಟು ಕುಸಿದು ಹೋದನು. ಅರೆಕ್ಷಣ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದನು. ಸಾವರಿಸಿಕೊಂಡ ನಳಿನಿ ಎದ್ದು ಅಣ್ಣನನ್ನು ಎಬ್ಬಿಸಿ ಪೋಲಿಸ್ ಠಾಣೆಯ ಮೆಟ್ಟಿಲು ಬಳಿಯಲ್ಲಿ ಬಂದು ನಿಂತರು.

ಠಾಣೆಯಲ್ಲಿ ಹುಟ್ಟುಹಬ್ಬದ ಆಚರಣೆ, ಪ್ರಯಾಣ ಮತ್ತು ನೀಚರ ಕತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಪ್ರಿಯಾ ಅಲ್ಲೇ ಉಳಿದು ಆಕೆ ಏನಾದಳೋ ಎನ್ನುವ ಆತಂಕದೊಂದಿಗೆ ವಿಷಯವನ್ನು ನಳಿನಿ ಪ್ರಸ್ತಾಪಿಸಿದಳು. ರಾತ್ರಿಯ ಅಮಲಿನಲ್ಲಿದ್ದ ಪೋಲೀಸ್ ಅಧಿಕಾರಿಯ ಅಸಂಬದ್ಧ ಹೇಸಿಗೆ ಹುಟ್ಟಿಸುವ ಪ್ರಶ್ನೆಗಳಿಂದ ನಳಿನಿ ತತ್ತರಿಸಿ ಹೋದಳು. ಕೋಪಗೊಂಡ ಶೇಖರ್ ಪೋಲಿಸರಿಗೆ ನೇರವಾಗಿ ನಿಂದಿಸಿಬಿಟ್ಟ. ಇದಕ್ಕಾಗಿ ಸಿಟ್ಟಾದ ಪೋಲಿಸ್ ಅಧಿಕಾರಿ ಪ್ರಿಯಾ ಕಾಣೆಯಾದ ವಿಷಯವಾಗಿ ಮತ್ತು ಆಕೆಯ ಅತ್ಯಾಚಾರದ ಆರೋಪವನ್ನು ಶೇಖರ್ ಮೇಲೆ ಹೊರಿಸಿ ಅಣ್ಣ ತಂಗಿ ಇಬ್ಬರೂ ಸೇರಿ ಕೊಲೆ ಮಾಡಿರುವುದಾಗಿ ಕೇಸು ಫೈಲ್ ಮಾಡಿ ಜೈಲಿಗೆ ಕಳಿಸುವ ಬೆದರಿಕೆ ಹೇರಿ, ಹೆದರಿಸಿ ಕಳುಹಿಸಿದನು. ಸರಿಯಾದ ನ್ಯಾಯ ಮತ್ತು ಪ್ರತಿಕ್ರಿಯೆ ಸಿಗದ ಕಾರಣ ನಳಿನಿ ಮತ್ತು ಶೇಖರ್ ಠಾಣೆಯಿಂದ ಹೊರಬಂದು, ನಳಿನಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಕೊಂಡಳು.

ಪ್ರಿಯಾಳ ಸುಳಿವಿಗಾಗಿ ಹುಡುಕಾಡಿ ನೊಂದಿದ್ದ ನಳಿನಿ ಮತ್ತು ಶೇಖರ್ ಗೆ ಆಸ್ಪತ್ರೆಯಲ್ಲಿನ ಟಿ.ವಿ. ಯಲ್ಲಿ ಬಿತ್ತರವಾಗುತ್ತಿದ್ದ ಸುದ್ದಿಯೊಂದು ಭರಸಿಡಿಲಿನಂತೆ ಅಪ್ಪಳಿಸಿ ಕುಗ್ಗಿ ಹೋಗಿದ್ದ ಅವರಿಗೆ ಮತ್ತಷ್ಟು ತೀಕ್ಷ್ಣವಾಗಿ ಆಳದಲ್ಲಿ ಕುಗ್ಗಿಹೋಗುವಂತೆ ಮಾಡಿಬಿಟ್ಟಿತು. ಅಲ್ಲಿ ಬರ್ಬರವಾಗಿ ಅತ್ಯಂತ ನೀಚ ಮನಸ್ಥಿತಿಯ ರಾಕ್ಷಸರಿಂದ ಅಮಾನುಷವಾಗಿ ಹತ್ಯೆಯಾಗಿ ರೈಲ್ವೇ ಪಟ್ಟಿಯ ಸ್ವಲ್ಪ ದೂರದಲ್ಲೇ ಗುರುತೇ ಸಿಗದಂತೆ ಬಿದ್ದಿದ್ದ ಶವ ಅದು ಪ್ರಿಯಾಳದ್ದೇ ಎಂದು ಆ ಶವದ ಮೇಲೆ ಇದ್ದ ಶೇಖರ್ ಪ್ರೀತಿಯ ಕಾಣಿಕೆಯಾಗಿ ನೀಡಿದ್ದ ಲಾಕೆಟ್ ಸಾರಿ ಸಾರಿ ಹೇಳುತ್ತಿತ್ತು.

ಇಷ್ಟೇ ಸಾಲದೆಂಬಂತೆ ಮಾಹಿತಿ ದೊರಕಿದ ಕೂಡಲೆ ಪೋಲಿಸ್ ಅಧಿಕಾರಿ ನೇರವಾಗಿ ಇವರ ಬಳಿಯೇ ಬಂದು ನಿಂತಿದ್ದ ತನ್ನ ಮನದೊಳಗಿನ ದ್ವೇಷ ತೀರಿಸಿಕೊಳ್ಳಲು. ಆದರೆ ಆ ಕ್ಷಣದಲ್ಲಿ ನಳಿನಿ ಇದ್ದ ಆಸ್ಪತ್ರೆಯ ಸ್ಥಿತಿ ಮತ್ತು ಅದಾಗಲೇ ಕಾಮುಕ ರಕ್ಕಸರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಅವರ ತೆವಲಿನ ವಿಕೃತದ ವೀಡಿಯೋಗಳಿಂದ ಮತ್ತು ಮಾಧ್ಯಮಗಳ ವರದಿಯ ಫಲವಾಗಿ ಅಧಿಕಾರಿಗೆ ಇದ್ದ ಅವಕಾಶ ಕ್ಷಣದಲ್ಲಿ ತಪ್ಪಿ ಹೋಯಿತು. ನಳಿನಿಯನ್ನು ಆ ಕೇಸಿನ ವಿಚಾರವಾಗಿ ಸಂತ್ರಸ್ಥೆಯನ್ನಾಗಿ ಮತ್ತು ಸಾಕ್ಷಿಯನ್ನಾಗಿ, ಶೇಖರ್ ನನ್ನು ಸಾಕ್ಷಿ ಯನ್ನಾಗಿ ಗುರುತಿಸಿಕೊಂಡು ನೆಡೆದರು. ಮಗಳ ಸಾವಿನ ಸುದ್ದಿ ಕೇಳಿದೊಡನೆ ಪ್ರಿಯಾಳ ತಂದೆ ರಮೇಶ ಹೃದಯಾಘಾತದಿಂದ ಸಾವನ್ನೊಪ್ಪಿದನು.

ಜಾಲಾತಾಣಗಳಲ್ಲಿನ ಆಕ್ರೋಶ ಮತ್ತು ಮಾಧ್ಯಮಗಳ ನಿರಂತರ ಸುದ್ದಿ ಮತ್ತು ಪ್ರತಿಭಟನೆಯ ಫಲವಾಗಿ ಅಪರಾಧಿಗಳು ಸೆರೆಯಾದರು. ಅವರನ್ನು ಬಿಗಿ ಭದ್ರತೆಯೊಂದಿಗೆ ಕಸ್ಟಡಿಗೆ ಒಪ್ಪಿಸಲಾಯಿತು. ಕೇಳಿದ ಆಹಾರಗಳ ಪೂರೈಕೆ ಸಹ ಆಯಿತು. ಅವರ ಶಿಕ್ಷೆಯ ಫಲವಾಗಿ ಜೈಲುವಾಸ ಅನುಭವಿಸುವರೆಂದು ಕನಸು ಕಂಡಿದ್ದ ಶೇಖರ್ ಮತ್ತು ನಳಿನಿಗೆ ಮತ್ತೊಂದು ಶಾಕ್ ಇದು ಇವರ ಮೊದಲ ಕೇಸ್ ಅಲ್ಲ ಇದಾಗಲೇ ಅನೇಕ ಕೇಸ್ಗಳು ದಾಖಲಾಗಿವೆ ಮತ್ತು ಇವರು ಬೇಲ್ ಮೇಲೆ ಹೊರಗೆ ಬಂದವರೆಂದು. ನ್ಯಾಯದ ಕನಸು ಕಾಣುತ್ತಿದ್ದವರಿಗೆ ಇದು ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ಆಡುವ ನಾಟಕದಂತೆ ಕಂಡುಬಿಟ್ಟಿತು. ಏನಾದರೂ ಮಾಡಲೇಬೇಕು ಇದಕ್ಕೊಂದು ಅಂತ್ಯ ಹಾಡಲೇಬೇಕು. ಇನ್ನಾವ ಹೆಂಗೆಳೆಯರಿಗೂ ಈ ನೀಚರಿಂದ ಅನ್ಯಾಯ ಎದುರಾಗಬಾರದು ಎಂದು ಪಣತೊಟ್ಟು ಕುಳಿತರು. ಅದರ ಫಲವಾಗಿ ಹೊರಹೊಮ್ಮಿದ್ದೇ ಇಂತಹದೊಂದು ಅನ್ಯಾಯಕ್ಕೆ ನ್ಯಾಯವೆಂಬ ಘೋಷವಾಕ್ಯದೊಂದಿಗೆ ಆಸ್ಪತ್ರೆಯ ಎದುರು ಬಿದ್ದಿರುವ ಸಾಲು ಸಾಲು ಪುರುಷ ಮೃಗಗಳ ಕೇಸಿನ ಕತೆಗಳು.

ಹಲವು ವರ್ಷಗಳ ನಂತರ ಸಿಕ್ಕಿಬಿದ್ದ ಇವರಿಗೆ ಕೊರ್ಟ್ ನೀಡಿದ್ದು ಜೀವಾವಧಿ ಶಿಕ್ಷೆ. ಇದರ ಫಲವಾಗಿ ಮತ್ತೊಮ್ಮೆ ಜಾಲಾತಾಣಗಳಲ್ಲಿ ನ್ಯಾಯದ ವಿರುದ್ದವೇ ಹೋರಾಟ ಆರಂಭವಾಯಿತು. ಒಬ್ಬ ಶೇಖರ್ ಮತ್ತು ನಳಿನಿಯನ್ನು ನೀವು ಬಂಧಿಸಬಹುದು ಆದರೆ ನಾವು ಲಕ್ಷಾಂತರ ಸಂಖ್ಯೆಯಲ್ಲಿ ಹುಟ್ಟಿಕೊಳ್ಳುತ್ತೇವೆ ನಮಗೂ ನೀಡಿ ಜೈಲುವಾಸ, ಇಲ್ಲವೇ ಅತ್ಯಾಚಾರಿ ರಕ್ಕಸರಿಗೆ ಕಠಿಣ ಶಿಕ್ಷೆಯನ್ನು ನೀಡಿ. ಶೇಖರ್ ಮತ್ತು ನಳಿನಿಗೆ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಿ ಎಂದು ರೋಡಿಗಿಳಿದು ಹೋರಾಟ ನೆಡೆಸಲಾರಂಭಿಸಿದರು. ಹೋರಾಟಕ್ಕೆ ನ್ಯಾಯಾಲಯ ಮನ್ನಣೆ ನೀಡಿತು.

ಅತ್ಯಾಚಾರದ ಆರೋಪ ಹೊತ್ತಿರುವ ಆರೋಪಿಗಳಿಗೆ ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆಯನ್ನು ಯಾವುದೇ ವಿನಾಯಿತಿಗಳಿಲ್ಲದೆ ಮತ್ತಷ್ಟು ಕಠಿಣ ಶಿಕ್ಷೆಗಳನ್ನು. ಅತ್ಯಾಚಾರ ಮತ್ತು ಕೊಲೆ ಸಾಬೀತಾದರೆ ಕಠಿಣ ಶಿಕ್ಷೆಯ ಜೊತೆಗೆ ಮರಣದಂಡನೆಯನ್ನು ವಿಧಿಸಿತು. ಇಂತಹ ಒಂದು ಹೀನಾಯ ಕೃತ್ಯದ ವಿರುದ್ಧ ಹೋರಾಡಿದ್ದ ನಳಿನಿ ಮತ್ತು ಶೇಖರ್ ಗೆ ಶಿಕ್ಷೆಯ ಅವಧಿಯನ್ನು ಕಡಿಮೆಗೊಳಿಸಿ ನಂತರದಲ್ಲಿ ಬಿಡುಗಡೆಯ ಭಾಗ್ಯವನ್ನು ನೀಡಿತು.

 

(ಕಾಲ್ಪನಿಕ)

 

Leave a Reply

Your email address will not be published. Required fields are marked *