January 18, 2025
sasyaloka6
ಮಳೆಗಾಲ ಬಂತೆಂದರೆ ಸಾಕು ಹಳ್ಳಿಯ ಜನರು ಪ್ರಕೃತಿದತ್ತ ಆಹಾರ ಪದಾರ್ಥಗಳನ್ನು ಬಳಸಿಕೊಂಡು ಮಳೆಗಾಲದ ಶೀತದಿಂದ ಶರೀರವನ್ನು  ಬೆಚ್ಚಗಿಟ್ಟು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ. ಹಾಗಾಗಿ ಇಂದಿನ ಸಂಚಿಕೆಯಲ್ಲಿ ನಾ ಹೇಳ‌ ಹೊರಟಿರುವ ಸಸ್ಯವು ವಿಶೇಷವಾಗಿ ಮಳೆಗಾಲದ ಸಮಯದಲ್ಲಿ ಬರುವಂತಹ ಅತಿಥಿ, ಅತ್ಯಂತ ರುಚಿಕರವಾದ  ಹಾಗೂ ವಿನಾಶದ ಅಂಚಿನಲ್ಲಿರುವ ಸಸ್ಯ.
   
  ಕಳಲೆ(ಕಣಿಲೆ)
 
ವಿನಾಶದತ್ತ ಬಿದಿರು; ಕಾಣದಾಯಿತು ಕಳಲೆ ...
 
    ಕಳಲೆ ಎಂಬುದು ಸಸ್ಯ ಮೂಲದ ಅರಣ್ಯ ಉತ್ಪನ್ನ, ಸುಮಾರು 2,500 ವರ್ಷಗಳಿಂದಲೂ ಜನರು ಆಹಾರ ಪದಾರ್ಥವಾಗಿ ಉಪಯೋಗಿಸುತ್ತಿದ್ದಾರೆ. ಅತ್ಯಂತ ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿರುವ  ತರಕಾರಿಗಳಲ್ಲಿ ಕಳಲೆಯೂ ಒಂದು. 
       ತುಳುವಿನಲ್ಲಿ  ಕಣಿಲೆ, ಕನ್ನಡದಲ್ಲಿ ಕಳಲೆ, ಬೈಂಬಾಳೆ ಎಂದರೆ ಆಂಗ್ಲ ಭಾಷೆಯಲ್ಲಿ Bamboo shoot ಎಂದು ಕರೆಯುತ್ತಾರೆ. ಈ ಕಣಿಲೆ ಎಂಬುದು ಮಳೆಗಾಲಕ್ಕೆ ಹೇಳಿ ಮಾಡಿಸಿದ ಖಾದ್ಯವೆಂದರೆ ತಪ್ಪಲ್ಲ ಬಿಡಿ. ಈಗಿನ ಪೀಳಿಗೆಯಂತೂ ಇದನ್ನು ನೋಡಿರುವುದೇ ಅಪರೂಪ.
 
 
ಮಲೆನಾಡ ಬಂಧು : ಮಲೆನಾಡ ಬಿದಿರಿನ ಆಹಾರದ ...
 
  ಏನಿದು ಕಣಿಲೆ/ಕಳಲೆ
 
  ಕಣಿಲೆ ಎಂದರೆ ಎಳೆ ಬಿದಿರು. ಅರೇ!!!  ಬಿದಿರು ಅಂದಾಕ್ಷಣ  ಕಣಿಲೆಯ ಬಗ್ಗೆ ಗೊತ್ತಿಲ್ಲದವರಿಗೆ  ಬಿದಿರು ಗೊತ್ತಿಲ್ಲದೆ ಇರಲಿಕ್ಕಿಲ್ಲ ಅಲ್ವಾ. ಮಳೆಗಾಲದಲ್ಲಿ ಹುಟ್ಟುವ ಬಿದಿರಿನ ‘ಪಿಳ್ಳೆ’ ಅಥವಾ ಬಿದಿರಿನ ಮೊಳಕೆ ಯೇ  ‘ಕಣಿಲೆ’.ಇದನ್ನು  ತುಳುನಾಡು ಮತ್ತು ಮಲೆನಾಡಿನಲ್ಲಿ ಮತ್ತಿತ್ತರ ಬಿದಿರು ಬೆಳೆಯುವ ಪ್ರದೇಶದಲ್ಲಿ  ಆಹಾರವಾಗಿ ಉಪಯೋಗಿಸುತ್ತಾರೆ.
 
 ಕಣಿಲೆಯಲ್ಲಿ ಏನೇನಿದೆ?
 
           ಬಿದಿರಿನಲ್ಲಿ ಖನಿಜಗಳು, ವಿಶೇಷವಾಗಿ ಮ್ಯಾಂಗನೀಸ್ ಮತ್ತು ತಾಮ್ರ ಸಾಕಷ್ಟು ಪ್ರಮಾಣದಲ್ಲಿ ಇರುತ್ತವೆ. ಜೊತೆಗೆ ಕ್ಯಾಲ್ಸಿಯಂ, ಕಬ್ಬಿಣ ಮತ್ತು ರಂಜಕದಂತಹ ಕೆಲವು ಅಗತ್ಯ ಖನಿಜಗಳು ಮತ್ತು ಎಲೆಕ್ಟ್ರೋಲೈಟ್ಗಳೂ ಸಣ್ಣ ಪ್ರಮಾಣದಲ್ಲಿ ಇರುತ್ತವೆ. ಮ್ಯಾಂಗನೀಸ್ ಅನ್ನು ಮಾನವ ಶರೀರವು ಆಂಟಿಆಕ್ಸಿಡೆಂಟ್ ಎಂ.ಝೈಮ್ ಆಗಿ ಬಳಸಿಕೊಳ್ಳುತ್ತದೆ. ಕೆಂಪು ರಕ್ತಕಣಗಳ ಉತ್ಪಾದನೆಗೆ ತಾಮ್ರ ಅಗತ್ಯವಿದೆ. ಜೀವಕೋಶಗಳ ಉಸಿರಾಟದಲ್ಲಿ ಮತ್ತು ಕೆಂಪು ರಕ್ತಕಣಗಳು ರೂಪುಗೊಳ್ಳುವಲ್ಲಿ ಕಬ್ಬಿಣ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ.
ಕಣಿಲೆಯಲ್ಲಿ ಪೊಟ್ಯಾಷಿಯಂ ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ. ಅಂದರೆ‌100 ಗ್ರಾಂ ತಾಜಾ ಕಣಿಲೆಯು 533ಮಿ.ಗ್ರಾಂ ಅಥವಾ ಶರೀರದ ದೈನಂದಿನ ಅಗತ್ಯದ ಶೇಕಡಾ 11ರಷ್ಟು ಪೊಟಾಷ್ಯಿಯಂ ಅನ್ನು ಒಳಗೊಂಡಿದೆ. ಕಣಿಲೆಯ ನಾರಿನಲ್ಲಿ ಪಿಷ್ಟೇತರ ಕಾರ್ಬೋಹೈಡ್ರೇಟ್ ಗಳು ಮಿತವಾದ ಪ್ರಮಾಣದಲ್ಲಿ ಇರುತ್ತವೆ. ಈ ನಾರು ಮಲಬದ್ಧತೆಯನ್ನು ನಿವಾರಿಸುವಲ್ಲಿ ನೆರವಾಗುತ್ತದೆ. ಹೆಚ್ಚಿನ ನಾರಿನಂಶವು ಆಹಾರದಲ್ಲಿರುವ ವಿಷಯುಕ್ತ ಪದಾರ್ಥಗಳಿಂದ ಕರುಳನ್ನು ರಕ್ಷಿಸುವ ಮೂಲಕ ಗುದದ್ವಾರದ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ ಎನ್ನುತ್ತದೆ ಒಂದು ಅಧ್ಯಯನ. ಇದರಲ್ಲಿ ಥಿಯಾಮಿನ್, ರಿಬೋಫ್ಲಾವಿಯನ್ , ನಿಯಾಸಿನ್, ವಿಟಮಿನ್ ಬಿ-6(ಪೆರಿಡೊಕ್ಸಿನ್) ಮತ್ತು ಪ್ಯಾಂಟೊಥಿಸಿಕ್ ಆಸಿಡ್ ನಂತಹ ಬಿ-ಕಾಂಪ್ಲೆಕ್ಸ್ ಗುಂಪಿಗೆ ಸೇರಿದ ವಿಟಾಮಿನ್ ಗಳು ಹೇರಳವಾಗಿದೆ. ಶರೀರದಲ್ಲಿನ ಜೀವಕೋಶಗಳಲ್ಲಿ ಹಾರ್ಮೋನ್ ಗಳ ಉತ್ಪತ್ತಿ ಮತ್ತು ಪಚನ ಕಾರ್ಯಗಳಿಗೆ ಇವು ಅತ್ಯಗತ್ಯ ವಾಗಿದೆ.
 
ಇದರ ಬಳಕೆ ಹೇಗೆ?
 
ವರ್ಷಕ್ಕೊಮ್ಮೆಯಾದರೂ ತಿನ್ನಲೇಬೇಕಾದ ...
 
     ಬಿದಿರಿನ ಪೊದೆಯಲ್ಲಿ ಬೆಳೆಯುವ ಕಣಿಲೆಯನ್ನು ಕತ್ತರಿಸಿ ನಂತರ ಅದರ ಸಿಪ್ಪೆಯನ್ನು ತೆಗೆದರೆ ಸಿಗುವ ಬೆಣ್ಣೆಯಂತಹ ಬಣ್ಣದ ಭಾಗವನ್ನು ಚಕ್ರಾಕಾರವಾಗಿ ತೆಳುವಾಗಿ ಕತ್ತರಿಸಿ ಅದರಿಂದ ನಾನಾ ತಿಂಡಿಗಳನ್ನು ಮಾಡಬಹುದು. ಆದರೆ ಆಗ ತಾನೆ ಹೆಚ್ಚಿದ ಕಣಿಲೆ ಉಪಯೋಗಿಸುವಂತಿಲ್ಲ. 12 ಗಂಟೆಗಳ ಕಾಲವಾದರೂ ನೀರಲ್ಲಿ ಇಟ್ಟು ಉಪಯೋಗಿಸಬೇಕು. ಇದನ್ನು ವರ್ಷಪೂರ್ತಿ ಸಂಸ್ಕರಿಸಿ ಇಡಲು ಹೆಚ್ಚಿನವರು ಉಪ್ಪು ಹಾಕಿ ಭರಣಿಯಲ್ಲೋ, ಪ್ಲಾಸ್ಟಿಕ್ ಡಬ್ಬದಲ್ಲೋ ಇಡುತ್ತಾರೆ. ಕಣಿಲೆಯಿಂದ ಉಪ್ಪಿನಕಾಯಿ ಮಾಡುತ್ತಾರೆ.  ಮೊಳಕೆ ಬರಿಸಿದ ಹೆಸರುಕಾಳಿನೊಂದಿಗೆ ಕಣಿಲೆಯನ್ನು ಕೊಚ್ಚಿ ಹಾಕಿದ ಪದಾರ್ಥ ಬಲು ರುಚಿಕರ. ಆದರೆ ಬಿದಿರಿನ ವಿನಾಶದಿಂದ ಕಳಲೆ /ಕಣಿಲೆ ಕಾಣುವುದೇ ವಿರಳವಾಗಿದೆ.
 
ಕೇಳಿ 'ಕಳಲೆ' ಖಾದ್ಯದ ರುಚಿ | Prajavani
 
100ಗ್ರಾಂ ಕಣಿಲೆಯಲ್ಲಿ
ಕಾರ್ಬೋಹೈಡ್ರೇಟ್- 5.2ಗ್ರಾಂ
ಕೊಬ್ಬು -0.3ಗ್ರಾಂ
ಪೊಟಾಷ್ಯಿಯಂ-533 ಮಿ.ಗ್ರಾಂ
ಫೈಬರ್-2.2ಗ್ರಾಂ
ಶುಗರ್-3ಗ್ರಾಂ
ಪ್ರೋಟೀನ್-2.6ಗ್ರಾಂ
ಕ್ಯಾಲೋರಿ-27
ಕ್ಯಾಲ್ಸಿಯಂ-1%
ಕಬ್ಬಿಣ-0.5 ಮಿ.ಗ್ರಾಂ
ವಿಟಮಿನ್ ಸಿ -4 ಮಿ.ಗ್ರಾಂ
ವಿಟಮಿನ್ ಬಿ6-0.24 ಮಿ.ಗ್ರಾಂ
 
    ಕಣಿಲೆ ಆಹಾರ ಪದಾರ್ಥವಾಗಿ ಉಪಯೋಗವಾದರೆ ಹುಲ್ಲಿನ ಜಾತಿಗೆ ಸೇರಿದ ಬಿದಿರು ಇನ್ನಿತರ ರೀತಿಯಲ್ಲಿ ಉಪಯೋಗವಾಗಿವೆ. ಹೆಚ್ಚಿನ ಎಲ್ಲ ತಳಿಯ ಬಿದಿರು ಗಳಲ್ಲಿ ಮುಳ್ಳುಗಳಿರುತ್ತದೆ ಆದರೆ ಮುಳ್ಳುಗಳೇ ಇಲ್ಲದ ಬಿದಿರು ಇದೆ. 
ಭವಿಷ್ಯದ ಉದ್ದಿಮೆ ಬಿದಿರು Vitta 7 ಗಣೇಶ ...
 
These leak-proof bamboo bottles are breaking the internet | The ...
 
    ಅತಿ ವೇಗವಾಗಿ ಬೆಳೆಯುವ ಬಿದಿರು ಕಾಗದ ತಯಾರಿಯಿಂದ  ಹಿಡಿದು ಬುಟ್ಟಿಗಳ ತಯಾರಿ, ಮನೆ, ಹಟ್ಟಿ, ಕೊಟ್ಟಿಗೆ ಮತ್ತಿತ್ತರ ದಿನ ಉಪಯೋಗಿ ಬಳಕೆಯಲ್ಲಿದೆ. ಬಿದಿರುಗಳನ್ನು ತೋಡಿನ ಬದಿಯಲ್ಲಿ ನೆಡುವುದರಿಂದ ಮಣ್ಣು ಸವೆಯುದನ್ನು ತಡೆಗಟ್ಟಬಹುದು. ಹಳದಿ ಬಣ್ಣದ ಮಧ್ಯದಲ್ಲಿ ಹಸಿರು ಪಟ್ಟಿ ಇರುವ ಸುಂದರ ಬಿದಿರು ‘ಸುವರ್ಣ ಬಿದಿರು’.ಇದನ್ನು ಅಂದಕ್ಕಾಗಿ ಉದ್ಯಾನವನಗಳಲ್ಲಿ ಬೆಳೆಸುತ್ತಾರೆ. ಕೊಳಲು ತಯಾರಿಸುವ ಬಿದಿರಿಗೆ ಮುಳ್ಳಿಲ್ಲ. ಅದಕ್ಕೆ ಸಂಸ್ಕೃತ ದಲ್ಲಿ ‘ವೇಣು’ ಎಂಬ ಹೆಸರಿದೆ. ಬಿದಿರುಗಳ ನಾನಾ ತಳಿಗಳಲ್ಲಿ ಅತ್ಯಂತ ಸುಂದರವಾಗಿ ಕಲಾತ್ಮಕವಾಗಿ ಗಂಟು ಗಂಟುಗಳ ಕೆತ್ತನೆಯ ಮಾದರಿಯಲ್ಲಿ ಬೆಳೆಯುವ ಬಿದಿರು ‘ಗಣೇಶ ಬಿದಿರು’. ಇದರ ಕಲಾತ್ಮಕ ಸೌಂದರ್ಯ ಆಪ್ಯಾಯಮಾನವಾದುದು. ಸುಮಾರು 6 ಅಂಗುಲಗಳ ಅಂತರದಲ್ಲಿ ಉಬ್ಬು ತಗ್ಗುಗಳ ಗಂಟುಗಳು ಪ್ರಾಕೃತಿಕವಾದ ಕೆತ್ತನೆಯಂತಿರುತ್ತದೆ. ಉತ್ತಮವಾಗಿ ಬೆಳೆದ ಒಂದೇ ಅಂತರದ ಗಂಟುಗಳ ಗಣೇಶ ಬಿದಿರು ನಾಲ್ಕು ತುಂಡುಗಳ ಮೇಲೆ ಹಲಗೆ ಅಥವಾ ಪ್ಲೈವುಡ್ ಜೋಡಿಸಿದರೆ ಸುಂದರವಾದ ಮೇಜು ಅಥವಾ ಡೈನಿಂಗ್ ಟೇಬಲ್ ತಯಾರಿಸಬಹುದಾಗಿದೆ. ಉತ್ತಮ ತಳಿಯ ಬಿದಿರಿಗೆ ಬಹು ಬೇಡಿಕೆ ಇದೆ.ನಮ್ಮ ದೇಶವು ಕೋಟಿಗಟ್ಟಲೆ ಹಣ ವ್ಯಯಿಸಿ ಅಗರಬತ್ತಿಗೆ ಬಳಸುವ ಬಿದಿರು ಕಡ್ಡಿಯನ್ನು ಹೊರದೇಶಗಳಾದ ಚೀನಾ ಮತ್ತು ವಿಯೆಟ್ನಾಂ ನಿಂದ ಆಮದು ಮಾಡಿಕೊಳ್ಳುತ್ತಿದೆ.
 
bamboo: Latest News & Videos, Photos about bamboo | The Economic Times
 
ಇದರ ಬದಲು ಇಂತಹ ಹಲವಾರು  ಜಾತಿಯ ಆಯಾ ಪ್ರದೇಶದ ಹವಾಗುಣ ಮಣ್ಣಿಗೆ ಅನುಗುಣವಾಗಿ ಬಿದಿರನ್ನು ಎಕರೆಗಟ್ಟಲೆ ಭೂಮಿ ಹೊಂದಿರುವ  ರೈತರು ವಾಣಿಜ್ಯ ಬೆಳೆಯಾಗಿ ಬೆಳೆದು ನಾಲ್ಕೈದು ವರ್ಷಗಳ ನಂತರ ಉತ್ತಮ ಲಾಭಗಳಿಸಬಹುದು. ನಮಗೆಲ್ಲರಿಗೂ ತಿಳಿದಿರುವಂತೆ ಅಸ್ಸಾಂನಲ್ಲಿ ಪ್ಲಾಸ್ಟಿಕ್ ನ ಬದಲು ಪರಿಸರ ಸ್ನೇಹಿ ಬಿದಿರಿನಿಂದ ತಯಾರಿಸಿದ ನೀರಿನ ಬಾಟಲ್ ಬಹಳ ಪ್ರಸಿದ್ಧಿ ಪಡೆದಿದೆ. ಇಷ್ಟೆ ಅಲ್ಲದೆ ಬಿದಿರಿನಿಂದ ಗಾಳಿಪಟಕ್ಕೆ ಉಪಯೋಗಿಸುವ ಬಿದಿರಿನ ಕಡ್ಡಿ ,ಬಿದಿರಿನ ಸ್ಟ್ರಾ  ಮುಂತಾದವುಗಳನ್ನು ತಯಾರಿಸಬಹುದಾಗಿದೆ. ಹೀಗೆ ಬಿದಿರಿನ ಮಹತ್ವ ವನ್ನು ಅರಿತ ಕೇಂದ್ರ ಸರ್ಕಾರ  ಬಿದಿರಿನ ಬೆಳೆಗೆ ಉತ್ತಮ ಪ್ರೋತ್ಸಾಹ ನೀಡುವ ಸಲುವಾಗಿ National Bamboo Mission ಎಂಬ ಬೃಹತ್ ಯೋಜನೆ ಹಾಕಿಕೊಂಡಿದೆ.
 
 
-Supreetha Bhandary Soorinje
 

1 thought on “ಅಳಿವಿನಂಚಿನಲ್ಲಿರುವ ಬಿದಿರು ಎಂಬ ಅರಣ್ಯ ಉತ್ಪನ್ನ : ‘ಸಸ್ಯಲೋಕ- ಆಹಾರ ಮತ್ತು ವಿಚಾರ’

Leave a Reply

Your email address will not be published. Required fields are marked *