January 18, 2025
bana tala ala bantwala

ದಕ್ಷಿಣ ಕನ್ನಡ ಜಿಲ್ಲೆಯ “ಬಂಟ್ವಾಳ” ಎಂಬ ಹೆಸರಿನಲ್ಲಿ “ಬನ” ಮತ್ತು “ತಲ”ಎಂಬ ಎರಡು ಪದಗಳು ಅಡಗಿವೆ. ಬನ ಎಂದರೆ ನಾಗಬನ.ತಲ ಎಂದರೆ ಆಳ ಅಥವಾ ಗುಳಿಯ ಪ್ರದೇಶ.ಈ ಎರಡು ಪದಗಳನ್ನು ಜೋಡಿಸಿ ಬನತಲ,ಬನ್ತಲ,ಬಂತಲ,ಬಂಟಲ,ಬಂಟಾಲ್ ಎಂದರು. ಕ್ರಮೇಣ ಬ್ರಿಟಿಷರ ಕಾಲದಲ್ಲಿ “ಬಂಟ್ವಾಳ”ಎಂದು ಕಡತಗಳಲ್ಲಿ ಬರೆಯಲಾಗಿದೆ.

ತುಲುನಾಡಿನ ಊರುಗಳ ಹೆಸರುಗಳನ್ನು ಅಲ್ಲಿನ ಹಿನ್ನೆಲೆ,ಪ್ರಾಕೃತಿಕ ಲಕ್ಷಣಗಳಿಗೆ ಅನುಗುಣವಾಗಿ ಕರೆದಿದ್ದಾರೆ.ಬಂಟ್ವಾಳ ಎಂಬ ಹೆಸರನ್ನು ಕೂಡಾ ಅದರಂತೆ ಕರೆದಿದ್ದಾರೆ.ಬಂಟ್ವಾಳವು ತಳ ಪ್ರದೇಶದಲ್ಲಿ ಇದೆ.ತಳ ಪ್ರದೇಶದಲ್ಲಿ ನಾಗಬನಗಳು ಇವೆ.ನಾಗಬನಗಳು ಇರುವ ತಳ ಪ್ರದೇಶವೇ ಬಂಟ್ವಾಳ.ತಳ ಪ್ರದೇಶ ಆಗಿದ್ದರಿಂದಲೇ ಮಳೆಗಾಲದಲ್ಲಿ ಬಂಟ್ವಾಳ ಪೇಟೆ ಪ್ರವಾಹಕ್ಕೆ ಸಿಲುಕುವುದು ಸ್ವಾಭಾವಿಕ.

 

ಎತ್ತರದಲ್ಲಿ ಇರುವ ವೆಂಕಟರಮಣ ಸ್ವಾಮಿಕಾಲೇಜಿನಿಂದ ಕೆಳಗಿಳಿದು ಬಂಟ್ವಾಳಕ್ಕೆ ಬರಬೇಕು. ಅದೇ ರೀತಿ ಎತ್ತರದ ಕುಪ್ರಾಡಿ,ಕೆಂಪುಗುಡ್ಡೆ,ಅಮ್ಮಾಡಿಯಿಂದ ಬಂಟ್ವಾಳಕ್ಕೆ ಬರುವಾಗಲೂ ಕೆಳಮುಖವಾಗಿ ಬರಬೇಕು. ಬಂಟ್ವಾಳದ ಮೂರು ದಿಕ್ಕುಗಳು ಎತ್ತರದ ಗುಡ್ಡಗಳಿಂದ ಆವರಿಸಿದೆ.ಈ ಎತ್ತರದ ಪ್ರದೇಶದ ತಳದಲ್ಲಿದೆ ಅಜೆತಲ ಅಥವಾ ಅಜೆಕಲ ನಾಗಬನ .”ಅಜೆ”ಎಂದರೆ ತುಲು ಭಾಷೆಯಲ್ಲಿ ಎತ್ತರದ ಗುಡ್ಡ ಪ್ರದೇಶ. “ಕಲ”ಎಂದರೆ ತಲ ಪ್ರದೇಶ.ಬಂಟ್ವಾಳ ಪೇಟೆಯ ಮೂರು ದಿಕ್ಕುಗಳಲ್ಲಿ ಎತ್ತರದ ಗುಡ್ಡ ಪ್ರದೇಶ ಇದ್ದರೆ ಕೆಳಗೆ ನೇತ್ರಾವತಿ ಹೊಳೆ ಹರಿಯುತ್ತದೆ.

ಅಜೆಕಲ ನಾಗಬನವೇ ಬಂಟ್ವಾಳದ ಕೇಂದ್ರ ಬಿಂದು.ಇವೆರಡೂ ಒಂದೇ ರೇಖೆಯಲ್ಲಿ ಇದೆ.ಅಜೆತಲ| ಅಜೆಕಲ ನಾಗಬನದ ತಲ ಪ್ರದೇಶವೇ ಬನತಲ,ಬನ್ತಲ, ಬಂತಲ,ಬಂಟಲ,ಬಂಟಾಲ್ ಆಗಿದೆ.”ಬಂತಲ” ಪದವನ್ನು ಬ್ರಿಟಿಷರ ಕಾಲದಲ್ಲಿ “ಬಂಟಾಲ್”ಎಂದು ಉಚ್ಛಾರ ಮಾಡಿದ್ದಾರೆ.ಅವರ ಕಾಲದಲ್ಲೇ “ಬಂಟ್ವಾಳ”ಎಂದು ಕಡತಗಳಲ್ಲಿ ಅಚ್ಚಿ ಮಾಡಿದರು.

ಬಂಟ್ವಾಳ್ (BANTWAL) ಇಲ್ಲಿ “W” Spelling ಅಳಿಸಿದರೆ ಬನ್ತಲ್,ಬಂಟಾಲ್ ಹೆಸರು ಸಿಗುತ್ತದೆ. ಪುತ್ತೂರಿನಲ್ಲಿ ಬನಗಳಿರುವ ಊರಿಗೆ ಬನ್ನೂರು ಎಂದು ಕರೆಯುತ್ತಾರೆ.ಮಂಗಳೂರಿನ ನಾಗುರಿ ಎಂಬ ಗುಳಿ ಪ್ರದೇಶದಲ್ಲಿ ನಾಗಬನ ಇದೆ.ಕೊಳಕ್ಕೆ ಇರ್ವತ್ತೂರಿನ “ಬಂಟಾಲ್” ಎಂಬ ಮನೆಯ ತಳ ಪ್ರದೇಶದಲ್ಲಿ ನಾಗ ಬನ ಇದೆ.ಹೊಳೆ ಬೈಲ್ ಗದ್ದೆ ಇದೆ.ಒಟ್ಟಿನಲ್ಲಿ ಬಂಟ್ವಾಳವು ಗುಡ್ಡಗಳ ತಳದಲ್ಲಿದೆ.ತಳದಲ್ಲಿ ನಾಗಬನಗಳಿವೆ ಎಂದು ಹೆಸರು ಹೇಳುವುದು.

ಇನ್ನೂ ಮುಂದುವರಿದು ಹೋದಾಗ ಬಂಟ್ವಾಳ ಎಂಬ ಹೆಸರಲ್ಲಿ ಇನ್ನೊಂದು ಪದವು ಸಿಗುತ್ತದೆ.ಅದುವೇ”ಅಲ”. ಅಲ ಎಂದರೆ ನೀರು ಎಂದರ್ಥ.ಬನ+ತಲ+ಅಲ=ಬನ್ತಲ. ನಾಗಬನ,ತಳಪ್ರದೇಶ,ಮತ್ತು ಹರಿದು ಹೋಗುವ ನೀರು. ಎತ್ತರದ ಪ್ರದೇಶಗಳಿಂದ ಬೀಳುವ ನೀರು ತಳದಿಂದ ನಾಗಬನದಲ್ಲೇ ಹರಿದು ನೇತ್ರಾವತಿ ಸೇರುತ್ತದೆ.

Leave a Reply

Your email address will not be published. Required fields are marked *