November 22, 2024
Untitled-1

     ಪ್ರಪಂಚದ ಮೂಲೆಮೂಲೆಗಳಲ್ಲಿರುವ ಪಕ್ಷಿಗಳಿಗೆ ತಮ್ಮ ಕುಂಚದಿಂದ, ತಮ್ಮ ಬಣ್ಣದಿಂದ ಜೀವ ತುಂಬುವ, ನೋಡುಗರು ಆ ಚಿತ್ರದ ನೈಜತೆಗೆ, ಜೀವಕಳೆಗೆ ಬೆರಗಾಗಿ ಮೂಗಿನ ಮೇಲೆ ಬೆರಳಿಡುವಂತೆ ಮಾಡುವ ಅದ್ಭುತ ಕಲಾವಿದ ನಮ್ಮ ಭಂಡಾರಿ ಕುಟುಂಬದ ನಾರಾಯಣ ಭಂಡಾರಿ ರಾಮನಗರ
ಜಲವರ್ಣ ಕಲಾಪ್ರಕಾರದಲ್ಲಿ ಡಿಪ್ಲೊಮಾ ಪದವಿ ಪಡೆದಿರುವ ಇವರು ರಾಮನಗರದ ಭಾರತೀಯ ಸಂಸ್ಕೃತಿ ವಿದ್ಯಾಪೀಠ ಪ್ರೌಢಶಾಲೆ ಯಲ್ಲಿ 38 ವರ್ಷಗಳ ದೀರ್ಘಕಾಲ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ರಾಮನಗರದಲ್ಲಿ ತಮ್ಮ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.ಇವರು ಮೂಲತಃ ಮಂಗಳೂರಿನ ಕಟೀಲು ಗ್ರಾಮದ ದಿವಂಗತ ಮುತ್ತಯ್ಯ ಮತ್ತು ಪದ್ಮಾವತಿ(ಅಪ್ಪಿ) ಭಂಡಾರಿ ಯವರ ಸುಪುತ್ರ.
ಇವರು ಜಲವರ್ಣದಲ್ಲಿ ನಿಸರ್ಗದ ಸೌಂದರ್ಯ, ಪರಿಸರದ ರಮಣೀಯತೆಯನ್ನು ತಮ್ಮ ಕುಂಚದಲ್ಲಿ ತನ್ಮಯತೆಯಿಂದ ಚಿತ್ರಿಸಿದ್ದಾರೆ. ಪ್ರಪಂಚದ ಸುಮಾರು 800ಕ್ಕೂ ಹೆಚ್ಚು ಪ್ರಭೇದಗಳ ಪಕ್ಷಿಗಳ ಚಿತ್ರಗಳನ್ನು ತಮ್ಮ ಕಲಾಕುಸುರಿಯಲ್ಲಿ ಚಿತ್ರಿಸಿರುವ ಇವರು ಅವುಗಳಿಗೆ ಅಕ್ಷರಶಃ ಜೀವ ತುಂಬಿದ್ದಾರೆ. ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುವ ಅವರ ಚಿತ್ರಗಳು ಅವರಲ್ಲಿರುವ ಕಲಾಪ್ರೌಢಿಮೆ ಮತ್ತು ಶ್ರದ್ಧಾಭಕ್ತಿಯನ್ನು ಬಸಿದುಕೊಂಡು ಜೀವಕಳೆಯಿಂದ ನಳನಳಿಸುತ್ತವೆ.
ಅವರು ಈವರೆಗೆ ಹಲವಾರು ಚಿತ್ರಕಲಾ ಪ್ರದರ್ಶನವನ್ನು ನೀಡಿದ್ದಾರೆ. ಅಲ್ಲಿ ನಿಮಗೆ ಅವರ ಚಿತ್ರಕಲೆಯನ್ನು ಅಸ್ವಾದಿಸುವುದರ ಜೊತೆಜೊತೆಗೆ ಪಕ್ಷಿಪ್ರಪಂಚದ ಅತೀ ಸೂಕ್ಷ್ಮಾತಿಸೂಕ್ಷ್ಮ ವಿವರಗಳು, ಪಕ್ಷಿಗಳ ಜೀವನಕ್ರಮ, ಆಹಾರ ಪದ್ಧತಿ, ಚಲನವಲನಗಳನ್ನು ಬಿಡಿಬಿಡಿಯಾಗಿ ವಿವರಿಸುತ್ತಾರೆ.ಪ್ರಪಂಚದ ಅತೀ ದೊಡ್ಡ ಪಕ್ಷಿಗಳು,ಅತೀ ಚಿಕ್ಕ ಪಕ್ಷಿಗಳು, ಸಸ್ಯಾಹಾರಿ ಪಕ್ಷಿಗಳು, ಮಾಂಸಾಹಾರಿ ಪಕ್ಷಿಗಳು, ಸುಂದರವಾದ ಪಕ್ಷಿಗಳು, ಆಕರ್ಷಕವಾಗಿ ಹಾರಾಡುವ,ಠೀವಿಯಿಂದ ನಡೆದಾಡುವ ಪಕ್ಷಿಗಳು, ಕಾಲಗರ್ಭದಲ್ಲಿ ಉಡುಗಿ ಹೋಗಿರುವ ಪಕ್ಷಿಗಳು, ವಿನಾಶದ ಅಂಚಿನಲ್ಲಿರುವ ಪಕ್ಷಿಗಳು ಹೀಗೆ ಪ್ರತಿಯೊಂದನ್ನು ತುಂಬಾ ಅಕ್ಕರೆಯಿಂದ ಚಿತ್ರಿಸಿರುವ ಇವರು ಅವುಗಳ ಬಗ್ಗೆ ಅಷ್ಟೇ ಪ್ರೀತಿಯಿಂದ ವಿವರಿಸುವುದನ್ನು ನೋಡಿದರೆ ಇವರು ಯಾವುದೇ ಪಕ್ಷಿಶಾಸ್ತ್ರಜ್ಞರಿಗೂ ಕಡಿಮೆ ಇಲ್ಲ ಎಂಬುದು ವೇದ್ಯವಾಗುತ್ತದೆ.
ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಇವರು ಸೂಕ್ಷ್ಮ ಚಿತ್ರಕಲೆ-ಮೈಕ್ರೋ ಆರ್ಟ್ ನಲ್ಲಿಯೂ ಪರಿಣಿತಿ ಹೊಂದಿದ್ದಾರೆ. ಅಕ್ಕಿಕಾಳು,ಬೇಳೆ,ಸಾಸಿವೆ ಅಷ್ಟೇ ಯಾಕೆ ಗಸಗಸೆ ಕಾಳಿನ ಮೇಲೂ ತಮ್ಮ ಚಿತ್ರಕಲೆಯನ್ನು ಅರಳಿಸಿದ್ದಾರೆ.
ಇವರ ಕಲಾಪ್ರತಿಭೆಯನ್ನು ಗುರುತಿಸಿ ಹಲವಾರು ಪ್ರಶಸ್ತಿ ಸನ್ಮಾನಗಳು ಇವರನ್ನು ಅರಸಿಕೊಂಡು ಬಂದಿವೆ. 2017ನೇ ಸಾಲಿನ ರಾಮನಗರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಇವರಿಗೆ ಲಭಿಸಿರುವುದು ಇವರಲ್ಲಿರುವ ಕಲಾವಿದನಿಗೆ ಸಂಧ ಗೌರವವಾಗಿದೆ.ನವೆಂಬರ್ 1 ರಂದು ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗಳಾದ B.R. ಮಮತಾರವರು ನಾರಾಯಣ ಭಂಡಾರಿಯವರ ನಿವಾಸಕ್ಕೆ ಬೇಟಿ ನೀಡಿ ಅವರ ಚಿತ್ರಕಲೆಯನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸಿ, ಅವರ ಚಿತ್ರಗಳ ಬಗೆಗಿನ ಮಾಹಿತಿಗಳನ್ನು ಕೇಳಿ ತಿಳಿದುಕೊಂಡು ಹರ್ಷ ವ್ಯಕ್ತಪಡಿಸಿ ಅವರನ್ನು ಅಭಿನಂದಿಸಿದರು.
ತಮ್ಮ 69 ವರ್ಷ ವಯಸ್ಸಿನಲ್ಲಿಯೂ ಶಾಲಾಕಾಲೇಜುಗಳ ಆಡಳಿತ ಮಂಡಳಿಯವರು,ಸಂಘ ಸಂಸ್ಥೆಗಳು ಅವಕಾಶ ನೀಡಿದರೆ ತಮ್ಮ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲು ತಾವೇ ಖುದ್ದಾಗಿ ಬಂದು ಪ್ರದರ್ಶನದೊಂದಿಗೆ ತಮ್ಮಲ್ಲಿರುವ ಮಾಹಿತಿಗಳನ್ನು ವಿದ್ಯಾರ್ಥಿಗಳೊಂದಿಗೆ, ಸಾರ್ವಜನಿಕರೊಂದಿಗೆ ಹಂಚಿಕೊಂಡು ಅವರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸಲು ಶ್ರಮಿಸುತ್ತಿದ್ದಾರೆ.
ಚಿತ್ರಕಲಾ ಪ್ರದರ್ಶನ ಏರ್ಪಡಿಸಲು ಇಚ್ಛೆಯುಳ್ಳವರು ಅವರ 8217814223 ಸಂಖ್ಯೆಗೆ ಕರೆ ಮಾಡಬಹುದು
ಇಂತಹ ಒಬ್ಬ ಅದ್ಬುತ ಕಲಾವಿದ ನಮ್ಮ ಸಮಾಜದಲ್ಲಿರುವುದು ನಮ್ಮ ಭಂಡಾರಿ ಕುಟುಂಬದ ಹೆಮ್ಮೆಯೇ ಸರಿ.ಅವರಿಗೆ ಭಗವಂತನು ಆಯುರಾರೋಗ್ಯ ಭಾಗ್ಯ ಕರುಣಿಸಲಿ,ಅವರಿಗೆ ಪಕ್ಷಿ ಮತ್ತು ಪರಿಸರದ ಮೇಲಿರುವ ವ್ಯಾಮೋಹ ನೂರ್ಮಡಿಯಾಗಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನದುಂಬಿ ಹಾರೈಸುತ್ತದೆ.

ಮಾಹಿತಿ: ಪ್ರಕಾಶ್ ಭಂಡಾರಿ ಕಟ್ಲಾ
ನಿರೂಪಣೆ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ

1 thought on “ಬಣ್ಣದ ಮನಸ್ಸಿನ ಸೂಕ್ಷ್ಮ ಕಲಾವಿದ ನಾರಾಯಣ ಭಂಡಾರಿ

  1. We are very proud of you Mr. Narayana Bhandary Sir. Thank you on behalf of entire BHANDARY samaja for your hard earned fame and recognisation. Thank you once again with great respect n regards.

Leave a Reply

Your email address will not be published. Required fields are marked *