ಭಾಗ -1 (ಓದಲು ಇಲ್ಲಿ ಕ್ಲಿಕ್ ಮಾಡಿ)
ಬೆಳೆಯಬೇಕಾಗಿದೆ ಬೆಳೆದವರು ತಲೆಯತ್ತಿ ನೋಡುವಂತೆ….-✍ ವಿಜಯ್ ಭಂಡಾರಿ ನಿಟ್ಟೂರು, ಹೊಸನಗರ
ಯುವ ಸಂಪತ್ತು ಹೀಗೊಂದು ಪದ ಕೇಳಿದೊಡನೆ ಒಂದು ಉತ್ಸಾಹ ಅರಿವಿಲ್ಲದಂತೆ ಬಂದುಬಿಡುತ್ತದೆ. ಬಹುಶಃ ಕ್ಷೌರಿಕ ವೃತ್ತಿಯಲ್ಲಿ ಶೇಕಡಾ 70 ರ ಮೇಲೆ ಯುವಕರು ಇದ್ದಾರೆ. ಇಷ್ಟೊಂದು ಪ್ರಮಾಣದ ಯುವ ಸಮೂಹ ಬೇರೆ ವೃತ್ತಿಯಲ್ಲಿ ಕಾಣಸಿಗುವುದು ಅಪರೂಪವೇ ಸರಿ ಹೀಗಿದ್ದು ಸಂಘಟನೆಯ ಗಟ್ಟಿತನದಲ್ಲಿ ಕ್ಷೌರಿಕ ಸಮಾಜ ಎಲ್ಲೋ ಹಿಂದೆ ಬಿದ್ದಿರುವಂತೆ ಕಾಣುತ್ತಿರುವುದು ಸೋಜಿಗ. ಯಾಕೆ ಈ ಮಾತು ಎಂದರೆ ಪದಬಳಕೆಯ ವಿರುದ್ದದ ಹೋರಾಟ ಇರಬಹುದು ಅಥವಾ ಇನ್ನಿತರ ಬೇಡಿಕೆಯ ಆಗ್ರಹದಲ್ಲಿಯೇ ಇರಬಹುದು ಎಲ್ಲೋ ಒಂದು ಪ್ರದೇಶಕ್ಕೆ ಸೀಮಿತವಾಗಿ ನೆಡೆಯುತ್ತದೆಯೇ ಹೊರತಾಗಿ ಎಲ್ಲರೂ ಒಂದುಗೂಡಿ ನೆಡೆಸುವ ಪ್ರತಿಭಟನೆ ಕಾಣಸಿಗುವುದು ಬಹಳ ವಿರಳ. ಇದರಿಂದ ಸಮಾಜಕ್ಕೆ ಹೋಗುವ ಸಂದೇಶ ಕ್ಷೌರಿಕರಲ್ಲಿ ಒಗ್ಗಟ್ಟಿನ ಕೊರತೆ. ಇದೇ ಕಾರಣಕ್ಕಾಗಿ ಬಹುಶಃ ರಾಜಕೀಯ ಮುಖಂಡರು ಒಂದು ಮೂಲೆಗೆ ಸರಿಸಿ ಅಲ್ಲಿಯೇ ಬಿಟ್ಟಿರುವುದು ಎಂದೆನಿಸುತ್ತದೆ.
ಇಷ್ಟೊಂದು ಪ್ರಮಾಣದ ಯುವಕರ ಗುಂಪು ಒಂದಾಗಲೇಬೇಕಾದ ಅನಿವಾರ್ಯತೆ ಇದೆ.
ಒಬ್ಬ ಪ್ರಭಾವಿ ರಾಜಕಾರಣಿಯ ಬಳಿ ಅಹವಾಲುಗಳನ್ನು ತೋಡಿಕೊಂಡು ಸಹಾಯಕ್ಕಾಗಿ ಬೇಡಿ ಹೋದಾಗ ಆತ ನೇರವಾಗಿಯೇ ಓಟುಬ್ಯಾಂಕಿನ ರಾಜಕಾರಣವನ್ನು ಪ್ರದರ್ಶಿಸಿ ನಿಮ್ಮಿಂದ ಏನು ಆಗುವುದಿಲ್ಲ ಎಂದು ಹೇಳಿ ಕಳುಹಿಸುವಾಗ, ನಮ್ಮಿಂದ ಅವರೊ ಅಥವಾ ಅವರಿಂದ ನಾವೂ ಎಂಬ ಜಿಜ್ಞಾಸೆ ಮೂಡದಿರದು. ಆತ ಹೇಳಿರುವ ರೆಕಾರ್ಡೆಡ್ ತನ್ನಬಳಿ ಈಗಲೂ ಇದೆ ಎನ್ನುವ ಮುಖಂಡರು ಆತನ ಕೀಳು ರಾಜಕೀಯದ ಬುದ್ದಿಗೆ ಏನು ಉತ್ತರ ನೀಡಿದ್ದೇವೆ ಎಂಬ ಮಾತನ್ನು ಹೇಳುವುದೇ ಇಲ್ಲ. ಯಾಕೆಂದರೆ ಹೇಳಿದರೆ ಹೇಳಿಸಿಕೊಳ್ಳುವುದು ನಮಗೆ ವಂಶಪಾರಂಪರ್ಯವಾಗಿ ಬಂದ ಬಳುವಳಿಯಲ್ಲವೆ. ಇಂತಹ ಕೀಳುಮಟ್ಟದ ರಾಜಕೀಯಕ್ಕೆ ಪ್ರತಿಭಟನೆಯ ಹಾದಿ ತೋರಿಸಬಹುದಿತ್ತು. ಒಂದು ದಿನದ ಗಂಜಿಯ ಕೊರತೆ ನಮಗೇ ಉಂಟಾಗಬಹುದಾದ ನಷ್ಟ ಆದರೂ ನಾವು ಪ್ರಮಾಣದಲ್ಲಿ ಕಮ್ಮಿಯಿದ್ದರೂ ಪ್ರಮಾದಕ್ಕೆ ತಲೆಬಾಗುವವರಲ್ಲ ನಮ್ಮಲ್ಲಿಯೂ ಬಲವಿದೆ ಎಂಬ ಸಂದೇಶ ನೀಡಬಹುದಿತ್ತು. ಏನೂ ಸಾಧ್ಯವಿಲ್ಲ ಎಂದು ಹೇಳಿಕಳುಹಿಸಿದವನಿಗೆ, ತಲೆಗೊಂದು ಅರ್ಧಗಂಟೆ ಅದರಲ್ಲಿ ಇವನಿಗೊಂದು ಐದು ನಿಮಿಷ ಮೀಸಲಿಟ್ಟರೆ ಸಮಯ ಕಳೆದಹಾಗೂ ಆಯಿತು ರಾಜಕಾರಣಿಗೆ ಆದಷ್ಟು ಗುಂಡಿತೋಡಿದ ಹಾಗೂ ಆಯಿತು. ಬಹುಶಃ ಗೆದ್ದೇ ಗೆಲ್ಲುವೆನೆಂಬ ಕುದುರೆಗೆ ಮುಂಬರುವ ಚುನಾವಣೆಯಲ್ಲಿ ಸೋಲಿಸಲಾಗದಿದ್ದರೂ ಕನಿಷ್ಠ ಐದು ನಿಮಿಷದ ಪ್ರಯತ್ನದಲ್ಲಿ ಆತನಿಗೆ ಬರುವ ಓಟುಗಳಿಗೆ ಹೊಡೆತ ಖಂಡಿತವಾಗಿಯೂ ನೀಡಬಹುದು. ಯಾಕೆಂದರೆ ಕ್ಷೌರಿಕರು ವಿಷಯ ಸಂಗ್ರಹಣೆಯಲ್ಲಿ ಹಿಂದುಳಿದವರಲ್ಲವಲ್ಲ. ಇವುಗಳ ಮುಖಾಂತರ ಹೊಡೆತ ನೀಡಲೇಬೇಕೆಂದರೆ ಸಂಘಟನೆ ಅತೀ ಅವಶ್ಯಕ. ಸಂಘಟನೆ ಬಲವಾಗಿದ್ದರೆ ಇವುಗಳು ಕಷ್ಟದ ಕೆಲಸವೇನಲ್ಲ. ನಮ್ಮ ಅಸ್ಥಿತ್ವವನ್ನು ಪ್ರಭಲವಾಗಿ ತೋರ್ಪಡಿಸಬೇಕೆಂದರೆ ಸಂಘಟನೆ ಸದೃಢವಾಗಿರಬೇಕು. ಸದೃಢತೆಯಿಂದ ಕೂಡಿರಬೇಕೆಂದರೆ ಯುವ ಶಕ್ತಿ ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಬೇಕು.
ಭಂಡಾರಿ ಸಮಾಜದ ಕ್ಷೌರಿಕ ವೃತ್ತಿಯಲ್ಲಿ ಯುವ ಸಂಪನ್ಮೂಲವಿದೆ ಆದರೆ ಅವರುಗಳಲ್ಲಿ ಪ್ರೌಢ ಶಿಕ್ಷಣನ್ನು ದಾಟಿ ಹೋಗದವರೇ ಹಲವರಿರುವ ಕಾರಣದಿಂದಾಗಿ ವಿದ್ಯಾಭ್ಯಾಸದ ನ್ಯೂನ್ಯತೆಯೊಂದು ಅವರಲ್ಲಿ ಕಾಣುವ ಸಲುವಾಗಿ ನಿರೀಕ್ಷಿತ ಮಟ್ಟದಲ್ಲಿ ಸಂಘಟನೆ ಸಾಧ್ಯವಾಗದೇ ಹೋಯಿತೆ ? ಇವರುಗಳು ಕಾರ್ಯಕ್ರಮಗಳ ಉಸ್ತುವಾರಿಗಳಿಗಷ್ಟೇ ಸೀಮಿತವಾದರೇ ಎಂಬ ಪ್ರಶ್ನೆಗಳು ಮೂಡದೇ ಇರದು. ಆದರೆ ವಿದ್ಯಾಭ್ಯಾಸದ ಕೊರತೆ ಅಷ್ಟಾಗಿ ಬಾಧಿಸಲು ಸಾಧ್ಯವಿಲ್ಲ ಸಂಘಟನೆಯ ಕೇಂದ್ರ ಬಿಂದುಗಳಾಗಿ ನಿರ್ವಹಿಸಲು ವಿದ್ಯಾವಂತರೇ ಆಗಬೇಕೆಂದರೆ ವಿದ್ಯಾವಂತರೂ ಸಾಕಷ್ಟುಮಂದಿ ಕಾಣಸಿಗುತ್ತಾರೆ. ಹಾಗಿದ್ದರೆ ವಿಫಲವಾದದ್ದು ಎಲ್ಲಿ ಎಂದರೆ ಸಂಘಟಿಸುವಲ್ಲಿಯೇ ಆಗಿರಬಹುದೇ ?
ಖಂಡಿತವಾಗಿಯೂ ಸಂಘಟಿಸುವಲ್ಲಿಯೇ ಸಂಘಟನೆ ಎಡವಿದೆ ಎಂದರೆ ತಪ್ಪಲ್ಲ. ಚಿಕ್ಕ ಉದಾಹರಣೆಯಾಗಿ ನಮ್ಮ ಸಂಖ್ಯೆ ಎಷ್ಟಿದೆ ಎಂದು ಸುದ್ದಿ ವಾಹಿನಿಯ ವಾಚಕರು ಕೇಳಿದ ಪ್ರಶ್ನೆಗೆ ಬಂದಿರುವ ಅತಿಥಿ ಇನ್ನೊಬ್ಬ ಅತಿಥಿಯನ್ನು ಕೇಳಿ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇರುವುದು, ಆದರೆ ಬಲಗೊಂಡಿದೆ ಎಂದರೆ ಕೇಳಿ ತಿಳಿದುಕೊಳ್ಳುವ ಪ್ರಸಂಗ ಬರುತ್ತಿರಲಿಲ್ಲ ಬಹುಶಃ ಇದೇ ಕಾರಣಕ್ಕಾಗಿ ಸರ್ಕಾರದ ಅಸಡ್ಡೆಗೆ ಒಳಗಾಗಿದ್ದೇವೆ ಎಂದಾಗ ಮತ್ತೆ ಮತ್ತೆ ಸರ್ಕಾರದ ಗಮನ ಸೆಳೆಯಲು ನೀವೇನು ಮಾಡಿದ್ದೀರಿ ಎಂಬರೀತಿಯ ಪ್ರಶ್ನೆಗಳನ್ನು ವಾಚಕರು ಕೇಳಿದ್ದಿರಬಹುದು. ಸಂಘಟನೆಯ ಕಿಚ್ಚನ್ನು ಪೇಟೆಗಷ್ಟೇ ಸೀಮಿತವಾಗಿಸದೇ ಹಳ್ಳಿಯ ಮೂಲೆ ಮೂಲೆಗೆ ತಲುಪಿಸುವ ಪ್ರಯತ್ನವಾಗಬೇಕು. ಬೇಕಾದಷ್ಟು ಇರುವ ಯುವ ಸಂಪನ್ಮೂಲವನ್ನು ವ್ಯರ್ಥವಾಗಲು ಬಿಡದೆ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಬೃಹತ್ ಸಂಘಟನೆಯ ಬಲವನ್ನು ತೋರ್ಪಡಿಸುವಂತಾಗಬೇಕು. ಕ್ಷೌರಿಕ ಸಮಾಜದವರೆಂಬುದನ್ನು ಬಹಿರಂಗಪಡಿಸಲು ಹಿಂಜರಿಯುವ ಪ್ರತಿಯೋರ್ವನು ಎದೆತಟ್ಟಿ ಹೇಳಿಕೊಳ್ಳುವಂತಾಗಬೇಕು.
ಸಂಪ್ರದಾಯದ ಹೆಸರಿನಲ್ಲಿ ಕೀಳರಿಮೆಯನ್ನು ಹೊಂದಿದ ಪ್ರತೀ ಕ್ಷೌರಿಕನೂ ಅದೇ ಕೀಳಾಗಿ ಕಾಣುವ ಸಂಪ್ರದಾಯಸ್ಥರೆದುರು ಎದೆಯುಬ್ಬಿಸಿ ನೆಡೆಯುವಂತಾಗಬೇಕು. ಅಂದಿನಿಂದ ಇಂದಿನವರೆಗೂ ತುಳಿಸಿಕೊಂಡೇ ಬಂದಿರುವ ಕ್ಷೌರಿಕರು ಸರ್ಕಾರಿ ಸವಲತ್ತುಗಳಿಗೆ ಒಳಗೊಳ್ಳುವಂತೆ ಮಾಡಬೇಕು. ಇನ್ನೂ ನೂರಾರು ಕನಸುಗಳು ನನಸಾಗುವಂತೇ ಆಗಬೇಕೆಂದರೆ ಸಂಘಟನೆ ಬಲಗೊಳ್ಳಬೇಕಾಗಿದೆ ಬಲಗೊಳ್ಳಬೇಕೆಂದರೆ ಯುವಸಮೂಹದ ತೊಡಗಿಸಿಕೊಳ್ಳುವಿಕೆ ಅಗತ್ಯವಾಗಿದೆ .
ವಿಜಯ್ ಭಂಡಾರಿ
ನಿಟ್ಟೂರು ಹೊಸನಗರ