
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಮಾಸಿಕ ಸಭೆ ದಿನಾಂಕ 25.11.2018 ನೇ ಭಾನುವಾರ ಮದ್ಯಾಹ್ನ ಸಮಯ 3.00 ಘಂಟೆಗೆ ಸರಿಯಾಗಿ ಹೋಟೆಲ್ ಕದಂಬ, ಮೋದಿ ಹಾಸ್ಪಿಟಲ್ ಹತ್ತಿರ, ರಾಜಾಜಿನಗರ,ಬೆಂಗಳೂರು ಇಲ್ಲಿ ನಡೆಯಿತು.
ಚರ್ಚೆಯ ಮುಖ್ಯ ವಿಷಯಗಳು…
1. 2017-18 ನೇ ಸಾಲಿನ ವಿದ್ಯಾರ್ಥಿ ವೇತನದ ಅರ್ಜಿಗಳನ್ನು ಪರಿಷ್ಕರಿಸುವುದು.
2. ಮುಂದಿನ ಡಿಸೆಂಬರ್ 25 ನೇ ತಾರೀಖಿನಂದು ನಡೆಯುವ ವಾರ್ಷಿಕ ಮಹಾಸಭೆಗೆ ಪೂರ್ವಭಾವಿ ಚರ್ಚೆ.ಸಭೆಯು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಉಮೇಶ್ ರವರ ಅಧ್ಯಕ್ಷತೆಯಲ್ಲಿ ಸಮಯಕ್ಕೆ ಸರಿಯಾಗಿ ಪ್ರಾರಂಭವಾಯಿತು.ಮಾಸಿಕ ಸಭೆಗೆ ಹೆಚ್ಚಿನ ಸಂಖ್ಯೆಯ ಸದಸ್ಯರು,ಹಿರಿಯ ಸದಸ್ಯರು,ಮಾಜಿ ಅಧ್ಯಕ್ಷರುಗಳು ಹಾಜರಿದ್ದು ಚರ್ಚೆಯಲ್ಲಿ ಭಾಗವಹಿಸಿ ಸಹಕರಿಸಿದರು. ಸಭೆಯು ಕಾರ್ಯದರ್ಶಿ ಶ್ರೀ ಪ್ರಸಾದ್ ರವರ ಸ್ವಾಗತದೊಂದಿಗೆ ಆರಂಭಗೊಂಡಿತು.ಸಭೆಯ ಪ್ರಾರಂಭಕ್ಕೆ ಮುನ್ನ ಕಳೆದ ತಿಂಗಳು ದೈವಾಧೀನರಾದ ಸಮಾಜದ ಬಂಧುಗಳಿಗೆ ಎರಡು ನಿಮಿಷ ಮೌನಾಚರಣೆ ಮುಖಾಂತರ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಕಾರ್ಯದರ್ಶಿ ಪ್ರಸಾದ್ ರವರು ಹಿಂದಿನ ಸಭೆಯ ನಡಾವಳಿಗಳನ್ನು ಸಭೆಯಲ್ಲಿ ಮಂಡಿಸಿದರು.
ಚರ್ಚಿಸಿದ ಮುಖ್ಯ ವಿಷಯಗಳು….
1. ವಿದ್ಯಾರ್ಥಿ ವೇತನಕ್ಕೆ ಒಟ್ಟು 39 ಅರ್ಜಿಗಳು ಬಂದಿದ್ದು, ಅದರಲ್ಲಿ ಪಿಯುಸಿ,ಪದವಿ ಮತ್ತು ತಾಂತ್ರಿಕ ಶಿಕ್ಷಣ(ಇತರೆ) ಎಂದು ವರ್ಗೀಕರಿಸಿ,
ಆಯ್ಕೆಯಾದ ವಿದ್ಯಾರ್ಥಿಗಳಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ರೂ 2000/- ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ರೂ 3000/- ಹಾಗೂ ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿಗಳಿಗೆ ರೂ 4000/- ಗಳನ್ನು ವಿತರಿಸುವುದೆಂದು ತೀರ್ಮಾನಿಸಲಾಯಿತು.
ಬಂದ ಅರ್ಜಿಗಳಲ್ಲಿ ಕೆಲವು ವಿದ್ಯಾರ್ಥಿಗಳ ಪೋಷಕರು ಸಂಘದ ಸದಸ್ಯತ್ವವನ್ನು ಹೊಂದಿಲ್ಲದ ಅಂಶ ಬೆಳಕಿಗೆ ಬಂದಿದ್ದು,ಅಂತಹ ಅರ್ಜಿಗಳ ಬಗ್ಗೆ ಮತ್ತೊಮ್ಮೆ ಪರಾಮರ್ಶಿಸಿ ಎಂಬ ಸದಸ್ಯರ ಸಲಹೆಯ ಬಗ್ಗೆ ಚರ್ಚಿಸಿ ಕೊನೆಗೆ ಈ ಸಾಲಿನಲ್ಲಿ ಆಯ್ಕೆಯಾದ ಅರ್ಜಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಮತ್ತು ಮುಂದಿನ ವರ್ಷದಿಂದ ಅಂತಹ ಅರ್ಜಿಗಳನ್ನು ತಿರಸ್ಕರಿಸುವುದೆಂದು ತೀರ್ಮಾನಿಸಲಾಯಿತು.
ಕೆಲವು ಅರ್ಜಿಗಳು ಈ-ಮೇಲ್ ಮುಖಾಂತರ ಬಂದಿದ್ದು ಅಂತಹ ಅಭ್ಯರ್ಥಿಗಳ ಅರ್ಜಿಗಳು ಸಂಘದ ಕಛೇರಿಗೆ ತಲುಪಿದರೆ ಮಾತ್ರ ವಿದ್ಯಾರ್ಥಿ ವೇತನ ನೀಡುವುದು ಇಲ್ಲದಿದ್ದರೆ ತಡೆಹಿಡಿಯುವುದು ಎಂದು ತೀರ್ಮಾನಿಸಲಾಯಿತು.
ಎಲ್ಲಾ ಘಟಕಗಳ ಅಧ್ಯಕ್ಷರನ್ನು ಒಂದೆಡೆ ಸೇರಿಸಿ ಅವರಿಗೆ ಇಂತಹ ವಿಷಯಗಳ ಬಗ್ಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಅವರ ಜವಾಬ್ದಾರಿ ಗಳನ್ನು ಇನ್ನಷ್ಟು ಪರಿಣಾಮಕಾರಿ ಯಾಗುವಂತೆ ಮಾಡುವುದೆಂದು ಚರ್ಚಿಸಲಾಯಿತು.
2. ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ವಾರ್ಷಿಕ ಮಹಾಸಭೆಗೆ ಈಗಾಗಲೇ ಮುದ್ರಣಗೊಂಡ ಆಹ್ವಾನ ಪತ್ರವನ್ನು ತಲುಪಿಸುವ ಬಗ್ಗೆ ಚರ್ಚಿಸಲಾಯಿತು.
ಕಾರ್ಯಕ್ರಮ ಪಟ್ಟಿಯನ್ನು ಪರಿಷ್ಕರಿಸುವ ಬಗ್ಗೆ ಕೆಲವು ಹಿರಿಯ ಸದಸ್ಯರು ನೀಡಿದ ಸಲಹೆಯನ್ನು ಪುರಸ್ಕರಿಸಿ, ಸಮಯದ ಅಭಾವ ಬಂದರೆ ಆ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದೆಂದು ತೀರ್ಮಾನಿಸಲಾಯಿತು.
ಸಮಾರಂಭಕ್ಕೆ ಒದಗುವ ಖರ್ಚು ವೆಚ್ಚಗಳ ಬಗ್ಗೆ ಚರ್ಚಿಸಿ ಕಾರ್ಯಕಾರಿ ಮಂಡಳಿಯ ಪ್ರತಿ ಸದಸ್ಯರು ಅದನ್ನು ಸರಿದೂಗಿಸುವಂತೆ ಸೂಚಿಸಲಾಯಿತು.
ವಾರ್ಷಿಕ ಮಹಾಸಭೆಯ ದಿನದ ಊಟ ಮತ್ತು ಉಪಹಾರದ ಖರ್ಚನ್ನು ಸಂಘದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಉಮೇಶ್ ರವರು ತಮ್ಮ ಮಾವ ದಿವಂಗತ ಬೈಕಾಡಿ ಗೋಪಾಲ ಭಂಡಾರಿ ಮತ್ತು ಅತ್ತೆ ದಿವಂಗತ ಕುಸುಮ ಗೋಪಾಲ ಭಂಡಾರಿಯವರ ಸವಿನೆನಪಿಗಾಗಿ ತಾವೇ ಭರಿಸುವುದಾಗಿ ಒಪ್ಪಿಕೊಂಡರು.
ವಿಶೇಷ ಸನ್ಮಾನಿತರನ್ನು ಅಧ್ಯಕ್ಷರು ಮತ್ತು ಸಂಘದ ಸದಸ್ಯರು ಮತ್ತೊಮ್ಮೆ ಮುತುವರ್ಜಿಯಿಂದ ಆಹ್ವಾನಿಸುವಂತೆ ತೀರ್ಮಾನಿಸಲಾಯಿತು.
ಬೆಂಗಳೂರಿನಲ್ಲಿರುವ ಎಲ್ಲಾ ಸದಸ್ಯರು ಮತ್ತು ಪದಾಧಿಕಾರಿಗಳು ಡಿಸೆಂಬರ್ 24 ರ ಸಂಜೆ ಸಭೆ ನಡೆಯುವ ಸ್ಥಳವಾದ ಬೆಂಗಳೂರು ಗಾಂಧಿನಗರದ ಮಹಾರಾಷ್ಟ್ರ ಮಂಡಳಿಯಲ್ಲಿ ಸಂಜೆ 6 ಘಂಟೆಗೆ ಸರಿಯಾಗಿ ಹಾಜರಿದ್ದು ಸಮಾರಂಭದ ಪೂರ್ವಭಾವಿ ತಯಾರಿಗೆ ಸಹಕರಿಸುವಂತೆ ತಿಳಿಸಲಾಯಿತು.
ಲಘು ಉಪಹಾರದ ನಂತರ ಸಂಘದ ಕಾರ್ಯದರ್ಶಿಯಾದ ಶ್ರೀ ಪ್ರಸಾದ್ ರವರು ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ವಂದಿಸಿದರು.
ವರದಿ : ಸುಧಾಕರ ಭಂಡಾರಿ ಶಿರಾಳಕೊಪ್ಪ.