
ಭಂಡಾರಿ ಸಮಾಜ ಸಂಘ,ಸೊರಬ-ಶಿರಾಳಕೊಪ್ಪ ಘಟಕದ ಸ್ವಯಂಸೇವಕರು,ಮಹಿಳಾ ಕಾರ್ಯಕರ್ತೆಯರು ವಲಯದ ವಿವಿಧ ಘಟಕಗಳಿಂದ ಆಗಮಿಸಿದ ಭಂಡಾರಿ ಸಮಾಜದ ಬಂಧುಗಳ ನೋಂದಣಿ ಕಾರ್ಯವನ್ನು ಕೈಗೊಂಡಿದ್ದರು.ಪ್ರತಿಯೊಂದು ಘಟಕಗಳಿಗೆ ಮೀಸಲಿರಿಸಲಾಗಿದ್ದ ಪ್ರತ್ಯೇಕ ಕೌಂಟರ್ ಗಳಲ್ಲಿ ಸಮಾಜದ ಬಂಧುಗಳು ಸರತಿ ಸಾಲಿನಲ್ಲಿ ನಿಂತು ತಮ್ಮ ಕುಟುಂಬದ ಮಾಹಿತಿಯನ್ನು ನೀಡಿ ನೋಂದಣಿ ಕಾರ್ಯದಲ್ಲಿ ಶಾಂತಿಯುತವಾಗಿ ಸಹಕರಿಸಿದರು. ಸಭೆಗೆ ಆಗಮಿಸಿದ ಬಂಧುಗಳಿಗೆ ಬಿಸಿ ಬಿಸಿಯಾದ ಇಡ್ಲಿ,ವಡೆ ಉಪಹಾರದ ನಂತರ ಕಾಫಿ,ಟೀ ವಿತರಿಸಲಾಯಿತು.




ಈ ಬಾರಿಯ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹಕೂಟವನ್ನು ಭಂಡಾರಿ ಸಮಾಜದ ಸಾಂಸ್ಕೃತಿಕ ಜಾತ್ರೆಯನ್ನಾಗಿಸುವ ಸದುದ್ಧೇಶದಿಂದ ಕಾರ್ಯಕ್ರಮದಲ್ಲಿ ಭಂಡಾರಿ ಬಂಧುಗಳು ರಚಿಸಿ,ಪ್ರಕಟಿಸಿದ ಕೃತಿಗಳ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.ಪುಸ್ತಕ ಪ್ರದರ್ಶನ ಮಳಿಗೆಯಲ್ಲಿ ಮುಂಬಯಿಯ ಶಿವರಾಮ್.ಕೆ.ಭಂಡಾರಿಯವರ “ಸ್ಟೈಲಿಂಗ್ ಅಟ್ ದಿ ಟಾಪ್” ಕೃತಿ, ಜ್ಯೋತಿಷ್ಯ ರತ್ನ ದಿವಂಗತ ಅನಂತರಾಮ ಬಂಗಾಡಿಯವರ ಯಕ್ಷಗಾನ, ಜ್ಯೋತಿಷ್ಯ ಮತ್ತು ಭಂಡಾರಿ ಸಮಾಜದ ಇತಿಹಾಸ ಸಂಬಂಧಿತ ಹಲವಾರು ಕೃತಿಗಳು, ಸುಧಾಕರ ಬನ್ನಂಜೆಯವರ “ದೇವೆರ್” ಕಾದಂಬರಿ,“ದ್ರಾವಿಡ ಕುಲ ಪುರೋಹಿತರು ಭಂಡಾರಿಗಳು” ಕೃತಿ ಹಾಗೂ ಅವರ ನಿರ್ದೇಶನದ ಸಿನಿಮಾಗಳ ಹಾಡಿನ ಸಿ.ಡಿ.ಗಳು, ಕಿಶೋರ್ ಎಕ್ಕಾರ್ ರಚಿಸಿದ “ಮೌನ ಕೋಗಿಲೆ” ಕಾದಂಬರಿ, ಕವನ ಸಂಗ್ರಹ “ಭಾವಗುಚ್ಛ” ವಿಜಯ್ ಕುಮಾರ್ ಹೆಬ್ಬಾರ್ ಬೈಲ್ ಸಂಪಾದಕತ್ವದ “ಪೂವರಿ” ಪತ್ರಿಕೆ, ಕಾರ್ಕಳ ಶೇಖರ್ ಭಂಡಾರಿಯವರ ಪ್ರಾಸ ಭಂಡಾರ ಸರಣಿಯ ಮೂರನೆ ಭಾಗವಾದ “ಮಸ್ತಕದಿಂದ ಪುಸ್ತಕ” ಕ್ಕೆ ಕೃತಿ ಮುಂತಾದ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು.


ಬಾಳೆಹೊನ್ನೂರಿನ ಭಂಡಾರಿ ಬಂಧು ಶ್ರೀ ವೇದರಾಜ್ ಭಂಡಾರಿಯವರ ಪುರಾತನ ತಾಮ್ರದ ವಸ್ತುಗಳ,ಪುರಾತನ ಕ್ಷೌರಿಕ ವೃತ್ತಿಯ ವಸ್ತುಗಳ,ಹಳೆಯ ನೋಟುಗಳ ಪ್ರದರ್ಶನ ಕಣ್ಮನ ಸೆಳೆಯುವಂತಿತ್ತು.

ಸೊರಬದ ಶ್ರೀ ಬಾಬು ಭಂಡಾರಿಯವರು ತಮ್ಮ ಸಾವಿರಾರು ಪುರಾತನ ನಾಣ್ಯಗಳ,ಪುರಾತನ ನೋಟುಗಳ,ವಿದೇಶಿ ನೋಟುಗಳ,ಐನೂರಕ್ಕೂ ಹೆಚ್ಚಿನ ಅಂಚೆ ಚೀಟಿಗಳ ಸಂಗ್ರಹದೊಂದಿಗೆ ಆಗಮಿಸಿ,ಪ್ರದರ್ಶನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಕಳೆಕಟ್ಟಿದರು.

ಪಕ್ಕದಲ್ಲಿಯೇ ಸಾಗರದ ಯುವ ಕಲಾವಿದ ಅನೀಶ್ ಭಂಡಾರಿಯವರ ವಿವಿಧ ಪ್ರಾಕಾರದ ಚಿತ್ರಕಲೆಗಳ ಪ್ರದರ್ಶನ ನೆರೆದವರ ಕಣ್ಮನ ಸೆಳೆಯಿತು.ಯಾವುದೇ ಗುರುಗಳ ಮಾರ್ಗದರ್ಶನವಿಲ್ಲದೇ ಕೇವಲ ಯೂಟ್ಯೂಬ್ ವಿಡಿಯೋಗಳಿಂದ ಚಿತ್ರಕಲೆಯನ್ನು ಅಭ್ಯಸಿಸಿ ಕಲಾವಿದನಾಗಿ ರೂಪುಗೊಂಡ ಸಮಾಜದ ಪ್ರತಿಭಾವಂತ ಯುವಕ ಅನೀಶ್ ಭಂಡಾರಿಯವರ ಚಿತ್ರಕಲೆ ಭಂಡಾರಿ ಬಂಧುಗಳನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಸಭಾಂಗಣದ ಒಳ ಪ್ರವೇಶಿಸುತ್ತಿದ್ದಂತೆ ಬಲಭಾಗದಲ್ಲಿ ಕಲಾವಿದ ರತ್ನಾಕರ್ ಭಂಡಾರಿಯವರು ರಚಿಸಿದ ಫೋಟೋ ಬೂತ್ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿತು.ಹಿಂದಿನ ಕಾಲದಲ್ಲಿ ಭಂಡಾರಿ ಕ್ಷೌರಿಕರು ಮನೆ ಮನೆಗೆ ತೆರಳಿ ನೆಲದ ಮೇಲೆ ಕುಳಿತು ಕ್ಷೌರ ಮಾಡುತ್ತಿದ್ದ ಯಥಾವತ್ ಚಿತ್ರಣವನ್ನು ಥರ್ಮಾಕೋಲ್ ನಿಂದ ತಯಾರಿಸಿ,ಆಸಕ್ತರು ಫೋಟೊ ಕ್ಲಿಕ್ಕಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಕಲಾವಿದ ರತ್ನಾಕರ್ ಭಂಡಾರಿಯವರ ಕಲ್ಪನೆಗೆ ನೆರೆದಿದ್ದ ಭಂಡಾರಿ ಬಂಧುಗಳು ತಲೆದೂಗಿದರು.

ಭಂಡಾರಿ ಬಂಧುಗಳ ಚಿತ್ರಕಲೆ,ವಿಶಿಷ್ಟ ಸಂಗ್ರಹ,ಸಾಹಿತ್ಯ,ಸಮಾಜ ಕ್ರೀಡಾ ಸಾಧನೆ,ಕವನ,ಕಥೆ,ಬರಹ ಇತರೆ ಕಲಾ ಪ್ರದರ್ಶನಗಳ ಮತ್ತು ಸಮಾಜದ ಬಂಧುಗಳು,ಮಕ್ಕಳು ಮಹಿಳೆಯರಿಗೆ ಏರ್ಪಡಿಸಲಾಗಿದ್ದ ಲಘು ಕ್ರೀಡಾಕೂಟವನ್ನು ಸಮಾಜದ ಗಣ್ಯರು ವೇದಿಕೆಯಲ್ಲಿ ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು.






ಮಕ್ಕಳು ಮತ್ತು ಮಹಿಳೆಯರು ಆಟೋಟ ಸ್ಪರ್ಧೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡು ಜಾತ್ರೆಯ ವಾತಾವರಣವನ್ನು ಸೃಷ್ಟಿಸಿದರು.ಮಕ್ಕಳಿಗೆ ಮ್ಯೂಸಿಕಲ್ ಚೇರ್,ನಿಂಬು ಓಟದ ಸ್ಪರ್ಧೆ,ಕಪ್ಪೆ ಓಟ,ಕೆರೆ ದಡ.ಮಹಿಳೆಯರಿಗೆ ಮತ್ತು ಪುರುಷರಿಗೆ ಮ್ಯೂಸಿಕಲ್ ಚೇರ್,ಬಾಂಬ್ ಇನ್ ದ ಷೆಲ್,ಕೆರೆ ದಡ ಮತ್ತು ವಯಸ್ಕರಿಗೆ ವೇಗದ ನಡಿಗೆ ಸ್ಪರ್ಧೆ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಭಂಡಾರಿ ಸಮಾಜದ ಬಂಧುಗಳು ವಯಸ್ಸಿನ ಭೇದ ಭಾವವಿಲ್ಲದೇ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ವರದಿ : ಭಾಸ್ಕರ ಭಂಡಾರಿ ಶಿರಾಳ ಕೊಪ್ಪ