January 18, 2025
bhandara

ಶಿವರಾತ್ರಿಯ ಜಾಗರಣೆಯಿಂದ ಮಿಂದೆದ್ದ ದಾದು ಮತ್ತು ಗೆಳೆಯರು ಆಯಾಸಗೊಂಡಿದ್ದರು. ಬೆಳಗ್ಗಿನ ಉಪಹಾರ ಮುಗಿಸಿದರು. ನಿದ್ದೆ ತಡೆಯಲಾಗದೇ ಮಲಗಿಬಿಟ್ಟರು. ನಿದ್ದೆಯಿಂದ ಎದ್ದಾಗ ತಾನು ವಾಸ್ತವ್ಯವಿದ್ದ ಮಾಳದಲ್ಲಿರುವ ಮನೆಯ ನೆನಪಾಗಿ ನಾಳೆ ಬೆಳಗ್ಗೆ ಹೊರಡಬೇಕು. ಅಮ್ಮನಲ್ಲಿ ಹೇಳಬೇಕು, ಅವಳು ಬರುವುದಾದರೆ ಕರೆದುಕೊಂಡು ಹೋಗಬೇಕೆಂದು ನಿರ್ಣಯಿಸಿದ. ಆಗ ಅಮ್ಮ ಪಾರ್ವತಿ ‘ಊಟ ಹಾಕುತ್ತೇನೆ ಬನ್ನಿ’ ಎಂದು ದಾದು ಮತ್ತು ಸ್ನೇಹಿತನನ್ನು ಕರೆದಳು. “ಶಿವರಾತ್ರಿ ಭಾರಿ ಜೋರಾ?? ಎಲ್ಲಿ ಎಲ್ಲ ಪೆಟ್ಟು ಮಾಡ್ಕೊಂಡಿದ್ದೀರಿ…” ಅನ್ಬುತ್ತಾ ಊಟ ಬಡಿಸಿದಳು.‌ “ಇಲ್ಲಮ್ಮ ಪೆಟ್ಟು ಎಲ್ಲ ಏನಿಲ್ಲ…ಎಂತ ಗಮ್ಮತ್ತು ಗೊತ್ತಾ?? ನೀನು ಬರಬೇಕಿತ್ತು.. !” ಎನ್ನುತ್ತಾ ಊಟ ಮಾಡಲು ಪ್ರಾರಂಭಿಸಿದರು. ನನ್ನಂತ ಕುರುಡಿಗೆ ನಿಮ್ಮ ಸಹವಾಸ ಬೇಡಪ್ಪ.‌‌‌.. ಎಂದು ನಗುತ್ತಾ ತನ್ನ ಪರಿಸ್ಥಿತಿಯನ್ನು ಹೇಳಿದಳು. ದಾದು ಮರುಮಾತಾಡಲಿಲ್ಲ . ಭಾವುಕನಾಗಿ ನೀನು ಕೂಡಾ ನಾನಿರುವಲ್ಲಿಗೆ ಬಾ ಅಮ್ಮ.. ಅಲ್ಲೇ ಇರು ಎಂದು ಕೇಳಿಕೊಂಡ. ಅದಕ್ಕೆ ಪಾರ್ವತಿ “ಯಾಕೆ ಮಗ ನಿನಗೂ ಕಷ್ಟ ಅಲ್ವ..? ನೀನು ಇರೋದು ಕೂಡಾ ಯಾರದ್ದೋ ಮನೆಯಲ್ಲಿ ..ಅವರಿಗೆ ಹೊರೆಯಾಗಿ ಎಷ್ಟು ದಿನ ಅಂತ ಅಲ್ಲಿರಲಿ.. ಇಲ್ಲಿಯಾದರೆ ಈಗಾಗಲೇ ಅಭ್ಯಾಸ ಆಗಿದೆ. ಧಣಿಗಳು ಮತ್ತು ಮನೆಯವರು ದೇವರಂತಹವರು. ಇಲ್ಲಿಂದ ಬಿಟ್ಟು ಹೋಗಲು ಮನಸ್ಸು ಒಪ್ಪೋದಿಲ್ಲ ಮಗ, ಇನ್ನೊಮ್ಮೆ ಬಂದಾಗ ನೋಡೊಣ ಒಮ್ಮೆ ಬಂದು ಸ್ವಲ್ಪ ದಿನ ಇದ್ದು ಬರುತ್ತೇನೆ” ಎಂದು ಮಗನನ್ನು ಸಮಾಧಾನ ಪಡಿಸಿದಳು. ಆದರೂ ಕಣ್ಣು ದೃಷ್ಟಿ ಮಂಜಾಗಿರುವ ತಾಯಿಯನ್ನು ಬಿಟ್ಟು ದೂರ ಇರುವುದು ಸರಿಯೆನಿಸಲಿಲ್ಲ.. ಆದರೆ ವಿಧಿ ಸರಿಯೆನಿಸಿದ್ದನ್ನು ಮಾಡಲು ಬಿಡುವಂತೆ ಕಾಣುತ್ತಿರಲಿಲ್ಲ.. ಮರುದಿನ ಮುಂಜಾನೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ಮನೆಯವರಿಗೆಲ್ಲ ಹೇಳಿ , ಮಾಳಕ್ಕೆ ಹೊರಟರು. ಪಾರ್ವತಿ ಯುವಕರು ಬಲಿಷ್ಠವಾಗಿರಬೇಕೆಂದು ಕಟ್ಟಿಕೊಟ್ಟ ಅವಲಕ್ಕಿ ಮತ್ತು ಬನ್ನಾಂಗಯಿ ( ಎಳನೀರು-ಗಂಜಿ ಬಲಿತು ತೆಂಗಿನ ಕಾಯಿಯಾಗುವ ಮೊದಲು ಸಿಗುವ ಕಾಯಿ) ಪ್ರಯಾಣದ ಹಸಿವನ್ನು ನೀಗಿಸಿತು. ಅಪರಾಹ್ನ 3 ಗಂಟೆಯಾಗುತ್ತಲೇ ಮಾಳದ ಮನೆಯನ್ನು ಸೇರಿದರು.

 

 

ಮನೆ ಸೇರುತ್ತಲೇ ತನ್ನ ಪ್ರೀತಿಯ ಬೊಲ್ಲನ ಮೇಲೊಂದು ಅಪರಾಧದ ದೂರೊಂದು ಕೇಳಿಬಂದಿತ್ತು. ಲೋಕಯ್ಯ‌ ನೆಟ್ಟಿದ್ದ ತರಕಾರಿ ಬಳ್ಳಿ ಗಿಡಗಳನ್ನು ತಿಂದು ತೇಗಿದ್ದ… ಯಾರೋ ಶಿವರಾತ್ರಿಗೆ ಬಂದಿದ್ದ ಚೇಷ್ಟೇ ಹುಡುಗರು ಹಟ್ಟಿಯಲ್ಲಿದ್ದ ಬೊಲ್ಲನ ಹಗ್ಗ ಬಿಚ್ಚಿದ್ದರು. ಲೋಕಯ್ಯನ ಮೂವರು ಮಕ್ಕಳಲ್ಲಿ ಇಬ್ಬರು ಗಂಡು ಮಕ್ಕಳು ಒಂದು ಹೆಣ್ಣು . ಇಬ್ಬರು ಗಂಡು ಮಕ್ಕಳು ದಾದುವಿಗಿಂತ ಒಂದೆರಡು ವರ್ಷ ದೊಡ್ಡವರು. ಮಗಳು ಕಸ್ತೂರಿ ಒಂದು ವರ್ಷ ಚಿಕ್ಕವಳು ಇರಬಹುದು. ಕಸ್ತೂರಿ ಮತ್ತು ದಾದುವಿನ ಸಂಬಂಧ ಅನೋನ್ಯವಾಗಿತ್ತು. ತನ್ನ ಸ್ವಂತ ಅಣ್ಣಂದಿರಿಗಿಂತ ದಾದು ಅಣ್ಣನೇ ಅವಳಿಗೆ ಅಚ್ಚುಮೆಚ್ಚು. ಏನೋ ದಾದುವಿನ ನೇರ ನಡೆ ನುಡಿಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ ಲೋಕಯ್ಯನ ಇಬ್ಬರು ಗಂಡು ಮಕ್ಕಳಿಗೆ ದಾದು ಎಂದರೆ ಅಷ್ಟಕಷ್ಟೇ ಅದರಲ್ಲೂ ಕರಿಯ ಕಡು ವಿರೋಧಿ ಆಗಿದ್ದ. ಇನ್ನೊಬ್ಬ ಹಿರಿಯ ಮಗ ಸಿದ್ದುನಿಗೆ ಸ್ವಲ್ಪ‌ ಮಾತ್ಸರ್ಯ ಇದ್ದರೂ ಬೇರೆ ಯಾವುದೇ ವೈರತ್ವ ಇರಲಿಲ್ಲ. ಕರಿಯನಿಗೆ ದಾದು ಊರಿನಲ್ಲಿ ತನ್ನ ನಡೆ ನುಡಿ ಮತ್ತು ಭಂಡಾರಿ ವೃತ್ತಿ ಕೌಶಲ್ಯದ ಮೂಲಕ ಶೀಘ್ರಗತಿಯಲ್ಲಿ ಜನಪ್ರಿಯತೆ ಗಳಿಸುತ್ತಿರುವುದನ್ನು ಸಹಿಸಲಾಗುತ್ತಿರಲಿಲ್ಲ. ಹೀಗಾಗಿ ದಾದುವಿನ ಮೇಲೆ ಏನಾದರೂ ಆರೋಪ ಮಾಡುತ್ತಾ ತಂದೆ ಲೋಕಯ್ಯನವರಲ್ಲಿ ಆಗಾಗ ದೂರು ಕೊಡುವುದು ಕೂಡಾ ಈತನ ಚಾಳಿಯಾಗಿತ್ತು.

 

ಹೀಗಾಗಿ ಮನೆಯಲ್ಲಿ ಏನೇ ಆದರೂ ಬೊಲ್ಲ‌ ಅಥವಾ ತನ್ನ ಮೇಲೆ ಏನೇ ಆರೋಪ ಬಂದರೂ ಅದರ ಹಿಂದೆ ಈ ಕರಿಯಣ್ಣ ನ ಕೈವಾಡ ಇದ್ದೆ ಇರುತ್ತೆ ಎಂಬುದನ್ನು ಮನಗಂಡ ದಾದು ಬೊಲ್ಲನನ್ನು ನೋಡಲು ಹೋದ. ಬೊಲ್ಲನ ಬೆನ್ನು ಬೆತ್ತದ ಪೆಟ್ಟು ತಿಂದು ಉಬ್ಬಿ ಹೋಗಿತ್ತು. ಬೆತ್ತದ ಅಚ್ಚು ಅಲ್ಲಲ್ಲಿ ಮೈ ತುಂಬಾ ಇತ್ತು. ದಾದುವಿನ ಸಿಟ್ಟು ನೆತ್ತಿಗೇರಿತು. “ಬೊಲ್ಲನಿಗೆ ಅಷ್ಟೋಂದು ಹೊಡೆಯುವ ಅವಶ್ಯಕತೆ ಏನಿತ್ತು ? ಯಾರವನು? ಕಣ್ಣಲ್ಲಿ ಕರುಣೆಯಿಲ್ಲದವನು.. ಯಾರು ಹೊಡೆದಿದ್ದು?” ಎಂದು ಸಿಟ್ಟಿನಿಂದ ಕೇಳಿದಾಗ ಲೋಕಯ್ಯ ” ಅದು ಕರಿಯ ಹೊಡೆದಿದ್ದು , ಅವನು ನೆಟ್ಟ ತರಕಾರಿ ಸರ್ವನಾಶ ಆದಾಗ ಅವನಿಗೆ ಹೊಟ್ಟೆ ಉರಿಯೋದಿಲ್ವ? ಹಾಗೆ ಸಿಟ್ಟಿನಿಂದ ಹೊಡೆದಿದ್ದಾನೆ.. ನಾನು ಗಾಯಕ್ಕೆ ಎಣ್ಣೆ ಹಚ್ಚಿದ್ದೇನೆ, ಸರಿಹೋಗುತ್ತೆ ಬಿಡು” ಎಂದು ಸಮಾಧಾನ‌ಪಡಿಸಲು ಮುಂದಾದರು.

 

ದಾದು ಮರು ಮಾತಾನಾಡದೇ ಕೆಳಗಿನ ಮನೆಗೆ ಹೋದ ಅಲ್ಲಿ ನರಂಗ, ನಾಗು, ಮೊಂಟ , ಕುಪ್ಪ, ಕಿಟ್ಟ ಎಲ್ಲರೂ ಸೇರಿ ಶಿವರಾತ್ರಿಯ ಜಾಗರಣೆಯಂದು ಮಾಡಿದ ಚೇಷ್ಟೆಗಳ ಬಗ್ಗೆ ಹರಟುತ್ತಿದ್ದರು. ಈ ಸಲ ದಾದು ಇರಬೇಕಿತ್ತು ಎನ್ನುತ್ತಿರುವಾಗ ದಾದು “ಬಾರಿ ಜೋರು ಇತ್ತುಂಡ ಈ ಸರ್ತಿ.. ” ಎಂದು ಮಾತು ಪ್ರಾರಂಭಿಸಿ.. “ನನ್ನ ಬೊಲ್ಲನ ಹಗ್ಗ ಬಿಚ್ಚಿ ಬಿಟ್ಟಿದ್ಯಾರು? ಯಾರವನು? ಅವನಿಗೆ ಇದೆ ಇವತ್ತು ಎಂದು ಹಲ್ಲುಕಚ್ಚಿದ “

 

ಅದು ನಿಮ್ಮದೇ ಮನೆಯವನಲ್ಲವಾ ಹಣೆಬರಹ ಕೆಟ್ಟಿದವ ತನ್ನದೇ ಮನೆಯ ಕೋಣವನ್ನ ಮೇಯಿಲಿಕ್ಕೆ ಬಿಟ್ಟಿದ್ದಾನೆ. ನೀನು ಸಿಟ್ಟಾಗ್ಬೇಡ ಮಾರಾಯ ಶಿವರಾತ್ರಿ ಗಮ್ಮತ್ತಿಗೆ ಎಲ್ಲರೂ ಹಾಗೆ ಮಾಡೋದು ಅಲ್ವ ? ಎಂದು ನಾಗು ಸತ್ಯ ಬಿಚ್ಚಿಟ್ಟ.‌

 

“ಎಲ್ಲ‌ ಸರಿ‌ ನಾಗು ಒಪ್ಪುತ್ತೇನೆ. ನಾವು ನಮ್ಮ ಮನೋರಂಜನೆಗೆ ಚೇಷ್ಟೇ ಮಾಡೋಣ ತಪ್ಪಲ್ಲ.. ಆದರೆ ಏನೂ ಮಾಡದ ಆ ಮೂಕ ಪ್ರಾಣಿಗೆ ಕರುಣಿಯಿಲ್ಲದೇ ಬಾಸುಂಡೆ ಬರುವಂತೆ ಹೊಡೆದಿದ್ದನಲ್ಲ ಅದಕ್ಕೆ ಏನು ಮಾಡಬೇಕು ಅವನಿಗೆ ಹೇಳು !” ಎಂದು ದಾದು ಕೋಪದಿಂದ ನಾಗುವಿಗೆ ಪ್ರಶ್ನಿಸಿದ.

 

ಇರಲಿ ಬಿಡು ಅವನನ್ನ ಕ್ಷಮೆ ಕೇಳಿಸೋಣ .. ಬಾ ಹೋಗುವ ಎಂದು ನಾಗು ದಾದುವನ್ನು ಕರಿಯ ಇದ್ದಲ್ಲಿಗೆ ಕರೆತಂದ. ಕೆಳಗಿನ ಗದ್ದೆಯ ಹತ್ತಿರ ಕೆಲಸದಲ್ಲಿದ್ದ ಕರಿಯನನ್ನು ಕೆರೆ ಹತ್ತಿರ ಇದ್ದ ನಿರ್ಜನ ಪ್ರದೇಶಕ್ಕೆ ಕರೆದ ನಾಗು ದಾದುವಿನ ಕೋಣಕ್ಕೆ ಹೊಡೆದಿದ್ದಕ್ಕೆ ಕ್ಷಮೆ ಕೇಳು ಎಂದು ಜೋರಾಗಿ ಹೇಳಿದ.

 

ದಾದು ಅಲ್ಲ‌ ಅವನ ಅಪ್ಪನಿಗೂ‌‌ ಕ್ಷಮೆ ಕೇಳೋದಿಲ್ಲ. ಹೆಚ್ಚು ಅಧಿಕ ಪ್ರಸಂಗ ಮಾಡಿದ್ರೆ ದಾದುವಿಗೂ ಹಾಗೆ ಹೊಡೆಯುತ್ತೇನೆ ಎಂದು ತನ್ನ ಭಂಡತನ ಮುಂದುವರೆಸಿದ . ದಾದುವಿನ ಸಿಟ್ಟು ಮತ್ತೆ ನೆತ್ತಿಗೇರಿತು. ನಿನ್ನ ಅಹಂಕಾರ ಎಲ್ಲ‌ ನಿಲ್ಲಿಸ್ತೇನೆ ಎನ್ನುತ್ತಾ ಹಟ್ಟಿಯ ಕಡೆ ಹೋಗಿ ಕೋಣದ ಬೆತ್ತವನ್ನು ತಂದ. ಆಗ ಕರಿಯ ಕೂಡಾ ದೊಡ್ಡದೊಂದು ಕೋಲು ಹಿಡಿದು ಬಡಿಯಲು ಸಿದ್ದವಾಗಿದ್ದ. ಕೋಣಕ್ಕೆ ಬಾರಿಸಿದಂತೆ ನಿನ್ನ ಬೆನ್ನಿಗೂ ಬಾರಿಸುತ್ತೇನೆ ಎಂದು ಕರಿಯನ ಕೈಯಲ್ಲಿದ್ದ ಕೋಲನ್ನು ಹಿಡಿದೆಳೆದು ದೂರಕ್ಕೆ ಬಿಸಾಡಿದ. ಕರಿಯನ ಬೆನ್ನು ಬಾಗಿಸಿ ಬೆತ್ತದಿಂದ ಸರಿಯಾಗಿ ಬಾರಿಸಿದ . ನೋವು ತಡೆಯಲಾಗದೇ ಕರಿಯ ಕಿರುಚುತ್ತಾ ಓಡಿದ. ದೂರದಿಂದ ಕಲ್ಲು ಬಿಸಾಡಲು ಮುಂದಾದ. ದಾದು ಅವನ ಹಿಂದೆ ಓಡಿ ಇನ್ನೆರಡೂ ಬಾರಿಸಿದ. ಓಡುವ ಭರದಲ್ಲಿ ಎಡವಿ ಬಿದ್ದ ಕರಿಯ ಮತ್ತೊಮ್ಮೆ ಸಿಕ್ಕಿಬಿದ್ದ . ನಾಗು ನಗುತ್ತ ಈಗಲಾದರೂ ಕ್ಷಮೆ ಕೇಳುತ್ತಿಯಾ ಎಂದಾಗ ಸಿಟ್ಟಿನಿಂದ “ಎಲ್ಲ ನಿನ್ನಿಂದಲೇ ಆಗಿದ್ದು ಬೆವರ್ಸಿ!!” ಎನ್ನುತ್ತಾ ಕ್ಷಮೆ ಕೇಳಲು ನಿರಾಕರಿಸಿದ.

 

ದಾದು ಕರಿಯನ ಎರಡು ಕೈಗಳನ್ನು ಹಿಂದಕ್ಕೆ ಕಟ್ಟಿ ಒಂದು ಮರಕ್ಕೆ ಕಟ್ಟಿ ಹಾಕಿದ. “ನಾಳೆ ಬೆಳಗ್ಗಿನವರೆಗೆ ಇಲ್ಲೇ ಇರು” ಎಂದು ಹಟ್ಟಿಗೆ ಹೋಗಿ ಬೊಲ್ಲನಿಗೆ ಸಮಾಧಾನಿಸಿ , ಮನೆಗೆ ಹೋದ.

 

ರಾತ್ರಿಯಾಗುತ್ತಲೇ ಮನೆಗೆ ಬರದ ಕರಿಯನ ಬಗ್ಗೆ ಮಾತು ಪ್ರಾರಂಭವಾಯ್ತು. ಅದಕ್ಕೆ ದಾದು “ಅವನಿಗೆ ಶಿವರಾತ್ರಿ ಮುಗಿದಿಲ್ಲ‌ ಇವತ್ತು ಕೂಡಾ ನಾಗುವಿನೊಟ್ಟಿಗೆ ಎಳನೀರು ಕದಿಯಲು ಹೋಗಿದ್ದಾನೆ. ಯಾರೂ ಅವನಿಗೆ ದಾರಿಕಾಯೋದು ಬೇಡ ಅವನು ಬರ್ತಾನೆ ಇಲ್ಲ ಅಂದ್ರೆ ಅವನ ತರಕಾರಿ ತೋಟದ ಕಾವಲು ಕಾಯ್ತಾ ಅಲ್ಲೇ ಮಲಗಬಹುದು” ಎಂದು ಮನೆಯವರ ಗಮನ ಬೇರೆಡೆ ಸೆಳೆದು‌ ಊಟ ಬಡಿಸಲು ಹೇಳಿ ಮಲಗಿದ.

 

ತನ್ನ ಮೇಲಿನ ದ್ವೇಷಕ್ಕೆ ಮೂಕ‌ಪ್ರಾಣಿಗೆ ಬಡಿದ ಕರಿಯನಿಗೆ ಸರಿಯಾದ ಶಿಕ್ಷೆ ನೀಡಿದ್ದೇನೆ. ಇನ್ನು ಯಾವತ್ತೂ ನನ್ನ ತಂಟೆಗೆ ಅವನು ಬರಬಾರದು ಹಾಗೆ ಮಾಡಿದ್ದೇನೆ. ಅನುಭವಿಸಲಿ ಎಂದು ತಾನು ಮಾಡಿದ ಕಾರ್ಯವನ್ನು ತನ್ನಲೇ ಸಮರ್ಥಿಸಿಕೊಳ್ಳುತ್ತಾ ನಿದ್ದೆಗೆ ಜಾರಿದ. ಮುಂಜಾನೆ 4 ಗಂಟೆಯಾಗುತ್ತಲೇ ಎದ್ದು‌ ಹಟ್ಟಿ ಕೆಲಸ ಮುಗಿಸಿ ಶುಕ್ರನ‌ ನಸು ಬೆಳಕಲ್ಲಿ ಕರಿಯನನ್ನು ಕಟ್ಟಿದ ಮರ ಇದ್ದಲ್ಲಿಗೆ ಹೋದ.

ಮುಂದುವರೆಯುವುದು….

✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *