
ಪ್ರತಿ ದಿನ ಬೆಳಗ್ಗೆ ಬೇಗ ಎದ್ದು ಕೃಷಿ ಚಟುವಟಿಕೆಯಲ್ಲಿ ಭಾಗಿಯಾಗಿ ಊರಿನಲ್ಲಿ ಶುದ್ಧದ ಕೆಲಸ, ಕ್ಷೌರ ಕೆಲಸ , ಮೊಂಟಣ್ಣನ ಶೇಂದಿ ಅಂಗಡಿಯಲ್ಲಿ ಕಳ್ಳು ಕುಡಿದು ಅಮಲೇರಿಸುವುದು , ವೀಳ್ಯದೆಲೆ ತಿನ್ನುತ್ತಾ ಗೆಳೆಯರೊಂದಿಗೆ ಹರಟೆ ಹೊಡೆಯುವುದು ದಾದುವಿನ ಆ ಸಮಯದ ದಿನಚರಿಯಾಗಿತ್ತು. ವರ್ಷಕ್ಕೆರಡು ಬಾರಿ ಕಂಬಳ ಗದ್ದೆಯಲ್ಲಿ ಕಂಬಳ ಓಟ , ಚೆನ್ನಮಣೆ ಆಟ, ತಪ್ಪಂಗಾಯಿ ಆಟ, ಕೋಳಿ ಅಂಕ, ಜಾತ್ರೆ , ಕೋಲ ಮುಂತಾದ ಚಟುವಟಿಗಳಲ್ಲಿ ಕೂಡಾ ಸ್ನೇಹಿತರೊಂದಿಗೆ ಭಾಗಿಯಾಗುತ್ತ ಸಂತೋಷದಿಂದ ಯೌವನದ ಕ್ಷಣಗಳನ್ನು ಕಳೆಯುತ್ತಿದ್ದ. ಲೋಕಯ್ಯ ಭಂಡಾರಿಯವರ ಮಗಳಿಗೆ ಕಸ್ತೂರಿಗೆ ಮದುವೆ ಸಂಬಂಧ ಕೂಡಿ ಬಂದು ಮದುವೆ ನಿಗದಿಯಾಗಿತ್ತು. ಮದುವೆ ವಿಜೃಂಬಣೆಯಿಂದ ನಡೆಯಿತು. ತನ್ನ ತಂಗಿಯಂತಿದ್ದ ಕಸ್ತೂರಿ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ದಾದು ಭಾವುಕನಾದಷ್ಟು ಅವಳ ಸ್ವಂತ ಅಣ್ಣ ತಮ್ಮಂದಿರು ಆಗಿರಲಿಲ್ಲ. ಲೋಕಯ್ಯರ ಕೋರಿಕೆಗೆ ದಾದುವಿನ ತಾಯಿ , ಲಿಂಗಪ್ಪ ಹೆಗ್ಡೆಯವರು ಕೂಡಾ ಮದುವೆಗೆ ಬಂದಿದ್ದರು. ಇದು ದಾದುವಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿತ್ತು. ಲಿಂಗಪ್ಪ ಹೆಗ್ಡೆಯವರು ಮದುವೆ ಊಟ ಮುಗಿಸಿ ಹೊರಟು ನಿಂತಾಗ ದಾದು ಒಮ್ಮೆ ಮನೆಗೆ ಬಂದು ಹೋಗು ತುಂಬಾ ಸಮಯ ಆಯ್ತು ಅಲ್ವ.. ಅಲ್ಲಿವರೆಗೆ ಪಾರ್ವತಿ ಇಲ್ಲೆ ಇರಲಿ ಎಂದು ಹೊರಟು ನಿಂತರು. ಪಾರ್ವತಿಯ ಒಂದು ಕಣ್ಣು ಸಂಪೂರ್ಣ ಮಂಜಾಗಿತ್ತು. ಆದರೆ ಇನ್ನೊಂದು ಕಣ್ಣಿನ ದೃಷ್ಟಿ ಸಾಧಾರಣವಾಗಿತ್ತು. ಹಾಗಾಗಿ ಆಚೆ ಈಚೆ ಓಡಾಡಲು ಯಾವುದೇ ಸಮಸ್ಯೆ ಇರಲಿಲ್ಲ. ಪಾರ್ವತಿ ಖುಷಿಯಿಂದ ಒಪ್ಪಿಕೊಂಡಳು. ಮದುವೆ ನಂತರದ ಕೆಲಸ ಕಾರ್ಯದಲ್ಲಿ ತಾನು ಭಾಗಿಯಾದಳು. ದಿನ ಕಳೆದು ವಾರ ತಿಂಗಳಾಯಿತು. ದಾದುವಿಗೆ ಕಾಬೆಟ್ಟುವಿಗೆ ಹೋಗಲು ಸಮಯ ಸಿಗಲಿಲ್ಲ. ಹಾಗಾಗಿ ಪಾರ್ವತಿ ಇಲ್ಲೇ ಉಳಿದುಕೊಂಡಳು. ದಾದು ಊರಿನ ಭಂಡಾರಿಯಾಗಿರುವ ವಿಷಯ ತಿಳಿಯುತ್ತಲೇ ತನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ತನ್ನ ಪತಿಯ ನೆನಪಾಯಿತು. ಪತಿಗೆ ಊರಿನಲ್ಲಿದ್ದ ಗೌರವ , ಅವರು ಕಾಪಾಡಿಕೊಂಡು ಬಂದಿದ್ದ ವ್ಯಕ್ತಿತ್ವ ಇವೆಲ್ಲವನೂ ಮಗನೊಂದಿಗೆ ಕಳೆದ ಒಂದು ತಿಂಗಳಿನಲ್ಲಿ ಮಗನ ವ್ಯಕ್ತಿತ್ವದಲ್ಲಿ ಕಂಡಳು.
ಆ ಕಾಲದಲ್ಲಿ ಬಿಲ್ಲವರನ್ನು ಜೈನಮನೆತನಗಳ ಆಡಳಿತವಿರುವ ಹೆಚ್ಚಿನ ಕಡೆಗಳಲ್ಲಿ ರಾಜಕೀಯ ಕಾರಣಕ್ಕೋ ಅಥವಾ ಬೇರೆನೋ ಒಂದು ಕಾರಣಕ್ಕೆ ಮುಖ್ಯವಾಹಿನಿಯಿಂದ ಹೊರಗಿಡಲಾಗಿತ್ತು. ಅವರಿಗೆ ಕ್ಷೌರ ನಿಷೇಧವಾಗಿತ್ತು. ಭಂಡಾರಿಗಳು ಅವರ ಮನೆಯ ಶುದ್ಧಕ್ರಿಯೆಯಾಗಲಿ, ಕ್ಷೌರವಾಗಲಿ ಮಾಡುವಂತಿರಲಿಲ್ಲ. ಒಂದು ವೇಳೆ ಮಾಡಿದರೆ ಊರಿನ ಪ್ರಮುಖರ ಕ್ಷಮೆಯಾಚನೆ ಮಾಡಬೇಕಿತ್ತು. ಹೀಗಿದ್ದ ಸಂದರ್ಭ ದಾದುವಿಗೆ ಈ ಅಸಮಾನತೆ ಇಷ್ಟವಿರಲಿಲ್ಲ. ಅವರೇನೂ ಮನುಷ್ಯರಲ್ಲವೇ ಎಂದು ಊರಿನ ಪ್ರಮುಖರ ಕ್ಷೌರದ ಸಂದರ್ಭವೇ ವಾದಿಸುತ್ತಿದ್ದ. ಕೆಳಜಾತಿಯವರಿಗೆ ಕ್ಷೌರ ಬೇಕಾಗಿಯೇ ಇಲ್ಲ.. ದುಡಿಯುವವರಿಗೆ ಅಂದಚಂದ ಯಾಕೆ ಅವರ ಮನಸ್ಸು ಶುದ್ಧ ಇದ್ದರೂ ದೇಹ ಶುದ್ದಿ ಅವರಿಗೆ ಗೊತ್ತಿಲ್ಲ.ಅವರೆಲ್ಲ ಅನಾಗರಿಕರು ಅವರಿಗೇನಾದರೂ ಕಾಯಿಲೆ ಬಂದರೆ ಅದು ನಿನಗೆ ಹರಡಿ ನಮ್ಮ ಕ್ಷೌರ ಮಾಡಿ ನಮಗೂ ಹರಡಬಹುದು . ಹಿಂದೆ ಇಂತಹ ಸಾಂಕ್ರಾಮಿಕ ಕಾಯಿಲೆ ಹರಡಿಕೊಂಡು ಸತ್ತಿರೋ ಕಾರಣ ಇಂತಹ ನಿಯಮ ಮಾಡಿರೋದು ಎಂದು ಕುಮಾರಯ್ಯ ಬಲ್ಲಾಳರು ದೊಡ್ಡದೊಂದು ಕತೆಯನ್ನೇ ಹೇಳುತ್ತಿದ್ದರು. ಆದರೆ ಬಲ್ಲಾಳರೇ ಈಗ ಅಂತಹ ಸಾಂಕ್ರಾಮಿಕ ರೋಗವೇನೂ ಇಲ್ಲವಲ್ಲ ಬಲ್ಲಾಳರೇ ಎಂದರೆ ಅದಕ್ಕೆ ಇನ್ನೊಂದು ಕತೆ ಹೇಳಿ ಶಾಸ್ತ್ರದಲ್ಲಿ ಏನೆಲ್ಲ ಇದೆ ಎಂದು ಸ್ವಚ್ಚತೆಯ ಪಾಠ ಮಾಡುತ್ತಿದ್ದರು.
ದೆಪ್ಪಾಡಿಯ ಕೇಶವ ಡೋಂಗ್ರೆಯವರ ಕ್ಷೌರ ಮಾಡುವಾಗ ಈ ಕ್ಷೌರ ಅಸಮಾನತೆಯ ತರ್ಕ ಮಂಡಿಸಿದಾಗಲೋ ಇಂತಹುದೇ ಕತೆಗಳು , ಶಾಸ್ತ್ರ , ನಿಯಮಗಳ ಮಂಡನೆಯಾಗುತಿತ್ತು. ಜೊತೆಗೆ ಎಚ್ಚರಿಕೆಯನ್ನು ನೀಡುತ್ತಿದ್ದರು.
ಆದರೆ ಊರಿನ ಅಸ್ರಣ್ಣ ದುಗುಣ ಬಟ್ಟರ ಮಗ ಮೂರ್ತಿ ಮಾತ್ರ ವಿಚಾರವಾದಿಯಂತೆ ದಾದುವಿನ ವಾದಕ್ಕೆ ಬೆಂಬಲಿಸುತ್ತಿದ್ದರು. ಅವರು ಬಿ ಎ ಮುಗಿಸಿದ್ದರು. ಆಧುನಿಕ ಶಿಕ್ಷಣದ ಪ್ರಭಾವದಿಂದ ಕೆಳ ಜಾತಿ ಎನಿಸಿಕೊಂಡು ಕ್ಷೌರ ನಿಷೇಧಿಸಲ್ಪಟ್ಟ ಜನರಿಗೆ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿ ಅವರನ್ನು ಮುಖ್ಯವಾಹಿನಿ ಕರೆತರಬೇಕೆಂದು ಬಯಸಿದ್ದರು. ದಾದು ಬಿಲ್ಲವರಿಗೆ ಮತ್ತು ಇತರ ಕೆಳಜಾತಿಯವರಿಗೆ ಕ್ಷೌರ ಮಾಡಿ ಹಳೆ ಪದ್ದತಿಯನ್ನು ಬದಲಾಯಿಸಲು ಉತ್ಸುಕನಾಗಿದ್ದ.
ಮೂರ್ತಿಯವರ ಬೆಂಬಲದೊಂದಿಗೆ ಆಳುವ ಮೇಲ್ವರ್ಗವನ್ನು ಎದುರು ಹಾಕಿಕೊಳ್ಳಲು ಹೆದರದ ದಾದು ಒಂದು ದಿನ ಹತ್ತು ಜನ ಬಿಲ್ಲವ ಯುವಕರನ್ನು ಕೂರಿಸಿ ಕ್ಷೌರ ಮಾಡಿ ಬಿಟ್ಟ. ಇದೊಂದು ಅನಿಷ್ಠ ಪದ್ದತಿಯ ವಿರುದ್ದ ಸಾಂಕೇತಿಕ ಸಮರವಾಗಿತ್ತು. ಈ ವಿಚಾರ ಊರಿನಲ್ಲಿ ಸುದ್ದಿ ಮಾಡಿತು. ಲೋಕಯ್ಯರ ಕಿವಿಗೂ ಬಿದ್ದಿತು. ಸದಾ ದಾದುವಿನ ಪರವಾಗಿರುತ್ತಿದ್ದ ಲೋಕಯ್ಯ, ಮನೆಗೆ ಬಂದರೆ ಪ್ರವೇಶ ನೀಡಬಾರದೆಂಬ ಕಠೋರ ಮನಸ್ಥಿತಿಗೆ ಬಂದು ಬಿಟ್ಟರು. ಇದನ್ನು ಅರಿತ ಕರಿಯ ಇದೇ ಒಳ್ಳೆಯ ಸಮಯವೆಂದುಕೊಂಡು ದಾದು ಬರುವ ದಾರಿಯಲ್ಲಿ ಹುಣಸೆ ಮರದ ಕೋಲು ಹಿಡಿದು ಕುಳಿತ . ದಾದು ಬರುತ್ತಲೇ “ಕೆಳಜಾತಿಯವರಿಗೆ ಕ್ಷೌರ ಮಾಡುವವನಿಗೆ ಮನೆಗೆ ಪ್ರವೇಶ ಇಲ್ಲ ಅಂತ ಅಪ್ಪ ಹೇಳಿದ್ದಾರೆ” ಅಂದ.
“ನಾನು ಮನುಷ್ಯರಿಗೆ ಕ್ಷೌರ ಮಾಡೋದು. ಪ್ರಾಣಿಗಳಿಗೆ ಅಲ್ಲ. ನನಗೆ ಎಲ್ಲ ಮನುಷ್ಯರು ಒಂದೇ.. ನಿನ್ನಂತ ನಾಯಿಗಳು ಬೊಗಳಿದರೆ ನಾನು ಹೆದರಲ್ಲ” ಎಂದು ಸವಾಲೆಸೆದು ಮುಂದೆ ಹೋಗಲು ಯತ್ನಿಸಿದಾಗ ಕೈಯಲ್ಲಿದ್ದ ಕೋಲಿನಿಂದ ಕರಿಯ ಹೊಡೆಯಲು ಕೋಲು ಬೀಸಿದ. ಕೋಲಿನ ಹೊಡೆತ ತಪ್ಪಿಸಿದ ದಾದು ಪಕ್ಕದಲ್ಲಿ ಬಸಳೆ ಚಪ್ಪರದಿಂದ ಕೋಲು ತೆಗೆದು ಕರಿಯನಿಗೆ “ನನ್ನ ಸುದ್ದಿಗೆ ಬಂದರೆ ಕೈ ಕಾಲು ಮುರಿದು ಹಾಕುತ್ತೇನೆ” ಎಂದು ಎಚ್ಚರಿಸಿದ. ಹೆದರಿದ ಕರಿಯ ಮರೆಗೆ ಸರಿದು ಅವಿತುಕೊಂಡ.
ಮನೆಗೆ ಬಂದ ದಾದುನನ್ನು ಲೋಕಯ್ಯ ಹೊರಗೆ ನಿಲ್ಲಿಸಿ “ನಮ್ಮ ಮನೆತನದ ಗೌರವ ನಿನ್ನಿಂದ ಹಾಳಾಗೋದು ಬೇಡ. ನೀನು ಹೀಗೆ ಮಾಡೋದಾದ್ರೆ ಮನೆಯಲ್ಲಿರೋದು ಬೇಡ. ಊರಿನ ಧಣಿಗಳಿಗೆ ನಿನ್ನ ವಿರುದ್ದ ನೂರಾರು ದೂರು ಹೋಗಿದೆ. ನೀನು ತೆಂಕು ಮಾಳದ ಭಂಡಾರ ಚಾಕರಿಯ ಭಂಡಾರಿ ನಿನ್ನ ಹುದ್ದೆಗೆ ಕಟ್ಟುಪಾಡು ಇದೆ. ಊರಿನ ಕ್ಷೌರ ಪದ್ದತಿಯನ್ನು ಬದಲಾಯಿಸಲು ಹೋಗಿ ಗಡಿಪಾರಾಗೋದು ಬೇಡ. ಬೀದಿ ಹೆಣವಾಗೋದು ಕೂಡಾ ಬೇಡ. ಬಿಸಿರಕ್ತದ ಯೌವನದ ಅಮಲಿನಲ್ಲಿ ಮೇಲ್ವರ್ಗದವರನ್ನು ಎದುರು ಹಾಕೋಂಡರೆ ಮತ್ತೆ ಅನುಭವಿಸ್ತಿಯಾ? ಊರಿನ ಪ್ರಮುಖರ ಎದುರು ಹೋಗಿ ಕ್ಷಮೆ ಕೇಳು ಹೋಗು ಅಲ್ಲಿವರೆಗೆ ನಿನಗೆ ಮನೆ ಒಳಗೆ ಪ್ರವೇಶ ಇಲ್ಲ.. ಹೊರಡು ಇಲ್ಲಿಂದ!” ಎಂದು ಗದರಿದರು.
ದಾದು ವಿಚಲಿತನಾದ ತಂದೆ ಸ್ಥಾನದಲ್ಲಿರುವ ಲೋಕಯ್ಯರ ಮಾತಿಗೆ ಪ್ರತಿ ಉತ್ತರ ಕೊಡಬೇಕೆನಿಸಿಸದರೂ ಯಾವ ಮಾತು ತನ್ನ ಬಾಯಿಂದ ಹೊರಡಲಿಲ್ಲ . ಕೇವಲ ಆಯ್ತು ಎಂದು ತಲೆ ಅಲ್ಲಾಡಿಸಿ ಬೊಲ್ಲನಿಗೆ ಬೈ ಹುಲ್ಲು ಹಾಕಿ ಮೂರ್ತಿ ಭಟ್ಟರ ಮನೆಗೆ ಹೋದ. ಮೂರ್ತಿಯವರಿಗೆ ತನ್ನ ಪರಿಸ್ಥಿತಿ ವಿವರಿಸಿದ. ಅದಕ್ಕವರು ತನ್ನ ತಂದೆ ಊರಿನ ಅಸ್ರಣ್ಣ ಅಲ್ಲವೇ ಅವರ ಕ್ಷೌರ ಮಾಡು ಮತ್ತೆ ಅವರೊಂದಿಗೆ ಧಣಿಗಳ ಮನೆಗೆ ಹೋಗೊಣ ಎಂದರು.
ಕುಮಾರಯ್ಯ ಬಲ್ಲಾಳರು ನಮ್ಮ ತರ್ಕ ಒಪ್ಪಿಯೇ ಒಪ್ಪುತ್ತಾರೆ. ಬದಲಾವಣೆ ಜಗದ ನಿಯಮ ಅದು ಆಗಲೇ ಬೇಕು. ಸರ್ಕಾರ ಕೆಳ ಜಾತಿ ಮೇಲ್ಜಾತಿ ನಡುವೆ ಅಂತರ ಹೊಗಲಾಡಿಸಲು ಅನೇಕ ಕಾನೂನು ಮಾಡಿಟ್ಟು ಜನವಿರೋಧದ ಭಯದಿಂದ ಜಾರಿ ಮಾಡದೇ ಹಾಗೆ ಇಟ್ಟಿವೆ. ಸರ್ಕಾರದ ಕಾನೂನುಗಳು ನಮ್ಮ ಪರವಾಗಿಯೇ ಇದೆ ಹೆದರುವ ಅಗತ್ಯವಿಲ್ಲ ಎಂದು ದೈರ್ಯ ತುಂಬಿದರು.
ಅಸ್ರಣ್ಣ ದುಗುಣ ಭಟ್ಟರು ಕೆಳಜಾತಿಯವರಿಗೆ ಕ್ಷೌರ ಮಾಡಿದ ದಾದುನನ್ನು ಒಮ್ಮೆ ಕ್ಷೌರಕ್ಕೆ ನಿರಾಕರಿಸಿದರು. ಆದರೆ ಮಗನ ಮಾತಿಗೆ ತಲೆಬಾಗಿದರು. ದಾದು ಕ್ಷೌರ ಮಾಡಿ ಬಟ್ರೆ ಎರಡು ಸಲ ಸ್ನಾನ ಮಾಡಿ ಸರಿ ಆಗುತ್ತೆ ಎಂದು ಹಾಸ್ಯ ಚಟಾಕಿ ಹಾರಿಸಿದ. ಮೂರ್ತಿಯವರು ನಕ್ಕರು. ಅಸ್ರಣ್ಣರು ನಿನಗೆ ಶಾಲೆ ಕಲಿಸಿದ್ದು ತಪ್ಪಾಯಿತು ಎಂದು ಸ್ನಾನಕ್ಕೆ ಹೋದರು.
ಸ್ನಾನ ಮುಗಿಸಿ ಬಂದ ಅಸ್ರಣ್ಣರ ಮನೆಗೆ ಧಣಿಗಳ ಮನೆಯಿಂದ ಊರಿನ ಪ್ರಮುಖರ ತುರ್ತು ಸಭೆಗಾಗಿ ಓಲೆಯೊಂದು ಬಂದಿತ್ತು. ದಾದುವಿಗೂ ಸಭೆಗೆ ಕರೆ ಬಂದಿತು. ಮೂರ್ತಿಯವರು ಇದು ಕ್ಷೌರದ ವಿಚಾರಕ್ಕೆ ಸಭೆ ಎಂಬುದನ್ನರಿತು ದುಗುಣ ಭಟ್ಟರ ಜೊತೆ ತಾವು ಹೆಜ್ಜೆ ಹಾಕಿದರು.
ದಾದು ಮಾಡಿದ ಸಣ್ಣ ಕಾರ್ಯ ಆಳುವ ವರ್ಗವನ್ನು ದಂಗುಬಡಿಸಿತ್ತು. ಆಳುವ ವರ್ಗದ ನೆಚ್ಚಿನ ಭಂಡಾರಿಯಾಗಿದ್ದ ದಾದು ಇಂತಹ ಕೆಲಸ ಮಾಡಿದ್ದರಿಂದ ಊರಿನ ಮೇಲ್ವರ್ಗದವರ ವಿರೋಧ ಅತಿಯಾಗಿತ್ತು. ಊರಿನ ಪ್ರಮುಖರ ಸಭೆಯಲ್ಲಿ ಎಲ್ಲ ಗುತ್ತಿನವರು ಎರಡು ಊರಿನ ಹತ್ತು ಸಮಸ್ತರು ಜಾತಿ ಪ್ರಮುಖರು ಸೇರಿದ್ದರು. ದಾದುವಿನ ವಿರುದ್ಧ ನಿರ್ಣಯ ಮಾಡಬೇಕೆಂದು ಅಲ್ಲಿದ್ದ ಪ್ರಮುಖರೆಲ್ಲರ ಒತ್ತಾಸೆಯಾಗಿತ್ತು.
ತುಂಬಿದ ಪ್ರಮುಖರ ಸಭೆಗೆ ಊರಿನ ಧಣಿ ಕುಮಾರಯ್ಯ ಬಲ್ಲಾಳರು ಆಗಮಿಸಿ ಆಸೀನರಾದರು. ದಾದು ಎಂದರೆ ಅವರಿಗೆ ಅಚ್ಚುಮೆಚ್ಚು. ದಾದುವಿಗೆ ಧಣಿಯೆಂಬ ಗೌರವ ಹೊರತುಪಡಿಸಿದರೆ ತುಂಬಾ ಸಲುಗೆ ಇತ್ತು. ಹೀಗಾಗಿ ದೂರದಲ್ಲಿ ಅಪರಾಧಿಯಂತೆ ಕುಳಿತಿದ್ದ ದಾದುನನ್ನು ಹತ್ತಿರ ಕರೆದು ಪಕ್ಕದಲ್ಲಿ ಕೂರಿಸಿದರು.
ಊರಿನ ಪ್ರಮುಖರಿಂದ ವಾದ ಪ್ರಾರಂಭವಾಯಿತು. ಕೆಲವರು ಕೆಳಜಾತಿಯವರನ್ನು ನಿಂಧಿಸಿ ಅವರ ನೆರಳು ನಮ್ಮ ಮೇಲೆ ಬೀಳಬಾರದು ಎಂದರೆ, ಇನ್ನು ಕೆಲವರು ಅವರಿಗೆ ಕ್ಷೌರ ಮಾಡುವ ಕ್ಷೌರ ಕುಟುಂಬವನ್ನು ಕೆಳಜಾತಿಗೆ ಸೇರಿಸೋಣ ಎಂದರು. ಕೆಳಜಾತಿಯಾದರೂ ಆಗಬಹುದು ಬಿಲ್ಲವರಿಗೆ ಕ್ಷೌರ ಮಾಡೋದು ಬೇಡ ಅವರು ನಂಬಿಕೆ ದ್ರೋಹಿಗಳು. ಕ್ಷೌರಿಕ ಕತ್ತಿಯನ್ನು ಕಿತ್ತು ಕ್ಷೌರಿಕನಿಗೆ ಇರಿಯುವ ಮನಸ್ಥಿತಿಯವರು ಅವರ ದುರ್ಗುಣಗಳು ಅವರನ್ನು ಕೆಳಜಾತಿಗೆ ಸೇರಿಸಿವೆ. ಅವರನ್ನು ಯಾವುದೇ ಕಾರಣಕ್ಕೂ ಮುಖ್ಯವಾಹಿನಿಗೆ ತರೋದು ಬೇಡ ಎಂಬ ವಾದ ಇನ್ನೊಬ್ಬರಿಂದ ಬಂತು. ಕೆಳಜಾತಿಯವರು ಯಾವ ಕಾರಣಕ್ಕೂ ಕ್ಷೌರಕ್ಕೆ ಯೋಗ್ಯರಲ್ಲ.ಸ್ವಚ್ಚತೆ ಏನೆಂದೇ ಅವರಿಗೆ ಗೊತ್ತಿಲ್ಲ ಹಾಗಾಗಿ ಮೇಲ್ವರ್ಗದ ಆರೋಗ್ಯ ದೃಷ್ಟಿಯಿಂದ ಕೆಳಜಾತಿಯ ಕ್ಷೌರವನ್ನು ಮಾಡಲೇ ಬಾರದು ಎಂಬ ವಾದ ಒಬ್ಬ ಪಂಡಿತನಿಂದ ಕೇಳಿ ಬಂತು. ಭಂಡಾರಿಯನ್ನು ಹುದ್ದೆಯನ್ನು ಕೆಳಗಿಳಿಸಿ ಬಹಿಷ್ಕಾರ ಹಾಕಿಸಿ ಎನ್ನುವ ಕೆಲ ಅಪ್ಪಟ್ಟ ಜಾತಿವಾದಿಗಳಯ ಕೂಡಾ ಇದ್ದರು.
ಎಲ್ಲರ ವಾದ ಆಲಿಸಿದ ಕುಮಾರಯ್ಯರು.ದಾದು ನಮ್ಮ ಭಂಡಾರಿ ಅವನನ್ನು ಯಾವತ್ತೂ ಬಹಿಷ್ಕಾರ ಹಾಕೋ ಮಾತೇ ಇಲ್ಲ. ಇಂತಹ ನೇರ ನಡೆಯ ಪ್ರಾಮಾಣಿಕ ಬುದ್ದಿವಂತ ಭಂಡಾರಿ ನಮಗೆ ಬೇರೆ ಯಾರೂ ಸಿಗಲಿಕ್ಕಿಲ್ಲ. ಅವನು ತಪ್ಪು ಮಾಡಿದ್ದು ಹೌದು ಇನ್ನು ಅಂತಹ ತಪ್ಪು ಮಾಡಲು ಬಿಡದಿರೋಣ ಎಂದರು.
ಅಸ್ರಣ್ಣರು ಎದ್ದು ನಿಂತು ಊರಿನ ಅಸಮಾನತೆಯ ಪದ್ದತಿ ಬದಲಾದರೆ ಬದಲಾಗಲಿ ಬಿಡಿ ದಾದು ಬಿಲ್ಲವರ ಕ್ಷೌರ ಮಾಡಿ ನನ್ನ ಕ್ಷೌರ ಮಾಡಿ ಮಾಡಿದ್ದಾನೆ. ನನಗೇನೂ ಆಗದಿದ್ದರೆ ಊರಿನ ದೈವ ದೇವರಿಗೆ ಇದು ಒಪ್ಪಿಯಾಗಿದ್ದರೆ ಬದಲಾವಣೆ ಆಗಲಿ ಬಿಡಿ ಎಂದರು.
ನಂತರ ಎದ್ದು ನಿಂತ ಮೂರ್ತಿಯವರು ಅಂಬೇಡ್ಕರ್ ಬರೆದಿಟ್ಟ ಸಂವಿಧಾನ ಮುಂದೆ ಜಾರಿಯಾಗಬಹುದಾದ ಕಾನೂನುಗಳು. ಇಂತಹ ಪದ್ದತಿಯ ಪೋಷಕರಿಗೆ ಆಗುವ ಶಿಕ್ಷೆಗಳು ಸಮಾಜ ಸುಧಾರಣೆ ಯಾಕೆ ಆಗಬೇಕು ಎಂದು ವಿವರವಾಗಿ ಸಭೆಗೆ ತಿಳಿಸಿದರು.
ಕೊನೆಗೆ ದಾದು ತನ್ನ ಅಭಿಪ್ರಾಯ ತಿಳಿಸಿದ ” ನಾನು ನಿಮಗಾಗಿರುವ ಬೇಸರಕ್ಕೆ ಕ್ಷಮೆಯಾಚಿಸುತ್ತೇನೆ. ಆದರೆ ಇಂದಲ್ಲ ನಾಳೆ ಕೆಳಜಾತಿ ಮೇಲ್ಜಾತಿ ಎಲ್ಲರೂ ಒಂದೇ ಸೂರಿನಡಿ ಕ್ಷೌರ ಮಾಡಿಸುವ ಕಾಲವೊಂದು ಬರುತ್ತದೆ.ಬದಲಾವಣೆ ಆಗಲೇಬೇಕು ಅದು ಸ್ವಲ್ಪ ನಿಧಾನವಾಗಬಹುದು ಆದರೆ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಸಣ್ಣ ಹೆಜ್ಜೆ ಇಟ್ಟಿದ್ದೇನೆ. ನಿಮ್ಮ ಬೆಂಬಲ ಇದ್ದರೆ ಮುಂದುವರೆಸೋಣ. ನನಗೆ ಎಲ್ಲರೂ ಒಂದೇ..ಎಂದು ಸಭೆಗೆ ಕೈ ಮುಗಿದ.
ಕುಮಾರಯ್ಯರು ಕಾಲ ಬದಲಾಗುತ್ತಿರುವುದು ಪ್ರಜಾಪ್ರಭುತ್ವದ ಸರ್ಕಾರ ನಿಧಾನವಾಗಿ ಗಟ್ಟಿಯಾಗಿ ಅರಸ- ಸಾಮಂತ ಅರಸರ ಆಳ್ವಿಕೆಗಳು ಕೊನೆಯಾಗುತ್ತಿರುವುದನ್ನು ಕೂಲಂಕುಷವಾಗಿ ಗಮನಿಸಿದ್ದ ಕಾರಣ ದಾದು ಮತ್ತು ಮೂರ್ತಿಯವರು ಹೇಳುತ್ತಿರುವುದು ಸರಿಯೆನಿಸಿತು. ಆದರೆ “ಜನಾಂಗ ಜನಾಂಗಗಳ ನಡುವೆ ಹಿಂದೆ ನಡೆದ ಸಂಘರ್ಷಗಳೇ ಇಂತಹ ಪದ್ದತಿಗಳಿಗೆ ಕಾರಣವಲ್ಲವೇ? ಗೆದ್ದವರು ಮೇಲ್ವರ್ಗ! ಸೋತವರು ಕೆಳವರ್ಗ! ಅಂದರೆ ಸೋತವರು ಗುಲಾಮರು. ಸೋತ ಗುಲಾಮರಿಗೆ ಮೇಲ್ವರ್ಗದ ಸ್ಥಾನ ಕೊಟ್ಟರೆ ಕಿರೀಟ ತೆಗೆದು ಅವರಿಗೆ ಶರಣಾದಂತೆ ಹೊರತು ಇಲ್ಲಿ ಅಸಮಾನತೆ ಪ್ರಶ್ನೆ ಬರೋದೇ ಇಲ್ಲ” ಎಂಬ ತನ್ನ ವಾದವನನ್ನು ಮುಂದಿಟ್ಟು ಅಂತಿಮವಾಗಿ ಸಧ್ಯದ ಮಟ್ಟಿಗೆ ಕೆಳಜಾತಿಯವರ ಮನೆಗೆ ಹೋಗಿ ಕ್ಷೌರಕ್ಕೆ ಅವಕಾಶ ಇಲ್ಲ. ಕ್ಷೌರ ಕಟ್ಟೆ ನಿರ್ಮಿಸಿ ಅಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.ಕೆಳ ಜಾತಿಯವರಿಗೆ ಕ್ಷೌರಕ್ಕೆ ಅವರ ಶುದ್ದದ ಕೆಲಸ ಮಾಡುವ ಪರಿಯಾಳ ಕ್ಷೌರಿಕರನ್ನು ನೇಮಿಸೋಣ ಎಂಬ ನಿರ್ಣಯ ಕೈಗೊಂಡು ಮತ್ತೆ ಅಸಮಾನತೆಯ ಪದ್ದತಿಯನ್ನು ಮತ್ತೊಂದು ರೀತಿಯಾಗಿ ಬೆಳೆಸುವ ಸಂಚು ಸಿದ್ಧವಾಯಿತು. ಆದರೆ ಕೆಳಜಾತಿಯವರು ಕೂಡಾ ಕ್ಷೌರ ಮಾಡಿಸಬಹುದು ಎಂಬ ನಿಯಮ ಬಂದ ಕಾರಣ ಸಮಾಜ ಸ್ವಲ್ಪವಾದರೂ ಸುಧಾರಣೆ ಆಗಬಹುದೆಂದು ಎಂದು ಮೂರ್ತಿಯವರು ಸುಮ್ಮನಾದರು.
ಈ ನಿರ್ಣಯಕ್ಕೆ ಊರಿನ ಪ್ರಮುಖರು ಒಪ್ಪಿದರು. ಸಭೆ ಮುಕ್ತಾಯವಾಯಿತು. ಎಲ್ಲ ಸರಿಯಾಗಿದೆ ನಿಮ್ಮ ಯಾವ ಗೌರವವೂ ಹೋಗಿಲ್ಲ ಎಂದು ಲೋಕಯ್ಯರಿಗೆ ಹೇಳಿ ಮನೆಯನ್ನು ಪ್ರವೇಶಿಸಿದ. ಗಾಬರಿಯಲ್ಲಿದ್ದ ತಾಯಿ ಪಾರ್ವತಿಗೆ ಎಲ್ಲವನ್ನೂ ವಿವರಿಸಿದ. ಮಗನ ಕಾರ್ಯ ಕಂಡು ಪಾರ್ವತಿಯ ಕಣ್ಣುಗಳಲ್ಲಿ ಆನಂದ ಭಾಷ್ಪ ಹರಿಯಿತು.
ಕೆಳಜಾತಿಯವರಿಗೆ ಕ್ಷೌರ ಕಟ್ಟೆ ನಿರ್ಮಾಣವಾಯಿತು. ಆದರೆ ಪೆರಿಯಾಳ ಕ್ಷೌರಿಕ ಸಿಗಲಿಲ್ಲ.ಪರವೂರಿವರು ಯಾರೂ ಬರಲು ಒಪ್ಪಲಿಲ್ಲ.ಮಾಳದ ಊರಿನಲ್ಲಿ ಪರಿಯಾಳ ಕ್ಷೌರಿಕರ ಇರಲಿಲ್ಕ. ಒಟ್ಟಿನಲ್ಲಿ ಕೆಳವರ್ಗದ ತಾವು ಕ್ಷೌರ ಮಾಡಿಸಿಕೊಂಡು ಅಂದವಾಗುವ ಆಸೆ ಕೈಗೂಡಲೇ ಇಲ್ಲ
ಮುಂದುವರೆಯುವುದು….