ವರುಷಗಳು ಉರುಳಿದಂತೆ ದಾದುವಿಗೆ ಕಂಕಣ ಬಲ ಕೂಡಿ ಬಂದು ತಾನು ಬೆಳೆದ ಕಾಬೆಟ್ಟಿನ ಒಬ್ಬ ಪ್ರಾಥಮಿಕ ಶಿಕ್ಷಣ ಪಡೆದಿದ್ದ ವಿದ್ಯಾವಂತ ಹೆಣ್ಣಿನೊಂದಿಗೆ ಮದುವೆಯಾಯಿತು. ಊರಿನ ಭಂಡಾರ ಚಾಕರಿ ಮಾಡುತ್ತಾ ದಾದು ತನ್ನ ಸಂಸಾರ ನಡೆಸುತ್ತಿದ್ದ. ಈ ನಡುವೆ ತನ್ನ ಬಾಲ್ಯದ ನೆನಪುಗಳೆಲ್ಲ ತೆರೆ ಮರೆಗೆ ಸರಿದವು. ಲಿಂಗಪ್ಪ ಹೆಗ್ಡೆಯವರ ಅಕಾಲ ಮರಣ ತನ್ನ ಪ್ರೀತಿಯ ಬೊಲ್ಲನ ವಯೋಸಹಜ ಮರಣ ಇವೆಲ್ಲ ತನ್ನ ಬಾಲ್ಯದ ಬಂಧನಗಳನ್ನು ಕಳಚಿಬಿಟ್ಟಿತು. ಲೋಕಯ್ಯ ತನ್ನ ಇಬ್ಬರು ಗಂಡು ಮಕ್ಕಳ ಮದುವೆಯ ನಂತರ, ದಾದುವಿಗೆ ಪ್ರತ್ಯೇಕ ಮನೆ ಮಾಡಲು ಜಾಗ ಕೊಟ್ಟಿದ್ದರು. ಜೊತೆಗೆ ತನ್ನ ಜಮೀನ್ದಾರರ ಎರಡು ಗದ್ದೆಯನ್ನು ಗೇಣಿಗೆ ನೀಡಿದ್ದರು. ಈ ಮನೆಯಲ್ಲಿ ತಾಯಿ ಪಾರ್ವತಿ ಮತ್ತು ಹೆಂಡತಿ ದೇವಿಯೊಂದಿಗೆ ಜೀವನ ನಡೆಸುತ್ತಿದ್ದ. ತನ್ನ ಜವಬ್ದಾರಿಗಳೆಲ್ಲ ಮುಗಿಯುತು ಎಂಬಂತೆ ತಾಯಿ ಪಾರ್ವತಿ ಸಣ್ಣದೊಂದು ಜ್ವರ ಬಂದು ಹಾಸಿಗೆ ಹಿಡಿದವಳು ಪರಲೋಕ ಸೇರಿದಳು. ತಾಯಿ ಪಾರ್ವತಿ ತನಗಾಗಿ ಅವಳ ಜೀವನವನ್ನೇ ಮುಡಿಪಾಗಿಟ್ಟಿದ್ದಳು. ತಾಯಿಯ ಅಗಲುವಿಕೆ ದಾದುವನ್ನು ಬಹಳ ಕಾಡಿತು.
ಬಡಗು ಮಾಳ ಗ್ರಾಮದ ಊರಿನ ಒಂದನೇ ಗುತ್ತಿನ ಅಧಿಕಾರ ಒಬ್ಬ ನವ ಯುವಕ ಗುಣಪಾಲ ಕಂಬಳಿ ಎಂಬವರಿಗೆ ಸಿಕ್ಕಿತು. ಈ ಯುವಕ ಊರಿನ ಗುತ್ತು ದೈವಗಳ ಬಗ್ಗೆ ಅಪಾರ ಭಕ್ತಿ , ಪ್ರೀತಿ ಹೊಂದಿದ್ದ. ನೇಮದ ಕಟ್ಟುಕಟ್ಟಳೆಗಳು ನಿಯಮಬದ್ಶವಾಗಿ ನಡೆಸಬೇಕೆಂಬ ಇಚ್ಷೆ ಅವನಿಗಿತ್ತು. ಜಯರಾಜ ಕಂಬಳಿಯವರು ವಯಸ್ಸಾದ ಕಾರಣ ತನ್ನ ಸೋದರಳಿಯ ಗುಣಪಾಲನಿಗೆ ಗುತ್ತಿನ ದೈವದ ಅಧಿಕಾರ ನೀಡುವ (ಗಡಿ-ಭಾಮ) ಕ್ರಮ ಪರಂಪರೆಯಂತೆ ನಡೆಯಿತು.
ಅಂದಿನಿಂದ ನವ ಯುವಕ ಗುಣಪಾಲ ಊರಿನವರ ನೆಚ್ಚಿನ ಬಾಬಣ್ಣ ಆದರು. ಬಾಬಣ್ಣನ ಕಾರ್ಯ ವೈಖರಿ ಮತ್ತು ಯುವ ನಾಯಕತ್ವವನ್ನು ಗಮನಿಸಿ ಊರ ಜನ ಇವರನ್ನು ತಮ್ಮ ನಾಯಕನಾಗಿ ಬಹು ಬೇಗ ಸ್ವೀಕರಿಸಿದರು. ಅಲ್ಪ ಕಾಲದಲ್ಲೇ ಜನಪ್ರಿಯರಾದರು. ಜನಪ್ರಿಯತೆ ಹೆಚ್ಚಾದಂತೆ ವಿರೋಧಿಗಳು ಕೂಡಾ ಹುಟ್ಟಿಕೊಂಡಿದ್ದರು. ಇವರ ನೆಚ್ಚಿನ ದೈವ ಹೌಟಲ್ದಾಯ, ಇವರ ಭಕ್ತಿಗೆ ದೈವ ಒಲಿದಿದ್ದ. ಇವರ ಮಾತು ಸ್ಪಟಿಕದಂತಿರುತಿತ್ತು. ಮೃದು ಮಾತು ದೈವ ನುಡಿಯಷ್ಟೇ ಸ್ಪಷ್ಟತೆಯಿತ್ತು. ಇವರ ಮಾತನ್ನು ಮರು ವಿಮರ್ಶೆ ಅಥವಾ ಪ್ರಶ್ನೆ ಮಾಡುವ ಪ್ರಮೇಯವೇ ಇರಲಿಲ್ಲ. ಇವರು ಆಡಿದ ಮಾತಿನಂತೆ ಎಷ್ಟೋ ಘಟನೆಗಳು ನಡೆಯುತಿತ್ತು. ಇವರ ಮಾತನ್ನು ಮೀರಿ ಹೋದ ವ್ಯಕ್ತಿ ಯಾರೇ ಆಗಿರಲಿ ಅವರು ಏನಾದರೊಂದು ತೊಂದರೆಗೊಳಗಾಗುತ್ತಿದ್ದರು.
ಬಾಬಣ್ಣ ಡಂಬ ಆಚರಣೆಗಳಿಗೆ ವಿರುದ್ಧವಾಗಿದ್ದರು. ಪ್ರಕೃತಿ ಆರಾಧನೆಯ ಪರವಾಗಿದ್ದರು. ನೇಮದ ಸಂದರ್ಭದಲ್ಲಿ ಪ್ರಕೃತಿಯಲ್ಲಿ ದೊರೆಯುವ ಫಲ ಪುಷ್ಪ, ಶುದ್ಧ ವಸ್ತ್ರ, ನೇಮದ ಕಟ್ಟುಕಟ್ಟಳೆಯಂತೆ ಸಿರಿ ಸಿಂಗಾರ, ಮಧ್ಯಸೇವನೆ, ಧೂಮಪಾನ ನಿಷೇಧ, ಸಾತ್ವಿಕ ಆಹಾರಸೇವನೆ ಮುಂತಾದ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ದೈವಚಾಕರಿಯವರಿಗೆ ಆದೇಶ ನೀಡುತ್ತಿದ್ದರು. ದೈವ ಚಾಕರಿಯವರನ್ನು ಪ್ರತ್ಯೇಕವಾಗಿ ಕರೆದು ನೇಮ ಸಂಸ್ಕಾರಗಳ ಬಗ್ಗೆ ತಿಳಿಸುತ್ತಿದ್ದರು. ಇವರು ದೈವ ಸಂಸ್ಕೃತಿಯನ್ನು ಪೋಷಿಸುವ ಮತ್ತು ದೈವ ಚಾಕರಿಯವರೊಂದಿಗೆ ಅನೋನ್ಯವಾಗಿ ಬೆರೆಯುವ ಗುಣಗಳು ಇವರ ನಾಯಕತ್ವ ಗುಣಕ್ಕೆ ಸಾಕ್ಷಿಯಾಗಿದ್ದವು. ಇದರಿಂದ ದೈವ ಚಾಕರಿಯವರೆಲ್ಲ ಇವರ ಮಾತನ್ನು ಸ್ವ ಇಚ್ಚೆಯಿಂದ ಪಾಲಿಸುತ್ತಿದ್ದರು.
ಲೋಕಯ್ಯ ಮತ್ತು ಹಿರಿಯ ಮಗ ಸಿದ್ದು ಬಡಗು ಮಾಳದ ಭಂಡಾರ ಚಾಕರಿಯ ಭಂಡಾರಿಗಳಾಗಿದ್ದರು. ಸಿದ್ದು ವಿಗೆ ಕಳ್ಳು ಅಥವಾ ಸರ್ಕಾರ ಹೊಸದಾಗಿ ಮಾರುತ್ತಿದ್ದ ಮಧ್ಯ ಸೇವನೆ ಮಾಡುವ ಅಭ್ಯಾಸವಿತ್ತು. ಸಿದ್ಧು ಬಾಬಣ್ಣರ ಕಟ್ಟುನಿಟ್ಟಿನ ನಿಯಮ ನೇಮದಂದು ಅಭ್ಯಾಸಬಲದಿಂದ ಸ್ವಲ್ಪ ಕುಡಿದಿದ್ದ. ನಿಯಮಕ್ಕೆ ಹೆದರಿ ಧಣಿ ಬಾಬಣ್ಣರ ಹತ್ತಿರ ಸುಳಿಯಲಿಲ್ಲ. ಆದಷ್ಟು ತಾನು ಕುಡಿದಿದ್ದ ಸ್ಪಿರಿಟ್ ಮಧ್ಯದ ವಾಸನೆ ಯಾರ ಮೂಗಿಗೂ ಬಡಿಯದಿರಲಿ ಎಂದು ಆದಷ್ಟು ತಾಂಬೂಲ ತಿನ್ನುತ್ತಿದ್ದ. ಆದರೆ ಬಾಬಣ್ಣ ಶಾಲೆಯ ಹೆಡ್ ಮಾಸ್ಟ್ರಂತೆ ಎಲ್ಲರನ್ನು ಹತ್ತಿರ ಕರೆದು ಮಾತಾನಾಡಿಸದೇ ಬಿಡುತ್ತಿರಲಿಲ್ಲ. ದೂರ ನಿಂತು ಮಾತಾನಾಡಿದವನೊಡನೆ ಸ್ವರ ತಗ್ಗಿಸಿ ಮಾತನಾಡಿ ಹತ್ತಿರಕ್ಕೆ ಬರುವಂತೆ ಕಿವಿಯ ಹತ್ತಿರ ಬಂದು ಹೇಳುವಂತೆ ಮಾಡುತ್ತಿದ್ದರು. ಅಷ್ಟು ಹತ್ತಿರ ಬಂದ ಚಾಕರಿಯ ವ್ಯಕ್ತಿ ಮಧ್ಯ, ಮಾಂಸ ಸೇವಿಸಿದ್ದರೆ ಬಾಬಣ್ಣರಿಗೆ ಸಿಕ್ಕಿಹಾಕಿಕೊಳ್ಳುತ್ತಿದ್ದರು. ಈ ಸಲ ಸಿದ್ಧು ಭಂಡಾರಿಯ ಸರಧಿ ಮಧ್ಯ ಕುಡಿದಾಗಿತ್ತು, ಧಣಿ ತನ್ನನ್ನು ಹತ್ತಿರಕ್ಕೆ ಕರೆದಾಗಿತ್ತು, ಸಿಕ್ಕಿ ಬಿದ್ದಾಗಿತ್ತು. ಒಬ್ಬ ಭಂಡಾರಿಯೇ ಭಂಡಾರದ ನಿಯಮವನ್ನು ಉಲ್ಲಂಘಿಸಿಯಾಗಿತ್ತು. ಇದು ಬಾಬಣ್ಣರಿಗೆ ಅತೀವ ನೋವು, ಸಿಟ್ಟು ತರಿಸಿತ್ತು. ” ಸಿದ್ಧು ಭಂಡಾರಿ ನಿನ್ನೆ ನಾನು ಕೋಣದ ಎದುರು ಕಿನ್ನಾರಿ ಬಾರಿಸಿದ್ದ. ” ಎಂದಿದ್ದರು. ಭಂಡಾರಿ ತಪ್ಪುಮಾಡಿದರೆ ದುಪ್ಪಟ್ಟು ಶಿಕ್ಷೆ . ಬೆಳಗ್ಗೆ ನೇಮ ಮುಗಿಯುವಷ್ಟರಲ್ಲಿ ತಪ್ಪುಕಾಣಿಕೆ ಹಾಕು . ಇಲ್ಲವಾದಲ್ಲಿ ಈ ನೇಮದ ಮಣ್ಣಿಗೆ ಕಾಲಿಡಬೇಡ ಎಂದು ಹೇಳಿದ್ದರು. ಬೆಳಗ್ಗೆಯಾಗುತ್ತಲೇ ಸಿದ್ದುವಿನ ನಿಯಮ ಭ್ರಷ್ಟತೆಯ ಸುದ್ಧಿ ಊರಿಡೀ ಹರಡಿತ್ತು. ಸಿದ್ಧುವಿನ ಒಳ್ಳೆಯ ವ್ಯಕ್ತಿತ್ವ ಒಂದು ಕ್ಷಣದ ತಪ್ಪಿನಿಂದ ಹಾಳಾಗಿ ಹೋಯಿತು. ಸಿದ್ಧು ಬಾಬಣ್ಣ ಮತ್ತು ಇತರ ಗುತ್ತಿನವರ ಮಾತಿನಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದ. ತಪ್ಪು ಕಾಣಿಕೆ ಹಾಕುವುದೆಂದರೆ ಊರಿನ ಜನರ ಮಧ್ಯೆ ದೊಡ್ಡ ಅವಮಾನವಾದಂತೆ! ಬಾಬಣ್ಣನ ಕ್ಷಮೆ ಕೇಳಿದ ಅವರು “ಮಧ್ಯದ ಅಮಲು ಇಳಿದ ನಂತರ ದೈವದ ಹತ್ತಿರ ಕ್ಷಮೆ ಕೇಳು” ಎಂದರು. ಬೆಳಗಾಗುವಷ್ಟರಲ್ಲಿ ನೇಮ ಮುಗಿಯಿತು. ಸಿದ್ಧು ಮನೆಗೆ ಹೊರಟವನು ಮನೆ ಸೇರಿರಲಿಲ್ಲ. ತನ್ನ ಗದ್ದೆಯ ಹತ್ತಿರದ ಹಾಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ. ಹೊಟ್ಟೆಯಲ್ಲಿ ಸಂಕಟವಾಯ್ತೋ ಏನೋ ಗೊತ್ತಿಲ್ಲ ಗದ್ದೆಗೆ ಅರಚುತ್ತಾ ಓಡಿಬಂದ ಅಲ್ಲೇ ಹತ್ತಿರವಿದ್ದ ದಾದು ಮತ್ತು ಸ್ನೇಹಿತರಾದ ನಾಗು, ನರಂಗ, ರಾಜು ಎಲ್ಲರೂ ಗದ್ದೆಯತ್ತ ಓಡಿದರು. ನಿಲ್ಲಲಾಗದೇ ಹೊಟ್ಟೆ ಹಿಡಿದು ನರಳಾಡುತ್ತಿದ್ದ ಸಿದ್ದು ನನ್ನು ಮೇಲಕ್ಕೆತ್ತಿ ದಾಗ ನಾನು ಸಾಯ್ತೇನೆ ಎಂದು ಬೊಬ್ಬೆ ಹಾಕಿದ. ಸುತ್ತಮುತ್ತಲ ಮನೆಯ ಎಲ್ಲರೂ ಸೇರಿದರು. ವಿಷ ಸೇವಿಸಿದ್ದು ಗೊತ್ತಾಯಿತು. ಉಪ್ಪು ನೀರು ಕುಡಿಸಿದರು. ನಾನಾ ಚಿಕಿತ್ಸೆ ನೀಡಲಾಯಿತು ಆದರೆ ಫಲಕಾರಿಯಾಗಲಿಲ್ಲ. ಗದ್ದೆಯ ಬಧುವಿನಲ್ಲಿ ಮಲಗಿಸಿದ ದಾದು ಮತ್ತು ಸ್ನೇಹಿತರು ಅನೇಕ ಪ್ರಯತ್ನಪಟ್ಟರು. “ದಾದು… ನನ್ನ ಮಕ್ಕಳು .. ಮಕ್ಕಳು ಉಪವಾಸ ಬೀಳಬಾರದು. ನೀನು ಇದ್ದಿಯಲ್ವ ಇದ್ದಿಯಲ್ವ …….? ” ಎಂದು ನರಳುತ್ತಾ ಕೊನೆಯ ಮಾತು ಹೇಳಿ ಕಣ್ಣು ಮುಚ್ಚಿದ.
ನೇಮದ ಮರುದಿನವೇ ಊರಿನಲ್ಲಿ ಸೂತಕ ಛಾಯೆ ಮೂಡಿತ್ತು. ಅವಮಾನವೋ… ? ಅಥವಾ ತಾನು ತಪ್ಪು ಮಾಡಿದೆನೆಂಬ ಪಶ್ಚತ್ತಾಪವೋ….? ಭಂಡಾರದ ಘನತೆಗೆ ಕಪ್ಪುಚುಕ್ಕಿಯಾಗಿಬಿಟ್ಟೆನೆಂದೋ? ಸ್ಪಷ್ಟ ಕಾರಣ ಇನ್ನೂ ನಿಗೂಢ. ಮಧ್ಯದ ಚಟ, ಊರಿನ ಕಠಿಣ ಕಟ್ಟುಪಾಡು, ಭಂಡಾರ ಚಾಕರಿ ಇವೆಲ್ಲದರ ನಡುವೆ ತನ್ನ ಕುಟುಂಬಕ್ಕೆ ಆಸರೆಯಾಗಿದ್ದ ಜೀವದ ಪ್ರಾಣಪಕ್ಷಿ ಹಾರಿ ಹೋಯಿತು. ಬಾಬಣ್ಣನಿಗೆ ತೀವ್ರ ಪಶ್ಚತ್ತಾಪವಾಯಿತು. ಸಿದ್ದುವಿನ ಹೆಂಡತಿ , ನಾಲ್ವರು ಮಕ್ಕಳು ಆಸರೆಯಿಲ್ಲದಂತಾದರು. ತನ್ನ ಜಮೀನನ್ನು ಸಿದ್ದುವಿನ ಹೆಂಡತಿ ಹೆಸರಿಗೆ ಗೇಣಿರಹಿತವಾಗಿ ನೀಡಿದರು. ಸಿದ್ದು ನಿರ್ವಹಿಸುತ್ತಿದ್ದ ಭಂಡಾರ ಚಾಕರಿ ಕೂಡಾ ದಾದುವಿನ ಕೈಗೆ ಬಂದಿತ್ತು. ಊರಿನ ಪ್ರಮುಖ ದೈವದ ಸತ್ತಿಗೆ ಹಿಡಿಯುವ ಜವಬ್ದಾರಿಯನ್ನು ದಾದು ಭಕ್ತಿಯಿಂದ ಒಪ್ಪಿಕೊಂಡು ಬಾಬಣ್ಣನ ನಿಯಮದಂತೆ ನಡೆದುಕೊಂಡು , ಬಾಬಣ್ಣನಿಗೆ ಆತ್ಮೀಯನಾದ.
ಶಿಸ್ತು ಮತ್ತು ದೈವದ ಮೇಲಿನ ಭಕ್ತಿಯಿಂದ ಶಕ್ತಿಯನ್ನು ಸಿದ್ಧಿ ಮಾಡಿಕೊಂಡಿದ್ದ ಬಾಬಣ್ಣ ಬೇಜಾರಾಗಿ ಏನಾದರೂ ಹೇಳಿದರೆ ಅದು ಹಾಗೆಯೇ ಆಗುತಿತ್ತು. ಇದರ ಪರಿಣಾಮ ಊರಿನ ಜನ ಭಯ ಭಕ್ತಿ ಯಿಂದ ಇದ್ದರು. ತಪ್ಪು ಕೆಲಸ ಮಾಡುವ ಮುನ್ನ ನೂರು ಬಾರಿ ಯೋಚಿಸುತ್ತಿದ್ದರು. ಇವರ ಕಠಿಣ ನ್ಯಾಯ ತೀರ್ಮಾನಗಳಿಂದ ಕೆಲವರ ವಿರೋಧ ಕಟ್ಟಿಕೊಳ್ಳುವ ಪರಿಸ್ಥಿತಿ ಕೂಡಾ ಇತ್ತು. ಹಳ್ಳಿಗಳಲ್ಲಿದ್ದ ಗುತ್ತು ಮನೆಗಳ ಅಧಿಕಾರಗಳು ಹೊಸ ಪ್ರಜಾಪ್ರಭುತ್ವ ಸರ್ಕಾರದ ಪರಿಣಾಮ ರಾಜಕೀಯ ಪಕ್ಷಗಳು ಹಳ್ಳಿಯನ್ನು ಪ್ರವೇಶಿಸಲು ಆರಂಭಿಸಿದ್ದವು. ಹಳ್ಳಿಯ ಅಧಿಕಾರ ಗುತ್ತಿನವರಿಂದ ರಾಜಕೀಯ ಪಕ್ಷದ ಕೈಗೆ ಹೋಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದವು. ಆದರೂ ಊರಿನ ಪ್ರಭಾವಿ ಆಡಳಿತವರ್ಗವನ್ನು ಎದುರು ಹಾಕಿಕೊಳ್ಳುವ ದೈರ್ಯ ಯಾರಿಗೂ ಇರಲಿಲ್ಲ. ರಾಜಕೀಯ ಪಕ್ಷ ಆಡಳಿತ ಚುಕ್ಕಾಣಿಗಾಗಿ ಗುತ್ತು ಆಡಳಿತಗಾರರನ್ನು ರಾಜಕೀಯಕ್ಕೆ ಸೆಳೆಯುತಿತ್ತು. ಬರಲೂ ಒಪ್ಪದವರನ್ನು ಸಹ ಆಡಳಿತದಾರರ ಮೂಲಕ ಎತ್ತಿಕಟ್ಟಲು ಪ್ರಯತ್ನಿಸುತಿತ್ತು. ಜನಪ್ರಿಯ ವ್ಯಕ್ತಿಯ ಮಾನವನ್ನು ಸುಳ್ಳು ಆರೋಪ ಹೊರಿಸಿ ಜನಪ್ರಿಯತೆಯನ್ನು ಕುಗ್ಗಿಸಲಾಗುತಿತ್ತು.
ರಾಜಕೀಯ ಪಕ್ಷವನ್ನು ಊರಿನಿಂದ ದೂರವಿಟ್ಟು ಉತ್ತಮ ಆಡಳಿತ ಮಾಡುತಿದ್ದ ಬಾಬಣ್ಣ ಒಮ್ಮೆ ಇಂತಹುದೇ ಷಡ್ಯಂತ್ರ ಅನುಭವಿಸಬೇಕಾಯಿತು. ಒಮ್ಮೆ ಕೋಲದ ಸಂದರ್ಭದಲ್ಲಿ ಕಾಣಿಕೆ ಡಬ್ಬಿಗೆ ಅನಾಮದೇಯ ಒಬ್ಬ ಬಾಬಣ್ಣನ ಬಗ್ಗೆ ಕೆಟ್ಟದಾಗಿ ಬರೆದು ಹಾಕಿದ್ದ. ಹೆಣ್ಣು, ಜೂಜು, ಮಧ್ಯ ದ ದಾಸರಾಗಿದ್ದಾರೆ. ಅವರನ್ನು ಊರಿನಿಂದ ಹೊರಗೆ ಅಟ್ಟಬೇಕು ಎಂದು ಬರೆಯಲಾಗಿತ್ತು. ಇದು ಬಾಬಣ್ಣನಿಗೆ ತೀವ್ರ ನೋವುಂಟು ಮಾಡಿತು.ಈ ಅವಮಾನ ಯಾರದ್ದೋ ಷಡ್ಯಂತ್ರವೆಂದು ಅರಿತ ಬಾಬಣ್ಣ.. ತನ್ನ ಪ್ರೀತಿಯ ಆರಾಧ್ಯ ದೈವ ಹೌಟಲ್ದಾಯನನ್ನು ಕೋರಿಕೊಂಡರು. ಇಂದಿನಿಂದ 10 ದಿನದೊಳಗೆ ಈ ಚೀಟಿ ಬರೆದು ಹಾಕಿದವನು ಯಾರು ಎಂದು ತಿಳಿಯಬೇಕು. ಹೀಗಾದರೆ ನನ್ನ ವತಿಯಿಂದ ಸರ್ವ ಆಡಂಬರದ ಹರಕೆಯ ಕೋಲ ಕೊಡುತ್ತೇನೆ ಎಂದು ದೈವದ ಮೇಲೆ ಹರಕೆ ಇಟ್ಟರು.
ಒಂದು ವಾರದೊಳಗೆ ಬಾಬಣ್ಣನ ಗುತ್ತಿನ ದ್ವಾರದ ಹೊರಗೆ ಒಬ್ಬ ವ್ಯಕ್ತಿ ರಕ್ತ ಕಾರಿ ಸತ್ತು ಹೋದ. ದೈವ ಹೌಟಲ್ದಾಯ ತನ್ನ ಶಕ್ತಿಯನ್ನು ಏಳು ದಿನದಲ್ಲೇ ತೋರಿಸಿದ್ದ. ಇವನೇ ಈ ಚೀಟಿ ಬರೆದ ವ್ಯಕ್ತಿಯೆಂದು ತನ್ನ ಭಕ್ತ ಬಾಬಣ್ಣನಿಗೆ ತೋರಿಸಿಕೊಟ್ಟಿದ್ದ. ಚೀಟಿ ಬರೆದಿದ್ದ ವ್ಯಕ್ತಿ ಬಾಬಣ್ಣನ ವಿರೋಧಿಯಾಗಿದ್ದ, ಇದು ಬಾಬಣ್ಣನ ವಿರುದ್ಧ ನಡೆದ ಷಡ್ಯಂತ್ರ ಎಂಬುದು ಊರಿಡಿ ಜನ ಮಾತಾನಾಡುತ್ತಿದ್ದರು. ಇವರ ದೈವ ಭಕ್ತಿ ಮತ್ತು ದೈವ ಇವರಿಗೆ ನೀಡಿರುವ ಅಭಯದ ಕಥೆ ಊರು ಪರವೂರಿನಲ್ಲೆಲ್ಲ ಹರಡಿತ್ತು. ಬಾಬಣ್ಣನ ಜನಪ್ರಿಯತೆ ಮತ್ತಷ್ಟು ಹೆಚ್ಚಾಯಿತು.
ದಾದು ನೇಮದ ಸಂದರ್ಭ ಆತನ ಕರ್ತವ್ಯ ಪಾಲನೆಯನ್ನು ಗಮನಿಸಿದ ಬಾಬಣ್ಣ ಭಂಡಾರದ ಪಟ್ಟಿ ಮತ್ತು ಹಿಂಗಾರದ ಅಧಿಕಾರ ನೀಡಿ ಅಧಿಕೃತ ಭಂಡಾರಿಯನ್ನಾಗಿ ನೇಮಿಸಿದರು. ಅಂದಿನಿಂದ ದಾದು ದೈವ ಹೌಟಲ್ದಾಯನ ಪರಮ ಭಕ್ತನಾದ. ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದ. ಎರಡು ಊರಿನ ಜವಬ್ದಾರಿ ದಾದುವಿನ ಪಾಲಾಯಿತು. ಇದು ತನ್ನ ಬಾಲ್ಯದ ಶತ್ರು ಕರಿಯನ ಉರಿಗೆ ಕಾರಣವಾಯಿತು.ತನ್ನ ಅಣ್ಣ ಸಿದ್ದುವಿನ ಮರಣ ನಂತರ ಆತನ ಭಂಡಾರದ ಜವಬ್ದಾರಿ ನನಗೆ ಸಿಗಬೇಕಿತ್ತು ಎಂದು ಗುತ್ತುಪ್ರಮುಖರಲ್ಲಿ ಅವಲತ್ತುಕೊಂಡ. ಬಾಬಣ್ಣನ ವಿರೋಧಿಗಳಲ್ಲೂ ಈ ವಿಚಾರ ಬಿತ್ತಿ ತನಗೆ ಸಹಕರಿಸಲು ಕೋರಿದ.ಇದು ದಾದುವಿನ ಕೋಪಕ್ಕೆ ಕಾರಣವಾಯಿತು. ಈ ಮಧ್ಯೆ ತಂದೆ ಲೋಕಯ್ಯ ಅಸಹಾಯಕನಾದ. ದಾದು ಮತ್ತು ಕರಿಯನ ನಡುವಿನ ದ್ವೇಷ ಈ ರೀತಿ ಮುಂದುವರೆಯುತ್ತಿರುವುದು ಲೋಕಯ್ಯನ ಚಿಂತೆಗೆ ಕಾರಣವಾಯಿತು. ಬಿಸಿ ರಕ್ತದ ಯುವಕರಿಗೆ ಬುದ್ದಿ ಹೇಳೋದು ವ್ಯರ್ಥ ಎಂದು ಸುಮ್ಮನಾದರು.
ಲೋಕಯ್ಯ ತನ್ನ ಪಾಲಿನ ಮೂಲ ಗೇಣಿಯ ಜಮಿನನ್ನು ಚಾಲಿ ಗೇಣಿಗೆ ದಾದುವಿಗೆ ನೀಡಿ ಅಲ್ಲೇ ಮನೆ ನಿರ್ಮಿಸಲು ಸಹಕರಿಸಿದ್ದರು. ದಾದು ಎರಡು ಗದ್ದೆಯಲ್ಲಿ ಭತ್ತ ಬೆಳೆದು ,ಊರಿನ ಚಾಕರಿ ಮಾಡುತ್ತಾ ತನ್ನ ಮಗ ಮತ್ತು ಹೆಂಡತಿಯೊಂದಿಗೆ ನೆಮ್ಮದಿಯಿಂದ ಬದುಕುತ್ತಿದ್ದ.
ಇದನ್ನು ನೋಡಲಾಗದ ಕರಿಯ ದಾದು ಇರುವ ಜಮೀನು ತನ್ನ ಅಪ್ಪನ ಮೂಲಗೇಣಿ ಜಮೀನು ನನಗೆ ಅದರಲ್ಲಿ ಹಕ್ಕಿದೆ. ನನಗೆ ನೀಡಬೇಕೆಂದು ಇಬ್ಬರು ಕೋವಿದಾರಿಗಳನ್ನು ಕರೆತಂದು ಬೆಳ್ಳಂಬೆಳಗ್ಗೆ ಮನೆಯಿಂದ ಹೊರ ಹಾಕಿಸಿದ. ದಾದುವಿನ ಆತ್ಮ ವಿಶ್ವಾಸಗಳೆಲ್ಲ ಕುಸಿದು ಹೋಗಿದ್ದವು. ತಾನು ಬೆಳೆದ ಭತ್ತದ ಫಸಲನ್ನು ನೋಡುತ್ತಾ ಜಮೀನಿನ ಗಡಿ ದಾಟಿ ಹೆಂಡತಿ ಮಗನೊಂದಿಗೆ ಅಗತ್ಯ ಸಾಮಾನು ಸರಂಜಾಮುಗಳನ್ಬು ಹಿಡಿದು ಹೊರಟ. ಯಾವ ಗೇಣಿ ಜಮೀನು ಬೇಡ , ಯಾರ ಹಂಗು ನನಗೆ ಬೇಡ ಎಂಬ ನಿರ್ಧಾರಕ್ಕೆ ಬಂದು ಸರ್ಕಾರಿ ಜಮೀನಿನಲ್ಲಿ ಸಣ್ಣ ಜೋಪಡಿ ಕಟ್ಟಿಕೊಂಡ. ತಾನು ಅನುಭವಿಸಿದ ಬೆದರಿಕೆಗೆ ಯಾರಿಗೂ ದೂರು ಕೊಡಲು ಹೋಗಲಿಲ್ಲ. ಅಂದಿನಿಂದ ದಾದು ಬದಲಾಗಿದ್ದ. ಅಂದು ತನ್ನವರಿಂದ ಆದ ಆಘಾತ ಅವನ ಮನಸ್ಸಲ್ಲಿ ಕಾರ್ಮೋಡವನ್ನೇ ಸೃಷ್ಟಿಸಿ ಸಿಡಿಲಿನಂತೆ ಆರ್ಭಟಿಸಲು ಆರಂಭಿಸಿತು. ದಾದುವಿನ ಮೃದು ಮನಸ್ಸು ಬದಲಾಗಿ ಕಠೋರವಾಯಿತು. ಕೋವಿ ಮೂಲಕ ಹೆದರಿಸಿದವರು ಕೂಡಾ ದಾದುವಿನ ಎದುರು ಬರಲು ಹೆದರುತ್ತಿದ್ದರು. ಕರಿಯ ಐದಾರು ತಿಂಗಳವರೆಗೆ ಊರು ಬಿಟ್ಟಿದ್ದ. ಗಿಡಗಂಟಿಗಳಿಂದ ಕೂಡಿದ ಸರ್ಕಾರಿ ಭೂಮಿಯನ್ನು ಸಮತಟ್ಟು ಮಾಡಿ ಜೋಪಡಿ ನಿರ್ಮಿಸಿದ ಸುದ್ದಿ ಬಾಬಣ್ಣನಿಗೆ ತಿಳಿದು ಮನೆಗೆ ಕರೆದು ತನ್ನ ಜಮೀನನ್ನು ಗೇಣಿಗೆ ಒಕ್ಕಲು ಮಾಡಲು ಹೇಳಿದರು. ಇದನ್ನು ನಯವಾಗಿ ತಿರಸ್ಕರಿದ ದಾದು “ಧಣಿ ತನಗೆ ಸರ್ಕಾರಿ ಜಮೀನು ಸಾಕು, ನನಗ್ಯಾವ ಆಸೆಗಳು ಇಲ್ಲ. ಜೀವನ ಸಾಗಿದರೆ ಸಾಕು. ಹಂಗಿನ ಜೀವನ ಬೇಡವೇ ಬೇಡ” ಎಂದು ನೇರವಾಗಿ ಹೇಳಿಬಿಟ್ಟ.
“ಆ ಕರಿಯನ ಅಹಂಕಾರ ಎಷ್ಟು ದಿನ ನಡೆಯುತ್ತದೆ ನೋಡೋಣ” ಎಂದು ತಾಂಬೂಲ ಹಾಕಿಕೊಂಡ ಬಾಬಣ್ಣ, ತನ್ನ ಹೆಂಡತಿಯನ್ನು ಕರೆದು ದಾದುನಿಗೆ ಒಂದು ಕಲಸೆ ಅಕ್ಕಿ , 10 ತೆಂಗಿನ ಕಾಯಿ ನೀಡಲು ಹೇಳಿದರು.
ಸರ್ಕಾರಿ ಜಮೀನಿನಲ್ಲಿ ಜೋಪಡಿ ಕಟ್ಟಿಕೊಂಡ ನಂತರ ಬಡತನ, ಹಸಿವು ಏನೆಂದು ಅರಿತಿದ್ದ ದಾದುವಿಗೆ ಧಣಿಗಳ ಸಹಾಯಕ್ಕೆ ಕೃತಜ್ಞನಾದ.
ಮುಂದುವರೆಯುವುದು….