September 20, 2024

ವ್ಯವಸಾಯ ಇಲ್ಲದ ಕಾರಣ ಹೆಂಡತಿ ಮಕ್ಕಳನ್ನು ಸಾಕುವುದು ಕಷ್ಟವಾಗುತಿತ್ತು. ಕ್ಷೌರ ಕೆಲಸಕ್ಕೆ ಸಂಬಳ ರೂಪದಲ್ಲಿ ಬರುವ ಅಕ್ಕಿ ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಸಿಗುತಿತ್ತು. ಇದು ಕೂಡಾ ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ದಾದು ನಿಜವಾದ ಬಡತನ ಏನೆಂಬುದನ್ನು ಅನುಭವಿಸಿದ ದಿನಗಳಾಗಿತ್ತು. ಸಿದ್ದುವಿನ ಮರಣನಂತರ ಆತನ ಕುಟುಂಬಕ್ಕೆ ನೆರವಾಗುವ ಋಣ ಕೂಡಾ ದಾದುವಿನ ಮೇಲಿತ್ತು. ಸಿದ್ದುವಿನ ಮಕ್ಕಳು ಸಣ್ಣವರಾಗಿದ್ದ ಕಾರಣ ಅವರ ಗದ್ದೆಯ ಉಳುಮೆ ಕಟಾವು ಮುಂತಾದ ಕೆಲಸಗಳನ್ನು ನಿರ್ವಹಿಸುವ ಜವಾಬ್ದಾರಿ ದಾದುವಿನ ಮೇಲಿತ್ತು. ಸಿದ್ದುವಿನ ಕುಟುಂಬಕ್ಕಾಗಿ ಬೆಳೆದ ಬೆಳೆಯಲ್ಲಿ ಒಂದು ಕಾಳು ಕೂಡ ತನ್ನ ಮನೆಗೆ ಒಯ್ಯಲಿಲ್ಲ. ಅಕ್ಕಿಯ ಕೊರತೆಯಿದ್ದರೂ ತನ್ನ ಹೆಂಡತಿ ಮಕ್ಕಳು ಉಪವಾಸವಿದ್ದರೂ ಅನ್ಯರ ಪಾಲಿನ ಅಕ್ಕಿಗೆ ಆಸೆ ಪಡಲಿಲ್ಲ. ಸಿದ್ದುವಿನ ಇಬ್ಬರು ಗಂಡು ಮಕ್ಕಳು ಪ್ರೌಢವಸ್ಥೆಗೆ ಬರುವವರೆಗೆ ತನ್ನ ಕರ್ತವ್ಯ ನಿರ್ವಹಿಸಿ ನಂತರ ತನ್ನ ಜವಾಬ್ದಾರಿ ಬಿಟ್ಟುಕೊಟ್ಟ.

ದಾದುವಿನ ಎರಡನೇ ಮಗ ರಾಮ ಅಪ್ಪನಂತೆ ಕ್ಷೌರ ಕಲಿತು ಮನೆಗೆ ನೆರವಾಗಲು ಉತ್ಸುಕನಾಗಿದ್ದ. ತಂದೆಗೆ ಊರಿನ ಭಂಡಾರ ಚಾಕರಿ ಸಂದರ್ಭ , ಕ್ಷೌರ ಕೆಲಸದಲ್ಲಿ ಸಹಾಯ ಮಾಡುತ್ತಾ ಕೆಲಸ ಕಲಿತಿದ್ದ. ಈ ಸಂದರ್ಭ ನಗರ ಪ್ರದೇಶಗಳು ನಿಧಾನವಾಗಿ ಅಬಿವೃದ್ಧಿ ಹೊಂದುತ್ತಿದ್ದವು. ನಗರಗಳಲ್ಲಿ ಸೆಲೂನುಗಳು ಪ್ರಾರಂಭವಾಗಿದ್ದವು. ಮುಂಬೈ ನಗರಕ್ಕೆ ಹೋಗುವ ಸಂಪರ್ಕ ರಸ್ತೆಗಳು ಆರಂಭವಾಗಿದ್ದವು. ಕುಗ್ರಾಮಗಳಲ್ಲಿನ ಜನ ನಗರ ಪ್ರದೇಶಗಳಿಗೆ ಕೆಲಸಕ್ಕೆ ಹೋಗಲು ಪ್ರಾರಂಭಿಸಿದರು. ಮುಂಬೈಯಂತಹ ನಗರ ಪ್ರದೇಶದಲ್ಲಿ ರೂಪಾಯಿ ಲೆಕ್ಕದಲ್ಲಿ ದುಡಿದು ನೂರು ರೂಪಾಯಿ ಸಂಪಾದನೆ ಮಾಡಿ ಬಂದರೆ ಆತನನ್ನು ನೋಡುವ ದೃಷ್ಟಿಕೋನವೇ ಬದಲಾಗುತಿತ್ತು. ಹಣವೇ ನೋಡದ ಜನ ಹಣ ಸಂಪಾದನೆಯತ್ತ ಗಮನ ಹರಿಸಲು ಪ್ರಾರಂಭಿಸಿದರು. ಈಗ ದಾದು ಮತ್ತು ಮೂರ್ತಿಯವರ ಸರ್ವರಿಗೆ ಕ್ಷೌರ ಎಂಬ ಸಾಮಾಜಿಕ ಸುಧಾರಣೆ ಮತ್ತೆ ಮುನ್ನಲೆಗೆ ಬಂದಿತ್ತು. ದಾದುವಿನ ತನ್ನ ಮಗ ಕೂಡಾ ಬಿಲ್ಲವರ ಮತ್ತು ಇತರ ದಲಿತರ ಕ್ಷೌರ ಮಾಡಲು ಉತ್ಸುಕನಾಗಿದ್ದ. ನಗರ ಪ್ರದೇಶಕ್ಕೆ ವಲಸೆ ಹೋದ ಬಿಲ್ಲವ ಮತ್ತು ಇತರ ಕ್ಷೌರ ವಂಚಿತರು ಮುಂಬೈನ ಸೆಲೂನುಗಳಲ್ಲಿ ಕ್ಷೌರ ಮಾಡಿಕೊಂಡು ಜಗಮಗಿಸುತ್ತಾ ಊರಿಗೆ ಕಾಲಿಡುತ್ತಿದ್ದರು. ಇದು ಕೆಲ ಸಂಪ್ರದಾಯವಾದಿಗಳ ಕಣ್ಣು ಕುಕ್ಕುತ್ತಿದಿದ್ದನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಕಾರ್ಕಳದಂತಹ ಸಣ್ಣ ಪಟ್ಟಣದಲ್ಲೂ ಕ್ಷೌರ ಕಟ್ಟೆಗಳು ಹೋಗಿ ಕನ್ನಡಿ ಹೊಂದಿರುವ ಕ್ಷೌರದಂಗಡಿಗಳು ತಲೆಯೆತ್ತಿದವು. ಇದು ಶೀಘ್ರವಾಗಿ ಹಳ್ಳಿಗಳಿಗೂ ಪಸರಿಸಿತು. ಆದರೆ ಕ್ಷೌರದಲ್ಲಿ ಜಾತಿ ತಾರತಮ್ಯ ಹೋಗಲಿಲ್ಲ. ಅಧಿಕಾರ ವರ್ಗ, ಬಂಟ ವರ್ಗ ಮತ್ತು ಪುರೋಹಿತ ವರ್ಗಗಳು ಸಾರ್ವಜನಿಕರು ಹೋಗುವ ಸೆಲೂನುಗಳಿಗೆ ಕಾಲಿಡುವ ಮನಸ್ಸು ಮಾಡಲಿಲ್ಲ. ಮೇಲ್ವರ್ಗದವರಿಗೆ ಮನೆ ಕ್ಷೌರಕ್ಕೆ ನೆಚ್ಚಿಕೊಂಡಿದ್ದರು. ಆದರೆ ನಮ್ಮ ಭಂಡಾರಿ ದಲಿತರನ್ನು ಮುಟ್ಟಿದರೂ ತೊಂದರೆ ಇಲ್ಲ ಎಂಬ ಸಣ್ಣ ಸುಧಾರಣೆಯನ್ನು ತಮ್ಮೊಳಗೆ ಮಾಡಿಕೊಂಡರು. ಮಾಳದಂತಹ ಕುಗ್ರಾಮದಲ್ಲಿ ದಾದು ಈ ಹಿಂದೆಯೇ ಬಿಲ್ಲವರ ಕ್ಷೌರಕ್ಕೆ ಪ್ರಯತ್ನಪಟ್ಟಿದ್ದ. ಆಗ ಅದು ಸಂಪೂರ್ಣವಾಗಿ ಸಾಧ್ಯವಾಗಿರಲಿಲ್ಲ. ನಂತರದ ಬೆಳವಣಿಗೆಯನ್ನು ಗಮನಿಸಿದ ದಾದು ಮತ್ತೆ ಬಿಲ್ಲವರ ಕ್ಷೌರಕ್ಕೆ ಮುಂದಾದ. ಮಾಳದ ದಯಾನಂದ ಹೆಗ್ಡೆಯವರ ಅಂಗಡಿ ಕಟ್ಟಡದಲ್ಲಿದ್ದ ಒಂದು ಕೋಣೆಯನ್ನು ಬಾಡಿಗೆ ಪಡೆದು ಸೆಲೂನು ಆರಂಭಿಸಿದ. ಅಲ್ಲಿ ಎಲ್ಲ ಜಾತಿಯವರಿಗೂ ಕ್ಷೌರ ಮಾಡಲು ಪ್ರಾರಂಭಿಸಿದ . ಕೆಳಜಾತಿಯ ಹಿರಿಯರು ಕ್ಷೌರಕ್ಕೆ ಬರದಿದ್ದರೂ ಯುವಕರು ಯಥೇಚ್ಚವಾಗಿ ಸ್ಪಂದಿಸಿದರು. ಮತ್ತೆ ದಾದುವಿನ ಈ ಸುಧಾರಣಾ ಕಾರ್ಯಕ್ಕೆ ವಿರೋಧ ವ್ಯಕ್ತವಾಯಿತು.ವಿರೋಧಿ ಬಣದಲ್ಲಿ ದಾದುವಿನ ಕಡು ವಿರೋಧಿ ಕರಿಯ ಭಂಡಾರಿ ಕೂಡಾ ಸೇರಿಕೊಂಡ. ಕೆಲವು ಸಂಪ್ರದಾಯವಾದಿಗಳು ದಾದುವಿನ ಕ್ಷೌರವನ್ನು ಬಹಿಷ್ಕರಿಸುವ ಮಾತುಗಳನ್ನಾಡಿದರು. ಊರಿನ ಗುತ್ತಿನ ಧಣಿಗಳಿಗೆ ದೂರು ನೀಡಲಾಯಿತು‌. ಬಾಬಣ್ಣರಿಗೆ ವಿಷಯ ತಿಳಿಯಿತು. ಇಂತಹ ಸುಧಾರಣೆಗಳು ಊರಿನಲ್ಲಿ ನಡೆಯಲಿ ಎಂದು ಬಾಬಣ್ಣ ಕೂಡ ಬಯಸಿದರು. ದಾದುವಿನ ಕಾರ್ಯವನ್ನು ಪ್ರಶಂಸಿದರು. “ಕ್ಷೌರದಿಂದ ಯಾರ ಜಾತಿ ನೀತಿಯೂ ಕೆಡುವುದಿಲ್ಲ ಇದು ದೇಹ ಶುದ್ದಿಕರಣದ ಒಂದು ಪ್ರಕ್ರಿಯೆ, ದಲಿತರು ಕೂಡಾ ದೇಹ ಶುದ್ಧರಾಗಿ, ಸುಂದರವಾಗಿ ಕಾಣಲಿ. ಅವರ ಸ್ಪರ್ಶದಿಂದ ಯಾರ ಜಾತಿಯೂ ಕೆಡುವುದಿಲ್ಲ . ಅಸ್ಪಶ್ಯತೆ ನಾವೇ ಮಾಡಿಕೊಂಡ ಕೆಟ್ಟ ಪದ್ದತಿ ಶುಧ್ದತೆಯಿಂದ ಇರುವ ಯಾವ ವ್ಯಕ್ತಿಯನ್ನು ಕೂಡಾ ಸ್ಪರ್ಶಿಸಬಹುದು. ಅಶುದ್ದತೆಯಿಂದ ಇರುವವನು ಎಷ್ಟು ಮೇಲ್ವರ್ಗದವನಾದರೂ ಸ್ಪರ್ಶಕ್ಕೆ ಯೋಗ್ಯನಲ್ಲ” ಎಂದು ಸಂಪ್ರದಾಯವಾದಿಗಳಿಗೆ ಮನದಟ್ಟು ಮಾಡಿ ಒಪ್ಪಿಸಿ ವಾಪಾಸ್ಸು ಕಳಿಸಿದರು.

ದಾದು ಮತ್ತು ಮಗ ರಾಮ ವಿರೋಧಗಳನ್ನು ಲೆಕ್ಕಿಸದೇ, ಸರ್ವ ಜಾತಿಯವರಿಗೆ ಕ್ಷೌರ ಮುಂದುವರೆಸಿದರು. ಕರಿಯ ಭಂಡಾರಿ ಮೇಲ್ವರ್ಗದವರ ಒಲೈಕೆ ಮಾಡಲು ನಾನು ಪರಿಶುದ್ಧ ಭಂಡಾರಿ‌.. ದಲಿತ, ಬಿಲ್ಲವರ ಕ್ಷೌರ ಮಾಡಿಲ್ಲ ನಾನು ನಿಮ್ಮೆಲ್ಲರ ಕ್ಷೌರ ಮಾಡುತ್ತೇನೆ ಎಂದು ಹೊಸ ದಾಳ ಉರುಳಿಸಿದ. ಸೆಲೂನು ಅಂಗಡಿ ಆರಂಭವಾದ ನಂತರ ಕ್ಷೌರಕ್ಕೆ ಅಕ್ಕಿ ಬದಲು ಹಣ ನೀಡುವ ಪದ್ದತಿ ಆರಂಭವಾಯಿತು. ದಾದು ಹಣ ಮಾಡುತ್ತಿದ್ದನ್ನು ನೋಡಿದ ಕರಿಯನಿಗೆ ಸಹಜವಾಗಿ ಉರಿ ತಡೆಯಲಾಗುತ್ತಿರಲಿಲ್ಲ. ತಾನು ಮೇಲ್ವರ್ಗದವರಿಗಾಗಿ ಕ್ಷೌರದಂಗಡಿ ತೆರೆದು ಹಣ ಮಾಡುವ ಯೋಚನೆ ಮಾಡಿದ. ಕರಿಯನ ಈ ಬೂಟಾಟಿಕೆಯ ಅಂಗಡಿ ಅಷ್ಟೋಂದು ಫಲ ನೀಡಲಿಲ್ಲ. ಸಹಜವಾಗಿ ಸುಧಾರಣೆಗಳನ್ನು ಮೇಲ್ವರ್ಗದ ಯುವ ಮನಸ್ಸುಗಳು ಒಪ್ಪಿಕೊಂಡರು. ಹಾಗಾಗಿ ಮನೆಯಲ್ಲಿ ಕ್ಷೌರ ಮಾಡಿಸುತ್ತಿದ್ದವರು ದಾದುವಿನ ಕೈಬಿಡಲಿಲ್ಲ. ದಾದುವಿನ ಒಂದೆರಡು ಗ್ರಾಹಕರು ಕರಿಯನ ಕಡೆ ಹೋಗಿದ್ದು ಬಿಟ್ಟರೆ , ಬೇರೆ ಎಲ್ಲರೂ ದಾದುವಿನ ಗ್ರಾಹಕರಾಗಿಯೇ ಉಳಿದರು. ಗುತ್ತು ಆಡಳಿತಗಳು ಕ್ರಮೇಣ ಗೌಣವಾಗಿ ಮತದಾನದ ಮೂಲಕ ಸ್ಥಳೀಯ ಆಡಳಿತಗಳು ಮುನ್ನಲೆಗೆ ಬಂದು ಪ್ರಜಾಪ್ರಭುತ್ವದ ಸಿಹಿಹನಿಗಳನ್ನು ಸವಿಯುವ ಯೋಗ ಹಳ್ಳಿಯ ಜನರಿಗೂ ದೊರೆಯಲು ಆರಂಭವಾಯಿತು. ಜಮೀನ್ದಾರರು, ವ್ಯಾಪಾರಿಗಳು ರಾಜಕೀಯ ಪ್ರವೇಶ ಮಾಡಿದರು.ಆ ಸಮಯದಲ್ಲಿ ಒಂದೇ ರಾಜಕೀಯ ಪಕ್ಷದ ಪಾರಮ್ಯ ಇದ್ದ ಕಾರಣ ಹೆಚ್ಚಿನವರು ಅವಿರೋಧವಾಗಿ ಆಯ್ಕೆಯಾಗುತ್ತಿದ್ದರು. ಸ್ವಾತಂತ್ರ್ಯ ಬಂದ ನಂತರ 1950 ರಲ್ಲಿ ಗಣರಾಜ್ಯ ಸ್ಥಾಪನೆಯಾದರೂ ಹಳ್ಳಿಗಳಿಗೆ ರಾಜಕೀಯ ಪರಿಪೂರ್ಣವಾಗಿ ಪ್ರವೇಶಿಸಿದ್ದು ಇಂದಿರಾ ಗಾಂಧಿಯ ಕಾಲದಲ್ಲಿ, ಹಾಗಾಗಿ ಅಂದಿನ ಹಳ್ಳಿಗರಿಗೆ ಮಹಾತ್ಮ ಗಾಂದೀಜಿ ಬಿಟ್ಟರೆ ಮತ್ತೆ ಗೊತ್ತಿರುವುದು ಇಂದಿರಾ ಗಾಂಧಿ ಹೆಸರು. ನೆಹರೂ ಬಗ್ಗೆ ಗೊತ್ತಿದ್ದರೆ, ಅದು ಕೆಲ ಬೆರಳೆಣಿಕೆಯ ವಿದ್ಯಾವಂತರಿಗೆ ಮಾತ್ರ.

ಈ ರಾಜಕೀಯ ನವೋದಯವು ಹೊಸ ಬಾಟಲಿಯಲ್ಲಿ ಹಳೆ ಮಧ್ಯ ಎಂಬಂತೆ ಪ್ರಜಾಪ್ರಭುತ್ವದ ಆಡಳಿತಕ್ಕೂ ಗುತ್ತು ಮನೆತನದ ಆಡಳಿತಕ್ಕೂ ಹೆಚ್ಚೇನೂ ವ್ಯತ್ಯಾಸವಿರಲಿಲ್ಲ. ಜಮೀನುಗಳೆಲ್ಲ ಸಿರಿವಂತ ಜಮೀನುದಾರರ ಕೈಯಲ್ಲಿತ್ತು. ಇವೆಲ್ಲವೂ ಹೆಚ್ಚಾಗಿ ಗುತ್ತು ಮನೆತನದ ಆಡಳಿತಗಾರರ ಕೈಯಲ್ಲಿತ್ತು. ರಾಜಕೀಯದಲ್ಲೂ ಅವರೇ ಮುಂಚೂಣಿಯಲ್ಲಿದ್ದರು. ಹೀಗಾಗಿ ಪ್ರಜಾಪ್ರಭುತ್ವ ಎಂಬ ಜೇನುತುಪ್ಪ ಪ್ರಜೆಗಳ ಮೊಣಕೈಯ ತುದಿಯಲ್ಲಿತ್ತು. ಮಾಳದಲ್ಲಿ ಪ್ರಜಾಪ್ರಭುತ್ವವನ್ನು ಅನುಭವಿಸುವ ಆಸಕ್ತಿಯಾಗಲಿ , ಹಂಬಲವಾಗಲಿ ಅಥವಾ ಅದರ ಜ್ಞಾನವಾಗಲಿ ಬೆರಳೆಣಿಕೆಯ ವಿದ್ಯಾವಂತರು, ಬಿಟ್ಟರೆ ಬೇರೆ ಯಾರಿಗೂ ಇರಲಿಲ್ಲ. ಶತಮಾನಗಳಿಂದ ರಾಜಪ್ರಭುತ್ವಕ್ಕೆ ಒಗ್ಗಿಹೋದ ಪರಿಣಾಮ ಪ್ರಜಾಪ್ರಭುತ್ವದ ಅರಿವಾಗಲಿ, ಆಸಕ್ತಿಯಾಗಲಿ ಜನಸಾಮಾನ್ಯರಿಗೆ ಇರಲಿಲ್ಲ.

ದಾದು ಅವಿದ್ಯಾವಂತನಾದರೂ ವಿದ್ಯಾವಂತ ಬ್ರಾಹ್ಮಣರ ಮನೆಗೆ ಕ್ಷೌರಕ್ಕಾಗಿ ಹೋಗುತ್ತಿದ್ದ ಕಾರಣ ಹಲವು ವಿಚಾರಗಳನ್ನು ತಿಳಿದುಕೊಳ್ಳುತ್ತಿದ್ದ. ಗಾಂಧೀಜಿಯ ಸ್ವಾತಂತ್ರ್ಯ ಹೋರಾಟ ಚಳುವಳಿ ಅವರ ಜನಪ್ರಿಯತೆ ಕುರಿತು ಕೆಲ ವಿದ್ಯಾವಂತರ ಕ್ಷೌರ ಮಾಡುವಾಗ ಮಾಹಿತಿ ಪಡೆಯುತ್ತಿದ್ದ. ಪತ್ರಿಕೆಗಳಲ್ಲಿ ಬರುತ್ತಿದ್ದ ದೇಶದ ಆಗುಹೋಗುಗಳ ಮಾಹಿತಿಯೂ ಉಚಿತವಾಗಿ ದಾದುವಿನ ಕಿವಿಗಳಿಗೆ ದೊರಕುತಿತ್ತು.ಒಂದು ದೇಶ ಒಂದು ಸರ್ಕಾರ ಜಾರಿಗೆ ಬಂದಿದೆ. ಈಗ ಯಾರೂ ಎಲ್ಲಿ ಬೇಕಾದರೂ ವ್ಯಾಪಾರ ವ್ಯವಹಾರ ಮಾಡಬಹುದಾಗಿದೆ. ಇಂದಿರಾ ಗಾಂಧಿ ಎಂಬ ದಿಟ್ಟ ಮಹಿಳೆ ಆಡಳಿತ ಮಾಡುತ್ತಿದ್ದಾಳೆ. ಅವಳ ಆಡಳಿತ ಶೈಲಿ ದೇಶದ ಚಿತ್ರಣವನ್ನು ಹೇಗೆ ಬದಲಾಯಿಸಲಿದೆ ಎಂಬ ಗುಣಗಾನ ದಾದುವಿಗೆ ಸುದ್ದಿ ಆಲಿಸುವ ಆಸಕ್ತಿಯನ್ನು ಹೆಚ್ಚಿಸುತಿತ್ತು. ಎಲ್ಲವೂ ಅರ್ಥವಾಗದಿದ್ದರೂ ಕೆಲವನ್ನು ಗ್ರಹಿಸಿ ನೆನಪಿನಲ್ಲಿಡುತ್ತಿದ್ದ. ಬೇರೆಯವರಿಗೂ ಹಂಚುತ್ತಿದ್ದ.

ಪ್ರಜಾಪ್ರಭುತ್ವದ ಆಗಮನವಾದಂತೆ ಹಳ್ಳಿಗಳಿಗೆ ವ್ಯಾಪಾರಿಗಳ ಪ್ರವೇಶವೂ ಆಯಿತು. ಬ್ಯಾರ ಮಾಡಲು ಬಂದವರನ್ನು ಬ್ಯಾರಿಗಳು ಎನ್ನಲಾಯಿತು. ಇವರು ಜನರಿಗೆ ದೂರದ ಊರಲ್ಲಿ ಸಿಗುವ ವಸ್ತುಗಳನ್ನು ಮಾರಿ ಅದಕ್ಕೆ ಬದಲಾಗಿ ಹಣ ಇಲ್ಲವೇ ಇಲ್ಲಿ ಬೆಳೆಯುವ ಬೆಳೆಯನ್ನು ಪ್ರತಿಫಲವಾಗಿ ಪಡೆಯುತ್ತಿದ್ದರು. ಇದರಲ್ಲಿ ಕೆಲ ಮೋಸಗಾರರು ಇದ್ದರು. ಕಳ್ಳಬುದ್ದಿಯವರು ಕೂಡಾ ಇದ್ದರು. ಹೀಗಾಗಿ ಹಳ್ಳಿಯ ಮುಗ್ದ ಜನ ಇವರಿಂದ ಮೋಸಗೊಳಗಾಗುತ್ತಿದ್ದರು. ಅನ್ಯಾಯಕ್ಕೊಳಗಾದವರು ಊರಿನ ದೈವದ ಮೊರೆ ಹೋದರು. ಹೌಟಲ್ದಾಯ , ದುಗ್ಗಲಾಯ, ಕೊಡಮಂದಾಯ ನೀವೇ ನ್ಯಾಯ ಕೊಡಿಸಿ ಎಂದರು.
ನ್ಯಾಯ ಖಂಡಿತ ಸಿಕ್ಕಿತ್ತು. ಇಂತಹ ಮೋಸದ ವ್ಯಾಪಾರಿಗಳಿಗೆ ಮಾಳದ ಮಣ್ಣಿನಲ್ಲಿ ಒಂದಿಂಚು‌ ಜಾಗವಿಲ್ಲ ಎಂಬ ದೈವದ ನುಡಿ ಪರಿಣಾಮ ಬೀರಿತ್ತು. ಅಂದಿನಿಂದ ಪರವೂರಿನ ವ್ಯಾಪಾರಿಗಳಾದ ಬ್ಯಾರಿಗಳಿಗೆ ಒಂದು ದಿನದ ವಾಸ್ತವ್ಯವೂ ಮಾಳದಲ್ಲಿ ಸಾಧ್ಯವಿಲ್ಲವೆಂಬ ಪರಿಸ್ಥಿತಿಗೆ ತಲುಪಿತು. ಆದರೂ ದೈವ ನಂಬಿಕೆಯಿಲ್ಲದ ಕೆಲ ವ್ಯಾಪಾರಿಗಳು ದೈವದ ನುಡಿಗೆ ಸವಾಲು ಹಾಕಲು ಮುಂದಾದರು. ಸವಾಲು ಗೆಲ್ಲಲು ವಿವಿಧ ವಸ್ತುಗಳ ವ್ಯಾಪಾರಕ್ಕೆ ಬಿಡಾರ ಹಾಕಿದರು, 3-4 ದಿನದ ನಂತರ ರಾತೋ ರಾತ್ರಿ ಬಿಡಾರ ಬಿಟ್ಟು ಅರಚುತ್ತಾ ಓಡಿರುವುದಕ್ಕೆ ಮಾಳದ ದೈವ ಭಕ್ತ ಮುಗ್ದ ಜನರು ಸಾಕ್ಷಿಯಾದರು.

ಒಮ್ಮೆ ದಾದು ಮತ್ತು ತೆಂಕುಮಾಳದ ತಾಂತ್ರಿಕ ಅಸ್ರಣ್ಣರು ಕಾಡಿನ ನಡುವೆ ಇರುವ ಊರಿನ ರಾಜನ್ ದೈವ ಇರುವ ಮನೆಗೆ ದೈವದ ಪ್ರತಿಷ್ಠೆ, ಪರ್ವದ ನಿಮಿತ್ತ ಹೋಗಿದ್ದರು. 3-4 ಮೈಲಿ ದಟ್ಟ ಕಾಡಿನ ದಾರಿಯಲ್ಲಿ ಸಾಗಬೇಕಿತ್ತು. ಬೆಳ್ಳಂಬೆಳ್ಳಗೆ ಹೋದವರು ಕೆಲಸ ಮುಗಿಸಿ ಸಂಜೆಯಾಗುತ್ತಲೇ ವಾಪಾಸ್ಸು ಹೊರಟರು. ಬರಿಮೈ ಅಸ್ರಣ್ಣರ ಕತ್ತಲ್ಲಿ ಬಂಗಾರದ ಚೈನು , ಸೊಂಟದಲ್ಲಿ ಬೆಳ್ಳಿಯ ಸೊಂಟದ ನೂಲು ಇತ್ತು. ಹೆಗಲಲ್ಲೊಂದು ಜೋಳಿಗೆ ಜೋಳಿಗೆಯಲ್ಲಿ ಹಸಿವೆ ತಣಿಸಲು ಎಳನೀರು, ಬನ್ನಂಗಾಯಿ ಅವಲ್ಲಕ್ಕಿ ಮುಂತಾದ ಆಹಾರ ಪದಾರ್ಥ ಜೊತೆಗೆ ತಾಂಬೂಲದ ಪೆಟ್ಟಿಗೆ , ಪೂಜಾ ಸಾಮಗ್ರಿ ಇತ್ತು. ಕತ್ತಲಾದರೂ ತೊಂದರೆಯಿಲ್ಲ ಇವತ್ತು ಹುಣ್ಣಿಮೆ ಎಂದು ನಿಧಾನವಾಗಿಯೇ ಹೆಜ್ಜೆ ಹಾಕಿದರು. ಮಧ್ಯ ಕಾಡಲ್ಲಿ ಹೋಗುತ್ತಿರುವ ಸಂದರ್ಭ ಯಾರೋ ಇಬ್ಬರು ಪರವೂರಿನ ವ್ಯಾಪಾರಿಗಳು ಹಿಂಬಾಲಿಸುತ್ತಿರುವುದನ್ನು ದಾದು ಗಮನಿಸಿ ಅಸ್ರಣ್ಣರಿಗೆ ಹೇಳಿದ. “ಬ್ಯಾರದವರು ಇರಬಹುದು ಅವರ ಕೆಲಸವೇ ಊರೂರು ಸುತ್ತಿ ವ್ಯಾಪಾರ ಮಾಡುವುದು ಅಷ್ಟೇ. ನಮನ್ನು ಹಿಂಬಾಲಿಸಿ ಅವರಿಗೇನು ಲಾಭ” ಎಂದು ಧೈರ್ಯದಿಂದ ಮುನ್ನಡೆದರು. ವ್ಯಾಪಾರದ ಬ್ಯಾರಿಗಳು ಎಲ್ಲರೂ ಮೋಸಗಾರರಲ್ಲ. ಅವರು ತಮ್ಮ ಹೊಟ್ಟೆಪಾಡಿಗಾಗಿ ದುಡಿಯುತ್ತಾರೆ. ಎಂದು ಮತ್ತಷ್ಟು ಆತ್ಮ ವಿಶ್ವಾಸ ಹೆಚ್ಚಿಸಿದರು. ಅಸ್ರಣ್ಣರ ಚಿನ್ನದ ಚೈನು ಮತ್ತು ಸೊಂಟದ ಚೈನಿನ‌ ಮೇಲೆ ಈ ಪರವೂರಿನ ವ್ಯಾಪಾರಿಗಳ ಕಣ್ಣು ಬಿದ್ದಿರುವಂತೆ ಅನಿಸಿತ್ತು. ವ್ಯಾಪಾರಿಗಳನ್ನು ಪರೀಕ್ಷಿಸುವ ಸಲುವಾಗಿ ದಾದು “ಬಟ್ರೆ ಆಯಾಸವಾಗುತ್ತಿದೆ ಸ್ಪಲ್ಪ ವಿಶ್ರಾಂತಿ ಪಡೆಯೋಣ”ವೆಂದು ನಿಲ್ಲಿಸಿದ. ಇವರು ವಿಶ್ರಾಂತಿಗಾಗಿ ನಿಂತಾಗ ವ್ಯಾಪಾರಿಗಳು ತಮ್ಮ ಹೆಜ್ಜೆಯನ್ನು ನಿಧಾನವಾಗಿಸಿದರು. ದಾದು ಅವರನ್ನೇ ಗಮನಿಸುತ್ತಿದ್ದ. “ಭಟ್ರೆ ಇವರು ದೊಡ್ಡ ಕಳ್ಳರೇ ಇರಬೇಕು. ನಿಮ್ಮ ಬಂಗಾರ ಬೆಳ್ಳಿ ಅವರಿಗೆ ಕಾಣದಂತೆ ಜೋಪಾನವಾಗಿಡಿ” ಎಂದ. ಅಸ್ರಣ್ಣರು‌ ತನ್ನಲ್ಲಿದ್ದ ಬೆಳ್ಳಿ ಬಂಗಾರದ ಅಲೋಚನೆಯನ್ನೇ ಮಾಡಿರಲಿಲ್ಲ. ಹೀಗಾಗಿ ಒಮ್ಮೇಲೆ ಕಳ್ಳ ವ್ಯಾಪಾರಿಗಳು ಬೆನ್ನು ಬಿದ್ದಿರುವ ಅರಿವಾಗಿ ಬೆಚ್ಚಿ ಬಿದ್ದರು. ಇವರೇನಾದರೂ ಕಳ್ಳರಾಗಿದ್ದರೆ ನಮ್ಮಿಬ್ಬರ ಜೀವಕ್ಕೆ ಅಪಾಯ ಇವರಿಗೇನಾದರೂ ಮಾಡಬೇಕಲ್ಲ ಎಂದು ಒಂದು ಉಪಾಯ ಹೂಡಿದರು. ಬೆನ್ನಿಗೆ ಜೋಳಿಗೆ ತಲೆಯಲ್ಲೊಂದು ಪೆಟ್ಟಿಗೆ ಹೊತ್ತುಕೊಂಡು ನಿಧಾನವಾಗಿ ನಡೆಯುತ್ತಾ ಜುಬ್ಬದಾರಿಗಳನ್ನು ಅಸ್ರಣ್ಣರು ಕರೆದು ಮಾತಾನಾಡಿಸಿದರು. ” ಓ ಬ್ಯಾರ್ಲೆ ಬ್ಯಾರಗ್ ಬತ್ತಿನಗುಲ ಒಂಚಿ ಪೋಪುನಗುಲು” ಎಂದು ವಿಚಾರಿಸಿದರು. ಅರೆಬರೆ ತುಳುವಿನಲ್ಲಿ ಉತ್ತರಿಸಿದ ವ್ಯಾಪಾರಿಗಳು ತಾವು ವ್ಯಾಪಾರಕ್ಕಾಗಿ ಬಂದಿದ್ದೇವೆ ಎಂದರು. “ಬನ್ನಿ ಸ್ವಲ್ಪ ಕುಳಿತುಕೊಳ್ಳಿ ವಿಶ್ರಾಂತಿ ಪಡೆಯಿರಿ ಮತ್ತೆ ಒಟ್ಟಿಗೆ ಹೋಗೋಣ.. ತಾಂಬೂಲ ತಿನ್ನುತ್ತಾ ಮಾತಾನಾಡೋಣ” ಎಂದು ತನ್ನ ತಾಮ್ರದ ತಾಂಬೂಲ ಡಬ್ಬದಿಂದ ವೀಳ್ಯ , ಅಡಿಕೆ , ಸುಣ್ಣ ಕೊಟ್ಟರು. ವ್ಯಾಪಾರಿಗಳು ತೆಗೆದುಕೊಂಡು ತಿಂದರು. ಮಾತಾನಾಡುತ್ತಲೇ ತನ್ನ ಕತ್ತಲ್ಲಿದ್ದ ದಪ್ಪದ ಸರವನ್ನು ಸರಿ ಮಾಡುತ್ತಾ, ಸೊಂಟದ ಬೆಳ್ಳಿ ಸರವನ್ನು ದೋತಿಯ ಒಳಗೆ ಸರಿಸಿ ದೋತಿಯನ್ನು ಕಟ್ಟಿಕೊಂಡರು.ವ್ಯಾಪಾರಿ ಸೋಗಿನ ಕಳ್ಳರ ದೃಷ್ಟಿ ಅಸ್ರಣ್ಣರ ಬಂಗಾರದ ಸರದ ಮೇಲೆ ಇತ್ತು. ಅಸ್ರಣ್ಣರ ವೀಳ್ಯದೆಲೆ ಅಡಿಕೆ ಜಗಿದ ವ್ಯಾಪಾರಿ ಸೋಗಿನ ಕಳ್ಳರು ಮಂಪರಿಗೊಳಗಾದರು. ಇಬ್ಬರು ಬಿದ್ದು ನೆಲದಲ್ಲಿ “ತುಂಪಿಯಾಂವು- ಎತ್ತಾವೂ” ಎನ್ನುತ್ತಾ ತಮ್ಮ ತಮ್ಮಲೇ ಹೊಡೆದಾಡಿಕೊಳ್ಳುತ್ತಿದ್ದರು. ಇದೆಲ್ಲ ಅಸ್ರಣ್ಣರ ಮಂತ್ರ – ತಂತ್ರ ಶಕ್ತಿಯ ಫಲವಾಗಿತ್ತು. ಸಣ್ಣ ವೀಳ್ಯದೆಲೆಯಿಂದ ದೊಡ್ಡ ಗಂಡಾಂತರವನ್ನು ದೂರವಾಗಿಸಿದರು. ದಾದುವಿಗೆ ಅಸ್ರಣ್ಣರ ಶಕ್ತಿ ನೋಡಿ ಅಚ್ಚರಿಯಾಯಿತು. ಅದಾಗಲೇ ಸಂಜೆ ಕಳೆದು ಕತ್ತಲು ಆವರಿಸಲು ಪ್ರಾರಂಭವಾಯಿತು. ಕಳ್ಳರ ಭಯದಲ್ಲಿದ ದಾದುವಿನ ಮನಸ್ಸು ಒಮ್ಮೆ ನಿರಾಳವಾಯಿತು.

ಕಾಡ ದಾರಿಯಲ್ಲಿ ಮುಂದೆ ಸಾಗುತ್ತಾ ” ಭಟ್ರೆ ಈ ತುಂಪಿಯಾವು ಎತ್ತಾವುಗಳು ಯಾವಾಗ ಏಳುತ್ತಾರೆ. ಪಾಪ ಸಾಯಿಸಬೇಡಿ ಮಾರ್ರೆ” ಎಂದ.
ಇಲ್ಲ‌ ದಾದು ಸಾಯೋದಿಲ್ಲ.. ಒಂದು ಗಂಟೆ ಮತ್ತೆ ಏಳುತ್ತಾರೆ. ಆದರೆ ಈ ಊರಿಗೆ ಬರೋದು ಡೌಟು ಹಿಂದೆ ಹೋಗ್ಬೋದು ಹೇಗಿದೆ ನನ್ನ ಶಕ್ತಿಮದ್ದು” ಎಂದರು.
ನಿಮ್ಮ ವಿದ್ಯೆಗೆ ನೀವೇ ಸಾಟಿ ಅಸ್ರಣ್ಣರೇ ಎಂದು ಅಸ್ರಣ್ಣರನ್ನು ಹೊಗಳಿದ. ಗೆಲುವಿನ ನಂತರದ ಪ್ರಯಾಣ ವೇಗವಾಗಿತ್ತು, ಅಸ್ರಣ್ಣರ ಮನೆ ಸಮೀಪವಾಯಿತು. ದಾದು ಮತ್ತೆ ಒಬ್ಬನೇ ಮನೆ ಸೇರಬೇಕಿತ್ತು. ಸುಮಾರು 3-4 ಮೈಲಿ ನಡೆಯಬೇಕಿತ್ತು. ರಾತ್ರಿ ಸುಮಾರು 8 ಗಂಟೆಯಾದ್ದರಿಂದ ಊಟ ಮಾಡಿ ಹೋಗಲು ಅಸ್ರಣ್ಣರು ಹೇಳಿದರು. ಊಟವಾದ ನಂತರ ಊರಿನ ಆಗುಹೋಗುಗಳ ಹರಟೆ , ಬಡಗು ಮಾಳದ ಅಸ್ರಣ್ಣರ ಬಗ್ಗೆ ನಾನಾ ತರಹದ ದೂರುಗಳು. ಅಸ್ರಣ್ಣ ಅಸ್ರಣ್ಣರ ನಡುವಿನ ಭಿನ್ನಾಭಿಪ್ರಾಯಗಳು, ಶೀತಲ ಸಮರಗಳು, ಮಂತ್ರ ಶಕ್ತಿಗಳು ಮೊದಲಾದ ವಿಚಾರಗಳನ್ನು ಹರಟುತ್ತಾ ಗಂಟೆ 11 ಆಯ್ತು. ಅಸ್ರಣ್ಣರು ಇಲ್ಲೇ ಮಲಗಿ ನಾಳೆ ಹೋದರಾಯಿತು ಎಂದರು. ದಾದುವಿಗೆ ಮನೆಯಲ್ಲಿ ಮಲಗಿದರೆನೇ ಸುಖ ನಿದ್ದೆ. ಹಾಗಾಗಿ ಮನೆಗೆ ಹೋಗದೇ ಇರಲೂ ಮನಸ್ಸು ಒಪ್ಪಲಿಲ್ಲ. ಮೂರು ಬ್ಯಾಟರಿ ಸೆಲ್ ನ ಟಾರ್ಚ್ ಲೈಟ್ ಇತ್ತು, ಮತ್ತೆ ಭಯ ಯಾಕೆ. ಹೊರಡೋದೆ ಒಂದು ಗಂಟೆ ಬೇಕಾದಿತು ಮಧ್ಯರಾತ್ರಿಯಾಗುತ್ತಲೇ ಮನೆ ಸೇರಬಹುದೆಂದು ಅಲೋಚಿಸಿ .. “ಇಲ್ಲ ಬಟ್ರೆ ನಾನು ಹೋಗ್ತೆನೆ ನನಗೇನು ಭಯ ಇಲ್ಲ ಎಂದು ಹೊರಟು ನಿಂತ” ಭಟ್ಟರು ಜಾಗ್ರತೆ ಎಂದು ಬಾಗಿಲು ಹಾಕಿಕೊಂಡರು.

ದಾದು ಆದಷ್ಟು ಬೇಗ ಮನೆ ಸೇರಬೇಕೆಂದು ವೇಗವಾಗಿ ನಡೆಯತೊಡಗಿದ. ಚೌಕಿಯಂಗಡಿ ತಲುಪಿ ಅಲ್ಲಿಂದ ಮಾಚೊಟ್ಟೆ ಹತ್ತಿರ ಪೆರ್ಮುಡೆಯ ದಾರಿ ಹಿಡಿದು ಬರುವಾಗ ಚಿಕ್ಕಲ್ ತೋಡು ಎಂಬ ಸಣ್ಣ ತೊರೆಯ ಹತ್ತಿರ ಬರುವಾಗ ತನ್ನ ಮೂರು ಬ್ಯಾಟರಿ ಸೆಲ್ ನ ಟಾರ್ಚ್ ಉರಿಯಲಿಲ್ಲ. ಈ ಟಾರ್ಚ್ ಗೇನಾಯಿತು, ಎಂದು ಬ್ಯಾಟರಿಗಳನ್ನು ತೆಗೆದು ಮತ್ತೆ ಹಾಕಿ ಕೈಗೆ ಬಡಿದು ಪರೀಕ್ಷಿಸಿದ.. ಏನು ಮಾಡಿದರೂ ಟಾರ್ಚ್ ಬೆಳಕು ಉರಿಯಲಿಲ್ಲ. ಕಗ್ಗತ್ತಲು ಬೇರೆ.. ಟಾರ್ಚ್ ತೆಗೆದು ಬಿಸಾಡುವಷ್ಟು ಸಿಟ್ಟು ಬಂದಿತು. ಒಂದು ಕ್ಷಣ ಮೌನ ಕತ್ತಲಲ್ಲಿ ಮುಂದೆ ಸಾಗುವಷ್ಟರಲ್ಲಿ ದಟ್ಟ ಪೊದೆಯಿಂದ ಎದ್ದು ಬಂದಂತೆ ಎರಡು ಪ್ರಜ್ವಲಿಸುವ ದೀಪಗಳು ಉರಿಯಿತು. ಅದರ ತೀಕ್ಷ್ಣತೆ ಎಷ್ಟಿತ್ತೆಂದರೆ ಲಾರಿಯ ಹೆಡ್ ಲೈಟ್ ಹತ್ತಿರದಿಂದ ನೇರವಾಗಿ ಕಣ್ಣಿಗೆ ಹಾಯಿಸಿದಷ್ಟು. ಇದು ನಿಜವಾಗಲೂ ಬೆಳಕಾಗಿರಲಿಲ್ಲ. ಈ ಬೆಳಕಲ್ಲಿ ಕಣ್ಣು ಕುಕ್ಕುವ ಬೆಳಕು ಬಿಟ್ಟರೆ ಮತ್ತೇನೂ ಕಾಣುತ್ತಿರಲಿಲ್ಲ. ನಿಜ ಇದು ಬೆಳಕಾಗಿರಲಿಲ್ಲ. ದಾದು ಆ ಕ್ಷಣವೇ ಹೆದರಿ ಬೆವರಿದ. ಕೂಗಾಡಿದ ಅವನು ಕೂಗಿದ ಧನಿ ಅವನಿಗೆ ಕೇಳಲಿಲ್ಲ…

ಮುಂದುವರೆಯುವುದು….

✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *