September 20, 2024

ಭಂಡಾರ…. ಒಂದು ರೋಚಕ ದಂತಕತೆ – ಭಾಗ 9

ತನ್ನ ಮಕ್ಕಳಂತೆ ಇತರ ಮಕ್ಕಳನ್ನು ಮಾತಾನಾಡಿಸುತ್ತಿದ್ದ ಲಿಂಗಪ್ಪ ಹೆಗ್ಡೆಯವರಿಗೆ ದಾದು ಎಂದರೆ ಮತ್ತಷ್ಟು ಪ್ರೀತಿ, ದಾದು ಬಂದಿರುವುದನ್ನು ಗಮನಿಸಿದ ಲಿಂಗಪ್ಪ ಹೆಗ್ಡೆಯವರು ಖುಷಿಪಟ್ಟು ಎಷ್ಟು ದೊಡ್ಡದಾಗಿಯಾ ಗುರುತೇ ಸಿಗೋದಿಲ್ಲ ಅನ್ನುತ್ತಾ.. ಕುಶಲೋಪರಿ ಮಾತಾನಾಡಿ ಬೊಲ್ಲನ ಕ್ಷೇಮ ಸಮಾಚಾರವನ್ನು ವಿಚಾರಿಸಲು ಮರೆಯಲಿಲ್ಲ… ತಾನು ಭಂಡಾರ ಚಾಕರಿ, ಊರಿನ ಕ್ಷೌರದ ಕೆಲಸ ಕಲಿತಿರುವುದನ್ನು ಹೇಳಲು ಮರೆಯದ ದಾದು ಹೆಗ್ಡೆಯವರ ಕೈಯಿಂದ ಬೆನ್ನುತಟ್ಟಿಸಿಕೊಂಡ.

ಸಂಜೆಯಾಗುತ್ತಲೇ ಹೆಗ್ಡೆಯವರು ದೈವಗಳಿಗೆ ದೀಪ ಬೆಳಗಿಸಿ ಕೈಮುಗಿದು ಶಿವರಾತ್ರಿಯ ಜಾಗರಣೆಗೆ ದೇವಸ್ಥಾನಕ್ಕೆ ಹೊರಟರು. ಜೊತೆಗೆ ಹೆಗ್ಡೆಯವರ ಮನೆಯ ಮಕ್ಕಳು, ದಾದು ಮತ್ತು ಆತನ ನೆರೆಹೊರೆಯ ಸ್ನೇಹಿತರೆಲ್ಲ ಹೊರಟರು. ಹೋಗುವಾಗ ಶಿವರಾತ್ರಿಯ ದಿನ ಯಾರ ಮನೆಯ ಸ್ನಾನದ ಹಂಡೆ ಹೊರಗೆ ಇದೆ. ಎಲ್ಲಿ ಗೇಟುಗಳಿದೆ. ಯಾವ ತೆಂಗಿನ ಮರದಲ್ಲಿ ಸರಿಯಾಗಿ ಬಲಿತ ಎಳನೀರು ಇದೆ. ಯಾವ ಗದ್ದೆಯಲ್ಲಿ ತರಕಾರಿ, ಗೆಡ್ಡೆ ಗೆಣಸು ಇದೆ, ಎಲ್ಲಿ ಬಸಳೆ ಚಪ್ಪರವಿದೆ ಎಂಬುದನ್ನು ಗಮನಿಸುತ್ತಾ ಶಿವರಾತ್ರಿಯ ದಾಳಿಗೆ ನೀಲನಕ್ಷೆ ಸಿದ್ಧಪಡಿಸುತ್ತಾ ದೇವಸ್ಥಾನಕ್ಕೆ ಹೊರಟಿತು ಮಕ್ಕಳ ಸೈನ್ಯ..

ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮರಳಿದ ಮಕ್ಕಳು ಸುಮಾರು ಹತ್ತು ಗಂಟೆ ರಾತ್ರಿ ಸಮಯದಲ್ಲಿ ತಮ್ಮ ನೀಲನಕ್ಷೆಯ ಪ್ರಕಾರ ಶಿವ ತಾಂಡವವನ್ನು ಆರಂಭಿಸಿದರು. ನಾಗಣ್ಣನ ಬಸಳೆ ಚಪ್ಪರಕ್ಕೆ ಮುತ್ತಿಗೆ ಹಾಕಿ ಎಲ್ಲವನ್ನೂ ಹಸಿಹಸುರಾಗಿ ದಷ್ಟಪುಷ್ಟವಾಗಿದ್ದ ಬಸಳೆಯನ್ನು ಕೊಯ್ದು , ಗುಬ್ಬಿಯಕ್ಕಳ ಸೋರೆಕಾಯಿ ಗದ್ದೆಗೆ ಮುತ್ತಿಗೆ ಹಾಕಿ ಅವಳ ಗದ್ದೆಯ ವಾಚ್ ಮ್ಯಾನ್ ಬೊಗ್ರನ ಮೇಲೆ ಸೋರೆಕಾಯಿಂದ ಹೊಡೆದು ಓಡಿಸಲಾಯ್ತು… ಬಲಿತ ಎಲ್ಲ ಸೋರೆಕಾಯಿಗಳನ್ನು ಗುಬ್ಬಿಯಕ್ಕನವರ ಕಡುವಿರೋಧಿ ಕಮಲಕ್ಕನವರ ಮನೆಯ ಜಗುಲಿಯಲ್ಲಿ ಸಾಲಾಗಿ ಇಡಲಾಯಿತು.. ನಾಗಣ್ಣನ ಬಸಳೆ ಕೊಯ್ದ ಒಂದು ತಂಡ ಅದನ್ನು ದಾರಿಯುದ್ದಕ್ಕೂ ಚೆಲ್ಲುತ್ತಾ … ಉಳಿದ ಬಸಳೆಯನ್ನು ಗುಬ್ಬಿಯಕ್ಕನವರ ಸೋರೆಕಾಯಿ ಗದ್ದೆಯಲ್ಲಿ ನಾಟಿ ಮಾಡಲಾಯಿತು.

ಗುಬ್ಬಿಯಕ್ಕನಿಗೆ ಎಚ್ಚರವಾಗಿ ಟಾರ್ಚ್ ಹಾಕಿದರು.. ಟಾರ್ಚ್ ಬಿದ್ದ ಕ್ಷಣ ಮಕ್ಕಳೆಲ್ಲ ಅಲ್ಲಿಂದ ಜಾಗ ಖಾಲಿ ಮಾಡಿ ಕಮಲಕ್ಕನ ಹಲಸಿನ ಮರವಿದ್ದಲ್ಲಿಗೆ ಬಂದು ಮಿಡಿ ಹಲಸು ಕೊಯ್ದು ಪಕ್ಕದಲ್ಲಿದ್ದ ಕಮಲಕ್ಕನ ಮುಳಿಹುಳ್ಳಿನ ಮನೆಗೆ ಬಿಸಾಡಿದರು. ಸಿಟ್ಟಿಗೆದ್ದ ಕಮಲಕ್ಕ ” ಬುದ್ದಿ ಕಲಿಸ್ತೇನೆ ನಿಮಗೆ ” ಅನ್ನುತ್ತಾ ಅವಸರವಸರವಾಗಿ ಹೊರಬಂದು ಮನೆಯ ಮೆಟ್ಟಿಲಲ್ಲಿದ್ದ ಸೋರೆಕಾಯಿ ಗೆ ಕಾಲು ಎಡವಿ ಬಿದ್ದು ಗರ್ಜಿಸಿದರು.. ಮತ್ತೆ ಅಲ್ಲಿ ಏನಾಯಿತೋ ಗೊತ್ತಿಲ್ಲ ಮಕ್ಕಳ ಸೈನ್ಯ ಅಲ್ಲಿಂದ ಕಾಲ್ಕಿತ್ತು ಕಿಟ್ಟಣ್ಣನ ತೋಟಕ್ಕೆ ದಾಳಿ ಮಾಡಿತು.

ಅಲ್ಲಿ ಕೆಂಚ ಅಟ್ಟಳಿಗೆಯಲ್ಲಿ ಕಾವಲು ಕಾಯುತ್ತಿದ್ದ ವಿಚಾರ ಮಕ್ಕಳಿಗೆ ಗೊತ್ತೆ ಇರಲಿಲ್ಲ… ಹೋಯ್ .. ಹೋಯ್ ಎಂದು ಕಿರುಚಿದ ಕೆಂಚ ಮಕ್ಕಳ ಸೈನ್ಯವನ್ನು ಭಯಪಡಿಸುತ್ತಿದ್ದ.. ಆದರೆ ಈ ತುಂಟ ಮಕ್ಕಳು ಸುಮ್ಮನಿರಬೇಕಲ್ಲ..ಒಂದು ಬಾರಿ ಉಳುಮೆ ಮಾಡಿದ ಬೆಟ್ಟು ಗದ್ದೆಯಲ್ಲಿ ಮಣ್ಣಿನ ತುಂಡುಗಳು ಸಿಗುತಿತ್ತು. ಇಂತಹ ಮಣ್ಣಿನ ತುಂಡು (ಹೆಂಟೆ)ಗಳನ್ನೇ ಆಯುಧ ಮಾಡಿಕೊಂಡ ಮಕ್ಕಳ‌‌ ಸೈನ್ಯ ಕೆಂಚನ ಮೇಲೆ ಎಲ್ಲ ದಿಕ್ಕುಗಳಿಂದ ದಾಳಿ ಮಾಡಿದರು. ಮಣ್ಣಿನ ತುಂಡುಗಳು ತನ್ನ ಮೇಲೆ ಬಿದ್ದು ಆ ದೂಳಿಗೆ ಕಣ್ಣು ತೆರೆಯಲಾಗದೇ ಅಲ್ಲಿಂದ ಓಡಿಹೋದ.. ಅಷ್ಟರಲ್ಲಿ ಮಕ್ಕಳ ಶಿವರಾತ್ರಿ ಸೇನೆ ಎಳನೀರು ಕೊಯ್ದು‌ ಕುಡಿಯಲು ಆರಂಭಿಸಿದರು.

ದಾದು ಮರ ಹತ್ತಿ ಎಳನೀರು ಕೊಯ್ದು ಅವನಿಗೆ ಬೇಕಾದಷ್ಟು ಕುಡಿಯುತ್ತಿರುವಾಗ ದೊಡ್ಡ ಟಾರ್ಚೊಂದನ್ನು ಹಿಡಿದು ಇಬ್ಬರೂ ಬರುತ್ತಿರುವುದು ಕಾಣುತಿತ್ತು. ದಾದು ಮತ್ತು ಇನ್ನಿಬ್ಬರು ಸ್ನೇಹಿತರು ತೆಂಗಿನ ಮರದಲ್ಲಿದ್ದರು‌. ಬೇರೆ ಎಲ್ಲರೂ ಕೆಳಗಿದ್ದರು. ಎಲ್ಲರಿಗೂ ಸೂಚನೆ ಕೊಟ್ಟ ದಾದು ಅಡಗಿಕೊಳ್ಳುವಂತೆ ತಿಳಿಸಿದ. ಮಕ್ಕಳೆಲ್ಲ… ಅಲ್ಲಲ್ಲಿ ಬಚ್ಚಿಟ್ಟುಕೊಂಡರು. ತೆಂಗಿನ ಮರ ಏರಿದವರು ಅಲ್ಲೇ ಉಳಿಯಬೇಕಾಯ್ತು… ತೆಂಗಿನ ಮರಕ್ಕೆ ಟಾರ್ಚ್ ಲೈಟ್ ಬೀಳುತಿತ್ತು.. ಯಾರಿಗೂ ಕಾಣಿಸದಂತೆ ಅವಿತುಕೊಂಡರು. ಎಷ್ಟು ಹುಡುಕಿದರೂ ಸಿಗದ ಮಕ್ಕಳಿಗೆ “ಎಂಚಿ ಸಾವುದ ಉಪದ್ರಪ್ಪ ಈ ಜೋಕುಲೆನ..” ಎಂದು ಬಯ್ಯುತ್ತಾ “ನಾಳೆ ಧಣಿಗಳಿಗೆ ದೂರು ಕೊಡಬೇಕು” ಎನ್ನುತ್ತಾ ಮನೆಯ ಕಡೆ ಹೋದ. ಮನೆಗೆ ಹೋಗುತ್ತಿರುವುದನ್ನು ಖಚಿತಪಡಿಸಿಕೊಂಡ ದಾದು ಮತ್ತು ಸ್ನೇಹಿತರು ಸರಸರನೆ ಮರದಿಂದ ಕೆಳಗಿಳಿದು ಕೆಳಗೆ ಅವಿತಿದ್ದ ಸ್ನೇಹಿತರಿಗೆ ವಿಸಿಲ್ ಮೂಲಕ ಸೂಚನೆ ನೀಡಿದರು. ಮತ್ತೆ ಒಂದಾದ ಸೈನ್ಯ ಮುಂದಿನ ಯೋಜನೆಯಂತೆ ಮನೆಯ ಎದುರಿನ ಗೇಟುಗಳು ಬದಲಾಗುತ್ತಿತ್ತು … ಹಟ್ಟಿಯಲ್ಲಿ ಕಟ್ಟಿದ

ದನಕರುಗಳಿಗೂ ಶಿವರಾತ್ರಿ ಜಾಗರಣೆಯ ಭಾಗ್ಯ ನೀಡಲಾಯಿತು. ದಿನ ತನ್ನನ್ನು ಅಗ್ನಿಗೆ ಒಡ್ಡಿ ಮನುಷ್ಯರಿಗೆ ಬಿಸಿನೀರಿನ ಸ್ನಾನ ಮಾಡಲು ಸಹಾಯ ಮಾಡುತ್ತಿದ್ದ ಬಚ್ಚಲು ಮನೆಯ ಹಂಡೆಗಳು ಜೀವನದಲ್ಲಿ ಜಿಗ್ಸುಪೆಗೊಂಡು ಎಲ್ಲ ಸೇರಿ ಯಾವುದೋ ಮರದ ಕೊಂಬೆಗೆ ಹಗ್ಗ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದವು.

ಇಷ್ಟಕ್ಕೆ ನಿಲ್ಲಲಿಲ್ಲ ಶಿವರಾತ್ರಿಯ ಗಮ್ಮತ್ತು ಕಳ್ಳು ಕುಡಿದು ಮನೆಯ ಜಗುಲಿಯಲ್ಲಿ ಮಲಗಿದ್ದ ಚಿಂಪನನ್ನು ಎತ್ತಿಕೊಂಡು ಹೋಗಿ ಕೆಂಚನ ಮನೆಯ ಜಗುಲಿಯಲ್ಲಿ ಮಲಗಿಸಲಾಯ್ತು .. ಏನೋ ಶಬ್ದಕ್ಕೆ ಎಚ್ಚರಗೊಂಡ ಕೆಂಚನ ಹೆಂಡತಿ ಹೊರಬಂದಾಗ ಚಿಂಪ ಜಗುಲಿಯಲ್ಲಿ ಪ್ರಜ್ಞೆಯಿಲ್ಲದೇ ಮಲಗಿರುವುದನ್ನು ಕಂಡು “ಕುಡಿದು ಜಾಸ್ತಿಯಾದ್ರೆ ತನ್ನ ಮನೆ ಯಾವುದೂ ಅಂತ ಗೊತ್ತಾಗೊದಿಲ್ಲ ಈ ದರಿದ್ರ ಸಂತಾನಿಗಳಿಗೆ” ಎಂದು ಏನೇನೋ ಬಯ್ಯುತ್ತಿದ್ದಳು. ಮಕ್ಕಳಿಗೆ ಆಟ ಚಿಂಪನಿಗೆ ಪ್ರಾಣಸಂಕಟ… !

ಮತ್ತಷ್ಟು ತರಕಾರಿ ಗದ್ದೆಗಳಿಗೆ ದಾಳಿ‌ಮಾಡಿ ಒಂದು ಗದ್ದೆಯ ತರಕಾರಿ ಗಿಡಗಳನ್ನು ಇನ್ನೊಂದು ಗದ್ದೆಯಲ್ಲಿ ನೆಟ್ಟು ಮನೋರಂಜನೆ ಪಡೆದು ಹಸಿವಾದಾಗ ಎಳನೀರು ಕೊಯ್ದು ಕುಡಿಯುತ್ತಿದ್ದರು. ಹೀಗೆ ಸಮಯ ಹೋದದ್ದೆ ತಿಳಿಯಲಿಲ್ಲ. ಗಂಟೆ ಮುಂಜಾನೆ ನಾಲ್ಕು ಆಗಿರಬಹುದು. ದೇವಸ್ಥಾನಕ್ಕೆ ಹೊರಟರು ಜಾಗರಣೆ ಮುಗಿಸಿ ಮನೆಗೆ ಮರಳಿದರು.

ಮನೆಗೆ ಮರಳುವಾಗ ತಾವು ಮಾಡಿದ ಕೀಟಳೆಗಳನ್ನು ಮೆಲುಕು ಹಾಕುವುದೇ ಒಂದು ವಿಭಿನ್ನ ಅನುಭವವಾಗಿತ್ತು. ತಮ್ಮ ಶಿವರಾತ್ರಿಯ ದಾಳಿಯ ಸಂತೃಸ್ತರ ಬಾಯಿಂದ ಬರುವ ಬಯ್ಗುಳಗಳು ಕೇಳುವಾಗ ಏನೋ ಸಾಧನೆ ಮಾಡಿದ ಸಂತೃಪ್ತಿ. ದಾದು ಮತ್ತು ಗೆಳೆಯರ ಈ ಮನೋರಂಜನೆಯ ಶಿವರಾತ್ರಿ ಜಾಗರಣೆ ಮಾಳದ ಗೆಳೆಯ ರಾಜುವಿಗೆ ಅವಿಸ್ಮರಣೀಯವಾಗಿತ್ತು.

ಮುಂದುವರೆಯುವುದು……….

✍️ ಪ್ರಶಾಂತ್ ಭಂಡಾರಿ ಕಾರ್ಕಳ

Leave a Reply

Your email address will not be published. Required fields are marked *