ಗಗ್ಗರದ ಶಬ್ದಕ್ಕೆ ಹೆದರಿ ಎಚ್ಚರಗೊಂಡ ಪಾರ್ವತಿ ಭಯದ ಕಣ್ಣಿನಲ್ಲಿ ಕಣ್ಣಾಡಿಸಿದಾಗ ಕಲ್ಲಿನ ಕಟ್ಟೆಯ ಓಣಿಯಲ್ಲಿ ದೈವ ಚಾಕರಿಯ ನರ್ತಕ ಚಿಪ್ಪ ಕೋಲ ಮುಗಿಸಿ ಸಂಸಾರ ಸಮೇತನಾಗಿ ಮನೆಗೆ ಹೋಗುತ್ತಿದ್ದ… ಗಗ್ಗರದ ಶಬ್ದ ಆತನ ಬಟ್ಟೆಯ ಗಂಟಿನಿಂದಲೇ ಬರುತ್ತಿದ್ದನ್ನು ಅರ್ಥೈಸಿಕೊಂಡ ಪಾರ್ವತಿ ಗಾಬರಿಯಿಂದ ವಾಸ್ತವದೆಡೆಗೆ ಬಂದು ಸಮಾಧಾನಚಿತ್ತದಿಂದ ದಿಟ್ಟಿಸಿದಾಗ ಚಿಪ್ಪ ಪಾರ್ವತಿ ಮಲಗಿದ್ದ ಹಲಸಿನ ಕಟ್ಟೆಯ ಕಡೆಗೆ ಬರುತ್ತಿರುವುದು ಕಾಣಿಸಿತು. ದೈವ ನರ್ತಕ ಚಿಪ್ಪ ಸಾಣೂರಿನವನೇ ಮತ್ತು ಸಾಣೂರಿನ ಅಜಲು ಅವನಿಗೆ ಸೇರಿದ್ದ ಕಾರಣ ಪಾರ್ವತಿಗೆ ಪರಿಚಿತನಾಗಿದ್ದ… ಹತ್ತಿರ ಬರುತ್ತಲೇ.. “ಓ..ಮೆಲಂಟಕ್ಕೆ (ಅಕ್ಕ) ನೀವೆನಿಲ್ಲಿ?” ಎಂದು ಅನುಕಂಪದ ಧನಿಯಲ್ಲಿ ಮಾತು ಪ್ರಾರಂಭಿಸಿದ. ನೀವು ಸಿಕ್ಕಿದ್ದು ಒಳ್ಳೆದಾಯ್ತು ಒಂದು ವಿಷ್ಯ ಹೇಳೊದಿತ್ತು.. ನಿಮ್ಮ ಅಮ್ಮನ ಮನೆಗೆ ಹೋಗ್ಬೇಡಿ ನಿಮ್ಗೂ ವಿಷ ಹಾಕ್ಯಾರು!! ದೇವರಂತ ಇರ್ವತ್ತೂರಿನ ಮೆಲಂಟರನ್ನ ನಿಮ್ಮ ಒಡಹುಟ್ಟಿದವರೇ ..ಸಂಚು ಮಾಡಿ ಕೊಂದು ಹಾಕಿದ್ರು.. ಅವರು ಇರ್ವತ್ತೂರಿನ ಅಜಲಿಗೋಸ್ಕರ ನಿಮ್ಮ ಮಗನನ್ನು ಬೆಳೆಯಲು ಬಿಡಲಾರರು, ಅಂತಹವರು ಅವರು..! ಎಂದು ಒಂದೇ ಮಾತಿನಲ್ಲಿ ದೈವ ನುಡಿ ಕೊಟ್ಟಂತೆ ಹೇಳಿಬಿಟ್ಟ…..
ಮೊದಲೇ ಕತ್ತಲು ಕವಿದಿದ್ದ ಮನಸ್ಸಿಗೆ ಕಾರ್ಮೋಡ ಕವಿದಂತಾಗಿ ಪಾರ್ವತಿಗೆ ಮಾತುಗಳೇ ಹೊರಡಲಿಲ್ಲ…. ಈ ಚಿಪ್ಪ ನಿಜವಾಗ್ಲೂ ವಿಷ್ಯ ಗೊತ್ತಿದ್ದು ಹೇಳ್ತಿದ್ದಾನೆಯೇ… ಇದು ಕೂಡಾ ಗಾಳಿ ಸುದ್ದಿಯೇ! ಎಂಬುದನ್ನು ನಂಬದಂತಾದಳು. ಚಿಪ್ಪನಿಗೆ ಮರು ಪ್ರಶ್ನೆ ಹಾಕಲು ಧನಿ ಹೊರಡಲಿಲ್ಲ.. ಕಣ್ಣೀರು ಹರಿಯಲಾರಂಭಿಸಿತು. ಆ ಕ್ಷಣ ಪಕ್ಕದಲ್ಲಿ ಮಲಗಿದ್ದ ಮಗ ದಾದು ಎಚ್ಚರಗೊಂಡು ಅಳಲು ಪ್ರಾರಂಭಿಸಿದ.. ಚಿಪ್ಪ ಅಕ್ಕೆರೆ ಮಗುವಿಗೆ ಹಸಿವು ಆಗ್ತಿದೆ ಅನಿಸುತ್ತೆ.. ಎಂದು ತನ್ನ ಬಟ್ಟೆ ಚೀಲದಿಂದ ಬಾಳೆಹಣ್ಣು , ಅವಲಕ್ಕಿ ಪ್ರಸಾದ ಎಲ್ಲವನ್ನೂ ತೆಗೆದು ಕೊಟ್ಟ.. ಹಸಿದಿದ್ದ ಮಗುವಿಗೆ ಹಣ್ಣು ಪ್ರಸಾದ ಕೊಟ್ಟಳು ,ಹೊಟ್ಟೆಗೆ ಹಸಿವಾಗಿದ್ದರೂ ಮನಸ್ಸು ಖಾಲಿಯಾದ್ದರಿಂದ ಉಳಿದ ಹಣ್ಣು ಮತ್ತು ಅವಲಕ್ಕಿಯನ್ನು ಹಾಗೆ ಇಟ್ಟಳು..
“ಅಕ್ಕ ನೀವು ತಿನ್ನಿ ಎಲ್ಲಿ ಹೋಗ್ತಿರಿ? ಬೀದಿ ಬದಿ ಮಲಗಬೇಡಿ, ಅಮ್ಮನ ಮನೆಗೂ ಹೋಗಬೇಡಿ, ಎಲ್ಲಿ ಆದ್ರೂ ಬೇರೆ ಊರಿಗೆ ಹೋಗಿ ಮನೆಕೆಲಸಕ್ಕೆ ಸೇರಿಕೊಳ್ಳಿ, ನಿಮ್ಮ ಅಣ್ಣನವರ ಕೈಗೆ ಸಿಗಬೇಡಿ” ಎಂಬ ಎಚ್ಚರಿಕೆ ಕೂಡಾ ಕೊಟ್ಟು ಬಿಟ್ಟ ಚಿಪ್ಪ!
ಆದರೆ ಚಿಪ್ಪನ ಎಚ್ಚರಿಕೆಯ ಮಾತುಗಳನ್ನು ಕೇಳಿ ಮರು ಉತ್ತರಿಸಲಾಗದೇ ದುಃಖತಪ್ತ ಕಣ್ಣುಗಳೊಂದಿಗೆ ತಲೆ ಅಲ್ಲಾಡಿಸಿದಳು..
ಅಕ್ಕೆ.. ನಿಮ್ಮ ಅಣ್ಣಂದಿರು ಒಳ್ಳೆಯವರಲ್ಲ, ಅವರನ್ನು ದೈವವೇ ನೋಡಿಕೊಳ್ಳುತ್ತದೆ, ಅವರ ದುರಾಸೆ ಮಿತಿಮೀರಿದೆ. ಎರಡು ಊರಿನ ಅಜಲು ಪಡೆದು ಶ್ರೀಮಂತರಾಗುವ ಕನಸು ಕಾಣ್ತಾ ಇದ್ದಾರೆ. ನೀವು ಹೆದರಬೇಡಿ ಅಕ್ಕ ಯಾರು ಇಲ್ಲದವರಿಗೆ ದೇವರು ಇದ್ದಾನೆ, ಎಂದು ಚಿಪ್ಪ ತನ್ನ ಗಂಟನ್ನು ಬೆನ್ನಿಗೆ ಹಾಕಿ ಹೊರಟುಬಿಟ್ಟ.. “ಮತ್ತೆ ಅದೇ ಗಗ್ಗರದ ಶಬ್ದ” ಶಬ್ದ ನಿಧಾನವಾಗಿ ಕಡಿಮೆಯಾಯಿತು. ಆಗ ಚಿಪ್ಪ ದೂರ ಸಾಗಿದ್ದ, ಆದರೆ ಅವನ ಮಾತುಗಳು ದೈವವೇ ಬಂದು ತಾನು ಕೇಳಿದ ಪ್ರಶ್ನೆಗೆ ಉತ್ತರಿಸಿ ಹೋದಂತಿತ್ತು. ಒಂದು ಕ್ಷಣ, ನಿಜವಾಗ್ಲೂ ‘ಇದು ಚಿಪ್ಪ’ನೆನಾ ಅಂತ ಅನಿಸ್ತು ಪಾರ್ವತಿಗೆ.
ಮತ್ತದೇ ಗೊಂದಲದ ಗೂಡಾಯಿತು ಪಾರ್ವತಿಯ ಮನಸ್ಸು, ರಣ ಹದ್ದುವೊಂದು ಹೃದಯಕ್ಕೆ ಚುಚ್ಚಿದಷ್ಟು ನೋವಾಗುತ್ತಿದೆ, ತನ್ನ ರಕ್ತಸಂಬಂಧಿಗಳು ಹೀಗೆ ಮಾಡಿದರೆ? ಅಜಲಿನ ಅಕ್ಕಿಯ ಮಧ್ಯೆ ಸಂಬಂಧಗಳಿಗೆ ಬೆಲೆಯಿಲ್ಲವೇ? ಇರ್ವತ್ತೂರು ದೊಡ್ಡ ಊರು ನಮಗೆ 20-30 ಮುಡಿ ಅಕ್ಕಿ ಊರ ಚಾಕರಿ ಮತ್ತು ಕ್ಷೌರದಿಂದ ಬರ್ತಿತು. ಇದೇ ಅಕ್ಕಿ ಮೇಲೆ ನನ್ನ ಒಡಹುಟ್ಟಿದವರಿಗೆ ಕಣ್ಣು ಕುಕ್ಕಿತೇ? ಎಂದು ಕಣ್ಣೀರು ಹಾಕಿದಳು. ತನ್ನ ಗಂಡನ ಜನಪ್ರಿಯತೆ ಬಗ್ಗೆ ನನ್ನ ಅಣ್ಣಂದಿರಿಗೆ ಮತ್ಸರವಿತ್ತು ಎಂಬುದು ಪಾರ್ವತಿಗೆ ಗೊತ್ತಿತ್ತು. ಆದರೆ ಈ ಮಟ್ಟಕ್ಕೆ ಇಳಿಯುತ್ತಾರೆಂದು ಅವಳು ಕನಸಿನಲ್ಲೂ ಯೋಚಿಸಿರಲಿಲ್ಲ. ಚಿಪ್ಪ ಹೇಳಿದ್ದು ನಿಜ ಈ ಕಟುಕರು ಅಜಲಿನ ವಾರೀಸುದಾರ ಎಂಬ ಕಾರಣಕ್ಕೆ ನನ್ನ ಮಗನನ್ನು ಕೂಡಾ ಬದುಕಲು ಬಿಡಲಾರರು ನಾನು ಊರು ಬಿಡುವುದೇ ಒಳ್ಳೆಯದೆಂದು ನಿರ್ಧರಿಸಿದಳು. ಹಲಸಿನ ಮರದ ಕಟ್ಟೆಯಿಂದ ಎದ್ದಾಗ ಮಗ ದಾದು “ಅಮ್ಮ.. ಎಲ್ಲಿಗಮ್ಮಾ..” ಎಂದು ಕೇಳಿದ. ಊರು ಬಿಟ್ಟು ಹೋಗೊಣ ಕಂದ ಎಲ್ಲಿ ಆದ್ರೂ ನೀನು ಕೆಲ್ಸ ಮಾಡ್ಬೇಕು ಅಂದ್ಳು !, ಮುಗ್ದ ಮಗು ಕೆಲ್ಸ ಮಾಡಿದ್ರೆ ಊಟ ಕೊಡ್ತಾರಲ್ವಮ್ಮ? ಅಂದ. ಹೌದು ಮಗ ಹೊಟ್ಟೆ ತುಂಬಾ ಕೊಡ್ತಾರೆ ಎಂದು ಸಮಾಧಾನಿಸಿ ದಿಕ್ಕು ತೋಚಲಾರದೇ ಕಾರ್ಕಳದ ಕಡೆಗೆ ಹೆಜ್ಜೆ ಹಾಕಿದಳು. ಆಗ ಸಮಯ ಸುಮಾರು ಮಧ್ಯಾಹ್ನ ಮೂರು ಗಂಟೆ ಆಗಿರಬಹುದು . ಬಿಸಿಲ ತಾಪ ಸ್ವಲ್ಪ ಕಡಿಮೆ ಆಗಿತ್ತು ಚಿಪ್ಪ ಕೊಟ್ಟಿದ್ದ ಬಾಳೆಹಣ್ಣು ಮತ್ತು ಅವಲಕ್ಕಿಯನ್ನು ತನ್ನ ಸೀರೆಯ ಸೆರಗಿನಲ್ಲಿ ತುಂಬಿಸಿ ಗಂಟು ಬಿಗಿದು ಕಟ್ಟಿಕೊಂಡಳು. ಪಕ್ಕದೂರಿನಲ್ಲಿ ಒಕ್ಕಲು ಮನೆ (ರೈತನ ಮನೆ/ಜಮೀನ್ದಾರರ ಮನೆ) ಮನೆಯ ಕೆಲಸ ಹುಡುಕಿಕೊಂಡು ನಡೆದಳು..
(ಮುಂದುವರೆಯುವುದು)
Interesting story waiting for next episode