ಊರು ಬಿಟ್ಟು ಹೊರಟ ಪಾರ್ವತಿ ಮತ್ತು ಮಗ ಸೂರ್ಯಾಸ್ತ ಆಗುವ ವೇಳೆಗೆ ಕಾರ್ಕಳದ ಕಾಬೆಟ್ಟುವಿನಲ್ಲಿ ಒಂದು ಒಕ್ಕಲು/ ಕೃಷಿಕರ ಮನೆಯ ಬಾಗಿಲು ತಲುಪಿದರು.
ಅಲ್ಲಿನ ಯಜಮಾನ/ ಒಕ್ಕಲಿಗರನ್ನು ವಿಚಾರಿಸಿದಳು . ತನಗೊದಗಿ ಬಂದ ಕಷ್ಟವನ್ನು ವಿವರಿಸಿ ತನಗೆ ಮತ್ತು ಮಗನಿಗೆ ಊಟ, ಬಟ್ಟೆ , ಮಲಗಲು ಜಾಗ ಕೊಡಿ ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇವೆ ಎಂದು ಕಾಲಿಗೆ ಬಿದ್ದಳು. ಯಜಮಾನ ಲಿಂಗಪ್ಪ ಹೆಗ್ಡೆಯವರು ಒಬ್ಬ ಕರುಣಾಮಯಿ ವ್ಯಕ್ತಿ, ಕಷ್ಟ ಎಂದು ಬಂದವರ ಕೈ ಬಿಡುವುದಿಲ್ಲ ಎಂಬುದು ಊರವರ ಬಾಯಲ್ಲಿ ಹರಿದಾಡುವ ಮಾತಾಗಿತ್ತು. ಇವರಿಗೆ 500-600 ಮುಡಿ ಭತ್ತ ಬೆಳೆಯುವ ಗದ್ದೆ ಇತ್ತು. ಎರಡರಿಂದ ಮೂರು ಭತ್ತದ ಬೆಳೆ ತೆಗೆಯುತ್ತಿದ್ದರು. ಹೀಗಾಗಿ ಕೆಲಸಕ್ಕೆ ಜನ ಬೇಕಾಗಿತ್ತು. ಹೀಗಾಗಿ ನಿನಗೆ ಏನು ಕೆಲಸ ಗೊತ್ತು ಅದನ್ನು ಮಾಡಿಕೊಂಡಿರು, ಈ ಪೋರ ಏನು ಕೆಲಸ ಮಾಡುತ್ತಾನೆ ಆಟ ಆಡುವ ವಯಸ್ಸಲ್ವ, ಕೋಣ ಮೇಯಿಸಲಿ ಎಂದು ಬಿಟ್ಟರು ತಮಾಷೆಗೆ.
ಎಮ್ಮೆಗಳನ್ನು ಸಾಕುತ್ತಿದ್ದ ಲಿಂಗಪ್ಪ ಹೆಗ್ಡೆಯವರು ಕೋಣಗಳನ್ನು ಮಾರುತ್ತಿದ್ದರು. ಕಾರ್ಕಳದ ಬಹುತೇಕ ಹಳ್ಳಿಯವರು ಉಳುಮೆಗಾಗಿ ಕೋಣಗಳನ್ನು ಖರೀದಿಸಲು ಬರುತ್ತಿದ್ದರು. ಹೀಗಾಗಿ ಎಮ್ಮೆ ಸಾಕುವ ಕರುಗಳನ್ನು ಪಾಲನೆ ಮಾಡುವ ಕೆಲಸಗಳಿಗೆ ಆಳುಗಳ ಅಗತ್ಯವಂತೂ ಇತ್ತು. ಕಂಬಳದ ಕೋಣಗಳು ಕೂಡಾ ಇವರಲ್ಲಿತ್ತು. ಕಂಬಳ , ಕೋರಿ ಕಟ್ಟ ಎಂದರೆ ಲಿಂಗಪ್ಪ ಹೆಗ್ಡೆಯವರಿಗೆ ಅಚ್ಚುಮೆಚ್ಚು! ಇಷ್ಟೇ ಅಲ್ಲ ಕೋಳಿ ಕಟ್ಟದ ನಂತರ ಇವರ ಮನೆಯಲ್ಲಿ ಔತಣಕೂಟ ಕೂಡಾ ನಡೆಯುತಿತ್ತು. ಈ ಔತಣ ಕೂಟಗಳು ನಡೆಯುತಿತ್ತು. ಇದಲ್ಲದೇ ತುಂಬಾ ರೋಚಕವಾದ ಆಟವೊಂದು ಆಸುಪಾಸಿನ ಕಂಬಳ ಓಟಗಾರರಿಗೆ ತಾಲೀಮು ನಡೆಸುವ ಮತ್ತು ಊರಿನಲ್ಲಿ ಯಾರು ಹೆಚ್ಚು ಶಕ್ತಿಶಾಲಿ ಪುರುಷರು ಯಾವ ಊರಿನವರು ಹೆಚ್ಚು ದೈಹಿಕ ಸಾಮರ್ಥ್ಯದವರು ಎಂಬುದನ್ನು ನಿರ್ಧರಿಸಲು ಪಂಥಹ್ವಾನ ನೀಡುವ ಸವಾಲು ಸ್ವೀಕರಿಸುವ ಕೆಲ ಆಟಗಳು ಲಿಂಗಪ್ಪ ಹೆಗ್ಡೆಯವರ ಬೀಡಿನಲ್ಲಿ ನಡೆಯುತಿತ್ತು. ಸ್ಪರ್ಧೆ ಅಂದಮೇಲೆ ಆಟಗಳು ಒಮ್ಮೊಮ್ಮೆ ಹೊಡೆದಾಟದ ಹಂತಕ್ಕೆ ತಲುಪಿ ವೈಷಮ್ಯಕ್ಕೆ ಕೂಡಾ ತಿರುಗುತಿತ್ತು. ಇಂತಹ ಸ್ಪರ್ಧೆ , ವೈಷಮ್ಯಗಳಿಂದ ಲಿಂಗಪ್ಪ ಹೆಗ್ಡೆಯವರ ಹೆಸರು ಕೂಡಾ ಪ್ರಸಿದ್ದಿ ಪಡೆದಿತ್ತು.
ಒಮ್ಮೆ ಸಣ್ಣ ಬೆಟ್ಟವೊಂದರಲ್ಲಿ ಮೇಯಲು ಕಟ್ಟಿದ ಕೋಣ ಒಂದು ಬಿದ್ದು ಕಾಲು ಮುರಿದ ಪರಿಣಾಮ ನಡೆಯಲಾಗದೇ ಬಿದ್ದಿತ್ತು. ಆರೈಕೆಗಾಗಿ ಕೋಣವನ್ನು ಹಟ್ಟಿಗೆ ತರಬೇಕಾದ ಅನಿವಾರ್ಯತೆ ಇತ್ತು. ಲಿಂಗಪ್ಪ ಹೆಗ್ಡೆಯವರ ಕಟ್ಟಾಳುಗಳು ದೈಹಿಕವಾಗಿ ಸದೃಢರು, ಕೋಣವನ್ನು ಎತ್ತಿ ಹಗ್ಗದ ಮಂಚದಲ್ಲಿ ಸಲೀಸಾಗಿ ಎತ್ತಿಕೊಂಡು ಬರಬಲ್ಲ ದೈಹಿಕ ಪಟುಗಳಾಗಿದ್ದರು. ಕೋಣ ಏಳಲಾರದೇ ಇಳಿಜಾರದ ಬೆಟ್ಟದಲ್ಲಿ ಒದ್ದಾಡುತಿತ್ತು. ಇಳಿಜಾರದ ಕಾರಣ ಕಟ್ಟಾಳುಗಳಿಗೆ ಕೋಣವನ್ನು ಎತ್ತುವುದೇ ಕಷ್ಟವಾಯಿತು. ಕಟ್ಟಾಳುಗಳ ಈ ಸಾಹಸ ಕಾರ್ಯದ ಸುದ್ದಿ ತಿಳಿದ ಊರಿನ ಜನರು ವೀಕ್ಷಣೆಗಾಗಿ ಬಂದಿದ್ದರು. ಕೋಣದ ವ್ಯಾಪಾರಕ್ಕೆ ಬಂದಿದ್ದ ಮುಂಡ್ಕೂರಿನ ಮುತ್ತಯ್ಯ ಕಟ್ಟಾಳುಗಳ ಪ್ರಯತ್ನ ವಿಫಲವಾಗುತ್ತಿರುವುದನ್ನು ನೋಡುತ್ತಾ ನಿಂತಿದ್ದರು. ಮುತ್ತಯ್ಯರಿಗೆ ಕೋಣ ಎತ್ತುವ ಉಪಾಯ ಗೊತಿತ್ತು ಇವರು ಕೂಡಾ ಒಬ್ಬ ಅಸಾಮಾನ್ಯ ಸಾಮರ್ಥ್ಯದವರು ಇವರು ಕಾಲಿಟ್ಟಲ್ಲೆಲ್ಲ ಹುಲ್ಲು ಸಾಯುತಿತ್ತು. ಇವರ ಚಪ್ಪಲಿಲ್ಲದ ಕಾಲಿಗೆ ನಾಚಿಕೆ ಮುಳ್ಳು ಸಿಕ್ಕಿ ಅಪ್ಪಚ್ಚಿಯಾಗುತಿತ್ತು. ಇವರ ಕಾಲಡಿಗೆ ಏನು ಬಿದ್ದರೂ ಅದಕ್ಕೆ ಆಯುಷ್ಯ ಮುಗಿಯಿತೆಂದೆ ಅರ್ಥ! ಅಷ್ಟು ಬಲಿಷ್ಠ ಕಾಯದ ವ್ಯಕ್ತಿತ್ವ. ಇಂತಹ ಸಾಹಸ ಕಾರ್ಯಗಳಲ್ಲಿ ಪೌರುಷ ಪ್ರದರ್ಶನ ಬಲಿಷ್ಠತೆಯನ್ನು ಸಾಬೀತುಪಡಿಸಲು ಯೋಗ್ಯ ಸಂದರ್ಭವಾಗಿತ್ತು. ಮುಂಡ್ಕೂರಿನ ಮುತ್ತಯ್ಯ ಕಾಬೆಟ್ಟುವಿಗೆ ಬಂದು ಸಾಹಸ ಪ್ರದರ್ಶನ ಮಾಡಿ ಆ ಊರಿನ ಪುರುಷರ ಪೌರುಷವನ್ನು ಸೋಲಿಸುವುದೆಂದರೆ ಅದು ಯುದ್ದ ಗೆದ್ದಂತೆ, ಇದು ಮುತ್ತಯ್ಯನ ಮನಸ್ಸಿಗೆ ಬಂದಿದ್ದೆ ತಡ, ಸುತ್ತ ನೆರೆದಿದ್ದ ಜನರ ಮಧ್ಯದಿಂದ ಎದ್ದು ಮುಂದೆ ಬಂದು ಮುತ್ತಯ್ಯ ಒಂದು ಕಟ್ಟಾಳುಗಳಿಗೆ ವ್ಯಂಗ್ಯ ಮಾಡಿ ” ಓಯ್ ನಿಗ್ಲೆರ್ದ ಉಂದು ಮಾತ ಆವಂದ್ ಅಣ್ಣನಗುಲೆ ಪೋದು ಪೆತ್ತ ಮೇಪಾಲೆ… ಇಜಿಂಡ ಕಾಜಿ ಪಾಡ್ದ್ ಇಲ್ಲಡ್ ಕುಲ್ಲುಲೆ… ” (ನಿಮ್ಮಿಂದ ಇದು ಆಗುವ ಕೆಲಸವಲ್ಲ ನೀವು ಹೋಗಿ ದನ ಮೇಯಿಸಿ ಬಳೆ ಹಾಕೋಂಡು ಮನೆಯಲ್ಲಿರಿ) ಎಂದು ಕಟ್ಟಾಳುಗಳ ಪುರುಷತ್ವಕ್ಕೆ ಸವಾಲೆಸೆದರು. ಇದು ಇಡೀ ಊರಿನ ಜನರ ನಡುವೆ ಲಿಂಗಪ್ಪ ಹೆಗ್ಡೆ ಮತ್ತು ಅವರ ಕಟ್ಟಾಳುಗಳಿಗೆ ಅವಮಾನವಾಯಿತು. ಜನ ನಗು ತಡೆದುಕೊಳ್ಳಲಾಗದೇ ಬಿದ್ದು ಬಿದ್ದು ನಕ್ಕರು.
ಲಿಂಗಪ್ಪ ಹೆಗ್ಡೆಯವರು ಸವಾಲಿಗೆ ಉತ್ತರಿಸಿ ಮರು ಸವಾಲು ಹಾಕಿದರು “ನೀನು ಒಬ್ಬನೇ ಕೊಣವನ್ನು ಎತ್ತಿ ಹಟ್ಟಿಯಲ್ಲಿಟ್ಟರೇ ನೀನು ಕೇಳಿದ್ದನ್ನು ಕೊಡುತ್ತೇನೆ. ಇಲ್ಲವಾದರೆ ಸೀರೆ ಬಳೆ ಹಾಕಿಸಿ ಊರಿನಲ್ಲಿ ಮೆರವಣಿಗೆ ಮಾಡಿಸುತ್ತೇನೆ“. ಎಂದು ಸಿಟ್ಟಿನಿಂದ ಎದ್ದು ನಿಂತರು.
“ಆಯ್ತು , ನಿಮ್ಮ ಸವಾಲನ್ನು ಒಪ್ಪುತ್ತೇನೆ” ಎಂದು ಮುಂಡ್ಕೂರಿನ ಮುತ್ತಯ್ಯ ಸವಾಲು ಸ್ವೀಕರಿಸಿ ಕೋಣ ಬಿದ್ದಿದಲ್ಲಿಗೆ ಹೋದ. ಅವನು ಹೋದ ರಭಸಕ್ಕೆ ಬೆಟ್ಟ ಕಂಪಿಸುತಿದೆ ಅನಿಸಿತ್ತು, ಅಲ್ಲಿ ನೆರೆದಿದ್ದ ಪ್ರೇಕ್ಷಕರಿಗೆ ಬಾಹುಬಲಿ ಕಣ್ಣೆದುರಿಗೆ ಬಂದಂತೆ ಭಾಸವಾಯಿತು. ಈಗೋ ನೋಡು ಇವನು ನಿಜವಾದ ಗಂಡಸು ಎಂದು ಅಲ್ಲಿ ನೆರೆದಿದ್ದ ಹೆಂಗಳೆಯರ ಮನಸ್ಸಿನಲ್ಲಿ ಗಿರಕಿ ಹೊಡೆಯಿತು. ಜನ ನೋಡ ನೋಡುತ್ತಿದ್ದಂತೆಯೇ ಮುತ್ತಯ್ಯ ತನ್ನ ಮುಂಡಾಸಿನ ಒಂದು ತುಂಡು ಹರಿದು ಕೋಣದ ಎರಡು ಮುಂಗಾಲುಗಳನ್ನು ಜೋಡಿಸಿ ಕಟ್ಟಿದ … ಇನ್ನೊಂದು ತುಂಡು ಹರಿದು ಎರಡು ಹಿಂಗಾಲುಗಳನ್ನು ಕಟ್ಟಿದ.. ಓ….. ಎಂದು ಗರ್ಜಿಸಿ ಹಿಂಗಾಲು ಮುಂಗಾಲನ್ನು ಹಿಡಿದೆತ್ತಿ ಕಣ್ಣು ಮುಚ್ಚಿ ತೆಗೆಯುವಷ್ಟರಲ್ಲಿ ಹೆಗಲಿಗೆ ಹಾಕಿಕೊಂಡು ಹಟ್ಟಿಯತ್ತ ಸಿಂಹ ಗಾಂಭಿರ್ಯದ ನಡಿಗೆಯಲ್ಲಿ ಬಂದು ಹಟ್ಟಿಯಲ್ಲಿ ನಿಧಾನವಾಗಿ ಇಟ್ಟ.ಜನ ಯುದ್ದ ಗೆದ್ದ ರಾಜನ ಹಿಂದೆ ಜೈಕಾರ ಹಾಕಿಕೊಂಡು ಬರುವಂತೆ ಹಿಂಬಾಲಿಸಿದರು. ಮುತ್ತಯ್ಯನ ಸಾಮರ್ಥ್ಯ ಕಂಡು ಅಲ್ಲಿ ನೆರೆದಿದ್ದವರೆಲ್ಲ ಮೂಕ ವಿಸ್ಮಿತರಾದರು. ಯುವಕ ಯುವತಿಯರಂತೂ ಕುಣಿದು ಕುಪ್ಪಳಿಸಿದರು. ಮುತ್ತಯ್ಯ ಮುತ್ತಯ್ಯ ಎರು ಮುತ್ತಯ್ಯ ಎಂದು ಕೂಗಿದರು. ಅಂದಿನಿಂದ ಮುಂಡ್ಕೂರು ಮುತ್ತಯ್ಯ ಎರು(ಕೋಣ) ಮುತ್ತಯ್ಯ ಎಂಬ ಹೆಸರಿನಿಂದ ಪ್ರಸಿದ್ದಿ ಪಡೆದರು. ಇಂತಹ ಅವಮಾನ ಲಿಂಗಪ್ಪ ಹೆಗ್ಡೆಯವರು ಎಂದೂ ಅನುಭವಿಸಿರಲಿಲ್ಲ. ಕಾರ್ಕಳದ ಲಿಂಗಪ್ಪ ಹೆಗ್ಡೆ ಮತ್ತು ಸಹಚರರೆಂದರೆ ಬಲಾಢ್ಯರು ಎಂಬ ಹೆಸರಿತ್ತು. ಇಂತಹ ಸಂದರ್ಭದಲ್ಲಿ ಪರವೂರಿನವ ಒಬ್ಬ ಊರಿನ ಜನರ ನಡುವೆ ಅವಮಾನ ಮಾಡಿ ತನಗೆ ಜೈಕಾರ ಹಾಕಿಸಿಕೊಂಡರೆ ಏನಾಗಬೇಡ. ಲಿಂಗಪ್ಪ ಹೆಗ್ಡೆಯವರ ಮುಖ ತೀರಾ ಸಣ್ಣದಾಯಿತು. ಕೋಪದಿದಂದ ಕುದಿದ ಮುಖ ಇದ್ದಿಲಿನ ಬಣ್ಣಕ್ಕೆ ತಿರುಗಿತು. ಸವಾಲೆಸೆದು ಅವನು ಕೇಳಿದ್ದನ್ನು ಕೊಡಬೇಕಾದ ಇನ್ನೊಂದು ಸವಾಲು ಎದುರಾಯಿತು. ಎಷ್ಟೇ ಅವಮಾನ ಆದರೂ ಸ್ಪರ್ಧೆ ಸವಾಲಿಗೆ ಬೆಲೆಕೊಡಬೇಕಲ್ಲ.. ಕೊಡದಿದ್ರೆ ಇನ್ನೂ ಸಣ್ಣವರಾಗಲ್ವೇ ಅದು ಊರಿನ ಮಂದಿ ಮುಂದೆ..
“ಎರು ಮುತ್ತಯ್ಯ ನನ್ನ ಸವಾಲನ್ನು ಗೆದ್ದಗಾಗಿದೆ ನಿನ್ನ ಬಹುಮಾನವನ್ನು ಕೇಳು ಏನು ಬೇಕು” ಎಂದರು.
“5 ಮುಡಿ ಅಕ್ಕಿ, ಒಂದು ಕಟ್ಟದ ಕೋಳಿ, 7ಸೇರು ಅಕ್ಕಿಯ ರೊಟ್ಟಿ ಇಷ್ಟು ಕೊಡಿ ಧನಿ” ಎಂದ ಮುತ್ತಯ್ಯ.
“ಆಯ್ತು… ನಿನಗೆ ಎಲ್ಲವನ್ನೂ ಕೊಡುವ ವ್ಯವಸ್ಥೆ ಮಾಡುತ್ತೇನೆ ಆದರೆ ಒಂದು ಷರತ್ತು ಇದೆ ” ಎಂದು ಹೇಳಿ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಆತುರದಲ್ಲಿದ್ದರು.
(ಮುಂದುವರೆಯುವುದು)