January 18, 2025
bhandara

“ಹೆಗ್ಡೆಯವರೇ ಯಾವ ಷರತ್ತು ಬೇಕಾದರೂ ಹಾಕಿ ಇಲ್ಲಿ ಗೆಲ್ಲೋದು‌ ನಾನೇ!”.. ಎಂದು ಎರು ಮತ್ತಯ್ಯ ನಸುನಗುತ್ತಾ ಹೇಳಿದ.

“ಇದು ಬಾಹುಬಲದ ಸವಾಲು ಅಲ್ಲ ಮುತ್ತಯ್ಯ ಇದು ತಿನ್ನುವ ಸಾಮರ್ಥ್ಯದ ಸ್ಪರ್ಧೆ… ನೀನು ಕೇಳಿದ ಒಂದು ಕಟ್ಟದ ಕೋಳಿ ಮತ್ತು ಏಳು ಸೇರು ಅಕ್ಕಿಯ ರೊಟ್ಟಿ ನೀನೊಬ್ಬನೇ ತಿಂದು ನಿನ್ನ ಊರಿಗೆ ಹೋಗಬೇಕು. ಈ ಸವಾಲು ಸ್ವೀಕರಿಸಿದರೆ ನೀನು ಬಲಶಾಲಿ ಎಂದು ನಾನು ಒಪ್ಪುತ್ತೇನೆ. ” ಎಂದರು ಹೆಗ್ಡೆಯವರು.

“ಆಯ್ತು ಹೆಗ್ಡೆಯವರೆ ರಾತ್ರಿ ಊಟಕ್ಕೆ ಸಿದ್ದ ಮಾಡಿ ಊಟವಾದ ನಂತರ ಊರಿಗೆ ಹೋಗುತ್ತೇನೆ.” ಎಂದು ಷರತ್ತು ಒಪ್ಪಿದ.

ಏನೋ ಸಂಚು ಇರುವಂತೆ ಭಾಸವಾದರೂ‌ ಊರಿನವರ ಮಧ್ಯೆ ನಾನೊಬ್ಬ ಬಲಶಾಲಿ ಎಂದು ಸಾಬೀತುಪಡಿಸಿ‌‌ ಆಗಿದೆ. ನಾನು ಯಾವತ್ತೂ ಸೋಲಬಾರದು ಎಂದು ನಿಶ್ಚಯಿಸಿ ಎದೆಗುಂದದೇ ಸವಾಲಿನಲ್ಲಿ ಗೆಲ್ಲುವ ಹುಮ್ಮಸ್ಸು ಬೆಳೆಸಿಕೊಂಡರು.

ಈ ಸ್ಪರ್ಧೆಯ ಸುದ್ದಿ ಕೇಳಿ ಊರಿನ ಜನ ಹೆಗ್ಡೆಯವರ ಮನೆಗೆ ಆಗಮಿಸುತ್ತಿದ್ದರು. ಅಲ್ಲಲ್ಲಿ ಜನರ ಗುಸುಗುಸು ಮಾತು ಆರಂಭವಾಯಿತು “ಎರು ಮುತ್ತಯ್ಯ ತಿನ್ನುವುದು ಬಿಡಿ ಜನ ನೋಡಿಯೇ ಓಡುತ್ತಾನೆ ನೋಡಿ ” ಎಂದು ಕೆಲವರು ಆಡಿಕೊಂಡರೆ, “ಅಷ್ಟು ದೊಡ್ಡ ಕೋಣ ಎತ್ತಿದವನಿಗೆ ಏಳು ಸೇರು ಅಕ್ಕಿ ರೊಟ್ಟಿ ಏನು ಮಹಾ ? ಎಂದು ಹಲವರ ಬಾಯಲ್ಲಿ ಗುಸು ಗುಸು ಹರಿದಾಡುತಿತ್ತು.

ಇನ್ನೊಂದು ಕಡೆ ಹೆಗ್ಡೆಯವರ ಕಟ್ಟಾಳುಗಳು ಮುತ್ತಯ್ಯ ತಿನ್ನದೇ ಎದ್ದು ಓಡದಂತೆ ಬಾಗಿಲಿನ ಚಿಲಕಗಳು ಸುಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸುತ್ತಿದ್ದರು. ಆತ ತಪ್ಪಿಸಿ ಓಡಿದರೆ ಹಿಡಿದು ಬಡಿದು ತಮ್ಮಗಾದ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವ ಹಪಾಹಪಿಯಲ್ಲಿದ್ದರು.

ಇನ್ನೇನೋ ಸ್ಪರ್ಧೆ ಆರಂಭ ಅನ್ನುವಷ್ಟರಲ್ಲಿ ಸರಿಯಾಗಿ ಮುತ್ತಯ್ಯನು ಸ್ನಾನ ಮುಗಿಸಿ ಊಟಕ್ಕೆ ಸಿದ್ಧರಾದರು. ಹೆಗ್ಡೆಯವರು ಮುತ್ತಯ್ಯನಿಗೆ ಬಡಿಸುವಂತೆ ತಮ್ಮ ಕೆಲಸದಾಕೆ ಪಾರ್ವತಿಗೆ ಆಜ್ಞೆಯಿತ್ತರು. ಪಾರ್ವತಿ ಅಕ್ಕಿರೊಟ್ಟಿಯ ಎರಡು ಗೋಣಿಯನ್ನು ತಂದು‌ ಇಟ್ಟಳು. ಊಟದ ಚಾವಡಿಯಲ್ಲಿ ಒಂದು ಬಾಳೆ ಎಲೆಗೆ ಕಟ್ಟದ ಕೋಳಿಯ ಸುಕ್ಕವನ್ನು ಬಡಿಸಲಾಯಿತು. ಇನ್ನೊಂದು ದೊಡ್ಡ ಬಾಳೆಎಲೆ ಯಲ್ಲಿ ಅಕ್ಕಿರೊಟ್ಟಿಯನ್ನು ಬಡಿಸುವ ಕಾರ್ಯ ಆರಂಭವಾಯಿತು. ಇದಕ್ಕೆ ಒಂದು ಹಂಡೆಯಲ್ಲಿ ಕೋಳಿಸಾರು ಮಾಡಲಾಗಿತ್ತು. ಎಲ್ಲವೂ ಸಿದ್ದತೆಯಾದ ಕೂಡಲೇ ಮನೆಯ ಪಡ್ಸಾಲೆ ಮತ್ತು ಹಿಂದಿನ ಮತ್ತು ಎಲ್ಲ ಹೊರಹೋಗುವ ಬಾಗಿಲುಗಳನ್ನು ಮುಚ್ಚಲಾಯಿತು.

ಮುತ್ತಯ್ಯನು ನಗುಮುಖದಿಂದಲೇ “ಹೆಗ್ಡೆಯವರೇ ಇದೆಲ್ಲ ನನಗೆ ಹೊಸದಲ್ಲ.. ಐದಾರು ಸೇರು ಅಕ್ಕಿರೊಟ್ಟಿ ಅನಾಯಾಸವಾಗಿ ನಾನು ತಿನ್ನುವವನೇ” ಎಂದು ಹೇಳಿ ಹೆಗ್ಡೆಯವರಿಗೆ ಸ್ವಲ್ಪ‌ ನಿರಾಸೆ ಮಾಡಿದನು. ಚಾವಡಿಯಲ್ಲಿದ್ದ ದೈವಗಳನ್ನ ನೆನೆಸಿ ಊಟ ಪ್ರಾರಂಭಿಸಿದ ಮುತ್ತಯ್ಯ, ಬಡಿಸಿದ್ದ ಅಕ್ಕಿರೊಟ್ಟಿಯನ್ನು ಕ್ಷಣಮಾತ್ರದಲ್ಲಿ ಪುಡಿಮಾಡಿದಾಗ ಅರ್ಧ ಎಲೆಗಾಗುವಷ್ಟಾಯಿತು. ಮತ್ತೆ ಬಡಿಸಿಕೊಂಡು ಹುಡಿಮಾಡಿಕೊಂಡನು. ಮುತ್ತಯ್ಯ ರೊಟ್ಟಿ ಹುಡಿಮಾಡುವುದನ್ನು ಕಂಡು ಹೆಗ್ಡೆಯವರ ಸಹಿತ ಎಲ್ಲರೂ ಮೂಕವಿಸ್ಮಿತರಾದರು. ಕೋಳಿಸಾರು ಬಡಿಸಿಕೊಂಡು ತಿನ್ನ ತೊಡಗಿದ ಮುತ್ತಯ್ಯ ಒಂದಿನಿತೂ ವಿರಮಿಸಲಿಲ್ಲ. ಕೋಳಿಸುಕ್ಕದಲ್ಲಿ ಎಲುಬು ಇಲ್ಲವೆಂಬಂತೆ ಸಲೀಸಾಗಿ ತಿನ್ನುತ್ತಿದ್ದ. ಅಷ್ಟೇ ಅಲ್ಲ ಮುತ್ತಯ್ಯ ಸುಕ್ಕಕ್ಕೆ ಕೈಹಾಕುವಾಗಲೇ ಎಲುಬು ಹೆದರಿ ಹೊರಬರುತಿತ್ತು. ಅಂದರೆ ಮುತ್ತಯ್ಯನ ಶಕ್ತಿ ಯುಕ್ತಿ ಹಾಗೆ ಇತ್ತು. ಏಳು ಸೇರು ಅಕ್ಕಿ ರೊಟ್ಟಿ ಅಂದರೆ ದೊಡ್ಡ ಎರಡು ಗೋಣಿಗಿಂತಲೂ ಹೆಚ್ಚಾಗಿತ್ತು. ಇಂತಹ ಸಾಹಸ ಕಂಡು ಬಡಿಸುವ ಪಾರ್ವತಿ ಅಲ್ಲದೇ ಅಲ್ಲಿ ನೆರೆದಿದ್ದ ಎಲ್ಲರನ್ನೂ ದಂಗುಬಡಿಸಿತು. ಐದು ಸೇರಿನ ಅಕ್ಕಿ ರೊಟ್ಟಿ ತಿಂದು ಮುಗಿಸಿದರೂ ಮುತ್ತಯ್ಯನ ಸ್ಪರ್ಧೆಯ ಹುಮ್ಮಸ್ಸು ಇಳಿಯಲಿಲ್ಲ.. ಇವನು ಸೋಲುತ್ತಾನೆ ಎಂದುಕೊಂಡಿದ್ದವರು ಇಂಗು ತಿಂದ ಮಂಗನಂತಾದರು. ವೀಕ್ಷಣೆಗೆ ಬಂದಿದ್ದ ಊರಮಂದಿಯಲ್ಲಿ ಎರುಮುತ್ತಯ್ಯನ ಗುಣಗಾನ ಆರಂಭವಾಯಿತು.

 

ಮುತ್ತಯ್ಯ ವಿರಮಿಸದೇ ಮತ್ತೆ ಉಳಿದ ಎರಡು ಸೇರು ಅಕ್ಕಿರೊಟ್ಟಿಯನ್ನು ಬಡಿಸಿಕೊಂಡ ಅದೇ ವೇಗದಲ್ಲಿ ಪುಡಿಮಾಡಿ ಕೋಳಿಸಾರಿನೊಂದಿಗೆ ತಿನ್ನತೊಡಗಿದ. ಮುಚ್ಚಿದ ಬಾಗಿಲುಗಳು ನಾಚಿಕೆಪಡುತಿದ್ದವು. ಹೆಗ್ಡೆಯವರಿಗೆ ಪಶ್ಚತ್ತಾಪವಾಯಿತು. ಇಂತಹ ಸಾಹಸಿ ಬಾಹುಬಲಿಯನ್ನು ನಾನು ಅವಮಾನ ಮಾಡಬಾರದಿತ್ತು ಅಂದುಕೊಂಡರು. ಮನೆಯ ಎಲ್ಲ ಬಾಗಿಲು ತೆಗಿಸಿದರು. ಅಷ್ಟರಲ್ಲಿ ಮುತ್ತಯ್ಯ ಅಕ್ಕಿ ರೊಟ್ಟಿ ಮುಗಿಸಿ ಹೆಗ್ಡೆಯವರೇ ಸ್ವಲ್ಪ ಅನ್ನ ಬಡಿಸಿ ಅಂದ ! ಹೆಗ್ಡೆಯವರಿಗೆ ಆಶ್ಚರ್ಯ. ಮುತ್ತಯ್ಯ ನಿನ್ನ ಸಾಹಸಕ್ಕೆ ನಾನು ತಲೆಬಾಗುತ್ತೇನೆ . ನನ್ನನ್ನು ಕ್ಷಮಿಸು. ದಯವಿಟ್ಟು ಕೈ ಕಾಲು ಮುಖ ತೊಳೆದುಕೊಳ್ಳಿ . ಇವತ್ತು ಇಲೇ ಮಲಗಿ ನಾಳೆ ಊರಿಗೆ ಹೋಗುವಿಯಂತೆ, ಈಗ ನೀನು ನಮ್ಮ ಅತಿಥಿ . ನಾಳೆ ಎತ್ತಿನ ಬಂಡಿಯ ಮೂಲಕ ಮೆರವಣಿಗೆ ಮಾಡಿ ಊರಿಗೆ ಕಳುಹಿಸಿಕೊಡುತ್ತೇವೆ ಎಂದು ಕೇಳಿಕೊಂಡರು. ಮುತ್ತಯ್ಯನು ಗೆದ್ದ ಖುಷಿಯಲ್ಲಿ ತನಗಾದ ಅವಮಾನ, ಸಂಚನ್ನು ಮರೆತು ತಾನೊಬ್ಬ ಹೆಗ್ಡೆಯವರ ಸಂಬಂಧಿ ಎಂಬಷ್ಟು ಮಿತ್ರರಾಗಿ ಬಿಟ್ಟರು. “ಮೆರವಣಿಗೆ ಏನು ಬೇಡ ಹೆಗ್ಡೆಯವರೇ ನಾನು ಬೆಳಿಗ್ಗೆ ಬೇಗ ಊರಿಗೆ ಹೊರಡುತ್ತೇನೆ” ಎಂದರು. ಅದಕ್ಕೆ ಹೆಗ್ಡೆಯವರು ಕೇಳಲಿಲ್ಲ “ಅದು ನನ್ನ ಮನೆತನದ ಪದ್ದತಿ, ಗೆದ್ದವನಿಗೆ ಸನ್ಮಾನ ಮಾಡುವುದು ಊರಿನ ಗೌರವ ಅದು. ನಿನ್ನ ಸಾಹಸ ಊರಿಡೀ ಪಸರಿಸಬೇಕು” ಎಂದರು.

ಮುತ್ತಯ್ಯನಿಗೆ ಅಭಿಮಾನಿಗಳಾಗಿದ್ದ ಊರಿನ ಜನ ಮುತ್ತಯ್ಯನನ್ನು ಸುತ್ತುವರೆದಿದ್ದರು. ಅಭಿಮಾನ ವ್ಯಕ್ತಪಡಿಸುತ್ತಿದ್ದರು.ಕೆಲ ಹೆಂಗಸರಂತೂ ಮುತ್ತಯ್ಯನಂತಹ ತಂದೆಗೆ ಹುಟ್ಟಿದ ಮಗ ನನಗೆ ಬೇಕು ಎಂದು ಆಸೆ ಪಟ್ಟರು. ಯುವತಿಯರು ಮುತ್ತಯ್ಯನ ಹಿಂಬಾಲಿಸಲು ಕಾತುರರಾಗಿದ್ದರು. ಇವರೆಲ್ಲ ಆತುರ ಕಾತರದ ನಡುವೆ ಎಲ್ಲರಿಗೂ ಊಟ ಹಾಕಲಾಯಿತು. ಮುತ್ತಯ್ಯನಿಗೆ ರಾಜೋಪಾಚಾರ ನೀಡಿ ಸತ್ಕರಿಸಿ ಮುಂಜಾನೆಯಾಗುತ್ತಲೇ ಎರು ಮುತ್ತಯ್ಯನಿಗೆ ವಿಶೇಷ ರೀತಿಯ ರಾಜಪೇಟ ಧರಿಸಿ ಎತ್ತಿನ ಗಾಡಿಯನ್ನು ಸಿಂಗರಿಸಿ , ಎರು ಮುತ್ತಯ್ಯನ ಸಾಹಸವನ್ನು ವರ್ಣಿಸುವ ಪದ್ಯಗಳನ್ನು ಹಾಡಿಸಿ , ಘೋಷಣೆಗಳನ್ನು ಕೂಗುತ್ತಾ ಊರಿಡೀ ಮೆರವಣಿಗೆ ಸಾಗಿತು. ಹತ್ತು ಮುಡಿ ಅಕ್ಕಿ , ಹತ್ತು ನಾಣ್ಯ ಮುಂತಾದುವುಗಳನ್ನು ಉಡುಗೊರೆಯಾಗಿ ನೀಡಿ ಬೀಳ್ಕೊಡಲಾಯಿತು.

ಇಂತಹ ರಾಜ ಗಾಂಭಿರ್ಯದ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಪಾರ್ವತಿ ಮತ್ತು ದಾದು ಚೆನ್ನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ದಾದು ಕೋಣಗಳ ಆರೈಕೆ , ಹಟ್ಟಿ ಕೆಲಸ , ಕೋಣ ಮೇಯಿಸುವ ಕೆಲಸ ಮಾಡುತ್ತಾ ತನ್ನ ಬಾಲ್ಯದ ತುಂಟಾಟಗಳನ್ನ ಆಡುತ್ತಿದ್ದ. ಹೀಗೆ ಬೆಳೆಯುತ್ತಾ 7 ವರ್ಷ ಕಳೆದಿತ್ತು. ಈಗ ದಾದುನಿಗೆ 12 ವರ್ಷ ಸಣ್ಣ ತೆಂಗಿನ ಮರಗಳಿಗೆ ಸಲೀಸಾಗಿ ಹತ್ತಿ ಇಳಿಯುತ್ತಿದ್ದ. ದಿನಕ್ಕೊಂದಾದರು ಎಳನೀರು ಕೊಯ್ದು ಕುಡಿಯುತ್ತಿದ್ದ. ಕೆಲದಾಳುಗಳ ಮಕ್ಕಳೊಂದಿಗೆ ಆಟ, ಮೀನು ಹಿಡಿಯುವುದು, ಮರ ಹತ್ತುವುದು, ಹೊಳೆಯಲ್ಲಿ ಈಜುವುದು ಇಷ್ಟೇ ಇವನ ಪ್ರಪಂಚ. ಪಾರ್ವತಿಗೆ ತನ್ನ ಮಗ ಇಷ್ಟಕ್ಕೆ ಸೀಮಿತವಾಗಿರುವುದು ಇಷ್ಟವಿರಲಿಲ್ಲ. ಅಪ್ಪನಂತೆ ಕ್ಷೌರ ಕಲಿಸಿ, ಅವನನ್ನು ಊರಿನ ಭಂಡಾರಿ ಮಾಡಬೇಕು‌‌. ಊರಿನ ದೈವದ ಭಂಡಾರ ಚಾಕರಿ ಮಾಡಬೇಕು. ಎಂಬ ಆಸೆ ಅವಳಲ್ಲಿತ್ತು. ಆದರೆ ತನ್ನ ಪರಿಸ್ಥಿತಿ ಇದಕ್ಕೆ ಅವಕಾಶವನ್ನೇ ಕೊಡುತ್ತಿರಲಿಲ್ಲ.

(ಮುಂದುವರೆಯುವುದು)

Leave a Reply

Your email address will not be published. Required fields are marked *