ಇರ್ವತ್ತೂರಿನಿಂದ ಕಾಬೆಟ್ಟುವಿಗೆ ಹೆಚ್ಚು ದೂರವೇನು ಇಲ್ಲ, ಹೀಗಾಗಿ ಇರ್ವತ್ತೂರಿನ ಕೆಲ ಜನ ಕೃಷಿ ಕೆಲಸಕ್ಕೆ ಬರುತ್ತಿದ್ದರು. ಕಾಬೆಟ್ಟಿನ ಹೆಗ್ಡೆಯವರ ಮನೆಗೆ ಯಾರಾದರೂ ಇರ್ವತ್ತೂರಿನವರು ಬಂದರೆ ಪಾರ್ವತಿಗೆ ಏನೋ ಸಂತೋಷ ನನ್ನ ಊರಿನವರಲ್ಲೊಮ್ಮೆ ಮಾತಾನಾಡಬೇಕು. ಊರಿನ ಸಮಾಚಾರ ಕೇಳಬೇಕೆಂಬ ಬಯಕೆ ಉಂಟಾಗುತಿತ್ತು. ಒಮ್ಮೆ ಉಳುಮೆಗೆ ಬಂದಿದ್ದ ತಬುರ ಪರಿಚಯವಿದ್ದ ಕಾರಣ ಪಾರ್ವತಿಯನ್ನು ಕಂಡು “ಎಂಚ ಉಲ್ಲರ್ ಭಂಡಾರ್ದಿ?” ಎಂದು ಮಾತು ಆರಂಭಿಸಿದ . ಊರಿನ ಜನ ಶಾಪಗ್ರಸ್ಥಳಂತೆ ಕಂಡರೂ ಇರ್ವತ್ತೂರಿನ ಮಣ್ಣಿನ ಪ್ರೀತಿ ಅವಳಲ್ಲಿತ್ತು. ತನ್ನ ಗಂಡನ ದೈವ ಚಾಕರಿ ಬಗ್ಗೆ ಹೆಮ್ಮೆಯಿತ್ತು. ಇದನ್ನು ತನ್ನ ಮಗನ ಮೂಲಕ ಮುಂದುವರೆಸಬೇಕು ಎನ್ನುವ ಅಲೋಚನೆ ಸದಾ ಮನಸ್ಸಿಗೆ ಬರುತಿತ್ತು. ಎಷ್ಟೋ ಸಲ ತನ್ನ ಮಗ ಅಪ್ಪನಂತೆ ಸತ್ತಿಗೆ (ದೈವ ಛತ್ರಿ ) ಹಿಡಿದು ಭಂಡಾರ ಸಾಗುವ ಕನಸು ಕೂಡಾ ಕೆಲವೊಮ್ಮೆ ಬಿದಿದ್ದು ಪಾರ್ವತಿಗೆ ಮತ್ತಷ್ಟು ಕಾಡುತಿತ್ತು.
ತಬುರ ಮಾತಿಗಿಳಿದಾಗಲೇ ಪಾರ್ವತಿಯ ಪತಿಯ ಅಗಲಿಕೆ ವಿಚಾರದಿಂದಲೇ ಆರಂಭಿಸಿದ. ಪಾರ್ವತಿ ಭಾವುಕಳಾದಳು, “ಒಂದಲ್ಲ ಒಂದು ದಿನ ಊರಿನ ಜನರಿಗೆ ಈ ನಿಗೂಢ ಸಾವಿನ ಕಾರಣ ಅರಿವಾಗುತ್ತದೆ. ನೋಡ್ತಾ ಇರಿ ನಮ್ಮ ದೈವ ಸಾಮಾನ್ಯವೇ? ಅವನು ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟೆ ಕೊಡುತ್ತಾನೆ” ಎಂದ.
ಇದೇ ತಬುರ ತನ್ನ ಗಂಡನ ಸಾವು ಆದ ದಿನ ಊರಿಡೀ ದೈವ ಶಾಪದಿಂದ ಸತ್ತ ಎಂದು ಡಂಗುರ ಸಾರಿದ್ದು ಕಣ್ಣ ಮುಂದೆ ಬಂದು ಹೋಯ್ತು. ಒಂದು ಕ್ಷಣ ಇಂತಹ ದ್ವಂಧ್ವ ಮನಸ್ಥಿತಿಗೆ ಸಿಟ್ಟು ಬಂದರೂ ಈಗ ಈತನಿಗೆ ಸತ್ಯದ ಅರಿವಾಗಿದೆ. ಹೀಗಾಗಿ ನನ್ನ ಪತಿಯ ಪರವಹಿಸಿದ್ದಾನೆ ಎಂದುಕೊಂಡಳು.
“ನಿಮ್ಮ ಅಣ್ಣಂದಿರಿಗೆ ಇರ್ವತ್ತೂರು ಊರಿನ ಅಜಲು ಇನ್ನು ಅಧಿಕೃತ ಆಗಿಲ್ಲ. ಅಂದರೆ ಭಾಮ ಆಗಿಲ್ಲ. ಆಗಲು ದೈವ ಕೊಡಮಂದಾಯ ಒಪ್ಪುತ್ತಿಲ್ಲ, ದೈವ ನುಡಿ ಕೊಡುವಾಗ “ಎನ್ನ ಒಂಜಿ ಪಿಂಗಾರದ ಎಸಲ್ ಎನ್ನ ಮಂಚವುಡು ಇಜ್ಜಿ ಯಾನ್ ಎಂಚ ಭಾಮ ಕೊರ್ಪುನು ಅನ್ನುತಿತ್ತು.” ಹೀಗಾಗಿ ಊರಿಗೆ ಊರೇ ಭಂಡಾರಿ ಇಲ್ಲದೇ ಪರವೂರ ಭಂಡಾರಿಯನ್ನ ಕರೆಯಬೇಕಾಗಿದೆ.- ಎಲ್ಲಾ ಲಗಾಡಿ ತೆಗೆದ್ರೂ! ” ಎಂದು ಹತಾಶೆಯ ಭಾವದೊಂದಿಗೆ ಮಾತು ಮುಗಿಸಿದ.
ಪಾರ್ವತಿಗೆ ಏನೋ ಒಂದು ಧನ್ಯತಾ ಭಾವ, ನನಗೆ ದ್ರೋಹ ಬಗೆದವರಿಗೆ ಅವರು ಅನಿಸಿದ್ದು ದಕ್ಕಲಿಲ್ಲ. ದಕ್ಕಲು ದೈವ ಬಿಡಲಿಲ್ಲವಲ್ಲ ಎಂದು ಮನಸ್ಸು ಭಕ್ತಿಯ ಕಡಲಲ್ಲಿ ತೇಲಿ ಹೋಯಿತು. “ಸತ್ಯದ ದೈವ ಕೈ ಬುಡಯೇ ತಬುರ” ಎಂದು ಧನ್ಯತೆ ವ್ಯಕ್ತಪಡಿಸಿದಳು.
“ನಿಮ್ಮ ಮಗ ದೊಡ್ಡನಾಗುತ್ತಿದ್ದನಲ್ಲ.. ಮೊದಲು ಅವನಿಗೆ ಕ್ಷೌರ ಕಲಿಸಿ ಅವನಿಗಲ್ವೇ ಇರ್ವತ್ತೂರಿನ ಹಕ್ಕು” ಎಂದ.
ಪಾರ್ವತಿಯ ಕನಸಿಗೆ ಒಂದು ಬೆಂಬಲ ಸಿಕ್ಕಿದಂತಾಯಿತು. “ಅಲ್ಲ ತಬುರ ನನ್ನ ಮಗನಿಗೆ ಕ್ಷೌರ ಕಲಿಸುವವರಾರು, ನನಗೆ ಈಗ ಕುಟುಂಬದವರಂತೂ ಇಲ್ಲ, ಅನಾಥೆಯಾಗಿದ್ದೇನೆ. ಅದೂ ಕೂಡಾ ಕ್ಷೌರ ಕಲಿಸೋದು ಅಂದ್ರೆ ದೊಡ್ಡ ಸಾಹಸ ಅಂತಾನೆ ಅಂದುಕೊಂಡಿರೋ ನಮ್ಮವರು ಎಲ್ಲಿ ಕಲಿಸ್ತಾರೆ. ಕ್ಷೌರ ಕಲಿತ್ರೆ ಸಾಕಾ? ಶುದ್ಧದ ಕೆಲಸ , ಅಭಿಷೇಕ, ಮದುವೆ, ಉಪನಯನ, ಭಂಡಾರದ ಚಾಕರಿಯ ನಿಯಮಗಳನ್ನೆಲ್ಲ ಕಲಿಬೇಕಲ್ವ, ಸಧ್ಯ ಇದು ಸಾಧ್ಯವಾಗದ ಮಾತು” ಎಂದು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಳು.
ಅಷ್ಟರಲ್ಲಿ ಗದ್ದೆ ಕಡೆ ಬಂದಿದ್ದ ಹೆಗ್ಡೆಯವರು ಪಾರ್ವತಿಯ ಮಾತನ್ನು ಕೇಳಿಸಿಕೊಂಡರು, “ಆ ತುಂಟನಿಗೆ ಊರಿನ ಅಜಲು ಕೊಡೊದ? ಊರು ಉದ್ಧಾರ!! “ಎಂದು ನಗುತ್ತಾ ಹೇಳಿದರು. “ಪಾರ್ವತಿ ಅವನು ಕ್ಷೌರ ಕಲಿಯಲಿ ನಾನು ನಮ್ಮ ಊರಿನ ಭಂಡಾರಿ ಹತ್ರ ಮಾತಾಡಿ ವ್ಯವಸ್ಥೆ ಮಾಡ್ತೇನೆ” ಎಂದರು.
ಪಾರ್ವತಿಗೆ ಇದು ಕನಸೋ ನನಸೋ ತಿಳಿಯಲಿಲ್ಲ ಮೊದಲು ಆಕಾಶ ನೋಡಿ ದೇವರಿಗೆ ವಂದಿಸಿದಳು. ಪಾರ್ವತಿಯ ಕನಸಿಗೆ ದೊಡ್ಡ ರೆಕ್ಕೆಯೊಂದು ಬಂದಿತು. ಹೆಗ್ಡೆಯವರ ಈ ದೊಡ್ಡ ಮನಸ್ಸು ಪಾರ್ವತಿಯ ಆತ್ಮವಿಶ್ವಾಸ ಇಮ್ಮಡಿಗೊಳಿವಷ್ಟು ಮತ್ತು ತನ್ನ ದೇಹದಲ್ಲಿ ಏನೋ ವಿಶೇಷ ಶಕ್ತಿ ಒಳಹೊಕ್ಕಂತೆ ಅದು ಎಂತಹ ಶಕ್ತಿಯೆಂದರೆ ಎರು ಮುತ್ತಯ್ಯನ ಕೋಣ ಹೊರುವ ಶಕ್ತಿಯಷ್ಟು!!
ಕುಲಕಸುಬಾಗಲಿ, ಜಾತಿಯಾಗಲಿ ಯಾವ ಅರಿವು ಇರದ ದಾದುವನ್ನು ಕರೆದು ಪಾರ್ವತಿ ಜಾತಿ ವೃತ್ತಿಯ ಪರಿಚಯ ಮಾಡಿಸಿದಳು. “ನಾವು ಭಂಡಾರಿಗಳು ನಿನ್ನ ತಂದೆ ದೊಡ್ಡ ಗ್ರಾಮದ ಭಂಡಾರಿಯಾಗಿದ್ದರು. ನೀನು ಹಾಗೆ ಆಗಬೇಕು ಮಗ ಎಂದು ಬೆನ್ನು ಸವರಿ ಹೇಳಿದಳು.” ಆದರೆ ದಾದು.. “ಅದು ಯಾವ ಕೆಲಸ ಅಮ್ಮ? ನನ್ನಪ್ಪ ಯಾರು? ನನಗೆ ಅದೆಲ್ಲ ಬೇಡ ಬೊಲ್ಲ ನ ಮೇಯಿಸಿಕೊಂಡು ಅವನನ್ನ ಕಂಬಳ ಗದ್ದೆಯಲ್ಲಿ ಓಡಿಸಿ, ಕೃಷಿ ಮಾಡಿ ಧಣಿಗಳ ಹಾಗೆ ಆಗ್ತೇನೆ.. ನನಗೆ ನಿನ್ನ ಭಂಡಾರಿ ಗಿಂಡಾರಿ ಏನು ಬೇಡಮ್ಮ” ಅಂದು ಬಿಟ್ಟ.
ಆತ್ಮವಿಶ್ವಾಸದಿಂದ ತನ್ನ ಕನಸಿಗೆ ರೆಕ್ಕೆ ಕಟ್ಟಿ ಹಾರಲು ಸಿದ್ಧವಾಗಿದ್ದ ಪಾರ್ವತಿಗೆ ತನ್ನ ಮಗನ ಈ ಅಜ್ಞಾನದ ಮಾತು ಸಿಟ್ಟು ತರಿಸಿತು.ಆದರೂ ಸಿಟ್ಟು ತೋರಿಸಿಕೊಳ್ಳದೇ, “ಹಾಗೆ ಮಾತಾಡ್ಬರ್ದು ಮಗನೇ ಧಣಿ ಆಗೋದು ನಮ್ಮಂತವರಿಗೆ ಸಾಧ್ಯ ಇಲ್ಲ. ನಮ್ಮ ಜಾತಿ ಕಸುಬು ನಾವು ಕಲಿಯಬೇಕು ಇಲ್ಲವಾದರೆ ಈ ಸಮಾಜದಲ್ಲಿ ಬದುಕೋದು ಕಷ್ಟವಾಗುತ್ತೆ” ಅಂದಳು.
“ಜಾತಿ-ಗೀತಿ ಕಸುಬು ನನ್ನಿಂದ ಆಗದು ಅದನ್ನ ನೀನೇ ಮಾಡು” ಅಂದುಬಿಟ್ಟು ಎದ್ದು ಹಟ್ಟಿ ಕಡೆಗೆ ಹೋದ.
ತನ್ನ ಮಗನ ಈ ಸಿಟ್ಟು ಕೇಳಿ ಪಾರ್ವತಿಯ ಕನಸು ನುಚ್ಚು ನೂರಾದಂತೆ ಆಯಿತು. ಕಣ್ಣಾಲಿಗಳು ಒದ್ದೆಯಾಯಿತು. ಆತ್ಮವಿಶ್ವಾಸವೆಲ್ಲ ಕುಸಿದಂತೆ, ಭಂಡಾರ ಚಾಕರಿಯಿಂದ ತನ್ನ ವಂಶ ಮುಕ್ತಗೊಂಡಿತು. ಇನ್ನು ಯಾವ ನಿರೀಕ್ಷೆಯನ್ನು ನಾನು ಮಾಡೋದು ತಪ್ಪು ಎಂದೆನಿಸಿತು.
ರಾತ್ರಿ ಊಟವನ್ನು ಸಹ ಸರಿಯಾಗಿ ಮಾಡಲಾಗಲಿಲ್ಲ. ಮಗನ ಮನಸ್ಸನ್ನ ದೈವವೇ ಪರಿವರ್ತಿಸಬೇಕು ಎಂದು ಕೇಳಿಕೊಂಡು ಮಲಗಿದ್ದಳು. ನಿದ್ದೆಯಂತೂ ಬರಲಿಲ್ಲ ಸ್ವಲ್ಪ ಮಂಪರು ಬಂತೆಂದರೆ ಏನೆನೋ ಕನಸು ಬಿದ್ದು ಎಚ್ಚರವಾಗುತಿತ್ತು. ಈ ಕನಸುಗಳ ನಡುವೆ ತಬುರ ಹೇಳಿದ ‘ಮಂಚಾವಿನಲ್ಲಿ ನನ್ನ ಪಿಂಗಾರದ ಒಂದು ಎಸಳು ಇಲ್ಲ ಕಳೆದುಹೋಗಿದೆ.’ ಎಂಬ ದೈವದ ಭಾವುಕ ನುಡಿ ಮತ್ತೆ ಮತ್ತೆ ಕಾಡುತಿತ್ತು.
(ಮುಂದುವರೆಯುವುದು)