November 22, 2024
bhandara

ಗದ್ದೆ ಬದುವಿನ ದಾರಿಯಲ್ಲಿ ಸಾಗಿ ಬರುತ್ತಿದ್ದ ಲೋಕಯ್ಯ ಮತ್ತೆ ಕೈತಪ್ಪಿ ಹೋದ ಕೋಣವನ್ನು ಕೊಂಡೊಯ್ಯಲು ಬರುತ್ತಿರುವುದನ್ನು ಕಂಡ ದಾದು ಹಟ್ಟಿಯಲ್ಲಿ ಕಟ್ಟಿದ ಬೊಲ್ಲನನ್ನು ಬಿಡಿಸಿ ಮನೆಯ ಹಿಂಬದಿಯ ಬೆಟ್ಟು ಗದ್ದೆಗೆ ಕರೆದೊಯ್ದು ಬಿಟ್ಟ.

ಲೋಕಯ್ಯ, ಹೆಗ್ಡೆಯವರನ್ನು ಕರೆಯುತ್ತಾ ಹೆಗ್ಡೆಯವರಿದ್ದಲ್ಲಿಗೆ ಬಂದು “ನಿಮ್ಮ ಕೋಣ ತಪ್ಪಿಸಿಕೊಂಡು ಬಂದಿದೆ‌ ಮಾರ್ರೆ… ಇಲ್ಲಿಗೆ ವಾಪಾಸ್ಸು ಬಂದಿದೆ. ಹಿಡಿದುಕೊಡಿ ಹೆಗ್ಡೆಯವರೇ.. ನನ್ನೊಟ್ಟಿಗೆ ಒಂದು ಜನ ಕಳ್ಸಿ ಎಂದು ನಾನು ಹೇಳಿದ ಹಾಗೆ ಈ ಕೋಣ ಕೇಳ್ತಾ ಇಲ್ಲ” ಎಂದರು.

ಅಯ್ಯೋ ದೇವಾ! ಇದು‌ ಒಳ್ಳೆ ಕತೆ ಆಯ್ತಲ್ವ .. ಕೋಣನ ಪಳಗಿಸಳಾಗದವರು ಉಳುಮೆ ಹೇಗೆ ಮಾಡ್ತೀರಿ .. ನಿಮಗೆ ಬೇರೆ ಕೋಣ ಕೊಡೋಣ… ಬೊಲ್ಲ ಕೋಣ ದಾದುವಿಗೆ ಇರಲಿ ಅವನಿಗೆ ಮಾತ್ರ ಕೇಳೊದು ಆ ಕೋಣ” ಎಂದರು.

ಇದಕ್ಕೆ ಲೋಕಯ್ಯ ಒಪ್ಪಲಿಲ್ಲ.. “ಬೇರೆ ಬೇಡ ಹೆಗ್ಡೆಯವರೇ ನಾನು ಖರೀದಿಸಿದ್ದು ಅದೇ ಕೋಣ ಅದನ್ನು ಬಿಟ್ಟು ಕೊಡಲಾರೆ” ಎಂಬ ವಾದಕ್ಕೆ ನಿಂತ.

ಕೋಣಕ್ಕೆ ನೀವು ಇಷ್ಟವಿರದಿದ್ದರೂ. ನಿಮಗೆ ನಮ್ಮ ಕೋಣ ಇಷ್ಟವಾಗಿದೆ. ನಾನು ವ್ಯಾಪಾರ ಮಾಡುವವನು ನನಗೆ ನೀವು ಯಾವ ಕೋಣ ಬೇಕೆಂದರೂ ಕೊಡುತ್ತೇನೆ. ನಿಮಗೆ ಅದನ್ನು ಸಾಕಬೇಕಾದರೆ ನಮ್ಮ ಹುಡುಗ ದಾದು ಬೇಕಾಗಬಹುದು.. ಅವನನ್ನು ಬೇಕಾದರೆ ಕರೆದುಕೊಂಡು ಹೋಗಿ ಇದು ನನ್ನ ಸಲಹೆ” ಎಂದರು.

ಲೋಕಯ್ಯ ಈ ಸಲಹೆಯನ್ನು ಒಪ್ಪಿ ನಿಮ್ಮ ಹುಡುಗನನ್ನು ಕಳುಹಿಸಿಕೊಡಿ ನಾನು ಅವನನ್ನು ಚೆನ್ನಾಗಿ ಬೆಳೆಸುತ್ತೇನೆ ಎಂದು ಅಭಯವಿತ್ತರು.

ಹೆಗ್ಡೆಯವರು ಬಾಯಲ್ಲಿದ್ದ ವೀಳ್ಯರಸವನ್ನು ಉಗುಳುತ್ತಾ ” ಹಟ್ಟಿಗೆ ಬಂದಿರಬಹುದು ಇಲ್ಲವೇ ದಾದುವಿನ ಜೊತೆ ಇರಬಹುದು ಎನ್ನುತ್ತಾ ಹೆಗ್ಡೆಯವರು ಚಪ್ಪಲಿ ಹಾಕುತ್ತಾ ಕೋಣ ಹುಡುಕಲು ಲೋಕಯ್ಯನ ಜೊತೆ ಹೊರಟರು. ಹಟ್ಟಿಯ ಕಡೆ ಹೋಗಿ ದಾದುವನ್ನು ಕರೆದರು. ದಾದು ಅಲ್ಲಿರಲಿಲ್ಲ.. ಹಟ್ಟಿಯಲ್ಲಿ ಕೋಣ ಕೂಡಾ ಇರಲಿಲ್ಲ. “ದಾದು… ದಾದು.. ಓ ದಾದು” ಎಂದು ಕರೆಯುತ್ತಾ ಮನೆಯ ಹಿಂಬದಿಯ ಬೆಟ್ಟು ಗದ್ದೆಯತ್ತ ಹೊರಟರು ದಾದು ಧಣಿಯವರು ಕರೆಯುತ್ತಿದ್ದನ್ನು ಕೇಳಿ ಬೊಲ್ಲನನ್ನು ಹುಡುಕುತ್ತಿದ್ದಾರೆ ಎಂಬುದನ್ನು ಅರಿತು ಅವಸರದಿಂದ “ಧಣಿ ಇಲ್ಲಿ ಬೊಲ್ಲ ಇಲ್ಲ.. ಅವನ್ನು ಈ ಕಡೆ ಬಂದಿಲ್ಲ ಅಂದುಬಿಟ್ಟ.. “

 

ಏನೂ ಕೇಳದೇ ಈ ಹುಡುಗ ಹೀಗೆ ಹೇಳಿದಾಗ ಧಣಿಯವರಿಗೆ ದಾದು ಸುಳ್ಳು ಹೇಳುತ್ತಿದ್ದಾನೆ ಎಂಬ ಅನುಮಾನ ಸಹಜವಾಗಿಯೇ ಬಂತು. “ನಿನ್ನ ಹತ್ರ ನಾವು ಕೇಳೇ ಇಲ್ಲ ಸತ್ಯ ಹೇಳು ನಿನಗೆ ಹೇಗೆ ಗೊತ್ತು ಬೊಲ್ಲ ಲೋಕಯ್ಯನ ಕೈತಪ್ಪಿ ಓಡಿ ವಾಪಾಸು ಬಂದಿರೋದು. ಎಲ್ಲ‌ ಗೊತ್ತು ನಿನಗೆ ಎಲ್ಲಿದ್ದಾನೆ ಬೊಲ್ಲ‌ ? ಬೇಗ ಇಲ್ಲಿ ಕರೆದುಕೊಂಡು ಬಾ” ಎಂದು ಗದರಿಸಿದರು.

ಧಣಿಗೆ ಹೆದರಿ ಬೆಟ್ಟುಗದ್ದೆಯ ಅಂಚಿನಲ್ಲಿರುವ ಆಲದಮರದ ಹತ್ತಿರ ಇದ್ದ ಬೊಲ್ಲನ ಕಡೆಗೆ ಕೈತೋರಿಸಿದ. ಲೋಕಯ್ಯ ಮತ್ತು ಹೆಗ್ಡೆಯವರು ಆ ಕಡೆ ಹೋಗಿ ಬೊಲ್ಲನನ್ನು ಕರೆತಂದರು. “ದಾದು ನೀನು ಹೋಗಬೇಕು. ಅಮ್ಮನಿಗೆ ಹೇಳಿ ತಯಾರಾಗು .. ಮುತ್ತಯ್ಯರಿಗೆ ಈ ಕೋಣ ಪಳಗುವವರೆಗೆ ನೀನು ಸಾಕಬೇಕು ಮತ್ತೆ ಇಲ್ಲಿ ಬಂದರೆ ಸಾಕು” ಎಂದರು.

ತನ್ನ ಪ್ರಾಣಿ ಸ್ನೇಹಿತ ಬೊಲ್ಲನೊಂದಿಗೆ ಹೊರಡುವುದು ಬೇಡ ಎನಿಸಲಿಲ್ಲ. ದಾದು ಆಯ್ತು ಎಂದ.

ಧಣಿಯವರು ಹೇಳಿದ ಕಾರಣ ಪಾರ್ವತಿ ಒಪ್ಪಿಗೆ ಕೊಡಲೇಬೇಕಾಯಿತು. ಅಮ್ಮನ ಬಿಟ್ಟು ಒಂದು ದಿನವೂ ಇದ್ದ ಬಾಲಕನಲ್ಲ ..ಪರಿಚಯವೇ ಇರದ ಮನೆಯಲ್ಲಿ ಹೇಗೆ ಇರಲೂ ಸಾಧ್ಯ ಎಂದು ಪಾರ್ವತಿ ಗಾಬರಿಗೊಂಡಳು. ತಮಗೆ ನೆಲೆ ಕೊಟ್ಟು ಸಾಕಿದ ಧಣಿಯ ಮಾತಿಗೆ ಇಲ್ಲವೆನ್ನುವುದು ಹೇಗೆ? ಒಂದೆಡೆ ಭಂಡಾರಿಗಳ ಮನೆ ಹೀಗಾಗಿ ಭಂಡಾರಿ ಕುಲವೃತ್ತಿ ಕಲಿಯಲೂ ಹೇಳಿ ಮಾಡಿಸಿದ ಮನೆ ..ಇವನು ಕಲಿತರೆ ನನ್ನ ಕನಸು ಕೂಡಾ ನನಸಾಗುತ್ತದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎಂದು ಸಮಾಧಾನ ಪಟ್ಟು, ಅವನಿಗೆ ಬೇಕಾದ ಬೈರಾಸು, ಅಂಗಿ, ಲುಂಗಿ ಮುಂತಾದ ವಸ್ತ್ರಗಳನ್ನು ಬಟ್ಟೆಯ ಗಂಟಿನಲ್ಲಿ ಕೊಟ್ಟಳು.

ದಾದುವಿಗೆ ಮನೆ ಬಿಟ್ಟು ಹೊರಡಲು ಇಷ್ಟವಿಲ್ಲದಿದ್ದರೂ ಬೊಲ್ಲನಿಗಾಗಿ ಹೊರಟುನಿಂತ . ಅಮ್ಮನ ಕಣ್ಣಿನಲ್ಲಿ ನೀರು ಕಂಡ, ಬೊಲ್ಲ ಕೂಡಾ ಅಳುತ್ತಿದ್ದ. ಆದರೂ ಹೊಸ ಊರಿಗೆ ಹೊರಡುವ ಉತ್ಸಾಹ ಬೇರೆ. ಕಾರ್ಕಳ ಪೇಟೆಯಲ್ಲಿ ಸಿಹಿ ತಿಂಡಿ ಕೊಡಿಸುವುದಾಗಿ ಕೂಡಾ ಲೋಕಯ್ಯ ಹೇಳಿದ್ದಾನೆ. ಒಟ್ಟಿನಲ್ಲಿ‌ ತನ್ನ‌ ಅಮ್ಮ ಮತ್ತು ಇತರ ಸ್ನೇಹಿತರನ್ನೆಲ್ಲ ಬಿಟ್ಟು ಲೋಕಯ್ಯನ ಜೊತೆ ಹೆಜ್ಜೆ ಹಾಕಿದ. ಬೊಲ್ಲ ದಾದುವಿನ ಜೊತೆ ಹೆಜ್ಜೆ ಹಾಕುತ್ತಿದ್ದ.

ಕಾಬೆಟ್ಟುವಿನಿಂದ ಕಾರ್ಕಳ ಪೇಟೆಯ ಶೆಣೈಯವರ ಅಂಗಡಿಯಲ್ಲಿ ಮೂರು ವಿಧದ ಉಂಡೆ ತಿಂಡಿಯನ್ನು ಖರೀದಿಸಿದ ಲೋಕಯ್ಯ ದಾದುವಿಗೆ ಕೊಟ್ಟ. ಅಲ್ಲೆ ಬದಿಯಲ್ಲಿದ ಭಟ್ರ ಹೋಟೆಲ್ ಒಂದರಲ್ಲಿ ಹೊಟ್ಟೆ ತುಂಬಾ ಇಡ್ಲಿ ಸಾಂಬಾರ್ ಮತ್ತು ಚಾ ಕುಡಿದು ಮಾಳದ ದಾರಿಯಲ್ಲಿ ಕೋಣವನ್ನು ಕರೆದುಕೊಂಡು ಹೊರಟರು. ಬೆಟ್ಟದಲ್ಲಿ ನಿಂತ ಬಾಹುಬಲಿ… ಕಲ್ಲನ್ನೆ ಹೊದ್ದು ನಿಂತ ಚತುರ್ಮುಖ ಬಸದಿ ಇವೆಲ್ಲವನ್ನು ದೂರದಿಂದಲೇ ನೋಡುತ್ತಾ ಸಾಗಿದರು. ದಾದುವಿಗೆ ಇವೆಲ್ಲ ಹೊಸ‌ದಾರಿಗಳು. ಹೊಸದಾರಿಯಲ್ಲಿ ಹೊಸದನ್ನು ನೋಡುತ್ತಾ ಉತ್ಸಾಹದಿಂದ ಸಾಗಿದ. ಮಿಯ್ಯಾರು ಹೊಳೆ ದಾಟಿ ಸಾಗಿದಾಗ ಆಕಾಶಕ್ಕೆ ತಾಗಿದ ಎತ್ತರದ ಕಡು ನೀಲಿ ಬಣ್ಣದ ಬೆಟ್ಟವೊಂದು ಕಣ್ಣಿಗೆ ಹತ್ತಿರವಾಗತೊಡಗಿತು. ಮುಂದೆ ಸಾಗಿದಷ್ಟು ಹಸಿರು ದಟ್ಟ ಕಾಡಿನ ದರ್ಶನವಾಗುತಿತ್ತು. ಬಜಗೋಳಿ ದಾಟಿದಾಗ ನೀಲಿಯ ಬೃಹದಾಕಾರದ ಬೆಟ್ಟ ಇನ್ನಷ್ಟು ಹತ್ತಿರವಾಗಿ ಎತ್ತರ ಹೆಚ್ಚಾದಂತೆ ಭಾಸವಾಗುತಿತ್ತು.

ಈಗಿನ‌ ಉಡುಪಿ ಜಿಲ್ಲೆಯ ಗಡಿ ಗ್ರಾಮ ಪಶ್ಚಿಮಘಟ್ಟದ ವನಸಾಗರದ ನಡುವೆ ಅರಳಿ ನಿಂತಿರುವ ಭೂಕಮಲವೆಂದೆ ಹೇಳಬಹುದು. ವನರಾಶಿಯ ನಡುವೆ ಅಲ್ಲಲ್ಲಿ ಕೃಷಿ ಭೂಮಿ , ಹೊಲಗದ್ದೆಗಳು , ಅಗಾಧವಾಗಿ ಸುರಿಯುವ ಮಳೆಗೆ ತುಂಬಿ ಹರಿಯುವ ಉಪನದಿಗಳು ಸೇರಿ ಸಾಗುವ ಸ್ವರ್ಣನದಿ ಭಾಗಶಃ ಮಾಳವನ್ನು ಪರ್ಯಾಯ ದ್ವೀಪವನ್ನಾಗಿಸಿತ್ತು. ಹೀಗಾಗಿ ಮಳೆಗಾಲ ಮತ್ತು ಸುಮಾರು ಈ ಊರಿಗೆ ಹೋಗುವುದು ಸುಲಭದ ಮಾತಾಗಿರಲಿಲ್ಲ ದೋಣಿಯ ಸಹಾಯ ಬೇಕಿತ್ತು. ಬೇಸಿಗೆಕಾಲದಲ್ಲಿ ಮಾತ್ರ ಸುಲಭವಾಗಿ ಪ್ರಯಾಣ ಸಾಧ್ಯವಿತ್ತು.

ನದಿಯಲ್ಲಿ ಸಾಕಷ್ಟು ನೀರು ಇದ್ದ ಕಾರಣ, ದೋಣಿ ಏರಿ ನದಿ ದಾಟಬೇಕಾಗಿತ್ತು. ಹೀಗಾಗಿ ದೋಣಿ ಇರುವ ಕಡಾರಿಯ ದೋಣಿಪಲ್ಕೆಗೆ ಬಂದರು. ದಾದುವಿಗೆ ಇದು ಮೊದಲ ದೋಣಿ ಪ್ರಯಾಣವಾಗಿತ್ತು. ದೋಣಿ‌ ಹತ್ತಿದ ಲೋಕಯ್ಯ ಮತ್ತು ದಾದು ಸ್ವರ್ಣ ನದಿ ದಾಟಿ ಶಿವಬೆಟ್ಟಿನ ಲೋಕಯ್ಯರ ಮನೆಗೆ ಕೋಣದೊಂದಿಗೆ ಬಂದರು. ಹಟ್ಟಿಯಲ್ಲಿ ಬೊಲ್ಲನನ್ನು ಕಟ್ಟಿ ಅದರ ಜವಾಬ್ದಾರಿಯನ್ನು ದಾದುವಿಗೆ ನೀಡಿದರು. ಹಟ್ಟಿಯಲ್ಲಿ ಇನ್ನೊಂದು ಕೋಣ ಇತ್ತು ಇದಕ್ಕೆ ಜತೆ ಮಾಡಲು ಬೊಲ್ಲನನ್ನು ತಂದಿದ್ದರು.

ಶಿವಬೆಟ್ಟಿನಲ್ಲಿ ಲೋಕಯ್ಯ ಅವನ ಹೆಂಡತಿ ಮತ್ತು ಒಂದು ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ಬ್ರಾಹ್ಮಣ ಜಮೀನುದಾರರೊಬ್ಬರ ಭೂಮಿಯಲ್ಲಿ ಒಕ್ಕಲು ಮಾಡಿಕೊಂಡು ಊರಿನ ಭಂಡಾರಿ ವೃತ್ತಿ , ಭಂಡಾರ ಚಾಕರಿ ಮಾಡುತ್ತಿದ್ದ ಸಾಮಾನ್ಯ ಕುಟುಂಬವಾಗಿತ್ತು. ದಾದು ಬಹುಬೇಗ ಈ ಕುಟುಂಬದೊಂದಿಗೆ ಒಗ್ಗಿಕೊಂಡ . ಅಮ್ಮನ ನೆನಪು ಸದಾ ಕಾಡುತ್ತಿದ್ದರು ಅಲ್ಲಿಗೆ ಹೋಗುವ ಯಾವುದೇ ಅವಕಾಶಗಳು ದಾದುವಿಗೆ ಸಿಕ್ಕಿರಲಿಲ್ಲ.

ಹೆಗ್ಡೆಯವರ ಮನೆಯ ರಾಜವೈಬೋಗ ಇರದಿದ್ದರೂ ಯಾವುದಕ್ಕೂ ಕೊರತೆಯಿರಲಿಲ್ಲ. ಯಾವುದೇ ಬೇಧಭಾವ ಇರಲಿಲ್ಲ. ತನ್ನ ಮಕ್ಕಳಂತೆ ಈ ಕುಟುಂಬದ ಆರೈಕೆಯಿಂದ ಬೆಳೆಯವ ಅದೃಷ್ಟ ದಾದುವಿಗೆ ಸಿಕ್ಕಿತ್ತು.

ಕುಲವೃತ್ತಿ ಮಾಡುತ್ತಿದ್ದ ಕುಟುಂಬದೊಂದಿಗೆ ಇದ್ದ ಕಾರಣವೋ ಏನೋ ದಾದು ಈಗ ಕೋಲದ ಭಂಡಾರ ಕೆಲಸಕ್ಕೆ ಲೋಕಯ್ಯನ ಜೊತೆ ಹೋಗುತ್ತಿದ್ದ. ಅವರೊಂದಿಗೆ ಎಲ್ಲ ಕೆಲಸದಲ್ಲೂ ಭಾಗಿಯಾಗುತ್ತಿದ್ದ. ಕ್ಷೌರ ಕೂಡಾ ಕಲಿಯಲು ಆರಂಭಿಸಿದ್ದ. ಇದನ್ನು ಅಮ್ಮನಿಗೆ ಹೇಳಿದರೆ ಖುಷಿ ಪಡುತ್ತಾಳೆ. ನನ್ನ ಬಗ್ಗೆ ಹೆಮ್ಮೆ ಪಡುತ್ತಾಳೆ ಅಂದುಕೊಂಡ. ಈ ನಡುವೆ ತನ್ನ ತಾಯಿಗೆ ಅನಾರೋಗ್ಯ ಇರುವ ಬಗ್ಗೆ ಒಂದು ಕಹಿ ಸುದ್ದಿ ಅವನ ಕಿವಿಗೆ ತಲುಪಿತ್ತು.

(ಮುಂದುವರೆಯುವುದು….)

Leave a Reply

Your email address will not be published. Required fields are marked *