January 18, 2025
bhandara

ತಾಯಿಗೆ ಅನಾರೋಗ್ಯ ಇದ್ದರೂ ಒಬ್ಬನೇ ಅಷ್ಟು ದೂರ ಹೋಗುವುದು ಸುಲಭದ ಮಾತಾಗಿರಲಿಲ್ಲ.. ತನ್ನ ಆರೇಳು ಸ್ನೇಹಿತರಲ್ಲಿ ಯಾರಾದರೊಬ್ಬರನ್ನು ಕರೆದುಕೊಂಡು ಹೋಗುವುದೆಂದು ನಿರ್ಧರಿಸಿ ಮರುದಿನವೇ ರಾಜು ಎಂಬ ಸ್ನೇಹಿತನನ್ನು ಒಪ್ಪಿಸಿ ತಾಯಿಯಿದ್ದ ಕಾಬೆಟ್ಟು ಮನೆಗೆ ನಡೆದುಕೊಂಡು ಹೊರಟರು. ನಡೆದು ನಡೆದು ಆಯಾಸವಾಗಿ ಮಧ್ಯೆ ಮಧ್ಯೆ ವಿಶ್ರಾಂತಿ ಪಡೆದು ತಾವು ತಂದಿದ್ದ ತಿಂಡಿಯನ್ಬು ತಿಂದು ಮತ್ತೆ ಪ್ರಯಾಣ ಪ್ರಾರಂಭಿಸಿದರು. ಮಧ್ಯಾಹ್ನ ಆಗುತ್ತಲೇ ಕಾಬೆಟ್ಟು ತಲುಪಿದರು. ಹೆಗ್ಡೆಯವರು ಮನೆಯಲ್ಲಿರಲಿಲ್ಲ. ದಾದು ಮನೆಗೆ ಬರುತ್ತಿರುವುದನ್ನು ಗಮನಿಸಿದ ಗಂಗಮ್ಮ ಮನೆಯ ಹೊರಗೆ ಬಂದು ಸಂತೋಷದಿಂದ “ದಾದು… ಹೇಗಿದ್ದೀಯಾ? ಅಲ್ಲಿಂದ ಬೆಳ್ಳಿಗ್ಗೆ ಬೇಗ ಹೊರಟ್ರಾ? ತುಂಬಾ ಸಂತೋಷ ಆಯ್ತು.. ಬನ್ನಿ ಬನ್ನಿ..” ಎಂದು ಸ್ವಾಗತಿಸಿ “ಪಾರ್ವತಿಯ ಎರಡು ಕಣ್ಣಿನ‌ ದೃಷ್ಟಿ ಸ್ವಲ್ಪ ಮಂಜಾಗಿದೆ . ಬೇರೆ ಯಾವುದೇ ಅನಾರೋಗ್ಯವಿರಲಿಲ್ಲ. ಕಣ್ಣು ನೋವಿಗೆ ಯಾವುದೋ ಔಷಧಿ ಹಾಕಿ ಅದು ದೃಷ್ಟಿ ಮಂಜಾಗುವಂತೆ ಮಾಡಿತು. ಯಾವ್ಯಾವೊದೋ ಸೊಪ್ಪು ಹಾಕಿ ಅವಸರದಿಂದ ಹೀಗಾಯ್ತು .. ಅವಳ ಅವಸರ ಅವಾಂತರ ಮಾಡಿತು” ಎಂದರು.

ದಾದು ಬಂದಿರುವುದನ್ನು ಅರಿತ ಪಾರ್ವತಿ ಪ್ರೀತಿಯ ಮಗನನ್ನು ನೋಡಲು ಆಮೆವೇಗದಲ್ಲಿ ಬರುತ್ತಿರುವುದನ್ನು ಗಮನಿಸಿದ ಮಗ ದಾದು ಅಮ್ಮನೆಡೆಗೆ ಧಾವಿಸಿ‌ ನಾನು ಕಾಣುತ್ತಿದ್ದೇನಾ ಅಮ್ಮ! ಹೇಗಿದ್ದೀಯಾ? ಎಂದು ಕೈ ಹಿಡಿದು ಕೇಳಿದ.

“ನೀನು ಬೆಳದಿಂಗಳ ಚಂದ್ರನಂತೆ ಸುಂದರವಾಗಿದ್ದೀಯಾ!! ಏನು ಕಾಣದೇ…?,” ಎಂದು ನಗುತ್ತಾ, ” ಹಾಗೆ ನನ್ನ ಕಣ್ಣುಗಳು ಸರಿಯಾಗಿವೆ. ಸ್ವಲ್ಪ ದಿನ ಎಲ್ಲ‌ ಸರಿಯಾಗುತ್ತೆ! ನನ್ನ ಬಗ್ಗೆ ಚಿಂತೆ ಮಾಡಬೇಡ. ನೀನು ಆರಾಮ ತಾನೇ ನಿನ್ನನ್ನು ಚೆನ್ನಾಗಿ ನೋಡ್ಕೊಳ್ತಿದ್ದಾರೆ ತಾನೇ…” ಎಂದಳು.

 

ಏನಮ್ಮಾ ನೀನು ನಾನು ಈಗ ದೊಡ್ಡವನಾಗಿಲ್ಲವೇ ನಾನು ಎಲ್ಲ ಕೆಲಸ ಮಾಡುತ್ತೇನೆ. ನನ್ನನ್ನು ಯಾರೂ‌ ನೋಡಿಕೊಳ್ಳಬೇಕಿಲ್ಲ, ನಾನು ದುಡಿದು ಸಂಪಾಧಿಸುತ್ತಿದ್ದೇನೆ. ಅಮ್ಮ… ಕ್ಷೌರ ಕಲಿತ್ತಿದ್ದೇನೆ , ಊರಿನ ಭಂಡಾರ ಕೆಲಸಕ್ಕೂ ಸಹಾಯಕನಾಗಿ ಹೋಗ್ತೆನೆ . ನನ್ನ ಬಗ್ಗೆ ಚಿಂತೆಬೇಡ. ನೀನು ಇಲ್ಲಿ ಕಷ್ಟವಾದರೆ ಅಲ್ಲಿಗೆ ಬಂದು ಬಿಡು ಅಂದ.

“ಭೇಷ್ ಮಗ ! ನಿನ್ನ ಅಲ್ಲಿ ಬಿಟ್ಟು ನಾನು ಇಲ್ಲಿ ಇಷ್ಟು ದಿನ ಇಲ್ಲಿ ಕೊರಗುತ್ತಿದ್ದುಕ್ಕೆ, ನನ್ನೆಲ್ಲ‌ ಸಂಕಟಗಳಿಗೆ ಒಂದು ವಿರಾಮ ಸಿಕ್ಕಿತು. ನನ್ನ ಕಣ್ಣುಗಳು ಹೋದರೂ ಇನ್ನು ನಾನು ಚಿಂತಿಸಲಾರೆ. ನನ್ನ ಕನಸುಗಳನ್ನು ಜೋಪಾನವಾಗಿ ಬೆಳೆಸು, ಯಾವತ್ತೂ ಅದನ್ನು ಚಿವುಟಿ ಹಾಕಬೇಡ. ಸತ್ಯ ಧರ್ಮ ಮತ್ತು ನಿಷ್ಠೆಯಿಂದ ಭಂಡಾರದ ಸೇವೆ ಮಾಡಿ ಗತ್ತಿನ ಭಂಡಾರಿ ಯಾಗಬೇಕು” ಎಂದು ಸಂತೋಷದಿಂದ ಹಾರೈಸಿದಳು.

ಅನಾರೋಗ್ಯ, ಮಗನ ಬಗೆಗಿನ ಚಿಂತೆ ಮತ್ತು ಕಣ್ಣಿನ ದೃಷ್ಟಿ ಮರಳುವ ಬಗ್ಗೆ ಅನುಮಾನದಿಂದ ಇನ್ನು ಮಗನನ್ನು ನೋಡುವ ಭಾಗ್ಯ ಇದೆಯೋ ಇಲ್ಲವೋ? ಎಂದು ಕೊರಗುತ್ತಾ, ಜರ್ಝರಿತವಾಗಿದ್ದ ಪಾರ್ವತಿಯ ಮನಸ್ಸು ಸಂತೋಷದಿಂದ ಹಾರಾಡಿತು. ಚಿಂತೆಗಳೆಲ್ಲ ಮಾಯಾವಾಗಿ ಹೊಸ ಚೈತನ್ಯವೊಂದು ಸೃಷ್ಟಿಯಾಯಿತು. ಪವಾಡ ಎಂಬಂತೆ ದೃಷ್ಟಿ ಸರಿ ಇದ್ದವರಂತೆ ಓಡಾಡಲೂ ಪ್ರಾರಂಭಿಸಿದಳು. ಗಂಗಮ್ಮ ದಾದು ಮತ್ತು ಸ್ನೇಹಿತ ರಾಜು ವಿಗೆ ಊಟ ಬಡಿಸಲು ತಯಾರಿ ಮಾಡುತ್ತಿದ್ದರು. ಪಾರ್ವತಿ ಅಡುಗೆ ಮನೆಗೆ ಹೋಗಿ ಊಟ ತಂದು ಬಡಿಸಲು ಪ್ರಾರಂಭಿಸಿದಳು. ಪಾರ್ವತಿಯ ದಿಡೀರ್ ಉತ್ಸಾಹ ಕಂಡು ಗಂಗಮ್ಮನಿಗೆ ಅಚ್ಚರಿಯಾಯಿತು. ದೈಹಿಕ ವ್ಯಾಧಿಗಿಂತ ಮಾನಸಿಕ ವ್ಯಾಧಿ ಮನುಷ್ಯನನ್ನು ಎಷ್ಟು ಅನಾರೋಗ್ಯಕ್ಕೆ ಒಳಪಡಿಸುತ್ತದೆ. ಹಾಗಾದ್ರೆ ಪಾರ್ವತಿಗೆ ಮಗನ ಬಗ್ಗೆ ಎಷ್ಟು ಕೊರಗು ಇದ್ದಿರಬೇಕು. ಹೀಗಾಗಿಯೇ ಇನ್ನಷ್ಟು ಮೂಲೆ ಸೇರಿದ್ದಾಳೆ. ನಿಜವಾಗಿಯೂ ನಾವು ಇದನ್ನು ಅರ್ಥ ಮಾಡಿಕೊಳ್ಳಲೇ ಇಲ್ಲವಲ್ಲ‌ ಅಂದುಕೊಂಡರು.

ಪಾರ್ವತಿಯನ್ನು ಮಗನೊಂದಿಗೆ ಕಳುಹಿಸುವ ಬಗ್ಗೆ ಯೋಚಿಸಿದರು ಗಂಗಮ್ಮ . ಆದರೆ ಸುಮಾರು 12-13 ವರ್ಷಗಳಿಂದ ಕುಟುಂಬದ ಭಾಗವಾಗಿ ಹೋಗಿದ್ದ ಪಾರ್ವತಿಯನ್ನು ಅವಳ ಕಷ್ಟ ಕಾಲದಲ್ಲಿ ಬೇರೆ ಮನೆಗೆ ಕಳುಹಿಸುವುದು ಹಿತವಾದ ನಿರ್ಧಾರವಾಗದು. ಜನ ಪಾರ್ವತಿ ಸರಿ ಇರುವಾಗ ದುಡಿಸಿಕೊಂಡರು. ಕಣ್ಣಿನ ದೃಷ್ಟಿ ಹೀನವಾದಾಗ ಕೈಬಿಟ್ಟು ಬೇರೆ ಮನೆಗೆ ಕಳುಹಿಸಿದರು ಎಂಬ ಅಪವಾದ ಜನರ ಬಾಯಿಂದ ಬರಬಾರದು. ಇದು ನಮ್ಮ ಮನೆಯ ಘನತೆಯ ಗೌರವಕ್ಕೆ ದಕ್ಕೆಯಾಗುತ್ತದೆ. ಎಂಬ ಇನ್ನೊಂದು ಯೋಚನೆ ಕ್ಷಣ ಮಾತ್ರದಲ್ಲಿ ಪಾರ್ವತಿಯನ್ನು ದಾದುವಿನೊಟ್ಟಿಗೆ ಕಳುಹಿಸುವ ನಿರ್ಧಾರವನ್ನು ಕೈಬಿಟ್ಟು ದಾದುವನ್ನೆ ಇಲ್ಲಿ ಉಳಿಸಿಕೊಂಡರೆ ಹೇಗೆ ಎಂಬ ಪ್ರಶ್ನೆ ಅಂತರಾಳದಲ್ಲಿ ಬಂದು ಸ್ಥಿತವಾಯಿತು.

ಊಟ ಮುಗಿಸಿದ ದಾದು ಗಂಗಮ್ಮ ಇದ್ದಲ್ಲಿಗೆ ಬಂದು “ಅಮ್ಮ ಧಣಿ ಎಲ್ಲಿ ಹೋಗಿದ್ದಾರೆ? ಅವರನ್ನು ಮಾತಾಡಿಸಿ ಹೊರಡಬಹುದಿತ್ತು” ಅಂದ

“ಎಲ್ಲಿಗೆ ಹೊರಡೋದು? ನಿನ್ನ ಅಮ್ಮನ ದೃಷ್ಟಿ ಬರೋವರೆಗೆ ಇಲ್ಲೆ ಇರು” ಅಂದರು ಗಂಗಮ್ಮ ನಗುತ್ತಾ, “ಇವತ್ತು ಶಿವರಾತ್ರಿ ಅಲ್ವ ಧಣಿಗಳು ದೇವಸ್ಥಾನಕ್ಕೆ ಹೋಗಿದ್ದಾರೆ. ಅವರು ಸಂಜೆ ಬರುತ್ತಾರೆ. ನೀನು ಜಾಗರಣೆ ಮಾಡು ಇವತ್ತು ಇಲ್ಲೆ ಇರು..ನಿನ್ನ ಹಳೆ ಚಡ್ಡಿ ದೋಸ್ತಿಗಳೆಲ್ಲ ಬರ್ತಾರೆ. ” ಅಂದಿದ್ದೆ ತಡ ತನ್ನ ಬಾಲ್ಯದ ಶಿವರಾತ್ರಿ ಜಾಗರಣೆಯ ಗಮ್ಮತ್ತು ನೆನಪಾಯಿತು.

“ಆಯ್ತು ಆಯ್ತಮ್ಮ “ಎಂದು ರಾಜು ಇದ್ದಲ್ಲಿಗೆ ಹೋಗಿ ಇವತ್ತು ಶಿವರಾತ್ರಿ ಅಲ್ವ… ಇಲ್ಲೇ ಇರುವ ತುಂಬಾ ಗೌಜಿ ಗಮ್ಮತ್ತು ಮಾಡ್ಬಹುದು ನನ್ನ ಗೆಳೆಯರೆಲ್ಲ ಬರುತ್ತಾರೆ ಎಂದು ಒಪ್ಪಿಸಿ ನಾಳೆ ಅಥವಾ ನಾಡಿದ್ದು ಊರಿಗೆ ಹೋಗೊಣ ಎಂಬ ರಹಸ್ಯ ಒಡಂಬಡಿಕೆ ನಡೆಯಿತು.

ಕಾಬೆಟ್ಟು ಮನೆಗೆ ಬಂದ ದಾದು ತನ್ನೆಲ್ಲ ನೆಚ್ಚಿನ ಸ್ಥಳಗಳಿಗೆ ಗೆಳೆಯ ರಾಜುವಿನೊಂದಿಗೆ ತೆರಳಿ ತನ್ನ ಬಾಲ್ಯದ ಸವಿ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದ. ಏರು ಮುತ್ತಯ್ಯನ ಕತೆಯನ್ನು ಕಣ್ಣಿಗೆ ಕಟ್ಟಿದ ಹಾಗೆ ಹೇಳುತ್ತಾ ಕೋಣ ಬಿದಿದ್ದ ಸ್ಥಳವನ್ನು ತೋರಿಸುತ್ತಿರುವಾಗ ಧಣಿಗಳು ದೇವಸ್ಥಾನದಿಂದ ಬರುತ್ತಿರುವುದು ಕಾಣಿಸಿ .. ಮನೆಯತ್ತ ಸಾಗಿದರು.

(ಮುಂದುವರೆಯುವುದು….)

Leave a Reply

Your email address will not be published. Required fields are marked *