January 19, 2025
ajay
ಭಂಡಾರಿಗಳಿಗೆ ಮತ್ತೊಂದು ಹೆಮ್ಮೆ

ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷರಾಗಿ ಅಜಯ್ ಕುಮಾರ್ ನೇಮಕ

         ದೇಶದ ಯಾವುದೇ ಸಾಧನಾ ಕ್ಷೇತ್ರವನ್ನು ತೆಗೆದುಕೊಂಡರೂ ಅಲ್ಲಿ ಒಬ್ಬ ಭಂಡಾರಿ ಸಾಧಕ ಇದ್ದೇ ಇರುತ್ತಾನೆ. ಕ್ರೀಡೆ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಹೀಗೆ ಎಲ್ಲಾ ಕ್ಷೇತ್ರದಲ್ಲೂ ಭಂಡಾರಿ ಗಳು ತಮ್ಮ ಸಾಧನೆ ಮೆರೆದಿದ್ದಾರೆ. ಇದೀಗ ಅಂತಹ ಸಾಧಕರ ಪಟ್ಟಿಯಲ್ಲಿ ಮತ್ತೊಬ್ಬ ಸಾಧಕ ಕಂಡುಬಂದಿದ್ದಾರೆ.

ಭಂಡಾರಿ ಸಮುದಾಯಕ್ಕೆ ಸೇರಿರುವ, ದಕ್ಷಿಣ ಕನ್ನಡ ಮೂಲದ ಅಜಯ್ ಕುಮಾರ್ ಅವರೇ ಈ ಸಾಧಕ ವ್ಯಕ್ತಿ. ಮಾಜಿ ಲೋಕಸಭಾ ಸದಸ್ಯರಾಗಿರುವ ಇವರು ಜಾರ್ಖಂಡ್ ಘಟಕ ಕಾಂಗ್ರೆಸ್ ಗೆ ಅಧ್ಯಕ್ಷರಾಗಿ ಆಯ್ಕೆಗೊಳ್ಳುವ ಮೂಲಕ ಸಾಧನೆ ಮೆರೆದಿದ್ದಾರೆ. ೨೦೧೯ರ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಈ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ್ದಾರೆ.

ಮೂಲತಃ ಮೂಲ್ಕಿಯವರು…

         ಅಜಯ್ ಕುಮಾರ್ ಅವರು ಮೂಲತಃ ಮೂಲ್ಕಿಯ ಮೊಯಿಲೊಟ್ಟುನವರಾಗಿದ್ದಾರೆ. ಇಲ್ಲಿನ ನಿವಾಸಿ ಸಂಜೀವ ಭಂಡಾರಿ ಹಾಗೂ ವತ್ಸಲಾ ಭಂಡಾರಿ ಮರೋಳಿ ದಂಪತಿಯ ಪುತ್ರನಾಗಿರುವ ಇವರು ಹೈದರಾಬಾದ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಣವನ್ನು ಮುಗಿಸಿದ್ದಾರೆ. ಸಂಜೀವ ಭಂಡಾರಿ ಅವರಿಗೆ ಅಶ್ವಿನ್ ಹಾಗೂ ಅಜಯ್ ಎಂಬ ಇಬ್ಬರು ಗಂಡು ಮಕ್ಕಳಿದ್ದು, ಅಜಯ್ ಎರಡನೇ ಯವರಾಗಿದ್ದಾರೆ. ಅಜಯ್ ಅವರು ರೀನಾ ಆರ್ಯ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಐಪಿಎಸ್ ಅಧಿಕಾರಿ…

          ತನ್ನ ಕಾಲೇಜು ಶಿಕ್ಷಣದ ಬಳಿಕ ಉನ್ನತ ವ್ಯಾಸಂಗದತ್ತ ಆಸಕ್ತಿ ತೋರಿದ ಅಜಯ್ ಅವರು ೧೯೮೫ರಲ್ಲಿ ಪುದುಚೇರಿಯ ಜವಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಆ್ಯಂಡ್ ರಿಸರ್ಚ್ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸುತ್ತಾರೆ. ಬಳಿಕ ಪೋಲಿಸ್ ವೃತ್ತಿಯತ್ತ ಆಸಕ್ತಿ ತೋರಿಸಿ ೧೯೮೬ರಲ್ಲಿ ಐಪಿಎಸ್ ಅಧಿಕಾರಿಯಾಗಿ ಸೇವೆಯನ್ನು ಆರಂಭಿಸುತ್ತಾರೆ. ಅದೇ ವರ್ಷ ರಾಷ್ಟ್ರಪತಿ ಪುರಸ್ಕಾರವನ್ನೂ ಗಳಿಸುತ್ತಾರೆ.

೧೯೯೪ರಿಂದ ೧೯೯೬ರ ವರೆಗೆ ಎಸ್ ಪಿ ಆಗಿಯೂ ಕರ್ತವ್ಯ ನಿರ್ವಹಿಸುತ್ತಾರೆ. ಅವರ ಖಡಕ್ ಕಾರ್ಯಾಚರಣೆಯನ್ನು ಗುರುತಿಸಿದ ಮಾಧ್ಯಮಗಳು ಅವರನ್ನು ಎನ್ಕೌಂಟರ್ ಸ್ಪೆಷಲಿಸ್ಟ್ ಎಂದು ಕರೆಯುತ್ತದೆ.

ಅಪರಾಧ ನಿಯಂತ್ರಣ.!

         ಅಜಯ್ ಕುಮಾರ್ ಅವರು ಜಮ್ಶೆಡ್ಪುರದ ಎಸ್ಪಿ ಆಗಿ ನೇಮಕಗೊಳ್ಳುವ ಮೊದಲು ಪಟ್ನಾ ನಗರದ ಎಸ್ಪಿ ಆಗಿ ಸೇವೆ ಸಲ್ಲಿಸಿದ್ದರು. 1990ರ ದಶಕದಲ್ಲಿ ಜಮ್ಶೆಡ್ಪುರವನ್ನು ಸ್ಥಳೀಯ ” ಗೂನ್ಸ್ ” ಆಳ್ವಿಕೆ ನಡೆಸುತ್ತಿದ್ದು, ನಗರದಲ್ಲಿ ಅಪರಾಧವು ಉತ್ತುಂಗಕ್ಕೇರಿತು. 

         ಬಿಹಾರದ ಅಂದಿನ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು ಟಾಟಾ ಸ್ಟೀಲ್ ನ ಎಂ.ಡಿ. ಜೆ.ಜೆ.ಇರಾನಿ ಅವರ ಕೋರಿಕೆಯ ಮೇರೆಗೆ ಕುಮಾರ್ ಅವರನ್ನು ಸಿಟಿ ಎಸ್ಪಿ ಆಗಿ ನೇಮಕ ಮಾಡುತ್ತಾರೆ. ಸ್ವಲ್ಪ ಸಮಯದಲ್ಲೇ ಎಸ್ಪಿ ಜಮ್ಶೆಡ್ಪುರದಲ್ಲಿ ಅಪರಾಧ ಪ್ರಮಾಣವನ್ನು ನಿಯಂತ್ರಿಸುವ ಮತ್ತು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗುತ್ತಾರೆ.

ರಾಜಕೀಯ ಪ್ರವೇಶ…

         ರಾಜಕೀಯದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಅಜಯ್ ಅವರು ೧೯೯೪ರಲ್ಲಿ ತನ್ನ ಪೊಲೀಸ್ ಸೇವೆಯಿಂದ ನಿವೃತ್ತಿ ಪಡೆದು, ಹಿರಿಯ ಕಾರ್ಯನಿರ್ವಾಹಕರಾಗಿ ಟಾಟಾ ಮೋಟಾರ್ಸ್ ನಲ್ಲಿ ಕರ್ತವ್ಯ ನಿರ್ವಹಿಸ ಬಳಿಕ ರಾಜಕೀಯ ಪ್ರವೇಶಿಸುತ್ತಾರೆ. 15 ನೇ ಲೋಕಸಭೆಯ ಸದಸ್ಯರಾಗಿ ಅವರು ಜೆಮ್ಶೆಡ್ಪುರ್ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗುತ್ತಾರೆ. 

       2011ರಲ್ಲಿ ನಡೆದ ಈ ಉಪಚುನಾವಣೆಯಲ್ಲಿ ಜಾರ್ಖಂಡ್ ವಿಕಾಸ್ ಮೋರ್ಚಾ (ಪ್ರಜಾತಂತ್ರಿಕ್) (ಜೆ.ವಿ.ಎಂ) ಪಕ್ಷದಿಂದ ಆಯ್ಕೆಯಾಗುತ್ತಾರೆ. ಅವರು 1.55 ಲಕ್ಷ ಮತಗಳ ಅಂತರದಿಂದ ಬಿಜೆಪಿಯ ಎದುರಾಳಿ ದಿನೇಶನ್ ಗೋಸ್ವಾಮಿ ಅವರ ವಿರುದ್ಧ ಗೆದ್ದಿದ್ದರು.

ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ನೇತೃತ್ವದಲ್ಲಿ ಜೆ.ವಿ.ಎಂ ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಕಾಂಗ್ರೆಸ್ ಪ್ರವೇಶ…

        ಈ ರೀತಿಯಲ್ಲಿ ರಾಜಕೀಯದಲ್ಲಿ ಯಶಸ್ಸು ಕಂಡ ಅಜಯ್ ಕುಮಾರ್ ಅವರು 2014ರಲ್ಲಿ ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಸೇರುತ್ತಾರೆ. ಬಳಿಕ ಕರ್ನಾಟಕದ ರಾಜ್ಯಸಭಾ (ಮೇಲ್ಮನೆ) ನ ಸಂಸತ್ ಸದಸ್ಯ (ಎಂಪಿ) ಗೆ ನಾಮನಿರ್ದೇಶನ ಮಾಡಿದ್ದಕ್ಕಾಗಿ ಇಕ್ಕಟ್ಟಿಗೆ ಸಿಲುಕುತ್ತಾರೆ. ನಂತರ ಅವರು 2014ರಲ್ಲಿ ಕಾಂಗ್ರೆಸ್ ಪಕ್ಷದ ವಕ್ತಾರರಾಗಿ ನೇಮಕಗೊಳ್ಳುತ್ತಾರೆ. ಇದೀಗ ಅವರು ಜಾರ್ಖಂಡ್ ಕಾಂಗ್ರೆಸ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಭಂಡಾರಿಗಳ ಹೆಮ್ಮೆಯ ವಿಚಾರವಾಗಿದೆ.

ವರದಿ: ಪ್ರಕಾಶ್ ಭಂಡಾರಿ ಕಟ್ಲಾ

1 thought on “ಭಂಡಾರಿ ಪುತ್ರನಿಗೊಲಿದ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ಗಾದಿ

Leave a Reply

Your email address will not be published. Required fields are marked *