November 21, 2024
Pearl copy

ನವನವೀನ ಹವ್ಯಾಸಗಳ ಆಗರ ನವೀನ್ ಚಂದ್ರ ಭಂಡಾರಿ.


ಹವ್ಯಾಸಗಳು ಮನುಷ್ಯನ ದಿನನಿತ್ಯದ ಜೀವನಶೈಲಿಯ ಒಂದು ಭಾಗವಾಗಿರುತ್ತವೆ. ಪ್ರತಿಯೊಬ್ಬರಿಗೂ ಒಂದಿಲ್ಲೊಂದು ಹವ್ಯಾಸಗಳು ಅಂಟಿಕೊಂಡಿರುತ್ತವೆ. ಕೆಲವರು ಮನಸ್ಸಂತೋಷಕ್ಕಾಗಿ ಹವ್ಯಾಸಗಳನ್ನು ರೂಡಿಸಿಕೊಂಡರೆ, ಮತ್ತೆ ಕೆಲವರು ಮನಸ್ಸಿನ ಮೂಲೆಯಲ್ಲಡಗಿರುವ ದುಃಖವನ್ನು ಮರೆಯಲು ಕೆಲವು ಹವ್ಯಾಸಗಳನ್ನು ರೂಡಿಸಿಕೊಂಡಿರುತ್ತಾರೆ. ಆದರೆ ಪ್ರತೀ ವ್ಯಕ್ತಿಯ ಹವ್ಯಾಸಗಳು ಅವನ ವ್ಯಕ್ತಿತ್ವದ ಪ್ರತಿರೂಪವೇ ಆಗಿರುತ್ತವೆ ಎಂಬುದು ಮಾತ್ರ ಸತ್ಯ.
ಈ ಸಂಚಿಕೆಯ ನಮ್ಮ ಚಿಪ್ಪಿನೊಳಗಿನ ಭಂಡಾರಿ ಮುತ್ತು ಅಂಕಣದಲ್ಲಿ ನಾವು ಪರಿಚಯಿಸುತ್ತಿರುವ ವ್ಯಕ್ತಿ ತಮ್ಮ  ಅಪರೂಪವೆನಿಸುವ ವಿಶಿಷ್ಟ ಹವ್ಯಾಸಗಳಿಂದಾಗಿಯೇ ನಮ್ಮ ಈ ಅಂಕಣದ ಅತಿಥಿಯಾಗಿದ್ದಾರೆ. ಅವರೇ ಮಂಗಳೂರಿನ ಹೊಸಬೆಟ್ಟು ನವೀನ್ ಚಂದ್ರ ಭಂಡಾರಿ. 

ಮೂಲತಃ ಪಾಣೆಮಂಗಳೂರು ವಾಸಿಯಾದ ಶ್ರೀ ಸಂಜೀವ ಭಂಡಾರಿ ಮತ್ತು ಶ್ರೀಮತಿ ಮೋಹಿನಿ ಸಂಜೀವ ಭಂಡಾರಿ ದಂಪತಿಯ ಪುತ್ರರಾದ ಇವರು ವಿಧ್ಯಾಭ್ಯಾಸ ಪೂರೈಸಿ 1991 ರಲ್ಲಿ ಭಾರತೀಯ ಸೇನೆಗೆ ಸೇರಿದರು. ಜಮ್ಮು ಕಾಶ್ಮೀರ್, ಅಸ್ಸಾಂ, ಪಂಜಾಬ್, ಪೂಣೆ ಹೀಗೆ ಭಾರತದ ಹಲವು ಭಾಗಗಳಲ್ಲಿ ಸುಮಾರು ಹದಿನೇಳು ವರ್ಷಗಳ ಕಾಲ ಸೇವೆ ಸಲ್ಲಿಸಿ 2008 ರಲ್ಲಿ ನಿವೃತ್ತಿ ಪಡೆದು ಮಂಗಳೂರಿನ ರೀಜೆಂಟ್ ಪಾರ್ಕ್. ಹೊಸಬೆಟ್ಟುವಿನಲ್ಲಿ ಪತ್ನಿ ಶ್ರೀಮತಿ ವಸುಧಾ ನವೀನ್ ಚಂದ್ರ ಭಂಡಾರಿಯವರೊಂದಿಗೆ ನೆಲೆಸಿದ್ದು, ಮಂಗಳೂರು ಬೈಕಂಪಾಡಿಯಲ್ಲಿರುವ ಅಧಾನಿ ಗ್ರೂಪ್ಸ್ ನಲ್ಲಿ ಸೇಫ್ಟಿ ಇನ್ ಚಾರ್ಜ್ ಆಗಿ ಉದ್ಯೋಗದಲ್ಲಿದ್ದಾರೆ. 


ಮೊದಲು ಇವರನ್ನು ಸೆಳೆದಿದ್ದು ಪಕ್ಷಿ ಛಾಯಾಗ್ರಹಣ. ತಮ್ಮ ನೆಚ್ಚಿನ ಕ್ಯಾಮೆರಾವನ್ನು ಕೊರಳಿಗೆ ನೇತು ಹಾಕಿಕೊಂಡು ಕಾಡು ಮೇಡು ಅಲೆದು ಅತೀ ಅಪರೂಪದ,ಅತಿವಿರಳವಾಗಿ ಕಾಣಸಿಗುವ ಪಕ್ಷಿಗಳ ಫೋಟೋ ಕ್ಲಿಕ್ಕಿಸುವುದು, ಅವುಗಳ ಬರುವಿಕೆಗಾಗಿ ತಾಳ್ಮೆಯಿಂದ ಕಾಯುವುದು,ಫೋಟೋ ತೆಗೆಯುವುದು ಮತ್ತು ಅವುಗಳ ಜೀವನಕ್ರಮವನ್ನು ಅಭ್ಯಸಿಸುವುದು ಇದೇ ಹವ್ಯಾಸವಾಗಿಹೋಯಿತು.
ಅಲ್ಲಿಂದ ಹೊರಳಿದ್ದು ತಾಳ್ಮೆಗೆ, ಜಾಣ್ಮೆಗೆ ಸವಾಲೊಡ್ಡುವ ಫಿಷಿಂಗ್ ಕಡೆಗೆ. ಮೀನು ಹಿಡಿಯುವುದು, ಅದಕ್ಕಾಗಿ ಬೆಲೆಬಾಳುವ ಉಪಕರಣಗಳನ್ನು ಖರೀದಿಸಿ ಮಲ್ಪೆ, ಬೇಂಗ್ರೇ, ಉಳ್ಳಾಲ…. ಹೀಗೆ ಕಡಲಾಗಲಿ ಹೊಳೆಯಾಗಲಿ ಹೊರಡುವುದೇ. ಮೀನು ಬೇಟೆಯೂ ಒಂದು ಕಲೆ. ಅದು ಎಲ್ಲರಿಗೂ ಒಲಿಯುವುದಿಲ್ಲ. ಆದರೆ ಅದನ್ನೂ ಇವರು ಕರಗತ ಮಾಡಿಕೊಂಡರು.

ಹಾಗೆಯೇ ಮುಂದುವರಿದ ಆಸಕ್ತಿ ರೋಡ್ ಬೈಕಿಂಗ್ ನೆಡೆಗೆ. ಬೈಕಿನಲ್ಲಿ ಪ್ರೇಕ್ಷಣೀಯ ಸ್ಥಳಗಳನ್ನು, ಪ್ರವಾಸಿ ತಾಣಗಳನ್ನರಸುತ್ತಾ ನೂರಾರು ಕಿಲೋಮೀಟರ್ ಕ್ರಮಿಸುವುದು ಹವ್ಯಾಸವಾಗಿಹೋಯಿತು. ಒಂದೇ ದಿನದಲ್ಲಿ ಮಂಗಳೂರಿನಿಂದ ಹೊರಟು ಕೇರಳದ ವಯನಾಡ್, ಊಟಿ, ಮನ್ನಾರ್, ತೇನಿ, ತೇಕ್ಕಡಿ ಸುತ್ತುಹಾಕಿ ಪುನಃ ಮಂಗಳೂರು ಸೇರಿದ್ದು, ಅದೂ ಸುಮಾರು ಏಳು ನೂರು ಕಿಲೋಮೀಟರ್ ಗಳ ಹಾದಿಯನ್ನು ಒಂದೇ ದಿನದಲ್ಲಿ ಸುತ್ತಿದ್ದು ಇವರ ಬೈಕಿಂಗ್ ನ ದಾಖಲೆ. ಏಕಾಗ್ರತೆ ಮತ್ತು ದೇಹಕ್ಷಮತೆಯನ್ನು ಬೇಡುವ ಈ ಹವ್ಯಾಸ ಅವರಿಗೆ ಈಗಲೂ ಅಚ್ಚುಮೆಚ್ಚು.


ಇತ್ತೀಚಿಗೆ ಅವರ ಗಮನ ಸೆಳೆದ ಹವ್ಯಾಸ “ಆಸ್ಟ್ರೋ ಫೋಟೋಗ್ರಫಿ” ಖಗೋಳ ಛಾಯಾಗ್ರಾಹಣ. ಬರಿಗಣ್ಣಿಗೆ ಕಾಣದ ಆಕಾಶಕಾಯಗಳನ್ನು ದೂರದರ್ಶಕ ಕ್ಯಾಮರಾ ಕಣ್ಣಿನಲ್ಲಿ ವೀಕ್ಷಿಸುವುದು ಮತ್ತು ಫೋಟೋಗಳಲ್ಲಿ ಸೆರೆ ಹಿಡಿಯುವುದು. ಆಸಕ್ತರಿಗೆ, ವಿದ್ಯಾರ್ಥಿಗಳಿಗೆ ಆಕಾಶಕಾಯಗಳ ಬಗ್ಗೆ, ಗ್ರಹಗಳ ಬಗ್ಗೆ ವಿವರಿಸುವುದು ಇವರಿಷ್ಟದ ಹವ್ಯಾಸಗಳಲ್ಲೊಂದು.


ಮೇ ತಿಂಗಳ ಮೊದಲ ವಾರದಲ್ಲಿ 399 ದಿನಗಳಿಗೊಮ್ಮೆ ಭೂಮಿಯನ್ನು ಸಮೀಪಿಸುವ ಗುರು ಗ್ರಹದ ವೀಕ್ಷಣೆಯನ್ನು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಆ ದಿನ ಇವರು ಗುರು ಗ್ರಹ, ಅದರ ರಚನೆ ಮತ್ತು ಗುರುಗ್ರಹದ ಉಪಗ್ರಹಗಳಾದ ಅಯೋ, ಯುರೋಪಾ, ಗೆನಿಮೀಡ್, ಕೆಲಿಸ್ಟೋ ಗಳನ್ನು ದೂರದರ್ಶಕ ಕ್ಯಾಮರಾ ಮೂಲಕ ನೆರೆದಿದ್ದ ಆಸಕ್ತರಿಗೆ ತೋರಿಸಿ, ವಿವರಿಸಿದರು.  ಈ ರೀತಿಯ ವಿಶಿಷ್ಟ ಹವ್ಯಾಸದಿಂದಾಗಿ ನವೀನ್ ಚಂದ್ರ ಭಂಡಾರಿಯವರು “ಹವ್ಯಾಸಿ ಖಗೋಳ ವೀಕ್ಷಕ” ರೆಂದು ಮಂಗಳೂರಿನಲ್ಲಿ ಹೆಸರಾಗಿದ್ದಾರೆ.


ಉತ್ತಮ ಹವ್ಯಾಸಗಳು ಮನುಷ್ಯನ ಮಾನಸಿಕ, ಬೌದ್ಧಿಕ, ದೈಹಿಕ ಬೆಳವಣಿಗೆಗೆ ಸಹಕಾರಿ ಎಂಬುದನ್ನರಿತು, ಸದಾ ಚಟುವಟಿಕೆಯಿಂದ ಕೂಡಿರುವ ಹವ್ಯಾಸಗಳನ್ನು ರೂಡಿಸಿಕೊಂಡು ಜೀವನದ ಜಂಜಾಟಗಳಿಂದ ಮುಕ್ತರಾಗಿ ನೆಮ್ಮದಿ ಜೀವನ ನಡೆಸುತ್ತಿರುವ ನವೀನ್ ಚಂದ್ರ ಭಂಡಾರಿಯಂತಹ ಹಲವರು ನಮ್ಮ ಸಮಾಜಕ್ಕೆ ಸ್ಪೂರ್ತಿಯಾಗಲಿ ಎಂದು ಹಾರೈಸೋಣ.


ಈ ರೀತಿಯಲ್ಲಿ ದೇಹಬಲ, ಮನೋಬಲ, ಆತ್ಮಬಲಗಳ ಸಂಗಮವಾಗಿರುವ ಹವ್ಯಾಸಗಳನ್ನು ಮೈಗೂಡಿಸಿಕೊಂಡು ನಮ್ಮ ಭಂಡಾರಿ ಸಮಾಜದ ಯುವಸಮೂಹಕ್ಕೆ ಮಾದರಿಯಾಗಿರುವ ನಮ್ಮ ಹೆಮ್ಮೆಯ ಶ್ರೀ ನವೀನ್ ಚಂದ್ರ ಭಂಡಾರಿಯವರಿಗೆ ಶ್ರೀ ದೇವರು ಆಯುರಾರೋಗ್ಯವನ್ನು ಕರುಣಿಸಿ, ಸುಖ ಶಾಂತಿ, ನೆಮ್ಮದಿಯುತ ಜೀವನವನ್ನು ದಯಪಾಲಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

 

 

 

 

 

ವರದಿ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *