November 22, 2024
Pearl copy
ನುಷ್ಯನಿಗೆ ಒಳ್ಳೆಯ ಹವ್ಯಾಸಗಳು ನೀಡುವಷ್ಟು ಅತ್ಮತೃಪ್ತಿಯನ್ನು ಬೇರಾರೂ ನೀಡಲು ಸಾಧ್ಯವಿಲ್ಲ. ನೀವು ಒಂದು ಉದ್ಯೋಗ ಅಂತ ಮಾಡುವಾಗ ನಿಮ್ಮ ಸಂಪೂರ್ಣ ಪರಿಶ್ರಮವನ್ನು ಧಾರೆಯೆರೆದರೂ ಅದು ಇನ್ನೊಬ್ಬರನ್ನು ಅಂದರೆ ಗ್ರಾಹಕನನ್ನೋ ಅಥವಾ ಮಾಲಕನನ್ನೋ ತೃಪ್ತಿ ಪಡಿಸುವುದೇ ಗುರಿಯಾಗಿರುತ್ತದೆ.ಆದರೆ ಹವ್ಯಾಸ ಹಾಗಲ್ಲ. ಇಲ್ಲಿ ಪರರನ್ನು ತೃಪ್ತಿ ಪಡಿಸುವುದರೊಂದಿಗೆ ನಾವೂ ತೃಪ್ತರಾಗಬಹುದು.

ಅದೇ ರೀತಿಯಲ್ಲಿ ತಮ್ಮ ಹವ್ಯಾಸದಿಂದಾಗಿ ಕಿರುಚಿತ್ರ, ತುಳು ಕನ್ನಡ ಹಾಡುಗಳ ಮರುಸೃಷ್ಟಿಯಿಂದ ಭವಿಷ್ಯದ ಸಂಕಲನಕಾರನಾಗುವ ಸುಳಿವು ನೀಡಿರುವ ನಮ್ಮ ಭಂಡಾರಿ ಸಮಾಜದ ಯುವ ಪ್ರತಿಭೆ ಶ್ರೀ ಪುನೀತ್ ಭಂಡಾರಿ ಉಜಿರೆ ಯವರು ಭಂಡಾರಿವಾರ್ತೆಯ ಚಿಪ್ಪಿನೊಳಗಿನ ಭಂಡಾರಿ ಮುತ್ತು ಅಂಕಣದ ಈ ಸಂಚಿಕೆಯ ಮುತ್ತು.                                              

ಒಂದು ವೀಡಿಯೋ ಜನಮನ ಮುಟ್ಟಲು ಆ ವಿಡಿಯೋದ ಸತ್ವ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ವೀಡಿಯೋದ ಸಂಕಲನ. ಆ ನಿಟ್ಟಿನಲ್ಲಿ ವಿಡಿಯೋ ಸಂಕಲನದಲ್ಲಿ ಕೈಯ್ಯಾಡಿಸುತ್ತ ವೀಡಿಯೋ ಎಡಿಟಿಂಗ್ ಕರಗತ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ  ಹಲವಾರು ವಿಡಿಯೋಗಳನ್ನು ಹಂಚಿಕೊಂಡು ನೆಟ್ಟಿಗರ ಬಳಗದಲ್ಲಿ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡು ಜನಗಳ ಮನಮುಟ್ಟಿ ಜನಪ್ರಿಯವಾಗಿರುವ  ನಮ್ಮ ಭಂಡಾರಿ ಕುಟುಂಬದ ಪ್ರತಿಭೆ “ಪುನೀತ್ ಭಂಡಾರಿ ಉಜಿರೆ”
ಶ್ರೀ ದೇಜಪ್ಪ ಭಂಡಾರಿ ಹಾಗೂ ಶ್ರೀಮತಿ ವಾರಿಜಾಕ್ಷಿ ದೇಜಪ್ಪ ಭಂಡಾರಿಯವರ ಸುಪುತ್ರನಾಗಿ ಉಜಿರೆಯಲ್ಲಿ1993 ರ ಏಪ್ರಿಲ್ 14 ರಂದು ಜನಿಸಿದ ಇವರು ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದು ಎಸ್.ಕೆ.ಎಸ್ ಇಂಫ್ರಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುನೀತ್ ಭಂಡಾರಿಯವರಿಗೆ
ವೀಡಿಯೋ ಸಂಕಲದಲ್ಲಿ ಬಹು ಆಸಕ್ತಿ.ತನ್ನ ಕೆಲಸದ ಒತ್ತಡದ ನಡುವೆ ಸಮಯ ಸಿಕ್ಕಾಗಲೆಲ್ಲಾ ವೀಡಿಯೊ ಸಂಕಲನ ಮಾಡುವುದು ಪುನೀತ್ ಭಂಡಾರಿಯವರ ಹವ್ಯಾಸ. ಇವರ ಸಂಕಲನಕ್ಕೆ ಮೊದಮೊದಲು ನಿರೀಕ್ಷಿತ ಪ್ರೋತ್ಸಾಹ ಯಾರಿಂದಲೂ ಸಿಕ್ಕಿರಲಿಲ್ಲ. ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೇ, ಯಾರ ಕೊಂಕು ಮಾತಿಗೂ ಗಮನಗೊಡದೇ ತನ್ನ ಹೆತ್ತವರ ಹಾಗೂ ಗೆಳೆಯರ ಸಂಪೂರ್ಣ ಬೆಂಬಲದ ಮುಖಾಂತರ ಹಲವಾರು ವಿಡಿಯೋಗಳಿಗೆ ವಿಶಿಷ್ಟ ಶೈಲಿಯಿಂದ ಸಂಕಲನ ಮಾಡುತ್ತಾ  ತನ್ನಲ್ಲಿರುವ ಪ್ರತಿಭೆಯನ್ನು ಹೊರ ಜಗತ್ತಿಗೆ ತೋರಿಸಿಕೊಟ್ಟದ್ದು ಪುನೀತ್ ಭಂಡಾರಿ ಉಜಿರೆಯವರ ಸಾಧನೆಯೇ ಸರಿ.                             
ಮೊದಲ ಪ್ರಯತ್ನ ಹಿಂದಿ ಹಾಡೊಂದರ ಕನ್ನಡ ಅವತರಣಿಕೆ “ಚಂದಿರ ವದನವು ನಿನ್ನದು….” ಅವರಿಗೆ ಒಂದು ಬ್ರೇಕ್ ನೀಡಿದ ವೀಡಿಯೋ.ಗುರುವಾಯನಕೆರೆ ನವೀನ್ ಭಂಡಾರಿಯವರ ಸಾಹಿತ್ಯಕ್ಕೆ ಬೆಳ್ತಂಗಡಿಯ ಸಂದೀಪ್ ಭಂಡಾರಿಯವರ ಮಧುರ ಧ್ವನಿ ಪುನೀತ್ ಭಂಡಾರಿಯವರ ಎಡಿಟಿಂಗ್ ಅವರಿಗೆ ಹೆಸರು ತಂದುಕೊಟ್ಟಿದ್ದು ಮಾತ್ರವಲ್ಲದೇ ಯೂ ಟ್ಯೂಬ್ ನಲ್ಲಿ 35000 ಲೈಕ್ಸ್ ಪಡೆದು ವೀಕ್ಷಕರ ಬಳಗವನ್ನು ಸೃಷ್ಟಿಸಿಕೊಟ್ಟಿತು.

ನಂತರ ಬಂದ “ಸರಿಗಮ ಸಂಗಮ” ಸಂದೀಪ್ ಭಂಡಾರಿ ಸ್ವರಮಾಧುರ್ಯದಿಂದ, ಪುನೀತ್ ರ ಸಂಕಲನದಿಂದ ಗಮನ ಸೆಳೆಯಿತು. ಹೆಬ್ಬುಲಿ ಚಿತ್ರದ ಎಣ್ಣೆ ಸಾಂಗ್ ನ ತುಳು ಅವತರಣಿಕೆಯನ್ನು ಪಡ್ಡೆ ಹುಡುಗರ ಮನಗೆಲ್ಲುವಂತೆ ಎಡಿಟಿಂಗ್ ಮಾಡಿದ ಪುನೀತ್ ಉಜಿರೆ ಕುತೂಹಲ ಕೆರಳಿಸಿದರು,ಎರಡೂವರೆ ನಿಮಿಷದ ಸಾಮಾಜಿಕ ಕಳಕಳಿಯ ಕಿರುಚಿತ್ರ “ಪರಿವರ್ತನೆ” ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿದ್ದೂ ನಿಜ. ಅದೇ ರೀತಿ ಕೇವಲ ಮೂವತ್ತು ಸೆಕೆಂಡ್ ಗಳ ಇನ್ನೂರಕ್ಕೂ ಹೆಚ್ಚಿನ ಫನ್ನೀ, ಲವ್ ಫೀಲಿಂಗ್, ಟ್ರೋಲ್ ವೀಡಿಯೋಗಳು ವೀಕ್ಷಕರ ಮನಗೆದ್ದು, ಅವುಗಳಲ್ಲಿ ಹಲವು ವೀಡಿಯೋಗಳು ನೋಡುಗರ ಪ್ರೊಫೈಲ್ ಸ್ಟೇಟಸ್ ಆಗಿ ವಿಜೃಂಭಿಸಿದ್ದವು.                  
ಇವರ ಪ್ರತಿಭೆ ಅನಾವರಣಗೊಳ್ಳಲು  ಕಾರಣವಾದದ್ದು ದೀಕ್ಷಿತ್ ಭಂಡಾರಿಯವರ “ಅವನಿ” ಎಂಬ ಕಿರುಚಿತ್ರ.ಭಂಡಾರಿ ಕುಟುಂಬದ ಮತ್ತೊಂದು ಯುವಪ್ರತಿಭೆ ದೀಕ್ಷಿತ್ ಭಂಡಾರಿಯವರ ಚೊಚ್ಚಲ ನಿರ್ದೇಶನದ ಕಿರುಚಿತ್ರ “ಅವನಿ”  ಗೆ ಸಂಕಲನ ಮಾಡಿಕೊಟ್ಟ ಪುನೀತ್ ತಮ್ಮ ಕೈಚಳಕವನ್ನು ಯಶಸ್ವಿಯಾಗಿ ಬಳಸಿಕೊಂಡರು. ಇತ್ತೀಚೆಗೆ ಇಂಗ್ಲೀಷ್ ಭಾಷೆಯ ಕಿರುಚಿತ್ರ “ಸುಧಾ”ಕ್ಕೂ ಸಂಕಲನ ಮಾಡಿ ಎಡಿಟಿಂಗ್ ಕ್ಷೇತ್ರದಲ್ಲಿ ತಮ್ಮ ಛಾಪು ಒತ್ತಿದ್ದಾರೆ.                       
ಇದುವರೆಗೂ ಪುನೀತ್ ಭಂಡಾರಿ ಉಜಿರೆಯವರು ಕಿರುಚಿತ್ರಗಳಾದ “ಅವನಿ,ಮೌನರಾಗ, ಪರಿವರ್ತನೆ, ಲೈಪ್ ಈಸ್ ಸ್ಮಾರ್ಟ್,ಸುಧಾ” ಹಾಗೂ ಹಲವಾರು ತುಳು ಮತ್ತು ಕನ್ನಡ ಭಾಷೆಯ ಆಲ್ಬಮ್ ಹಾಡಿನ ಸಂಕಲನ ಮಾಡಿ ಯಶ ಕಂಡಿದ್ದಾರೆ.                                                          
ಚಿಪ್ಪಿನೊಳಗೆ ಅಡಗಿರುವ  ಭಂಡಾರಿ ಪ್ರತಿಭೆಗಳೆಂಬ ಮುತ್ತುಗಳನ್ನು ಗುರುತಿಸುವುದು ಮಾತ್ರವಲ್ಲದೇ, ಆ ಮುತ್ತುಗಳನ್ನು ಸಮಾಜಕ್ಕೆ ಪರಿಚಯಿಸುವುದು ನಮ್ಮ ಭಂಡಾರಿವಾರ್ತೆಯ ಚಿಪ್ಪಿನೊಳಗಿನ ಭಂಡಾರಿ ಮುತ್ತು ಅಂಕಣದ ಮೂಲ ಉದ್ದೇಶ.                                                                        
ಪುನೀತ್ ಭಂಡಾರಿಯವರ “ಭಂಡಾರಿ ಕ್ರಿಯೇಷನ್ಸ್” ಯುಟ್ಯೂಬ್ ಚಾನೆಲ್ ನ್ನು ಭೇಟಿ ನೀಡಿ ಇವರ ಎಡಿಟಿಂಗ್ ಕಲೆಯನ್ನು ಪ್ರೋತ್ಸಾಹಿಸಿ…
ಇಲ್ಲಿ ಕ್ಲಿಕ್ ಮಾಡಿ……..ಎಲ್ಲ ವಿಡಿಯೋಗಳನ್ನೂ ವೀಕ್ಷಿಸಿ ....
                                     
ಪುನೀತ್ ಭಂಡಾರಿ ಉಜಿರೆಯವರು ಸಂಕಲನದಲ್ಲಿ ಯಶಸ್ಸಿನ ದಾರಿಯತ್ತ ಮುನ್ನುಗ್ಗುತ್ತಾ ಅತ್ಯುತ್ತಮ ಸಂಕಲನಕಾರರಾಗಿ ರೂಪುಗೊಳ್ಳಲಿ. ಬೆಳ್ಳಿತೆರೆಯ ಸಂಕಲನ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿಕೊಂಡು ಬರಲಿ.ಭವಿಷ್ಯದಲ್ಲಿ ಅತ್ಯುತ್ತಮ ಸಂಕಲನಕಾರನಾಗಿ ಬೆಳೆಯಲು ಶ್ರೀ ದೇವರ ಕೃಪಾಕಟಾಕ್ಷ ಇವರ ಮೇಲಿರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ. 
                                                                                                                                                       
ಮಾಹಿತಿ: ರತೀಶ್ ಭಂಡಾರಿ ಕುಂಜಿಬೆಟ್ಟು.ಉಡುಪಿ.
ನಿರೂಪಣೆ: ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *