January 18, 2025
Pearl copy
ಜಗತ್ತಿನ ಸೃಷ್ಟಿಯಲ್ಲಿ ಹಲವಾರು ವಿಸ್ಮಯಕಾರಿ ಘಟನೆಗಳು ಜರುಗುತ್ತವೆ. ಸ್ವಾತಿ ಮಳೆಯ ಹನಿಯೊಂದು ಕಪ್ಪೆ ಚಿಪ್ಪಿನೊಳಗೆ ಬಂಧಿಯಾಗಿ ಮುತ್ತಾಗಿ ಪರಿವರ್ತನೆಗೊಳ್ಳುವುದು ಸೃಷ್ಟಿಯ ವಿಸ್ಮಯಕಾರಿ ಘಟನೆಗಳಲ್ಲೊಂದು. ಸಾಗರ ಗರ್ಭದಡಿಯಲ್ಲಿ ಹುದುಗಿರುವ  ಕಪ್ಪೆ ಚಿಪ್ಪನ್ನು ಹೆಕ್ಕಿ ಅದರ ಉದರದಲ್ಲಿ ಅಡಗಿರುವ ಮುತ್ತನ್ನು ಜಗತ್ತಿನ ಮುಂದೆ ಪ್ರಸ್ತುತ ಪಡಿಸಿದಾಗ ಮಾತ್ರ ಆ ಮುತ್ತಿಗೆ ಬೆಲೆ. ಆದರೆ ಸಾಗರ ಗರ್ಭದಡಿಯ ಉಸುಕಿನಡಿಯಲ್ಲಿ ಕಳೆದು ಹೋಗುವ ಮುತ್ತಿನ ಬೆಲೆ ನಗಣ್ಯ. ಹಾಗೆಯೇ ಜೀವನದ ಜಂಜಾಟದ ನಡುವೆ ಬದುಕಿನ ಕುಲುಮೆಯಲ್ಲಿ ಸಂಕಷ್ಟಗಳ ಜ್ವಾಲೆಗೆ ತನ್ನನ್ನು ಒಡ್ಡಿಕೊಂಡು ಹೊಳೆಹೊಳೆವ ಆಭರಣವಾಗಿ ರೂಪುಗೊಳ್ಳುವ ವ್ಯಕ್ತಿಯ ಸಾಧನೆ ಸಮಾಜದ ಮುಂದೆ ತೆರೆದುಕೊಂಡಾಗ ಮಾತ್ರ  ಆ ಸಾಧಕನ ಹೋರಾಟದ ಬದುಕು ಸಾರ್ಥಕ ಮತ್ತು ಆತನ ಜೀವನಗಾಥೆ ಹಲವರಿಗೆ ದಾರಿದೀಪ.ಸಾಮಾನ್ಯ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ವೃತ್ತಿಯಲ್ಲಿ ಅಪ್ರತಿಮ ಸಾಧನೆ ಮಾಡಿ ಸುಮಧುರ ಗಳಿಗೆಯೊಂದರಲ್ಲಿ ಚಿಪ್ಪಿನೊಳಗಿನಿಂದ ಹೊರ ಬಂದು ಮುತ್ತಾಗಿ ಪರಿವರ್ತನೆಗೊಂಡ ಜೀವನ ವೃತ್ತಾಂತದ ಮೇಲೆ ಬೆಳಕು ಚೆಲ್ಲುವ ಭಂಡಾರಿ ವಾರ್ತೆಯ ವಿಶೇಷ ಅಂಕಣವೇ “ಚಿಪ್ಪಿನೊಳಗಿನ ಭಂಡಾರಿ ಮುತ್ತು” ಈ ಲೇಖನ ಮಾಲಿಕೆಯ ಸಂಚಿಕೆಯಲ್ಲಿ ಅಸಾಧಾರಣ, ಅಸಾಮಾನ್ಯ ಸಾಧನೆ ಮಾಡಿದ ಹಲವು ಸಾಧಕರ ಜೀವನ ಚಿತ್ರಣವನ್ನು ಸಮಾಜದ ಮುಂದೆ ಪ್ರಸ್ತುತಪಡಿಸುವ ಒಂದು ಸಣ್ಣ ಪ್ರಯತ್ನವನ್ನು ಮಾಡಿಕೊಂಡು ಬಂದಿದ್ದೇವೆ. 
 
ಈ ಸಂಚಿಕೆಯಲ್ಲಿ ನಾವು ನಿಮ್ಮ ಮುಂದೆ ಪರಿಚಯಿಸುತ್ತಿರುವ ವ್ಯಕ್ತಿ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ,ವಿದ್ಯಾಭ್ಯಾಸದ ಜೊತೆಜೊತೆಗೆ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಕಲಿತು, ಹಲವು ವರ್ಷಗಳ ಕಾಲ ಕ್ಷೌರಿಕ ವೃತ್ತಿಯನ್ನು ಮಾಡಿಕೊಂಡಿದ್ದು, ಕೇಶ ವಿನ್ಯಾಸದ ಹಲವು ಮಜಲುಗಳನ್ನು ಕಲಿತು, ಹಲವು ವಿನ್ಯಾಸಗಳನ್ನು ಕಲಿತು ಅತಿ ಬೇಡಿಕೆಯ ಕೇಶ ವಿನ್ಯಾಸಕಾರನಾಗಿ,ತರಬೇತುದಾರನಾಗಿ ರೂಪುಗೊಂಡು, ಸಾವಿರಾರು  ವೃತ್ತಿ ಆಕಾಂಕ್ಷಿಗಳಿಗೆ ತರಬೇತಿಯನ್ನು ನೀಡಿ ಕೇಶ ವಿನ್ಯಾಸ ಜಗತ್ತಿನಲ್ಲಿ ತನ್ನದೇ ಆದ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ನಮ್ಮ ಭಂಡಾರಿ ಸಮಾಜದ ಹೆಮ್ಮೆಯ ಶ್ರೀ ಪವನ್ ಭಂಡಾರಿ ಉಪ್ಪೂರು.
 
ಪವನ್ ಭಂಡಾರಿಯವರು ಉಡುಪಿ ಜಿಲ್ಲೆಯ ಉಪ್ಪೂರಿನ ಶ್ರೀ ವಿಶ್ವನಾಥ ಭಂಡಾರಿ ಮತ್ತು ಶ್ರೀಮತಿ ವಿಶಾಲಾಕ್ಷಿ ವಿಶ್ವನಾಥ ಭಂಡಾರಿ ದಂಪತಿಯ ಪುತ್ರನಾಗಿ ಏಪ್ರಿಲ್ 7,1990 ರಂದು ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಬ್ರಹ್ಮಾವರದ ನಿರ್ಮಲಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಲ್ಲಿ ಆರಂಭಿಸಿ, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಕೊಳಲಗಿರಿ ಸರಕಾರಿ ಹೈಸ್ಕೂಲ್ ನಲ್ಲಿ ಪೂರೈಸಿದರು.ಪಿಯುಸಿ ವಿದ್ಯಾಭ್ಯಾಸವನ್ನು ಸ್ನೇಹ ಟ್ಯುಟೋರಿಯಲ್ ಕಾಲೇಜಿನಲ್ಲಿ ಓದುತ್ತಿರುವಾಗಲೇ ಕ್ಷೌರಿಕ ವೃತ್ತಿಯೆಡೆಗೆ ಆಕರ್ಷಿತರಾದರು. ಕುಟುಂಬದ ಆರ್ಥಿಕ ಸ್ಥಿತಿಯೂ ಅಷ್ಟೇನೂ ಹೇಳಿಕೊಳ್ಳುವಂತಹ ಮಟ್ಟದಲ್ಲಿರಲಿಲ್ಲ. ಹಾಗಾಗಿ ದ್ವಿತೀಯ ಪಿಯುಸಿಗೆ ತಮ್ಮ ಶಿಕ್ಷಣವನ್ನು ಮೊಟಕುಗೊಳಿಸಿ ಕೆಜಿ ರೋಡ್ ನಲ್ಲಿದ್ದ ತಮ್ಮ ದೊಡ್ಡಪ್ಪ ಶ್ರೀಕೃಷ್ಣ ಭಂಡಾರಿಯವರ ಪ್ರಶಾಂತ್ ಹೇರ್ ಡ್ರೆಸ್ಸಸ್ ನಲ್ಲಿ ಕ್ಷೌರಿಕ ವೃತ್ತಿಯ ಕಲಿಕೆಯ ಪ್ರಾಥಮಿಕ ಅಭ್ಯಾಸವನ್ನು ಆರಂಭಿಸಿದರು. 2008 ರಲ್ಲಿ ಆರಂಭಗೊಂಡ ಕ್ಷೌರಿಕ ವೃತ್ತಿಯ ಬದುಕು ಸುಮಾರು ಐದು ವರ್ಷಗಳ ಕಾಲ ಉಡುಪಿ ಜಿಲ್ಲೆಯ ಉಪ್ಪೂರಿನ ಸಲೂನ್ ನಲ್ಲಿ ಮುಂದುವರಿಯಿತು. 2012 ರಲ್ಲಿ ತಮ್ಮ ವೃತ್ತಿ ಬದುಕಿನ ಮುಂದಿನ ಆಯಾಮವನ್ನು ಮಣಿಪಾಲದ ಕಿಮೆರಾ ಸ್ಟುಡಿಯೋ ಸಲೂನ್ ನಲ್ಲಿ ಆರಂಭಿಸಿ ತಮ್ಮ ವೃತ್ತಿ ಕೌಶಲ್ಯತೆಯ ಮತ್ತೊಂದು ಮಜಲನ್ನು ಆರಂಭಿಸಿದರು.ಅದುವರೆಗೂ ಕೇವಲ ಪುರುಷರ ಕೇಶ ವಿನ್ಯಾಸಕಾರರಾಗಿ ವೃತ್ತಿಯನ್ನು ಮಾಡಿಕೊಂಡು ಬಂದಿದ್ದ ಪವನ್ ಭಂಡಾರಿಯವರು ಕಿಮೆರಾದಲ್ಲಿ ಉದ್ಯೋಗ ಆರಂಭಿಸಿದ ಮೇಲೆ ಹಲವಾರು ಸೆಮಿನಾರ್ ಗಳಲ್ಲಿ ಭಾಗವಹಿಸಿ,  ಹಲವಾರು ಜಗತ್ಪ್ರಸಿದ್ಧ ಬ್ರಾಂಡ್ ಗಳ   ತರಬೇತಿಗಳನ್ನು ಹೊಂದಿ, 2012 ರ ಹೊತ್ತಿಗಾಗಲೇ ಪುರುಷರು ಮತ್ತು ಸ್ತ್ರೀಯರ ಕೇಶ ವಿನ್ಯಾಸಕಾರರಾಗಿ ಮಾರ್ಪಾಡಾಗಿದ್ದರು.2013 ರಲ್ಲಿ ಅಮೆರಿಕ ಮೂಲದ ಜಗತ್ ಪ್ರಸಿದ್ಧ ಸಲೂನ್ ಉತ್ಪನ್ನಗಳ ಬ್ರಾಂಡ್ ಮಿಚೆಲ್ ಪಾಲ್ ಸಂಸ್ಥೆಯವರು ಆಯೋಜಿಸಿದ್ದ ಹತ್ತು ದಿನಗಳ ವೃತ್ತಿ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಅವರ ವೃತ್ತಿ ಬದುಕಿಗೆ ಮಹತ್ವದ ತಿರುವನ್ನು ನೀಡಿತು.2015 ರಲ್ಲಿ ಮಣಿಪಾಲದಿಂದ ಬೆಂಗಳೂರಿನ ಹೆಚ್ಚೆಸ್ಸಾರ್ ಲೇ ಔಟ್ ನ ಕಿಮೆರಾ ಗ್ರೂಪ್ಸ್ ಗೆ ತಮ್ಮ ವೃತ್ತಿ ಬದುಕನ್ನು ವರ್ಗಾಯಿಸಿಕೊಂಡರು. 2016 ರಿಂದ ಪ್ರತಿಷ್ಠಿತ ಲೋರಿಯಲ್ ಬ್ರ್ಯಾಂಡ್ ನ ಮ್ಯಾಟ್ರಿಕ್ಸ್ ಕಂಪನಿಯಲ್ಲಿ ತಾಂತ್ರಿಕ ತರಬೇತುದಾರರಾಗಿ ಸೇರ್ಪಡೆಗೊಂಡರು.
ಕಳೆದ ಎರಡ್ಮೂರು ವರ್ಷಗಳಿಂದ ಮ್ಯಾಟ್ರಿಕ್ಸ್‌ ನಲ್ಲಿ ಸೇವೆ ಸಲ್ಲಿಸುತ್ತಿರುವ ಪವನ್ ಭಂಡಾರಿಯವರು ಹಲವಾರು ಸ್ಟೇಜ್ ಷೋ ಗಳನ್ನು, ಸೆಮಿನಾರ್ ಗಳನ್ನು,ತರಬೇತಿ ಕಾರ್ಯಾಗಾರಗಳನ್ನು, ಸಂವಾದ ಕಾರ್ಯಕ್ರಮಗಳನ್ನು, ಕ್ಷೌರಿಕ ವೃತ್ತಿ ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ.ಕರ್ನಾಟಕ ಮಾತ್ರವಲ್ಲದೆ ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲೂ ಸೇವೆ ಸಲ್ಲಿಸಿ ಎರಡು ಸಾವಿರಕ್ಕೂ ಹೆಚ್ಚಿನ ಯುವಕ ಯುವತಿಯರಿಗೆ ತರಬೇತಿ,ಮಾರ್ಗದರ್ಶನ ನೀಡಿದ್ದಾರೆ.
ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ಕ್ಷೌರಿಕ ವೃತ್ತಿಯನ್ನು ಆರಂಭಿಸಿ ಒಂದೊಂದೇ ಮೆಟ್ಟಿಲನ್ನು ತಾಳ್ಮೆಯಿಂದ ಏರುತ್ತಾ ಜಗತ್ಪ್ರಸಿದ್ಧ ಬ್ರ್ಯಾಂಡ್ ಒಂದರ ವಿಶ್ವಾಸಾರ್ಹ ತರಬೇತುದಾರರಾಗಿ ಬೆಳೆದುನಿಂತ ಪವನ್ ಭಂಡಾರಿಯವರಿಗೆ ಏಪ್ರಿಲ್ 8,2019 ರಂದು ಇಂಗ್ಲೆಂಡ್ ದೇಶದ ಲಂಡನ್ ನಗರದ “ಲಂಡನ್ ಓಟೂ ಅರೇನಾ” ಪಂಚತಾರಾ ಹೋಟೆಲ್ ನಲ್ಲಿ ನಡೆದ ಲೋರಿಯಲ್ ಉತ್ಪಾದಕರ ಸಮ್ಮೇಳನದಲ್ಲಿ ಮ್ಯಾಟ್ರಿಕ್ಸ್ ನ “2018 ನೇ ಸಾಲಿನ ದಕ್ಷಿಣ ಭಾರತದ ಅತ್ಯುತ್ತಮ ತರಬೇತುದಾರ” ಎಂಬ ಅಂತರರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಎಲೆಕ್ಟ್ರೀಷಿಯನ್ ವೃತ್ತಿಯನ್ನು ಮಾಡಿಕೊಂಡಿದ್ದ ಶ್ರೀ ವಿಶ್ವನಾಥ್ ಭಂಡಾರಿಯವರ ಹಿರಿಯ ಮಗನಾಗಿ ಜನಿಸಿ,ಆರ್ಥಿಕ ಸಂಕಷ್ಟದಿಂದಾಗಿ ಶಿಕ್ಷಣವನ್ನು ಪಿಯುಸಿಗೆ ಮೊಟಕುಗೊಳಿಸಿ,ಹದಿನೆಂಟರ ಹರೆಯದಲ್ಲಿ ಕುಲಕಸುಬಾದ ಕ್ಷೌರಿಕ ವೃತ್ತಿಯನ್ನು ಆಯ್ದುಕೊಂಡು, ಸಾಂಪ್ರದಾಯಿಕ ವೃತ್ತಿಗೆ ಅಂತರರಾಷ್ಟ್ರೀಯ, ಆಧುನಿಕ ಸ್ಪರ್ಶ ನೀಡುತ್ತಾ,ಜಗತ್ಪ್ರಸಿದ್ಧ ಬ್ರ್ಯಾಂಡ್ ಲೋರಿಯಲ್ ನ ಮ್ಯಾಟ್ರಿಕ್ಸ್ ಗ್ರೂಪ್ ನಲ್ಲಿ ವೃತ್ತಿ ಸಂಬಂಧಿತ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಾ,ದೇಶ ವಿದೇಶಗಳಲ್ಲಿ ಸಂಚರಿಸುತ್ತಾ,ಮನಸ್ಸಿದ್ದರೆ ಕುಲ ಕಸುಬಿನಲ್ಲಿಯೇ ಅಸಾಮಾನ್ಯ ಸಾಧನೆ ಮಾಡಬಹುದೆಂಬುದನ್ನು ಕೇವಲ ಇಪ್ಪತ್ತೊಂಬತ್ತರ ಹರೆಯದಲ್ಲೇ ತೋರಿಸಿಕೊಟ್ಟ ಶ್ರೀ ಪವನ್ ಭಂಡಾರಿ ಉಪ್ಪೂರರ ಜೀವನಗಾಥೆ ನಮ್ಮ ಭಂಡಾರಿ ಸಮಾಜದ ಯುವಕರಿಗೆ ನಿಜಕ್ಕೂ ಸ್ಪೂರ್ತಿದಾಯಕ.
 
 
 
ಕ್ಷೌರಿಕ ವೃತ್ತಿಯನ್ನು ಹೀಗಳೆಯುತ್ತಾ, ವೃತ್ತಿಯನ್ನು ಕಲಿಯಲು ಹಿಂಜರಿಯುವ ನಮ್ಮ ಭಂಡಾರಿ ಸಮಾಜದ ಯುವಕರಿಗೆ ಕಿವಿಮಾತು ಹೇಳುವಂತಿರುವ ಪವನ್ ಭಂಡಾರಿಯವರ ವೃತ್ತಿ ಜೀವನದ ಮೇಲೆ ಬೆಳಕು ಚೆಲ್ಲುವ ಸಣ್ಣ ಪ್ರಯತ್ನವನ್ನು ಮಾಡಿರುವ ಭಂಡಾರಿವಾರ್ತೆಯ ಈ ಸಂಚಿಕೆ   ಸಮಾಜದ ಕೆಲವೇ ಕೆಲವು ಯುವಕರಿಗಾದರೂ ಸ್ಫೂರ್ತಿಯನ್ನು ನೀಡಿದರೆ ನಮ್ಮ ಪ್ರಯತ್ನ ಸಾರ್ಥಕವಾದಂತೆ.
 
 
 
ಶ್ರೀಪವನ್ ಭಂಡಾರಿ ಅವರು ತಮ್ಮ ವೃತ್ತಿ ಬದುಕಿನಲ್ಲಿ ಇನ್ನಷ್ಟು ಎತ್ತರಕ್ಕೆ ಏರಲಿ, ಅವರ ಸಾಧನೆಗೆ ಹೆಚ್ಚಿನ ಶಕ್ತಿ ಚೈತನ್ಯವನ್ನು ನೀಡಿ ಶ್ರೀ ದೇವರು ಆಶೀರ್ವದಿಸಲಿ, ಅವರಿಗೆ, ಅವರ ತಂದೆ ಶ್ರೀ ವಿಶ್ವನಾಥ ಭಂಡಾರಿ, ತಾಯಿ ಶ್ರೀಮತಿ ವಿಶಾಲಾಕ್ಷಿ ವಿಶ್ವನಾಥ ಭಂಡಾರಿ ಮತ್ತು ಸಹೋದರಿ ಕುಮಾರಿ ಸೋನ ಭಂಡಾರಿ ಎಲ್ಲರಿಗೂ ಭಗವಂತನು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರೈಸುತ್ತದೆ.
 
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *