September 20, 2024
ಶಿವಮೊಗ್ಗ ಜಿಲ್ಲೆ ಸಾಗರ ಸಮೀಪದ ಚಿಪ್ಪಳಿಯ ಶ್ರೀ ರೋಹಿತ್.ವಿ.ಭಂಡಾರಿಯವರು ರೋಬೋಟಿಕ್ ಸೈಂಟಿಸ್ಟ್ ಆಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ. 
 
 
ಸಾಗರದ ಚಿಪ್ಪಳಿಯ ಶ್ರೀ ವಿಷ್ಣುಮೂರ್ತಿ ಭಂಡಾರಿ ಮತ್ತು ಶ್ರೀಮತಿ ಅನ್ನಪೂರ್ಣ ವಿಷ್ಣುಮೂರ್ತಿ ಭಂಡಾರಿ ದಂಪತಿಯ ಪುತ್ರರಾದ ಶ್ರೀ ರೋಹಿತ್ ರವರು ಭೌತಶಾಸ್ತ್ರದಲ್ಲಿ M.Sc ಪದವಿ ಪಡೆದು,ಸೈಕಾಲಜಿಯಲ್ಲಿ PG ಡಿಪ್ಲೊಮಾ ಪೂರೈಸಿ ಪ್ರಸ್ತುತ ಸಾಗರದ ಹೊಂಗಿರಣ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವಿದ್ಯಾರ್ಥಿಗಳಿಗೆ ವಿಜ್ಞಾನ ವಿಷಯವನ್ನು ಬೋಧಿಸುವ ಜೊತೆಗೆ ಕಾಲೇಜಿನ ರೋಬೊಟಿಕ್ ಲ್ಯಾಬ್ “ಹೊಂಗಿರಣ ಟಿಂಕರಿಂಗ್ ಲ್ಯಾಬ್” ಗೆ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. 
 
 
 
ಈ ಲ್ಯಾಬ್ ನಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯ ವರೆಗಿನ ಮಕ್ಕಳಿಗೆ ಅತ್ಯಾಧುನಿಕ ರೋಬೊಟಿಕ್ ತಂತ್ರಜ್ಞಾನವನ್ನು ಹೇಳಿಕೊಡಲಾಗುತ್ತದೆ. 3D ಮಾಡೆಲಿಂಗ್, IOT (ಇಂಟರ್ನೆಟ್ ಆಫ್ ಥಿಂಗ್ಸ್.), ಅರ್ಡ್ವಿನೋ, ಮೈಕ್ರೊ ಕಂಟ್ರೋಲರ್ ಕೋಡಿಂಗ್ ಈ ರೀತಿಯ ಉನ್ನತ ತಂತ್ರಜ್ಞಾನವನ್ನು ಕಲಿಸಿಕೊಟ್ಟು ರೋಬೋಟ್ ಗಳನ್ನು ತಯಾರಿಸುವ ಕಲೆಯನ್ನು ಮಕ್ಕಳಿಗೆ ಹೇಳಿಕೊಡಲಾಗುತ್ತದೆ.
 
 
ಇವರ ಮುಂದಾಳತ್ವದಲ್ಲಿ ಹೊಂಗಿರಣ ಟಿಂಕರಿಂಗ್ ಲ್ಯಾಬ್ ನ ಅಡಿಯಲ್ಲಿ ರೂಪಿಸಲಾದ ಅಡಿಕೆ ಕೊಯ್ಲು ಮಾಡುವ ರೋಬೊ “ಮೋಟೋ ಅರೇಕಾ” ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತು. ಸಂಪೂರ್ಣ ಮೊಬೈಲ್ ನಿಯಂತ್ರಿತವಾದ ಈ ರೋಬೊ ಅಡಿಕೆ ಮರವನ್ನು ಏರಿ, ಕೊಯ್ಲು ಮಾಡಿ ಮೊಬೈಲ್ ಗೆ ಸಂದೇಶವನ್ನು ರವಾನಿಸುವ ಮೂಲಕ ಕಾರ್ಯನಿರ್ವಹಿಸುವ ಕ್ಷಮತೆಯನ್ನು ಹೊಂದಿದೆ. 2018 ರಲ್ಲಿ ನವದೆಹಲಿಯಲ್ಲಿ ನಡೆದ ಇಂಡೋ-ರಷ್ಯನ್ ಟಿಂಕರಿಂಗ್ ಸಮ್ಮಿತ್ ನಲ್ಲಿ ಪ್ರದರ್ಶನಗೊಂಡ ಮೋಟೋ ಅರೇಕಾ 2018 ರ ದೇಶದ ಅತ್ಯುತ್ತಮ ಅನ್ವೇಷಣೆಗಳಲ್ಲಿ ಒಂದು ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿತು. ಈ ಪ್ರದರ್ಶನವನ್ನು ವೀಕ್ಷಿಸಿದ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಜೀಯವರು ಮತ್ತು ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ರವರು ಈ ಅನ್ವೇಷಣೆಯನ್ನು ನೋಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
 
 
ಈ ಸಂದರ್ಭದಲ್ಲಿ ರಷ್ಯಾ ಮತ್ತು ಭಾರತದ ಮಕ್ಕಳಿಗೆ ತರಬೇತಿ ನೀಡಲು ಭಾರತದಿಂದ ಆಯ್ಕೆಯಾದ ಐದು ಜನ ತರಬೇತುದಾರರಲ್ಲಿ ರೋಹಿತ್ ಭಂಡಾರಿಯವರು ಒಬ್ಬರಾಗಿದ್ದರು. ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದಿಂದ ಆಯ್ಕೆಯಾದ ಏಕೈಕ ತರಬೇತುದಾರರೆಂದರೆ ಅದು ರೋಹಿತ್ ಭಂಡಾರಿಯವರು. ಇವರು ದೇಶದ ನೂರು ಜನ ಉನ್ನತ ಮಟ್ಟದ ರೋಬೊಟಿಕ್ ತರಬೇತುದಾರರಲ್ಲಿ ದಕ್ಷಿಣ ಭಾರತದಿಂದ ಸ್ಥಾನ ಪಡೆದಿರುವ ಏಕೈಕ ತರಬೇತುದಾರರೆಂಬುದು ನಮ್ಮ ಹೆಮ್ಮೆ. ರೋಬೊಟಿಕ್ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ವ್ಯಾಸಂಗಕ್ಕಾಗಿ 2020 ರಲ್ಲಿ ರಷ್ಯಾಕ್ಕೆ ತೆರಳಲಿರುವ ನಿಯೋಗದಲ್ಲಿ ರೋಹಿತ್ ಕೂಡ ಒಬ್ಬರಾಗಿ ಆಯ್ಕೆಯಾಗಿದ್ದಾರೆ.
 
 
 
2019 ರಲ್ಲಿ ರೂಪಿಸಿದ ರೋಬೋ ಕೆರೆಯಲ್ಲಿ ಬೆಳೆಯುವ ಪಾಚಿ ಮತ್ತು ಅಂತರಗಂಗೆ ಎಂಬ ಸಸ್ಯವನ್ನು ತೆಗೆದು ಕೆರೆಯನ್ನು ಸ್ವಚ್ಛಗೊಳಿಸುವ ಸಾಧನವಾಗಿದೆ.ದೋಣಿ ಮಾದರಿಯಲ್ಲಿದ್ದು ಅದರಲ್ಲಿ ಜೇಸಿಬಿ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಈ ಸಾಧನ ಸಂಪೂರ್ಣ ಜಿ.ಪಿ.ಎಸ್ ತಂತ್ರಜ್ಞಾನವನ್ನು ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತದೆ. ಸೋಲಾರ್ ಎನರ್ಜಿ ಬಳಸಿಕೊಂಡು ಕಾರ್ಯವೆಸಗುವ ಈ ರೋಬೊವನ್ನು ಕಸ,ಪಾಚಿ ಮತ್ತು ಅಂತರಗಂಗೆ ಸಸ್ಯಗಳಿಂದ ತುಂಬಿರುವ ಕೆರೆಯಲ್ಲಿ ಬಿಟ್ಟರೆ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸಿದ ನಂತರ ನಿಮ್ಮ ಮೊಬೈಲ್ ಗೆ ಸಂದೇಶವನ್ನು ರವಾನಿಸುತ್ತದೆ.
 
 
ಈ ಅನ್ವೇಷಣೆಯನ್ನು ರಾಷ್ಟ್ರ ಮಟ್ಟದ ಟಿಂಕರಿಂಗ್ ಲ್ಯಾಬ್ ಸಮ್ಮಿಟ್ ನಲ್ಲಿ ಪ್ರದರ್ಶಿಸಲಾಯಿತು.ಅಲ್ಲಿಯೂ ಸಹ 2019 ರ ಅತ್ಯುತ್ತಮ ಅನ್ವೇಷಣೆಗಳಲ್ಲೊಂದು ಎಂಬ ಪ್ರಶಸ್ತಿಯನ್ನು ಬಾಚಿಕೊಂಡಿತು. ಮತ್ತು ಇಂಟೆಲ್ ಹಾಗೂ ಭಾರತೀಯ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ನವದೆಹಲಿಯಲ್ಲಿ ಏರ್ಪಡಿಸಲಾಗಿದ್ದ “ಐಡಿಯೇಟ್ ಫಾರ್ ಇಂಡಿಯಾ – 2019” ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಬಾಚಿಕೊಂಡಿತು.ಸ್ಪರ್ಧೆಯಲ್ಲಿ ಭಾಗವಹಿಸಿದ ದೇಶದ ಒಂದು ಲಕ್ಷದ ಇಪ್ಪತ್ತು ಸಾವಿರ ಅನ್ವೇಷಣೆಗಳಲ್ಲಿ ಅತ್ಯುತ್ತಮವೆಂದು ಆಯ್ಕೆಯಾಗಿ ಪ್ರಶಸ್ತಿ ಬಾಚಿದ ಹೊಂಗಿರಣ ಟಿಂಕರಿಂಗ್ ಲ್ಯಾಬ್ ದೇಶದ ಗಮನವನ್ನು ಮತ್ತೊಮ್ಮೆ ತನ್ನತ್ತ ಸೆಳೆದುಕೊಂಡಿತು.ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾದ ಶ್ರೀಯುತ ರವಿಶಂಕರ್ ಪ್ರಸಾದ್ ರವರು ಪ್ರಶಸ್ತಿ ಪ್ರಧಾನ ಮಾಡಿದರು.
 
 
 
ದಕ್ಷಿಣ ಭಾರತದಿಂದ ಇಂಡೋ ರಷ್ಯನ್ ಟಿಂಕರಿಂಗ್ ಸಮ್ಮಿಟ್ ಗೆ ಆಯ್ಕೆಯಾದ ಏಕೈಕ ಶಾಲೆಯಾದ ಹೊಂಗಿರಣ ಸ್ಕೂಲ್ ನ ರೋಬೊಟಿಕ್ ಲ್ಯಾಬ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿರುವ ರೋಹಿತ್.ವಿ.ಭಂಡಾರಿಯವರನ್ನು ಭಂಡಾರಿವಾರ್ತೆ ಅಭಿನಂದಿಸಲು ಕರೆ ಮಾಡಿದಾಗ “ತಂತ್ರಜ್ಞಾನದ ಅಭಿವೃದ್ಧಿಗೆ ಮತ್ತು ಅನ್ವೇಷಣೆಗಾಗಿ ವಿದ್ಯಾರ್ಥಿಗಳಿಗೆ ಭಾರತ ಸರ್ಕಾರ ವಿಫುಲ ಅವಕಾಶವನ್ನು ನೀಡುತ್ತಿದೆ.ಸಿಕ್ಕ ಅವಕಾಶವನ್ನು ನಾವು ಸೂಕ್ತವಾಗಿ ಬಳಸಿಕೊಳ್ಳಬೇಕು, ಆ ನಿಟ್ಟಿನಲ್ಲಿ ಹೊಂಗಿರಣ ಶಾಲೆಯ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ನಮ್ಮೊಂದಿಗೆ ಬೆಂಬಲವಾಗಿ ನಿಂತಿರುವುದರಿಂದಾಗಿ ಇದೆಲ್ಲಾ ಸಾಧ್ಯವಾಗಿದೆ.ಸತತವಾಗಿ ಮೂರನೇ ಬಾರಿಯೂ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಬಾಚುವ ಪ್ರಯತ್ನದಲ್ಲಿ ನಾವಿದ್ದೇವೆ.”
 
 
“ರೋಬೋಟಿಕ್ ತಂತ್ರಜ್ಞಾನ ನಮ್ಮ ಹೊಂಗಿರಣ ಶಾಲೆಯ ಮಕ್ಕಳಿಗೆ ಮಾತ್ರ ಸೀಮಿತವಾಗಿರದೆ, ಅವಕಾಶ ವಂಚಿತ ಸಮೀಪದ ಬೇರೆ ಶಾಲೆಯ, ಸರ್ಕಾರಿ ಶಾಲೆಯ ಮಕ್ಕಳಿಗೂ ಸಿಗುವಂತಾಗಲಿ ಎಂಬ ಉದ್ದೇಶದಿಂದ ನಮ್ಮ ಶಾಲೆ  “ಹೊಂಗಿರಣ ಟಿಂಕರ್ ಟೂರ್” ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ.ಈ ಯೋಜನೆಯಡಿ ನಮ್ಮ ಶಾಲೆಯ ಬಸ್ ನಲ್ಲಿ ರೋಬೋಟಿಕ್ ತಂತ್ರಜ್ಞಾನದ ಸಲಕರಣೆಗಳನ್ನು,ರೋಬೋಗಳನ್ನು ತೆಗೆದುಕೊಂಡು ಬೇರೆ ಬೇರೆ ಶಾಲೆಗಳಿಗೆ,ಸಮೀಪದ ಸರಕಾರಿ ಶಾಲೆಗಳಿಗೆ ಭೇಟಿಕೊಟ್ಟು,ನಮ್ಮ ಶಾಲೆಯ ತರಬೇತಿ ಪಡೆದ ವಿದ್ಯಾರ್ಥಿಗಳಿಂದ ರೋಬೋಟಿಕ್ ತಂತ್ರಜ್ಞಾನದ ಮಾಹಿತಿಯನ್ನು ನೀಡುವ ಜೊತೆಗೆ ಕಾರ್ಯಾಗಾರವನ್ನು ಹಮ್ಮಿಕೊಂಡು ಮಕ್ಕಳಲ್ಲಿ ರೋಬೋಟಿಕ್ ತಂತ್ರಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ” ಎಂದು ನುಡಿದರು.
 
 
ರೋಬೋಟಿಕ್ ತಂತ್ರಜ್ಞಾನದಲ್ಲಿ ದೇಶದಲ್ಲಿ ಹೆಸರು ಮಾಡಿರುವ ಸಾಗರದ “ಹೊಂಗಿರಣ ಶಾಲೆ” ಯ ರೋಬೋಟಿಕ್ ಲ್ಯಾಬ್ ನ ಮುಖ್ಯಸ್ಥರಾಗಿರುವ ಶ್ರೀ ರೋಹಿತ್.ವಿ.ಭಂಡಾರಿಯವರಿಗೆ, ಅವರಿಗೆ ಬೆನ್ನೆಲುಬಾಗಿ ನಿಂತಿರುವ ಹೊಂಗಿರಣ ಶಾಲೆಯ ಆಡಳಿತ ಮಂಡಳಿಯವರಿಗೆ,ವಿದ್ಯಾರ್ಥಿಗಳಿಗೆ ಮತ್ತು ರೋಹಿತ್ ರವರ ಪತ್ನಿ ಶ್ರೀಮತಿ ಅಂಕಿತ,ಮಗಳು ಬೇಬಿ ಅನ್ವಿತ ರೋಹಿತ್ ರವರಿಗೆ ಭಂಡಾರಿವಾರ್ತೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತದೆ.ನಿಮ್ಮ ಶಾಲೆಯು ಮೂರನೇ ಬಾರಿಯೂ ರಾಷ್ಟ್ರ ಮಟ್ಟದ ಅತ್ಯುತ್ತಮ ಅನ್ವೇಷಣಾ ಪ್ರಶಸ್ತಿ ಪಡೆದು ಹ್ಯಾಟ್ರಿಕ್ ಸಾಧನೆ ಮಾಡುವಂತಾಗಲಿ ಎಂದು “ಭಂಡಾರಿವಾರ್ತೆ ತಂಡ” ಶುಭ ಹಾರೈಸುತ್ತದೆ.
 
ರೋಹಿತ್.ವಿ.ಭಂಡಾರಿಯವರನ್ನು ಸಂಪರ್ಕಿಸಲು 9481503603,
7022604442 ನಂಬರ್ ಗೆ ಕರೆ ಮಾಡಿ.
 
“ಭಂಡಾರಿವಾರ್ತೆ.”
 
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *