ಬಾಳೆಹೊನ್ನೂರು ಶ್ರೀ ವಿದ್ಯಾ ಗಣಪತಿ ಸಮುದಾಯ ಭವನದಲ್ಲಿ ಜನವರಿ 1, 2019 ರ ಮಂಗಳವಾರ ಬೆಂಗಳೂರು ವಲಯ ಭಂಡಾರಿ ಸಮಾಜದ ನೂತನ ಅಧ್ಯಕ್ಷರ ಬೇಟಿಯ ಹಿನ್ನೆಲೆಯಲ್ಲಿ ಭಂಡಾರಿ ಸಮಾಜ ಸಂಘ ಬಾಳೆಹೊನ್ನುರು ವಿಭಾಗದ ವಿಶೇಷ ಸಭೆ ಕರೆಯಲಾಗಿತ್ತು. ದೀಪ ಬೆಳಗಿಸುವುದರ ಮೂಲಕ ಸಭೆಯನ್ನು ಉದ್ಘಾಟಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಬಾಳೆಹೊನ್ನೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷರಾದ ಶ್ರೀ ಸುನಿಲ್ ರಾಜ್ ಭಂಡಾರಿಯವರು ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಭಂಡಾರಿ ಸಮಾಜ ಸಂಘ, ಬೆಂಗಳೂರು ವಲಯದ ನೂತನ ಅಧ್ಯಕ್ಷರಾದ ಶ್ರೀ ಮಾಧವ ಭಂಡಾರಿ ಸಾಗರ, ಭಂಡಾರಿ ಸಮಾಜ ಸಂಘ, ಬೆಂಗಳೂರು ವಲಯದ ಉಪಾಧ್ಯಕ್ಷರಾದ ಶ್ರೀ ಮೋಹನ್ ಭಂಡಾರಿ ಬಾಳೆಹೊನ್ನೂರು, ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ ಸಮಿತಿಯ ಸದಸ್ಯರಾದ ಶ್ರೀ ಹಿರಿಯಣ್ಣ ಭಂಡಾರಿಯವರು, ಬಾಳೆಹೊನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮಧುಸೂದನ್, ಶ್ರೀ ಶಂಕರ್ ಗೌರಿಗಂಡಿ, ಬಾಳೆಹೊನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಮುರುಗನ್, ಬಾಳೆಹೊನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಸವಿತಾ ಅನೀಷ್ ಭಂಡಾರಿ ಮತ್ತು ಭಂಡಾರಿ ಸಮಾಜದ ಪದಾಧಿಕಾರಿಗಳು, ನಾಗೇಶ್ವರ ಮಹಿಳಾ ಮತ್ತು ಪುರುಷರ ಸಂಘದ ಸದಸ್ಯರು,ವಿದ್ಯಾರ್ಥಿಗಳು ಮತ್ತು ಮಾಧ್ಯಮ ಮಿತ್ರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮಾಧವ ಭಂಡಾರಿಯವರು…”ವಿದ್ಯಾರ್ಥಿ ವೇತನವನ್ನು ಪಡೆಯುವುದು ಪ್ರತೀ ವಿದ್ಯಾರ್ಥಿಗಳ ಹಕ್ಕು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿವೇತನವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲಾಗುವುದು. ಸಮಾಜದ ಒಗ್ಗಟ್ಟಿಗೆ ನಾವೆಲ್ಲರೂ ಗುಂಪುಗಾರಿಕೆಯನ್ನು ಬಿಟ್ಟು ಉತ್ತಮ ಮನಸ್ಸಿನಿಂದ ಶ್ರಮಿಸಬೇಕು. ವಿದ್ಯಾರ್ಥಿಗಳು ಉತ್ತಮ ವ್ಯಕ್ತಿಗಳಾಗಿ ರೂಪುಗೊಂಡು ಸಮಾಜದ ಮುಂಚೂಣಿಗೆ ಬರಬೇಕು.” ಎಂದು ಕಿವಿಮಾತು ಹೇಳಿದರು.
ಶ್ರೀ ಹಿರಿಯಣ್ಣ ಭಂಡಾರಿಯವರು ಮಾತನಾಡಿ ಸಮಾಜ ನಡೆದು ಬಂದ ದಾರಿಯ ಬಗ್ಗೆ ವಿವರಿಸಿದರು. ಶ್ರೀ ಮೋಹನ್ ಭಂಡಾರಿಯವರು ಪ್ರತಿ ಬೆಂಗಳೂರು ವಲಯದ ಮಾಸಿಕ ಸಭೆಯಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮನವಿ ಮಾಡಿದರು.
ಶಂಕರ್ ಗೌರಿ ಗಂಡಿ, ಮುರುಗನ್,ಮಧುಸೂದನ್ ಭಂಡಾರಿ ಸಮಾಜದ ಅಭಿವೃದ್ಧಿಯ ಬಗ್ಗೆ ತಿಳಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸುನಿಲ್ ರಾಜ್ ಭಂಡಾರಿಯವರು ಮಾತನಾಡಿ…”ವಿದ್ಯಾರ್ಥಿಗಳು ಉತ್ತಮ ವಿದ್ಯಾಬ್ಯಾಸ ಮುಗಿಸಿ ಎತ್ತರಕ್ಕೆ ಬೆಳೆದ ನಂತರ ಸಮಾಜದಿಂದ ಅಂತರ ಕಾಯ್ದುಕೊಂಡರೆ ಅದು ನಿಮ್ಮ ಹಿರಿಯರಿಗೆ ಮಾಡಿದ ಮೋಸವಾಗುತ್ತದೆ. ಅಂತಹ ವಿಚಾರಗಳನ್ನು ನಿಮ್ಮ ಮನಸ್ಸುಗಳಿಂದ ಕಿತ್ತೊಗೆಯಿರಿ” ಎಂದು ಕರೆನೀಡಿದರು.
ಬಾಳೆಹೊನ್ನೂರು ಸಮಾಜ ಸಂಘದ ಸ್ವಸಹಾಯ ಸಂಘಗಳ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಕಚ್ಚೂರು ಕೋ ಆಪರೇಟಿವ್ ಸೊಸೈಟಿಯನ್ನು ಮಲೆನಾಡಿನ ಭಾಗಕ್ಕೆ ತರುವ ವಿಚಾರವಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು. ಬಾಳೆಹೊನ್ನೂರು ಸಂಘದ ನೂತನ ನಿವೇಶನದ ಬಗ್ಗೆ ಸಭೆಯ ಗಮನ ಸೆಳೆದು ಮಾನ್ಯ ಶಾಸಕರ ಗಮನಕ್ಕೆ ತಂದು ಬೇಗನೇ ಯಶಸ್ವಿಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಬೆಂಗಳೂರು ವಲಯದ ವಿದ್ಯಾನಿಧಿಯ ವಿದ್ಯಾರ್ಥಿವೇತನದ ಚೆಕ್ ಗಳನ್ನು ವಿತರಿಸಲಾಯಿತು. ನೂತನ ಕ್ಯಾಲೆಂಡರ್ ವರ್ಷದ ಕ್ಯಾಲೆಂಡರ್ ಗಳನ್ನು ವಿತರಿಸಲಾಯಿತು. ಧರ್ಮಸ್ಥಳ ಮದ್ಯ ವ್ಯರ್ಜನ ಶಿಬಿರದಲ್ಲಿ ಉಚಿತ ಸೇವೆ ಸಲ್ಲಿಸಿದ ಸದಸ್ಯರುಗಳನ್ನು ಅಭಿನಂದಿಸಲಾಯಿತು.
ಸಭೆಗೆ ಸವಿತಾ ಅನೀಷ್ ಭಂಡಾರಿ ಸ್ವಾಗತಿಸಿದರು.ಶ್ರೀಮತಿ ರತ್ನಕಲಾ ಭಂಡಾರಿ ಶ್ರೀ ದೇವರ ಪ್ರಾರ್ಥನೆ ಮಾಡಿದರು. ಕಿರಣ್ ಭಂಡಾರಿ ವಂದಿಸಿದರು. ಕುಮಾರಿ ಶೃತಿ ಭಂಡಾರಿ ನಿರೂಪಿಸಿದರು.
ವರದಿ : ಕುಮಾರಿ ಶೃತಿ ಭಂಡಾರಿ.
ಕಾರ್ಯದರ್ಶಿ.
ಬಾಳೆಹೊನ್ನುರು ವಿಭಾಗ ಭಂಡಾರಿ ಸಮಾಜ ಸಂಘ.