ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ 2021 ನ ಸಾಲಿನ ವಾರ್ಷಿಕ ಮಹಾ ಸಭೆ ಮತ್ತು ಕೌಟಂಬಿಕ ಸ್ನೇಹ ಕೂಟವನ್ನು ದಿನಾಂಕ: 25/12/2021 ರ ಶನಿವಾರ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ನಡೆಸಲಾಯಿತು. ಕೋವಿಡ್ ಕಾರಣದಿಂದ ಸರ್ಕಾರದ ನಿರ್ಬಂಧಗಳನ್ನು ಪರಿಗಣಿಸಿ ಸಣ್ಣ ಪ್ರಮಾಣದಲ್ಲಿ ನಡೆಸಲು ಉದ್ದೇಶಿಸಿದ್ದ ಕಾರ್ಯಕ್ರಮವು ಕಚ್ಚೂರು ಶ್ರೀ ನಾಗೇಶ್ವರ ದೇವರ ಆಶೀರ್ವಾದ, ಬಂಧುಗಳ ಉತ್ಸಾಹ ಹಾಗೂ ಸಹಕಾರದಿಂದ ಉತ್ತಮ ರೀತಿಯಲ್ಲಿ ನೆರವೇರಿತು ಎಂದು ತಿಳಿಸಲು ಹರ್ಷಿಸುತ್ತೇವೆ.
ಆರಂಭದಲ್ಲಿ ಶ್ರೀಮತಿ ಭಾರತಿ ಮಾಧವ ಭಂಡಾರಿ ಸಾಗರ ಇವರು ಭಂಡಾರಿಗಳ ಆರಾಧ್ಯ ದೈವ ಕಚ್ಚೂರು ಶ್ರೀ ನಾಗೇಶ್ವರನಿಗೆ ದೀಪ ಬೆಳಗಿಸಿ ಪೂಜೆ ನೆರವೇರಿಸುವುದರ ಮುಖಾಂತರ ಸಂಘದ ಮಹಾಸಭೆ ಪ್ರಾರಂಭಿಸಲಾಯಿತು. ಕುಮಾರಿ ಪ್ರಣತಿ ರಾಜಶೇಖರ ಭಂಡಾರಿ ಯವರ ಪ್ರಾರ್ಥನೆ ಮತ್ತು ಸಂಘದ ಉಪಾಧ್ಯಕ್ಷರಾದ ಶ್ರೀಯುತ ಪ್ರಸಾಧ್ ಭಂಡಾರಿ ಮುನಿಯಾಲು ರವರ ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಮೊದಲಿಗೆ ವಲಯದ ಪ್ರಧಾನ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು 2020 ಮಾರ್ಚ್ ನಿಂದ ಡಿಸೆಂಬರ್ 2021 ರ ವರೆಗೆ ನಡೆದ ಸಂಘದ ಕಾರ್ಯಚಟುವಟಿಗಳ ಬಗ್ಗೆ ಕೂಲಂಕುಷವಾದ ವರದಿ ಮಂಡನೆ ಮಾಡಿದರು. 2020 ಡಿಸೆಂಬರ್ ನಲ್ಲಿ ಸಂಘದ ಹಾಲಿ ಕಾರ್ಯಕಾರಿ ಮಂಡಳಿಯನ್ನು ಬದಲಾಯಿಸಬೇಕಿತ್ತು ಆದರೆ ಕೊರೋನ ಕಾರಣದಿಂದ ಇರುವ ಹಾಲಿ ಕಮಿಟಿಯನ್ನು ಮತ್ತೆ ಒಂದು ವರ್ಷಕ್ಕೆ ಮುಂದುವರಿಸುವುದೆಂದು ಸಭೆ ತೀರ್ಮಾನಿಸಿದ್ದ ಕಾರಣ 2019 ರಲ್ಲಿ ಆಯ್ಕೆಯಾಗಿದ್ದ ಕಮಿಟಿಯನ್ನೇ ಮತ್ತೆ ಒಂದು ವರ್ಷಕ್ಕೆ ಮುಂದುವರಿಸಲಾಗಿತ್ತು. ಈ ಅವಧಿಯಲ್ಲಿ ಒಟ್ಟು 4 ಸಭೆಗಳನ್ನು ಆನ್ ಲೈನ್ ಮುಖಾಂತರ ಆಯ್ದ ಸದಸ್ಯರ ಸಮಕ್ಷಮ ನಡೆಸಲಾಯಿತು ಮತ್ತು 7 ನೇರ ಸಭೆಗಳನ್ನು ನಡೆಸಲಾಯಿತು ಎಂದು ತಿಳಿಸಿದರು. ಈ ಅವಧಿಯಲ್ಲಿ ಶಿರಾಳಕೊಪ್ಪದಲ್ಲಿ ನಡೆದ ಭಂಡಾರಿ ಸಮಾಜ ಸಂಘದ ವಾರ್ಷಿಕ ಮಹಾಸಭೆಯ ಖರ್ಚು ವೆಚ್ಚದ ನಂತರ ಉಳಿಕೆ ಹಣವನ್ನು ವಿದ್ಯಾನಿಧಿಗೆ ನೇರವಾಗಿ ವರ್ಗಾಯಿಸಿದ್ದು, ಅನಾರೋಗ್ಯ ಕಾರಣದಿಂದ ಸಂಘದ ಅಧ್ಯಕ್ಷ ಮಾಧವ ಭಂಡಾರಿ ಸಾಗರ ರು ರಾಜೀನಾಮೆ ನೀಡಿ ಶ್ರೀ ಲಕ್ಷ್ಮಣ ಕರಾವಳಿಯವರು ಗೌರವಾಧ್ಯಕ್ಷರಾಗಿ ನೇಮಕವಾದದ್ದು ಹಾಗೂ ಸಂಘದ ಮೂರು ಪ್ರಮುಖ ಹುದ್ದೆಗಳಾದ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಹುದ್ದೆಗೆ ಆಯ್ಕೆಯಾಗುವ ಸದಸ್ಯರು ಸಂಘದ ಕಾರ್ಯಚಟುವಟಿಕೆ ಸುಸೂತ್ರವಾಗಿ ನಡೆಸಲು ಬೆಂಗಳೂರಿನಲ್ಲಿ ನೆಲೆಸಿರುವವರೇ ಆಯ್ಕೆ ಆದರೆ ಉತ್ತಮ ಇನ್ನು ಮುಂತಾದ ನಿರ್ಣಯ ತೆಗೆದುಕೊಂಡಿದ್ದನ್ನು ಪ್ರಸ್ತಾಪಿಸಿದರು. ಜೊತೆಗೆ ಈ ಅವಧಿಯಲ್ಲಿ ನಮ್ಮನ್ನು ಅಗಲಿದ ಸಂಘದ ಹಿರಿಯರಾದ ವಿ ಸಿ ಶೇಖರ್ ಬೆಂಗಳೂರು , ಮಾಜೀ ಅಧ್ಯಕ್ಷರಾದ ಶೇಖರ್ ಭಂಡಾರಿ ಕಾರ್ಕಳ , ಹಿರಿಯ ಬಂಧು ನರಸಿಂಹ ಭಂಡಾರಿ ಕೊಪ್ಪ ಹಾಗೂ ಬೆಂಗಳೂರಿನ ಕತ್ರಿಗುಪ್ಪೆಯ ಸರೋಜಿನಿ ಭಂಡಾರಿ ಮುಂತಾದ ಸಮಾಜದ ಬಂಧುಗಳನ್ನು ಸ್ಮರಿಸಿಕೊಂಡು, ಸಂಘದ ಸದಸ್ಯರ ಸಂದಿಗ್ಧ ಪರಿಸ್ಥಿಯಲ್ಲಿ ನೆರವಾಗಲು ಗುಂಪು ಇನ್ಸೂರೆನ್ಸ್ ಬಗ್ಗೆ ನಡೆದಿರುವ ಚರ್ಚೆಯನ್ನು ಸಭೆಗೆ ತಿಳಿಸಿ, ಈ ಎಲ್ಲಾ ಕಾರ್ಯಗಳು ನೆರವೇರಿಸಲು ಸಹಕರಿಸಿದ ಸಂಘದ ಎಲ್ಲಾ ಹಿರಿಯರಿಗೆ, ಘಟಕಗಳ ಪ್ರಮುಖರಿಗೆ, ಕಾರ್ಯಕಾರಿ ಮಂಡಳಿಯ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.
ನಂತರ ಕೋಶಾಧಿಕಾರಿ ಶ್ರೀ ಕುಶಲ್ ಭಂಡಾರಿಯವರು ತಮ್ಮ ವಾರ್ಷಿಕ ಲೆಕ್ಕಪತ್ರ ಮಂಡನೆ ಮಾಡಿದರು. ಕೋವಿಡ್ ಅನಿಶ್ಚಿತತೆ ಮತ್ತು ಆದಾಯ ತೆರಿಗೆ ಇಲಾಖೆಯ ಪೋರ್ಟಲ್ ನ ಸಮಸ್ಯೆಯಿಂದಾಗಿ ಸಂಘದ ಲೆಕ್ಕ ಪರಿಶೋಧಕರಿಗೆ ಸೂಕ್ತ ಸಮಯದಲ್ಲಿ ಲೆಕ್ಕ ಪತ್ರ ತಯಾರಿಸಲು ಸಾದ್ಯವಾಗದೆ ಇರುವ ಕಾರಣ ತಾತ್ಕಾಲಿಕ ಲೆಕ್ಕ ಪತ್ರ ಮಂಡಿಸುತ್ತೇನೆ ಮತ್ತು ಅತಿ ಶೀರ್ಘದಲ್ಲಿ ಪೂರ್ಣ ಪ್ರಮಾಣದ ಲೆಕ್ಕ ಪತ್ರವನ್ನು ಮಂಡಿಸುತ್ತೇನೆ ಎಂದು ಸಭೆಗೆ ತಿಳಿಸಿ, ಸಂಘದ ಉತ್ಸವ ನಿಧಿ, ವಿದ್ಯಾನಿಧಿ, ಉಳಿತಾಯ ಖಾತೆ ಇವುಗಳ ಹಾಲಿ ಲಭ್ಯತೆ ಇರುವ ಸಂಪನ್ಮೂಲಗಳ ಮಾಹಿತಿ ನೀಡಿದರು. ಸರದಿಯಂತೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ನಡೆಯುವ ಉತ್ಸವದ ಖರ್ಚಿಗಾಗಿ ಪ್ರತ್ಯೇಕ ಚಾಲ್ತಿ ಖಾತೆ ತೆರೆದಿದ್ದು ವಲಯದ ಬಂಧುಗಳು ತಮಗೆ ಸಾಧ್ಯವಿರುವಷ್ಟು ಹಣವನ್ನು ಆ ಖಾತೆಗೆ ಹಂತ ಹಂತವಾಗ ಜಮಾ ಮಾಡುವಂತೆ ಕೋರಿದರು. ಠೇವಣಿಗಳ ಮೇಲಿನ ಬಡ್ಡಿಗೆ ಪ್ರತೀ ವರ್ಷ 10% ಟಿಡಿಎಸ್ ಕಡಿತಗೊಳ್ಳುತ್ತದೆ ಪ್ರಸಕ್ತ ಸಾಲಿನಲ್ಲಿ ರೂ 14,490 ಕಡಿತಗೊಂಡಿದ್ದು ಕಳೆದ ವರ್ಷ ರೂ 20,759 ಮತ್ತು ರೂ. 21,744 ಕಡಿತಗೊಂಡಿದೆ ಎಂದು ತಿಳಿಸಿದರು. ಕರ್ನಾಟಕ ಬ್ಯಾಕ್ ಮಾರತಹಳ್ಳಿ ಶಾಖೆ, ಕಚ್ಚೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಗಳಲ್ಲಿ ಹಾಲಿ ಇರುವ ನಿರಖು ಠೇವಣೆಗಳ ಮಾಹಿತಿಯನ್ನು ಸಭೆಗೆ ನೀಡಿದರು. 2020 ನ ಸಾಲಿನಲ್ಲಿ 28 ವಿದ್ಯಾರ್ಥಿಗಳಿಗೆ ರೂ 70,000/- ವಿದ್ಯಾರ್ಥಿ ವೇತನ ನೀಡಲಾಗಿದೆ, ಒಟ್ಟು ಸಂಘದ ಎಲ್ಲಾ ನಿಧಿಗಳೂ ಸೇರಿ ಸಂಘದ ಖಾತೆಯಲ್ಲಿ ರೂ 42,54,644 ಸಂಗ್ರಹ ಇದ್ದು, ಇದಕ್ಕೆ ಸಹಕರಿಸಿದ ಸಂಘದ ಎಲ್ಲಾ ಸಹೃದಯರಿಗೆ ಧನ್ಯವಾದಗಳನ್ನು ತಿಳಿಸಿದರು.
ಟಿಡಿಎಸ್ ಹಣವನ್ನು ವಾಪಾಸ್ ತರಿಸಲು ಕ್ರಮ ಕೈಗೊಳ್ಳುವಂತೆ ಬಾಳೆಹೊನ್ನೂರಿನ ಹಿರಿಯಣ್ಣನವರು ಸಲಹೆ ನೀಡಿದರು. ನಂತರ ಸಭಿಕರ ಕರತಾಡನದೊಂದಿಗೆ ಲೆಕ್ಕ ಪತ್ರ ಅನುಮೋದನೆ ಮಾಡಲಾಯಿತು.
ನಂತರ ಶ್ರೀ ಸುಧಾಕರ ಬನ್ನಂಜೆಯವರ ಮೂಲಕ 2021-23 ನೇ ಸಾಲಿನ ಹೊಸ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಶ್ರೀ ಲಕ್ಷ್ಮಣ ಕರಾವಳಿಯವರನ್ನು ಸಂಘದ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿ, ಹೊಸ ಕಮಿಟಿಯ ಸದಸ್ಯರಾಗಿ
1. ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು – ಅಧ್ಯಕ್ಷರು
2. ಶ್ರೀ ಸುಧಾಕರ ಭಂಡಾರಿ ಶಿರಾಳಕೊಪ್ಪ – ಉಪಾದ್ಯಕ್ಷರು (ಘಟಕಗಳ ಪರವಾಗಿ)
3. ಶ್ರೀಮತಿ ಸರಿತಾ ಅರುಣ್ – ಉಪಾದ್ಯಕ್ಷರು (ಮಹಿಳಾ ಪ್ರತಿನಿಧಿ)
4. ಶ್ರೀ ರಾಜಶೇಖರ ಭಂಡಾರಿ – ಉಪಾದ್ಯಕ್ಷರು
5. ಶ್ರೀ ಕುಶಲ್ ಭಂಡಾರಿ – ಪ್ರಧಾನ ಕಾರ್ಯದರ್ಶಿಗಳು
6. ಶ್ರೀಮತಿ ಅಕ್ಷತಾ ಸದಾನಂದ – ಕೋಶಾಧಿಕಾರಿಗಳು
7. ಶ್ರೀ ಅರುಣ್ ಭಂಡಾರಿ ಕೊಪ್ಪ – ಸಂಘಟನಾ ಕಾರ್ಯದರ್ಶಿ
8. ಕುಮಾರಿ ಶೃತಿಕಾ ಭಂಡಾರಿ – ಜೊತೆ ಸಂಘಟನಾ ಕಾರ್ಯದರ್ಶಿ ಹಾಗೂ 14 ಜನ ಕಾರ್ಯಕಾರಿ ಮಂಡಳಿಯನ್ನು ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರು
ಅಚ್ಲಾಡಿ ಮಾಧವ ಭಂಡಾರಿ
ಸುನೀಲ್ ರಾಜ್ ಬಾಳೆಹೊನ್ನುಾರು
ಪ್ರಕಾಶ್ ಭಂಡಾರಿ, ಕುತ್ತೆತ್ತುಾರು
ರತ್ನಾಕರ ಭಂಡಾರಿ
ಸದಾನಂದ ಭಂಡಾರಿ
ಜಗದೀಶ್ ಭಂಡಾರಿ ಕುರುಬರಹಳ್ಳಿ
ರವಿನಾಥ ಭಂಡಾರಿ
ಪ್ರದೀಪ್ ಪಲಿಮಾರು
ಸಂದೇಶ್ ಭಂಡಾರಿ ಬೆಳ್ತಂಗಡಿ
ಕಾರ್ತಿಕ್ ಭಂಡಾರಿ ಮಲ್ಪೆ
ಆದರ್ಶ್ ಭಂಡಾರಿ
ಗಣೇಶ್ ಭಂಡಾರಿ ಬಳ್ಕುಂಜೆ
ವಿಶ್ವನಾಥ ಭಂಡಾರಿ
ಕರುಣಾಕರ್ ಭಂಡಾರಿ ವಿದ್ಯಾರಣ್ಯಪುರ
ಸಂತೋಷ್ ಭಂಡಾರಿ ಅಳಪೆ
ಮದನ್ ಭಂಡಾರಿ ಬಾಳೆಹೊನ್ನೂರು
ನಟರಾಜ್
ರವಿ ಭಂಡಾರಿ
ಈ ಕಮಿಟಿಗೆ ಕಾಲಕಾಲಕ್ಕೆ ಸಹಕರಿಸಲು ಎಲ್ಲಾ ಮಾಜಿ ಅಧ್ಯಕ್ಷರುಗಳನ್ನು ಸಲಹಾ ಸಮಿತಿಯಲ್ಲಿ ನೇಮಿಸಲಾಯಿತು.
ಇನ್ನು ಮಂದೆ ಕಮಿಟಿಗೆ ಆಯ್ಕೆಯಾಗುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಎರಡು ವರ್ಷಗಳ ಅವಧಿಯನ್ನು ಸಂಪೂರ್ಣ ಗೊಳಿಸಬೇಕು, ಹಾಗೂ ಕ್ರೀಯಾಶೀಲರಾಗಿ ಸಂಘದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಸೂಚಿಸಲಾಯಿತು.
ಸಂಘದ ಉಪಾಧ್ಯಕ್ಷರಾಗಿದ್ದ ಶ್ರೀ ಮೋಹನ ಭಂಡಾರಿ ಬಾಳೆಹೊನ್ನೂರು ಇವರು ಸಭೆಯಲ್ಲಿ ಕಚ್ಚೂರು ದೇವಸ್ಥಾನ ದ ಆಡಳಿತ ಮಂಡಳಿಯಲ್ಲಿ ಬೆಂಗಳೂರು ಸಂಘಕ್ಕೆ ಪ್ರಾತಿನಿಧ್ಯ ನೀಡದಿರುವ ಬಗ್ಗೆ ಆಕ್ಷೇಪಿಸಿ, ದೇವಸ್ಥಾನದ ಜೀರ್ಣೋದ್ಧಾರದಿಂದ ಆರಂಭಿಸಿ ಈ ವರೆಗೂ ನಮ್ಮ ವಲಯದ ಹಲವು ಹಿರಿಯರು , ಘಟಕದ ಬಂಧುಗಳು ತನು ಮನ ಧನ ದ ಮೂಲಕ ಸೇವೆ ಸಲ್ಲಿಸಿದ್ದಾರೆ. ಆಡಳಿತ ಮಂಡಳಿಯನ್ನು ನವೀಕರಿಸುವಾಗ ಬೆಂಗಳೂರು ಸಂಘಕ್ಕೆ ಆದ್ಯತೆ ಯಾಕೆ ಕೊಡುತ್ತಿಲ್ಲ ಎನ್ನುವುದರ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು.
ಇದರ ಬಗ್ಗೆ ಯಾಕೆ ನೀವು ಯಾರೂ ಗಮನ ಹರಿಸುತ್ತಿಲ್ಲ ಎಂದು ಸಂಘದ ಹಿರಿಯರಿಗೆ ಪ್ರಶ್ನೆ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಭೆಯ ಹಿರಿಯರು ದೇವಸ್ಥಾನದ ಸಭೆಯಲ್ಲಿ ಚರ್ಚೆಯ ಮೂಲಕ ಅಂಗೀಕಾರವಾಗಬೇಕಿದ್ದ ಬಹುತೇಕ ನಿರ್ಣಯಗಳು ಪೂರ್ವಭಾವಿಯಾಗಿ ನಿರ್ಧರಿಸಿ ಸಭೆಯಲ್ಲಿ ಘೋಷಣೆ ಮಾಡಿ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗುತ್ತಿತ್ತು ಇದರಿಂದ ಮನನೊಂದು ಕಮಿಟಿಗೆ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದರು. ಹಿರಿಯಣ್ಣ ಬಾಳೆಹೊನ್ನೂರು ರವರೂ ಸಹ ಅವರಿಗೆ ಕಮಿಟಿಯಿಂದ ವೈಯಕ್ತಿಕವಾಗಿ ಆದ ಅನುಭವಗಳನ್ನು ಹಂಚಿಕೊಂಡು ನೀವು ಕೆಲವರು ರಾಜೀನಾಮೆ ಕೊಟ್ಟು ಹೊರಗೆ ಬಂದಿದ್ದೀರಾ ಆದರೆ ನಾನು ರಾಜೀನಾಮೆ ಕೊಡದೇ ಹೊರಬಂದ ಹಾಗಿದೆ ನಮಗೇನೂ ಅಲ್ಲಿಯ ಮಾಹಿತಿಯೂ ದೊರೆಯುವುದಿಲ್ಲ ಹಾಗೂ ಯಾವ ಕಾರ್ಯಚಟುವಟಿಗೂ ನಮ್ಮನ್ನು ಅವರು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದರು. ನಮಗೆ ಅಲ್ಲಿ ಇರುವ ವ್ಯಕ್ತಿಗಳು ಮುಖ್ಯ ಅಲ್ಲ , ವ್ಯಕ್ತಿಗಳು ಬರುತ್ತಾರೆ ಮತ್ತು ಹೋಗುತ್ತಾರೆ ಆದರೆ ದೇವಸ್ಥಾನ ಮತ್ತು ಸಂಸ್ಥೆಗಳು ನಿರಂತರವಾಗಿ ಇರುತ್ತದೆ. ಕಚ್ಚೂರು ನಾಗೇಶ್ವರನ ಮೇಲಿನ ಭಕ್ತಿಗಾಗಿ ಯಾವುದೇ ಅವಸರದ ತೀರ್ಮಾನ ಕೈಗೊಳ್ಳದೇ ಶಾಂತಿಯುತವಾಗಿ ಮುಂದುವರಿಯುವಂತೆ ಸಲಹೆ ನೀಡಿದರು.
ಈ ವಿಷಯದಲ್ಲಿ ಮಾತನಾಡಿದ ಎಲ್ಲಾ ಸದಸ್ಯರು ಕಚ್ಚೂರು ದೇವಸ್ಥಾನ ಕಮಿಟಿ ಮತ್ತು ಭಂಡಾರಿ ಮಹಾಮಂಡಲ ಕಮಿಟಿಯ ದೋರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು . ಇದಕ್ಕೆ ಪೂರಕವಾಗಿ ಬಾಳೆಹೊನ್ನೂರು ಘಟಕದ ಅಧ್ಯಕ್ಷರಾದ ಶ್ರೀ ಸುನೀಲ್ ರಾಜ್ ರವರು ಇದಕ್ಕೆ ಹಿರಿಯರು ಘಟಕಗಳ ಪ್ರಮುಖರನ್ನು ಒಳಗೊಂಡ ಒಂದು ಕಮಿಟಿ ಮಾಡಿ ನಾವೆಲ್ಲಾ ಹೋಗಿ ಚರ್ಚಿಸುವ ಎಂದು ಸಲಹೆ ನೀಡಿದರು. ಇದಕ್ಕೆ ಸಭೆ ಅನುಮೋಧನೆ ನೀಡಿತು.
ಹಾಗೂ ಇನ್ನು ಮುಂದಿನ ದಿನಗಳಲ್ಲಿ ಘಟಕಗಳ ಮುಖಾಂತರ ಹೋಗುತ್ತಿರುವ ಕಾಣಿಕೆಗಳನ್ನು ವಲಯದ ಕೆಂದ್ರ ಕಛೇರಿಯ ಮುಖಾಂತರ ಕಳುಹಿಸುವಂತೆ ಸಲಹೆ ನೀಡಿದರು.
ಅದೇ ರೀತಿಯಲ್ಲಿ ದೇವಸ್ಥಾನ ಕಮಿಟಿಯಿಂದ ನಿಮ್ಮ ವಲಯದಲ್ಲಿ ಉತ್ಸವ ನಿಧಿಗಾಗಿ ಎಷ್ಟು ಸಂಫನ್ಮೂಲ ಇದೆ ಅದರ ಬಗ್ಗೆ ಮಾಹಿತಿ ನೀಡಿ ಎಂದು ಪತ್ರ ಬಂದಿರುವುದನ್ನು ಸಭೆಯ ಮುಂದೆ ಓದಿ ಹೇಳಲಾಯಿತು. ಅದಕ್ಕೆ ಪ್ರತಿಕ್ರಿಯಿಸಿದ ಸಭೆ ಸಂಘದ ನೂತನ ಸಮಿತಿಯು ಈ ಬಗ್ಗೆ ಮುಂದಿನ ದಿನದಲ್ಲಿ ಚರ್ಚಿಸಿ ಪ್ರತಿಕ್ರಿಯೆ ನೀಡಲು ತೀರ್ಮಾನಿಸಿತು.
ಮಧ್ಯಾಹ್ನದ ಭೋಜನ ನಂತರ ನಡೆದ ಭಂಡಾರಿ ಸ್ನೇಹಕೂಟ ಸಮಾರಂಭದಲ್ಲಿ ಡಾ|| ಉಷಾ ತ್ಯಾಗರಾಜ್ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು, ಆಹ್ವಾನಿತರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಯಾಡಿದ ಸಂಘದ ಮಾಜಿ ಅಧ್ಯಕ್ಷರಾಗಿದ್ದ ಶ್ರೀ ಸುಧಾಕರ ಬನ್ನಂಜೆ ಯವರು, ಸಂಘ ಬೆಳದು ಬಂದ ರೀತಿ, ಮಾಜಿ ಅಧ್ಯಕ್ಷರುಗಳು ಸಂಘದ ಏಳಿಗೆಗಾಗಿ ಯಾವ ರೀತಿ ಶ್ರಮಿಸಿದರು, ವಿದ್ಯಾನಿಧಿ ಮತ್ತು ಉತ್ಸವ ನಿಧಿ ಕ್ರೋಢೀಕರಣ ಮಾಡಿದರೀತಿ. ವಲಯದ ಎಲ್ಲಾ ಜಿಲ್ಲೆಗಳಿಗೆ ಹೋಗಿ ಸಂಘದ ಸದಸ್ಯರ ನೋಂದಣಿ ಮಾಡಿಸಿಕೊಂಡು ಬರಲು ಪಟ್ಟ ಶ್ರಮ ಏನೆಂದು ತಿಳಿಸಿದರು.
ನಂತರ ಮಾತನಾಡಿದ ಮುಖ್ಯ ಅತಿಥಿ ಡಾ|| ಉಷಾ ತ್ಯಾಗರಾಜ್ ರವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಡಿ, ಶಿಕ್ಷಣದಿಂದಲೇ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸಮಾಜದ ಪ್ರತಿಭಾನ್ವಿತರಾದ ಶ್ರೀ ಡಾ|| ಅನಿಶ್ ಬೆಂಗಳೂರು, ಡಾ|| ನಿಧಿ ರಮೇಶ ಭಂಡಾರಿ ಶಿರಾಳಕೊಪ್ಪ ಇವರನ್ನು ಅವರ ಈ ಸಾಧನೆ ಸಮಾಜಕ್ಕೆ ಮಾದರಿ ಎಂದು ಹಾಗೂ ಕುಲಕಸುಬುದಾರರಾಗಿ ಸುಮಾರು 40 ವರ್ಷದಿಂದ ಸೇವೆ ಸಲ್ಲಿಸಿಕೊಂಡು ಬರುತ್ತಿರುವ ಶ್ರೀ ಗೋಪಾಲ ಭಂಡಾರಿ ಶಿರಾಳಕೊಪ್ಪ ಇವರನ್ನು ಅವರ ಜೀವಮಾನದ ಸಾಧನೆಗಾಗಿ ಜೊತೆಗೆ 2019-20 ನ ಸಾಲಿನಲ್ಲಿ ಹತ್ತನೇ ತರಗತಿಯಲ್ಲಿ 625 ಕ್ಕೆ 621 ಅಂಕ ಗಳಿಸಿ ಉತ್ತೀರ್ಣಳಾಗಿದ್ದ ಕುಮಾರಿ ವೈಷ್ಣವಿ ಸುಧಾಕರ ಭಂಡಾರಿ ಶಿರಾಳಕೊಪ್ಪ ಇವರ ವಿಶೇಷ ಸಾಧನೆಗಾಗಿ ಸನ್ಮಾನಿಸಲಾಯಿತು.
ಇಂದಿನ ಸಭೆಗೆ ಹಾಜರಿರುವ ಎಲ್ಲರಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಿದ ಸಂಘದ ಮಾಜೀ ಅಧ್ಯಕ್ಷರು ಮತ್ತು ವಕೀಲರಾದ ಉಮೇಶ್ ರವರ ಅತ್ತೆ ಮತ್ತು ಮಾವ ದಿವಂಗತ ಬಿರ್ತಿ ಕುಸುಮ ಭಂಡಾರಿ ಮತ್ತು ದಿವಂಗತ ಬೈಕಾಡಿ ಗೋಪಾಲ ಭಂಡಾರಿ ಯವರ ಸ್ಮರಣಾರ್ಥ ಮದ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಶ್ರೀಮತಿ ಬಿಂದು ಉಮೇಶ್ ಮತ್ತು ಉಮೇಶ್ ದಂಪತಿಗಳು ಪ್ರಾಯೋಜಿಸಿದರು. ದಂಪತಿಗೆ ಸಂಘವು ಸಭೆಯಲ್ಲಿ ಅಭಿನಂದಿಸಿ ಗೌರವಿಸಿತು .
ನೂತನ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು ರವರು ಮಾತನಾಡಿ ಎಲ್ಲ ಸದಸ್ಯರ ಸಹಕಾರ ಬಯಸುವುದರ ಜೊತೆಗೆ ತಮ್ಮ ಕಾಲಾವಧಿಯಲ್ಲಿ ವಿದ್ಯಾನಿಧಿಯ ಕ್ರೋಢಿಕರಣ ಮತ್ತು ಸಂಘಟನೆಯನ್ನು ಇನ್ನೂ ಹೆಚ್ಚು ಮಾಡುವುದು ನನ್ನ ಮುಖ್ಯ ಧ್ಯೇಯ ಎಂದು ತಿಳಿಸಿದರು. ಹಾಜರಿರುವ ಎಲ್ಲ ಸದಸ್ಯರು ಸದಸ್ಯತ್ವ ನೋಂದಣಿ ಮಾಡಿಸುವಂತೆ ಮತ್ತು ಎಲ್ಲ ಬಂಧುಗಳು ತಮ್ಮ ವಾಟ್ಸಾಪ್ ನಂಬರ್ ಕೊಟ್ಟು ಸಂಘದ ಕಾರ್ಯಗಳಲ್ಲಿ ಸಕ್ರೀಯರಾಗಿರುವಂತೆ ಮನವಿ ಮಾಡಿಕೊಂಡರು.
ಗೌರಾವಾಧ್ಯಕ್ಷರು ತಮ್ಮ ಅಧ್ಯಕ್ಷರ ನುಡಿಯಲ್ಲಿ ಸಂಘದ ಬೆಳವಣಿಗೆಗೆ ಎಲ್ಲಾ ಸದಸ್ಯರ ಸಹಕಾರ ಅಗತ್ಯ, ಸಂಘದ ವಿದ್ಯಾರ್ಥಿ ವೇತನ ಪಡೆದು ಈಗ ಉದ್ಯೋಗದಲ್ಲಿರುವ ಸಂಘದ ಬಂಧುಗಳು ವಿದ್ಯಾನಿಧಿಗೆ ಧನ ಸಹಾಯ ಮಾಡಿ ವಿದ್ಯಾರ್ಥಿ ವೇತನದ ಮೊತ್ತವನ್ನು ಹೆಚ್ಚಿಸುವಲ್ಲಿ ಸಹಕರಿಸುವಂತೆ ಕೋರಿದರು. ನಾವು ಘಟಕಗಳ ವಿದ್ಯಾರ್ಥಿಗಳಿಗೇ ವಿದ್ಯಾರ್ಥಿ ವೇತನ ನೀಡುತ್ತಿರುವುದು ಬೆಂಗಳೂರಿನ ಯಾವ ಫಲಾನುಭವಿಗಳೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದಿಲ್ಲ ಆದರೂ ಘಟಕಗಳು ಇದರ ಬಗ್ಗೆ ಸರಿಯಾದ ಗಮನ ಹರಿಸುತ್ತಿಲ್ಲ, ಸರಿಯಾದ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಮಾಜದ ಬಂಧುಗಳ ಮಕ್ಕಳಿಗೆ ನೇರವಾಗಿ ಸಿಗುತ್ತಿರುವ ಈ ಸೌಲಭ್ಯ ಸರಿಯಾದ ವ್ಯಕ್ತಿಗೆ ಸಿಗುವಂತೆ ಹಾಗೂ ವಿದ್ಯಾನಿಧಿಯನ್ನು ಹೆಚ್ಚಿಸುವಲ್ಲಿ ಸಹಕರಿಸುವಂತೆ ಎಂದು ಕೋರಿದರು. ಸೊರಬದ ಬಾಬು ಭಂಡಾರಿಯವರು ಸಂಘದಿಂದ ವಿದ್ಯಾರ್ಥಿ ವೇತನ ಪಡೆದು ನನ್ನ ಮಗಳು ಈಗ ಬಿ.ಎಡ್ ಮುಗಿಸಿದ್ದಾಳೆ ನಮಗೆ ಇನ್ನು ಮುಂದೆ ವಿದ್ಯಾರ್ಥಿ ವೇತನ ಬೇಡ, ನನ್ನ ಮಗಳಿಗೆ ಉದ್ಯೋಗ ದೊರೆತ ತಕ್ಷಣ ನಾವೂ ಕೂಡ ವಿದ್ಯಾನಿಧಿಗೆ ದೇಣಿಗೆ ನೀಡುತ್ತೇವೆ ಎಂದು ಬರೆದ ಪತ್ರವನ್ನು ಉಲ್ಲೇಖಿಸಿ ಈ ರೀತಿಯ ಮನೋಭಾವನೆ ಎಲ್ಲಾ ಬಂಧುಗಳಲ್ಲೂ ಬರಲಿ ಎಂದು ಕೇಳಿಕೊಂಡರು.
ಕಾರ್ಯಕ್ರಮದ ಕೊನೆಯಲ್ಲಿ ನಡೆದ ಮನರಂಜನಾ ಕಾರ್ಯಕ್ರಮದಲ್ಲಿ ಪುನೀತ್ ನಮನದ ಮೂಲಕ ರಾಜಶೇಖರ್ ,ಮತ್ತು ಕುಮಾರಿ ತನಿಷ್ಕಾ ಜಗದೀಶ್ ರವರು ಹಾಡು ಹಾಡಿ ಪುನೀತ್ ರಾಜ್ ಕುಮಾರ್ ರವರಿಗೆ ನಮನ ಸಲ್ಲಿಸಿದರು ಶಶಿಕಲಾ ರಮೇಶ್ , ಆರುಷ್ , ಪ್ರದೀಪ್ ಪಲಿಮಾರ್ ರವರು ಕೂಡಾ ಹಾಡು ಹಾಡಿ ಹಾಗೂ ಅದಿತಿ ಎಸ್ ಭಂಡಾರಿ ಶಿರಾಳಕೊಪ್ಪ ನೃತ್ಯದ ಮೂಲಕ ಜನರ ಮನರಂಜಿಸಿದರು. ನಂತರ ಸಂಗೀತ ಕುರ್ಚಿ ಮತ್ತು ಹೌಸಿ ಹೌಸಿ ಸ್ಪರ್ಧೆ ನಡೆಯಿತು.
ಕಾರ್ಯಕ್ರಮದ ಮುದ್ರಿತ ಪ್ರಸಾರವನ್ನು ವೀಕ್ಷಿಸಲು ಈ ಮೇಲಿನ ಲಿಂಕ್ ಕ್ಲಿಕ್ ಮಾಡಿ
ಸ್ಪರ್ಧೆಯಲ್ಲಿ ಭಾಗವಹಿಸಿದ ಬಂಧುಗಳಿಗೆ ಬಹುಮಾನ ವಿತರಣೆ, ನಿರ್ಗಮಿತ ಕಾರ್ಯದರ್ಶಿ ಶ್ರೀ ಸುಧಾಕರ ಭಂಢಾರಿಯವರ ವಂದನಾರ್ಪಣೆಯೊಂಧಿಗೆ ಕಾರ್ಯಕ್ರಮವನ್ನು ಮುಖ್ತಾಯಗೊಳಿಸಲಾಯಿತು.
ವರದಿ : ಸುಧಾಕರ ಆರ್ ಭಂಡಾರಿ,ಪ್ರಧಾನ ಕಾರ್ಯದರ್ಶಿಗಳು,ಭಸಸ. ಬೆಂಗಳೂರು