November 21, 2024
AGM 21

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹಕೂಟ ಡಿಸೆಂಬರ್ 27 ರ ಮಂಗಳವಾರ ಬಾಳೆಹೊನ್ನೂರಿನ ವಿದ್ಯಾ ಗಣಪತಿ ಸಮುದಾಯ ಭವನದ ದಿವಂಗತ ಗೋಪಾಲ ಭಂಡಾರಿ ವೇದಿಕೆಯಲ್ಲಿ ಜರಗಿತು. ಭಂಡಾರಿ ಸಮಾಜ ಸಂಘ ಬಾಳೆಹೂನ್ನೂರು ಘಟಕವು ಈ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿತ್ತು.

ಆರಂಭದಲ್ಲಿ ಸಮಾಜದ ಆರಾಧ್ಯ ದೇವರಾದ ಕಚ್ಚೂರು ಶ್ರೀ ನಾಗೇಶ್ವರನಿಗೆ ಮಹಿಳೆಯರಿಂದ ಪ್ರಾರ್ಥಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ನಂತರ ಸಭಾ ಕಾರ್ಯಕ್ರಮ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಅಧ್ಯಕ್ಷರಾಗಿರುವ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲುರವರ ಅಧ್ಯಕ್ಷತೆಯಲ್ಲಿ ನೆರವೇರಿತು. ಶ್ರೀಮತಿ ಮಾಲತಿ ಅರುಣ್ ಭಂಡಾರಿಯವರು ಪ್ರಾರ್ಥನೆ ಮಾಡಿದರು. ಭಂಡಾರಿ ಸಮಾಜ ಸಂಘ ಬಾಳೆಹೂನ್ನೂರು ಘಟಕದ ಅಧ್ಯಕ್ಷರಾಗಿರುವ ಶ್ರೀ ಸುನಿಲ್ ರಾಜ್ ಭಂಡಾರಿಯವರು ವೇದಿಕೆಯಲ್ಲಿದ್ದ ಅತಿಥಿಗಳನ್ನು ,ಆಗಮಿಸಿರುವ ಸಮಾಜ ಬಾಂಧವರನ್ನು ಸ್ವಾಗತಿಸಿದರು.

ಬಳಿಕ ಘಟಕದ ಹಿರಿಯ ಪದಾಧಿಕಾರಿಯಾಗಿರುವ ಶ್ರೀ ಹಿರಿಯಣ್ಣ ಭಂಡಾರಿ ಬಾಳೆಹೊನ್ನೂರು ಇವರು ಪ್ರಾಸ್ತಾವಿಕವಾಗಿ ಭಾಷಣ ಮಾಡಿ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಂದ ಬದುಕು ಕಟ್ಟಿಕೊಳ್ಳಲು ಚದುರಿ ಹೋಗಿರುವ ಭಂಡಾರಿಗಳು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಡಿಯಲ್ಲಿ 5 ವಲಯಗಳಾಗಿ ಒಟ್ಟಾಗಿದ್ದೇವೆ.ಅದರಲ್ಲಿ ಒಂದು ವಲಯ ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಎಂದರು. ಈ ವಲಯದ ಈ ವರ್ಷದ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟದ ಆಯೋಜನೆಯು ನಮ್ಮ ಘಟಕದ ಜವಾಬ್ದಾರಿಗೆ ಬಂದಿದ್ದು ಆ ನಿಟ್ಟಿನಲ್ಲಿ ಇಂದು ನಾವೆಲ್ಲಾ ಸೇರಿದ್ದೇವೆ ಎಂದರು.

ಮೊದಲಿಗೆ ಮುಖ್ಯ ಅತಿಥಿಯಾಗಿರುವ ಉಡುಪಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಪೂರ್ಣಿಮಾ ಜಯ ಭಂಡಾರಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು . ನಂತರ ಅವರು ಮಾತನಾಡಿ, ನಾವೆಲ್ಲರೂ ಕೆಲ ಜಾತಿಯವರು ಎಂಬ ಕೀಳರಿಮೆಯನ್ನು ಮನಸ್ಸಿನಿಂದ ತೆಗೆದು ಹಾಕಬೇಕು, ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು, ಶಿಕ್ಷಣ ಮೌಲ್ಯಕ್ಕಿಂತ ಮಾನವೀಯ ಮೌಲ್ಯ ಅತೀ ದೊಡ್ಡದು , ಮಾನವೀಯ ಮೌಲ್ಯವನ್ನು ನೈತಿಕ ಮೌಲ್ಯವನ್ನು ತನ್ನಲ್ಲಿ ಅಳವಡಿಸಿಕೊಂಡಿರುವ ವ್ಯಕ್ತಿ ತನ್ನ ತಂದೆ ತಾಯಿಗೆ ,ಗುರು ಹಿರಿಯರಿಗೆ ಅದೇ ರೀತಿ ತನ್ನ ದೇಶದ ಬಗ್ಗೆ ಗೌರವ ಬೆಳೆಸಿಕೊಳ್ಳುತ್ತಾರೆ ಎಂದರು.

ನಂತರ ಮಾತನಾಡಿದ ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಾಜೀ ಅಧ್ಯಕ್ಷ ಶ್ರೀ ಸುಧಾಕರ ಬನ್ನಂಜೆಯವರು ಕಾರ್ಯಕ್ರಮದ ವೇದಿಕೆಯ ಹೆಸರನ್ನು ದಿವಂಗತ ಗೋಪಾಲ ಭಂಡಾರಿ ವೇದಿಕೆ  ಎಂದು ಇಟ್ಟಿರುವುದನ್ನು ಉಲ್ಲೇಖಿಸಿ, ನಮ್ಮಈ ಸ್ವಲ್ಪ ಸಂಖ್ಯಾತ ಸಮಾಜದಲ್ಲಿ ಹುಟ್ಟಿ , ರಾಜಕೀಯದಲ್ಲಿ ತೊಡಗಿ ಒಬ್ಬ ಶಾಸಕನಾಗುವುದು ಸುಲಭದ ಮಾತಲ್ಲ, ಅದರಲ್ಲೂ ರಾಜಕೀಯದಲ್ಲಿ ಶುದ್ಧಹಸ್ತರಾಗಿ ಬದುಕುವುದಂತೂ ತುಂಬಾ ಕಷ್ಟ, ಯಾವುದೇ ಪರಿಸ್ಥಿಯಲ್ಲಿಯೂ ಪ್ರಾಮಾಣಿಕತೆಯನ್ನು ಬಿಟ್ಟುಕೊಡದೆ ಯಾವುದೇ ಲಾಬಿಗೂ ಬಗ್ಗದೆ ಜೀವನ ಮಾಡಿದವರ ಹೆಸರನ್ನು ಈ ವೇದಿಕೆಗೆ ಇಟ್ಟಿರುವುದಕ್ಕೆ ಭಂಡಾರಿ ಸಮಾಜ ಸಂಘ ಬಾಳೆಹೊನ್ನೂರು ಘಟಕಕ್ಕೆ ಅಭಿನಂದನೆ ಸಲ್ಲಿಸಿದರು.

ಈಗ ಎಲ್ಲೆಡೆ ಮೀಸಲಾತಿ ಯದ್ದೇ ಸದ್ದು. ಮೀಸಲಾತಿ ಎಂಬುದು ಈಗ ಪ್ರಹಸನವಾಗುತ್ತಿದೆ. ಕರ್ನಾಟಕದಲ್ಲಿ ಸವಿತಾ ಸಮಾಜದ ಜನಸಂಖ್ಯೆ ನಾಲ್ಕು ಲಕ್ಷ ಇದೆ.ಕರಾವಳಿ ಯ ಭಂಡಾರಿ ಗಳ ಸಂಖ್ಯೆ ಸುಮಾರು ನಲವತ್ತು ಸಾವಿರ. ಇವರೆಲ್ಲರೂ 2Aಅಡಿಯಲ್ಲಿ ಬರುತ್ತಾರೆ. ಇದರಲ್ಲಿ ಕುರುಬರು,ಈಡಿಗರು ಮುಂತಾದ ಅಧಿಕ ಜನಸಂಖ್ಯೆ ಉಳ್ಳ ಜಾತಿಗಳವರೂ ಬರುತ್ತಾರೆ. ಅತೀ ಕಡಿಮೆ ಜನಸಂಖ್ಯೆ ಇರುವ ಭಂಡಾರಿ ಗಳಿಗೆ ಇದರಿಂದ ಉಪಯೋಗ ಇಲ್ಲವಾಗಿದೆ.1ಎA ಗೆ ಇವರ ಸೇರಿಸಿದರೆ ಇವರಿಗೆ ಉಪಯೋಗ ವಾಗಬಹುದು. ಅದೂ ಅಲ್ಲದೆ ಅಂಬಾನಿ ಅವರು ದೇಶದಾದ್ಯಂತ ಸೆಲೂನ್‌ಗಳ ಆರಂಭಿಸುತಿದ್ದಾರೆ.ಈ ಐಷಾರಾಮಿ ಸೆಲೂನ್ ಗಳಿಂದ ಬಡ ಕ್ಷೌರಿಕರ ಸಣ್ಣ ಅಂಗಡಿಗಳಿಗೆ ಬಲವಾದ ಹೊಡೆತ ಬೀಳುವುದು ಶತ ಸಿದ್ದ.ಈಗಾಗಲೇ ಭಂಡಾರಿ ಗಳು ಈ ವೃತ್ತಿ ಯಿಂದ ಶೇಕಡಾ ಎಂಬತ್ತರಷ್ಟು ವಿಮುಖರಾಗಿದ್ದಾರೆ.ಇದು ಲಾಭ ದಾಯಕ ಉದ್ಯಮವಾಗಿ ಇತರ ಜಾತಿಗಳು ಇದನ್ನು ಅಪ್ಪಿ ಕೊಂಡಾಗ,ಈ ವೃತ್ತಿ ನಿರತರು ಶೋಷಣೆ ಗೆ ಒಳಗಾಗಿ ತಾಳ್ಮೆ ದೃಡತೆಯಿಂದ ಬದುಕಿದವರು ಈಗ ಈ ವೃತ್ತಿ ತ್ಯಜಿಸುವುದು ಕಾಲದ ದುರಂತ.. ಅಂದು ಈ ವೃತ್ತಿ ಜಾತಿ ಆಗಿತ್ತು. ಇಂದು ಈ ವೃತ್ತಿ ದೊಡ್ಡ ವ್ಯವಹಾರ ಆಗಿದೆ.ನೊಂದು ಬೆಂದವರ ಕಣ್ಣೀರು ಒರಸುವ ಕೈಗಳಿಗೆ ಕೊರತೆ ಆಗಿದೆ.ಈಗ ಈ ಸಮಾಜ ವಿದ್ಯೆಯತ್ತ ಮುಖ ಮಾಡಿದ್ದು ಯಶಸ್ಸಿನತ್ತ ದಾಪುಗಾಲು ಹಾಕುತ್ತಿರುವುದು ಕಂಡು ಬರುತ್ತದೆ. ಡಾಕ್ಟರ್ ಇಂಜಿನಿಯರ್ ಗಳ ಸಂಖ್ಯೆ ‌ಹೆಚ್ಚುತ್ತಿದೆ.ಕರ್ನಾಟಕದಲ್ಲಿ ಸಂಪೂರ್ಣ ಶಿಕ್ಷಣ ವಂತರ ಮೊದಲ ಜಾತಿ ಆಗುವ ಸಾಧ್ಯತೆ ಹೆಚ್ಚಿದೆ.ಆಯುಷ್ಕರ್ಮ ಆಯುರ್ವೇದ ಪರಿಣತಿ ಹೊಂದಿದ ಈ ಜನಾಂಗ ದೇವಸ್ಥಾನ ಗಳ ಭಂಡಾರದ ಸಂರಕ್ಷಣೆ ಸಹ ಮಾಡುತಿದ್ದರು. ದ್ರಾವಿಡರ ಕುಲ ಪುರೋಹಿತರೂ ಆಗಿದ್ದಾರೆ.ಕಾಲದ ಹೊಡೆತಕ್ಕೆ ಸಿಕ್ಕಿ ಎಲ್ಲಾ ಅಧಿಕಾರ ಕಳೆದುಕೊಂಡರೂ ಇದೀಗ ವಿದ್ಯೆಯ ಬಲದಿಂದ ತಲೆಎತ್ತಿ ನಿಂತಿರುವುದು ಕಾಣುವಾಗ ಸಂತಸ ಆಗುತ್ತದೆ ಎಂದರು .

ನಂತರ ಮಾತನಾಡಿದ ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿಯವರು ನಮ್ಮ ಸಮಾಜದ ಪ್ರತಿಯೊಂದು ಕುಟುಂಬವನ್ನೂ ಸಮಾನತೆಯಿಂದ ನೋಡುವ ಮನೋಭಾವನೆಯನ್ನು ನಾವು ಬೆಳೆಸಿಕೊಳ್ಳಬೇಕು ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆತಾಗ ನಮ್ಮ ಸಮಾಜವು ವಿದ್ಯಾವಂತ ಸಮಾಜವಾಗುತ್ತದೆ ಆ ಮೂಲಕ ವಿವಿಧ ಕ್ಷೇತ್ರ ದಲ್ಲಿ ಗುರುತಿಸಿಕೊಂಡು ಇತರ ಸಮಾಜದ ಜೊತೆಗೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯ ವಿದ್ಯೆಗೆ ಅತೀ ಹೆಚ್ಚಿನ ಮಹತ್ವ ನೀಡುತ್ತಿದ್ದು ಕಳೆದ 22 ವರ್ಷಗಳಿಂದ ನಿರಂತರ ವಿದ್ಯಾರ್ಥಿ ವೇತನ ಮಲೆನಾಡಿನ ಮಕ್ಕಳಿಗೆ ಅತೀ ಹೆಚ್ಚು ನೀಡಿದ್ದೇವೆ ಎಂದರು, ವಿದ್ಯಾರ್ಥಿ ವೇತನದ ನಿಧಿಯು ಅರ್ಹ ಬಡ ಮಕ್ಕಳನ್ನು ಇನ್ನಷ್ಟು ಹೆಚ್ಚು ತಲುಪಿಸಲು ವಿದ್ಯಾ ನಿಧಿಯ ಮೊತ್ತವನ್ನು ಅಧಿಕಗೊಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ವಿದ್ಯಾರ್ಥಿ ವೇತನ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.

ಬಳಿಕ ಸಂಘದ ಮಾಜೀ ಅಧ್ಯಕ್ಷರಾದ ವಕೀಲರಾಗಿರುವ ಶ್ರೀ ಉಮೇಶ್ ಮಾತನಾಡಿ ಭಂಡಾರಿ ಸಮಾಜದಲ್ಲಿ ವಿದ್ಯೆಗೆ ಪ್ರೋತ್ಸಾಹ ನೀಡುವ , ದತ್ತು ತೆಗೆದುಕೊಳ್ಳುತ್ತಿರುವ ಅನೇಕ ಮಂದಿ ಇದ್ದಾರೆ ಅಂತಹವರನ್ನು ಸಂಪರ್ಕಿಸಿ ತಮ್ಮ ಮಕ್ಕಳಿಗೆ ಉತ್ತಮ ವಿದ್ಯೆ ನೀಡಿ ಮಕ್ಕಳನ್ನು ಬೆಳೆಸಬೇಕೆಂದರು.

ಇನ್ನೊಬ್ಬ ಮುಖ್ಯ ಅತಿಥಿ ಶ್ರೀಮತಿ ಚೈತ್ರಾ ಕೌಶಿಕ್ ಹೆಮ್ಮಾಡಿ ಮಾತನಾಡುತ್ತಾ ನಮ್ಮಲ್ಲಿ ಪ್ರತಿಭೆ ಇರುವ ಅನೇಕ ಹೆಣ್ಣು ಮಕ್ಕಳಿದ್ದಾರೆ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಿ ಅವರನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುವ ಕೆಲಸ ತಂದೆ ತಾಯಿಗಳು , ಮದುವೆಯಾದ ಮೇಲೆ ಗಂಡಂದಿರು ಕೂಡಾ ಉತ್ತೇಜನ ನೀಡಬೇಕೆಂದರು.

ವಲಯದ ಅಧ್ಯಕ್ಷರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್ ರವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಸಂಘದ ಮೂಲಕ ಅನೇಕ ಉತ್ತಮ ಕೆಲಸಗಳನ್ನು ಮಾಡಿದ್ದು 18 ವರ್ಷಗಳಿಂದ ಅನಿವಾರ್ಯ ಕಾರಣದಿಂದ ನವೀಕರಿಸದೆ ಇದ್ದ ಸಂಘದ ನೋಂದಣಿಯನ್ನು ಸೂಕ್ತ  ದಾಖಲೆಗಳನ್ನು ಸಲ್ಲಿಸುವ ಮೂಲಕ ನವೀಕರಿಸಿದ್ದೇವೆ , ಪ್ರತೀ ವರ್ಷ ನೀಡುತ್ತಿರುವ ವಿದ್ಯಾರ್ಥಿ ವೇತನದ ನಿಧಿಯನ್ನು ಸಮಾಜದ ಸಹೃದಯವಂತರಿಂದ ದೇಣಿಗೆ ಸಂಗ್ರಹಿಸುವ ಮೂಲಕ 13 ಲಕ್ಷಗಳಿಂದ 20 ಲಕ್ಷಕ್ಕೆ ಏರಿಸಿದ್ದೇವೆ ನಮ್ಮ ಗುರಿಯ 50 % ಮಾತ್ರ ಕ್ರಮಿಸಿದ್ದೇವೆ, ಇನ್ನೂ ಹೆಚ್ಚಿನ ಕೆಲಸ ಮಾಡಿ ತೋರಿಸಬೇಕೆಂಬ ಹಂಬಲ ಇದೆ , ಅದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯ ಇದೆಯೆಂದರು.

 

 ಭಂಡಾರಿ ಸಮಾಜ ಸಂಘ ಬೆಂಗಳೂರು ಹಿಂದೆಯಿಂದಲುಾ ವಿದ್ಯಾನಿಧಿಗೆ ಬೇರೆಲ್ಲಾ ವಿಚಾರಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದು, ಈ ವರ್ಷ ಅತೀ ಹೆಚ್ಚು 1.18 ಲಕ್ಷ ರುಾ ವಿದ್ಯಾರ್ಥಿ ವೇತನ ನೀಡಿದ್ದು ಕುಾಡ ಒಂದು ಸಾಧನೆ! ನಮಗೆ ವಲಯದಲ್ಲಿರುವ ವಿದ್ಯಾನಿಧಿ ಮೊತ್ತವು ಇತರ ಎಲ್ಲಾ ಭಂಡಾರಿ ಸಮಾಜದ ಸಂಘದಲ್ಲಿರುವ ವಿದ್ಯಾನಿಧಿಯ ಮೊತ್ತಕ್ಕಿಂತ ಅಧಿಕವಾಗಿರುವುದು ನಮಗೆಲ್ಲರಿಗುಾ ಹೆಮ್ಮೆಯ ವಿಚಾರ, ಇದನ್ನು ಸಾಧಿಸಲು ಸಹಕರಿಸಿದ ಎಲ್ಲಾ ಭಂಡಾರಿ ಸಮಾಜದ ಭಾಂದವರಿಗೆ ದನ್ಯವಾದಗಳನ್ನು ಸಲ್ಲಿಸಿದರು .ಈ ಬಾರಿಯ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟದ ಜವಾಬ್ದಾರಿಯನ್ನು ತೆಗೆದುಕೊಂಡು ಇಷ್ಟೊಂದು ಉತ್ತಮವಾಗಿ ನಡೆಸಿರುವ ಬಾಳೆಹೊನ್ನೂರು ಘಟಕವನ್ನು ಅಭಿನಂದಿಸಿದರು.

ಬೆಳಿಗ್ಗೆ ನಡೆದ ಕ್ರೀಡಾ ಕೂಟದಲ್ಲಿ ವಿವಿಧ ಘಟಕಗಳು ಹಗ್ಗ ಜಗ್ಗಾಟ , ಶಾಟ್ ಪುಟ್ , ಮಡಕೆ ಒಡೆಯುವುದು ಮುಂತಾದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳನ್ನು ತಮ್ಮದಾಗಿಸಿಕೊಂಡವು .ಬೆಸ್ಟ್ ಡ್ರೆಸ್ಸ್ಡ್ , ಬೆಸ್ಟ್ ಹೇರ್ ಸ್ಟೈಲ್ ಸ್ಪರ್ಧೆಗಳಲ್ಲಿ ,ಮಕ್ಕಳು, ಯುವಕರು, ಹಿರಿಯರು ಬಹುಮಾನ ಪಡೆದುಕೊಂಡರು.

ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಸುಮಾರು 20 ಬಂಧುಗಳನ್ನು ಕುಲಕಸುಬು ಮತ್ತು ಇತರ ಕ್ಷೇತ್ರದ ಸಾಧನೆಗಾಗಿ ಸನ್ಮಾನಿಸಲಾಯಿತು ಹಾಗೂ ಬಾಳೆಹೊನ್ನೂರು ಘಟಕದ ಸುಮಾರು 10 ಬಂಧುಗಳನ್ನು ಇತರ ಕ್ಷೇತ್ರದ ಸಾಧನೆಗೆ ಸನ್ಮಾನಿಸಲಾಯಿತು.
ಬಾಳೆಹೊನ್ನೂರು , ಹೊಸನಗರ , ಕೊಪ್ಪ ,ಕಳಸ , ಮೂಡಿಗೆರೆ , ಸಾಗರ, ರಿಪ್ಪನ್ ಪೇಟೆ , ಸೊರಬ ಶಿರಾಳಕೊಪ್ಪ,ತೀರ್ಥಹಳ್ಳಿ ಘಟಕಗಳ ಅಧ್ಯಕ್ಷರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಬೆಂಗಳೂರು ವಲಯದ ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿ ,ಶ್ರೀ ಸುಧಾಕರ ಬನ್ನಂಜೆ ,ಅಧ್ಯಕ್ಷ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲು , ಬಾಳೆ ಹೊನ್ನೂರು ಘಟಕದ ಹಿರಿಯಣ್ಣ ಭಂಡಾರಿ ಸನ್ಮಾನಿಸಲ್ಪಟ್ಟರು.

 

 

ಕಾರ್ಯಕ್ರಮದ ಮಧ್ಯಾಹ್ನದ ಭೋಜನದ ಪ್ರಾಯೋಜಕರಲ್ಲೊಬ್ಬರಾದ ವಕೀಲ ಶ್ರೀ ಉಮೇಶ್ ರನ್ನು ಕೃತಜ್ಞತಾಪೂರ್ವಕವಾಗಿ ಸನ್ಮಾನಿಸಲಾಯಿತು.
ವಿವಿಧ ಘಟಕಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿರುವ ಸುಮಾರು 45 ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ವಿದ್ಯಾ ಪ್ರೋತ್ಸಾಹ ಧನ ಚೆಕ್ ವಿತರಿಸಲಾಯಿತು.

 

ಮಧ್ಯಾಹ್ನದ ಬಳಿಕ ನಡೆದ ಸಂಘದ ಮಹಾಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಯವರಾಗಿರುವ ಶ್ರೀ ಕುಶಲ್ ಭಂಡಾರಿಯವರು ಕಳೆದ ಒಂದು ವರ್ಷದ ಅವಧಿಯ ಸಭೆಗಳು ಮತ್ತು ಇತರ ಚಟುವಟಿಕೆಗಳ ವರದಿಯನ್ನು ಮಂಡಿಸಿದರು ಮತ್ತು ಕೋಶಾಧಿಕಾರಿಯಾಗಿರುವ ಶ್ರೀಮತಿ ಅಕ್ಷತಾ ಸದಾನಂದರವರು ಲೆಕ್ಕ ಪತ್ರವನ್ನು ಸಭೆಗೆ ಮಂಡಿಸಿ ಸಭೆಯ ಅನುಮೋದನೆ ಪಡೆದುಕೊಂಡರು .
ಬಾಳೆಹೊನ್ನೂರು ಘಟಕದ ಶ್ರೀ ಹಿರಿಯಣ್ಣ ಭಂಡಾರಿಯವರು ಕಾರ್ಯಕ್ರಮ ನಿರ್ವಹಿಸಿದರು, ಸನ್ಮಾನದ ನಿರ್ವಹಣೆಯನ್ನು ಶ್ರೀ ಕುಶಲ್ ಭಂಡಾರಿ ಮತ್ತು ಶ್ರೀ ಸುಧಾಕರ ಶಿರಾಳಕೊಪ್ಪ ನಡೆಸಿದರು.


ಆಗಮಿಸಿದ್ದ ಬಂಧುಗಳೆಲ್ಲರಿಗೂ ಅತ್ಯುತ್ತಮ ಉಪಹಾರ ,ಮಧ್ಯಾಹ್ನದ ಭೋಜನವನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು , ಸ್ವಾದಿಷ್ಟ ಮಾಂಸಾಹಾರ ,ಸಸ್ಯಾಹಾರ ಊಟವನ್ನು ಸುಮಾರು 800 ಮಂದಿ ಸವಿದರು .

ಮನರಂಜನಾ ಕಾರ್ಯಕ್ರಮದಲ್ಲಿ ಎಲ್ಲಾ ಘಟಕಗಳ ಮಕ್ಕಳು , ಬೆಂಗಳೂರಿನ ರಾಜಶೇಖರ್ , ಪ್ರದೀಪ್ ಪಲಿಮಾರು , ಶ್ರೀಮತಿ ಚೈತ್ರಾ ಕೌಶಿಕ್ ಹೆಮ್ಮಾಡಿ ಹಾಡುಗಳ ಮೂಲಕ ಸಭಿಕರನ್ನು ಮನರಂಜಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ, ಆಗಮಿಸಿದ್ದ ಬಂಧುಗಳಲ್ಲಿ 5 ಅದೃಷ್ಟವಂತರನ್ನು ಲಕ್ಕಿ ಡಿಪ್ ಮೂಲಕ ಆರಿಸಿ ಬಹುಮಾನ ವಿತರಿಸಲಾಯಿತು.
ಬಾಳೆ ಹೊನ್ನೂರು ಘಟಕದಿಂದ ಆಯೋಜಿಸಿದ್ದ ಲಾಟರಿ ಟಿಕೆಟ್ ಡ್ರಾ ಮಾಡಲಾಯಿತು.

ಶಿರಾಳಕೊಪ್ಪದ ಶ್ರೀ ರತ್ನಾಕರ ಭಂಡಾರಿಯವರು ಚಿತ್ರಿಸಿರುವ ಭಾವಚಿತ್ರವನ್ನು ಪ್ರತಿಯೊಬ್ಬ ಸನ್ಮಾನಿತರಿಗೂ ನೀಡಿ ಗೌರವಿಸಲಾಯಿತು.

ಹಿರಿಯರಾದ ಮೋಹನ್ ಭಂಡಾರಿ ಬಾಳೆಹೊನ್ನೂರು ರವರು ಧನ್ಯವಾದವನ್ನಿತ್ತರು .

ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿ, ನಿರ್ವಹಿಸಿ ಯಶಸ್ವಿಗೊಳಿಸಿರುವ ಭಂಡಾರಿ ಸಮಾಜ ಸಂಘ ಬಾಳೆಹೊನ್ನೂರು ಘಟಕದ ಅಧ್ಯಕ್ಷರಾಗಿರುವ ಸುನಿಲ್ ರಾಜ್ ಭಂಡಾರಿ ಮತ್ತು ತಂಡದ ಶ್ರಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಯಿತು.

 

Leave a Reply

Your email address will not be published. Required fields are marked *