
ಬೆಂಗಳೂರು ವಲಯ ಭಂಡಾರಿ ಸಮಾಜ ಸಂಘದ ಸೆಪ್ಟೆಂಬರ್-2019 ರ ಮಾಸಿಕ ಸಭೆಯು ಸಂಘದ ಅಧ್ಯಕ್ಷರಾದ ಶ್ರೀಯುತ ಸಾಗರ ಮಾಧವ ಭಂಡಾರಿಯವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ದಿನಾಂಕ: 08/09/2019 ರಂದು ಮದ್ಯಾಹ್ನ 3.00 ಘಂಟೆಗೆ ಜರುಗಿತು.

ಸಂಘದ ಕಾರ್ಯದರ್ಶಿ ಶ್ರೀಯುತ ಸುಧಾಕರ ಆರ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.
ನಂತರ ಇತ್ತೀಚೆಗೆ ನಮ್ಮನ್ನಗಲಿದ ಸಮಾಜದ ಬಂಧುಗಳ ದಿವ್ಯಾತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷದ ಗೌರವ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಅಧ್ಯಕ್ಷರ ಅನುಮತಿಯಂತೆ ಹಿಂದಿನ ಸಭೆಯ ನಡಾವಳಿಗಳನ್ನು ಓದಿ ಹೇಳಲಾಯಿತು ಹಾಗೂ ಸಭಾ ತೀರ್ಮಾನದಂತೆ ಸಂಘದ ಚಟುವಟಿಕೆಗಳನ್ನು ಸಭೆಗೆ ತಿಳಿಸಲಾಯಿತು.



ಸಭೆಯಲ್ಲಿ ಹಾಜರಿದ್ದ ಸದಸ್ಯರು ಸಮಾಜದ ಪತ್ರಿಕೆ ಕಚ್ಚೂರುವಾಣಿ ಪತ್ರಿಕಾ ಬಳಗದಲ್ಲಿ ವಲಯದ ಪ್ರಾತಿನಿಧಿತ್ವ ಹಕ್ಕನ್ನು ಪ್ರಸ್ತಾಪಿಸಿ ಕಚ್ಚೂರುವಾಣಿ ಸಂಪಾದಕ/ ಪ್ರಕಾಶಕ ಬಳಗಕ್ಕೆ ಪತ್ರ ಬರೆಯುವ ವಿಷಯದ ಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚಿಸಿದ್ದೆವು. ಅದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ? ಎಂದು ಮಾಹಿತಿ ನೀಡಿ ಎಂದು ಕೇಳಲಾಗಿ.
ಆಗಸ್ಟ್ 16ನೇ ತಾರೀಖು ಕಚ್ಚೂರುವಾಣಿಗೆ ಬರೆದ ಪತ್ರವನ್ನು ಸಭೆಗೆ ಓದಿ ಹೇಳಲಾಗಿ ಹಾಗೂ ಇದಕ್ಕೆ ಪ್ರತಿಯಾಗಿ ಪತ್ರಿಕಾ ಬಳಗದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಲಾಯಿತು. ಅದಕ್ಕೆ ಸದಸ್ಯರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ “ಒಂದು ವಲಯದ ಕಮಿಟಿಯ ಪತ್ರಕ್ಕೂ ಉತ್ತರಿಸದೇ ಇರುವ, ಪತ್ರಿಕಾ ಬಳಗದ ಧೋರಣೆ ಸರಿಯಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.




ಈ ವಿಷಯದಲ್ಲಿ ನಿರ್ಲಕ್ಷ ಬೇಡ, ಮತ್ತೊಮ್ಮೆ ವಿಷಯ ಪ್ರಸ್ತಾವನೆ ನೆನಪಿಸಿ,ಲಿಖಿತ ಉತ್ತರಕ್ಕಾಗಿ ಪತ್ರ ಬರೆಯಿರಿ.ಅದಕ್ಕೂ ಒಂದೊಮ್ಮೆ ಪ್ರತಿಕ್ರಿಯಿಸದೇ ಇದ್ದರೆ ಮುಂದಿನ ಸಭೆಯಲ್ಲಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳೋಣ” ಎಂದು ತೀರ್ಮಾನಿಸಿದರು.
ಮುಂದಿನ ದಿನಗಳಲ್ಲಿ ಇದಕ್ಕೆ ಪ್ರತಿಕ್ರಿಯೆ ಬರದಿದ್ದರೆ, ಸಮಾಜದ ಉಳಿದ ವಲಯಗಳೊಂದಿಗೆ ಪತ್ರ ಮುಖೇನ, ಇದರ ಬಗ್ಗೆ ಅವರ ಅಭಿಪ್ರಾಯ,ಪ್ರತಿಕ್ರಿಯೆ ಬಗ್ಗೆ ಚರ್ಚಿಸಿ, ತಿಳಿದು ಮುಂದಿನ ಕ್ರಮ ಕೈಗೊಳ್ಳೋಣ ಎಂದೂ ತೀರ್ಮಾನಿಸಲಾಯಿತು.
ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ಜುಲೈ ಮತ್ತು ಆಗಸ್ಟ್ ತಿಂಗಳ ಸಭೆಯ ವರದಿಯನ್ನು ಪತ್ರಿಕೆಗೆ ಕಳುಹಿಸಿಕೊಡಲಾಗಿದ್ದು ಪತ್ರಿಕೆಯಲ್ಲಿ ಪ್ರಕಟವಾಗಿರುವುದನ್ನು ಸಭೆಗೆ ತಿಳಿಸಲಾಯಿತು ಹಾಗೂ ಈ ಕ್ರಮಕ್ಕೆ ಪತ್ರಿಕೆಗೆ ಧನ್ಯವಾದಗಳನ್ನು ಸೂಚಿಸಲಾಯಿತು.
ಚರ್ಚಿತ ವಿಷಯಗಳು:
1. 2019-20ನೇ ಸಾಲಿನ ವಿದ್ಯಾರ್ಥಿ ಪ್ರೋತ್ಸಾಹ ನಿಧಿಗೆ ಘಟಕಗಳ ವಿದ್ಯಾರ್ಥಿಗಳಿಂದ ಮನವಿಗಳು ತಲುಪುತ್ತಿದ್ದು, ಈಗಾಗಲೇ ಕಛೇರಿಯ ವಿಳಾಸಕ್ಕೆ ತಲುಪಿದ್ದ ಅರ್ಜಿಗಳನ್ನು ಶ್ರೀ ಲಕ್ಷ್ಮಣ ಕರಾವಳಿಯವರು ಸಭೆಗೆ ನೀಡಿದರು. ಅದನ್ನು ಪರಿಶೀಲಿಸಿದ ಸಭೆ, ಕೆಲವು ಅರ್ಜಿಗಳು ಅಪೂರ್ಣವಾಗಿವೆ ಮತ್ತು ಸ್ಥಳೀಯ ಘಟಕದ ಪ್ರಮುಖರ / ಕಮಿಟಿಯ ಗಮನಕ್ಕೆ ಬಾರದೇ ನೇರವಾಗಿ ಸಲ್ಲಿಸಲಾಗಿದೆ. ಆದಕಾರಣ ಕಮಿಟಿ ಸದರಿ ವಿದ್ಯಾರ್ಥಿಗಳಿಗೆ ಸಂಪರ್ಕಿಸಿ ಸ್ಥಳೀಯ ಘಟಕಗಳ ಪ್ರಮುಖರಿಂದ ಶಿಪಾರಸು ಪತ್ರ ಕಳುಹಿಸಿಕೊಡುವಂತೆ ತಿಳಿಸಿ ಹಾಗೂ ಈ ವಿಷಯವನ್ನು ಎಲ್ಲಾ ಘಟಕಗಳ ಅಧ್ಯಕ್ಷರ ಗಮನಕ್ಕೆ ತರುವಂತೆ ಸೂಚಿಸಿತು.
ವಲಯ ಸಮಾಜದ ಹಿರಿಯರು ಭಂಡಾರಿ ಸಮಾಜದ ವಿದ್ಯಾರ್ಥಿಗಳ ವಿಧ್ಯಾ ಪ್ರೋತ್ಸಾಹಕ್ಕಾಗಿ ಸ್ಥಾಪಿಸಿದ ನಿಧಿ, ಇದರ ಪೂರ್ಣ ಪ್ರಯೋಜನ ಭಂಡಾರಿ ಸಮಾಜದ ಸದಸ್ಯ ವಿದ್ಯಾರ್ಥಿಗಳಿಗೆ ದೊರೆಯಬೇಕು. ಅದರ ಬಗ್ಗೆ ಗಮನ ನೀಡಿ ಎಂದೂ ಸಭೆಯಲ್ಲಿ ಹಾಜರಿದ್ದ ಎಲ್ಲಾ ಸದಸ್ಯರು ವಿಷಯ ಮಂಡಿಸಿದರು. ಈ ವಿಷಯದಲ್ಲಿ ಎಲ್ಲಾ ಅರ್ಜಿದಾರರನ್ನು ಮತ್ತು ಘಟಕಗಳ ಪ್ರತಿನಿಧಿಗಳನ್ನು ಸಂಪರ್ಕಿಸುವ ಜವಾಬ್ದಾರಿಯನ್ನು ಕಾರ್ಯದರ್ಶಿಗಳು ನಿರ್ವಹಿಸುವಂತೆ ತಿಳಿಸಲಾಯಿತು.

ಆಯ್ಕೆಯಾದ ವಿದ್ಯಾರ್ಥಿಗಳ ಪ್ರೋತ್ಸಾಹ ನಿಧಿಯನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ಹಾಕುವ ವಲಯದ ಕಮಿಟಿಯ ತೀರ್ಮಾನವನ್ನು ಪರಿಶೀಲಿಸಿ, ಘಟಕಗಳಲ್ಲಿ ಸಭೆ ನಡೆಸಿ ಚೆಕ್ ಮುಖಾಂತರ ನೀಡುವಂತೆ ಸಭೆ ತಿಳಿಸಿತು. ಮನವಿಯನ್ನು ಸೂಕ್ತ ಸಾಧ್ಯತೆಗಳಿಗಾಗಿ ಪರಿಶೀಲಿಸುವುದಾಗಿ ತಿಳಿಸಲಾಯಿತು.
2. ವಲಯದ 2019 ರ ವಾರ್ಷಿಕ ಸಭಾ ಕೂಟವನ್ನು ಪರ್ಯಾಯ ವ್ಯವಸ್ಥೆಯಂತೆ, ಘಟಕದಲ್ಲಿ ನಡೆಸುವ ಸಲುವಾಗಿ, ಎಲ್ಲಾ ಘಟಕಗಳ ಅಧ್ಯಕ್ಷರ, ಕಮಿಟಿ ಸದಸ್ಯರ ಸಭೆಯನ್ನು ತೀರ್ಥಹಳ್ಳಿಯಲ್ಲಿ ಆಯೋಜಿಸಲಾಗಿತ್ತು ಆದರೆ ಭಾರೀ ಮಳೆಯ ಕಾರಣ ಸಭೆ ನಡೆಸಲು ಸಾಧ್ಯವಾಗಿಲ್ಲ.ಆದರೆ ಸಂಬಂಧಿಸಿದ ಘಟಕಗಳ ಅಧ್ಯಕ್ಷರೊಂದಿಗೆ ಮತ್ತು ಕಾರ್ಯದರ್ಶಿಗಳೊಂದಿಗೆ ಈ ಸಂಬಂಧ ಚರ್ಚೆ ಮಾಡಲಾಗುತ್ತಿದೆ ಎಂದು ತಿಳಿಸಲಾಯಿತು. ಆದಷ್ಟು ಬೇಗನೇ ಸಭೆ ಕರೆದು ಸಭೆಯ ಸ್ಥಳ ನಿಗದಿ ಪಡಿಸಿ ಸಭೆಗೆ ತಯಾರಿ ನಡೆಸಲು ಸಮಯಾವಕಾಶ ಮಾಡಿಕೊಡುವಂತೆ ಸಭೆ ತಿಳಿಸಿತು.
3. ಭಂಡಾರಿ ಸಮಾಜ ಸಂಘ – ಬೆಂಗಳೂರು ವಲಯದ ಸದಸ್ಯರ ಒಂದು ದಿನದ ಕಿರುಪ್ರವಾಸ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ, ಬೆಂಗಳೂರಿನ ತಾವರೆಕೆರೆ ಸಮೀಪದಲ್ಲಿ ಶ್ರೀಯುತ ಶ್ರೀನಿವಾಸ್ ರವರ ಫಾರ್ಮ್ ಹೌಸ್ ನಲ್ಲಿ ಬೆಳಗ್ಗಿನಿಂದ ಸಂಜೆವರೆಗಿನ ಸ್ನೇಹ ಪ್ರವಾಸ ಕೂಟವನ್ನು ದಿನಾಂಕ: 13-10-2019 ರಂದು ನಡೆಸುವುದೆಂದು ತೀರ್ಮಾನಿಸಲಾಯಿತು. ಒಂದು ದಿನದ ಈ ಕಿರುಪ್ರವಾಸ ಕೂಟಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಬಂಧುಗಳಲ್ಲದೇ ಘಟಕದವರೂ ಹಾಜರಾಗಲು ಅನುಕೂಲ ಮಾಡಿಕೊಡುವಂತೆ ಸಭೆ ತಿಳಿಸಿತು.
ಹಾಜರಾಗುವ ಪ್ರತೀ ಸದಸ್ಯರಿಂದ ಖರ್ಚುವೆಚ್ಚಕ್ಕಾಗಿ, ಪ್ರತಿ ಭಾಗೀದಾರರಿಂದ ರೂ 300/- ರೂ ಪಡೆಯುವಂತೆ ತೀರ್ಮಾನಿಸಿತು.
ಸಮಾಜದ 10 ವರುಷಕ್ಕಿಂತ ಕೆಳಗಿನ ಕಿರು ಮಕ್ಕಳಿಗೆ ಮುಕ್ತ , ಉಚಿತ ಗೌರವಾವಕಾಶಕ್ಕಾಗಿ ಸಭೆ ಅನುಮೋದಿಸಿತು.
ಶ್ರೀಯುತರುಗಳಾದ ಅಕ್ಷತಾ ಸದಾನಂದ, ಲಕ್ಷ್ಮಣ ಕರಾವಳಿ, ಕುಶಾಲಕುಮಾರ, ಸದಾನಂದ, ರತ್ನಾಕರ ಭಂಡಾರಿ, ರಾಘವೇಂದ್ರ ಬಸ್ರೂರು, ರಾಜಶೇಖರ ಭಂಡಾರಿ, ಜಗದೀಶ ಕುರುಬರಹಳ್ಳಿ ಹಾಗೂ ಸುಧಾಕರ ಭಂಡಾರಿ ಇವರು ಕಾರ್ಯಕ್ರಮದ ಆಯೋಜನೆ, ಜವಾಬ್ದಾರಿ ವಹಿಸುವಂತೆ ತಿಳಿಸಲಾಯಿತು.
4. ಇದುವರೆಗೂ ಸಂಘಕ್ಕೆ ತಲುಪಿದ ಸಂಘದ ಸದಸ್ಯರ ಸದಸ್ಯತ್ವ ನವೀಕರಣದ ಅರ್ಜಿಗಳನ್ನು ಶ್ರೀ ಸದಾನಂದರವರಿಗೆ ಗಣಕೀಕೃತಗೊಳಿಸಲು ನೀಡಲಾಯಿತು. ಉಳಿದ ಸದಸ್ಯರು ಆದಷ್ಟು ಬೇಗ ಮಾಹಿತಿ ತಲುಪಿಸುವಂತೆ ತಿಳಿಸಲಾಯಿತು.

ಇಂದಿನ ಸಭೆಗೆ ವಿಶೇಷವಾಗಿ ಹಾಜರಿದ್ದ ಕುಮಾರಿ ಸುಪ್ರೀತಾ ಮಂಜುನಾಥ ಭಂಡಾರಿಯವರು, ಸಭೆಗೆ ತಮ್ಮ ಪರಿಚಯವನ್ನು ತಿಳಿಸಿಕೊಂಡರು.
ಸಭೆಗೆ ಆಗಮಿಸಿ, ಭಸಸ- ಬೆಂಗಳೂರು ವಲಯಕ್ಕೆ ಕುಮಾರಿ ಸುಪ್ರೀತಾರವರು ತೋರಿದ ಗೌರವಕ್ಕಾಗಿ, ಸಭೆ ಇವರಿಗೆ ಗೌರವ ಧನ್ಯವಾದಗಳನ್ನು ತಿಳಿಸಿತು.
ಲಘು ಉಪಹಾರದ ನಂತರ ಕೋಶಾಧಿಕಾರಿ ಶ್ರೀಯುತ ಕುಶಾಲ್ ಭಂಡಾರಿಯವರು ಹಾಜರಿದ್ದ ಎಲ್ಲಾ ಬಂಧುಗಳಿಗೆ ವಂದಿಸಿ ಸಭೆಯನ್ನು ಮುಕ್ತಾಯಗೊಳಿಸಲಾಯಿತು.
-ಭಂಡಾರಿ ಸಮಾಜ ಸಂಘ ಬೆಂಗಳೂರು