January 18, 2025
bengaluru-sangha-150x125

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ಇದರ ಅಕ್ಟೋಬರ್ 2021 ರ ಮಾಸಿಕ ಸಭೆಯು ದಿನಾಂಕ: 24/10/2021 ರ ಭಾನುವಾರದಂದು ಮಧ್ಯಾಹ್ನ 4 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಕರಾವಳಿ ರವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.

ವಲಯದ ಕೋಶಾಧಿಕಾರಿಯಾಗಿರುವ ಶ್ರೀ ಕುಶಲ್ ಭಂಡಾರಿ ಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು.

ವಲಯದ ಗೌರವಾಧ್ಯಕ್ಷರಾದ ಶ್ರೀ ಲಕ್ಷ್ಮಣ್ ಕರಾವಳಿ ಮತ್ತು ಶ್ರೀಮತಿ ಡಾ. ಸುಮತಿ ಲಕ್ಷ್ಮಣ್ ಕರಾವಳಿ ದಂಪತಿಯು ತಮ್ಮ ವೈವಾಹಿಕ ಜೀವನದ 25 ವರ್ಷವನ್ನು ಪೂರೈಸಿರುವ ಸಂದರ್ಭದಲ್ಲಿ ದಂಪತಿಗೆ ಸಭೆಯು ಅಭಿನಂದನೆ ಸಲ್ಲಿಸಿ , ಕಚ್ಚೂರು ಶ್ರೀ ನಾಗೇಶ್ವರ ದೇವರು ಇಡೀ ಕುಟುಂಬಕ್ಕೆ ಆಯುರಾರೋಗ್ಯ ಅಷ್ಟಐಶ್ವರ್ಯ ಕರುಣಿಸಲಿ ಎಂದು ಪ್ರಾರ್ಥಿಸಿ ಸಂಘದ ಪರವಾಗಿ ಶುಭಾಶಯ ಸಲ್ಲಿಸಿತು.

ಮುಂದುವರಿದು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಸದಸ್ಯರು ಹಾಗೂ ಇತರ ಪದಾಧಿಕಾರಿಗಳು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕೋಶಾಧಿಕಾರಿ ಶ್ರೀ ಕುಶಲ್ ಭಂಡಾರಿ ಯವರು ಸೆಪ್ಟೆಂಬರ್ ತಿಂಗಳ ಮಾಸಿಕ ಸಭೆಯ ನಡಾವಳಿಗಳನ್ನು ಸಭೆಗೆ ಓದಿ ಹೇಳಿದರು ಹಾಗೂ ಈ ತಿಂಗಳ ಸಭೆಯ ಅಜೆಂಡಾವನ್ನು ತಿಳಿಸಿದರು.

ಚರ್ಚಿತ ವಿಷಯಗಳು:

ವಿದ್ಯಾರ್ಥಿ ವೇತನಕ್ಕಾಗಿ ಪ್ರತೀ ವರ್ಷ ವಲಯದ ಸಮಾಜದ ಬಂಧು ಶ್ರೀ ನೆಸ್ಲೆ ಸಂಜೀವ ಭಂಡಾರಿ ಕುಟುಂಬವು ದೇಣಿಗೆ ನೀಡಿಕೊಂಡು ಬರುತ್ತಿದ್ದು , ಕೋವಿಡ್ ನಿರ್ಬಂಧದ ಕಾರಣದಿಂದ ಕಳೆದ ವರ್ಷ ವಾರ್ಷಿಕ ಮಹಾ ಸಭೆ ರದ್ದುಗೊಂಡಿತ್ತು ಹಾಗಾಗಿ ದೇಣಿಗೆಯ ಬಗ್ಗೆ ಪ್ರಸ್ತಾಪ ಮಾಡಿರಲಿಲ್ಲ. ಸಂಘದ ಗೌರವಾಧ್ಯಕ್ಷರಾಗಿರುವ ಶ್ರೀ ಲಕ್ಷ್ಮಣ್ ಕರಾವಳಿಯವರು ಶ್ರೀಯುತ ನೆಸ್ಲೆ ಸಂಜೀವ ಭಂಡಾರಿಯವರ ಮಗ ಶ್ರೀ ಶೋಧನ್ ಭಂಡಾರಿ ಯವರನ್ನು ಫೋನ್ ಮೂಲಕ ಸಂಪರ್ಕಿಸಿ ಈ ವರ್ಷ ವಿದ್ಯಾರ್ಥಿ ವೇತನ ನೀಡಲು ಸಂಘದ ಬಳಿ ಆರ್ಥಿಕ ಕೊರತೆ ಇರುವುದನ್ನು ಮನವರಿಕೆ ಮಾಡಿದರು ಹಾಗೂ ಪ್ರತೀ ವರ್ಷ ನೀಡುತ್ತಿದ್ದ ವಿದ್ಯಾ ನಿಧಿಗೆ ದೇಣಿಗೆಯನ್ನು ಮುಂದುವರಿಸುವಂತೆ ವಿನಂತಿಸಿಕೊಂಡರು.

ಲಕ್ಷ್ಮಣ್ ಕರಾವಳಿಯವರ ವಿನಂತಿಗೆ ಒಪ್ಪಿಕೊಂಡ ಶ್ರೀ ಶೋಧನ್ ಭಂಡಾರಿ ಯವರನ್ನು ಸಂಘದ ಉಪಾಧ್ಯಕ್ಷರಾದ ಶ್ರೀ ಪ್ರಸಾದ್ ಮುನಿಯಾಲ್ ಮತ್ತು ಕೋಶಾಧಿಕಾರಿಯವರಾದ ಶ್ರೀ ಕುಶಲ್ ಭಂಡಾರಿ ಯವರು ಶ್ರೀಯುತರ ಕಚೇರಿಗೆ ತೆರಳಿ ಸೌಹಾರ್ದಯುತ ಮಾತುಕತೆ ನಡೆಸಿ ರೂ 25000 ನಗದನ್ನು ದೇಣಿಗೆಯಾಗಿ ಸ್ವೀಕರಿಸಿದರು.

ಇಂದಿನ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಕುಶಲ್ ಭಂಡಾರಿ ಯವರು ಈ ದೇಣಿಗೆಯನ್ನು ಸ್ವೀಕರಿಸುವಲ್ಲಿ ಲಕ್ಷ್ಮಣ್ ಕರಾವಳಿಯವರ ಶ್ರಮ ಮತ್ತು ನೆಸ್ಲೆ ಸಂಜೀವ ಭಂಡಾರಿ ಕುಟುಂಬದ ಉದಾರತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿಕೊಂಡು ಸಂಘದ ಪರವಾಗಿ ಧನ್ಯವಾದ ಅರ್ಪಿಸಿದರು.

2021 ನೇ ಸಾಲಿನ ವಿದ್ಯಾರ್ಥಿ ವೇತನ ಕ್ಕಾಗಿ ಅರ್ಜಿ ಆಹ್ವಾನಿಸಲಾಗಿದ್ದು, ಸಮಾಜದ ಮುಖವಾಣಿಯಾದ ಕಚ್ಚೂರು ವಾಣಿಯ ಮುಂದಿನ ಸಂಚಿಕೆಯಲ್ಲಿ ಈ ಬಗ್ಗೆ ಅರ್ಜಿ ನಮೂನೆಯು ಪ್ರಕಟವಾಗಲಿದೆ. ಈ ಹಿಂದಿನ ಸಭೆಯಲ್ಲಿ ನಿರ್ಧರಿಸುವಂತೆ ಅರ್ಜಿ ಸಂಘಕ್ಕೆ ತಲುಪುವ ಕೊನೆಯ ದಿನಾಂಕ ನವೆಂಬರ್ 20 ನಿಗದಿಪಡಿಸಲಾಗಿದ್ದು , ಘಟಕಗಳು ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಸೂಕ್ತ ದಿನಾಂಕದ ಒಳಗಾಗಿ ಅರ್ಜಿ ನಮೂನೆಯು ಸಂಘದ ಕಚೇರಿಗೆ ತಲುಪುವಲ್ಲಿ ಸಹಕರಿಸುವಂತೆ ಸಭೆ ವಿನಂತಿಸಿತು.

ಈ ಬಾರಿ ವಿದ್ಯಾರ್ಥಿ ವೇತನ ವಿತರಿಸಲು ಸಂಘದ ಖಾತೆಯಲ್ಲಿ ಆರ್ಥಿಕ ಕೊರತೆ ಇರುವ ಕಾರಣ ವಿದ್ಯಾರ್ಥಿ ವೇತನ ವಿತರಿಸುವ ಮೊಬಲಗನ್ನು ರೂ 60 ಸಾವಿರಕ್ಕೆ ಸೀಮಿತಗೊಳಿಸುವಂತೆ ಅಧ್ಯಕ್ಷರು ಸಲಹೆ ನೀಡಿದರು, ಸಭೆ ಅವರ ಸಲಹೆಯನ್ನು ಅಂಗೀಕರಿಸಿತು.

ಹಾಗೆಯೇ ವಲಯದ ಘಟಕಗಳ ಹಲವಾರು ಯುವಕ, ಯುವತಿಯರು ಬೆಂಗಳೂರಿನ ಉತ್ತಮ ಕಂಪೆನಿಗಳಲ್ಲಿ ಕೆಲಸ ಮಾಡಿಕೊಂಡಿದ್ದು,ಕೆಲವರಿಗೆ ತಮ್ಮ ಆದಾಯದಲ್ಲಿ ಸ್ವಲ್ಪ ಅಂಶವನ್ನು ವಿದ್ಯಾರ್ಥಿ ವೇತನ ನೀಡುವ ಬಗ್ಗೆ ಚಿಂತನೆ ಇರುವ ಸಾಧ್ಯತೆ ಇದೆ. ಅಂತಹ ಯುವಕ, ಯುವತಿಯರು ಅಥವಾ ಇತರ ಬಂಧುಗಳು ವಿದ್ಯಾರ್ಥಿ ವೇತನಕ್ಕಾಗಿ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮದ ಬಗ್ಗೆ ಸಭೆ ಚರ್ಚೆ ನಡೆಸಿತು. ಈ ಬಗ್ಗೆ ಸಂಘವು ಅಂತಹ ವ್ಯಕ್ತಿಗಳನ್ನು ಗುರುತಿಸುವುದು ಅಥವಾ ಸ್ವಯಂಪ್ರೇರಿತರಾಗಿ ದತ್ತು ತೆಗೆದುಕೊಳ್ಳಲು ಮುಂದೆ ಬರುವಂತೆ ಸಂಘವು ಮನವಿ ಮಾಡಲು ಸಂಘ ನಿರ್ಧರಿಸಿತು.ಈ ರೀತಿ ಮಾಡುವ ಮೂಲಕ ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ವಿತರಿಸಲು ಸಂಘದಲ್ಲಿತಲೆದೋರಬಹುದಾದ ಆರ್ಥಿಕ ಕೊರತೆಯನ್ನು ಸರಿದೂಗಿಸಬಹುದೆಂಬುದು ಸಭೆಯ ಆಶಯವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಸಂಘವು ಕಾರ್ಯಪ್ರವೃತ್ತರಾಗುವಂತೆ ಮತ್ತು ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳುವ ಸಮಾಜದ ಬಂಧುಗಳನ್ನು ಸೂಕ್ತ ವೇದಿಕೆಯಲ್ಲಿ ಗುರುತಿಸಿ ಸನ್ಮಾನಿಸುವ ಬಗ್ಗೆಯೂ ಸಭೆ ನಿರ್ಧರಿಸಿತು.

ಸಭೆ ಮುಂದುವರಿದು ಡಿಸೆಂಬರ್ 25 ರಂದು ನಡೆಸುವ ವಾರ್ಷಿಕ ಮಹಾಸಭೆ ಮತ್ತು ಸ್ನೇಹ ಕೂಟದ ಬಗ್ಗೆ ಚರ್ಚೆ ನಡೆಯಿತು.
ವಾರ್ಷಿಕ ಮಹಾಸಭೆಯನ್ನು ರಾಜಾಜಿನಗರದಲ್ಲಿರುವ ಹೋಟೆಲ್ ಕದಂಬ ದಲ್ಲಿ ನಡೆಸುವ ಬಗ್ಗೆ ಈ ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ರೂಪುರೇಷೆಯ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಯಿತು.

ಆಮಂತ್ರಣ ಪತ್ರಿಕೆಯನ್ನು ಸ್ವಲ್ಪ ಸಂಖ್ಯೆಯಲ್ಲಿ ಮುದ್ರಿಸಿ , ಡಿಜಿಟಲ್ ಪ್ರತಿಯನ್ನು ವಾಟ್ಸಪ್ಪ್ ಅಥವಾ ಇತರ ಸಾಮಾಜಿಕ ಜಾಲತಾಣದ ಮೂಲಕ ಸಂಘದ ಸದಸ್ಯರಿಗೆ ಕಳುಹಿಸಿಕೊಡುವ ಬಗ್ಗೆ ಸಭೆಯು ಒಕ್ಕೊರಲ ತೀರ್ಮಾನ ಕೈಗೊಂಡಿತು ಈ ಬಗ್ಗೆ ಸದಸ್ಯರ ವಾಟ್ಸಪ್ಪ್ ನಂಬರ್ ನ್ನು ಸಂಗ್ರಹಿಸಿಕೊಂಡು ,ಎಲ್ಲಾ ಪದಾಧಿಕಾರಿಗಳು ತಮ್ಮವಾಟ್ಸಪ್ಪ್ ಮೂಲಕ ಆಮಂತ್ರಣ ಪತ್ರಿಕೆ ಕಳುಹಿಸಿ , ಕರೆ ಮಾಡುವ ಜವಾಬ್ದಾರಿಯನ್ನು ನೀಡುವ ಬಗ್ಗೆ ಸಭೆ ತೀರ್ಮಾನಿಸಿತು.

ವಾರ್ಷಿಕ ಮಹಾಸಭೆಯು ಬೆಳಿಗ್ಗೆ 8.30 ಕ್ಕೆ ಆರಂಭಗೊಂಡು ಸಂಜೆ 6 ರ ಒಳಗೆ ಮುಗಿಸುವ ಬಗ್ಗೆ ನಿರ್ಧರಿಸಲಾಯಿತು.

ಬೆಳಿಗ್ಗೆ 11 ಕ್ಕೆ ಕೋಶಾಧಿಕಾರಿಯ ವಾರ್ಷಿಕ ಲೆಕ್ಕ ಪತ್ರ ಮಂಡನೆ , ಕಾರ್ಯದರ್ಶಿಯವರ ವರದಿ ವಾಚನದ ನಂತರ ಮುಂದಿನ ಸಮಿತಿಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ .ಮದ್ಯಾಹ್ನ ಭೋಜನ ದ ಬಳಿಕದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳನ್ನು ಕರೆಯುವ ಬಗ್ಗೆ, ಕುಲಕಸುಬುದಾರರಿಗೆ ಸನ್ಮಾನ , ಪ್ರತಿಭಾ ಪುರಸ್ಕಾರ ಹಾಗೆಯೇ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಮಾಜದ ಬಂಧುಗಳನ್ನು ಕರೆದು ಸನ್ಮಾನಿಸುವ ಬಗ್ಗೆ ಕೆಲವೊಂದು ಹೆಸರುಗಳನ್ನು ಗುರುತಿಸಿಕೊಂಡು ಮುಂಬರುವ ದಿನಗಳಲ್ಲಿ ಅಂತಿಮಗೊಳಿಸುವ ಬಗ್ಗೆ ಸಭೆ ತೀರ್ಮಾನಿಸಿತು .

ಮಹಾಸಭೆಯ ಒಟ್ಟು ಖರ್ಚಿನ ಬಗ್ಗೆ ಬಜೆಟ್ ನಿಗದಿಪಡಿಸುವ ನಿಟ್ಟಿನಲ್ಲಿ ರೂ 1 ಲಕ್ಷದ ಮಿತಿಯ ಒಳಗೆ ಎಲ್ಲಾ ಖರ್ಚನ್ನು ಭರಿಸುವ ಮೂಲಕ ಆ ಬಗ್ಗೆ ಸಂಘದ ಪದಾಧಿಕಾರಿಗಳು , ಸಮಿತಿಯ ಸದಸ್ಯರು ಹಾಗೂ ಸಂಘದ ಇತರ ಸದಸ್ಯರ ಮೂಲಕ ದೇಣಿಗೆ ಸಂಗ್ರಹಿಸುವ ಬಗ್ಗೆ ಚಿಂತನೆ ನಡೆಸಿತು.

ಮಹಾಸಭೆಯ ಖರ್ಚು ಕಳೆದು ಉಳಿಕೆಯಾಗುವ ಮೊತ್ತವನ್ನು ವಿದ್ಯಾನಿಧಿ ಖಾತೆಗೆ ವರ್ಗಾಯಿಸುವ ಬಗ್ಗೆ ಸಭೆ ನಿರ್ಣಯಿಸಿತು.

ಹಾಜರಿದ್ದ ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು ತಮ್ಮ ನಿರ್ಧಿಷ್ಟ ಮೊತ್ತದ ದೇಣಿಗೆಯನ್ನು ನೀಡುವ ಬಗ್ಗೆ ಆಶ್ವಾಸನೆ ನೀಡಿದರು.

ಸಂಘದ ಮಾಜಿ ಅಧ್ಯಕ್ಷರು ಮತ್ತು ವಕೀಲರಾದ ಶ್ರೀ ಉಮೇಶ್ ರವರು ಸಭೆಯ ದಿನದ ಮಧ್ಯಾಹ್ನದ ಭೋಜನ ವ್ಯವಸ್ಥೆಯ ಖರ್ಚನ್ನು ತಾನು ಭರಿಸುತ್ತೇನೆ ಎಂದು ಭರವಸೆ ನೀಡಿ, ಶೀಘ್ರವಾಗಿ ತೀರ್ಮಾನ ಮಾಡಿ ಘೋಷಿಸುವುದಾಗಿ ಸಭೆಗೆ ತಿಳಿಸಿದರು.

ಉಪಾಧ್ಯಕ್ಷರಾದ ಪ್ರಸಾದ್ ಮುನಿಯಾಲ್ ರವರ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.

ವರದಿ : ಕುಶಲ್ ಭಂಡಾರಿ, ಬೆಂಗಳೂರು

Leave a Reply

Your email address will not be published. Required fields are marked *