September 20, 2024

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಫೆಬ್ರವರಿ ತಿಂಗಳ ಮಾಸಿಕ ಸಭೆಯು ತಾರೀಕು 13 ಫೆಬ್ರವರಿ 2022 ರ ಭಾನುವಾರದಂದು ಬೆಂಗಳೂರಿನ ರಾಜಾಜಿನಗರದಲ್ಲಿರುವ ಹೋಟೆಲ್ ಕದಂಬದಲ್ಲಿ ಸಂಜೆ 3 ಗಂಟೆಗೆ ಸಂಘದ ಅಧ್ಯಕ್ಷ ರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ನಿಕಟಪೂರ್ವ ಕಾರ್ಯದರ್ಶಿ ಹಾಗೂ ಹಾಲಿ ಉಪಾಧ್ಯಕ್ಷರಾದ ಶ್ರೀ ಸುಧಾಕರ ಭಂಡಾರಿ ಶಿರಾಳಕೊಪ್ಪ ಆಗಮಿಸಿದ ಪದಾಧಿಕಾರಿಗಳನ್ನು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸ್ವಾಗತಿಸಿದರು.ವಾಡಿಕೆಯಂತೆ ಇತ್ತೀಚಿಗೆ ಅಗಲಿದ ಸಮಾಜದ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ನಂತರ ಡಿಸೆಂಬರ್ 25, 2021 ರಂದು ನಡೆದ ಸಂಘದ ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟದ ವರದಿಯನ್ನು ಶ್ರೀ ಸುಧಾಕರ ಭಂಡಾರಿ ಶಿರಾಳಕೊಪ್ಪ ಓದಿ ಹೇಳಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸಾಧ್ಯವಾದಷ್ಟು ಮಟ್ಟಿಗೆ ಸಂಘಕ್ಕಾಗಿ ಪ್ರಾಮಾಣಿಕತೆಯಿಂದ ಸೇವೆ ಮಾಡಿದ್ದೇನೆ. ಈ ಅವಧಿಯಲ್ಲಿ ನನಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ನಂತರ ನೂತನ ಪ್ರಧಾನ ಕಾರ್ಯದರ್ಶಿಯವರಾದ ಕುಶಲ್ ಭಂಡಾರಿಯವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ಸಭೆ ಮುಂದುವರಿದು ನಿಕಟಪೂರ್ವ ಕೋಶಾಧಿಕಾರಿಯಾದ ಕುಶಲ್ ಭಂಡಾರಿಯವರು ವಾರ್ಷಿಕ ಮಹಾಸಭೆ ಮತ್ತು ಕೌಟುಂಬಿಕ ಸ್ನೇಹ ಕೂಟದ ಲೆಕ್ಕ ಪತ್ರ ಮಂಡಿಸಿದರು.ಮಹಾಸಭೆಗೆ ದೇಣಿಗೆಯಾಗಿ ಒಟ್ಟು 31 ಬಂಧುಗಳಿಂದ ರೂಪಾಯಿ 1,36,175/-  ದೇಣಿಗೆ ಸಂಗ್ರಹಗೊಂಡಿದ್ದು ರೂಪಾಯಿ 55,680/-ಖರ್ಚು ಕಳೆದು ಇಂದಿನವರೆಗೆ ರೂಪಾಯಿ 80,495/-ಉಳಿಕೆಯಾಗಿದೆ.ಸಮಿತಿಯ ಕೆಲವು ಸದಸ್ಯರ ಮತ್ತು ಕರ್ನಾಟಕ ಬ್ಯಾಂಕ್ ನ ದೇಣಿಗೆಯ ನಿರೀಕ್ಷೆಯಲ್ಲಿದ್ದು ಸುಮಾರು ಒಂದು ಲಕ್ಷ ಮೊತ್ತ ಉಳಿಕೆಯಾಗಬಹುದೆಂದು ಅಂದಾಜಿಸಲಾಗಿದೆ ಎಂದರು. ಮುಂದಿನ ವರ್ಷಗಳಲ್ಲಿ ವಿದ್ಯಾರ್ಥಿ ವೇತನ ವಿತರಿಸಲು ಸಹಾಯವಾಗುವುವಂತೆ ಮಹಾಸಭೆಯಲ್ಲಿ ಉಳಿಕೆಯಾದ ಮೊತ್ತವನ್ನು ಸೇರಿದಂತೆ ಒಂದು ನಿರ್ಧಿಷ್ಟ ಮೊತ್ತವನ್ನು ಕರ್ನಾಟಕ ಬ್ಯಾಂಕಿನ ವಿದ್ಯಾನಿಧಿ ಖಾತೆಯಲ್ಲಿ ನಿರಖು ಠೇವಣಿ ಇಡಲು ಸಭೆಯು ಒಮ್ಮತದಿಂದ ತೀರ್ಮಾನಿಸಿತು.  ಮುಂದಿನ ತಿಂಗಳ ಸಭೆಯಲ್ಲಿ ಲೆಕ್ಕ ಪತ್ರವನ್ನು ಅಂತಿಮಗೊಳಿಸುವಂತೆ ಸಭೆ ಸಲಹೆ ನೀಡಿತು.

ಮಹಾಸಭೆಯ ಭೋಜನ ವ್ಯವಸ್ಥೆಯ ಪ್ರಾಯೋಜಕರಾದ ಉಮೇಶ್ ಅಡ್ವೋಕೇಟ್ ರವರಿಗೆ ಸಂಘದ ಪರವಾಗಿ ಸಭೆಯಲ್ಲಿ ಕೃತಜ್ಞತೆ ಸಲ್ಲಿಸಲಾಯಿತು. ಮಹಾಸಭೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಕೋಶಾಧಿಕಾರಿ ಧನ್ಯವಾದವನ್ನು ಅರ್ಪಿಸಿದರು.

ನಂತರ ಈ ವರ್ಷ ವಿದ್ಯಾರ್ಥಿ ವೇತನಕ್ಕಾಗಿ ಬಂದ 41 ವಿದ್ಯಾರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಅರ್ಹ 32 ವಿದ್ಯಾರ್ಥಿಗಳಿಗೆ ಒಟ್ಟು ರೂಪಾಯಿ 58,500/- ವಿದ್ಯಾರ್ಥಿ ವೇತನವನ್ನು ಸಂಘ ವಿತರಿಸಿದೆ ಎಂದು ಸಭೆಗೆ ತಿಳಿಸಿದರು.

ಕಳೆದ ಮೂರು ವರ್ಷದ ಅವಧಿಯಲ್ಲಿ ಕೋಶಾಧಿಕಾರಿಯಾಗಿ ಕೆಲಸ ಮಾಡಿರುವ ನನಗೆ ಸಹಕರಿಸಿದ ಸಂಘದ ಪ್ರತಿಯೊಬ್ಬ ಸದಸ್ಯರಿಗೆ ಧನ್ಯವಾದಗಳನ್ನು ಸಲ್ಲಿಸಿ  ಮುಂದೆ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಮಾಡುವಾಗ ಕೂಡ ಪ್ರತಿಯೊಬ್ಬರೂ ಇದೇ ರೀತಿ ಸಹಕರಿಸುವಂತೆ ಮನವಿ ಮಾಡಿದರು. ಬಳಿಕ ನೂತನ ಕೋಶಾಧಿಕಾರಿಯಾದ ಅಕ್ಷತಾ ಸದಾನಂದ್ ಗೆ ಎಲ್ಲ ದಾಖಲೆಗಳನ್ನು ಹಸ್ತಾಂತರಿಸಿ ಶುಭ ಕೋರಿದರು.

ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ತಾರೀಕು 13 ರ ಭಾನುವಾರದಂದು  ಕಾರ್ಯಕಾರಿ ಸಭೆಗೆ ಹಾಜರಾಗಲು ನೋಟೀಸು ಬಂದಿರುವುದನ್ನು ಕಾರ್ಯದರ್ಶಿಯವರು ಸಭೆಗೆ ತಿಳಿಸಿದರು. ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಂಡಾರಿ ಸಮಾಜ ಸಂಘ ಬೆಂಗಳೂರು ವಲಯದ ಮಧ್ಯೆ ಚಿಕ್ಕಪುಟ್ಟ ವ್ಯತ್ಯಾಸಗಳು ಇದ್ದು ಇದರಿಂದ ನೇರವಾಗಿ ಸಭೆಗಳಿಗೆ  ಹಾಜರಾಗುವುದಕ್ಕಿಂತ ಮುಂಚಿತವಾಗಿ ಎರಡೂ ಸಮಿತಿಯ ಮಧ್ಯೆ ಪ್ರತ್ಯೇಕ ಸಭೆ ನಡೆಸಿ ವ್ಯತ್ಯಾಸಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ನಮ್ಮ ವಿನಂತಿಯನ್ನು ದೇವಸ್ಥಾನದ ಸಮಿತಿಯ ಮುಖಂಡರುಗಳಿಗೆ ತಿಳಿಸುವ ಬಗ್ಗೆ ಸಭೆ ನಿರ್ಧರಿಸಿತು.  

ಹೊಸದಾಗಿ ಸೇರ್ಪಡೆಯಾಗುವ ಸದಸ್ಯರಿಗೆ ಈಗಾಗಲೇ ತಯಾರಿಸಿರುವ ನೂತನ ಮಾದರಿಯ ಅರ್ಜಿಯನ್ನು ತುಂಬಿಸುವಂತೆ ಸಭೆ ತೀರ್ಮಾನಿಸಿತು .

ನೂತನ ಸಮಿತಿಯ ಮಹತ್ವದ ಕಾರ್ಯಸೂಚಿಯಾದ ವಿದ್ಯಾನಿಧಿ ದೇಣಿಗೆ ಸಂಗ್ರಹಣೆಯ ಬಗ್ಗೆ ಅಧ್ಯಕ್ಷ ರಾದ ಶ್ರೀ ಪ್ರಸಾದ್ ಭಂಡಾರಿ ಮುನಿಯಾಲ್ ಮಾತನಾಡಿ, ನಮ್ಮ ಕಾರ್ಯಕಾರಿ ಸಮಿತಿಯ ಕಾರ್ಯಕ್ರಮಗಳಲ್ಲಿ ವಿದ್ಯಾನಿಧಿಯೂ ಕೂಡ ಪ್ರಮುಖವಾಗಿದ್ದು , ಬ್ಯಾಂಕ್ ನಲ್ಲಿ ನಿರಖು ಠೇವಣಿ ಮೇಲಿನ ಬಡ್ಡಿ ದರ ಕಡಿತಗೊಂಡ  ಪರಿಣಾಮ ಪ್ರತೀ ವರ್ಷ  ವಿದ್ಯಾರ್ಥಿ ವೇತನ ವಿತರಣೆಗೆ ಆರ್ಥಿಕ ಅಡಚಣೆ ಉಂಟಾಗುತ್ತಿದೆ ..ಹಾಗಾಗಿ  ದುಡಿಯುವ ಪ್ರತಿಯೊಬ್ಬಸದಸ್ಯರು ನಿರ್ದಿಷ್ಟ ಮೊತ್ತವನ್ನು ವಿದ್ಯಾ ನಿಧಿಗಾಗಿ ಮೀಸಲಿಟ್ಟು ಅರ್ಹ ಬಡ ಮಕ್ಕಳ ವಿದ್ಯೆಗೆ ನೆರವಾಗುವ ಸಂಘದ ಕಾರ್ಯಕ್ರಮದ ಜೊತೆಗೆ ಕೈ ಜೋಡಿಸಬೇಕಾಗಿ ವಿನಂತಿಸಿಕೊಂಡರು.ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ರೂಪುರೇಷೆ ತಯಾರಿಸುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು .

ಗೌರವಾಧ್ಯಕ್ಷರಾದ ಲಕ್ಷ್ಮಣ್ ಕರಾವಳಿ ಮತ್ತು ಮಾಜೀ ಅಧ್ಯಕ್ಷರಾದ ಉಮೇಶ್ ಎ ಅಮೂಲ್ಯ ಸಲಹೆಗಳನ್ನಿತ್ತರು

ಕೋಶಾಧಿಕಾರಿ ಅಕ್ಷತಾ ಸದಾನಂದರವರು ಮಹಾಸಭೆಗೆ ದೇಣಿಗೆ ನೀಡಿದ ಸದಸ್ಯರಿಗೆ ರಶೀದಿ ವಿತರಿಸಿದರು.

ಪ್ರಧಾನ ಕಾರ್ಯದರ್ಶಿ ಕುಶಲ್ ಭಂಡಾರಿಯವರ ವಂದನಾರ್ಪಣೆಯೊಂದಿಗೆ ಸಭೆ ಮುಖ್ತಾಯವಾಯಿತು.

-ಭಂಡಾರಿ ವಾರ್ತೆ 

Leave a Reply

Your email address will not be published. Required fields are marked *