January 19, 2025
bhandaey Varthe anniversary1
ಭಂಡಾರಿ ಬಂಧುಗಳ ಪ್ರತಿಭೆಗಳಿಗೊಂದು ವೇದಿಕೆ,ಭಂಡಾರಿ ಬಂಧುಗಳ ಬಡವಿದ್ಯಾರ್ಥಿಗಳ ಆಶಾಕಿರಣ, ಭಂಡಾರಿ ಬಂಧುಗಳ ಆರೋಗ್ಯ,ಕ್ಷೇಮದ ಆತ್ಮಬಂಧು “ಭಂಡಾರಿವಾರ್ತೆ” ಅಂತರ್ಜಾಲ ಪತ್ರಿಕೆಯ ಮೊದಲ ವಾರ್ಷಿಕೋತ್ಸವ ಆಗಸ್ಟ್ 26 ರ ಭಾನುವಾರ ಮಂಗಳೂರು ಬಲ್ಮಠದಲ್ಲಿರುವ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನ ಸಭಾಂಗಣದಲ್ಲಿ ನೂರಾರು ಭಂಡಾರಿ ಬಂಧುಗಳ ಸಮ್ಮುಖದಲ್ಲಿ ವೈಭವದಿಂದ ನಡೆಯಿತು.
ಮದ್ಯಾಹ್ನ ಮೂರು ಗಂಟೆ ಮೂವತ್ತು ನಿಮಿಷಕ್ಕೆ ಸಭೆ ಶ್ರೀ ರಾಜಶೇಖರ ಭಂಡಾರಿ ಬೆಂಗಳೂರು ಅವರ ಗಣಪತಿ ಸ್ತೋತ್ರದೊಂದಿಗೆ ಆರಂಭಗೊಂಡಿತು.ದಾಯ್ಜಿ ವರ್ಲ್ಡ್ ನ ಬುಲೆಟಿನ್ ಪ್ರೊಡ್ಯೂಸರ್ ಕುಮಾರಿ ದಿವ್ಯಾ ಉಜಿರೆಯವರು ಸ್ವಾಗತಿಸಿದರು.

ನಂತರ ಭಂಡಾರಿವಾರ್ತೆಯ ಸಹ ಸಂಪಾದಕರಾದ ಶ್ರೀ ಕುಶಾಲ್ ಕುಮಾರ್ ಭಂಡಾರಿಯವರು ಭಂಡಾರಿವಾರ್ತೆ ಪತ್ರಿಕೆಯ ಕಳೆದ ಒಂದು ವರ್ಷದ ಹಿನ್ನೋಟವನ್ನು ವಿಸ್ತೃತವಾಗಿ ಸಭಿಕರಿಗೆ ಮನಮುಟ್ಟುವಂತೆ ವಿವರಿಸಿದರು.

“ಭಂಡಾರಿವಾರ್ತೆ ಪತ್ರಿಕೆಯು ಕಳೆದ ವರ್ಷ ಮಾಯಾ ಇಂಟರ್ ನ್ಯಾಷನಲ್ ಹೋಟೆಲ್ ನ ಇದೇ ಸಭಾಂಗಣದಲ್ಲಿ ನಿಮ್ಮೆಲ್ಲರ ಮುಂದೆ ಲೋಕಾರ್ಪಣೆಗೊಂಡಿತ್ತು.ಅಂದಿನಿಂದ ಇಂದಿನವರೆಗೆ ಪತ್ರಿಕೆಯು ಹಲವಾರು ಸಮಾಜಮುಖಿ ಕೆಲಸಕಾರ್ಯಗಳನ್ನು ಮಾಡಿಕೊಂಡು ಬಂದಿದೆ.ಕಳೆದ ವರ್ಷ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ನಾವು ಮಕ್ಕಳಿಗಾಗಿ “ಸೆಲ್ಫಿ ಪೋಟೋ ಸ್ಪರ್ಧೆ” ಏರ್ಪಡಿಸಿದ್ದೆವು.ಅದರಲ್ಲಿ ನೂರಾ ಎಪ್ಪತ್ತೈದಕ್ಕಿಂತಲೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.ಅದರಲ್ಲಿ ಶ್ಲೋಕ್ ಮತ್ತು ಪ್ರಾಪ್ತ್ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನ ಗಳಿಸಿದ್ದರು.
ಭಂಡಾರಿವಾರ್ತೆಯ ಎರಡನೇ ಪ್ರಯತ್ನ ಭಂಡಾರಿ ಕುಟುಂಬದ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ “ಭಂಡಾರಿ ಚಿತ್ತಾರ-2017”.ಈ ಸ್ಪರ್ಧೆಯು ಮೂರು ಬೇರೆ ಬೇರೆ ವಯೋಮಾನದವರ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆದು ಸ್ಪರ್ಧಿಸಿದ ನೂರಾ ನಲವತ್ತಕ್ಕಿಂತಲೂ ಹೆಚ್ಚಿನ ಮಕ್ಕಳಲ್ಲಿ ಒಂಬತ್ತು ಮಕ್ಕಳಿಗೆ ಆಕರ್ಷಕ ಪ್ರಶಸ್ತಿಪತ್ರಗಳನ್ನು ಮತ್ತು ಬಹುಮಾನವನ್ನು ನೀಡಲಾಯಿತು ಮತ್ತು ಸ್ಪರ್ಧಿಸಿದ ಪ್ರತಿಯೊಬ್ಬ ಸ್ಪರ್ಧಿಗಳಿಗೂ ಆಕರ್ಷಕ ಪ್ರಶಸ್ತಿಪತ್ರಗಳನ್ನು ನೀಡಲಾಯಿತು.
ದೀಪಾವಳಿಯ ಸಂದರ್ಭದಲ್ಲಿ ಮನೆಯಲ್ಲಿ ಕೈಯಾರೆ ತಯಾರಿಸಿದ ಆಕರ್ಷಕ ಗೂಡುದೀಪಗಳಿಗೆ ಬಹುಮಾನ ನೀಡುವುದೆಂದು ತೀರ್ಮಾನಿಸಿ,ಭಂಡಾರಿ ಬಂಧುಗಳ ಮನೆ ಮನೆಗೆ ತೆರಳಿ ಗೂಡುದೀಪಗಳನ್ನು ಪರೀಕ್ಷಿಸಿ ರಾಮಕುಂಜ ಕೆದಿಲದ ವಿಶೇಷ ಚೇತನ ಪ್ರತಿಭಾವಂತೆ ಪ್ರಗತಿ ಕೆದಿಲ ತಯಾರಿಸಿದ ಗೂಡುದೀಪಕ್ಕೆ ಪ್ರಥಮ,ಸುರತ್ಕಲ್ ನ ಚೊಕಬೆಟ್ಟು ಭಂಡಾರಿ ಹೌಸ್ ದ್ವಿತೀಯ,ದೂರದ ಕತಾರ್ ದೇಶದಿಂದಲೇ ಸ್ಪರ್ಧಿಸಿದ್ದ ಮೋಹನ್ ಭಂಡಾರಿ ಜಪ್ಪಿನಮೊಗರು ತೃತೀಯ ಬಹುಮಾನ ನೀಡಲಾಯಿತು.
ಖ್ಯಾತ ನ್ಯಾಯವಾದಿ ಶ್ರೀ ಮನೋರಾಜ್ ರಾಜೀವ್ ನೇತ್ರತ್ವದಲ್ಲಿ ಭಂಡಾರಿವಾರ್ತೆ ಆಯೋಜಿಸಿದ ಸೇವಾಕಾರ್ಯ ಅತೀ ಜನಮನ್ನಣೆ ಪಡೆದ ಕಳೆದ ಸಾಲಿನ ಸೇವಾಕಾರ್ಯಗಳಲ್ಲೊಂದಾಯಿತು.ಮಂಗಳೂರು ನಗರದ ಕೊಡಿಯಾಲ್ ಬೈಲ್ ಜೈಲ್ ರಸ್ತೆಯಲ್ಲಿರುವ ವೈಟ್ ಡೌವ್ಸ್(ರಿ) ಸೇವಾಶ್ರಮದಲ್ಲಿ ನೂರಾ ಇಪ್ಪತ್ತಕ್ಕಿಂತಲೂ ಹೆಚ್ಚಿನ ವಿಶೇಷ ಚೇತನ ಪುರುಷರಿಗೆ ಮತ್ತು ಮಂಗಳೂರು ಮಣ್ಣಗುಡ್ಡೆ ಬರ್ಕೆಯ ವೈಟ್ ಡೌವ್ಸ್ (ರಿ) ಮಹಿಳಾ ಅಬಲಾಶ್ರಮದಲ್ಲಿ ಎಪ್ಪತ್ತಕ್ಕಿಂತಲೂ ಹೆಚ್ಚಿನ ವಿಶೇಷ ಚೇತನ ಮಹಿಳೆಯರಿಗೆ ಕೇಶಕರ್ತನ ಮಾಡಿ ಅವರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಭಂಡಾರಿವಾರ್ತೆಯ ಮಹತ್ವದ ಸೇವಾಕಾರ್ಯವೆನಿಸಿದೆ.
ಭಂಡಾರಿವಾರ್ತೆ ಕಳೆದ ಒಂದು ವರ್ಷದಲ್ಲಿ “ಭಂಡಾರಿ ಉದ್ಯೋಗ” ಯೋಜನೆಯಡಿಯಲ್ಲಿ ಹಲವಾರು ಭಂಡಾರಿ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಟ್ಟಿದೆ.ಕಳೆದ ಡಿಸೆಂಬರ್ ನಲ್ಲಿ ಬಹ್ರೇನ್ ದೇಶದಲ್ಲಿ ಅವಶ್ಯಕವಾಗಿದ್ದ ಸರ್ವೀಸ್ ಅಸಿಸ್ಟೆಂಟ್ ಹುದ್ದೆಗಳಿಗೆ ನಮ್ಮ ಭಂಡಾರಿ ಕುಟುಂಬದ ಮೂವರನ್ನು ಉದ್ಯೋಗದಾತ ಕಂಪನಿಯೊಂದಿಗೆ ಖುದ್ದಾಗಿ ಸಂಪರ್ಕಿಸಿ ಉದ್ಯೋಗ ಒದಗಿಸಿಕೊಡಲು ಪ್ರಯತ್ನಿಸಿದ್ದು ನಮ್ಮ ಸಾಧನೆಯೇ ಸರಿ. 
ಮಂಗಳೂರಿನ ಬಾವುಟಗುಡ್ಡೆಯ ಸಂತ ಅಲೋಶಿಯಸ್ ಕಾಲೇಜು ಕ್ರೀಡಾಂಗಣದಲ್ಲಿ ಭಂಡಾರಿ ಸ್ವಯಂ ಸೇವಕ ಸಂಘದ ಕ್ರೀಡಾಕೂಟದ ದಿನ ಭಂಡಾರಿವಾರ್ತೆಯಿಂದ ಕ್ರೀಡಾಕೂಟಕ್ಕೆ ಆಗಮಿಸಿದ ಬಂಧುಗಳಿಗೆ,ಮಕ್ಕಳಿಗೆ,ಸ್ಪರ್ಧಿಗಳಿಗೆ ಮತ್ತು ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಅನಿಯಮಿತವಾಗಿ ಕುಡಿಯುವ ನೀರು,ಸೋಡಾ ಶರಬತ್,ಚಹಾ,ಮಕ್ಕಳಿಗೆ ಐಸ್ ಕ್ಯಾಂಡಿಗಳು,ಚಾಕೊಲೇಟ್ ಗಳನ್ನು ಉಚಿತವಾಗಿ ವಿತರಿಸಿ ವಿಶೇಷವಾಗಿ ಮಕ್ಕಳ ಮುಖದಲ್ಲಿ ನಲಿವು ಮೂಡಿಸಲಾಯಿತು.

ಭಂಡಾರಿವಾರ್ತೆ ಕಳೆದೊಂದು ವರ್ಷದಿಂದ ಹಲವಾರು ಭಂಡಾರಿ ಬಂಧುಗಳ ನೆರವಿಗೆ ಧಾವಿಸಿದೆ.ಆರ್ಥಿಕ ಸಂಕಷ್ಟದಲ್ಲಿದ್ದ ಕಾರ್ಕಳ ತಾಲೂಕಿನ ಮಾಳ ಗ್ರಾಮದ ದಿವಂಗತ ಸುಂದರ ಭಂಡಾರಿಯವರ ಮಗ ಪ್ರಸಾದ್ ಭಂಡಾರಿಯವರು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಚಿಕಿತ್ಸೆಗೆ ಪರದಾಡುತ್ತಿರುವುದನ್ನು ಮನಗಂಡು ದಾನಿಗಳ ನೆರವಿನೊಂದಿಗೆ ಸಹಾಯಹಸ್ತ ಚಾಚಿದ್ದು,ಸುಬ್ರಹ್ಮಣ್ಯ ಸಮೀಪದ ಕಲ್ಕುಂದ ಕುದುರೆಮಜಲು ನಿವಾಸಿ ಜಗದೀಶ್ ಭಂಡಾರಿಯವರ ಪತ್ನಿ ಸುಗುಣ ಭಂಡಾರಿಯವರು ಸಕ್ಕರೆ ಕಾಯಿಲೆ ಮತ್ತು ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿ ಚಿಕಿತ್ಸೆಗೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದನ್ನು ಮನಗಂಡು ಅವರ ನೆರವಿಗೂ ಧಾವಿಸಿದ್ದು ಭಂಡಾರಿವಾರ್ತೆಯ ಕಳೆದ ಸಾಲಿನ ಎರಡು ಪ್ರಮುಖ ಘಟನೆಗಳು.

ಭಂಡಾರಿವಾರ್ತೆಯ ಈ ರೀತಿಯ ಸಮಾಜಮುಖಿ ಸೇವೆಗಳೊಂದಿಗೆ ಕೈ ಜೋಡಿಸಿದ ಶ್ರೀ ಮಾಧವ ಭಂಡಾರಿ ಸಾಗರ,ಶ್ರೀ ಲಕ್ಷ್ಮಣ ಕರಾವಳಿಯವರು ಹಲವಾರು ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತುಕೊಂಡಿದ್ದಾರೆ.ಉಡುಪಿಯ ವಿ.ಎಮ್.ನಗರದ ಪವಿತ್ರ ಭಂಡಾರಿಯವರು ತಮ್ಮ ಸಾಮಾಜಿಕ ಜಾಲತಾಣದ ಗ್ರೂಪ್ ಹಿಂದೂ ವಾರಿಯರ್ಸ್ ನಿಂದ ಭಂಡಾರಿ ಕುಟುಂಬದ ವಿದ್ಯಾರ್ಥಿನಿಯಾಗಿರುವ ಮೂಡುಬಿದಿರೆ ಇರುವೈಲು ಗ್ರಾಮದ ಶುಭಕರ ಭಂಡಾರಿ ಮತ್ತು ಮಂಜುಳಾ ಶುಭಕರ ಭಂಡಾರಿ ದಂಪತಿಯ ಪುತ್ರಿ ಕುಮಾರಿ ಸುಷ್ಮಾರಿಗೆ 12600/- ರೂ ಸಹಾಯಧನ ಒದಗಿಸಿಕೊಟ್ಟು ಅವರು ಕಾನೂನು ಪದವಿಗೆ ಪ್ರವೇಶ ಪಡೆಯಲು ಸಹಕರಿಸಿದರು.
ಭಂಡಾರಿವಾರ್ತೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ಭಂಡಾರಿ ಬಂಧುಗಳಿಗೆ ವಯಸ್ಸಿನ ಬೇಧಭಾವವಿಲ್ಲದೇ “ಸೆಲ್ಫಿ ಫೋಟೋ ಸ್ಪರ್ಧೆ” ಏರ್ಪಡಿಸಲಾಗಿತ್ತು.ಅದರಲ್ಲಿ ಸುಮಾರು ನೂರಾ ಹತ್ತು ಜನ ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.ಅವರಲ್ಲಿ ಅತೀ ಹೆಚ್ಚು ಪೇಜ್ ಲೈಕ್ ಪಡೆದ ನಾಗೇಶ್ ಭಂಡಾರಿ ಕೊಪ್ಪ ಪ್ರಥಮ ಸ್ಥಾನ, ಸುನಂದ ಭಂಡಾರಿ, ಉಡುಪಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.ಆದರೆ ಸ್ಪರ್ಧಿಸಿದ ಪ್ರತಿಯೊಬ್ಬರಿಗೂ ಆಕರ್ಷಕ ಪ್ರಶಸ್ತಿಪತ್ರಗಳನ್ನು ನೀಡುವ ಮೂಲಕ ಸ್ಪರ್ಧೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವಿಕೆಗೆ ಮೊದಲ ಪ್ರಾಶಸ್ತ್ಯ ಎಂಬುದನ್ನು ನಿರೂಪಿಸಲಾಗಿದೆ.
ನಮ್ಮ ಒಂದು ವರ್ಷದ ಎಲ್ಲಾ ಸಾಧನೆಗೂ ಬೆನ್ನೆಲುಬಾಗಿ ನಿಂತಿರುವ ನಮ್ಮ ಪ್ರಾಯೋಜಕರನ್ನು ನಾವು ಕೃತಜ್ಞತಾಪೂರ್ವಕವಾಗಿ ನೆನೆಯಲೇ ಬೇಕು.ಪುತ್ತೂರು ಶ್ರೀ ಬಾಲಕೃಷ್ಣ ಭಂಡಾರಿ.ಪೂನಾ,ಶ್ರೀ ಅರುಣ್ ಭಂಡಾರಿ,ಬಿಲ್ಡರ್ಸ್ ಮತ್ತು ಡೆವಲಪರ್ಸ್,ಶ್ರೀ ಲಕ್ಷ್ಮಣ ಕರಾವಳಿಯವರು,ಶ್ರೀ ಪ್ರವೀಣ್ ಭಂಡಾರಿ ಮತ್ತು ಕುಟುಂಬಸ್ಥರು.ಕೋಡಕ್ಕಲ್,ಶ್ರೀ ಪ್ರಫುಲ್ ಭಂಡಾರಿ,ಬ್ಲಂಟ್ ಫ್ಯಾಮಿಲಿ ಸಲೂನ್, ಶ್ರೀ ನರಸಿಂಹ ಭಂಡಾರಿ.ಕೊಪ್ಪ,ಶೃಂಗಾರ್ ಜುವೆಲ್ಲರ್ಸ್,ಬಂಟ್ವಾಳ… ಇವರಿಗೆಲ್ಲಾ ನಾವು ಹೃದಯಪೂರ್ವಕವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಈ ರೀತಿಯಲ್ಲಿ ಶ್ರೀ ಕುಶಾಲ್ ಕುಮಾರ್ ರವರು ಭಂಡಾರಿವಾರ್ತೆಯ ಪ್ರಥಮ ವರ್ಷದ ಹಿನ್ನೋಟವನ್ನು ಮಂಡಿಸಿದರು.
(ಮುಂದುವರಿಯುವುದು….)

1 thought on “ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಗೆ ಮೊದಲ ಹುಟ್ಟು ಹಬ್ಬದ ಸಂಭ್ರಮ.

Leave a Reply

Your email address will not be published. Required fields are marked *