September 20, 2024
ಕುಶಾಲ್ ಕುಮಾರ್ ಭಂಡಾರಿವಾರ್ತೆಯ ಒಂದು ವರ್ಷದ ಹಿನ್ನೋಟವನ್ನು ಮಂಡಿಸಿದ ನಂತರ ಕಾರ್ಯಕ್ರಮ ನಿರೂಪಕಿ ಕುಮಾರಿ ಗ್ರೀಷ್ಮಾ ಭಂಡಾರಿ ಕಲ್ಲಡ್ಕ ರವರು…. “ಭಂಡಾರಿವಾರ್ತೆಯ ಉದ್ಯೋಗ, ವಿದ್ಯೆ, ಆರೋಗ್ಯ, ಕ್ಷೇಮ ಯೋಜನೆಯ ಬಗ್ಗೆ ವರದಿಗಾರರಾದ ಭಾಸ್ಕರ್ ಭಂಡಾರಿ ಶಿರಾಳಕೊಪ್ಪ ಸಭೆಗೆ ವಿವರಿಸಲಿದ್ದಾರೆ” ಎಂದು ಸೂಚಿಸಿದರು.
ಭಾಸ್ಕರ್ ಭಂಡಾರಿಯವರು…. “ಸಭೆಯಲ್ಲಿ ಉಪಸ್ಥಿತರಿರುವ ನನ್ನೆಲ್ಲಾ ಪ್ರೀತಿಯ ಬಂಧುಗಳಿಗೆ ಹೃದಯಪೂರ್ವಕ ನಮಸ್ಕಾರಗಳು….
ಇಲ್ಲಿ ಬಹಳಷ್ಟು ಜನರಿಗೆ ನನ್ನ ಪರಿಚಯ ಇರಲಿಕ್ಕಿಲ್ಲ. ಹಾಗಾಗಿ ನಾನು ಮೊದಲು ನನ್ನ ಪರಿಚಯ ಮಾಡಿಕೊಳ್ತೇನೆ. ನನ್ನ ಹೆಸರು ಭಾಸ್ಕರ್ ಭಂಡಾರಿ ಶಿರಾಳಕೊಪ್ಪ ಅಂತ. ನಾನು ಕಳೆದ ಒಂದು ವರ್ಷದಿಂದ ಭಂಡಾರಿವಾರ್ತೆಯ ವರದಿಗಾರನಾಗಿ ಕೆಲಸ ಮಾಡ್ತಿದ್ದೇನೆ.
ವರದಿಗಾಗಿ, ಮಾಹಿತಿಗಾಗಿ ನಾನು ತುಂಬಾ ಜನರಿಗೆ ಫೋನ್ ಮಾಡಿದ್ದೇನೆ, ಅವರಿಗೆಲ್ಲ ನನ್ನ ಧ್ವನಿಯ ಪರಿಚಯ ಇದೆ ಆದರೆ ಅವರ್ಯ್ಯಾರೂ ನನ್ನನ್ನು ನೋಡಿಲ್ಲ. ಆದರೂ ನಾನು ತುಂಬಾ ಜನರಿಗೆ ಆತ್ಮೀಯ.ಭಂಡಾರಿ ಸಮಾಜದ ಘಟಾನುಘಟಿಗಳಾದ ಶ್ರೀ ಲಕ್ಷ್ಮಣ ಕರಾವಳಿಯವರು, ಶ್ರೀ ಅರುಣ್ ಭಂಡಾರಿ. ಮಂಗಳೂರು, ಶ್ರೀ ಬಾಲಕೃಷ್ಣ ಭಂಡಾರಿ.ಪೂನಾ, ಶ್ರೀ ಶಿವರಾಮ ಭಂಡಾರಿ. ಮುಂಬಯಿ, ಶ್ರೀ ರಾಮಣ್ಣ ಭಂಡಾರಿ. ಮುಂಬಯಿ,ಶ್ರೀ ಶಂಭುದಾಸ್ ಗುರೂಜಿಯವರು ಕುತ್ಯಾರ್, ಶ್ರೀ ವಿಜಯ್ ಕುಮಾರ್ ಹೆಬ್ಬಾರ್ ಬೈಲು, ಶ್ರೀ ನರಸಿಂಹ ಭಂಡಾರಿ ಕೊಪ್ಪ, ಶ್ರೀ ಮೋಹನ್ ಭಂಡಾರಿ, ಬಾಳೇಹೊನ್ನೂರು, ಶ್ರೀ ಸುಧಾಕರ ಬನ್ನಂಜೆಯವರು‌, ಶ್ರೀ ಶೇಖರ್ ಭಂಡಾರಿ ಕಾರ್ಕಳ, ಶ್ರೀ ಬಿರ್ತಿ ಗಂಗಾಧರ ಭಂಡಾರಿಯವರು, ಶ್ರೀ ನಾರಾಯಣ ಭಂಡಾರಿ, ರಾಮನಗರ, ಶ್ರೀ ರಾಜ್ ಭಂಡಾರಿ ತಿರುಮಲೆಗುತ್ತು ಕುವೈತ್, ಶ್ರೀ ಅನಿಲ್ ಭಂಡಾರಿ.ಮಸ್ಕತ್, ಡಾ|| ಸುಮತಿ ಲಕ್ಷ್ಮಣ ಕರಾವಳಿಯವರು, ಪವಿತ್ರ ಕರಂಬಳ್ಳಿಯವರು, ವಿಟ್ಲದ ಶಾಂತಲಾ ಹರೀಶ್ ರವರು ಇವರೆಲ್ಲ ನನ್ನೊಂದಿಗೆ ಆತ್ಮೀಯವಾಗಿ ಮಾತನಾಡಿದ್ದಾರೆ. ಇದೆಲ್ಲಾ ಸಾಧ್ಯವಾಗಿದ್ದು ಈ “ಭಂಡಾರಿವಾರ್ತೆ” ಯಿಂದ.
ಈ ಭಂಡಾರಿವಾರ್ತೆಯೆಂಬುದು ನಮ್ಮ ಪ್ರಕಾಶ್ ಭಂಡಾರಿ ಕಟ್ಲಾರವರ ಕನಸಿನ ಕೂಸು. ಅವರ ಮನದಾಳದ ಧನಿಗೆ ಮೌತ್ ಪೀಸ್ ನಂತೆ ಹೊರಬಂದದ್ದೇ ಈ ಭಂಡಾರಿವಾರ್ತೆ. ಇವರ ಕನಸಿಗೆ ಸಂದೇಶ್ ಕುಮಾರ್ ಬಂಗಾಡಿಯವರು ಮತ್ತು ಪತ್ರಕರ್ತ ಮಿತ್ರ ರವಿ ಬಿದನೂರು ಬಣ್ಣ ತುಂಬಿದರು. ಆ ಕನಸಿಗೆ ತಾಂತ್ರಿಕ ಸ್ಪರ್ಶ ನೀಡಿದವರು ನಮ್ಮ ಪ್ರಕಾಶ್ ಭಂಡಾರಿ ಮಂಜೇಶ್ವರ.ಇವರೊಂದಿಗೆ ಬೆಂಬಲವಾಗಿ ಕುಶಾಲ್ ಕುಮಾರ್, ಪ್ರಶಾಂತ್, ವೆಂಕಟೇಶ್ ಕುಂದಾಪುರ, ನಿತಿನ್ ಭಂಡಾರಿ, ಕಿರಣ್ ಸರಪಾಡಿ, ಕಿಶೋರ್ ಸೋರ್ನಾಡು, ಶೃತಿ, ಶೃತಿಕಾ, ದಿವ್ಯಾ ಉಜಿರೆ, ರಾಜಶೇಖರ್, ರಾಜೇಶ್, ಶ್ರೀಪಾಲ್, ಮನೋರಾಜ್….ಜೊತೆಗೆ ನಾನು. ಹೀಗೆ ನಾವೆಲ್ಲಾ ಒಟ್ಟಾಗಿ ಒಂದೊಂದೇ ಇಟ್ಟಿಗೆಗಳನ್ನಿಟ್ಟು ಕಟ್ಟಿದ ಸಣ್ಣ ಮನೆಯಿದು. ಈಗ ಈ ಮನೆಯಲ್ಲಿ ಸಾವಿರಾರು ಓದುಗರು, ನೂರಾರು ಹಿತೈಷಿಗಳು, ಹಲವಾರು ಫಲಾನುಭವಿಗಳು, ವಿದ್ಯಾರ್ಥಿಗಳು, ಬರಹಗಾರರು, ಲೇಖಕರು, ಕವಿಗಳು, ಕಥೆಗಾರರು, ವರದಿಗಾರರು…..ಹೀಗೆ ಎಲ್ಲರೂ ಇದ್ದಾರೆ. ಒಮ್ಮೆ ಹಿಂತಿರುಗಿ ನೋಡಿದರೆ ಸಂತೋಷವಾಗುತ್ತದೆ, ನಮ್ಮ ಒಂದು ವರ್ಷದ ಹಾದಿ ಸಾಧನೆಯೆಡೆಗೆ ಸಾಗಿದೆ ಎಂದು ಹರ್ಷವೆನಿಸುತ್ತದೆ.
ಭಂಡಾರಿವಾರ್ತೆಯ ಉದ್ದೇಶ ಭಂಡಾರಿ ಸಮಾಜದ ಸುದ್ದಿಗಳನ್ನು ಮನೆ ಮನೆಗೆ ತಲುಪಿಸುವುದು, ಭಂಡಾರಿ ಕುಟುಂಬದ ಉದಯೋನ್ಮುಖ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸುವುದು,ಉದ್ಯೋಗಾಕಾಂಕ್ಷಿ ಯುವಕರಿಗೆ ಸೂಕ್ತ ಉದ್ಯೋಗ ಕಲ್ಪಿಸಿಕೊಡಲು ಮಾರ್ಗದರ್ಶನ ನೀಡುವುದು ಮತ್ತು ಮತ್ತೊಬ್ಬರ ನೋವಿಗೆ ಮಿಡಿಯುವ ಒಂದಷ್ಟು ಮನಸ್ಸುಗಳನ್ನು ಒಟ್ಟುಗೂಡಿಸಿ ಅವರಿಂದ ಭಂಡಾರಿ ಸಮಾಜದ  ದುರ್ಬಲ ವರ್ಗದವರ ವಿದ್ಯೆ, ಆರೋಗ್ಯ ಮತ್ತು ಕ್ಷೇಮಕ್ಕಾಗಿ ಯೋಜನೆಗಳನ್ನು ರೂಪಿಸುವುದೇ ಆಗಿತ್ತು. ಆ ನಿಟ್ಟಿನಲ್ಲಿ ಭಂಡಾರಿವಾರ್ತೆ ಭಂಡಾರಿ ಕುಟುಂಬದ ಮನೆಮನದ ಸುದ್ದಿಗಳನ್ನು ಕ್ಷಿಪ್ರ ಗತಿಯಲ್ಲಿ ವಿಶ್ವದ ಮೂಲೆಮೂಲೆಗಳಲ್ಲಿರುವ ಭಂಡಾರಿ ಬಂಧುಗಳಿಗೆ ತಲುಪಿಸುವ ಕಾರ್ಯವನ್ನು ತುಂಬಾ ಅಚ್ಚುಕಟ್ಟಾಗಿ ಮಾಡುತ್ತಾ ಬಂದಿದೆ. ಮಗುವಿನ ನಾಮಕರಣ, ಹುಟ್ಟಿದ ಹಬ್ಬ,ಮನೆಯ ಗೃಹಪ್ರವೇಶ, ಮದುವೆಯ ವಾರ್ಷಿಕೋತ್ಸವ,ವಿವಾಹ ಸಂಭ್ರಮ, ನಿಶ್ಚಿತಾರ್ಥ ಸಂಭ್ರಮ, ಉದ್ಯೋಗ ವಹಿವಾಟುಗಳ ಪ್ರಾರಂಭೋತ್ಸವ, ಮಕ್ಕಳ ಆಟೋಟದ ಪ್ರಶಸ್ತಿ ಪಡೆದ ವರದಿಗಳು, ಮಕ್ಕಳ ವಿಧ್ಯಾಭ್ಯಾಸದ ರ್ಯಾಂಕ್, ಪದವಿ, ಪಿ,ಎಚ್,ಡಿ ಪಡೆದ ಸುದ್ದಿಗಳು, ಬಂಧುಗಳ ನಿಧನವಾರ್ತೆ…. ಹೀಗೆ ಎಲ್ಲಾ ರೀತಿಯ ವರದಿಗಳನ್ನೂ ಪ್ರಕಟಿಸಿ ಭಂಡಾರಿವಾರ್ತೆ ಭಂಡಾರಿ ಕುಟುಂಬದ ಮನೆಮನದ ಮಾತಾಗಿದೆ.
ಭಂಡಾರಿ ಕುಟುಂಬದ ಯುವಪ್ರತಿಭೆಗಳಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಹಲವಾರು ಪ್ರತಿಭಾವಂತರನ್ನು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನೂ ಭಂಡಾರಿವಾರ್ತೆ ಮಾಡಿದೆ. ಆ ಸಾಲಿನಲ್ಲಿ ಹರೀಶ್ ನಾರ್ವೆ, ಕಾರ್ತಿಕ್ ಮಜಲ್ಮಾರ್, ವಿಜಯ್ ಭಂಡಾರಿ ನಿಟ್ಟೂರು ,ಗ್ರೀಷ್ಮಾ ಕಲ್ಲಡ್ಕ, ಅಕ್ಷತಾ ಭಂಡಾರಿ, ಅನು.ಕೆ. ಭಂಡಾರಿ, ಪುನೀತ್ ಭಂಡಾರಿ ಉಜಿರೆ, ದೀಕ್ಷಿತ್ ಭಂಡಾರಿ ಉಜಿರೆ, ರತೀಶ್ ಭಂಡಾರಿ ಕುಂಜಿಬೆಟ್ಟು, ಸಂದೀಪ್ ಭಂಡಾರಿ ನಾವುಂದ, ವೈಶಾಖ್ ಭಂಡಾರಿ ಮೀಜಾರು… .ಮುಂತಾದ ಕಿರಿಯ ಪ್ರತಿಭೆಗಳ ಜೊತೆ ಜೊತೆಗೆ ಇರ್ವತ್ತೂರು ಗೋವಿಂದ ಭಂಡಾರಿ, ಅನಂತರಾಮ ಬಂಗಾಡಿ, ನಾಗಶ್ರೀ ಮೂಡುಬಿದಿರೆ, ಸುಪ್ರೀತಾ ಸೂರಿಂಜೆ….ಯವರಂತಹ ಹಿರಿಯ ಲೇಖಕರು ತಮ್ಮ ಲೇಖನಗಳನ್ನು ಬರೆದು ಭಂಡಾರಿವಾರ್ತೆಯನ್ನು ಸಿಂಗರಿಸಿದ್ದಾರೆ. ಈ ರೀತಿಯಲ್ಲಿ ಭಂಡಾರಿವಾರ್ತೆ ಭಂಡಾರಿ ಕುಟುಂಬದ ಪ್ರತಿಭಾವಂತರನ್ನು ಹೆಕ್ಕಿ ತೆಗೆದು ಸಮಾಜಕ್ಕೆ ಪರಿಚಯಿಸುವ ಕೆಲಸವನ್ನು ಮಾಡಿದೆ.
ಭಂಡಾರಿ ಉದ್ಯೋಗ….
ಭಂಡಾರಿವಾರ್ತೆಯಲ್ಲಿ “ಭಂಡಾರಿ ಉದ್ಯೋಗ” ಎಂಬ ವಿಶೇಷ ಅಂಕಣವನ್ನಾರಂಭಿಸಿ ಅದರಲ್ಲಿ ಉದ್ಯೋಗ ಲಭ್ಯತೆಯ ಬಗ್ಗೆ ನಿಖರವಾದ ಮಾಹಿತಿ ನೀಡುವುದರ ಜೊತೆಗೆ, ಕೆಲವು ಸಂದರ್ಭಗಳಲ್ಲಿ ನಮ್ಮ ಭಂಡಾರಿ ಕುಟುಂಬದ ಉದ್ಯೋಗಾಕಾಂಕ್ಷಿಗಳಿಗೆ ಖುದ್ದಾಗಿ ನಿಂತು ಉದ್ಯೋಗ ದೊರಕಿಸಿಕೊಟ್ಟ ಉದಾಹರಣೆಗಳೂ ಇವೆ.
ಭಂಡಾರಿ ವಿದ್ಯಾ….
ಭಂಡಾರಿ ಕುಟುಂಬದ ಮಕ್ಕಳು ಉನ್ನತ ವಿದ್ಯಾಭ್ಯಾಸದ ಕನಸು ಕಂಡು, ಆರ್ಥಿಕ ಅಡಚಣೆಯಿಂದಾಗಿ ವಿಧ್ಯಾಭ್ಯಾಸವನ್ನು ಮೊಟಕುಗೊಳಿಸುವಂತಾಗಬಾರದು. ಆರ್ಥಿಕವಾಗಿ ಹಿಂದುಳಿದ ಭಂಡಾರಿ ಬಂಧುಗಳ ಮನೆಯ ಪ್ರತಿಭಾವಂತ ಮಕ್ಕಳ ವಿದ್ಯಾಭ್ಯಾಸವನ್ನು ದಾನಿಗಳ ನೆರವನ್ನು ಪಡೆದು ಮುಂದುವರಿಸುವ ಯೋಜನೆಯೇ “ಭಂಡಾರಿ ವಿದ್ಯಾ”.ಈ ಯೋಜನೆಯ ಪ್ರಯೋಜನವನ್ನು ಈ ವರ್ಷವೇ ಹಲವಾರು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಭಂಡಾರಿ ಆರೋಗ್ಯ.
ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಭಂಡಾರಿ ಬಂಧುಗಳ ಆರೋಗ್ಯದ ಬಗ್ಗೆ ಗಮನ ಕೊಡುವುದೇ ಆಗಿದೆ. ಆಕಸ್ಮಿಕ ಅಪಘಾತಗಳಿಂದ ಅಥವಾ ಕಾಯಿಲೆಗೆ ತುತ್ತಾಗಿ ಸಂಕಷ್ಟಕ್ಕೆ ಸಿಲುಕಿರುವ ಭಂಡಾರಿ ಬಂಧುಗಳ ನೆರವಿಗೆ ದಾನಿಗಳ ಸಹಾಯದಿಂದ ಧಾವಿಸುವುದು, ಅವರ ಸಂಕಷ್ಟದಲ್ಲಿ ಭಾಗಿಯಾಗುವುದು ಈ ಯೋಜನೆಯ ಉದ್ದೇಶ.
ಭಂಡಾರಿ ಕ್ಷೇಮ.
ಈ ಯೋಜನೆಯಲ್ಲಿ ಕ್ಷೌರಿಕ ವೃತ್ತಿಯನ್ನು ಮಾಡುತ್ತಾ ಕ್ರಮೇಣ ಆರ್ಥಿಕ ಸಂಕಷ್ಟದ ಸುಳಿಗೆ ಸಿಲುಕಿರುವವರ ರಕ್ಷಣೆಗೆ ಧಾವಿಸುವುದಾಗಿದೆ. ಕ್ಷೌರಿಕ ವೃತ್ತಿಯಲ್ಲಿ ಕ್ಷೌರಿಕರಿಗೆ ವಯಸ್ಸಾದಂತೆ ಅವರ ದೈಹಿಕ ಕ್ಷಮತೆ ಕುಂದುವುದು ಜೊತೆಗೆ ಅವರ ಆದಾಯವೂ ಕುಂದುವುದು ಸರ್ವೇಸಾಮಾನ್ಯ. ಅಂತಹ ಸಂದರ್ಭದಲ್ಲಿ ಅವರ ಆರೋಗ್ಯದ ಜೊತೆ ಜೊತೆಗೆ ಅವರ ಉದ್ದಿಮೆಯ ಪುನಶ್ಚೇತನದ ಕಡೆಗೂ ಗಮನ ಕೊಡಬೇಕಾಗುತ್ತದೆ.
ಈ ಎಲ್ಲಾ ಯೋಜನೆಗಳು ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲು ಒಂದು ಟ್ರಸ್ಟ್ ನ ಅಗತ್ಯವಿದ್ದು, ಆ ಟ್ರಸ್ಟ್ ಗೆ “ಭಂಡಾರಿ ವಿಕಾಸ ಟ್ರಸ್ಟ್” ಎಂಬ ಹೆಸರನ್ನಿಟ್ಟು ಈಗಾಗಲೇ ಕಾರ್ಯಾರಂಭ ಮಾಡಲಾಗಿದೆ. ಭಂಡಾರಿ ಸಮಾಜದ ಏಳಿಗೆಗಾಗಿ, ಭಂಡಾರಿ ಸಮಾಜದ ಶ್ರೇಯೋಭಿವೃದ್ಧಿಗಾಗಿ ಮಿಡಿಯುವ ಒಂದಷ್ಟು ಮನಸ್ಸುಗಳನ್ನು ಒಗ್ಗೂಡಿಸಿ, ಅವರ ಧನಸಹಾಯದಿಂದ ಅರ್ಹ ಫಲಾನುಭವಿಗಳಿಗೆ ನೆರವು ನೀಡುವ, ಸಹಾಯಹಸ್ತ ಚಾಚುವ ಮೂಲಕ ಈ ಟ್ರಸ್ಟ್ ಕಾರ್ಯಾಚರಿಸುತ್ತದೆ.
ಈ ಯೋಜನೆಯ ಲಾಭ ಪಡೆಯುವ ವಿದ್ಯಾರ್ಥಿಗಳ, ಬಂಧುಗಳ ಹೆಸರನ್ನು ಎಲ್ಲಿಯೂ ಬಹಿರಂಗ ಪಡಿಸದೇ, ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರಬೇಕಾದರೆ ನಿಮ್ಮ ಸಂಪೂರ್ಣ ಸಹಕಾರ, ಬೆಂಬಲ ನಮ್ಮ ಭಂಡಾರಿವಾರ್ತೆ ಮೇಲಿರಲಿ ಎಂದು ಬೇಡಿಕೊಳ್ಳುತ್ತಾ,ಮತ್ತೊಮ್ಮೆ ನಿಮ್ಮೆಲ್ಲರಿಗೂ ಹಾರ್ದಿಕವಾಗಿ ಅಭಿವಂದಿಸುತ್ತಾ ನನ್ನೆರಡು ಮಾತುಗಳನ್ನು ಮುಗಿಸುತ್ತೇನೆ.
ಜೈ ಹಿಂದ್…..” ಹೀಗೆಂದು ಭಾಸ್ಕರ್ ಭಂಡಾರಿಯವರು ತಮ್ಮ ಮಾತು ಮುಗಿಸಿದರು.                                                                               
ನಿರೂಪಕಿ ಗ್ರೀಷ್ಮಾ…. “ಈಗ ವಾರ್ಷಿಕೋತ್ಸವದ ಸಂಭ್ರಮವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಗುವುದು….” ಎಂದು ಪ್ರಕಟಿಸುತ್ತಿದ್ದಂತೆ “ಭಂಡಾರಿವಾರ್ತೆ” ಯ ಸುಂದರ ಲೋಗೋ ರೂಪದ ಕೇಕ್ ವೇದಿಕೆಯ ಮೇಲೆ ಪ್ರತ್ಯಕ್ಷವಾಯಿತು.
ಭಂಡಾರಿವಾರ್ತೆಯ ಕ್ಯಾಪ್ಟನ್ ಶ್ರೀ ಪ್ರಕಾಶ್ ಭಂಡಾರಿ ಕಟ್ಲಾರವರು ಆಗ ಮಾತನಾರಂಭಿಸಿದರು….”ಪ್ರೀತಿಯ ಬಂಧುಗಳಿಗೆ ಕಾರ್ಯಕ್ರಮಕ್ಕೆ ಸ್ವಾಗತ. ಈ ದಿನ ಭಂಡಾರಿವಾರ್ತೆಯ ಮೊದಲ ವಾರ್ಷಿಕೋತ್ಸವ. ಇದನ್ನು ಒಂದು ಹುಟ್ಟು ಹಬ್ಬವಾಗಿ ಕೇಕ್ ಕತ್ತರಿಸುವ ಮೂಲಕ ಆಚರಿಸುವ ಅಭಿಲಾಷೆಯನ್ನು ನಮ್ಮ ತಂಡದ ಮಕ್ಕಳು ಹೊಂದಿರುವುದನ್ನು ಮನಗಂಡು ಈ ಕೇಕ್ ನ ವ್ಯವಸ್ಥೆ ಮಾಡಲಾಗಿದೆ.
ಇಲ್ಲಿ ನಾನು ಕೇವಲ ನಿಮಿತ್ಯ ಮಾತ್ರ. ಭಂಡಾರಿವಾರ್ತೆಯ ಪರಿಕಲ್ಪನೆ ನನ್ನದಿರಬಹುದು, ಆದರೆ ಅದನ್ನು ನೀರೆರೆದು ಪೋಷಿಸುತ್ತಿರುವವರು ಈ ನಮ್ಮ ತಂಡದ ಮಕ್ಕಳು. ಅವರನ್ನು ನಿಮಗಿಂದು ಪರಿಚಯ ಮಾಡಿಕೊಡುತ್ತೇನೆ.” ಎಂದವರು ತಮ್ಮ ತಂಡದ ಸದಸ್ಯರೆಲ್ಲರನ್ನೂ ವೇದಿಕೆಗೆ ಕರೆದು….”ಇವರು ಕುಶಾಲ್ ಕುಮಾರ್,ಇವರು ಮಂಗಳೂರಿನ ಮಂಜೇಶ್ವರದವರು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.ಇವರು ಶಿವಮೊಗ್ಗದ ಶಿರಾಳಕೊಪ್ಪದವರು. ಸಲೂನ್ ನಡೆಸುತ್ತಿರುವ ಇವರು ನಮ್ಮ ಭಂಡಾರಿವಾರ್ತೆಗಾಗಿ ಸುದ್ದಿಗಳನ್ನು ಬರೆಯುತ್ತಾರೆ. ಇವರು ಸಂದೇಶ್ ಬಂಗಾಡಿ.ಇವರು ನಮ್ಮ ಸಮಾಜದ ಹಿರಿಯರಾದ ಅನಂತರಾಮ ಬಂಗಾಡಿಯವರ ಮಗ. ಇವರು ನಮಗಾಗಿ ಇಲ್ಲಿ ಕೆಲಸ ಮಾಡುತ್ತಾರೆ. ಇವರು ಪ್ರಶಾಂತ್ ಕಾರ್ಕಳದವರು. ಇವರು ಸಕಲ ಕಲಾ ವಲ್ಲಭ. ಪತ್ರಿಕೆಯ ಎಲ್ಲಾ ವಿಭಾಗದಲ್ಲಿಯೂ ಕೆಲಸ ಮಾಡಿದ ಅನುಭವ ಇವರಿಗಿದೆ. ಇವರು ಕಿಶೋರ್ ಸೋರ್ನಾಡು, ನಮಗೆ ಹಲವಾರು ಸುದ್ದಿಗಳನ್ನು, ವರದಿಗಳನ್ನು ಮಾಡಿಕೊಟ್ಟರೂ ಎಂದಿಗೂ ಪ್ರಚಾರ ಬಯಸದ ಎಲೆ ಮರೆಯ ಕಾಯಿ. ಇವರು ಪ್ರಕಾಶ್ ಮಂಜೇಶ್ವರ.ಇವರು ಭಂಡಾರಿವಾರ್ತೆಯ ತಾಂತ್ರಿಕ ವಿಭಾಗದವರು.

ಇವರು ನಿತಿನ್, ಕುಂದಾಪುರದವರು. ಭಂಡಾರಿವಾರ್ತೆಯ ಅ್ಯಪ್ ಕ್ರೀಯೇಟ್ ಮಾಡಿಕೊಟ್ಟವರಿವರು. ಇವರು ರಾಜೇಶ್. ನಮ್ಮ ಟಿ.ವಿ.ಯವರು. ಜನಪ್ರಿಯ ಕಾರ್ಯಕ್ರಮ ಬಲೆ ತೆಲಿಪಾಲೆ ಯ ಸಂಕಲನಕಾರರು. ಭಂಡಾರಿವಾರ್ತೆಗೆ ಕೆಲಸ ಮಾಡುತ್ತಾರೆ. ಇವರು ರಾಜಶೇಖರ್. ಮೂಲತಃ ಉಡುಪಿಯವರು, ಪ್ರಸ್ತುತ ಬೆಂಗಳೂರಿನಲ್ಲಿ ಇದ್ದಾರೆ. ಇವರು ದಿವ್ಯ ಉಜಿರೆ. ದಾಯ್ಜಿವರ್ಲ್ಡ್ ನಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿದ್ದಾರೆ. ಇವರು ಸಹಾ ಭಂಡಾರಿವಾರ್ತೆಗಾಗಿ ಕೆಲಸ ಮಾಡ್ತಿದಾರೆ. ಕಾನೂನು ಸಲಹೆಗಾರರಾದ ಖ್ಯಾತ ವಕೀಲರು ಶ್ರೀ ಮನೋರಾಜ್ ರಾಜೀವ್….ಇನ್ನೂ ಈ ಸಂದರ್ಭ ದಲ್ಲಿ ಉಪಸ್ಥಿತರಿರದ ಸದಸ್ಯರಾದ ಶೃತಿ ಅಳಪೆ,ಶೃತಿಕಾ ಬೆಂಗಳೂರು, ವೆಂಕಟೇಶ್ ಕುಂದಾಪುರ. ಕಿರಣ್ ಸರಪಾಡಿ, ಭಂಡಾರಿವಾರ್ತೆಯ ಬ್ಲಾಗ್ ತಯಾರಿಸಿಕೊಟ್ಟ ಪತ್ರಕರ್ತ ಮಿತ್ರ ರವಿ ಬಿದನೂರು, ನಮ್ಮ ಭಂಡಾರಿವಾರ್ತೆಯ ಪ್ರಚಾರದ ಹೊಣೆ ಹೊತ್ತಿರುವ ದೂರದ ಕತಾರ್ ನಲ್ಲಿ ನೆಲೆಸಿರುವ ಶ್ರೀಪಾಲ್ ಅವರ ಅವರ ಸೇವೆಯನ್ನು ಸ್ಮರಿಸುತ್ತಾ…ಇವರೆಲ್ಲರ ಪರಿಶ್ರಮದಿಂದ ಭಂಡಾರಿವಾರ್ತೆ ಈ ಮಟ್ಟದ ಯಶಸ್ಸು ಗಳಿಸಲು ಸಾಧ್ಯವಾಯಿತು ” ಎಂದು ಹೇಳಿದರು.
ದಿವ್ಯಾ ಉಜಿರೆಯವರು ಕೇಕ್ ಕತ್ತರಿಸಿ ಮೊದಲ ತುಣುಕನ್ನು ಭಂಡಾರಿವಾರ್ತೆಯ CEO ಪ್ರಕಾಶ್ ಭಂಡಾರಿ ಕಟ್ಲಾರವರಿಗೆ ನೀಡಿದರು. ವೇದಿಕೆ ಮೇಲಿದ್ದ ಸದಸ್ಯರೆಲ್ಲರೂ ಕೇಕನ್ನು ಸವಿದರು. ನಂತರ ಸಭೆಯಲ್ಲಿ ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ಕೇಕ್ ಜೊತೆಗೆ ತಂಪಾದ ಕೆನೆಭರಿತ ಹಾಲು ನೀಡಲಾಯಿತು.
ಹತ್ತು ನಿಮಿಷದ ವಿಶ್ರಾಂತಿಯ ನಂತರ ಸಭೆ ಮತ್ತೆ ಸೇರಿತು.
ನಿರೂಪಕಿ ಗ್ರೀಷ್ಮಾ ಭಂಡಾರಿ ಕಲ್ಲಡ್ಕ ಸಭೆಯ ಮುಂದಿನ ಭಾಗಕ್ಕೆ ನಮ್ಮನ್ನು ಕರೆದೊಯ್ದರು….
(ಮುಂದುವರಿಯುವುದು.)
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *