September 20, 2024
ಭಂಡಾರಿವಾರ್ತೆಯ ಕ್ಯಾಪ್ಟನ್ ಪ್ರಕಾಶ್ ಭಂಡಾರಿ ಕಟ್ಲಾರವರು ತಮ್ಮ ತಂಡದ ಸದಸ್ಯರನ್ನು ಪರಿಚಯಿಸುವುದಕ್ಕೂ ಮೊದಲು….. ಭಂಡಾರಿವಾರ್ತೆ ಇದೊಂದು ವಾರ್ತಾಪತ್ರಿಕೆ ಮಾತ್ರ ಆಗಿರದೇ ಭಂಡಾರಿ ಸಮಾಜದ ಸರ್ವತೋಮುಖ ಬೆಳವಣಿಗೆಗೆ ಪೀಠಿಕೆಯಾಗಿದೆ.ಇದುವರೆಗೆ ಕುಶಾಲ್ ಕುಮಾರ್ ಮತ್ತು ಭಾಸ್ಕರ್ ಭಂಡಾರಿ ಶಿರಾಳಕೊಪ್ಪರವರು ಪ್ರಸ್ತಾಪಿಸಿದ ಅಷ್ಟೂ ವಿಷಯಗಳೊಂದಿಗೆ ಇನ್ನಷ್ಟು ಹೊಸ ಹೊಸ ಯೋಜನೆಗಳು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಬೇಕಾಗಿದೆ.ನೀವೆಲ್ಲಾ ತಿಳಿದಿರುವಂತೆ ಭಂಡಾರಿವಾರ್ತೆ ಮೊಬೈಲ್ ನಲ್ಲಿ ,ಇಂಟರ್ ನೆಟ್ ನಲ್ಲಿ ಸುದ್ದಿ ನೀಡುವುದಕ್ಕಷ್ಟೇ ಸೀಮಿತವಾಗಿರದೇ ಕಳೆದ ಸಾಲಿನಲ್ಲಿ ಸುಮಾರು ಹದಿನೆಂಟು ಫಲಾನುಭವಿಗಳಿಗೆ, ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದೆ.ಇಲ್ಲಿ ಭಂಡಾರಿವಾರ್ತೆ ಕೇವಲ ಬ್ರಿಡ್ಜ್ ಮಾತ್ರ.ದಾನಿಗಳ ಮತ್ತು ಪ್ರಾಯೋಜಕರ ಕೊಡುಗೆಗಳನ್ನು ಸತ್ಪಾತ್ರರಿಗೆ ತಲುಪಿಸುವ ಕೆಲಸ ಮಾಡಿದ್ದೇವೆ.ಇಷ್ಟು ದಿನ ನಮ್ಮ ದಾನಿಗಳು,ಪ್ರಾಯೋಜಕರು ತೆರೆಮರೆಯಲ್ಲಿ ನಿಲ್ಲುತ್ತಿದ್ದರು.ಇನ್ನು ಮುಂದೆ ಅವರನ್ನು ಮುಂಚೂಣಿಗೆ ತರುವ ಪ್ರಯತ್ನ ಆಗಬೇಕಿದೆ.ಹಾಗಂತ ಅವರನ್ನು ವೈಭವೀಕರಿಸುವುದಲ್ಲ.ಅವರ ಮುಖಾಂತರ ಇನ್ನಷ್ಟು ಜನ ಪ್ರೇರೇಪಿತಗೊಂಡು ಮುಂದೆ ಬರುವ ನಿರೀಕ್ಷೆಯಿದೆ.ಮುಂದಿನ ವರ್ಷದಲ್ಲಿ ಸುಮಾರು ಐವತ್ತು ಜನ ವಿದ್ಯಾರ್ಥಿಗಳನ್ನೋ,ಫಲಾನುಭವಿಗಳನ್ನೋ ಆಯ್ಕೆ ಮಾಡಿ ಅವರಿಗೆ ನೆರವಾಗುವ ಕೆಲಸವಾಗಬೇಕಿದೆ.ಅದಕ್ಕೆ ನಿಮ್ಮೆಲ್ಲರಿಂದ ಇನ್ನೂ ಹೆಚ್ಚಿನ ಬೆಂಬಲ, ಸಹಕಾರ ಬಯಸುತ್ತೇವೆ.
ಒಂದು ವಿಷಯ ಮರೆತೆ….ಅದೇನೆಂದರೆ ಈ ದಿನ ಇಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ಕೇವಲ ನಾವೂ ನೀವೂ ಮಾತ್ರ ನೋಡುತ್ತಿರುವುದಲ್ಲ.ಜಗತ್ತಿನ ಮೂಲೆ ಮೂಲೆಗೆ ಈ ಕಾರ್ಯಕ್ರಮ ನೇರಪ್ರಸಾರ ಆಗುತ್ತಿದೆ.ದುಬೈನಲ್ಲಿ, ಕತಾರ್ ನಲ್ಲಿ, ಯುರೋಪ್ ನಲ್ಲಿ, ಅಮೇರಿಕಾದಲ್ಲಿ… ಹೀಗೆ ವಿಶ್ವದ ಮೂಲೆಮೂಲೆಗಳಲ್ಲಿರುವ ನಮ್ಮ ನಿಮ್ಮ ಬಂಧುಗಳು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದಾರೆ.ಈ ರೀತಿಯಲ್ಲಿ ಭಂಡಾರಿವಾರ್ತೆ ಹೊಸ ಆಲೋಚನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.ಹೊರಗೆ ಜನ ಏನೇ ಮಾತನಾಡಿದರೂ ನೀವು ಅವರಿಗೆ ತಿಳಿಸಿ ಹೇಳಬೇಕು.ನೀವೇನು ಇಲ್ಲಿ ಸೇರಿದ್ದೀರಿ ನೀವು ಸಮಸ್ತ ಭಂಡಾರಿ ಸಮಾಜದ ಪ್ರತಿನಿಧಿಗಳು.ನೀವುಗಳು ಅವರಿಗೆ ಸಮಜಾಯಿಷಿ ನೀಡಬೇಕು.ಅದೂ ಅಲ್ಲದೇ ಈ ಒಂದು ವರ್ಷದಲ್ಲಿ ಭಂಡಾರಿವಾರ್ತೆ ಒಂದೇ ಒಂದು ದುರುದ್ದೇಶಪೂರಿತ,ರಾಜಕೀಯ ಪ್ರೇರಿತ ಸುದ್ದಿ ಪ್ರಕಟಿಸಿಲ್ಲ.ಬೇಕಾದರೆ ನೀವು ಭಂಡಾರಿವಾರ್ತೆಯ ಪ್ರತೀ ಪುಟವನ್ನು ನೋಡಬಹುದು.ದಯವಿಟ್ಟು ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿ ಸಾಕು…..” ಎಂದು ಭಂಡಾರಿವಾರ್ತೆಯ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡರು.
ಭಂಡಾರಿ ವಿದ್ಯಾ ಯೋಜನೆಯಿಂದ ಸಹಾಯಹಸ್ತ ಪಡೆದವರ ಮನದಾಳದ ಮಾತು
ಮುಂದಿನ ಕಾರ್ಯಕ್ರಮ ಭಂಡಾರಿವಾರ್ತೆಯ “ಭಂಡಾರಿ ವಿದ್ಯಾ” ಯೋಜನೆಯ ಫಲಾನುಭವಿಗಳ ಅನಿಸಿಕೆಗಳು….
ಮೊದಲು ಮಾಧವ ಭಂಡಾರಿ ಸಾಗರ ಇವರಿಂದ 21600/- ರೂಪಾಯಿಗಳ ಸಹಾಯಧನ ಪಡೆದು ಪತ್ರಿಕೋದ್ಯಮವನ್ನು ಅಭ್ಯಸಿಸುತ್ತಿರುವ ಕುಮಾರಿ ಗ್ರೀಷ್ಮಾ ಭಂಡಾರಿ ಕಲ್ಲಡ್ಕರವರು ಮಾತನಾಡುತ್ತಾ….ಭಂಡಾರಿವಾರ್ತೆಯೆಂಬ ಅದ್ಭುತ ಪ್ರಪಂಚಕ್ಕೆ ನನ್ನನ್ನು ಪರಿಚಯಿಸಿದ್ದಕ್ಕಾಗಿ ಮೊದಲು ನಾನು ನನ್ನ ಅಕ್ಕನಾದ ವಿಟ್ಲದ ಶಾಂತಲಾ ಹರೀಶ್ ಭಂಡಾರಿಯವರಿಗೆ ಧನ್ಯವಾದಗಳನ್ನು ಹೇಳಬೇಕು.ಈ ಮೂರು ತಿಂಗಳಿಂದೀಚೆಗೆ ನಾನು ಭಂಡಾರಿವಾರ್ತೆಯೊಂದಿಗಿದ್ದೇನೆ.ಭಂಡಾರಿವಾರ್ತೆಯನ್ನು ಹತ್ತಿರದಿಂದ ಕಂಡು ನಾನು ಕಲಿತದ್ದು ಕಠಿಣ ಪರಿಶ್ರಮ,ಸರಳತೆ ಮತ್ತು ಪಾಸಿಟಿವ್ ಥಿಂಕಿಂಗ್.ಪ್ರಕಾಶ್ ಸರ್ ನನಗೆ ಪಾಸಿಟಿವ್ ಥಿಂಕಿಂಗ್ ಬಗ್ಗೆ ತುಂಬಾ ಚೆನ್ನಾಗಿ ತಿಳುವಳಿಕೆ ಹೇಳಿಕೊಟ್ಟಿದ್ದಾರೆ.ಭಂಡಾರಿವಾರ್ತೆಯಲ್ಲಿ ನನ್ನ ಬರಹಗಳು ಪ್ರಕಟಗೊಂಡ ಮೇಲೆ ಕಾಲೇಜಿನಲ್ಲಿ ನನಗಿರುವ ಗೌರವ ಇನ್ನೂ ಹೆಚ್ಚಾಗಿದೆ.ನನ್ನ ಬರಹಗಳನ್ನು ತಿದ್ದಿ ಅವುಗಳನ್ನು ಪ್ರಕಟಿಸಿ,ನನ್ನ ಬರಹಗಳಿಗೆ ಒಂದು ಮೌಲ್ಯ ಒದಗಿಸಿಕೊಟ್ಟ ಭಾಸ್ಕರ್ ಸರ್ ಮತ್ತು ಪ್ರಶಾಂತ್ ಸರ್ ಅವರಿಗೆ ಧನ್ಯವಾದಗಳು.
ಡಾ|| ಶಿವರಾಮ ಕಾರಂತರು ತಾವು ಮಾಡಿದ ದಾನವನ್ನು ಹೇಗೆ ಗೌಪ್ಯವಾಗಿ ಇಡುತ್ತಿದ್ದರೋ ಹಾಗೇ ಮಾಧವ ಭಂಡಾರಿ ಸರ್ ನನಗೆ ಅವರ ಸಹಾಯವನ್ನು ಎಲ್ಲಿಯೂ ಹೇಳದಂತೆ ತಿಳಿಸಿದ್ದರು.ಆದರೆ ಇಂತಹ ಒಳ್ಳೆಯ ವೇದಿಕೆಯಲ್ಲಿ ನಾನು ಅವರ ಸಹಾಯವನ್ನು ಬಹಿರಂಗ ಪಡಿಸದಿದ್ದರೆ ನನ್ನ ತಪ್ಪಾದೀತು.ಆದ್ದರಿಂದ ಅವರ ಸಹಾಯವನ್ನು ಜೀವನದಲ್ಲಿ ನಾನೆಂದೂ ಮರೆಯುವುದಿಲ್ಲ.ಖಂಡಿತವಾಗಿ ನನ್ನ ದುಡಿಮೆಯ ಸಮಯದಲ್ಲಿ ನಾನೂ ಸಹಾ ನನ್ನಂತಹ ಹತ್ತಾರು ಮಕ್ಕಳಿಗೆ ಸಹಾಯ ಮಾಡುತ್ತೇನೆ ಎಂಬ ಭರವಸೆಯನ್ನು ಅವರಿಗೆ ನೀಡುತ್ತೇನೆ….”ಎಂದು ತಮ್ಮ ಮನದಾಳದ ಮಾತುಗಳನ್ನು ಆಡಿದರು.
ಭಂಡಾರಿವಾರ್ತೆಯಿಂದ ಪ್ರೇರೇಪಿತಗೊಂಡ ಉಡುಪಿ ವಿ.ಎಮ್.ನಗರದ ಪವಿತ್ರ ಭಂಡಾರಿಯವರು ತಾವು ಒಳಗೊಂಡಿರುವ ತಮ್ಮ ಸ್ನೇಹಿತರ ಸಾಮಾಜಿಕ ಜಾಲತಾಣದ ಗ್ರೂಪ್ “ಹಿಂದೂ ವಾರಿಯರ್ಸ್” ನಿಂದ ಕಾರ್ಕಳದ ಇರುವೈಲು ಗ್ರಾಮದ ಕುಮಾರಿ ಸುಷ್ಮಾ ಭಂಡಾರಿಯವರಿಗೆ ಕಾನೂನು ವ್ಯಾಸಂಗಕ್ಕಾಗಿ 12600/- ರೂಪಾಯಿಗಳ ಸಹಾಯಧನ ಒದಗಿಸಿಕೊಟ್ಟಿದ್ದರು.ಸುಷ್ಮಾ ಭಂಡಾರಿ…. “ಭಂಡಾರಿವಾರ್ತೆಯ ಪವಿತ್ರಾರವರು ನಮ್ಮ ಸಂಬಂಧದ ಸಂತೋಷ್ ಭಂಡಾರಿಯವರಿಂದ ನನ್ನ ಬಗ್ಗೆ ತಿಳಿದುಕೊಂಡು,ನನಗೆ ಕಾನೂನು ಶಿಕ್ಷಣ ಪಡೆಯಲು ಧನಸಹಾಯ ಮಾಡಿ ಸಹಕರಿಸಿದರು.ಪವಿತ್ರ ಮೇಡಂ,ಹಿಂದೂ ವಾರಿಯರ್ಸ್ ಮತ್ತು ಭಂಡಾರಿವಾರ್ತೆ ಇವರಿಗೆಲ್ಲಾ ನನ್ನ ಹೃದಯಪೂರ್ವಕ ಧನ್ಯವಾದಗಳು.” ಎಂದು ತಮ್ಮ ಕೃತಜ್ಞತೆ ಸಲ್ಲಿಸಿದರು.

ನಿಟ್ಟೆಯಲ್ಲಿ ಇಂಜಿನಿಯರಿಂಗ್ ಕಲಿಯುತ್ತಿರುವ ಅಶ್ವಥ್ ಭಂಡಾರಿಯವರ ಸಹೋದರಿ ಕುಮಾರಿ ಅಶ್ವಿನಿ ಭಂಡಾರಿ ಮಾತನಾಡುತ್ತಾ….”ಭಂಡಾರಿವಾರ್ತೆಯ ವನಿತಾ ಮೇಡಂ ಮತ್ತು ಕಿಶೋರ್ ಸೋರ್ನಾಡ್ ಅಂಕಲ್ ಇವರಿಬ್ಬರೂ ನನ್ನ ತಮ್ಮನಿಗೆ ಇಂಜಿನಿಯರಿಂಗ್ ಮಾಡುವ ಅಭಿಲಾಷೆ ಇದೆ ಆದರೆ ಶಕ್ತಿಯಿಲ್ಲ ಎಂಬುದನ್ನು ಮನಗಂಡು ಭಂಡಾರಿವಾರ್ತೆಯ ವಾಟ್ಸಪ್ಪ್ ಗ್ರೂಪ್ ನ  ಮ‌ೂಲಕ ಗಮನ ಸೆಳೆದು ಮಾಧವ ಭಂಡಾರಿ ಸರ್ ಮತ್ತು ಪೂನದ ಬಾಲಕೃಷ್ಣ ಭಂಡಾರಿ ಸರ್ ಮತ್ತು ಇತರ ಹಲವು ಭಂಡಾರಿ ಬಂಧುಗಳು 55099/- ರೂಪಾಯಿಗಳ ಧನಸಹಾಯ ಒದಗಿಸಿಕೊಟ್ಟಿದ್ದಾರೆ.ಇವರ ಸಹಾಯವನ್ನು ನಾವೆಂದಿಗೂ ಮರೆಯುವುದಿಲ್ಲ.ಮತ್ತೆ ಮಾಧವ ಭಂಡಾರಿ ಸರ್, ನನಗೆ ಅವರನ್ನು ನೋಡಿದರೆ ನರೇಂದ್ರ ಮೋದಿಯವರನ್ನು ನೋಡಿದ ಹಾಗೆ ಅನ್ನಿಸ್ತದೆ.ಅವರ ಮಾತುಗಳು ಸಹ ತುಂಬಾ ಪರಿಣಾಮಕಾರಿಯಾಗಿರುತ್ತದೆ.ಅವರು ಎಂಥವರಲ್ಲಿಯೂ ಸ್ಪೂರ್ತಿ ತುಂಬುವಂತೆ ಮಾತನಾಡ್ತಾರೆ.ಅವರಿಗೆ ಮತ್ತೊಮ್ಮೆ ಧನ್ಯವಾದಗಳು” ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಕೊನೆಯಲ್ಲಿ ಮಾತನಾಡಿದ ಪ್ರಕಾಶ್ ಭಂಡಾರಿ ಕಟ್ಲಾರವರು… “ನೋಡಿ ಭಂಡಾರಿವಾರ್ತೆ ಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುವುದು ಮಾತ್ರವಲ್ಲ.ಶಿಕ್ಷಣಕ್ಕಾಗಿ ಅವರನ್ನು ದತ್ತು ತೆಗೆದುಕೊಂಡಿರುವುದು.ಇಲ್ಲಿ ಅವರ ಶಿಕ್ಷಣ ಪೂರ್ಣಗೊಳ್ಳುವವರೆಗೂ ಅವರ ಸಂಪೂರ್ಣ ಖರ್ಚುವೆಚ್ಚಗಳನ್ನು ದಾನಿಗಳ ನೆರವಿನಿಂದ ಭರಿಸಲಾಗುವುದು.ಅವರ ಕಾಲೇಜಿನ ಶುಲ್ಕ,ಪುಸ್ತಕ,ಹಾಸ್ಟೆಲ್,ಬಸ್ ಚಾರ್ಜ್ ಮತ್ತು ಇತರೆ ಶೈಕ್ಷಣಿಕ ಖರ್ಚು ವೆಚ್ಚಗಳನ್ನು ಭರಿಸಲು ನಿರ್ಧರಿಸಲಾಗಿದೆ.ಈ ಯೋಜನೆಯಲ್ಲಿ ಈಗಾಗಲೇ ಶ್ರೀ ಲಕ್ಷ್ಮಣ ಕರಾವಳಿಯವರು, ಶ್ರೀ ಬಾಲಕೃಷ್ಣ ಭಂಡಾರಿ ಪೂನಾ,ಶ್ರೀ ಮಾಧವ ಭಂಡಾರಿ ಸಾಗರ ಮುಂತಾದವರು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಈ ಯೋಜನೆಯಲ್ಲಿ ಇನ್ನೂ ಹೆಚ್ಚಿನ ಭಂಡಾರಿ ಬಂಧುಗಳು ಸ್ವಯಂ ಪ್ರೇರಿತರಾಗಿ ತಾವೂ ಭಾಗೀದಾರರಾಗಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.” ಎಂದು ನೆರೆದಿದ್ದವರಲ್ಲಿ ವಿನಂತಿಸಿಕೊಂಡರು.
ನಾಳಿನ ಭಾಗದಲ್ಲಿ ಶ್ರೀ ಮಾಧವ ಭಂಡಾರಿ ಸಾಗರ ಮತ್ತು ಶ್ರೀ ಲಕ್ಷ್ಮಣ ಕರಾವಳಿಯವರ ಸ್ಪೂರ್ತಿ ತುಂಬುವ,ಚಿಂತನೆಗೆ ಒಡ್ಡುವ ಮಾತುಗಳನ್ನು ನೋಡುವ….
(ಮುಂದುವರಿಯುವುದು…)
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
ಛಾಯಾಗ್ರಾಹಕರು :ದೀಕ್ಷಿತ್ ಭಂಡಾರಿ ಉಜಿರೆ(ಮೊಬೈಲ್ : 7892415610, 9972348997)

1 thought on “ವಿದ್ಯೆಗಾಗಿ ಭಂಡಾರಿ ವಾರ್ತೆಯ ಮೂಲಕ ಸಹಾಯ ಪಡೆದ ಸಮಾಜದ ವಿದ್ಯಾರ್ಥಿಗಳಿಂದ ಮನದಾಳದ ಮಾತು -ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಗೆ ಮೊದಲ ಹುಟ್ಟು ಹಬ್ಬದ ಸಂಭ್ರಮ-ಭಾಗ 3.

Leave a Reply

Your email address will not be published. Required fields are marked *