
ಭಂಡಾರಿವಾರ್ತೆಯ ಕಾರ್ಯನಿರ್ವಾಹಕರಾದ ಶ್ರೀ ಪ್ರಕಾಶ್ ಭಂಡಾರಿ ಕಟ್ಲಾರವರು…. “ಸಾಗರದ ಮಾಧವ ಭಂಡಾರಿಯವರು ಒಂದೆರಡು ಮಾತನಾಡಬೇಕು” ಎಂದು ಮಾಧವಣ್ಣನವರನ್ನು ಆಹ್ವಾನಿಸಿದರು.
ನಗುತ್ತಲೇ ಬಂದ ಮಾಧವಣ್ಣನವರು…. “ಪ್ರೀತಿಯ ಗೆಳೆಯರೆ,ಬಂಧುಗಳೆ ನಮಸ್ಕಾರಗಳು. ನಾನು ಮಾಧವ ಭಂಡಾರಿ ಸಾಗರ. ಪ್ರಕಾಶಣ್ಣನವರು ಹೇಳಿದರು ಒಂದೆರಡು ಮಾತನಾಡಿ ಅಂತ. ಆದರೆ ನನಗೆ ಒಂದೆರಡು ಮಾತನಾಡಿ ಅಭ್ಯಾಸವಿಲ್ಲ. ಯಾಕೆಂದರೆ ನಾವೆಲ್ಲಾ ಭೀಮನ ಕುಲದವರು. ಭೀಮನ ಊಟ ಹೇಗೆ ಅಧಿಕವೋ ಹಾಗೆ ನನ್ನ ಮಾತು ಕೂಡಾ ಅಧಿಕ.ಹೆಚ್ಚು ಮಾತನಾಡ್ತೇನೆ ಮತ್ತು ಆ ಹೆಚ್ಚು ಮಾತೇ ನನ್ನನ್ನು ಒಮ್ಮೊಮ್ಮೆ ಸಂಕಷ್ಟಕ್ಕೆ ಸಿಲುಕಿಸುತ್ತೆ. ಈ ರೀತಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ ನನಗೆ ಅಭ್ಯಾಸವಿಲ್ಲ. ಭೀಮ ಪಾಕಶಾಲೆಯಲ್ಲಿ, ಉಗ್ರಾಣದಲ್ಲಿ ಯಾರಿಗೂ ಕಾಣದ ಹಾಗೆ ಊಟ ಮಾಡಿದಂತೆ ನಾನೂ ಮಾಡನಾಡುವ ಜಾಗದಲ್ಲಿ ಮಾತನಾಡಿದ್ದೇನೆ.” ಎಂದು ತಮ್ಮ ಮಾತಿಗೆ ಪೀಠಿಕೆ ಹಾಕಿದರು.
“ಈಗಾಗಲೇ ಭಂಡಾರಿವಾರ್ತೆಯ ದಿಟ್ಟತನ ಏನು ಎಂಬುದನ್ನು ಭಾಸ್ಕರ್ ಭಂಡಾರಿ ಶಿರಾಳಕೊಪ್ಪ ತಮ್ಮ ಸ್ವರಚಿತ ಕವನದಲ್ಲಿ ತುಂಬಾ ಚೆನ್ನಾಗಿ ಹೇಳಿದ್ದಾರೆ.ಪ್ರಕಾಶ್ ಭಂಡಾರಿಯವರು ತಮ್ಮ ತಂಡದ ಸದಸ್ಯರನ್ನು ಪರಿಚಯ ಮಾಡುತ್ತಾ ತಾವಿಲ್ಲಿ ಕೇವಲ ನಾಮಾಕಾವಸ್ಥೆಗೆ ಮಾತ್ರ ನಾಯಕ ಅಂತ ಹೇಳಿದ್ರಿ.ತಾವು ದಯವಿಟ್ಟು ಹಾಗೇ ಇರಿ.ನಿಮ್ಮ ಮಾತಿಗೆ ಬದ್ಧರಾಗಿರಿ. ಜೀವನದಲ್ಲಿ ದೇವರು ನಿಮಗೆಲ್ಲಾ ಕೊಟ್ಟಿದ್ದಾನೆ.ಎಲ್ಲವನ್ನೂ ಅನುಭವಿಸಿದ್ದೀರಿ. ಒಟ್ಟಿನಲ್ಲಿ ಸಂತೃಪ್ತರಾಗಿದ್ದೀರಿ.ಈಗ ನಿಸ್ವಾರ್ಥ ಸೇವೆಯೊಂದೆ ಗುರಿಯಾಗಿರಲಿ.”
“ಒಂದು ಸಮಾಜ ಅಥವಾ ಒಂದು ಸಂಘಟನೆ ಧಾರ್ಮಿಕವಾಗಿ, ಸಾಮಾಜಿಕವಾಗಿ, ನೈತಿ ಕವಾಗಿ, ಸ್ವಾಭಿಮಾನಿಯಾಗಿ ಸಾರ್ಥಕತೆ ಪಡೆಯುವುದು ಯಾವಾಗ ಅಂದರೆ ಅದು ಸಮಾಜದ ತುತ್ತ ತುದಿಯಲ್ಲಿರುವ ಅಸಹಾಯಕರನ್ನು,ದುರ್ಬಲ ವರ್ಗದವರನ್ನು ತಲುಪಿದಾಗ ಮಾತ್ರ.ಒಂದು ಸಮಾಜದ ಮುಖಂಡರು ಯಾವಾಗಲೂ ತಮ್ಮ ಸಮಾಜವೆಂಬ ಹೊಲಗದ್ದೆಗಳನ್ನು ಕಾಯುವ ಬೆಚ್ಚಪ್ಪಗಳಂತಿರಬೇಕು. ಬೆಚ್ಚಪ್ಪಗಳು ಯಾವಾಗಲೂ ಹಳೆಯ ಅಂಗಿ,ಪ್ಯಾಂಟು,ಹುಲ್ಲು ಬಿದಿರಿನಿಂದ ಮಾಡಿದರೇನೆ ಚಂದ, ಅದು ಬಿಟ್ಟು ಅದಕ್ಕೆ ಲಿಪ್ ಸ್ಟಿಕ್ ಹಚ್ಚಿ,ಸೂಟು, ಬೂಟು, ಕೋಟು ಹಾಕಿದರೆ ಅವಲಕ್ಷಣ. ಹಾಗೆ ಯಾವಾಗಲೂ ಸಮಾಜದ ಮುಖಂಡರು ಹೊಲ ಕಾಯುವ ಬೆಚ್ಚಪ್ಪಗಳಾಗಬೇಕೆ ವಿನಃ ಉತ್ಸವ ಮೂರ್ತಿಗಳಾಗುವ ಪ್ರಯತ್ನ ಪಡಬಾರದು.”
“ನಿಮ್ಮ ಭಂಡಾರಿವಾರ್ತೆಯ ಒಂದು ವರ್ಷದ ಸಾಧನೆಯನ್ನು ಕುಶಾಲ್ ಕುಮಾರ್ ಮತ್ತು ಭಾಸ್ಕರ್ ಭಂಡಾರಿ ಏನು ಓದಿದ್ದೀರಿ ಅದರಲ್ಲಿ ಏನೂ ಉತ್ಪ್ರೇಕ್ಷೆ ಇಲ್ಲ. ಒಂದು ವರ್ಷದ ಸಾಧನೆ ನಿಜಕ್ಕೂ ಒಳ್ಳೆಯ ಆರಂಭ.ಇದೆಲ್ಲಾ ಸಾಧ್ಯವಾಗಿದ್ದು ನಿಮ್ಮೆಲ್ಲರ ಪರಿಶ್ರಮದಿಂದ ಮತ್ತು ಯಾವುದೇ ಪ್ರತಿಫಲಾಪೇಕ್ಷಿಗಳಿಲ್ಲದೇ ನೀವು ಕೆಲಸ ಮಾಡುತ್ತಿರುವುದರಿಂದ. ಇಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬರದ್ದೂ ಒಂದು ರೀತಿಯ ಸಮಾಜಸೇವೆ. ನಿಮ್ಮ ಸಮಯ,ನಿಮ್ಮ ಜ್ಞಾನ,ನಿಮ್ಮ ಯೌವನ ಎಲ್ಲವನ್ನೂ ಭಂಡಾರಿವಾರ್ತೆಯೆಂಬ ಒಂದು ಮಾಧ್ಯಮದ ಮೂಲಕ ಸಮಾಜಕ್ಕೆ ಧಾರೆಯೆರೆಯುತ್ತಿದ್ದೀರಿ. ನಿಮಗೆಲ್ಲಾ ಶುಭವಾಗಲಿ.”
“ನಿಜವಾಗಿಯೂ ಅವಶ್ಯಕವಿದ್ದವರಿಗೆ ಸಮಾಜದ ಸೌಲಭ್ಯಗಳು ತಲುಪಿದಾಗಲೇ ಸಮಾಜ ಸಂಘಟನೆಗಳ ಉದ್ದೇಶ ಈಡೇರುವುದು. ಹಸಿದವನಿಗೆ ಊಟ ಹಾಕಬೇಕೇ ಹೊರತು ಹೊಟ್ಟೆ ತುಂಬಿದವನಿಗಲ್ಲ. ನಾವು ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಹಾಗೆ ಕೊಡುವುದರಿಂದ ದೊರಕುವ ತೃಪ್ತಿಯನ್ನು ನೀವು ಅನುಭವಿಸಿಯೇ ತಿಳಿಯಬೇಕು. ಒಮ್ಮೆ ನೀವು ಆ ತೃಪ್ತಿಯನ್ನು ಅನುಭವಿಸಿದರೆ ಮತ್ತೆ ಜನ್ಮ ಜನ್ಮದಲ್ಲೂ ಅದನ್ನು ಮುಂದುವರೆಸಿಕೊಂಡು ಹೋಗುತ್ತೀರಿ.”
“ಭಂಡಾರಿವಾರ್ತೆಯ ಹುಟ್ಟು ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಆಗಿದೆ ಎಂಬುದು ನನಗೆ ಗೊತ್ತಿದೆ. ಒಂದು ಶುದ್ಧ ಸಂಘಟನೆ, ಒಂದು ಶ್ರೇಷ್ಠ ಸಂಘಟನೆ, ಒಂದು ವಿಶಾಲ ಸಂಘಟನೆಯ ಪರಿಕಲ್ಪನೆಯೊಂದಿಗೆ ಹುಟ್ಟಿಕೊಂಡ ಭಂಡಾರಿವಾರ್ತೆ ಪ್ರತಿಯೊಬ್ಬರನ್ನೂ ತಲುಪಬೇಕು.ಸ್ವಯಂ ವೈಭವ ಸಂಘಟನೆ ಅಲ್ಲ. ಸ್ವಯಂ ವೈಭವ ಸಂಘಟನೆಯಲ್ಲಿ ಒಂದು ಕ್ರೈಮ್. ಸಾಧಕರು,ಸಮರ್ಥರು,ಓದುಗರು ನಂತರ ಫಾಲೋವರ್ಸ್ ಇರುವಂತಹ ವ್ಯವಸ್ಥೆ ಇದು. ವಿಶ್ವಾದ್ಯಂತ ವ್ಯಾಪಿಸಿರುವ ಸುಮಾರು ಅರವತ್ತು ಸಾವಿರ ಭಂಡಾರಿ ಬಂಧುಗಳಲ್ಲಿ ನೀವು ಈಗಾಗಲೇ ಇಪ್ಪತ್ತೆರಡು ಸಾವಿರ ಬಂಧುಗಳನ್ನೆಲ್ಲಾ ತಲುಪಿದ್ದೀರಿ.ಒಂದು ವರ್ಷದಲ್ಲಿ ಶೇಕಡಾ ಮೂವತ್ತಮೂರಷ್ಟು ಜನರನ್ನು ಮುಟ್ಟಿರುವುದು ಕಡಿಮೆ ಸಾಧನೆ ಏನಲ್ಲ.ಆದಷ್ಟು ಬೇಗ ಸಮಾಜದ ಪ್ರತಿಯೊಬ್ಬರನ್ನೂ ತಲುಪುವಂತಾಗಲಿ ಎಂದು ಹಾರೈಸುತ್ತೇನೆ.”
“ನಾನು ಕಂಡ ಶ್ರೇಷ್ಠ ದಾನಿಗಳಲ್ಲಿ ಶ್ರೀ ಲಕ್ಷ್ಮಣ ಕರಾವಳಿಯವರು ಒಬ್ಬರು.ಅವರ ಜೀವಿತಾವಧಿಯಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸಹಾಯಹಸ್ತ ಚಾಚಿದ್ದಾರೆ.ಅಂತಹ ವ್ಯಕ್ತಿ ಕೆಲವು ಘಟನೆಗಳಿಂದ ಮನನೊಂದು ಸಮಾಜ ಸಂಘಟನೆಗಳಿಂದ ವಿಮುಖರಾಗಿದ್ದರು. ಅವರು ಹೊರಗುಳಿದರೆ ಅವರಿಗಾಗಲಿ ಸಂಘಟನೆಗಳಿಗಾಗಲಿ ನಷ್ಟ ಅಲ್ಲ. ಅವರಿಂದ ಸಹಾಯ ನಿರೀಕ್ಷಿಸುವ ಎಷ್ಟೋ ಜನ ಬಡ ವಿದ್ಯಾರ್ಥಿಗಳಿಗೆ ನಷ್ಟ.ಅಂತಹವರನ್ನು ಜೊತೆಗೆ ತೆಗೆದುಕೊಂಡು ಬಂದಿದ್ದೀರಿ.ಇಲ್ಲಿಯೂ ಅವರಿಗೆ ವಂಚನೆಯಾಗಬಾರದು.”
“ನನ್ನ ಸ್ವಂತಕ್ಕಾಗಿ,ನನ್ನ ಸ್ವಾರ್ಥಕ್ಕಾಗಿ ಒಂದು ಸಮಾಜದ ವೇದಿಕೆಯನ್ನಾಗಲಿ,ದೇವಸ್ಥಾನವನ್ನಾ ಗಲಿ ಬಳಸಿಕೊಳ್ಳಬಾರದು.ಅದರಂತಹ ಅಕ್ರಮ ಮತ್ತೊಂದಿಲ್ಲ.ಭಂಡಾರಿವಾರ್ತೆ ಹಾಗಾಗಬಾರದು.ಹಿರಿಯರ,ನಿಸ್ವಾರ್ಥಿ ಗಳ,ದಾನಿಗಳ, ಜ್ಞಾನಿಗಳ ಮಾತಿಗೆ ಬೆಲೆಕೊಡಿ.ಸಲಹೆಗಳಿಗೆ ಕಿವಿಕೊಡಿ.ಟೀಕೆಗಳಿಗೆ ಅಹ್ವಾನವಿರಲಿ,ಅಸಭ್ಯ ಪದ ಬಳಕೆಗಳಾದಾಗ ಅವರನ್ನು ನಿರ್ಲಕ್ಷಿಸಿ ಮುನ್ನೆಡೆಯಿರಿ. ಒಳ್ಳೆಯದಾಗಲಿ.ಧನ್ಯವಾದಗಳು”….. ಎಂದು ಸಮಾಜಕ್ಕೆ, ಭಂಡಾರಿವಾರ್ತೆಗೆ ಕೆಲವು ಹಿತವಚನಗಳನ್ನು ನುಡಿದು ತಮ್ಮ ಮಾತನ್ನು ಪೂರ್ಣಗೊಳಿಸಿದರು.
ನಂತರ ಪ್ರಕಾಶ್ ಭಂಡಾರಿ ಕಟ್ಲಾರವರು ಶ್ರೀ ಲಕ್ಷ್ಮಣ ಕರಾವಳಿಯವರನ್ನು ವೇದಿಕೆಗೆ ಅಹ್ವಾನಿಸಿದರು.
ಶ್ರೀ ಲಕ್ಷ್ಮಣ ಕರಾವಳಿಯವರು….. “ಕಳೆದ ವರ್ಷ ನಾವು ಭಂಡಾರಿವಾರ್ತೆ ಪ್ರಾರಂಭೋತ್ಸವದ ದಿನ ನೋಡಿದ ಜನ ಇವತ್ತು ದ್ವಿಗುಣಗೊಂಡಿರುವುದು ನನಗೆ ತುಂಬಾ ಸಂತೋಷ ತಂದುಕೊಟ್ಟಿದೆ. ಭಂಡಾರಿವಾರ್ತೆ ಮಾಡುತ್ತಿರುವ ಈ ಸಮಾಜಸೇವೆ ಇನ್ನೂ ಹೆಚ್ಚಿನ ಮಟ್ಟಕ್ಕೇರಬೇಕು. ಅದಕ್ಕೆ ನನ್ನ ಸಂಪೂರ್ಣ ಸಹಕಾರ ನೀಡಲು ನಾನು ಸಿದ್ಧನಿದ್ದೇನೆ.”
“ಪ್ರಕಾಶ್ ಭಂಡಾರಿಯವರು ಭಂಡಾರಿ ವಿವಾಹ ವೆಬ್ಸೈಟ್ ನ್ನು ತುಂಬಾ ಚನ್ನಾಗಿ ನಿಭಾಯಿಸಿಕೊಂಡು ಹೋಗುತ್ತಿದ್ದರು. ಅವರು ಮತ್ತೆ ಅದನ್ನು ಪುನರಾರಂಭಿಸಬೇಕು. ಕುಮಾರಿ ಗ್ರೀಷ್ಮಾ ಭಂಡಾರಿ ನಾವೂ ಸಹಾ ಮುಂದೆ ಮಕ್ಕಳಿಗೆ ಸಹಾಯಹಸ್ತ ಚಾಚುತ್ತೇವೆ ಎಂದು ಹೇಳಿದ್ದು ಕೇಳಿ ಸಂತೋಷವಾಯಿತು.ಆದರೆ ನನ್ನ ಅನುಭವದ ಪ್ರಕಾರ ಸಹಾಯ ಪಡೆದ ಮಕ್ಕಳು ಕ್ರಮೇಣ ನಮ್ಮನ್ನು ಮರೆತು ಬಿಡುತ್ತಾರೆ. ಇಂತಹ ಹಲವು ಪ್ರಸಂಗಗಳನ್ನು ನಾನು ನೋಡಿದ್ದೇನೆ, ಹಾಗಾಗಬಾರದು.”

ಭಂಡಾರಿವಾರ್ತೆಯ ಸೆಲ್ಫಿ ಫೋಟೋ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ನೀಡುವ ತಯಾರಿ ವೇದಿಕೆಯಲ್ಲಿ ಆರಂಭವಾಯಿತು….
(ಮುಂದುವರಿಯುವುದು.)
ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
ಫೋಟೋಗ್ರಫಿ :ದೀಕ್ಷಿತ್ ಭಂಡಾರಿ ಉಜಿರೆ
ಘಟಾನುಘಟಿಗಳ ಸಮಾಗಮ ಸಾರ್ಥಕತೆಯ ಮೈಲಿಗಲ್ಲು ತುಂಬಾ ಸಂತೋಷವಾಯಿತು. ಕಣ್ಣಿಗೆ ಕಟ್ಟುವಂತೆ ವರ್ಣಿಸಿದ ವರದಿಗಾರರಿಗೆ ವಂದನೆಗಳು