November 23, 2024
bhandaryvartheteam

ಭಂಡಾರಿ ಕುಟುಂಬಗಳ ಮನೆ ಮನದ ಮಾತಾಗುವ ಉದ್ದೇಶಕ್ಕಾಗಿ ಮತ್ತು ತ್ವರಿತ ಸುದ್ದಿ ಮತ್ತು ಆಗು-ಹೋಗುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಜೊತೆಗೆ ಸಮಾಜದ ಎಲ್ಲರನ್ನೂ ಸಂಪರ್ಕಿಸುವ  ಆಧುನಿಕ ಜಗತ್ತಿನ ಅಗತ್ಯಗನುಸಾರವಾಗಿ ಉನ್ನತ ತಂತ್ರಜ್ಞಾನದ ಅಳವಡಿಕೆಯೊಂದಿಗೆ ಭಂಡಾರಿ ಸಮಾಜದ ತಂತ್ರಜ್ಞರ ಸಹಕಾರದಿಂದ 2017 ಜೂನ್ ತಿಂಗಳಿನಲ್ಲಿ ಪರೀಕ್ಷಾರ್ಥವಾಗಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ಬಂಧುಗಳ ಪ್ರೋತ್ಸಾಹ ದೊರೆತು ವೇಗವಾಗಿ ಬೆಳೆದ ಭಂಡಾರಿವಾರ್ತೆ 2 ತಿಂಗಳ ಅವಧಿಯಲ್ಲಿ ಅಂದರೆ ಆಗಸ್ಟ್ ತಿಂಗಳ 27 ರಂದು ಶ್ರೀ ಪ್ರಕಾಶ್ ಪಾವೂರು ನೇತೃತ್ವದ ತಾಂತ್ರಿಕ ತಂಡದಿಂದ ಕ್ಷಿಪ್ರವಾಗಿ ಹೊಸ ಆವೃತ್ತಿಯ ತನ್ನದೇ ಆದ ಸ್ವಂತ ವೆಬ್ಸೈಟ್ ಆರಂಭವಾಯಿತು. ನಂತರ ನಮ್ಮ ತಾಂತ್ರಿಕ  ತಂಡದ ನಿತಿನ್ ಆನಂದ್ ಕುಂದಾಪುರ ಇವರ ಸಹಕಾರದೊಂದಿಗೆ ಅಂಡ್ರಾಯ್ಡ್ ಅಪ್ಲಿಕೇಷನ್ ಆರಂಭವಾಯಿತು.   (ಈ ಅಪ್ಲಿಕೇಶನ್  ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.) 

ಹಿನ್ನಲೆ:

ಆಧುನಿಕ ತಂತ್ರಜ್ಞಾನಗಳ ಬೆಳವಣಿಗೆ ಮತ್ತು ಬದಲಾದ ಜನರ ಜೀವನಪದ್ದತಿಯಲ್ಲಿ ಸ್ಮಾರ್ಟ್ ಪೋನ್ ನ ಆಕರ್ಷಣೆ, ಆ್ಯಪ್ ಗಳ ಬಳಕೆ, ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಈ ಬೆಳವಣಿಗೆಗಳು ಮುಂದಿನ ದಿನಗಳಲ್ಲಿ ಹೆಚ್ಚಾಗಲಿವೆ. ಭಂಡಾರಿ ಸಮಾಜದ ಮಾಧ್ಯಮ ಇದಕ್ಕೆ ತಕ್ಕಂತೆ ಬದಲಾಗಬೇಕೆಂಬ ಚಿಂತನೆಯನ್ನು ಡಿಜಿಟಲ್ ಮಾಧ್ಯಮ ನಮ್ಮ ದೇಶಕ್ಕೆ ಕಾಲಿಟ್ಟಾಗಲೇ ಶ್ರೀಯುತ ಪ್ರಕಾಶ್ ಭಂಡಾರಿ ಕಟ್ಲಾರವರು ಮಾಡಿದ್ದರು. ಭಂಡಾರಿ ಸಮಾಜಕ್ಕೆ ಮುದ್ರಣ ಮಾಧ್ಯಮ ಬೇಕೆಂಬ ಅಭಿಲಾಷೆಯಿಂದ ತನ್ನ ಸಮಾನ ಮನಸ್ಕ ಸ್ನೇಹಿತ ಬಂಧುಗಳ ಸಹಕಾರದೊಂದಿಗೆ 1992 ರಲ್ಲಿ ನಾಗೇಶ್ವರ ಪತ್ರಿಕೆಯನ್ನು ಆರಂಭಿಸಿದ ಇವರು (ನಂತರ ಇದೇ ಪತ್ರಿಕೆ ಕಚ್ಚೂರುವಾಣಿಯಾಗಿ ನಾಮಕರಣವಾಯಿತು). ನಂತರ ಕಚ್ಚೂರುವಾಣಿಯ ಪ್ರಧಾನ ಸಂಪಾದಕರಾಗಿದ್ದ ಸಂದರ್ಭದಲ್ಲಿ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸಹಕಾರದೊಂದಿಗೆ ಪತ್ರಿಕೆಯ ಬೆಳವಣಿಗೆಗೆ  ಶ್ರಮಿಸಿ ಯಶಸ್ಸು ಸಾಧಿಸಿದ್ದರು. ನಂತರ ವೆಬ್/ ಇ ಪತ್ರಿಕೆಗಳು ಆರಂಭವಾದ ಕಾಲದಲ್ಲಿ ಕಚ್ಚೂರುವಾಣಿ ಕೂಡಾ ಅಂತರ್ಜಾಲದಲ್ಲಿ ದೊರೆಯಬೇಕೆಂಬ ನಿಟ್ಟಿನಲ್ಲಿ ಇ-ಪತ್ರಿಕೆಯನ್ನು ಪತ್ರಕರ್ತ ಶ್ರೀ ರವಿ ಬಿದನೂರು ಸಹಕಾರದೊಂದಿಗೆ ಆರಂಭಿಸಿದರು. ನಂತರ ಇ-ಪತ್ರಿಕೆ/ಮುದ್ರಣ ಪತ್ರಿಕೆ ಮಾಸಿಕ ಪತ್ರಿಕೆಯಾದ ಕಾರಣ ಕೆಲವೊಂದು ಮಾಹಿತಿಗಳನ್ನು ಸಮಾಜಕ್ಕೆ ತ್ವರಿತವಾಗಿ ಹಂಚಿಕೊಳ್ಳಲು ಕಷ್ಟವಾಗುತ್ತಿರುವುದನ್ನು ಮನಗಂಡ  ರವಿ ಬಿದನೂರು ಕಚ್ಚೂರು ವಾರ್ತೆ ಎಂಬ ಹೊಸ ಬ್ಲಾಗ್ ಒಂದನ್ನು ಆರಂಭಿಸಿ ದೈನಂದಿನ ಸುದ್ದಿಯನ್ನು ತ್ವರಿತವಾಗಿ ಸಮಾಜಕ್ಕೆ ನೀಡುವ ಕೆಲಸ ಮಾಡುತ್ತಿದ್ದರು. ಬ್ಲಾಗ್ ನ ನಿರ್ವಹಣೆ ಕಷ್ಟವಾಗಿ ಮತ್ತು ಸಹಕಾರದ ಕೊರತೆಯಿಂದ ಅದು ಅರ್ಧಕ್ಕೆ ನಿಂತುಹೋದ ಕಾರಣ ಸಮಾನ ಮನಸ್ಕ  ಹೊಸ ತಂಡವನ್ನು ಕಟ್ಟಿಕೊಂಡ ಶ್ರೀ ಪ್ರಕಾಶ್ ಕಟ್ಲಾ  ಅವರ ತಂಡದೊಂದಿಗೆ ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿಕೊಳ್ಳುವ ಮೂಲಕ ಹೊಸದಾಗಿ ಭಂಡಾರಿ ವಾರ್ತೆ ಯೆಂಬ ವೆಬ್ಸೈಟ್ ತೆರೆದು ಇತರ ಪ್ರಬಲ ಜಾತಿಗಳಿಗೆ ತಂತ್ರಜ್ಞಾನ ಬಳಕೆಯಲ್ಲಿ ಭಂಡಾರಿ ಸಮಾಜವೂ ಸೆಡ್ಡುಹೊಡೆಯಬಲ್ಲದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ.
 
 
 
ಎರಡು ವರ್ಷಗಳಲ್ಲಿ ಸುಮಾರು 1500 ಕ್ಕೂ ಮಿಕ್ಕಿ ವರದಿಗಳನ್ನು ಪ್ರಕಟಿಸಿರುವ ನಮ್ಮ ತಂಡ ನಿರಂತರವಾಗಿ ಸುದ್ದಿ ಪ್ರಸಾರ ಮತ್ತು ಅಶಕ್ತರನ್ನು ಗುರುತಿಸಿ ನೆರವಾಗುವ ಜವಬ್ದಾರಿಯುತ ಮಾಧ್ಯಮವಾಗಿ ಕೆಲಸ ಮಾಡುತ್ತಿದೆ . ಬಂಧುಗಳ ಸಹಕಾರ ನಿರಂತರವಾಗಿದ್ದು, ದೇಶ ವಿದೇಶಗಳಲ್ಲಿ ಅಭಿಮಾನಿ ಓದುಗರನ್ನು ಹೊಂದಿದೆ. ಲೇಖಕರ ಲೇಖನಗಳು ಒಂದೇ ದಿನಕ್ಕೆ ಸಾವಿರಕ್ಕೂ ಮಿಕ್ಕಿ ಹಿಟ್ಸ್ ಪಡೆದ ಉದಾಹರಣೆಗಳು ನಮ್ಮ ಮುಂದಿವೆ. ಭಂಡಾರಿ ಕುಟುಂಬಗಳ ಮನೆ ಮನದ ಮಾತಾಗುವ ಉದ್ದೇಶದೊಂದಿಗೆ ಆರಂಭವಾದ ಈ ಸುದ್ದಿವಾಹಿನಿ ಉದ್ದೇಶ ಈಡೇರಿಕೆಗಾಗಿ ನಿರಂತರ ಶ್ರಮಿಸುತ್ತಿದೆ.  ಎರಡು ವರ್ಷಗಳನ್ನು ಪೂರೈಸಿರುವ ಭಂಡಾರಿವಾರ್ತೆ ಭಂಡಾರಿ ಕುಟುಂಬಗಳ ಸಮಗ್ರ ಕೊರತೆಗಳನ್ನು ನೀಗಿಸುವ , ಜನರ ಭಾವನೆಗಳನ್ನು ಅರ್ಥೈಸುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದು, ಭಂಡಾರಿ ಕುಟುಂಬಗಳ ಔದ್ಯೋಗಿಕ ಬೆಳವಣಿಗೆ, ವಧು ವರ ಅನ್ವೇಷಣೆಯಲ್ಲಿರುವ ಸಮಸ್ಯೆಗಳ ಪರಿಹಾರ, ಆರ್ಥಿಕ ಬೆಳವಣಿಗೆ, ಅಶಕ್ತರ ಅಭಿವೃದ್ದಿ ಮುಂತಾದ ಯೋಜನೆಗಳು ನಮ್ಮ ಮುಂದಿದ್ದು ಹಲವು ವರ್ಷಗಳ ಹಿಂದೆಯೇ ವಿಷನ್ 2020 ಎಂಬ ಧ್ಯೇಯವಾಕ್ಯದೊಂದಿಗೆ ಆರಂಭಿಸಿದೆ‌‌. ನಮ್ಮ ತಂಡವು ಅನೇಕ ಟೀಕೆಗಳನ್ನು ಎದುರಿಸಿದ್ದರೂ ಉತ್ಸಾಹವನ್ನು ಎಂದಿಗೂ ಕಳೆದುಕೊಂಡಿಲ್ಲ.
 
“ಇನ್ನೆರೆಡು ವರ್ಷಗಳಲ್ಲಿ ನಮ್ಮ ವೆಬ್ ಸೈಟ್ ಅತಿ ಸುಲಭವಾಗಿ ಮಾಹಿತಿ ನೀಡಬಲ್ಲ ದೊಡ್ಡ ಡೇಟಾ ಬ್ಯಾಂಕ್ ಆಗಲಿದೆ. ಭಂಡಾರಿ ಕುಟುಂಬಗಳ ಮಾಹಿತಿಯ ಕಣಜವಾಗಲಿದೆ ಮತ್ತು ಭಂಡಾರಿ ವಾರ್ತೆಯಂತಹ ವೆಬ್ಸೈಟ್ ಅಗತ್ಯವೇ ಇಲ್ಲವೆಂಬ ಋಣಾತ್ಮಕ ಮಾತಿಗೆ ಉತ್ತರ ದೊರೆಯಲಿದೆ.”   
 
ಅನೇಕ ಬೇಡಿಕೆಗಳು ಸಮಾಜದಿಂದ ಬರುತ್ತಿದ್ದರೂ ಸ್ಪಂದಿಸಲೂ ಕಷ್ಟವಾಗುತ್ತಿದ್ದು, ಸ್ಥಳೀಯ ಭಂಡಾರಿ ಸಂಘಗಳ ಸಹಕಾರದಿಂದ ಹಲವು ಬಂಧುಗಳ ಸಮಸ್ಯೆಗಳ ಪರಿಹಾರಕ್ಕೆ ಯತ್ನಿಸಿದ್ದೇವೆ. ನಮ್ಮ ಮನವಿಗೆ ಒಗೋಟ್ಟು ನಿರಂತರವಾಗಿ ಸ್ಪಂದಿಸುತ್ತಿರುವ ಎಲ್ಲಾ ಸ್ಥಳೀಯ ಭಂಡಾರಿ ಸಮಾಜ ಸಂಘಗಳಿಗೆ  ನಾವು ಚಿರರುಣಿಯಾಗಿದ್ದೇವೆ‌. ಇನ್ನು ನಮ್ಮ ಸಮಾಜ ಸೇವೆಗಳಿಗೆ ನಿರಂತರವಾಗಿ ಧನಸಹಾಯವನ್ನು ನೀಡುತ್ತಾ ಬಂದಿರುವ ನೂರಾರು ಓದುಗರು ಮತ್ತು ಅಭಿಮಾನಿಗಳು ಇದ್ದಾರೆ. ಇವರು ತಮ್ಮ ಹೆಸರು ಹೇಳಚ್ಚಿಸದೇ ಸಹಾಯ ಮಾಡುವವರಾಗಿದ್ದಾರೆ. ಇವರ ನಿಸ್ವಾರ್ಥ ಸೇವೆಗೆ ನಾವು ಅಭಾರಿಗಳಾಗಿದ್ದೇವೆ. ವಿದ್ಯಾ ದತ್ತು ಯೋಜನೆ, ಅಶಕ್ತರಿಗೆ ಸಹಾಯ ಮಾಡುವ ಮೂಲಕ ಕೇವಲ ಸುದ್ದಿಗಾಗಿ ಮೀಸಲಿರದೇ ಸಮಾಜಕ್ಕೆ ಅಳಿಲು ಸೇವೆ ಮಾಡುತ್ತಿದ್ದೇವೆ ಎಂಬ ತೃಪ್ತಿ ನಮಗಿದೆ‌. 
 
ಮುಂದಿನ ಯೋಜನೆಗಳು:
 
ನಮ್ಮ ಮುಂದೆ ಅನೇಕ ಯೋಜನೆಗಳಿದ್ದು , ವಿಷನ್ 2020 ಧ್ಯೇಯ ವಾಕ್ಯ ಭಂಡಾರಿ ಕುಟುಂಬಗಳ ಸಮಗ್ರ ಅಭಿವೃದ್ದಿಗೆ ಚಾಲನೆ  ಎಂಬ ಅರ್ಥ ಹೊಂದಿದೆ. ದಾನಿಗಳ ನೆರವಿನಿಂದ ನಿರಂತರ ಸಮಾಜಸೇವೆ ಸಾಧ್ಯವಿಲ್ಲ ಎಂಬುದನ್ನು ಮೊದಲೇ ಮನಗಂಡಿರುವ ನಾವು ಇದಕ್ಕೊಂದು ಪರ್ಯಾಯ ವ್ಯವಸ್ಥೆಯಾಗಬೇಕೆಂಬ ಯೋಚನೆಯೊಂದಿಗೆ ಮಹತ್ವಾಕಾಂಕ್ಷಿ ಯೋಜನೆಯೊಂದು ಸಾಕಾರಪಡಿಸಲು ಯತ್ನಿಸುತ್ತಿದ್ದೇವೆ. ಇದರ ಫಲವನ್ನು ಸಮಾಜದ ಪ್ರತಿಯೊಬ್ಬರು ಪಡೆಯುವಂತಾಗಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ.
ಭಂಡಾರಿವಾರ್ತೆಯ ಎರಡನೇ ವಾರ್ಷಿಕೋತ್ಸವದ ಕೊಡುಗೆಯಾಗಿ ವಿಷನ್ ಜಾಬ್ಸ್  ಎಂಬ ಉಚಿತ ಉದ್ಯೋಗ ಸಲಹಾ ಕೇಂದ್ರವನ್ನು ಆರಂಭಿಸುತ್ತಿದ್ದೇವೆ.
 
ವಿಷನ್ ಜಾಬ್ಸ್ ಎಂಬುದು ವಿದ್ಯಾವಂತ ಯುವಕರಿಗೆ ಅವರ ವಿದ್ಯಾರ್ಹತೆ ಮತ್ತು ಕೆಲಸದ ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿ ಪ್ರತಿಷ್ಟಿತ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಿಕೊಡುವುದಾಗಿದೆ. ವಿದ್ಯಾವಂತ/ವೃತ್ತಿ ಅನುಭವವಿರುವ ಯುವಕರು ಇದರ ಪ್ರಯೋಜನ ಪಡೆಯಬಹುದು.
 
ಭಂಡಾರಿ ವಿವಾಹ.com
 
ಈ ವೆಬ್ಸೈಟ್ ಕಳೆದ ವರ್ಷ ಗಣೇಶ ಚತುರ್ಥಿಯಂದು ಬಿಡುಗಡೆಯಾಗಿದ್ದು, ವೆಬ್ಸೈಟ್ನಲ್ಲಿ ನೋಂದಣಿಯಾಗುವುದರ ಮೂಲಕ ವಧು-ವರ ಅನ್ವೇಷಣೆ ಮಾಡಬಹುದಾಗಿದೆ‌. ಈಗಾಗಲೇ ಅನೇಕ ಬಂಧುಗಳ ಪ್ರಯೋಜನ ಪಡೆದಿರುತ್ತಾರೆ.
 
ಮುಂದಿನ ದಿನಗಳಲ್ಲಿ ಮಂಗಳೂರಿನಲ್ಲಿ ಭಂಡಾರಿವಾರ್ತೆ ನೂತನ ಕಛೇರಿ ತೆರೆದು ಕಾರ್ಯಾಚರಿಸಲಿದ್ದು , ಬಂಧುಗಳಿಗೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸುತ್ತಿದೆ. ನಿರಂತರ ಪ್ರಯತ್ನಕ್ಕೆ ದೇವರ ಆಶೀರ್ವಾದ ಇರುತ್ತದೆ ಎಂಬುದನ್ನು ಸ್ವತಃ ಅನುಭವಿಸಿರುವ ನಾವು ಸಾಮಾಜಿಕ ಕಳಕಳಿಯ ಬದ್ಧತೆಯೊಂದಿಗೆ ಸಮಾಜಮುಖಿ ಉದ್ಯಮದ ಚಿಂತನೆಯ ಪರವಾಗಿದ್ದೇವೆ. ಎಲ್ಲರೂ ಸಮಾನರು ಬಡವ -ಶ್ರೀಮಂತ ಎಂಬ ಭೇದವ ತೊಡೆದು ಹಾಕಿ ಒಟ್ಟಾಗಿ ಅಭಿವೃದ್ದಿಯಾಗಬೇಕೆಂಬ ಚಿಂತನೆಯ ಪರವಾಗಿದ್ದೇವೆ ಎಂಬ ದ್ಯೇಯದೊಂದಿಗೆ ಮೂರನೇ ವರ್ಷಕ್ಕೆ ಕಾಲಿಡುತ್ತಿದ್ದೇವೆ. ನಮ್ಮ ಪ್ರಯಾಣದಲ್ಲಿ ಭಾಗಿದಾರರಾದ ಭಂಡಾರಿವಾರ್ತೆಯ ಎಲ್ಲ ಲೇಖಕರು, ವರದಿಗಾರರು, ಸಹೃದಯಿ ಅಭಿಮಾನಿ ಓದುಗರಿಗೆ ಹೃದಯಾಂತರಾಳದ ಧನ್ಯವಾದಗಳು

-ಭಂಡಾರಿ ವಾರ್ತಾ ತಂಡ

2 thoughts on “ಯಶಸ್ವಿಯಾಗಿ ದ್ವಿತೀಯ ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಪಾದಾರ್ಪಣೆಗೈದ ಭಂಡಾರಿ ಸಮಾಜದ ಏಕೈಕ ವೆಬ್ ಪತ್ರಿಕೆ “ಭಂಡಾರಿ ವಾರ್ತೆ”

  1. Let us move together. Let our programmes helpin uplifting deserved people in our community
    My bestwishes to all the people of Vision2020.

  2. ಸಂಘರ್ಷ ಸಂಘಟನೆ ಒಗ್ಗಟ್ಟು ಇದರ ಒಟ್ಟು ಮೊತ್ತ ಹೋರಾಟ

Leave a Reply

Your email address will not be published. Required fields are marked *