January 18, 2025
bhandaryvartheteam

      ದಿನಾಂಕ 27 ಆಗಸ್ಟ್ 2017 ರಂದು ಅಪರಾಹ್ನ 3:00 ಗಂಟೆಗೆ ಸರಿಯಾಗಿ ಶ್ರೀ ರಾಜಶೇಖರ್ ರವರ ಪ್ರಾರ್ಥನೆಯೊಂದಿಗೆ ಹೋಟೆಲ್ ಮಾಯಾ ಇಂಟರ್ ನ್ಯಾಷನಲ್ ಮಂಗಳೂರಿನಲ್ಲಿ ಭಂಡಾರಿವಾರ್ತೆ ವೆಬ್ ಸೈಟ್ ಅನಾವರಣ ಸಮಾರಂಭ ನಡೆಯಿತು. ಸಂಸ್ಥೆಯ ಕಾರ್ಯ ನಿರ್ವಾಹಕ ಹಾಗೂ ಅಧ್ಯಕ್ಷರಾದ ಪ್ರಕಾಶ್ ಭಂಡಾರಿ ಕಟ್ಲ ಅವರು ಮಾತನಾಡಿ, ಹಲವು ಕನಸುಗಳೊಂದಿಗೆ ಸಮಾಜದ ಅಭಿವೃದ್ದಿ, ಸೇವೆಗೆ ಪೂರಕವಾಗುವ ಉದ್ದೇಶದಿಂದ ಹಾಗೂ ಭಂಡಾರಿ ಬಂಧುಗಳ ಮನೆ ಮನದ ಮಾತನ್ನು ಬಿತ್ತರಿಸುವ ನಿಟ್ಟಿನಲ್ಲಿ ಭಂಡಾರಿ ವಾರ್ತಾ ಪತ್ರಿಕೆಯೊಂದನ್ನು ಅಂತರ್ಜಾಲದಲ್ಲಿ ಪ್ರಾರಂಭಿಸಲಾಗಿದೆ. ಇದು ಒಂದು ತಿಂಗಳಿನಲ್ಲಿಯೇ ಸುಮಾರು 27 ಸಾವಿರ ವೀಕ್ಷಕರ ಸಂಖ್ಯೆಯನ್ನು ದಾಟಿದೆ. ಈ ಅಭೂತಪೂರ್ವ ಯಶಸ್ಸಿಗೆ ಭಂಡಾರಿವಾರ್ತೆ ತಂಡದ ಸದಸ್ಯರ ನಿಸ್ವಾರ್ಥ, ಕಠಿಣ ಪರಿಶ್ರಮವೇ ಕಾರಣ ಎಂದರು.

      ಪ್ರಾಸ್ತಾವಿಕ ಭಾಷಣ ಮಾಡಿದ ಸಂಸ್ಥೆಯ ಮುಖ್ಯ ಸಂಪಾದಕರಾದ ರವಿ ಬಿದನೂರು ಅವರು, ಭಂಡಾರಿ ಸಮಾಜಕ್ಕೆ ಪ್ರಸ್ತುತ ಇರುವ ಅಗತ್ಯತೆಗಳೇನು ಮತ್ತು ಸಂಘಗಳ ನಿಷ್ಕ್ರೀಯತೆಯಿಂದ ಉಂಟಾದ ಹಿನ್ನಡೆಯೇನು ಎಂಬುದನ್ನು ವಿವರಿಸಿದರು. ಭಂಡಾರಿವಾರ್ತೆ ಇ-ಪೇಪರ್ ಮಾಡುವ ಉದ್ದೇಶ ಹಲವು ವರ್ಷಗಳ ಯೋಜನೆಯಾಗಿತ್ತು, ಇವತ್ತು ಕೈಗೂಡಿದ್ದು ಅನೀರಿಕ್ಷಿತ ಯಶಸ್ಸು ಕೂಡ ಸಿಗುತ್ತಿದೆ ಎಂದು ಹರ್ಷಪಟ್ಟರು. ವೆಬ್ ಸೈಟ್ ಅಪ್ಲಿಕೇಷನ್ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿದ ತಾಂತ್ರಿಕ ತಂಡದ ಪ್ರಕಾಶ್ ಮಂಜೇಶ್ವರ ಮತ್ತು ನಿತಿನ್ ಕುಂದಾಪುರ ಇವರನ್ನು ಶ್ಲಾಘಿಸಿದರು. ಅದೇ ರೀತಿ ಪತ್ರಿಕೆ ನಡೆಸಲು ಬೇಕಾದ ಸಂಪನ್ಮೂಲಗಳನ್ನು ಪತ್ರಿಕೋದ್ಯಮದ ಮಾದರಿಯಲ್ಲೇ ನಡೆಸಬೇಕು ಮತ್ತು ಉದ್ಯಮಿಗಳಿಗೆ ರಿಯಾಯಿತಿ ದರದಲ್ಲಿ ಜಾಹೀರಾತು ಸೇವೆ ನೀಡುವ ಉದ್ದೇಶ ನಮ್ಮದಾಗಿದೆ ಎಂದರು.

      ಸಹ ಸಂಪಾದಕರಾದ ಸಂದೇಶ್ ಕುಮಾರ್ ಬಂಗಾಡಿ ಭಂಡಾರಿ ವಾರ್ತೆ ಅಂತರ್ಜಾಲ ಪತ್ರಿಕೆ ಹೊತ್ತು ತರುವ ಸುದ್ದಿ , ಜ್ಯೋತಿಷ್ಯ, ಧಾರ್ಮಿಕ, ಲೇಖನ, ಕವಿತೆ, ಕತೆ, ಅಂಕಣಗಳು, ಭಂಡಾರಿ ಪ್ರತಿಭಾನ್ವಿತರ ಅನಾವರಣ, ಸೌಂದರ್ಯ ಮಾಹಿತಿಗಾಗಿ ಬ್ಯೂಟಿ ಬಾಕ್ಸ್, ಅಡುಗೆ ಮಾಹಿತಿಗಾಗಿ ಭಂಡಾರಿ ಕಿಚನ್ ನಂತಹ ವಿಷಯಗಳು ಓದುಗರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿದೆ ಎಂದರು.

      ಬಳಿಕ ನಡೆದ ವೆಬ್ ಸೈಟ್ ಅನಾವರಣವನ್ನು ಕುಶಲ್ ಕುಮಾರ್ ಬೆಂಗಳೂರು ನೆತೃತ್ವದಲ್ಲಿ ತಂಡದ ಎಲ್ಲಾ ಸದಸ್ಯರು ಸಾಂಕೇತಿಕವಾಗಿ ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ ಭಂಡಾರಿ ವಾರ್ತೆ ತಂಡದ ಎಲ್ಲ ಸದಸ್ಯರನ್ನು ಹಾಗೂ ಸಂಸ್ಥೆಗಾಗಿ ದುಡಿಯುತ್ತಿರುವ ಎಲ್ಲರನ್ನು ನೆರೆದಿರುವ ಸಭಿಕರಿಗೆ ಪ್ರಕಾಶ್ ಭಂಡಾರಿ ‌ಕಟ್ಲರವರು ಪರಿಚಯಿಸಿದರು. ಜೊತೆಗೆ ಆಂಡ್ರಾಯ್ಡ್ ಆ್ಯಪ್ ನಿರ್ಮಾಣದಲ್ಲಿ ಶ್ರಮಿಸಿದ ನಿತಿನ್ ಭಂಡಾರಿಯವರನ್ನು ಶ್ಲಾಘಿಸಿದರು.

      ಫಿನಿಷಿಂಗ್ ಟಚ್ ಮುಂಬಯಿ ಹಾಗೂ ದುರ್ಗಾ ಇಂಜಿನಿಯರಿಂಗ್ ವರ್ಕ್ಸ್ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಭಂಡಾರಿವಾರ್ತೆ ಓದುಗರಿಗಾಗಿ ಹಮ್ಮಿಕೊಂಡಿದ್ದ ಹತ್ತು ವರ್ಷದೊಳಗಿನ ಮಕ್ಕಳ ಸೆಲ್ಪಿ ಸ್ಪರ್ಧೆಯ ವಿಜೇತರಾದ ಮಾ|ಶ್ಲೋಕ್ ಭಂಡಾರಿ ಮಂಗಳೂರು ಮತ್ತು ದ್ವಿತೀಯ ಸ್ಥಾನ ಪಡೆದಿದ್ದ ಮಾ| ಪ್ರಾಪ್ತ್ ಭಂಡಾರಿ ಕುವೈತ್ ಇವರಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ಸೆಲ್ಪಿ ಸ್ಪರ್ಧೆಯ ಉದ್ದೇಶ ಹಾಗೂ ಭಂಡಾರಿವಾರ್ತೆ ಪೇಸ್ಬುಕ್, ಟ್ವಿಟ್ಟರ್, ಯುಟ್ಯೂಬ್ ಗಳಂತಹ ಇತರ ಸಾಮಾಜಿಕ ಜಾಲತಾಣಗಳಲ್ಲಿ ಹೇಗೆಲ್ಲ ಕಾರ್ಯ ನಿರ್ವಹಿಸುತ್ತದೆ ಮತ್ತು ಹೇಗೆ ಜನರನ್ನು ತಲುಪುತ್ತದೆ ಎಂಬುದನ್ನು ಚುಟುಕಾಗಿ ಸಂಸ್ಥೆಯ ತಾಂತ್ರಿಕ ವಿಭಾಗದ ಸದಸ್ಯ ರಾಜೇಶ್ ಭಂಡಾರಿ ತಿಳಿಸಿಕೊಟ್ಟರು.

      ಭಂಡಾರಿ ವಾರ್ತಾ ಪತ್ರಿಕೆಯ ಬಗ್ಗೆ ಓದುಗರಿಗೆ ಅಭಿಪ್ರಾಯ ತಿಳಿಸಲು ಅವಕಾಶ ನೀಡಲಾಯಿತು. ಹಲವು ಪ್ರಮುಖ ಗಣ್ಯರು ಮತ್ತು ಅಭಿಮಾನಿಗಳು ಭಂಡಾರಿವಾರ್ತೆಗೆ ಸಲಹೆ ಸೂಚನೆಗಳನ್ನು ನೀಡಿ ಶುಭಹಾರೈಸುವುದರೊಂದಿಗೆ, ನಿರಂತರ ಬೆಂಬಲ ನೀಡುವುದಾಗಿ ಹೇಳಿದರು.

      ಪ್ರಕಾಶ್ ಭಂಡಾರಿ ಕಟ್ಲರವರು ಮುಂದಿನ ದಿನಗಳಲ್ಲಿ ಉದ್ದೇಶಿತ ಸಲೂನ್ ಮತ್ತು ಬ್ಯೂಟಿ ಸ್ಪಾ ತರಬೇತಿ ಸಂಸ್ಥೆ ಮತ್ತು ಉದ್ದಿಮೆ ಆರಂಭಿಸಿ ಭಂಡಾರಿ ಸಮಾಜದ ಕ್ಷೌರಿಕರನ್ನು ಮೇಲ್ದರ್ಜೆಗೇರಿಸುವ ಚಿಂತನೆಯಾದ ವಿಷನ್ 2020 ಎಂಬ ಸಮಾಜದೊಂದಿಗೆ ಸಮಾಜಕ್ಕೋಸ್ಕರ ನಡೆಸುವ ಉದ್ದಿಮೆಯ ಬಗ್ಗೆ ವಿವರಣೆ ನೀಡಿ ಸದ್ಯದಲ್ಲೇ ಸಮಾನ ಮನಸ್ಕರ ಸಭೆ ಕರೆಯುವುದಾಗಿ ತಿಳಿಸಿದರು. ಕೊನೆಗೆ ಭಂಡಾರಿ ವಾರ್ತೆ ತಂಡದ ಸದಸ್ಯರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

      ಕಾರ್ಯಕ್ರಮದ ನಿರ್ವಹಣೆ ಮತ್ತು ನಿರೂಪಣೆಯನ್ನು ದಿವ್ಯಾ ಉಜಿರೆ ನಡೆಸಿಕೊಟ್ಟರು. ಶ್ರುತಿ ಭಂಡಾರಿ ಮಂಗಳೂರು ಸ್ವಾಗತಿಸಿದರು. ಕಾರ್ಯಕ್ರಮದ ಉಸ್ತುವಾರಿಯನ್ನು ಕುಶಲ್ ಕುಮಾರ್ ಬೆಂಗಳೂರು ವಹಿಸಿದ್ದರು. ಮಾಧ್ಯಮ ವರದಿಗಾರರಾಗಿ ಕಿರಣ್ ಸರಪಾಡಿ ಹಾಗೂ ಕಿಶೋರ್ ಸೋರ್ನಾಡು ರವರು ಸಹಕರಿಸಿದರು. ಗಂಗಾಧರ ಭಂಡಾರಿ ಭಿರ್ತಿ ಮತ್ತು ಲಕ್ಷಣ್ ಕರಾವಳಿ ವಿಜೇತರಿಗೆ ಬಹುಮಾನ ವಿತರಿಸಿದರು. ಪ್ರಶಾಂತ್ ಕಾರ್ಕಳ ವಂದನಾರ್ಪಣೆ ಸಲ್ಲಿಸಿದರು.

– ಭಂಡಾರಿ ವಾರ್ತೆ

3 thoughts on “ಭಂಡಾರಿವಾರ್ತೆ ಅಂತರ್ಜಾಲ ಪತ್ರಿಕೆಯ ಯಶಸ್ಸಿಗೆ ತಂಡದ ನಿಸ್ವಾರ್ಥ, ಕಠಿಣ ಶ್ರಮವೇ ಕಾರಣ ನಾನು ಕೇವಲ ನಿಮಿತ್ತ ಮಾತ್ರ : ಪ್ರಕಾಶ್ ಭಂಡಾರಿ ಕಟ್ಲ

  1. 🌹Congratulations to Bhandary Varthe Team !!!

    ⚡Now you have the wings. Go, chase your dreams. May Kachur Nageshwara prepare you for unseen future.

    🌺ALL THE BEST🌺

Leave a Reply

Your email address will not be published. Required fields are marked *