
ಭಂಡಾರಿ ಕುಟುಂಬದ ನಾಟ್ಯ ಪ್ರತಿಭೆ ಉಡುಪಿಯ ಕುಮಾರಿ ಕು. ನಿಶಿತಾ.
ಮೂರೂವರೆ ವರ್ಷದವಳಿದ್ದಾಗಲೇ ನೃತ್ಯ ಕಲಿಯಲಾರಂಭಿಸಿ ಚಿಕ್ಕ ವಯಸ್ಸಿನಲ್ಲಿಯೇ ನೃತ್ಯ ಕಲೆಯ ಹಲವು ಪಟ್ಟುಗಳನ್ನು ಕರಗತ ಮಾಡಿಕೊಂಡು, ಶಾಲೆಯಲ್ಲಿ ನಡೆಯುವ ನೃತ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸುತ್ತಾ, ಹಲವು ಸಭೆ ಸಮಾರಂಭಗಳಲ್ಲಿ ತಮ್ಮ ನಾಟ್ಯ ಕಲೆಯಿಂದಲೇ ಎಲ್ಲರನ್ನೂ ತನ್ನತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡುತ್ತಾ,ಶಾಸ್ತ್ರೀಯ ಶೈಲಿ ಮತ್ತು ಪಾಶ್ಚಿಮಾತ್ಯ ಶೈಲಿಗಳೆರಡರಲ್ಲೂ ಪರಿಣತಿ ಗಳಿಸುತ್ತಾ ಇದೀಗ ವಿಧ್ಯುಕ್ತವಾಗಿ ಕಚ್ಚೂರಿನಲ್ಲಿ ಶ್ರೀ ನಾಗೇಶ್ವರನ ಸನ್ನಿಧಿಯಲ್ಲಿ ರಂಗಪ್ರವೇಶಕ್ಕೆ ಅಣಿಯಾಗುತ್ತಿರುವ ಭಂಡಾರಿ ಪ್ರತಿಭೆ ಉಡುಪಿ ಅಂಬಲಪಾಡಿಯ ಕುಮಾರಿ ನಿಶಿತಾ.
ಉಡುಪಿ ಅಂಬಲಪಾಡಿಯ ಕತ್ತಟ್ಟುವಿನ ಶ್ರೀ ರಾಮಚಂದ್ರ ಭಂಡಾರಿ ಮತ್ತು ಶ್ರೀಮತಿ ಯುಕ್ತಾವತಿ ರಾಮಚಂದ್ರ ಭಂಡಾರಿ ದಂಪತಿಯ ಪುತ್ರಿ ಕುಮಾರಿ ನಿಶಿತಾ ನೃತ್ಯ ವಿದ್ವಾನ್ ಶ್ರೀ ಬಿ.ಶ್ರೀಧರ್ ರಾವ್ ಬನ್ನಂಜೆಯವರ ಜ್ಞಾನದೀಪ ನೃತ್ಯ ಕಲಾ ಕೇಂದ್ರದಲ್ಲಿ ನೃತ್ಯಾಭ್ಯಾಸ ಆರಂಭಿಸಿ ಹದಿಮೂರು ವರ್ಷಗಳೇ ಕಳೆದಿವೆ. ನೃತ್ಯ ಕಲೆಯಲ್ಲಿ ನಿಖರತೆ, ಪ್ರಬುದ್ಧತೆ ಗಳಿಸಿರುವ ಕುಮಾರಿ ನಿಶಿತಾ ಭರತನಾಟ್ಯ ರಂಗಪ್ರವೇಶಕ್ಕೆ ಇದೀಗ ಸಂಕ್ರಮಣ ಕಾಲ ಕೂಡಿ ಬಂದಿದೆ.

ಕುಮಾರಿ ನಿಶಿತಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉಡುಪಿ ಬ್ರಹ್ಮಗಿರಿಯ ಸೇಂಟ್ ಸೆಸಿಲೀಸ್ ಕಾನ್ವೆಂಟ್ ನಲ್ಲಿ ಆರಂಭಿಸಿ ನಂತರ ಮೂರನೇ ತರಗತಿಯಿಂದ ಏಳನೇ ತರಗತಿಯ ವರೆಗೆ ಬೈಲೂರಿನ ಶ್ರೀ ವಾಸುದೇವಾ ಕೃಪಾ ಇಂಗ್ಲೀಷ್ ಮೀಡಿಯಂ ಸ್ಕೂಲ್ ನಲ್ಲಿ ವ್ಯಾಸಂಗ ಮಾಡಿ, ಎಂಟನೇ ತರಗತಿಯಿಂದ ಪುನಃ ಸೇಂಟ್ ಸೆಸಿಲೀಸ್ ಕಾನ್ವೆಂಟ್ ನಲ್ಲಿ ಶಿಕ್ಷಣವನ್ನಾರಂಭಿಸಿ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿ, ಪ್ರಸ್ತುತ ಅದೇ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿ.ಯು.ಸಿ.ವ್ಯಾಸಂಗ ಮಾಡುತ್ತಿದ್ದಾರೆ.
ಇವರ ತಂದೆ ಶ್ರೀ ರಾಮಚಂದ್ರ ಭಂಡಾರಿಯವರು ದಿವಂಗತ ಕಾಡಬೆಟ್ಟು ಸೋಮಯ್ಯ ಭಂಡಾರಿ ಮತ್ತು ಸೀತಾ ಸೋಮಯ್ಯ ಭಂಡಾರಿ ಯವರ ಪುತ್ರ. ಇವರು ಬ್ರಹ್ಮಗಿರಿಯಲ್ಲಿ ಟೈಲರ್ ವೃತ್ತಿ ಮಾಡಿಕೊಂಡಿದ್ದಾರೆ. ಇವರ ತಾಯಿ ಶ್ರೀಮತಿ ಯುಕ್ತಾವತಿ ರಾಮಚಂದ್ರ ಭಂಡಾರಿಯವರು ಕಾಸರಗೋಡು ಉಪ್ಪಳದ ಶಿವಪ್ಪ ಭಂಡಾರಿ ಮತ್ತು ಜಾನಕಿ ಶಿವಪ್ಪ ಭಂಡಾರಿ ದಂಪತಿಯ ಪುತ್ರಿಯಾಗಿದ್ದು ಇವರೂ ಸಹ ಕಲೆಯಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದಾರೆ. ಅಂಬಲಪಾಡಿಯ ಸವಿತಾ ಸಮಾಜ ಮಹಿಳಾ ಚಂಡೆ ಬಳಗದ ಅಧ್ಯಕ್ಷೆಯಾಗಿ ಸಕ್ರಿಯರಾಗಿದ್ದಾರೆ ಮತ್ತು ಇವರ ಹಿರಿಯ ಸಹೋದರ ಶ್ರೀ ನಿಖಿಲ್ ಭಂಡಾರಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಕಲಿಯುತ್ತಿದ್ದಾರೆ.

ಇಂತಹ ಅಪರೂಪದ ನೃತ್ಯ ಪ್ರತಿಭೆ ತಮ್ಮ ನಾಟ್ಯಗುರು ಶ್ರೀ ಬಿ.ಶ್ರೀಧರ್ ರಾವ್ ಬನ್ನಂಜೆಯವರ ಜ್ಞಾನದೀಪ ನೃತ್ಯ ಕಲಾಕೇಂದ್ರ (ರಿ) ದ ಆಶ್ರಯದಲ್ಲಿ ಮೇ 7 ರ ಸೋಮವಾರ ಬೆಳಗ್ಗೆ 10 ಗಂಟೆಗೆ ಶಾಸ್ತ್ರೋಕ್ತವಾಗಿ ಬಾರ್ಕೂರಿನ ಶ್ರೀ ನಾಗೇಶ್ವರ ಸಭಾ ಭವನದಲ್ಲಿ, ಕಚ್ಚೂರು ಶ್ರೀ ನಾಗೇಶ್ವರನ ಸನ್ನಿಧಾನದಲ್ಲಿ, ಕಲಾಸಕ್ತರ, ಕಲಾಪೋ ಷಕರ ಸಮ್ಮುಖದಲ್ಲಿ ತಮ್ಮ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ.
“ನೆರೆದ ಸಭಿಕರ ಸಮ್ಮುಖದಲ್ಲಿ ತಮ್ಮ ನೃತ್ಯಕಲಾ ಪ್ರೌಢಿಮೆಯನ್ನು, ನೃತ್ಯ ಪರಿಣತಿಯನ್ನು ಪ್ರದರ್ಶಿಸಲಿದ್ದಾರೆ. ನಮ್ಮ ಭಂಡಾರಿ ಕುಟುಂಬದ ನೃತ್ಯ ಪ್ರತಿಭೆಯೊಂದು ರಂಗಪ್ರವೇಶ ಮಾಡುತ್ತಿರುವ ಈ ಶುಭ ಸಂದರ್ಭದಲ್ಲಿ ಕಲಾಪೋಷಕರಾದ ತಾವುಗಳು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಆಕೆಯ ನೃತ್ಯ ಕಲಾ ಕುಶಲತೆಯನ್ನು ಪ್ರೋತ್ಸಾಹಿಸಬೇಕು.ಪೋಷಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇವೆ.“
ನಮ್ಮ ಭಂಡಾರಿ ಕುಟುಂಬದ ಅಪ್ಪಟ ನೃತ್ಯ ಪ್ರತಿಭೆಯೊಂದು ಕಲಾ ಪ್ರಪಂಚದಲ್ಲಿ ಪ್ರಜ್ವಲಿಸಲು ಅಣಿಯಾಗುತ್ತಿರುವ ಈ ಶುಭ ಗಳಿಗೆಯಲ್ಲಿ ಭಗವಂತನು ಕುಮಾರಿ ನಿಶಿತಾಳಿಗೆ ತನ್ನ ಅಭಯ ಹಸ್ತವನ್ನು ನೀಡಿ ಆಶೀರ್ವದಿಸಲಿ,ಅವಳ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ .

ವರದಿ:ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.
Good
Go on