January 18, 2025
buddah

ಬುದ್ಧ ಸುಮ್ಮನೆ ಇದ್ದ ಅದರೂ ಜಗವನ್ನೆ ಗೆದ್ದ…
ಬಹುಶಃ ಬುದ್ಧ ಜಗತ್ತಿನ ಆಕರ್ಷಣೆಯ ಕೇಂದ್ರ ಬಿಂದು.
ಬಿಂದು ಒಂದು ಕೇಂದ್ರವನ್ನು ಸ್ಪರ್ಶಿಸಿದರ ಸೂಚ್ಯವೇ ಬುದ್ದ ಇರಬಹುದು….

ಬುದ್ಧ ಜ್ಞಾನವನ್ನು ಹೊತ್ತು ತಿರುಗಿದ ಮಹಾಜ್ಞಾನಿ, ಅಂಬೇಡ್ಕರ್ ಬುದ್ಧನನ್ನು ಕುತೂಹಲದಿಂದ ಕಂಡ ಇನ್ನೊಬ್ಬ ಜ್ಞಾನಿ.ಹೌದು ಇಬ್ಬರು ಜ್ಞಾನಿಗಳೇ,ಒಬ್ಬ ಅದರ ರೂಪ ಇನ್ನೊಬ್ಬ ಅದಕ್ಕೆ ರೈತ. ಮೌನದಿ ಕುಳಿತು ಪಡೆದವನೊಬ್ಬನಾದರೆ ಮತ್ತೊಬ್ಬ ಕಸರತ್ತು ಮಾಡಿ ಕೈವಶ ಮಾಡಿಕೊಂಡವ.ಸುಮ್ಮನೇ ಯಾವುದೂ ಒಲಿಯುವುದಿಲ್ಲ.
“ಒಬ್ಬ ಜ್ಞಾನಿಯಾಗಲು ಎಲ್ಲವನ್ನೂ ತೊರೆದ ಇವನೊಬ್ಬ ಜ್ಞಾನಕ್ಕಾಗಿ ಎಲ್ಲವನ್ನೂ ತೆರೆದ. ತೆರೆದು ಓದಿದ್ದನ್ನು ಹಂಚುವುದಕ್ಕಾಗಿ ಬರೆದ.”

ವಿಮರ್ಶೆ ಮಾಡಿ ಬರೆವುದಕ್ಕೆ ವಿಮರ್ಶಕನೋರ್ವ ಬೇಕು. ಇಲ್ಲಿ ಮೂಲ ಲೇಖಕನಿಗಿಂತ ವಿಮರ್ಶಕ ದೊಡ್ಡವನಲ್ಲ, ವಿಮರ್ಶಕನಿಲ್ಲದೆ ಯಾವ ಲೇಖಕನೂ ಬೆಳೆದ ಉದಾಹರಣೆಗಳಿಲ್ಲ. ವಿಮರ್ಶೆಗೆ ಓದು ಬೇಕು, ಓದಿನ ಅನುಭವ ಬೇಕು, ಅನುಭವ ಹಂಚಲು ಭಾವ ಬೇಕು, ಭಾವಕ್ಕೆ ಮಹಾಭಾವದ ಕೃಪೆ ಬೇಕು.

ನಮ್ಮ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಇವರೊಬ್ಬರು ಮಹಾನ್ ಮೇಧಾವಿ ಅನ್ನುವುದರಲ್ಲಿ ಇಂದು ಯಾವುದೇ ಅನುಮಾನಗಳು ಉಳಿದಿಲ್ಲ. ಅಂತಹಾ ಮಹಾನ್  ಚಿಂತಕ, ವಿಮರ್ಶಕ, ಬರಹಗಾರ, ಮಾನವತಾವಾದಿ ನಮಗಾಗಿ ಮೊದಲಿಗೆ  “ಭಾರತೀಯ ಸಂವಿಧಾನ” ಎಂಬ ರಾಷ್ಟ್ರ ಕೃತಿಯನ್ನು ಕೊಟ್ಟು ದೇಶದ ಸಂವಿಧಾನಕ್ಕೆ ಶ್ರೀಕಾರ ಹಾಕಿದರು.ಅನಂತರ ‘ಬುದ್ಧ  ಆ್ಯಂಡ್ ಹಿಸ್ ಧಮ್ಮ’ ಕೃತಿರಚನೆಯ ಮೂಲಕ ಭಾರತೀಯ ದರ್ಶನ ಕ್ಷೇತ್ರಕ್ಕೆ ಅಮೂಲ್ಯ ಕೃತಿಯನ್ನು ನೀಡಿದ್ದಾರೆ. ಮಹಾತ್ಮರ ನಡೆ ಕಂಡು ದೊಡ್ಡವರು ಬರೆಯುತ್ತಾರೆ, ದೊಡ್ಡವರು ಬರೆದದ್ದನ್ನು ಚಿಕ್ಕವರು ಓದಿ ತಿಳಿಯಲು ಪ್ರಯತ್ನಿಸುತ್ತಾರೆ, ದೊಡ್ಡವರು ಗುರುಗಳನ್ನು ಹಿಂಬಾಲಿಸುವವರು.


ಶಿಷ್ಯರು ಅರ್ಥಾತ್ ವಿಧ್ಯಾರ್ಥಿಗಳು ಕಲಿಯುವ ಹಂಬಲ ,ತಿಳಿಯುವ ಚಪಲ ಅವರನ್ನು ಓದಿಸುತ್ತದೆ, ಇಲ್ಲಿ ನಾನೊಬ್ಬ ವಿದ್ಯಾರ್ಥಿ ಓದಿದ್ದನ್ನು ಹಂಚುತ್ತಿರುವುದು ವಿಮರ್ಶೆಗೆ ಅಲ್ಲ, ಓದಿದ್ದರ ಸಂಭ್ರಮಕ್ಕೆ………

 

ಇನ್ನು ಈ ಪುಸ್ತಕ……

 


ಮೊದಲ ಪುಟಗಳಲ್ಲೆ ಹಳೆಯ ಪುರಾಣಗಳನ್ನು ತೊಳೆದು ಇತಿಹಾಸಕ್ಕೆ ಕರೆದುಕೊಂಡು ಹೋಗುತ್ತದೆ, ಈ ಹಿಂದೆ ನಾವು ಇತಿಹಾಸದಂತೆ ಓದಿದ್ದನ್ನೆಲ್ಲ ತಿರಸ್ಕರಿಸುತ್ತದೆ. ನಡುರಾತ್ರಿಯಲ್ಲಿ ಸಿದ್ಧಾರ್ಥನು ಮಡದಿ ಮತ್ತು ಮಗನನ್ನು ತೊರೆದು ಹೋಗಿ ಬುದ್ಧನಾಗಲಿಲ್ಲ. ಅದಕ್ಕೊಂದು ಭವ್ಯವಾದ ಘನತೆಯುಳ್ಳ ಹಾಗೂ ಇಡೀ ಜಗತ್ತು ಗೌತಮನನ್ನು ಗೌರವಿಸುವಂತಹ ಇತಿಹಾಸವಿದೆ.ಅದನ್ನು ತುಂಬಾ ಜವಾಬ್ದಾರಿಯಿಂದ ಅಧ್ಯಯನದ  ಅರಿವಿನಿಂದ ಅಂಬೇಡ್ಕರ್ ಲೋಕದ ಮುಂದಿಟ್ಟಿದ್ದಾರೆ.

ತಾವು ಕಂಡು, ಅಧ್ಯಯನ ನಡೆಸಿದ ಭಾರತದಲ್ಲಿನ ಎಲ್ಲಾ ಮತ ಧರ್ಮಗಳಿಗಿಂತ ಬುದ್ಧನ ಚಿಂತನೆ ಹೇಗೆ ಭಿನ್ನ ಮತ್ತು ಅವರು ಬೌದ್ಧಧರ್ಮಕ್ಕೆ ಯಾಕೆ ಹೆಚ್ಚಿನ ಮಾನ್ಯತೆ ನೀಡಿ ಮತಾಂತರಗೊಂಡರು ಅನ್ನುವುದನ್ನು ಸೂಕ್ತವಾದ ರೀತಿಯಲ್ಲಿ ಅರ್ಥಹಿಸಿದ್ದಾರೆ.


ಆಧುನಿಕ ಜಗತ್ತು ಅಪರಿಮಿತವಾದುದನ್ನು ಸೃಷ್ಟಿಸುವ ಜ್ಞಾನವನ್ನು ತನ್ನದಾಗಿಸಿಕೊಂಡಿದೆ. ಆದರೆ ಯಾವುದೇ ಧರ್ಮವನ್ನು ನಾವು ಆಯಾ ಕಾಲಘಟ್ಟಕ್ಕೆ ತಕ್ಕಂತೆ ಮರು ವಿಮರ್ಶೆಗೆ ಅಥವಾ ವ್ಯಾಖ್ಯಾನಕ್ಕೆ ಒಳಪಡಿಸದಿದ್ದರೆ ಆಗಬಹುದಾದ ದುರಂತಕ್ಕೆ ಇಂದು ಜಗತ್ತಿನ ಎಲ್ಲಾ ಮತಧರ್ಮಗಳು ಸಾಕ್ಷಿಯಾಗಿವೇ ಅನ್ನಿಸುತ್ತದೆ. ಇಂತಹ ಸನ್ನಿವೇಶದಲ್ಲಿ ಗೌತಮಬುದ್ಧ ಮತ್ತು ಆತನ ಚಿಂತನೆ ದಾರಿ ದೀಪವಾಗಬಲ್ಲದು.

ಇಂತಹ ಗೌತಮ ಬುದ್ಧನ ಜೀವನವನ್ನು ಇಂಚಿಂಚಾಗಿ ಲೇಖಕರು ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ, ಪ್ರತಿ ಹೆಜ್ಜೆಯನ್ನು ಗುರುತಿಸಿದ್ದಾರೆ, ಜೀವನದ ಪ್ರತಿಹೆಜ್ಜೆಯಲ್ಲು ಮಾನವೀಯ ಮೌಲ್ಯವನ್ನು ಮೆರೆದ ಮಹಾತ್ಮನನ್ನು ಪ್ರೀತಿಸಿದ್ದಾರೆ,ಪ್ರೀತಿಸುವಂತೆ ನಮ್ಮೆಲ್ಲರ ಕೈಯಲ್ಲಿ ಇಟ್ಟಿದ್ದಾರೆ.
ಹಿಂದಿನ ಎಲ್ಲಾ ಕಲ್ಪನೆಗಳಿಗೆ ಬ್ರೇಕ್ ನೀಡಲು, ಬುದ್ಧನ ಬಗ್ಗೆ ಯಾರಿಗಾದರೂ ವಿಕಲ್ಪಗಳು ಇದ್ದರೆ ಅದರಿಂದ ಹೊರಬರಲು  ತಪ್ಪದೇ ಈ ಕೃತಿಯನ್ನು ಓದಲೇ ಬೇಕು.ಬಹುಶಃ ಬುದ್ಧನ ನೈಜ ಚಿಂತನೆಗಳನ್ನು ಒಳಗೊಂಡಿರುವ ಈ ಕೃತಿ ಜಗತ್ತಿನ ಎಲ್ಲಾ ಧರ್ಮಗಳನ್ನು ಮತ್ತೊಮ್ಮೆ ವಿಮರ್ಶಿಸಲು ಸಹಾಯ ಮಾಡುತ್ತದೆ ಅನ್ನುವುದು ನನ್ನ ಅನಿಸಿಕೆ.

ಇಷ್ಟು ಒಳ್ಳೆಯ ಕೃತಿಯನ್ನು ನೀಡಿದ ಮಹನೀಯರು ಡಾ.ಬಿ.ಅರ್.ಅಂಬೇಡ್ಕರ್ ಸಾಹೇಬ್ ರಿಗೂ, ಕನ್ನಡಕ್ಕೆ ಅನುವಾದಿಸಿಕೊಟ್ಟ ಡಾ.ಎನ್.ಜಗದೀಶ ಕೊಪ್ಪ ರವರಿಗೂ ಪ್ರೀತಿ ಪೂರ್ವಕ ಧನ್ಯವಾದಗಳು.
ಓದುವ ಹವ್ಯಾಸ ಉಳ್ಳವರು ತಪ್ಪದೆ ಓದಿ. ಉಳಿದವರು ಓದುವ ಹವ್ಯಾಸ ಬೆಳೆಸಿಕೊಳ್ಳಿ ಪ್ರಬುದ್ಧ ಸಮಾಜದ ಕಡೆ ಹೆಜ್ಜೆಯಿಡಿ.

 

 

 

 

ವೆಂಕಟೇಶ ಭಂಡಾರಿ. ಕುಂದಾಪುರ.

Leave a Reply

Your email address will not be published. Required fields are marked *