ಇಂದಿನ ಸಂಚಿಕೆಯಲ್ಲಿ ನಾವು ಸೋರೆಕಾಯಿ ಯ ಬಗ್ಗೆ ತಿಳಿಯೋಣ.
ಸೋರೆಕಾಯಿ ಎಂದಾಗ ಕೆಲವರ ಮುಖ ಸಪ್ಪೆರುಚಿ ಎನ್ನುವ ಕಾರಣಕ್ಕಾಗಿ ಸಣ್ಣದಾಗುವುದುಂಟು. ಸಸ್ಯವರ್ಗ cucurbitaceae ಕುಟುಂಬಕ್ಕೆ ಸೇರಿರುವ ಸೋರೆಕಾಯಿ ವೈಜ್ಞಾನಿಕ ಹೆಸರು calabash(Lagenaria siceraria). ಅತಿ ಪುರಾತನ ತರಕಾರಿಗಳಲ್ಲಿ ಸೋರೆ ಕಾಯಿ ಬಹಳ ಮುಖ್ಯವಾದುದು. ಕ್ರಿಸ್ತಪೂರ್ವ ಏಳು ಸಾವಿರದಿಂದ ಐದು ಸಾವಿರ ವರ್ಷಗಳಿಗಿಂತ ಹಿಂದೆಯೇ ಸೋರೆಕಾಯಿ ಇತ್ತೆಂದು ತಿಳಿದು ಬಂದಿದೆ. ಮೂಲತಃ ಆಫ್ರಿಕಾ ಸೋರೆಕಾಯಿಯ ತವರೂರಾದರೆ ನೀರಿನ ಮೂಲಕ ಅಮೆರಿಕಕ್ಕೆ ತಲುಪಿ ವಿಶ್ವವ್ಯಾಪಕವಾಯಿತೆಂದು ಭಾವಿಸಲಾಗಿದೆ. ಆಕೃತಿಯಲ್ಲಿ ದಪ್ಪ ಮತ್ತು ಅಗಲ ಹಾಗೂ ಸಪುರ ಮತ್ತು ಉದ್ದವಾಗಿ ಭಿನ್ನ ಆಕಾರದಲ್ಲಿ ಸೋರೆಕಾಯಿ ಬೆಳೆಯುತ್ತದೆ. ತುಸು ಹಸಿರು ಬಣ್ಣದ ದಪ್ಪ ಹೊರಕವಚ ಒಳಗೆ ಬಿಳಿ ಬಣ್ಣದ ವಿಶೇಷ ರುಚಿ ಇಲ್ಲದ ತಿರುಳು ಹಾಗೂ ಬಿಳಿ ಬೀಜ ಸಿಗುತ್ತದೆ. ತೊಟ್ಟು ಬಿಟ್ಟರೆ ಬೇರೆಲ್ಲಾ ಉಪಯೋಗಕ್ಕೆ ಯೋಗ್ಯವಾಗಿದೆ. ನೆಲದಲ್ಲಿ ಅಥವಾ ಮರಕ್ಕೆ ಬಿಟ್ಟ ಬಳ್ಳಿಯಲ್ಲಿ ಮೊದಲು ಚೆಂದದ ಬಿಳಿ ಹೂ ಬಿಟ್ಟ ನಂತರ ಕಾಯಿ ಉಂಟಾಗುತ್ತದೆ. ಹೆಚ್ಚು ಪಕ್ವಗೊಳ್ಳುವ ಮೊದಲೇ ಬಳಸಬೇಕು. ಸೋರೆಕಾಯಿಯು 96% ಜಲಾಂಶ ವಾಗಿದ್ದು, 2.5%ಪ್ರೊಟೀನ್ ನಿಂದ ಕೂಡಿದೆ.ಶಕ್ತಿಯ ಪ್ರಮಾಣ ತೀರ ಕಡಿಮೆಯಾಗಿದ್ದು, ನೂರು ಗ್ರಾಮ್ ಸೋರೆಕಾಯಿಯಲ್ಲಿ
12% ಕ್ಯಾಲರಿ ಮಾತ್ರ ಇದೆ. ವ್ಯಕ್ತಿಗೆ ದಿನದಲ್ಲಿ ಬೇಕಾದ ವಿಟಮಿನ್ ‘ಸಿ’ 20% ನೂರು ಗ್ರಾಂ ಸೋರೆಕಾಯಿಯಲ್ಲಿ ಲಭ್ಯ.
ಸೋಡಿಯಂ ತೀರ ಕಡಿಮೆ ಆದ್ದರಿಂದ ರಕ್ತದೊತ್ತಡ ಹೆಚ್ಚಿರುವವರಿಗೆ ಸೋರೆಕಾಯಿ ಅತಿ ಸೂಕ್ತ ಆಹಾರ. ಪ್ರೋಟಿನ್ಯುಕ್ತ ಆಹಾರಗಳನ್ನು ಕಡಿಮೆ ಮಾಡಿ ಸೋರೆಕಾಯಿಯನ್ನು ಹೆಚ್ಚು ಸೇವಿಸಿದರೆ ಬೊಜ್ಜು ದೇಹವನ್ನು ನಿರಾಯಾಸವಾಗಿ ಕಡಿಮೆ ಮಾಡಬಹುದು. ಸೋರೆಕಾಯಿಯಿಂದ ಹೈ ಬ್ಲಡ್ ಪ್ರೆಶರ್ ಸಾಮಾನ್ಯ ಸ್ಥಿತಿಗೆ ಬರುವುದು. ಗರ್ಭಿಣಿಯರಲ್ಲಿ ಕಂಡು ಬರುವ ನಿಶ್ಯಕ್ತಿ ನೀಗುವುದು. ದೇಹವು ತಂಪಾಗುವುದು ಹಾಗೂ ಸರಿಯಾದ ಮೂತ್ರ ವಿಸರ್ಜನೆಗೆ ಸಹಾಯಕ. ದಹನೇಂದ್ರಿಯಕ್ಕೆ ಯಾವುದೇ ರೀತಿಯಲ್ಲಿ ತೊಂದರೆ ನೀಡದ ಸೋರೆಕಾಯಿಯನ್ನು ಎಷ್ಟೇ ಸೇವಿಸಿದರೆ ಹೊಟ್ಟೆ ನೋವಿನ ಸಮಸ್ಯೆ ಉಂಟಾಗದು. ಕ್ಷಯ ರೋಗಿಗಳಿಗೆ ಅತ್ಯುತ್ತಮ ಆಹಾರವಾಗಿದ್ದು ರೋಗನಿರೋಧಕವನ್ನು ಹೆಚ್ಚಿಸುತ್ತದೆ. ಬೇಸಿಗೆ ಕಾಲದಲ್ಲಿ ಬೆವರಿನಿಂದ ನಷ್ಟ ಹೊಂದುವ ಸೋಡಿಯಂ ಪ್ರಮಾಣವನ್ನು ಸರಿದೂಗಿಸಲು ಹಾಗೂ ಬಳಲಿಕೆ ನೀಗಿಸಲು ಬಾಯಾರಿಕೆ ಕಡಿಮೆ ಮಾಡಲು ಸೋರೆಕಾಯಿ ನೀರನ್ನು ಬಳಸಬಹುದು. ಹೆಚ್ಚು ಕೊಬ್ಬಿ ನಿಂದ ಕೂಡಿದ ಬಿರಿಯಾನಿ , ತುಪ್ಪ ದೊಟ, ಕರಿದ ಆಹಾರವನ್ನು ಸೇವಿಸಿದಾಗ ಉಂಟಾಗುವ ಅತಿ ದಾಹವನ್ನು ಶಮನಗೊಳಿಸಲು ಹಾಗೂ ಜೀರ್ಣ ಸಮಸ್ಯೆಯನ್ನು ನಿವಾರಿಸಲು ಸೋರೆಕಾಯಿಯ ರಸ ಉತ್ತಮ. ಮಲಬದ್ಧತೆಯನ್ನು ನಿವಾರಿಸಲು ಇದು ಉಪಯುಕ್ತ. ಕೂದಲಿನ ಆರೈಕೆಗೆ ಸೋರೆಕಾಯಿ ಯ ರಸ ಒಳ್ಳೆಯದು.ಇದು ಅಕಾಲಿಕ ಕೂದಲು ಉದುರುವಿಕೆಯನ್ನು ಮೊಟಕುಗೊಳಿಸುವಲ್ಲಿ ಸಹಾಯಕ. ಹಾಗೂ ಕೂದಲು ಬೆಳ್ಳಗಾಗುದನ್ನು ತಡೆಯುತ್ತದೆ. ಇವಿಷ್ಟೇ ಅಲ್ಲದೆ ಅಕಾಲಿಕ ವಯಸ್ಸಿನ ಸಮಸ್ಯೆಯನ್ನು ತಡೆಯುತ್ತದೆ. ಇದರಲ್ಲಿರುವ ಸತು ಹಾಗೂ ವಿಟಮಿನ್ ‘ಸಿ’ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮೊಡವೆಗೂ ಕಡಿವಾಣ ಹಾಕುತ್ತದೆ.
ಉಪಯೋಗಗಳು
ಪಿತ್ತ ರಕ್ತದೊತ್ತಡ ಇದ್ದವರು ಸೋರೆಕಾಯಿಯನ್ನು ಮಾಂಸ ಅಥವಾ ಬೆಳೆಯೊಂದಿಗೆ ಅಡುಗೆ ಮಾಡಿ ಸೇವಿಸಬೇಕು. ಸೋರೆಕಾಯಿಯ ತಿರುಳನ್ನು ಚೆನ್ನಾಗಿ ಅರೆದು ಅದರ ರಸ ತೆಗೆದು ಸಮ ಪ್ರಮಾಣದಲ್ಲಿ ಎಳ್ಳೆಣ್ಣೆ ಸೇರಿಸಿ ಕುದಿಸಿ ನೀರು ಬತ್ತಿದಾಗ ಸಿಗುವ ಸೋರೆಕಾಯಿ ಎಣ್ಣೆಯನ್ನು ತಲೆಗೆ ಹೆಚ್ಚಿದರೆ ಚೆನ್ನಾಗಿ ನಿದ್ರೆ ಬರುವುದು. ಮಾನಸಿಕ ಸಮಸ್ಯೆಗಳಿಗೂ ಉತ್ತಮ. ಸೋರೇಕಾಯಿ ತಿರುಳನ್ನು ನೀರಿನಲ್ಲಿ ಕುದಿಸಿ ಬತ್ತಿಸಿ ನೀರನ್ನು ಸೇವಿಸಿದರೆ ರಕ್ತ ವಾಂತಿ, ಆಂತರಿಕ ರಕ್ತಸ್ರಾವ, ಕ್ಷಯ, ಪಿತ್ತಗಳು ಗುಣವಾಗುವುದು. ಒಂದು ಲೋಟ ಸೋರೆಕಾಯಿ ದಿನಕ್ಕೆ ಒಂದು ಚಮಚ ಲಿಂಬೆರಸ ಸೇರಿಸಿ ಸೇವಿಸಿದರೆ ಮೂತ್ರ ತಡೆ ನಿವಾರಣೆಯಾಗುತ್ತದೆ. ಪ್ರಮೇಹ ರೋಗಿಗಳ ದಾಹ ಶಮನಕ್ಕೆ ಹಾಗೂ ಮಲ ಬೇಧಿಯಿಂದ ಬಳಲಿದ ದೇಹಕ್ಕೆ ಒಂದು ಲೋಟ ಸೋರೆ ರಸದಲ್ಲಿ ತುಸು ಉಪ್ಪು ಹಾಕಿ ಕೊಡಬೇಕು. ಗರ್ಭಿಣಿಯರಿಗೆ ಸೋರೆಕಾಯಿಯ ರಸವನ್ನು ಕಲ್ಲು ಸಕ್ಕರೆಯೊಂದಿಗೆ ನೀಡಿದರೆ ಹೆರುವ ಮಗು ಸುಂದರವಾಗಿರುತ್ತದೆ. ಚರ್ಮದಲ್ಲಿ ತುರಿಕೆ ಇದ್ದರೆ ಸೋರೆಕಾಯಿಯನ್ನು ಆಗ ತಾನೇ ಜಜ್ಜಿ ತೆಗೆದ ರಸವನ್ನು ಆ ಜಾಗದಲ್ಲಿ ಹಚ್ಚುವುದು ಒಳ್ಳೆಯದು. ಸೋರೆಕಾಯಿ ರಸದೊಂದಿಗೆ ಎಳ್ಳೆಣ್ಣೆಯನ್ನು ಕುದಿಸಿ ತಲೆಗೆ ಹಚ್ಚಿದರೆ ನಿದ್ರಾಹೀನತೆ ನೀಗುತ್ತದೆ. ಕಣ್ಣಿಗೂ ತಂಪು ಪಾದ ಒಡೆಯುವುದಕ್ಕೂ ಹಚ್ಚಬಹುದು.ನೆತ್ತಿಯ ಮೇಲೆ ಸೋರೆಕಾಯಿ ರಸ ಹಾಕಿ ಮಸಾಜ್ ಮಾಡುತ್ತಾ ಬಂದರೆ ಕೂದಲು ಬೆಳ್ಳಗಾಗುದನ್ನು ತಡೆಯುತ್ತದೆ. ದನದ ಹಾಲು ಮತ್ತು ಸೋರೆಕಾಯಿ ರಸ ಸೇರಿಸಿದ ಪಾನಕವು ಒಂದು ಟಾನಿಕ್ ನಷ್ಟು ಪರಿಣಾಮಕಾರಿ. ಒಂದು ಸೋರೆಕಾಯಿಯ ಸಿಪ್ಪೆಯಲ್ಲಿ ಪೊಟ್ಯಾಷಿಯಂ ಪ್ರಮಾಣ ಹೆಚ್ಚಾಗಿದ್ದು ಇದು ಮೂತ್ರ ಉತ್ಪಾದನೆಗೆ ಉತ್ತಮ. ಸಿಪ್ಪೆಯ ಒಳಭಾಗವನ್ನು ಮುಖಕ್ಕೆ ಹಚ್ಚುತ್ತಿದ್ದರೆ ಮುಖ ಕಾಂತಿ ಹೆಚ್ಚುವುದು. ಸೋರೆಕಾಯಿಯನ್ನು ಹಲವು ವಿಧದಲ್ಲಿ ಅಡುಗೆಗೆ ಬಳಸಲಾಗುತ್ತಿದೆ. ಅನ್ನಕ್ಕೆ ಸಾಂಬಾರು ಪದಾರ್ಥ ಪಲ್ಯಗಳನ್ನು ಮಾಡುತ್ತಾರೆ. ಸೋರೆಕಾಯಿಯಿಂದ ಮಾಡುವ ಹಲ್ವಾ ಬಹಳ ರುಚಿಕರ. ದಿಲ್ಲಿಯಲ್ಲಿ ಇದು ಬಹಳ ಪ್ರಸಿದ್ಧ ಒಂದು ಯುನಾನಿ ವೈದ್ಯಕೀಯದಲ್ಲಿ ಸೋರೆಕಾಯಿಯನ್ನು ಸೇರಿಸಿ ಮಾತ್ರೆ ಟಾನಿಕ್ ಲೇಹ್ಯಗಳನ್ನು ತಯಾರಿಸುತ್ತಾರೆ.
ಇದು ಬಾಟಲಿಯಾಕಾರದಲ್ಲಿ ರುವುದರಿಂದ ‘Bottle Gourd’ ಎಂಬ ಹೆಸರು ಇದೆ. ‘ಲೆಕ್ತ ತುಂಬ’ ಎಂದು ಸಂಸ್ಕೃತದಲ್ಲಿ ‘ಶುರಕ್ಕಾಯ್’ ಎಂದು ತಮಿಳಿನಲ್ಲಿ ‘ಚುರೆಕ್ಕ’ ಎಂದು ಮಲಯಾಳದಲ್ಲಿ ‘ತುರೆ’ ಎಂದು ತುಳುವಿನಲ್ಲಿ ಹೆಸರು ಇದೆ.ಹಾಗಾದರೆ 100ಗ್ರಾಂ ಸೋರೆಕಾಯಿಯಲ್ಲಿ ಯಾವೆಲ್ಲ ಪೋಷಕಾಂಶಗಳು ಇವೆ ಎಂದು ತಿಳಿಯೋಣ.
ನೂರು ಗ್ರಾಂ ಸೋರೆಕಾಯಿಯಲ್ಲಿ
ಜಲಾಂಶ- 96.1ಗ್ರಾಂ
ಪ್ರೊಟೀನ್-0.2ಗ್ರಾಂ ಕಾರ್ಬೋಹೈಡ್ರೇಟ್-2.5ಗ್ರಾಂ ಕೊಬ್ಬು-0.1ಗ್ರಾಂ
ನಾರು-0.6ಗ್ರಾಂ
ಪೊಟಾಷಿಯಂ-87 ಮಿ.ಗ್ರಾಂ ಸೋಡಿಯಂ-1.8 ಮಿ.ಗ್ರಾಂ
ಕ್ಯಾಲ್ಷಿಯಂ-20ಮಿ.ಗ್ರಾಂ ಕಬ್ಬಿಣ-0.7ಮಿ.ಗ್ರಾಂ
ಫಾಸ್ಪರಸ್-10ಮಿ.ಗ್ರಾಂ ವಿಟಮಿನ್ ಸಿ-6 ಮಿ.ಗ್ರಾಂ ಖನಿಜಾಂಶ-0.5ಮಿ.ಗ್ರಾಂ ಮೆಗ್ನೇಶಿಯಂ-5 ಮಿ.ಗ್ರಾಂ ತಾಮ್ರ0.3ಮಿ.ಗ್ರಾಂ ನಿಕೋಟಿನ್ ಆಮ್ಲಾ-0.2ಮಿ.ಗ್ರಾಂ ಥಿಯಾಮಿನ್-0.03ಮಿ.ಗ್ರಾಂ
ರಿಬೋಫ್ಲಾವಿನ್-0.01ಮಿ.ಗ್ರಾಂ
ಸೋರೆಕಾಯಿಯು ಬಾಯಿಗೆ ಸಪ್ಪೆ ಎನಿಸಿದರೂ ದೇಹಕ್ಕೆ ಹಿತ.ಹಾಗಾಗಿ ಅಡುಗೆಯಲ್ಲಿ ಸೋರೆಕಾಯಿ ಯನ್ನು ಹೆಚ್ಚು ಹೆಚ್ಚು ಬಳಸುವುದು ಉತ್ತಮ. ಸಪ್ಪೆ ಎನಿಸಿದರೂ ರುಚಿಕರವಾಗುವ ರೀತಿಯಲ್ಲಿ ಅಡುಗೆ ಮಾಡಿದರೆ ಖಂಡಿತ ಇಷ್ಟವಾಗದೆ ಇರಲಾರದು.
-ಸುಪ್ರೀತಾ ಭಂಡಾರಿ ಸೂರಿಂಜೆ