September 20, 2024

ಭಂಡಾರಿ ಸಮಾಜ ಸಂಘ (ರಿ) ಬೆಂಗಳೂರು ವಲಯದ ಫೆಬ್ರವರಿ 2021 ರ ಮಾಸಿಕ ಸಭೆಯು ದಿನಾಂಕ: 07/02/2021 ರ ಭಾನುವಾರದಂದು ಮಧ್ಯಾಹ್ನ 3 ಘಂಟೆಗೆ ಸಂಘದ ಗೌರಾವಾಧ್ಯಕ್ಷರಾದ ಶ್ರೀಯುತ ಲಕ್ಷ್ಮಣ ಭಂಡಾರಿ ಕರಾವಳಿಯವರ ಅಧ್ಯಕ್ಷತೆಯಲ್ಲಿ ಹೋಟೆಲ್ ಕದಂಬ ರಾಜಾಜಿನಗರ ಬೆಂಗಳೂರು ಇಲ್ಲಿ ಜರಗಿತು.

ವಲಯದ ಪ್ರಧಾನ ಕಾರ್ಯದರ್ಶಿ ಶ್ರೀ ಸುಧಾಕರ ಭಂಡಾರಿಯವರು ಹಾಜರಿದ್ದ ಎಲ್ಲರನ್ನೂ ಸ್ವಾಗತಿಸಿದರು. ಮೊದಲು ಈ ಹಿಂದಿನ ಸಭೆಯಿಂದ ಇದುವರೆಗೆ ನಮ್ಮನ್ನಗಲಿದ ಸಂಘದ ಪದಾಧಿಕಾರಿಗಳು, ಸಂಘದ ಸದಸ್ಯರು ಹಾಗೂ ಬಂಧುಗಳಿಗೆ ಒಂದು ನಿಮಿಷದ ಮೌನಾಚಾರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಿತು.

ಸಭೆಗೆ ಪ್ರದಾನ ಕಾರ್ಯದರ್ಶಿಯವರು ಹಿಂದಿನ ಸಭೆಯಲ್ಲಿ ಚರ್ಚಿತ ವಿಷಯಗಳು ಹಾಗೂ ತೆಗೆದುಕೊಂಡ ನಿರ್ಣಯಗಳನ್ನು ಸಭೆಗೆ ಓದಿ ಹೇಳಿದರು. ಹಿಂದಿನ ಸಭೆಯಲ್ಲಿ ಚರ್ಚಿಸಿದಂತೆ ಕರ್ನಾಟಕ ಬ್ಯಾಂಕಿನಲ್ಲಿ ಅವಧಿ ಮುಗಿದು ನಿರಖು ಠೇವಣಿಯ ಮೊತ್ತ ರೂ ಆರು ಲಕ್ಷವನ್ನು ಕಚ್ಚೂರು ಸೊಸೈಟಿಯಲ್ಲಿ ಮೂರು ವರ್ಷಗಳ ಅವಧಿಗೆ ನಿರಖು ಠೇವಣಿ ಇಟ್ಟಿದ್ದು ಪ್ರತೀ ವರ್ಷಕ್ಕೆ ಬಡ್ಡಿ ಬರುವಂತೆ ಮಾಡಿದ್ದೇವೆ, ಆ ಹಣದಿಂದ ನಾವು ಪ್ರತೀ ವರ್ಷ ವಿದ್ಯಾರ್ಥಿ ವೇತನ ನೀಡಬಹುದು ಎಂದು ತಿಳಿಸಿದರು.

ಚರ್ಚಿತ ವಿಷಯಗಳು:
ಸಂಘದ ನೋಂದಣಿ ನವೀಕರಣ: ಸಂಘದ ಗೌರವಾಧ್ಯಕ್ಷರು ಈ ವಿಷಯದಲ್ಲಿ ವಲಯದ ಮಾಜಿ ಅಧ್ಯಕ್ಷರಾದ ಶ್ರೀಯುತ ಮಾಧವ ಭಂಡಾರಿ ಯವರೊಂದಿಗೆ ಚರ್ಚಿಸಿದ್ದೇನೆ, ಅವರ ಕಾಲಾವಧಿಯಲ್ಲಿ ಅವರು ಮಾಡಿದ ಪ್ರಯತ್ನವನ್ನು ಮುಂದುವರಿಸಿ ಈ ಕೆಲಸವನ್ನು ಸಂಪೂರ್ಣಗೊಳಿಸಿ ಗೊಳಿಸಿ ಕೊಡಬೇಕೆಂದು ಕೇಳಲಾಗಿದೆ ಅದಕ್ಕೆ ಅವರು ತಮ್ಮ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು. ಶ್ರೀಮತಿ ಅಕ್ಷತಾ ಸದಾನಂದ ರವರು ಮತ್ತು ಅವರ ಪತಿ ಶ್ರೀಯುತ ಸದಾನಂದ ರವರು ತಾಂತ್ರಿಕವಾಗಿ ಇತ್ತೀಚಿನ ದಿನಗಳಲ್ಲಿ ಸಂಘದ ನವೀಕರಣಕ್ಕೆ ಇರುವ ತೊಂದರೆಗಳನ್ನು ಸಭೆಗೆ ವಿವರಿಸಿದರು. ಸಂಘದ ಪ್ಯಾನ್ ನಂಬರ್ ನಲ್ಲಿ ಈಗಾಗಲೇ ಕಡಿತ ಗೊಂಡಿರುವ ಟಿ.ಡಿ,ಎಸ್ ಅನ್ನು ಹಿಂಪಡೆಯಲು ಸಂಘದ ನೋಂದಣಿ ನವೀಕರಣ ಆಗದೇ ಇರುವುದು ಒಂದು ಕಾರಣವಿರಬಹುದು ಎಂದರು. ನವೀಕರಣದ ಮಹತ್ವ ಎಷ್ಟಿದೆ ಎಂಬುದನ್ನು ಸಭೆಗೆ ವಿವರಿಸಿದರು.

2021-22 ನೇ ಸಾಲಿನ ಯೋಜನೆಗಳು: ಗೌರಾವಾಧ್ಯಕ್ಷರು ಸಂಘದ ಹಣಕಾಸಿನ ಸ್ಥಿತಿಗತಿಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಈ ವರ್ಷ ಕಾರ್ಯನಿರ್ವಹಿಸಬೇಕು, ಸಂಘ ಪ್ರಾರಂಭವಾದ ಮೊದಲ ವರ್ಷಗಳಲ್ಲಿ ನಾವು ಸಂಘದ ಹಣಕಾಸಿನ ಸ್ಥಿತಿಗತಿ ಸುಧಾರಿಸಲು ಬುನಾದಿ ಹಾಕಿದ್ದೆವು. ಆದರೆ ನಂತರ ಬಂದಂತಹ ಕಮಿಟಿಗಳು ಸಂಘವನ್ನು ಆರ್ಥಿಕವಾಗಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿಲ್ಲ. ಹಾಗಾಗಿ ಇನ್ನು ಮುಂದೆ ಅಧಿಕಾರ ವಹಿಸಿಕೊಳ್ಳುವ ಕಮಿಟಿಗಳು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು. ಹಾಗೆಯೇ ಈ ವರ್ಷದಲ್ಲಿ ಬೇರೆ ಬೇರ ಜಿಲ್ಲೆಗಳಿಂದ ಬೆಂಗಳೂರಿಗೆ ಬಂದು ನೆಲೆಸಿರುವ ಭಂಡಾರಿ ಕುಟುಂಬದವರನ್ನು ಸಭೆಗೆ ಕರೆತಂದು ಅವರನ್ನು ಸಂಘದ ಸದಸ್ಯತ್ವ ಪಡೆಯುವಂತೆ ಪ್ರೇರೇಪಿಸ ಬೇಕೆಂದು ಎಲ್ಲರೂ ಈ ಕಾರ್ಯದಲ್ಲಿ ಆದ ಪ್ರಗತಿಯನ್ನು ಪ್ರತಿ ತಿಂಗಳು ಸಭೆಗೆ ತಿಳಿಸಬೇಕೆಂದು ತಿಳಿಸಿದರು.

ಸರದಿಯಂತೆ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಭಂಡಾರಿ ಸಮಾಜ ಸಂಘದ ಉಸ್ತುವಾರಿಯಲ್ಲಿ ನಡೆಯುವ ಉತ್ಸವದ ಖರ್ಚಿಗಾಗಿ ಪ್ರತ್ಯೇಕ ಚಾಲ್ತಿ ಖಾತೆಯನ್ನು ತೆರೆದ ಪ್ರತಿ ತಿಂಗಳು ಪ್ರತಿ ಸದಸ್ಯರು ಕನಿಷ್ಠ ರೂ 100/- ಖಾತೆಗೆ ಜಮಾ ಮಾಡುವಂತೆ ಎಲ್ಲಾ ಸದಸ್ಯರನ್ನೂ ಕೋರುವುದು ಹಾಗೂ ವಲಯದ ಎಲ್ಲಾ ಘಟಕಗಳನ್ನು ಈ ವಿಷಯಕ್ಕಾಗಿ ಸಮೀಪಿಸುವುದು ಎಂದು ಚರ್ಚಿಸಲಾಯಿತು. ಎಲ್ಲಾ ಸದಸ್ಯರು ತಮ್ಮ ಸ್ನೇಹಿತರು ಮತ್ತು ಹಿತೈಷಿಗಳಲ್ಲಿ ಈ ವಿಷಯ ಚರ್ಚಿಸಿ ಆದಷ್ಟು ಹಣ ಸಂಗ್ರಹ ಆಗುವಂತೆ ನೋಡಿಕೊಳ್ಳುವುದು ಎಂದು ತಿಳಿಸಿದರು.

ನಾಗೇಶ್ ಭಂಡಾರಿ ವಿದ್ಯಾರಣ್ಯಪುರ ಮತ್ತು ಪದ್ಮನಾಭ ಭಂಡಾರಿ ವಿದ್ಯಾರಣ್ಯಪುರ ರವರು ಈ ಹಿಂದೆ ಮಾಡಿದಂತೆ ಸದಸ್ಯರ ಮನೆಮನೆಗೆ ಆಗಾಗ ಬೇಟಿ ನೀಡೋಣ ಇದರಿಂದ ನಮ್ಮ ಜನರ ಸಂಪರ್ಕ ಹೆಚ್ಚಾಗುತ್ತದೆ ಮತ್ತು ಹಣ ಸಂಗ್ರಹಕ್ಕೂ ಉತ್ತಮ ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ರಿಪ್ಪನಪೇಟೆ ಘಟಕದ ಕಾರ್ಯದರ್ಶಿ ಶ್ರೀಯುತ ಮಂಜುನಾಥ ಮುದ್ದು ಭಂಡಾರಿ ಯವರು ವಲಯದ ಸಂಘಕ್ಕೆ ತಾಲ್ಲೂಕು ಮತ್ತು ಜಿಲ್ಲೆಯ ಪ್ರತಿನಿಧಿಗಳನ್ನು ಸೇರಿಸಿಕೊಂಡು ಸಂಘವನ್ನು ಇನ್ನಷ್ಟು ಸದೃಢಗೊಳಿಸುವಂತೆ ಕಳುಹಿಸಿದ ಮೆಸೇಜನ್ನು ಸಭೆಗೆ ಓದಿ ಹೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಸಭೆ ಶ್ರೀಯುತರನ್ನು ಸಂಪರ್ಕಿಸಿ ಅವರ ಸಲಹೆಯ ಸಂಪೂರ್ಣ ಮಾಹಿತಿ ಪಡೆಯುವಂತೆ ಕಾರ್ಯದರ್ಶಿಗಳು ಪ್ರಯತ್ನಿಸುವಂತೆ ಸೂಚಿಸಿದರು.

ಕಾರ್ಯದರ್ಶಿ ಸುಧಾಕರ ಭಂಡಾರಿಯವರು ಕೆಲವು ಘಟಕಗಳ ಕಮಿಟಿಯಲ್ಲಿ ಬದಲಾವಣೆ ಆಗಿದೆ ಅದರ ಮಾಹಿತಿ ಇನ್ನೂ ವಲಯ ಕಛೇರಿಗೆ ತಲುಪಿಲ್ಲ ಹಾಗೂ ಕೆಲವು ಸ್ಥಳಗಲ್ಲಿ ಹೊಸ ಘಟಕ ಮಾಡುವಂತೆ ಕೋರಿಕೆ ಬಂದಿದೆ ಅದರ ಬಗ್ಗೆ ಗಮನ ಹರಿಸೋಣ ಎಂದು ತಿಳಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಗೌರವಾಧ್ಯಕ್ಷರು ಅಂತಹ ಸಂಘಗಳು ವಲಯ ಕೇಂದ್ರ ಕಛೇರಿಗೆ ಮಾಹಿತಿ ನೀಡಲು ಸೂಚಿಸಬೇಕು ಹಾಗೂ ಇನ್ನು ಮುಂದಿನ ದಿನಗಳಲ್ಲಿ ಸಾದ್ಯವಾದಷ್ಟು ಘಟಕಗಳ ಬೇಟಿ ಮಾಡೋಣ ಎಂದು ಸೂಚಿಸಿದರು.

ಸಂಘದ ಸದಸ್ಯರಿಗೆ ಆರೋಗ್ಯದಲ್ಲಿ ತೊಂದರೆಯಾದಾಗ ಸಹಾಯಮಾಡುವ ನಿಟ್ಟಿನಲ್ಲಿ ಗುಂಪು ಇನ್ಸೂರೆನ್ಸ್ ಮಾಡಿಸುವ ಬಗ್ಗೆ ಗೌರವಾಧ್ಯಕ್ಷರು ಸಭೆಯ ಗಮನ ಸೆಳೆದರು. ಆರ್ಥಿಕವಾಗಿ ಹಿಂದುಳಿದವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗುವ ಸಂದರ್ಭದಲ್ಲಿ ಆರ್ಥಿಕ ಸಹಕಾರವನ್ನು ಸಂಘದಿಂದ ಕೇಳಿದಾಗ , ಸಂಘದಲ್ಲಿ ಪ್ರತ್ಯೇಕ ನಿಧಿ ಇಲ್ಲದಿರುವ ಕಾರಣ ಸಹಾಯ ಮಾಡಲು ಕಷ್ಟವಾಗಬಹುದು, ಹಾಗೆಯೇ ಪ್ರತೀ ಬಾರಿ ಸಭೆಯಲ್ಲಿ ಹಾಜರಿರುವ ಸದಸ್ಯರ ಬಳಿಯಲ್ಲಿ ಹಣ ಕೇಳುವುದು ಕೂಡಾ ಸರಿಯಲ್ಲ ಹಾಗಾಗಿ ಅದಕ್ಕೋಸ್ಕರವೇ ಗ್ರೂಪ್ ಇನ್ಶೂರೆನ್ಸ್ ಮಾಡಿಸುವ ಮೂಲಕ ತುರ್ತು ಸಂದರ್ಭದಲ್ಲಿ ಕುಟುಂಬಕ್ಕೆ ತುಂಬಾ ಸಹಾಯವಾಗುತ್ತದೆ ಎಂದರು. ಈ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಚರ್ಚಿಸೋಣ ಎಂದು ತಿಳಿಸಿದರು.

ಲಘು ಉಪಹಾರದ ನಂತರ ಕೋಶಾಧಿಕಾರಿ ಕುಶಲ್ ರವರ ವಂದನಾರ್ಪಣೆಯೊಂದಿಗೆ ಸಭೆಯನ್ನು ಮುಖ್ತಾಯಗೊಳಿಸಲಾಯಿತು.

ವರದಿ : ಸುಧಾಕರ್ ಭಂಡಾರಿ ಶಿರಾಳಕೊಪ್ಪ

 

Leave a Reply

Your email address will not be published. Required fields are marked *